ಕಾರು ಟೂರುದೂರ ತೀರ ಯಾನಮ್ಯಾಜಿಕ್ ತಾಣಗಳುವಿಂಗಡಿಸದವಿಸ್ಮಯ ವಿಶ್ವ

ಗಂಡಿಕೋಟಾ ಎಂಬ ಭಾರತದ ಗ್ರ್ಯಾಂಡ್ ಕ್ಯಾನ್ಯನ್: ಹೇಮಂತ ಕುಮಾರ ದೇಸಾಯಿ ಪರಿಚಯಿಸಿದ ದೇಶದ ಹೆಮ್ಮೆಯ ತಾಣ

ತುಂಬಾ ಸಲ ನಮ್ಮ ಊರಲ್ಲಿರುವ ಅದ್ಭುತ ತಾಣಗಳನ್ನೇ ನೋಡಿರುವುದಿಲ್ಲ. ಆದರೆ ಅದೇ ಥರದ ಜಾಗಗಳು ಬೇರೆ ದೇಶದಲ್ಲಿ ನೋಡಿದಾಗ ಭಾರಿ ಅಚ್ಚರಿ ಪಡುತ್ತೇವೆ. ಅಂಥದ್ದೊಂದು ತಾಣ ಗಂಡಿಕೋಟ. ಬೆಂಗಳೂರಿನಿಂದ 279 ಕಿಮೀ ದೂರವಿರುವ ಭಾರತದ ಗ್ರ್ಯಾಂಡ್ ಕ್ಯಾನ್ಯನ್ ಅನ್ನು ಪ್ರವಾಸ ಪ್ರಿಯ ಬರಹಗಾರ ಬೆಂಗಳೂರಿನ ಹೇಮಂತ್ ಕುಮಾರ್ ದೇಸಾಯಿ ಬರೆದಿದ್ದಾರೆ.

‘ಅಂಗೈಯಲ್ಲಿ ಬೆಣ್ಣೆ ಇಟಗೊಂಡು ತುಪ್ಪಕ್ಕಾಗಿ ಊರೆಲ್ಲಾ ಅಲೆದರಂತೆ’ ಎಂಬ ಮಾತೊಂದಿದೆಯೆಲ್ಲಾ ಅದು ಇಲ್ಲೇ ಬೆಂಗ್ಳೂರ್ ನಿಂದಾ ಬರೀ ಇನ್ನೂರಾ ಎಪ್ಪತ್ತೆಂಭತ್ತು ಕಿಲೋಮೀಟರ ದೂರದಲ್ಲಿರೋ “ಗಂಡಿಕೋಟಾ” ನೋಡೋದ್ಬಿಟ್ಟು ದೂರದ ಅಮೆರಿಕೆಯ ಅರಿಝೋನಾದಲ್ಲಿರುವ ಗ್ರ್ಯಾಂಡ್ ಕ್ಯಾನ್ಯನ್ ನ್ಯಾಷನಲ್ ಪಾರ್ಕ್ ನೋಡಿ “ಅಬ್ಬಾ” ಎಂದು ಉದ್ಘಾರ ತೆಗೆದು ಬರುತ್ತಾರಲ್ಲ, ಅವರಿಗೆ ಅತ್ಯಂತ ಸೂಕ್ತವಾಗುತ್ತದೆ. ಎರಡನ್ನೂ ನೋಡಿದವರಿಗೆ “ಗಂಡಿಕೋಟಾ”ವನ್ನು “ಗ್ರ್ಯಾಂಡ್ ಕ್ಯಾನ್ಯನ್ ಆಫ್ ಇಂಡಿಯಾ” ಎಂಬ ಉಪಶಿರೋನಾಮೆಯಿಂದ ಕರೆಯುವುದು ಶಬ್ದಸಃ ಸಮಂಜಸವೆನಿಸಿಬಿಡುತ್ತದೆ.

