ಕಾರು ಟೂರುತುಂಬಿದ ಮನೆದೂರ ತೀರ ಯಾನವಿಂಗಡಿಸದಸೂಪರ್ ಗ್ಯಾಂಗು

ಪುದುಚ್ಚೇರಿಗೆ ಹೋದರೆ ಏನೇನು ನೋಡಬಹುದು: ನೋಕಿಯಾ ಉದ್ಯೋಗಿ ಪ್ರಮೋದ್ ಬರೆದ ವಿವರಣಾತ್ಮಕ ಪ್ರವಾಸ ಕಥನ

ಯಾವ ಪ್ರದೇಶಕ್ಕೆ ಹೋದರೆ ಏನೇನು ನೋಡಬಹುದು, ಎಲ್ಲಿ ಉಳಿದುಕೊಳ್ಳಬಹುದು, ಅಲ್ಲಿ ಹೇಗೆ ತಿರುಗಾಡಬಹುದು ಎಂಬ ಪ್ರಶ್ನೆ ಎಲ್ಲರಲ್ಲೂ ಇರುತ್ತದೆ. ನೀವು ಪುದುಚ್ಚೇರಿಗೆ ಹೋದರೆ ಏನೇನು ನೋಡಬಹುದು, ಹೇಗೆ ಓಡಾಡಬಹುದು, ಎಲ್ಲಿ ತಿಂಡಿ ತಿನ್ನಬಹುದು, ಯಾವುದಕ್ಕೆ ಆ ಊರು ಫೇಮಸ್ಸು ಎಂಬೆಲ್ಲಾ ಪೂರ್ತಿ ವಿವರವನ್ನು ನೀಡಿ ತಮ್ಮ ಮತ್ತು ಪತ್ನಿ ಕವಿತಾ ಅವರ  ಪ್ರವಾಸ ಕಥನವನ್ನು ಕಣ್ಣಿಗೆ ಕಟ್ಟುವಂತೆ ಬರೆದಿದ್ದಾರೆ. ನೋಕಿಯಾ ಕಂಪನಿಯಲ್ಲಿ ಉದ್ಯೋಗಿಯಾಗಿರುವ ಬೆಂಗಳೂರಿನ ಕಂಪ್ಯೂಟರ್ ಇಂಜಿನಿಯರ್ ಪ್ರಮೋದ್.    

ವರ್ಷದ ಕೊನೆಯ ವಾರದಲ್ಲಿ ನಾನು ನನ್ನಾಕೆ ಕವಿತಾ ಜೊತೆ ಪ್ರವಾಸಕ್ಕಾಗಿ ಪುದುಚ್ಚೇರಿಗೆ ಹೊರಡುವುದೆಂದು ನಿಶ್ಚಯಿಸಿದೆ. ಕ್ರಿಸ್ಮಸ್-ಹೊಸವರ್ಷಗಳ  ಸಂದರ್ಭವಾದದ್ದುರಿಂದ ಮತ್ತು ನಮ್ಮ ಪ್ರವಾಸದ ಯೋಜನಾ-ತಯಾರಿಗಳು ಕೊಂಚ ತಡವಾಗಿಯೇ ಆದದ್ದುರಿಂದ ನಮ್ಮ ಪ್ರಯಾಣ-ವಸತಿಗಳ ಏರ್ಪಾಟಿನಲ್ಲಿ ಏರುಪೇರಾಯಿತು. 

ಊರೊಳಗಿನ ಹೋಟೆಲ್/ ಲಾಡ್ಜ್ ಗಳು ಭರ್ತಿಯಾಗಿದ್ದವು ಅಥವಾ ಅಲ್ಲಿನ ದರಗಳು ನಮ್ಮ ಕೈಗೆಟುಕದಷ್ಟು ದುಬಾರಿಯಾಗಿದ್ದವು. ಆದ್ದರಿಂದ ನಾವು airbnb ಮೂಲಕ ಬೊಮ್ಮಿಯಾರ್ ಪಾಳ್ಯಮ್ ಸಮೀಪದ ಒಂದು ಪ್ರವಾಸಿ ಗೃಹವನ್ನು ಆಯ್ಕೆ ಮಾಡಿಕೊಂಡೆವು. ಅಲ್ಲಿಯ ಒಡತಿ ಪುನೀತ್ ಎಂಬಾಕೆಯನ್ನು ಸಂಪರ್ಕಿಸಿ 3 ದಿನಗಳ ಕಾಲ ಅಲ್ಲಿ ತಂಗುವ ಏರ್ಪಾಟಾಯಿತು. ಇದಾದ ಬಳಿಕ ನಾವು ಬೆಂಗಳೂರಿನಿಂದ ಪುದುಚ್ಚೇರಿಗೆ ಪ್ರಯಾಣ ಬೆಳೆಸಲು ಇರುವ ಬಸ್ ಗಳ  ಅನ್ವೇಷಣೆಯಲ್ಲಿ ತೊಡಗಿದೆವು. ಪುನಃ ಇಲ್ಲಿ ನಮಗೆ ಬೇಕಾದಂತೆ ವೋಲ್ವೋ-ಬಸ್ ನಲ್ಲಿ ಸೀಟು ಸಿಗಲಿಲ್ಲ. ಸಿಕ್ಕ ರಾಜಹಂಸ ಬಸ್ಸಿನಲ್ಲಿ ಸೀಟುಗಳನ್ನು ಕಾಯ್ದಿರಿಸಿದೆವು.

ಪ್ರವಾಸಗಳೇ ಹೀಗೆ ಅನಿಸುತ್ತೆ! 

