ಕಾರು ಟೂರುದೂರ ತೀರ ಯಾನನಡಿಗೆ ನಮ್ಮ ಖುಷಿಗೆವಿಂಗಡಿಸದಸೂಪರ್ ಗ್ಯಾಂಗು

ಹೈಸ್ಕೂಲ್ ದಿನಗಳನ್ನು ಮರುಕಳಿಸಿದ ಪ್ರವಾಸ: 96 ಸಿನಿಮಾ ನೆನಪಿಸುವ ಎಸ್ ಡಿಎಂ ವಿದ್ಯಾರ್ಥಿ ರಾಮ್ ಕಿಶನ್ ಬರಹ

ಹೈಸ್ಕೂಲು ಸ್ನೇಹಿತರೆಲ್ಲಾ ಬಹಳ ವರ್ಷಗಳ ನಂತರ ಸೇರಿದಾಗ ಅಲ್ಲಿ ನಗು ಮತ್ತು ಖುಷಿ ಮಾತ್ರ ಇರುತ್ತದೆ. ಅಂಥದ್ದೊಂದು ಬರಹವನ್ನು ಉಜಿರೆ ಎಸ್‌ಡಿಎಮ್ ಕಾಲೇಜಿನ ಸಮೂಹ ಸಂವಹನ ವಿದ್ಯಾರ್ಥಿ ರಾಮ ಕಿಶನ್ ಕೆ.ವಿ ಬರೆದಿದ್ದಾರೆ. ಈ ಬರಹ ಓದಿದ ಮೇಲೆ ನಿಮ್ಮ ಹೈಸ್ಕೂಲು ಸ್ನೇಹಿತರಿಗೊಮ್ಮೆ ಫೋನ್ ಮಾಡಿಯಾದರೂ ಮಾತನಾಡದೇ ಇರಲಾರಿರಿ.

ಹೈಸ್ಕೂಲು ಮುಗಿಸಿ ಆರು ವರ್ಷಗಳೇ ಕಳೆದು ಹೋದವು. 

ಹೀಗೊಂದು ಮೆಸೇಜ್ ನಮ್ಮ ಹೈಸ್ಕೂಲ್ ವಾಟ್ಸಪ್ ಗ್ರೂಪಿನಲ್ಲಿ ಬಂದಿತ್ತು. ಮತ್ತದೇ ಹಳೇ ಕಥೆಗಳ ಮಾತು ನಡೆದು ಹೋದವು. ಕೊನೆಯಲ್ಲಿ ಮತ್ತೊಮ್ಮೆ ಎಲ್ಲರೂ ಒಂದಾಗಿ ಪ್ರವಾಸ ಹೋಗುವುದೆಂದು ನಿರ್ಧಾರವಾದವು. ಎಲ್ಲರೂ ಜೈ ಅಂದೆವು. ಮುಂದಿನ ಆದಿತ್ಯವಾರ ಕೆರೆ ನಡುವಿನಲ್ಲಿರುವ ವರಂಗ ಜೈನ ಬಸದಿ, ಶೃಂಗೇರಿ ಶಾರದಾಂಬ ದೇವಸ್ಥಾನ ಹಾಗೂ ಕುವೆಂಪು ಅವರ ಮನೆ ಕುಪ್ಪಳ್ಳಿಗೆ 12 ಜನರ ತಂಡ ಪ್ರಯಾಣ ಬೆಳೆಸಿದೆವು. ಈ ಪ್ರಯಾಣದಲ್ಲಿ ಪಾಠ ಮಾಡಿದ ಶಿಕ್ಷಕರೂ ಜತೆಯಾದ್ದು ನಮ್ಮ ಖುಷಿಗೆ ಇನ್ನಷ್ಟು ಕಾರಣವಾಗಿತ್ತು. 