“ಗಂಡಿಕೋಟಾ” ಪಕ್ಕದ ಆಂಧ್ರಪ್ರದೇಶದ ಕಡಪಾ ಜಿಲ್ಲೆಯ ಜಮ್ಮಲಮಡುಗು ಹತ್ತಿರ ಹರಿದಿರುವ ಪೆನ್ನಾ ನದಿಯ ದಂಡೆಯ ಮೇಲಿದೆ. ಗುಡ್ಡಬೆಟ್ಟಗಳ ಮಧ್ಯ ಕೊಳ್ಳದಲ್ಲಿ ಹರಿಯುವ ನೀರಿಗೆ ತೆಲುಗಿನಲ್ಲಿ ಗಂಡಿ ಎಂದು ಹೇಳುತ್ತಾರೆ. ಪೆನ್ನಾ ನದಿ ಇಲ್ಲಿರುವ  ಎರಾಮಲಾ ಪರ್ವತ ಶ್ರೇಣಿಯ ಮಧ್ಯ ಹರಿಯುತ್ತಿರುವುದರಿಂದ ಈ ಜಾಗಕ್ಕೆ ಗಂಡಿಕೋಟಾ ಎಂಬ ಹೆಸರು ಬಂದಿದೆ. 

ಸುಮಾರು ಐನೂರು ವರ್ಷಗಳ ಭವ್ಯ ಇತಿಹಾಸ ಹೊಂದಿದ ಗಂಡಿಕೋಟಾ  ಹನ್ನೆರಡನೇ ಶತಮಾನದಿಂದ ಹದಿನೇಳನೇ ಶತಮಾನದವರೆಗೆ  ನಾಲ್ಕು ಆಳರಸರ ರಾಜಧಾನಿಯಾಗಿತ್ತು. ಅಂದು ಅವರು ತಮ್ಮ ಈ ಅಧಿಕಾರ ಕೇಂದ್ರದಲ್ಲಿ ನಿರ್ಮಿಸಿದ ಇಮಾರತ್ ಗಳೇ ಇಂದಿನ ಆಕರ್ಷಣೆಯ ಕೇಂದ್ರಗಳಾಗಿವೆ. ಹಿಂದು, ಮುಸ್ಲಿಂ ಧರ್ಮೀಯರೀರ್ವರೂ ರಾಜ್ಯಭಾರ ನಡೆಸಿದ ಪರಿಣಾಮವಾಗಿ ಇಲ್ಲಿ ಕೋಟೆ ಕೊತ್ತಲುಗಳೊಂದಿಗೆ ಮಂದಿರಗಳೂ ಇವೆ ಮಸೀದಿಗಳೂ ಇವೆ. ಮಂದಿರ ಮಸೀದಿಗಳು ಅವರವರ ಭಾವನೆಗಳಿಗುಣವಾಗಿ ಪೂಜನೀಯ ಎನಿಸಿದರೆ ಕೋಟೆ ಕೊತ್ತಲುಗಳು ರುದ್ರರಮಣೀಯವಾಗಿವೆ. ಹರಿಯುವ ನದಿ, ನದಿ ತೀರದ ಹಿನ್ನೋಟ ಮನಸ್ಸಿಗೆ ಮುದನೀಡಿದರೆ, ಕೊಳ್ಳಗಳು ಪುಳಕಿತಗೊಳಿಸುತ್ತವೆ.   