ಮೊದಲಿಗೆ ಹೋಗಬೇಕೆ ಬೇಡವೇ ಎಂಬ ಅನಿಶ್ಚಿತತೆ, ಖರ್ಚು ಎಷ್ಟಾದೀತು ಎಂಬ ಲೆಕ್ಕಾಚಾರಗಳು ಮನದಲ್ಲಿರುತ್ತವೆ. ಆದರೆ ಒಮ್ಮೆ ಎಲ್ಲ ತಯಾರಿ ಆದಮೇಲೆ ಅದೇನೋ ಒಂದು ಉತ್ಸಾಹ ಮನಸ್ಸನ್ನು ಆವರಿಸಿಕೊಳ್ಳುತ್ತದೆ. ಯಾವ ಸ್ಥಳಗಳನ್ನು ನೋಡಬೇಕು, ಹೇಗೆ ದಿನಚರಿಯನ್ನು ಯೋಜಿಸಬೇಕು, ಹೋಗುವ ಜಾಗದಲ್ಲಿ ವಾತಾವರಣ ಹೇಗಿರುತ್ತದೆ- ಹೀಗೆ ಹತ್ತು ಹಲವು ವಿಷಯಗಳನ್ನು ಯೋಚಿಸುತ್ತಾ, ಯೋಜಿಸುತ್ತಾ ಮಗ್ನರಾಗುತ್ತೇವೆ. ನಮ್ಮ ಪುದುಚ್ಚೇರಿಯ ಪ್ರವಾಸವೂ ಇದಕ್ಕೆ ಹೊರತಾಗಿರಲಿಲ್ಲ. ಹಿಂದೊಮ್ಮೆ ನಾವು ಇಂಡೋನೇಷಿಯಾದ  ಬಾಲಿ-ದ್ವೀಪಕ್ಕೆ ಹೋದಾಗ ಊಟ ತಿಂಡಿಗಳಿಗೆ ಬಹಳ ಕಷ್ಟವಾಗಿತ್ತು. ಆ ಅನುಭವದಿಂದ ಎಚ್ಚೆತ್ತುಕೊಂಡಿದ್ದ ನಾವು, ಈ ಬಾರಿ MTR  ಸಿದ್ಧ ಖಾದ್ಯಗಳನ್ನು ನಮ್ಮೊಂದಿಗೆ ತೆಗೆದುಕೊಂಡೇ ಹೊರಟೆವು. ಡಿಸೆಂಬರ್ ಮಾಸದ ಚಳಿಗೆ ತಕ್ಕಂತೆ ಉಡುಪುಗಳನ್ನು ಧರಿಸಿ, ಬಸ್ ನಿಲ್ದಾಣವನ್ನು ಸೇರಿದೆವು. ಚಳಿಯಲ್ಲಿ ನಡಗುತ್ತಾ, ಕಾಯುತ್ತಿದ್ದ ನಮ್ಮನ್ನು ಮತ್ತಷ್ಟು ಕಾಯಿಸಿ, 1 ಗಂಟೆಯಷ್ಟು ತಡವಾಗಿ ನಮ್ಮ ಬಸ್ ಬಂದಿತು. ಎತ್ತೆತ್ತಲಿಂದಲೋ ಸುಯ್ ಎಂದು ಬೀಸಿಬಂದ ಗಾಳಿಗೆ ಅಡ್ಡಲಾಗಿ ಹೊದಿಕೆಗಳನ್ನು ಮುಚ್ಚುತ್ತಾ, ಹೇಳಿಕೊಳ್ಳುವಷ್ಟೇನು ಸೊಗಸಿಲ್ಲದ ರಸ್ತೆಗಳನ್ನು ಹಾಯ್ದು ಮುಂಜಾನೆಯ ವೇಳೆಗೆ ಪುದುಚ್ಚೇರಿಗೆ ಬಂದು ತಲುಪಿದೆವು.

ಪುದುಚೇರಿಯಿಂದ 8 ಕಿಮೀ ದೂರ 

ನಾವು ಕಾಯ್ದಿರಿಸಿದ್ದ ಜಾಗ ಪುದುಚ್ಚೇರಿಯಿಂದ ೮-೯ ಕೀ.ಮೀ ಗಳಷ್ಟು ದೂರದಲ್ಲಿತ್ತು. ಮತ್ತು ಅಲ್ಲಿ ನಮಗೆ ಅಪರಾಹ್ನ 12ರ ನಂತರವಷ್ಟೇ ಹೋಗಲು ಅವಕಾಶವಿತ್ತು. ಸುಮಾರು 5-6 ಗಂಟೆಗಳ ಕಾಲ ನಾವು ಪುದುಚ್ಚೇರಿಯ ರಸ್ತೆಗಳಲ್ಲಿ ಕಳೆಯಬೇಕಾಗಿತ್ತು! ಈ ಸಮಯವನ್ನು ವ್ಯರ್ಥವಾಗಿ ಕಳೆಯಬಾರದು ಎಂದು ಯೋಚಿಸಿ, ಸೂರ್ಯೋದಯವನ್ನು ವೀಕ್ಷಿಸಲು ಬಸ್ ನಿಲ್ದಾಣದಿಂದ ರಾಕ್ ಬೀಚ್ (Rock Beach) ನತ್ತ ಹೊರಟೆವು. ಆದರೆ ನಮಗೆ ನಿರಾಸೆ ಮೂಡಿಸಬೇಕೆಂದು ಮೊದಲೇ ನಿಶ್ಚಯಿಸಿದ್ದ ಮೇಘಗಳು ಮೂಡಣದ ಆಕಾಶದಲ್ಲಿ ನೇಸರನನ್ನು ಮರೆಮಾಡಿ ನಿಂತಿದ್ದವು. 

ಉದಯಿಸುವ ಸೂರ್ಯನನ್ನು ಕಾಣದೆ ಕೊಂಚ ಬೇಸರವಾದರೂ, ಆ ಬೆಳಗಿನ ಸೌಂದರ್ಯ, ಬಂಗಾಳ ಕೊಲ್ಲಿಯ ಅಲೆಗಳ ಏರಿಳಿತಗಳು, ಸಮುದ್ರದ ಮೇಲಿಂದ ಬೀಸಿಬಂದ ಹಿತವಾದ ಗಾಳಿ – ಎಲ್ಲವೂ ನಮ್ಮ ಸಮುದ್ರತೀರದ ಅನುಭವವನ್ನು ಸುಖಕರವಾಗಿಸಿದವು. ಸುಮಾರು 8:30ರವರೆಗೂ ಅಲ್ಲಿಯೇ ಕುಳಿತಿದ್ದ ನಾವು, ನಮ್ಮ ಬ್ಯಾಗುಗಳನ್ನು ಹೊತ್ತುಕೊಂಡು ನಡೆಯಲಾರಂಭಿಸಿದೆವು. ಇಲ್ಲಿ ನಮ್ಮ ಸಾಮಾನು-ಸರಂಜಾಮುಗಳ ಬಗ್ಗೆ ಒಂದು ಮಾತು ಹೇಳಲೇಬೇಕು. ನಾವು ಎಲ್ಲಿಯೇ ಹೋದರೂ, ನಮ್ಮ ವಸ್ತ್ರಾದಿಗಳು, ಒಂದು ದೊಡ್ಡ ಬೆನ್ನುಚೀಲಕ್ಕೆ ಸೀಮಿತವಾಗಿರುತ್ತದೆ. ಇದರೊಂದಿಗೆ ನನ್ನಾಕೆಯ ಒಂದು ಕೈಚೀಲ. ಇವಷ್ಟು ಮಾತ್ರ ನಮ್ಮೊಂದಿಗೆ ಇರುತ್ತದೆ. ಹೀಗೆ ಮಾಡುವುದರಿಂದ, ಪ್ರವಾಸದಲ್ಲಿ ಚಾರಣ ಹೆಚ್ಚು ಕಷ್ಟವೆನಿಸುವುದಿಲ್ಲ.