ವರಂಗದಲ್ಲಿ ದೋಣಿ ಪಯಣ

ಬೆಳಗ್ಗೆ 6 ಗಂಟೆ. ಮುಂಚಿತವಾಗಿ ನಾವು ನಿಗದಿ ಪಡಿಸಿದ್ದ ಬಸ್ಸು ಬಂದು ನಮಗಾಗಿ ಕಾಯುತ್ತಿತ್ತು. ಪ್ರವಾಸಕ್ಕೆ ಬೇಕಾದ ಎಲ್ಲಾ ತಯಾರಿಯನ್ನು ಮಾಡಿಕೊಂಡು ಬಸ್ಸನ್ನೇರಿದೆವು. ಬೆಳಗ್ಗಿನ ಜಾವ ಆದುದರಿಂದ ದಾರಿಯುದ್ದಕ್ಕೂ ಮಂಜು. ಆಗ ತಾನೆ ಪೇಟೆಗಳು ಎಂದಿನ ವಹಿವಾಟಿಗೆ ತಯಾರಾಗುತ್ತಿದ್ದವು. ಈ ನಡುವೆ ನಮ್ಮ ಪ್ರಯಾಣ ಸಾಗಿದ್ದು ಕಾರ್ಕಳದಲ್ಲಿರುವ ವರಂಗ ಜೈನ ಬಸದಿಗೆ. 

ಸುತ್ತಲೂ ಪ್ರಶಾಂತವಾದ ವಾತಾವರಣ. ಹಸಿರನ್ನೇ ಹೊದ್ದು ಮಲಗಿದ ಪಶ್ಚಿಮ ಘಟ್ಟಗಳ ಸಾಲು. ಎದುರಿಗೆ ಹರಡಿಕೊಂಡಿರುವ ಭತ್ತದ ಗದ್ದೆಗಳು. ವರ್ಷವಿಡೀ ನೀರಿನಿಂದ ತುಂಬಿ ತುಳುಕುವ ವಿಶಾಲವಾದ ಕೆರೆ. ಇದರ ಮಧ್ಯೆ ತಲೆಯೆತ್ತಿ ನಿಂತಿರುವ ಜೈನ ಬಸದಿ. ಇದುವೇ ಜೈನರ ಪವಿತ್ರ ಪದ್ಮಾವತಿ ದೇವಿ ಬಸದಿ.

ಬಸದಿಯನ್ನು ತಲುಪಬೇಕಾದರೆ ದೋಣಿಯೊಂದೇ ದಾರಿ. ಪ್ರಯಾಣಕ್ಕೆ 10 ರೂ. ಟಿಕೇಟ್ ಖರೀದಿಸಿದೆವು. ದೋಣಿಯಲ್ಲಿ ಸಾಗುವ ಪಯಣ ಹೊಸ ಅನುಭವ ಆಗಿತ್ತು. ಬಸದಿ ತಲುಪುತ್ತಿದ್ದಂದೆ ಖುಷಿ ಇಮ್ಮಡಿಗೊಳ್ಳುತ್ತಿತ್ತು. ಬಸದಿಯಲ್ಲಿ ನೆಲೆಸಿದ್ದ ಪದ್ಮಾವತಿ ದೇವಿಗೆ ನಮಸ್ಕರಿಸಿ, ಬಸದಿಯ ವಿಶೇಷತೆಯ ಬಗ್ಗೆಲ್ಲಾ ಮಾತಾಡಿಕೊಂಡೆವು. ಸಮಯ ಸರಿಯುತ್ತಿದ್ದಂತೆ ಬಂದ ದೋಣ ಯಲ್ಲಿ ಪುನಃ ಹಿಂತಿರುಗಿದೆವು. 