ಗಂಡಿಕೋಟಾ ಪ್ರವೇಶಿಸಿದೊಡನೆ ವೀಕ್ಷಕರನ್ನು ಸ್ವಾಗತಿಸುವುದು ಚಾರ್ಮಿನಾರ್. ಹೆಸರೇ ಹೇಳುವಂತೆ ನಾಲ್ಕು ಸ್ತಂಭಗಳ ಈ ಕಟ್ಟಡ ಹೈದರಾಬಾದ್ ಚಾರ್ಮಿನಾರ್ ಗಿಂತ ಭಿನ್ನವಾಗಿದೆ. ಉತ್ತಮ ನಿರ್ವಹಣೆ ಇದನ್ನು ಇನ್ನೂ ಸುಂದರವಾಗಿಸಿದೆ. ಮುಂದೆ ಹೋದಂತೆ ಸಿಗುವುದು ಕತ್ತುಲಾ ಕೋನೇರು ಸರೋವರ. ಸರೋವರ ಚಿಕ್ಕದಾದರೂ ಅದರ ಸುತ್ತಲಿನ ಕಲ್ಲಿನ ರಚನೆ ಗಮನ ಸೆಳೆಯುತ್ತದೆ. ಅದರ ಹತ್ತಿರವೇ  ಥಟ್ಟನೇ ನಮ್ಮ ವಿಜಯಪುರವನ್ನು ಜ್ಞಾಪಿಸುವ ಜಾಮಿಯಾ ಮಸ್ಜಿದ್ ಇದೆ. ಪಕ್ಕದ ಸರೋವರದಿಂದ ಪೈಪುಗಳ ಮುಖಾಂತರ ನೀರನ್ನು ತಂದು ಇಲ್ಲಿ ಕಾರಂಜಿಗಳನ್ನು ನಿರ್ಮಿಸಿದ್ದರಂತೆ. (ಈಗ ಅದರ ಅವಶೇಷಗಳೇನೂ ಇಲ್ಲ). ಹಿನ್ನೆಲೆಯಲ್ಲಿ ಚಂದ್ರೋದಯವಾಗುತ್ತಿರುವ ಸಮಯದಲ್ಲಿ ಈ ಕಟ್ಟಡ ಇನ್ನೂ ಚೆನ್ನಾಗಿ ಕಾಣುತ್ತದೆ.

ಅಭಿಷೇಕ್ ದೇಸಾಯಿ

 ಮಸೀದಿಯ ಹತ್ತಿರವೇ ಇದೆ ಬೃಹದಾಕಾರದ ಕಣಜ.ಬರಗಾಲ ಬಿದ್ದಾಗ ಪ್ರಜೆಗಳಿಗೆ ಒದಗಿಸಲೋಸುಗ ದವಸ ಧಾನ್ಯಗಳನ್ನು ಇದರಲ್ಲಿ ಸಂಗ್ರಹಿಸಿಡಲಾಗುತ್ತಿತ್ತಂತೆ. ಅಬ್ಬಾ! ಅದೆಷ್ಟು ದೊಡ್ಡದಾಗಿದೆ ಈ ಕಟ್ಟಡ! ಇಷ್ಟು ದೊಡ್ಡ ಪ್ರಮಾಣದಲ್ಲಿ ಕಟ್ಟಲೆಂದೇ ದೊಡ್ಡ ದೊಡ್ಡ ಕಲ್ಲುಗಳನ್ನು ಬಳಸಿ ಈ ಕಟ್ಟಡವನ್ನು ಕಟ್ಟಲಾಗಿದೆ. ಇದರ ಅಗಾಧವಾದ ಎತ್ತರದ ಹಿಂದಿರುವ ಉದ್ದೇಶ ಈ ಕಟ್ಟಡವನ್ನು ಹವಾನಿಯಂತ್ರಕವಾಗಿಸುವುದಾಗಿತ್ತಂತೆ. ಅದರ ಫಲವಾಗಿ ಇದರಲ್ಲಿ ಕಾಳು ಕಡಿಗಳು ವರ್ಷಗಟ್ಟಲೆ ಕೆಡದಂತೆ ಸಂಗ್ರಹಿಸಲ್ಪಡುತ್ತಿದ್ದವಂತೆ. ಸುಮಾರು ನಾಲ್ಕೈದು ನೂರು ವರ್ಷಗಳ ಹಿಂದೆಯೇ ನಮ್ಮ ಅರಸರಿಗೆ ತಂತ್ರಜ್ಞಾನದ ಜ್ಞಾನವಿತ್ತು ಎಂಬ  ಬೆರಗಾಗುವಂಥ ನಿದರ್ಶನ ನಮಗೆ ಇಲ್ಲಿ ದೊರಕುತ್ತದೆ.