ರಾಕ್ ಬೀಚ್ ಪಕ್ಕದ ರಸ್ತೆಯಲ್ಲಿ ಓಡಾಡಲು, ಪಾದಚಾರಿಗಳಿಗಷ್ಟೇ ಅವಕಾಶ. ಆ ಸುಂದರವಾದ ರಸ್ತೆಯಲ್ಲಿ ನಡೆಯುತ್ತಾ ಮುಂದೆ ಬಂದಾಗ, ಸಾರ್ವಜನಿಕ ಶೌಚಾಲಯವೊಂದು ನಮಗೆ ಕಾಣಿಸಿತು. ಸಂದೇಹದಿಂದಲೇ ಒಳಗೆ ಒಮ್ಮೆ ಪರಿಶೀಲಿಸಿದೆ. ಸ್ವಚ್ಛವಾಗಿ, ಚೊಕ್ಕಟವಾಗಿತ್ತು. ಮುಖ ಪ್ರಕ್ಷಾಳನಾದಿಗಳನ್ನು ಅಲ್ಲಿಯೇ ಮುಗಿಸಿಕೊಂಡೆವು. ಹೊಟ್ಟೆ ಹಸಿವು ತೀವ್ರವಾಯಿತು. ಹತ್ತಿರದ ಉಪಹಾರ ಗೃಹವೊಂದನ್ನು ಹೊಕ್ಕಿ ಬಿಸಿ-ಬಿಸಿ ಪೊಂಗಲ್ ಸೇವಿಸಿದೆವು. ಅವರಲ್ಲಿಯೇ ಕೇಳಿ ಬೊಮ್ಮಿಯಾರ್ ಪಾಳ್ಯ ಸೇರುವ ಮಾರ್ಗ ತಿಳಿದುಕೊಂಡೆವು. ಖಾಸಗಿ ಬಸ್ ಒಂದು ನಮ್ಮನ್ನು ಕೇವಲ 12 ರುಪಾಯಿಗೆ ಅಲ್ಲಿಗೆ  ತಲುಪಿಸಿತು. ECR ರಸ್ತೆಯಿಂದ 5 ನಿಮಿಷಗಳು  ನಡೆದು, ಪುನೀತ್ ಅವರ  ವಸತಿ ಗೃಹವನ್ನು ತಲುಪಿದೆವು. ಆಗ ಸಮಯ ಬೆಳಗ್ಗೆ 10-10.30 ಇರಬೇಕು.

ಒಂದು ಗಂಟೆಯಷ್ಟು ಕಾಲ ಅಲ್ಲಿ ಕಾಯುತ್ತಾ ಸವೆಸಿದ ಮೇಲೆ, ಒಳ ನಡೆದೆವು. ಪುನೀತ್ ನಮ್ಮನ್ನು ಬರಮಾಡಿಕೊಂಡು, ನಮ್ಮ ಕೋಣೆಯನ್ನು ತೋರಿಸಿದರು. ಆ ಸಮಯಕ್ಕಾಗಲೇ, ನಾವು ಮೊದಲೇ ಕಾಯ್ದಿರಿಸಿದ್ದ ಸ್ಕೂಟರ್ ಗಾಡಿಯು ನಮ್ಮಲ್ಲಿಗೆ ಬಂದು ಸೇರಿತ್ತು. ಈ ಸ್ಕೂಟರ್ ನಿಂದ ಪ್ರವಾಸದಲ್ಲಿ ನಮಗೆ ಬಹಳ ಅನುಕೂಲವಾಯಿತು. ಸ್ನಾನ ಮುಗಿಸಿ ಕೊಂಚ ಸುಧಾರಿಸಿಕೊಂಡ ಮೇಲೆ ನಾವು ಮೊದಲಿಗೆ ಹೊರಟಿದ್ದು ಆರೋವಿಲ್ಲೆ (Auroville) ಕಡೆಗೆ!

ಮೊದಲ ದಿನ ಆರೋವಿಲ್ಲೆ

ಆರೋವಿಲ್ಲೆ ಶ್ರೀ ಅರವಿಂದರ ಕಲ್ಪನೆಯ ಆಧ್ಯಾತ್ಮಿಕ ಲೋಕ. ಆಧ್ಯಾತ್ಮ ಕೇವಲ ಒಬ್ಬ ವ್ಯಕ್ತಿಯ ನಡಿಗೆಯಾಗಬಾರದು ಅದೊಂದು ಸಮಾಜದ ಪಥವಾಗಬೇಕು ಎಂಬ ಅವರ ಆಶಯಕ್ಕೆ ಈ ಜಾಗ ಕೇಂದ್ರ ಬಿಂದುವಾಗಿದೆ. ಅರವಿಂದರ ನಂತರ, ಅವರ ಶಿಷ್ಯವೃಂದ, ಪೂಜ್ಯ “The Mother” ಅವರ ಮಾರ್ಗದರ್ಶನದಲ್ಲಿ ಈ ಜಾಗವನ್ನು ಮತ್ತಷ್ಟು ಪೋಷಿಸಿ ಬೆಳೆಸಿದ್ದಾರೆ. ಇಂದಿಗೂ ನೂರಾರು ಸಾಧಕರು ಪ್ರಪಂಚದ ವಿವಿಧ ಕಡೆಗಳಿಂದ ಬಂದು ಅರವಿಂದರ ಸಚ್ಚಿದಾನಂದ ದರ್ಶನ (supra-mental consciousness) ಮಾರ್ಗದ ಸಾಧನೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ. ಇಂತಹ ಒಂದು ದಿವ್ಯ ಕ್ಷೇತ್ರದ ದರ್ಶನ ಪಡೆಯುವುದು ನಮ್ಮ ಮೊದಲ ದಿನದ ಉದ್ದೇಶವಾಗಿತ್ತು. ಬಾಡಿಗೆ ಸ್ಕೂಟರಿಗೆ ಒಂದಷ್ಟು ಪೆಟ್ರೋಲ್ ತುಂಬಿಸಿಕೊಂಡು aurovilleಯ ಕಡೆಗೆ ಹೊರಟೆವು. ವಿಸ್ತಾರವಾದ ಮರಗಳಿಂದ ಕೂಡಿದ ಆಶ್ರಮದ ಭೂಪ್ರದೇಶ ನಮ್ಮನ್ನು ಸ್ವಾಗತಿಸಿತು. 