ಅದಾಗಲೇ ಸಮಯ 8.30 ಆಗಿತ್ತು. ಹೊಟ್ಟೆ ಬೆಳಗ್ಗಿನ ಉಪಾಹಾರಕ್ಕಾಗಿ ಕಾದಿತ್ತು. ಅಲ್ಲೇ ಪಕ್ಕದಲ್ಲಿ ಮರದಡಿಯಲ್ಲಿ ಕುಳಿತು ಬರುತ್ತಾ ತಂದಿದ್ದ ಉಪಾಹಾರವನ್ನು ಸೇವಿಸಿದೆವು. ಮತ್ತೆ ಶುರುವಾಯಿತು ನಮ್ಮ ಪ್ರಯಾಣ. ಮುಂದೆ ಸಾಗಿತ್ತು ಶೃಂಗೇರಿ ಶಾರದಾಂಬ ದೇವಸ್ಥಾನದತ್ತ.

ದಾರಿಯುದ್ದಕ್ಕೂ ನಮ್ಮ ಮಾತುಕಥೆ ಸಾಗಿತ್ತು. 6 ವರ್ಷಗಳ ಬಳಿಕ ಸ್ನೇಹಿತರೆಲ್ಲಾ ಜತೆಯಾಗಿದ್ದೆವು. ಹೈಸ್ಕೂಲು ದಿನಗಳಲ್ಲಿ ಕಳೆದ ಕ್ಷಣಗಳು ಒಂದೊಂದಾಗಿ ನೆನಪಾಗುತ್ತಿದ್ದವು. ತಮಾಷೆಯ ಮಾತುಗಳಿಗೆ ಮಿತಿಯೇ ಇರಲಿಲ್ಲ. ನಮ್ಮ ಮಾತಿಗೆ ಶಿಕ್ಷಕರೂ ದನಿಯಾದರು. ಅಂದು ಪಾಠ ಮಾಡುತ್ತಾ ಗದರುತ್ತಿದ್ದವರು ಪ್ರಯಾಣದಲ್ಲಿ ಸ್ನೇಹಿತರಂತೆ ಭಾಸವಾಗತ್ತಿದ್ದರು. ಹೀಗಾಗಿ ಮಾತಿನ ನಡುವೆ ಪ್ರಯಾಣ ಸಾಗಿದ್ದು ಅರಿವಿಗೇ ಬರಲಿಲ್ಲ.

ಶಾರದಾಂಬೆ ಸನ್ನಿಧಿಯಲ್ಲಿ

ಅದಾಗಲೇ ಸಮಯ 11.30 ಆಗಿತ್ತು. ಶೃಂಗೇರಿ ಶಾರದಾ ಪೀಠವನ್ನು ತಲುಪಿದೆವು. ಜನಸಂದಣಿ ಕಡಿಮೆಯಿದ್ದ ಕಾರಣ ದೇವರ ದರ್ಶನ ಸುಲಭವಾಗಿಯೇ ಆಯಿತು. ದೇವಸ್ಥಾನಕ್ಕೆ ಸುತ್ತು ಬರುತ್ತಾ ಅಲ್ಲಿನ ಶಿಲ್ಪಕಲೆಗಳ ಶ್ರೀಮಂತಿಕೆಯ ಬಗ್ಗೆ ಮಾತನಾಡಿದೆವು. ಕೆತ್ತನೆಕಾರರ ನೈಪುಣ್ಯತೆಗೆ ಮೆಚ್ಚಲೇಬೇಕು. ಪಕ್ಕದಲ್ಲಿ ಹರಿಯುತ್ತಿದ್ದ ನದಿಗಳಲ್ಲಿದ್ದ ಮೀನುಗಳಿಗೆ ಮಂಡಕ್ಕಿ ಹಾಕಿ ಖುಷಿ ಪಟ್ಟೆವು. ಅಲ್ಲೇ ಇದ್ದ ತೂಗು ಸೇತುವೆಯಲ್ಲಿ ನಡೆದು ಸಂಭ್ರಮಿಸಿದೆವು. ಶೃಂಗೇರಿಯಿಂದ ಹೊರಡುವ ವೇಳೆಗೆ ಹೇಳಲಾಗದ ಧನ್ಯತಾಭಾವ, ಮನದೊಳಗೇ ಸಂಭ್ರಮ. 