ಹಾಗೇ ಸ್ವಲ್ಪ ಮುಂದೆ ಹೋದರೆ  ರಘುನಾಥಸ್ವಾಮಿ ಮಂದಿರ, ಅಲ್ಲಿಂದ ಸುಮಾರು ಅರ್ಧ, ಮುಕ್ಕಾಲು ಕಿಲೋಮೀಟರ್ ದೂರದಲ್ಲಿ ಮಾಧವರಾಯ ಸ್ವಾಮಿ ಮಂದಿರ ಇವೆ. ಎರಡೂ ಮಂದಿರಗಳು ಸುಂದರವಾಗಿವೆ. ಪರಂಪರಾಗತ ಶಿಲ್ಪಕಲೆ ಕಣ್ಣಿಗೆ ರಾಚುತ್ತದೆ. ಒಂದನ್ನೊಂದಕ್ಕೆ ಹೋಲಿಸಿದಾಗ ರಘುನಾಥಸ್ವಾಮಿ ಮಂದಿರ ಸ್ವಲ್ಪ ಶಿಥಿಲಗೊಂಡಿದೆ. ಆದರೆ ಮಾಧವರಾಯಸ್ವಾಮಿ ಮಂದಿರ ಅಲ್ಲಿಲ್ಲಿ ದುರಸ್ತಿಗೊಳಿಸಲ್ಪಟ್ಟು ಚೆನ್ನಾಗಿಯೇ ಇದೆ. ಪ್ರಾಚೀನ ಕಾಲದ ಕಟ್ಟಡಗಳಾಗಿದ್ದರೂ ಇಲ್ಲಿ ಭಕ್ತಿ ಭಾವದ ಘಮಲಿಗೇನೂ ಕೊರತೆ ಇಲ್ಲ.ಧ್ಯಾನಾಸಕ್ತರಿಗೆ ಇವು ಇಂದಿಗೂ ಧ್ಯಾನ ಕೇಂದ್ರಗಳೇ. 