ಇಲ್ಲಿ ಪ್ರವಾಸಿಗಳಿಗೆ ಸುಲಭವಾಗಿ ಅರ್ಥವಾಗುವಂತೆ ಅರವಿಂದರ ದರ್ಶನವನ್ನು ಪರಿಚಯಿಸುವ ಒಂದು ಸಂಗ್ರಹಾಲಯವಿದೆ(museum). ಅದರೊಂದಿಗೆ ಅವರ ಜೀವನದ ಪರಿಚಯವೂ ನಮಗಾಗುತ್ತದೆ. ಬಾಲ್ಯದಲ್ಲಿ ಅವರು ಬೆಳೆದ ವಾತಾವರಣ, ತದನಂತರ ಸ್ವಾತಂತ್ರ್ಯ ಚಳುವಳಿಯಲ್ಲಿ ಅವರು ನಿರ್ವಹಿಸಿದ ಪಾತ್ರ, ಅಲ್ಲಿಂದ ಅವರು ಕಾಳಿ ಅನುಗ್ರಹ ಪಡೆದು ಫ್ರೆಂಚ್ ಆಡಳಿತದಲ್ಲಿದ್ದ ಪುದುಚ್ಚೇರಿಯಲ್ಲಿ ನೆಲೆಸಿ ಕೈಗೊಂಡ ವಿವಿಧ ಕಾರ್ಯಗಳ ಬಗ್ಗೆ ತಿಳಿಯುವಾಗ ನಮಗೆ ರೋಚಕವೆನಿಸಿತು. ಆರೋವಿಲ್ಲೆಯ ಮತ್ತೊಂದು ಮುಖ್ಯ ಆಕರ್ಷಣೆಯೆಂದರೆ ಅದು ಮಾತೃಮಂದಿರ. ಗೋಳಾಕಾರದ ಈ ಕಟ್ಟಡವನ್ನು ಧ್ಯಾನಕ್ಕಾಗಿಯೇ ವಿಶೇಷವಾಗಿ ನಿರ್ಮಿಸಲಾಗಿದೆಯಂತೆ. 

ಒಳಗೆ ಹೋಗಿ ಧ್ಯಾನ ಮಾಡುವ ಅವಕಾಶವನ್ನೂ ಪ್ರವಾಸಿಗರಿಗೆ ಕಲ್ಪಿಸಲಾಗಿದೆ. ಆದರೆ ಮುಂದಿನ 3 ದಿನಗಳವರೆಗಿನ ಎಲ್ಲ ಸ್ಥಳಗಳೂ ಭರ್ತಿಯಾಗಿದ್ದರಿಂದ ನಾವು ಮಾತೃಮಂದಿರವನ್ನು ಹೊರಗಿನಿಂದ ಮಾತ್ರ ನೋಡಿ ತೃಪ್ತಿಪಟ್ಟುಕೊಳ್ಳಬೇಕಾಯಿತು. ಹೊರಗಿನಿಂದ ನೋಡುವುದಕ್ಕೂ ಚೀಟಿ ಪಡೆದು ಕೊಂಚ ದೂರ ನಡೆದು ಹೋಗಬೇಕು. ಈ ನಡಿಗೆಯ ಹಾದಿಯಲ್ಲಿ ನಮಗೆ ಆಶ್ರಮದ ನಿರ್ಮಲ ವಾತಾವರಣವನ್ನು ಅನುಭವಿಸುವ ಅವಕಾಶವಾಯಿತು. ನಿಜಕ್ಕೂ ಸಾಧಕರಿಗೆ ಹೇಳಿಮಾಡಿಸಿದ ಜಾಗ!

ಮಾತೃಮಂದಿರವನ್ನು ಕಂಡು ಬರುವ ವೇಳೆಗೆ ಊಟದ ಸಮಯ ಮೀರಿತ್ತು. ಆರೋವಿಲ್ಲೆಯ ಒಳಗೆ ಇರುವ ಉಪಾಹಾರ ಕೇಂದ್ರಗಳಲ್ಲಿ ಕಣ್ಣಾಡಿಸಿದೆವು ನಮಗೆ ಸೂಕ್ತವೆನಿಸುವ ಖಾದ್ಯಗಳೇನು ಕಾಣಲಿಲ್ಲ. ತಾಜಾ ಹಣ್ಣಿನ ರಸವನ್ನು ಹೀರಿ ಆ ಕ್ಷಣದ ಹಸಿವನ್ನು ಶಮನಗೊಳಿಸಿಕೊಂಡು ಅಲ್ಲಿಂದ ಹೊರನಡೆದೆವು.

ಆರೋವಿಲ್ಲೆ ಇರುವ ಜಾಗಕ್ಕೆ ವಿಲ್ಲುಪುರಂ ಎಂದು ಹೆಸರು. ಇಲ್ಲಿ ಹೆಚ್ಚು ವಿದೇಶಿಯರೇ ಕಾಣಸಿಗುತ್ತಾರೆ. ಆದ್ದರಿಂದ ವಿದೇಶಿ ತಿನಿಸುಗಳು ದೊರೆಯುವ ರೆಸ್ಟೂರಂಟ್ ಗಳೂ ಹೆಚ್ಚಾಗಿ ಸಿಗುತ್ತದೆ ಈ ಪ್ರದೇಶದಲ್ಲಿ. ಅರವಿಂದರ ದರ್ಶನ ಮಾಂಸಾಹಾರ ಮತ್ತು ಮದ್ಯಸೇವನೆಗಳನ್ನು ಪ್ರೋತ್ಸಾಹಿಸುವುದಿಲ್ಲ. ಇದರಿಂದ ಇಲ್ಲಿ ಹೆಚ್ಚಾಗಿ ಸಸ್ಯಾಹಾರಿ ಅಥವಾ vegan ಕೇಂದ್ರಗಳೇ ಹೆಚ್ಚು. ನಮಗಂತೂ ಇದು ಬಯಸದೆ ದೊರೆತ ಅದೃಷ್ಟ. ಇಂತಹ ಜಾಗಗಳಲ್ಲಿ ಒಂದು ಬಗೆಯ ವಿಲಕ್ಷಣತೆ ಕಾಣಸಿಗುತ್ತದೆ – Quaint ಎನ್ನುತ್ತಾರಲ್ಲ ಆ ಪಂಗಡಕ್ಕೆ ಸೇರಿದ ರೆಸ್ಟೂಗಳು. ಒಂದು ಜಾಗದಲ್ಲಿ ನಾವು ಮಧ್ಯಾಹ್ನದ ಊಟಕ್ಕೆಂದು ನಿಲ್ಲಿಸಿದೆವು. ಹೊಸವರ್ಷದ ಸಮಯವಾದ್ದರಿಂದ ಅಲಂಕಾರದ ಕೆಲಸವೂ ಬಿರುಸಾಗಿ ನಡೆದಿತ್ತು. ಅಲ್ಲಿಯ ವಾದ್ಯವೃಂದಗಳು 31ರ ರಾತ್ರಿಗಾಗಿ ಅಭ್ಯಾಸದಲ್ಲಿ ನಿರತರಾಗಿದ್ದರು.