ಮತ್ತೆ ನಮ್ಮ ಪ್ರಯಾಣ ಸಾಗಿದ್ದು ರಾಷ್ಟ್ರಕವಿ ಕುವೆಂಪು ಅವ್ರು ನೆಲೆಸಿದ್ದ ಕುಪ್ಪಳ್ಳಿಯಲ್ಲಿರುವ ಅವರ ಮನೆಗೆ. ದಾರಿ ಮಧ್ಯೆ ನಮ್ಮ ಊಟದ ಸಮಯ ಮೀರಿತ್ತು. ಹಸಿವು ನಮ್ಮನ್ನ ಮೌನಿಯನ್ನಾಗಿಸುತ್ತಿತ್ತು. ದಾರಿ ಮಧ್ಯೆ ಬರುತ್ತಾ ತಂದಿದ್ದ ಮೊಸರನ್ನ ಹಾಗೂ ಚಪಾತಿಯ ಸೇವನೆಯಾಯಿತು. 

ಕುಪ್ಪಳ್ಳಿ ತಲುಪುವಾಗ ಸಮಯ 2.30. ಟಿಕೇಟ್ ಖರೀದಿಸಿ ಒಳ ಪ್ರವೇಶಿಸಿದೆವು. ಮನೆಯೊಳಗೆ ಮೌನದ ವಾತಾವರಣ. ಗೋಡೆಯಲ್ಲಿ ಕುವೆಂಪು ಅವ್ರು ಮನೆಯಲ್ಲಿ ಬಳಸುತ್ತಿದ್ದ ವಸ್ತುಗಳನ್ನೆಲ್ಲಾ ನೋಡಿದೆವು. ಹಳೆಯ ಕುವೆಂಪು ಅವರಿಗೆ ಸಂದ ಗೌರವ ಪ್ರಶಸ್ತಿಗಳು, ಹಳೆಯ ಭಾವಚಿತ್ರಗಳನ್ನೆಲ್ಲಾ ಮನೆಯಲ್ಲಿ ನೋಡಿದೆವು. ಈ ನಡುವೆ ಹಳೆಯ ಮನೆಯ ಶೈಲಿಗೆ ನಾವೆಲ್ಲಾ ಮಾರು ಹೋದೆವು. ಮನದೊಳಗೇ ಒಂದು ದಿನ ಈ ಮನೆಯಲ್ಲಿ ವಾಸ ಮಾಡಬೇಕೆಂದು ಅಂದುಕೊಂಡೆವು. 

ಅಲ್ಲೇ ಪಕ್ಕದಲ್ಲಿರುವ ಕವಿಶೈಲಕ್ಕೂ ತೆರಳಿದೆವು. ಇಲ್ಲಿ ಕುವೆಂಪು ಅವರ ಸಮಾಧಿಯನ್ನು ಕಾಣಬಹುದಾಗಿದೆ. ಕಲ್ಲು ಹಾಸಿನ ಮೇಲೆ ನಡೆದುಕೊಂಡು ಹೋಗುತ್ತಿದ್ದಂತೆ ತಲೆಯೆತ್ತಿ ನಿಂತಿರುವ ಕಲ್ಲಿನ ಕಂಬಗಳು ಸ್ವಾಗತಿಸುತ್ತವೆ. ಇಲ್ಲಿನ ವಿಶೇಷತೆಯೇ ಇದು. ಈ ಪ್ರದೇಶದಲ್ಲಿ ಕಲ್ಲಿನ ಕಂಬಗಳನ್ನು ನಿಲ್ಲಿಸಲಾಗಿದೆ. ನೋಡಲು ಸಾಮಾನ್ಯವಾಗಿ ಕಂಡರೂ ವ್ಯಕ್ತಪಡಿಸಲಾಗದ ವಿಶೇಷತೆಯಿಂದ ಕಲ್ಲಿನ ಕಂಬಗಳು ಮನದಲ್ಲೇ ಕಾಡುತ್ತವೆ.