ವ್ಯೂ ಪಾಯಿಂಟ್ 

ಇದೇನೂ ಅಧಿಕೃತ  ನಾಮಕರಣವಲ್ಲ. ಪ್ರವಾಸಿಗರೇ ಇಟ್ಟಂಥ  ಹೆಸರು. ಗಂಡಿಕೋಟಾ ವೀಕ್ಷಣೆಯಲ್ಲಿ ಹೈ ಲೈಟ್ ಆದ ‘ಪೆನ್ನಾ (ರಿವರ್) ಗಾರ್ಜ್’ನ ವಿಹಂಗಮ ನೋಟವನ್ನು ಪಯಣಿಗರು ಇಲ್ಲಿ ನಿಂತುಕೊಂಡೇ ಕಣ್ತುಂಬಿಕೊಳ್ಳುತ್ತಾರೆ. ಇಲ್ಲಿ ದೊರಕುವ ನೋಟದಿಂದಲೇ ಇದಕ್ಕೆ’ಗ್ರ್ಯಾಂಡ್ ಕಾನ್ಯನ್ ಆಫ್ ಇಂಡಿಯಾ’ ಎಂಬ ಖ್ಯಾತಿ ಪ್ರಾಪ್ತವಾಗಿದೆ. ರಂಗು ರಂಗಾಗಿರುವ ಎರಾಮಾಲಾ ಗುಡ್ಡ  ಬೆಟ್ಟಗಳ  ಶ್ರೇಣಿಯ  ಮಧ್ಯದ ಕಣಿವೆ, ಕಂದರಗಳ ಮುಖಾಂತರ ಕರ್ನಾಟಕದಲ್ಲಿ ಉಗಮಿಸಿದ ಪೆನ್ನಾ ನದಿ ಹಾಯಾಗಿ ಹರಿಯುತ್ತಿರುವುದನ್ನು (ಇಲ್ಲಿಂದ)ನೋಡುವುದೇ ಒಂದು ಹಬ್ಬ. ಕೈಯಿಂದ ಕೆತ್ತಲ್ಪಟ್ಟಿವೆಯೇನೋ ಎಂದು ಭಾಸವಾಗುವಂಥ ಅಂಕುಡೊಂಕಾದ ಕಂದರಗಳು, ಆ ಅಂಕುಡೊಂಕುಗಳಲ್ಲಿ ಹರಿಯುವುದರಿಂದ ಹೆಚ್ಚಾದ ನದಿಯ ವೈಯಾರ- ಇವು ನೋಡುಗನಿಗೆ ಸೃಷ್ಟಿಯ ಬೇರೊಂದು ಮಜಲನ್ನು ದರ್ಶಿಸುತ್ತವೆ. ಇಂಥ ತಾಣದಲ್ಲಿ ತೊಗಲುದೋಣಿ / ಹರಿಗೋಲಿನಲ್ಲಿ ವಿಹಾರ. ಈಜುವಿಕೆಯಂಥ ಜಲಕ್ರೀಡೆಗಳಿಗೆ ವ್ಯವಸ್ಥೆಯನ್ನು ಕಲ್ಪಿಸಿರುವುದು ಪ್ರವಾಸದ ಖುಷಿಯನ್ನು ಇಮ್ಮಡಿಗೊಳಿಸುತ್ತದೆ. ಮಾತ್ರವಲ್ಲ ಇಲ್ಲಿ ಕ್ಯಾಂಪ ಕೂಡಾ ಮಾಡಬಹುದು. 

ಗಂಡಿಕೋಟಾ ಕೋಟೆ 

ಹನ್ನೆರಡನೇ  ಶತಮಾನದಲ್ಲಿ ಕಾಪಾ ರಾಜನಿಂದ ಕಟ್ಟಿಸಲ್ಪಟ್ಟ ಈ  ಕೋಟೆ ನಂತರದ ಕಾಲದಲ್ಲಿ ಆಳಿದ ರಾಜರಿಂದಲೂ ನವೀಕರಿಸಲ್ಪಡುತ್ತ ಉಪಯೋಗಿಸಲ್ಪಟ್ಟಿದ್ದನ್ನು ಜ್ಞಾಪಿಸುತ್ತದೆ. ಸೈನಿಕರಿಗೆ ಸಹಜ ಸುರಕ್ಷೆಯಾಗಿ ನದಿಯನ್ನು ಬಳಸಿಗೊಳ್ಳಲೋಸುಗ ದಡದಿಂದ ಕೇವಲ ನೂರಾರು ಮೀಟರಗಳ ದೂರದಲ್ಲಿ ಇರುವ ಈ ಕೋಟೆ ಈಗ ಹಸಿರು ಹುಲ್ಲ ಹಾಸಿಗೆಯಿಂದ ಸುತ್ತುವರಿಯಲ್ಪಟ್ಟಿದೆ. ಹಾಗಾಗಿ ಈ ಕೋಟೆ  ಆ ಕಾಲದ ವಾಸ್ತುಶಿಲ್ಪ ಮತ್ತು ಈ ಕಾಲದ ಹಸಿರಿನ ‘ಕಾಕ್ ಟೇಲ್ ’.