ಎರಡನೇ ದಿನ ಚಿಂದಂಬರಂ

ಈ ದಿನ ನಾವು ಚಿದಂಬರಂ ಕ್ಷೇತ್ರಕ್ಕೆ ಹೋಗುವುದೆಂದು ನಿರ್ಧರಿಸಿದೆವು. ಮೊದಲಿಗೆ ಒಂದು ಕಾರು ಬಾಡಿಗೆಗೆ ಪಡೆದು ಸಮುದ್ರದ ಅಂಚಿನಲ್ಲಿ ಸಾಗುವ ECR ಮಾರ್ಗದ ಸೌಂದರ್ಯವನ್ನು ಆಸ್ವಾದಿಸುವುದು ನನ್ನ ಯೋಜನೆಯಾಗಿತ್ತು. ಆದರೆ, ಭಾಷೆ ಅರಿಯದ ನಾಡಿನಲ್ಲಿ, ಗೊತ್ತಿಲ್ಲದ ರಸ್ತೆಗಳಲ್ಲಿ ಕಾರು ಪ್ರಯಾಣ ಸುತರಾಂ ಬೇಡವೆಂದು ನನ್ನಾಕೆ ಪಟ್ಟು ಹಿಡಿದಳು. 

ಬೇರೆ ದಾರಿ ತೋಚದೆ, ಬಸ್ ಮೂಲಕ ನಾವು ಪ್ರಯಾಣ ಬೆಳೆಸಿದೆವು. ಮುಂಜಾನೆ ಬಿಸಿಲೇರುವ ಮುನ್ನ ಹೊರಟು, ಬಸ್ ನಿಲ್ದಾಣದಲ್ಲಿ ನಮ್ಮ ಸ್ಕೂಟರ್ ನಿಲ್ಲಿಸಿ ಬಸ್ ಹತ್ತಿದೆವು. ಕಡಲೂರು ಮಾರ್ಗವಾಗಿ ಹೋದರೆ ಸುಮಾರು ೨ ಗಂಟೆಗಳ ಪ್ರಯಾಣ. ಚಿದಂಬರಂ ತಲುಪಿದಾಗ, ಬಸ್ ಕಂಡಕ್ಟರ್ ಸಹಾಯ ಪಡೆದು ದೇವಸ್ಥಾನದ ಪ್ರವೇಶದ್ವಾರದ ಬಳಿಯೇ ಇಳಿದುಕೊಂಡೆವು. ಸುಮಾರು ೧೧-೧೨ ನೇ ಶತಮಾನದಲ್ಲಿ ನಿರ್ಮಿತವಾದ ದ್ರಾವಿಡ ಶೈಲಿಯ ದೇವಾಲಯವಿದು.  ನಟರಾಜನ ರೂಪದಲ್ಲಿರುವ  ಶಿವ ಇಲ್ಲಿಯ ಆರಾಧ್ಯ ದೈವ.  ಪ್ರಪಂಚದ ಅತ್ಯಂತ ವಿಸ್ತಾರವಾದ ಹಿಂದೂ ದೇವಾಲಯಗಳಲ್ಲಿ ಈ ದೇವಾಲಯವೂ ಒಂದು. ನಾಲ್ಕು ದಿಕ್ಕುಗಳಲ್ಲಿ ತಲೆಯೆತ್ತಿ ನಿಂತಿರುವ ಗೋಪುರಗಳು, ವಿಸ್ತಾರವಾದ ಅಂಗಳ, ಅನೇಕ ಪ್ರಾಕಾರ ದೇವತೆಗಳ ಆಲಯಗಳು – ಇವುಗಳ ನಡುವೆ ಜ್ಞಾನ ಜ್ಯೋತಿಯ ದೀಪ್ತಿಯಲ್ಲಿ ಅವಸ್ಥಾತ್ರಯಗಳ ಅಂಧಕಾರವನ್ನು ಮೆಟ್ಟಿ ನಟನೆಯಲ್ಲಿ ಮೈಮರೆತಿರುವ ನಮ್ಮ ನಟರಾಜನ ಆಲಯ. ನಟರಾಜನ ಸಂಗಾತಿಯಾಗಿ ಜಗನ್ಮಾತೃವಿನ ಸ್ವರೂಪದಲ್ಲಿ  ಇಲ್ಲಿ ನೆಲೆಸಿರುವ ಶಿವಗಾಮಿ ತಾಯಿಯ ಆಲಯವೂ ಪಕ್ಕದಲ್ಲಿಯೇ ಇದೆ. ಆದರೆ ಇಲ್ಲಿನ ಮುಖ್ಯ ಆಕರ್ಷಣೆ – ಚಿದಂಬರ ರಹಸ್ಯ! ಪಂಚಭೂತ ಲಿಂಗ ಕ್ಷೇತ್ರಗಳಲ್ಲಿ ಚಿದಂಬರವೂ ಒಂದು.  