ಆಗುಂಬೆಯಾ ಪ್ರೇಮ ಸಂಜೆಯಾ

ಅದಾಗಲೇ ಸಮಯ ಸರಿಯುತ್ತಿತ್ತು. ಮನೆಯ ಹಾದಿ ನಮಗಾಗಿ ಕಾಯುತ್ತಿತ್ತು. ಮತ್ತೆ ಹೈಸ್ಕೂಲ್ ದಿನಗಳ ಬಗ್ಗೆ ಮಾತನಾಡುತ್ತಾ ಸಾಗಿದೆವು. ಸಮಯ 5.30 ಆಗಿತ್ತು. ನಮ್ಮ ದಾರಿ ಆಗುಂಬೆ ಘಾಟಿಯಾಗಿ ಸಾಗಬೇಕಿತ್ತು. ಆಗುಂಬೆಯ ಸೂರ್ಯಾಸ್ತಕ್ಕೆ ವಿಶೇಷವಾದ ಮಾನ್ಯತೆ. ಹೀಗಾಗಿ ಬರುತ್ತಾ ಆಗುಂಬೆಯ ಸೂರ್ಯಾಸ್ತವನ್ನ ಕಣ್ತುಂಬಿಕೊಂಡೆವು. ಈ ಸಮಯದಲ್ಲಿ ಅಣ್ಣಾವ್ರ ಆಗುಂಬೆಯ ಸೂರ್ಯಾಸ್ತದ ಹಾಡಿನ ಪ್ರಸ್ತಾಪವೂ ಆಯಿತು. 

ಆಗುಂಬೆಯ ತಿರುವುಗಳಲ್ಲಿ ಸಾಗುತ್ತಾ ಪ್ರಯಾಣ ಮನೆಯೆಡೆಗೆ ಸಾಗಿತ್ತು. ಖಷಿಯ ಪ್ರಯಾಣದ ನಡುವೆ ದಿನ ಕಳೆದು ಹೋಗಿದ್ದು ಮಾತ್ರ ನಮ್ಮ ಅರಿವಿಗೆ ಬರಲೇ ಇಲ್ಲ. ಸ್ನೇಹಿತರೆಲ್ಲಾ ಮತ್ತೆ ಒಂದಾಗಿ ಮಾಡಿದ ಪ್ರವಾಸ ಇನ್ನಷ್ಟು ಸಂತಸ ತರಿಸಿತ್ತು. ಆಗುಂಬೆಯ ಸೂರ್ಯಾಸ್ತದೊಂದಿಗೆ ನಮ್ಮ ಒಂದು ದಿನದ ಪ್ರವಾಸವೂ ಕೊನೆಗೊಂಡಿತು. ಮುಂದಿನ ನಮ್ಮ ಉನ್ನತ ಶಿಕ್ಷಣ, ಉದ್ಯೋಗ, ಯೋಜನೆಗಳ ಕುರಿತಾಗಿ ಮಾತನಾಡಿಕೊಂಡು ಮನೆ ಸೇರಿದೆವು. 

ಅನಿರೀಕ್ಷಿತವಾಗಿ ನಿರ್ಧಾರವಾದ ಈ ಪ್ರವಾಸ ಸದಾ ನೆನಪಿನಲ್ಲಿ ಉಳಿಯುವ ಪ್ರವಾಸವಾಗಿ ಹೋಯಿತು. ಮುಂದಿನ ವರ್ಷವೂ ಎಲ್ಲರೂ ಬಿಡುವು ಮಾಡಿಕೊಂಡು ಮತ್ತೊಂದು ಪ್ರವಾಸ ಕೈಗೊಳ್ಳುವ ಎಂದು ನಿರ್ಧರಿಸಿ ಈ ಬಾರಿಯ ಪ್ರವಾಸವನ್ನು ಮುಗಿಸಿದೆವು.

Related Articles

Leave a Reply

Your email address will not be published. Required fields are marked *

Back to top button