ಅಭಿಷೇಕ್ ದೇಸಾಯಿ

ಇಲ್ಲಿಂದ ಕೇವಲ ಎಂಟೊಂಭತ್ತು ಕಿಲೋಮೀಟರ್ ದೂರದಲ್ಲಿ ಮೈಲಾವರಂ ಡ್ಯಾಮ್ ಇದೆ. ಇದಕ್ಕೆ ತಾತಿರೆಡ್ಡಿ ನರಸಿಂಹರಡ್ಡಿ ಡ್ಯಾಮ್ ಎಂದೂ ಕರೆಯುತ್ತಾರೆ.ಗಂಡಿಕೋಟಾದಲ್ಲಿ ಹರಿದ ಪೆನ್ನಾ ನದಿಗೇನೇ ಕಟ್ಟಿದ ಈ ಡ್ಯಾಮ್ ‘ಮಧ್ಯಮ ನೀರಾವರಿ ಯೋಜನೆ’ಯಾದರೂ ಪ್ರೇಕ್ಷಣೀಯವಾಗಿದೆ. ಪ್ರವಾಸಿಗರನ್ನು ಆಕರ್ಷಿಸತೊಡಗಿದಾಗಿನಿಂದ ಬೋಟಿಂಗ್,ಹಾಯಿದೋಣಿ ವಿಹಾರಗಳ ವ್ಯವಸ್ಥೆಗಳನ್ನೂ ಮಾಡಲಾಗಿದೆ. ಗಂಡಿಕೋಟಾದಿಂದ ಒಂದು ಘಂಟೆಯಲ್ಲಿ ಹೋಗಿಬರಬಹುದಾದ ಈ ತಾಣಕ್ಕೆ ಸಂಜೆಯೇ ಹೋಗಬೇಕು.ಅಂದರೆ ಸುಂದರ ಸೂರ್ಯಾಸ್ತದ ಸೊಬಗನ್ನೂ ಕೂಡ  ಸವಿಯಬಹುದು.

ಅಭಿಷೇಕ್ ದೇಸಾಯಿ

ಹೋಗುವುದು ಹೀಗೆ: ವಿಮಾನದ ಮುಖಾಂತರ ಹೋಗುವುದಾದರೆ ತಿರುಪತಿ ವಿಮಾನ ನಿಲ್ದಾಣವೇ ಅತ್ಯಂತ ಹತ್ತಿರ.ಇನ್ನೂರಾ ಇಪ್ಪತ್ತು ಕಿಲೋಮೀಟರ್ ಅಂತರದಲ್ಲಿದೆ.ರೈಲಿನಿಂದಾದರೆ ಕೇವಲ ಹದಿನೈದು ಕಿಲೋಮೀಟರ್ ದೂರದಲ್ಲಿರುವ ಜಮ್ಮಲಮಡುಗು ಗೆ ಹೋಗಿ ಮುಂದೆ ಬಸ್/ಟ್ಯಾಕ್ಸಿ ಮುಖಾಂತರ ಹೋಗಬಹುದು.ಬೆಂಗಳೂರಿನಿಂದ ಸುಮಾರು ಇನ್ನೂರಾ ಎಂಭತ್ತು ಕಿಲೋಮೀಟರ್ ಮಾತ್ರ ದೂರದಲ್ಲಿರುವುದರಿಂದ ಕಾರು/ಟ್ಯಾಕ್ಸಿಯಲ್ಲೂ ಹೋಗಿಬರಬಹುದು.ವಸತಿಗೆ ರೆಸಾರ್ಟ್ ಇದೆ. 

ಒಟ್ಟಿನಲ್ಲಿ ಗಂಡಿಕೋಟಾ ಒಂದು ಉತ್ತಮ ವಾರಾಂತ್ಯದ ಟ್ರಿಪ್ ಆಗಬಲ್ಲದು.ಕುಟುಂಬ ಸಮೇತವಾದರೂ ಸೈ, ಗೆಳೆಯರ ಗುಂಪಿನ ಗಮ್ಮತ್ತಿಗಾದರೂ ಸೈ.

Related Articles

Leave a Reply

Your email address will not be published. Required fields are marked *

Back to top button