ಆಕಾಶ ತತ್ತ್ವದ ಆರಾಧನೆ ಇಲ್ಲಿ ನಡೆಯುತ್ತದೆ. ನಿರಾಕಾರ ಶಿವನನ್ನು ಇಲ್ಲಿ ಅನುಭವಕ್ಕೆ ತಂದುಕೊಳ್ಳಬಹುದು. ಈ ಸ್ಥಳ ಪ್ರಧಾನ ಗರ್ಭಗುಡಿಯ ಪಕ್ಕದಲ್ಲಿದೆ ಮತ್ತು ದಿನದ ಒಂದು ಹೊತ್ತಿನಲ್ಲಿ ಮಾತ್ರ ಪರದೆಯನ್ನು ಸರಸಿ ರಹಸ್ಯವನ್ನು ದರ್ಶಿಸಲು ಭಕ್ತರಿಗೆ ಅವಕಾಶ ಮಾಡಿಕೊಡಲಾಗುತ್ತದೆ. ಪ್ರಾಕಾರವನ್ನೆಲ್ಲ ಸುತ್ತಿ ನೋಡುವ ವೇಳೆಗೆ ಬಿಸಿಲೇರಿ ಸ್ವಲ್ಪ ದಣಿವಾಯಿತು.  ಹತ್ತಿರದ ಕೆಫೆ (cafe) ಒಂದರಲ್ಲಿ ಮಧ್ಯಾಹ್ನದ ಊಟ ಮುಗಿಸಿ ಪುದುಚ್ಚೇರಿಯತ್ತ ಪ್ರಯಾಣ ಬೆಳೆಸಿದೆವು. ಚಿದಂಬರದ ಸಮೀಪದಲ್ಲೇ ಪೊದೆಗಳ ಕಾಡು (mangrove forest) ಇದೆ. ಸ್ವಂತ ವಾಹನದಲ್ಲಿ ಹೋದರೆ ಈ ತಾಣವನ್ನೂ ನೋಡಿ ಬರಬಹುದು.

ಚಿದಂಬರಂ ಕ್ಷೇತ್ರವನ್ನು ನೋಡಿದ ಖುಷಿ ಮತ್ತು ಬಿಸಿಲಿನಿಂದಾದ ದಣಿವು ಎರಡೂ ಸೇರಿ ಬಸ್ ಪ್ರಯಾಣದ ವೇಳೆ ಒಂದು ಗಂಟೆಯ ಒಳ್ಳೆ ನಿದ್ದೆ ಹತ್ತಿತು. ಪುದುಚ್ಚೇರಿಗೆ ಬಂದು ಸೇರಿದಾಗ ಸಂಜೆ ೫ ಗಂಟೆಯಾಗಿತ್ತು. ಅಲ್ಲಿನ botanical garden ಎಂಬ ಉದ್ಯಾನವನಕ್ಕೆ ಹೋಗಲು ನಿರ್ಧರಿಸಿದೆವು. ಸಂಜೆಯ ವೇಳೆ ತಂಪು ವಾತಾವರಣದಲ್ಲಿ ೧-೨ ಗಂಟೆ ಕಾಲ ಕಳೆಯಲು ಸೂಕ್ತವಾದ ಜಾಗ ಇದು. ಹಲವಾರು ಸಸ್ಯ-ಪ್ರಾಣಿಗಳ ವಿಚಾರ ತಿಳಿಸುವ ಮ್ಯೂಸಿಯಂ ಗಳೂ ಇಲ್ಲಿವೆ. ಹಾಂ ! ನಿಮ್ಮೊಂದಿಗೆ ಮಕ್ಕಳಿದ್ದರೆ ಅವರಿಗಾಗಿ ಪುಟಾಣಿ ರೈಲು ಸಹ ಇಲ್ಲಿದೆ.

ಮೂರನೇ ದಿನ ವೈಟ್ ಟೌನ್

ಡಿಸೆಂಬರ್ 31, ಈ ದಿನ ನನ್ನ ಜನ್ಮದಿನವಾಗಿತ್ತು. ಮುಂಜಾನೆ ಬೇಗ ಎದ್ದು ನಾವು ಸ್ಕೂಟರ್ ಮೂಲಕ rock beach ಸಮೀಪ ಇರುವ ವೈಟ್ ಟೌನ್ (white town) ಎಂದು ಕರೆಸಿಕೊಳ್ಳುವ ಪ್ರದೇಶಕ್ಕೆ ಹೋದೆವು. ಅಲ್ಲಿ ವಿನಾಯಕನ ಒಂದು ಸುಂದರ ಮಂದಿರವಿದೆ. ಅಲ್ಲಿ ಪೂಜೆ ಸಲ್ಲಿಸಿ, ಅಲ್ಲಿಯೇ ದೊರೆತ ಬಿಸಿ-ಬಿಸಿ ರುಚಿಕರ ಪೊಂಗಲ್ ಪ್ರಸಾದವನ್ನು ಸವಿದು ಅರವಿಂದರ ಆಶ್ರಮಕ್ಕೆ ಬಂದು ಸೇರಿದೆವು. ಇದು ಅರವಿಂದರ ಮೂಲ ಆಶ್ರಮ. 

ಸಮುದ್ರಕ್ಕೆ ಅನತಿ ದೂರದಲ್ಲಿ ಇರುವ ಈ ಆಶ್ರಮವನ್ನು ಹುಡುಕುವುದು ಹೆಚ್ಚೇನೂ ಕಷ್ಟವಲ್ಲ. ಹೊಸವರ್ಷದ ಸಿದ್ಧತೆಗಾಗಿ ಪೊಲೀಸರು ಹಲವು ರಸ್ತೆಗಳನ್ನು ಮುಂಜಾನೆಯೇ ಮುಚ್ಚುತ್ತಿದ್ದರು. ಆಶ್ರಮದ ಒಳಗೆ ಅರವಿಂದರ ಮತ್ತು the mother ಇಬ್ಬರ ಸಮಾಧಿಗಳಿವೆ. ಹೂಗಳಿಂದ ಸದಾ ಅಲಂಕೃತವಾದ ಈ ಸಮಾಧಿಗಳ ಎದಿರು ಅನೇಕ ಭಕ್ತರು ಧ್ಯಾನದಲ್ಲಿ ತೊಡಗಿರುತ್ತಾರೆ. ನಿಶ್ಶಬ್ಜತೆಗೆ, ಶಾಂತಿಗೆ ಇಲ್ಲಿ ಮೊದಲ ಆದ್ಯತೆ. 

ಅರವಿಂದರ ಆಶ್ರಮದ ವಿಶೇಷತೆ ಏನೆಂದರೆ, ನಿಮ್ಮ ಜನ್ಮದಿನದಂದು ನೀವಿಲ್ಲಿಗೆ ಭೇಟಿ ನೀಡಿದರೆ, ಅರವಿಂದರು ವಾಸಿಸುತ್ತಿದ್ದ ಖಾಸಗಿ ಕೊಠಡಿಯಲ್ಲಿ ಅರ್ಧ ಗಂಟೆಗಳ ಕಾಲ ಧ್ಯಾನ ಮಾಡುವ ಅವಕಾಶ ನಿಮ್ಮದಾಗಿರುತ್ತದೆ. ಈ ವಿಷಯವನ್ನು ಪುನೀತ್ ಅವರು ನಮಗೆ ತಿಳಿಸಿದ್ದರು. ಕೊಂಚ ಕೇಳಿಕೊಂಡರೆ ನಿಮ್ಮ ಸಂಗಾತಿಯನ್ನೂ ಒಳಗೆ ಬಿಡಬಹುದು ಎಂದು ಪುನೀತ್ ತಿಳಿಸಿದ್ದರಾದರೂ, ನನ್ನ ಕೋರಿಕೆಯನ್ನು ಆಶ್ರಮದವರು ನಿರಾಕರಿಸಿದರು. ನನ್ನಾಕೆಯನ್ನು ಕೆಳಗಿನ ಸನ್ನಿಧಿಯ ಬಳಿ ಕುಳ್ಳಿರಿಸಿ ನಾನು ಮೇಲಂತಸ್ತಿನ ಕೊಠಡಿಗೆ ಧ್ಯಾನಕ್ಕಾಗಿ ಹೊರಟೆ. ಅದೇನೋ ಹೇಳಲಾಗದ ಭಾವ ನನ್ನನ್ನು ಆವರಿಸಿತು. ನಾನು ಶಾಲೆಯ ಚಿತ್ರಪಟಗಳಲ್ಲಿ ನೋಡುತ್ತಿದ್ದ, ಅರವಿಂದರು ಕೂರುತ್ತಿದ್ದ ತಿಳಿನೀಲಿ ಬಣ್ಣದ ಕುರ್ಚಿ, ಅವರು ಬಳಸುತ್ತಿದ್ದ ವಸ್ತುಗಳು ಎಲ್ಲವನ್ನು ಹತ್ತಿರದಿಂದ ನೋಡುವ ಅವಕಾಶವಾಯಿತು. ಧ್ಯಾನ ಮುಗಿಸಿ ಕೆಳಗಿಳಿದಾಗ ಏನೋ ಒಂದು ಬಗೆಯ ನೆಮ್ಮದಿ ಮನದಲ್ಲಿತ್ತು. ಮೊದಲ ದಿನ ಮಾತೃಮಂದಿರದಲ್ಲಾದ ನಿರಾಸೆಯನ್ನು ಮರೆಸುವಂತಹ ಅನುಭವ ಇದಾಗಿತ್ತು. ಅಲ್ಲಿಂದ ನಾವು ಅರವಿಂದ ಆಶ್ರಮದ ಬೇಕರಿಯನ್ನು ಹುಡುಕುತ್ತ ಹೊರಟೆವು. ಇಲ್ಲಿನ ಸಿಹಿ ಮಿಠಾಯಿ ಪ್ರವಾಸಿಗಳಲ್ಲಿ ಸುಪ್ರಸಿದ್ಧ. ಬೇಕರಿ ಮುಚ್ಚುವ ಕೆಲವೇ ಕ್ಷಣಗಳ ಮುನ್ನ ನಾವು ಅಲ್ಲಿ ತಲುಪಿದೆವು. ಮಿಠಾಯಿಗಳನ್ನು ಖರೀದಿಸಿದೆವು.

ಹೊಸ ವರ್ಷವನ್ನು ಸ್ವಾಗತಿಸಲು ಸಜ್ಜಾಗಿರುವ ರಾಕ್ ಬೀಚನ್ನು  ರಾತ್ರಿಯ ವೇಳೆ ನೋಡುವ ಮನಸಾಗಿ ಆ ದಿನ ಸಂಜೆ 7 ಗಂಟೆಯ ವೇಳೆಗೆ white town ಬಳಿಗೆ ಬಂದೆವು. ಆ ವೇಳೆಗಾಗಲೇ ಪೊಲೀಸರು ಎಲ್ಲ ಮುಖ್ಯ ರಸ್ತೆಗಳನ್ನು ಮುಚ್ಚಿದ್ದರು. ನಮ್ಮ ಸ್ಕೂಟರನ್ನು ಬಹಳ ದೂರ ನಿಲ್ಲಿಸಿ ನಡೆದು ಬಂದೆವು. ನಾವು ನಿರೀಕ್ಷಿಸಿದಷ್ಟು ಜನರು ಸಮುದ್ರ ತೀರದಲ್ಲಿ  ಕಾಣಲಿಲ್ಲ. ಎಲ್ಲವೂ ಬಣಗುಡುತ್ತಿತ್ತು. ಹತ್ತಿರದ ಗಾಂಧಿ ಪ್ರತಿಮೆಯ ಬಳಿ ಏನೋ ಬೆಳಕು ಕಾಣಿಸುತ್ತಿತ್ತು. ಅಲ್ಲಿ ಒಂದು ವೇದಿಕೆಯನ್ನು ನಿರ್ಮಿಸಿ ಆ ಊರಿನ ಜನ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತೊಡಗಿದ್ದರು. ನಾವೂ ಸ್ವಲ್ಪ ಹೊತ್ತು ಅಲ್ಲಿ ನೋಡುತ್ತಾ ನಿಂತೆವು. ಅಲ್ಲಿಂದ ನಾವು ಒಂದು ಚಿತ್ರಕಲಾ ಪ್ರದರ್ಶನಕ್ಕೆ ಹೋದೆವು. ಸುಂದರವಾದ ವರ್ಣಚಿತ್ರಗಳನ್ನು ನೋಡುತ್ತಿರುವಾಗ, ಅವುಗಳನ್ನು ಚಿತ್ರಿಸಿದ ಕಲಾವಿದರನ್ನೂ ಭೇಟಿಯಾಗುವ ಅವಕಾಶ ದೊರಕಿತು. ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿ ಹೊರಬಂದಾಗ ಗಂಟೆ 9 ಆಗಿತ್ತು. ಒಂದು ರೆಸ್ಟೋರೆಂಟ್ ಗೆ ಹೋಗಿ ಊಟ ಮುಗಿಸುವ ವೇಳೆಗೆ ಗಂಟೆ 10 ಆಗಿತ್ತು. ಆಗಲೂ ಪ್ರವಾಸಿಗರಾರೂ ಆ ಪ್ರದೇಶದಲ್ಲಿ ಕಾಣಲಿಲ್ಲ. ಬಣಗುಟ್ಟುತ್ತಿದ್ದ ಸಮುದ್ರ ತೀರವನ್ನು ಕಂಡು ಕೊಂಚ  ದಿಗಿಲಾಯಿತು. ಇನ್ನು ಅಲ್ಲಿರುವುದು ಕ್ಷೇಮವಲ್ಲ ಎನಿಸಿತು. ಸ್ವಲ್ಪ ಬೇಗ ಬೇಗ ಹೆಜ್ಜೆ ಹಾಕುತ್ತಾ ನಮ್ಮ ವಾಹನದತ್ತ ನಡೆದು ನಮ್ಮ ಕೋಣೆಯನ್ನು ಸೇರಿಕೊಂಡೆವು. ಅಲ್ಲಿಯೇ ಹೊಸವರ್ಷವನ್ನೂ ಬರಮಾಡಿಕೊಂಡೆವು!

ನಾಲ್ಕನೇ ದಿನ ಪ್ರವಾಸದ ಕೊನೆಯ ಕ್ಷಣಗಳು

ವರ್ಷದ ಮೊದಲ ದಿನವಾಗಿದ್ದರೂ, ಇದು ನಮ್ಮ ಪ್ರವಾಸದ ಕೊನೆಯ ದಿನವಾಗಿತ್ತು. ನೋಡಬೇಕಾದ ಸ್ಥಳಗಳನ್ನೆಲ್ಲ ಬಹುತೇಕ ನೋಡಿ ಆಗಿತ್ತು. ಸರ್ಕಾರಿ ಸಂಗ್ರಹಾಲಯದಲ್ಲಿ (govt museum) ಸ್ವಲ್ಪ ಕಾಲ ಕಳೆಯುವುದೆಂದು ನಿರ್ಧರಿಸಿ, ಬೆಳಗ್ಗೆ ಸುಮಾರು ೧೦ ಗಂಟೆಯ ವೇಳೆಗೆ white townಗೆ ಬಂದು ತಲುಪಿದೆವು. ಆದರೆ ಅಂದು ವಾರದ ರಜೆ ದಿನ ಎಂದು ನಮಗೆ ತಿಳಿದದ್ದು ಅಲ್ಲಿ ತಲುಪಿದ ಮೇಲೆಯೇ. ಮುಂದೇನೆಂದು ಯೋಚಿಸುತ್ತಿರುವಾಗಲೇ, ಪಕ್ಕದ ಕಟ್ಟಡವೊಂದರ ಮುಂದೆ ಜನಗಳ ಗುಂಪು ಕಾಣಿಸಿತು. ಅದು ರಾಜ ಭವನ ಎಂದು ತಿಳಿಯಿತು. ಅಲ್ಲಿದ್ದವರನ್ನು ವಿಚಾರಿಸಿದಾಗ, ಆ ದಿನ ಜನರಿಗೆ ರಾಜ ಭವನವನ್ನು ಪ್ರವೇಶಿಸಿ  ರಾಜ್ಯಪಾಲರಾದ ಶ್ರೀಮತಿ. ಕಿರಣ್ ಬೇಡಿ ರವರನ್ನು ಭೇಟಿ ಮಾಡುವ ಅವಕಾಶವಿದೆ ಎಂದು ತಿಳಿಯಿತು. 

ಚಿಕ್ಕಂದಿನಿಂದಲೂ ಅವರ ಸಾಹಸ/ ದಕ್ಷತೆಗಳ ಕಥೆಗಳನ್ನು ಕೇಳಿದ್ದ ನಮಗೆ ಉತ್ಸಾಹ ಹೆಚ್ಚಿತು. ನಾವು ನೋಂದಾಯಿಸಿಕೊಂಡು ಸಾಲಿನಲ್ಲಿ ನಿಂತೆವು. ಬೆಂಗಳೂರಿನ ರಾಜ ಭವನದಷ್ಟು ದೊಡ್ಡದಲ್ಲದಿದ್ದರೂ ಬಹಳ ಸುಂದರವಾದ ಚೊಕ್ಕಟವಾದ ಭವನ ಅದಾಗಿತ್ತು. ನಮ್ಮ ಸರದಿ ಬಂದಾಗ ಕಿರಣ್ ಬೇಡಿಯವರು ನಮ್ಮ ಕೈ ಕುಲುಕಿ ಶುಭ ಹಾರೈಸಿದರು. ಅವರೊಂದಿಗೆ ಭಾವಚಿತ್ರ ತೆಗೆಸಿಕೊಂಡ ಆ ಕ್ಷಣ ಅವಿಸ್ಮರಣೀಯ! ಸಿಹಿ ತಿನಿಸನ್ನು ಪಡೆದು ಹಿಂಬಾಗಿಲಿನಿಂದ ಹೊರಬಿದ್ದೆವು.

ಹಾಗೆ ಆ ರಸ್ತೆಗಳಲ್ಲಿ ಅಡ್ಡಾಡುತ್ತ, ಬೀದಿ ಬದಿಯಲ್ಲಿ ಸ್ವಲ್ಪ ಶಾಪಿಂಗ್ ಮಾಡಿ ಅರವಿಂದ ಆಶ್ರಮದ ಮಳಿಗೆಗಳಲ್ಲಿ ಸುತ್ತಾಡಿದೆವು. ಅಲ್ಲಿ  ದೊರೆಯುವ ಸುಗಂಧ ದ್ರವ್ಯಗಳು ಬಹಳ ವಿಖ್ಯಾತ. ನೆನೆಪಿಗಾಗಿ ಒಂದಷ್ಟನ್ನು ಖರೀದಿಸಿದೆವು. ಊಟ ಮುಗಿಸಿ ನಮ್ಮ ಕೋಣೆಗೆ ಹಿಂತಿರುಗಿದೆವು. ಕೋಣೆಯ ಹೊರಗಿದ್ದ ಸಣ್ಣ ಆರಾಮದಲ್ಲಿ ಕುಳಿತು ಒಂದಷ್ಟು ಹರಟುತ್ತಾ ಕಾಲ ಕಳೆದೆವು. ರಾತ್ರಿಯ ಬಸ್ಸನ್ನು ಹತ್ತಿ, ಮರುದಿನ  ಬೆಂಗಳೂರು ತಲುಪಿದೆವು.

Related Articles

2 Comments

Leave a Reply

Your email address will not be published. Required fields are marked *

Back to top button