ಕಾರು ಟೂರುತುಂಬಿದ ಮನೆದೂರ ತೀರ ಯಾನವಿಂಗಡಿಸದಸೂಪರ್ ಗ್ಯಾಂಗು

ಕಡಲ ಬದಿಯ ದಾರಿ ಎಷ್ಟು ದೂರ: ಪ್ರಿಯಾ ಕೆರ್ವಾಶೆ ಹೇಳಿದ ಬೀಚ್ ಟ್ರೆಕ್ಕಿಂಗ್ ನ ರಸವತ್ತಾದ ಕತೆ ಕೇಳಿ

ನಾವು ಹೊರಟ ಹಾದಿಯಲ್ಲಿ ನಮಗೆ ಮೊದಲು ಸಿಗುವುದು ಗೋಕರ್ಣ ಬೀಚ್, ಆಮೇಲೆ ಕುಡ್ಲೆ ಬೀಚ್, ನಂತರ ಓಂ ಬೀಚ್, ಅದಾಗಿ ರೋಚಕ ನಡಿಗೆಯ ಬಳಿಕ ಹಾಫ್ ಮೂನ್ ಬೀಚ್, ಫುಲ್ ಮೂನ್ ಬೀಚ್, ಬಳಿಕ ಪ್ಯಾರಡೈಸ್ ಬೀಚ್, ಕೊನೆಯಲ್ಲಿ ಬೇಲೆಖಾನ್ ಬೀಚು, ಇದಾಗಿ ತದಡಿಯ ಬಂದರಲ್ಲಿ ಮೀನಿನ ಘಮದೊಂದಿಗೆ ಲಾಂಚ್ ಏರಿದರೆ ಅತ್ತ ಅಘನಾಶಿನಿ ಎಂಬ ಕಾಯ್ಕಿಣಿ ಕಥೆಗಳಲ್ಲಿ ಬರುವ ಚೆಂದದ ಊರು. ಇಲ್ಲೆಲ್ಲ ನಡೆಯಬೇಕು ಅಂದುಕೊಂಡು ಹೊರಟಿದ್ದು. ಮುಂದಿನದು ದೖವೇಚ್ಛೆ.

ಸೂರ್ಯೋದಯವಾಗುತ್ತಲೇ ಹಕ್ಕಿಗಳ ಕೂಗಿಗೂ ಮೊದಲೇ ಭಟ್ಟರ ಮಂತ್ರ ಕಿವಿಗೆ ಬಿತ್ತು. ಬೀದಿ ಅಂಗಳಗಳೆಲ್ಲ ಒದ್ದೆ ಮೖಯಲ್ಲಿ ನಿಂತು ಮುಂದೆ ಬಾಗಿ ಅವಳು ರಂಗೋಲೆ ಬರೆಯುವುದನ್ನು ನೋಡುತ್ತಾ ಚಳಿಗೆ ಕಳೆಯಲು ಸೂರ್ಯನ ಬರವಿಗಾಗಿ ಎದುರು ನೋಡುತ್ತಿದ್ದವು.

ನೀರು, ಹಣ್ಣು, ಬಿಸ್ಕೆಟ್ ತುಂಬಿಸಿಕೊಂಡ ಮೂವರ ಬ್ಯಾಗ್ ಗಳು ಬೀಚ್ ಟ್ರೆಕ್ಕಿಂಗ್ ಗೆ ರೆಡಿಯಾಗಿದ್ದವು. ಗೋಕರ್ಣ ಕಡಲ ತಡಿಯಿಂದ ಬೇಲೆಖಾನ್ ಬೀಚ್ ವರೆಗೆ ಬಹುದೂರ ನಡಿಗೆಯದು. ಈ ಹಾದಿಯಲ್ಲಿ ನಮಗೆ ಮೊದಲು ಸಿಗುವುದು ಗೋಕರ್ಣ ಬೀಚ್, ಆಮೇಲೆ ಕುಡ್ಲೆ ಬೀಚ್, ನಂತರ ಓಂ ಬೀಚ್, ಅದಾಗಿ ರೋಚಕ ನಡಿಗೆಯ ಬಳಿಕ ಹಾಫ್ ಮೂನ್ ಬೀಚ್, ಫುಲ್ ಮೂನ್ ಬೀಚ್, ಬಳಿಕ ಪ್ಯಾರಡೈಸ್ ಬೀಚ್, ಕೊನೆಯಲ್ಲಿ ಬೇಲೆಖಾನ್ ಬೀಚು, ಇದಾಗಿ ತದಡಿಯ ಬಂದರಲ್ಲಿ ಮೀನಿನ ಘಮದೊಂದಿಗೆ ಲಾಂಚ್ ಏರಿದರೆ ಅತ್ತ ಅಘನಾಶಿನಿ ಎಂಬ ಕಾಯ್ಕಿಣಿ ಕಥೆಗಳಲ್ಲಿ ಬರುವ ಚೆಂದದ ಊರು. ಇಲ್ಲೆಲ್ಲ ನಡೆಯಬೇಕು ಅಂದುಕೊಂಡು ಹೊರಟಿದ್ದು. ಮುಂದಿನದು ದೖವೇಚ್ಛೆ.

ಗೋಕರ್ಣ ಬೀಚ್ ಗೆ ಬಂದಾಗ ದೂರದಲ್ಲಿ ಮೀನುಗಾರರ ದೋಣಿಗಳು ಮೀನು ಬೇಟೆಗಳೊಂದಿಗೆ ತೀರಕ್ಕೆ ಬಂದಿಳಿದಿದ್ದವು. ಕೆಲವು ಭಕ್ತರು ಅದಾಗಲೇ ಸಮುದ್ರದಲ್ಲಿ ಪುಣ್ಯಸ್ನಾನ ಮಾಡಿ ಹಿರಿಯರ ಶ್ರಾದ್ಧ ಮಾಡುವ ಸಿದ್ಧತೆಯಲ್ಲಿದ್ದರು. ಮತ್ತೊಂದು ಬದಿ ಮೀನುಗಾರರ ಮಕ್ಕಳು ಬಕೆಟ್ ಹಿಡಿದು ಮರಳಲ್ಲಿ ಮಣ್ಣಲ್ಲಿ ಆಡುತ್ತಾ ತಮ್ಮದೇ ಲೋಕದಲ್ಲಿದ್ದವು. ಕೊಂಚ ಆಚೆಗೆ ಹಿರಿಯರೊಬ್ಬರು ಅಜ್ಜಿಯೊಂದಿಗೆ ಬೆಳಬೆಳಗ್ಗೆಯೇ ಪಟ್ಟಾಂಗ ಹೊಡೆಯುತ್ತಿದ್ದರು. ಬುಟ್ಟಿ ಭರ್ತಿಯಾದದ್ದೇ ಇಲ್ಲಿಂದ ಮೀನು ಖರೀದಿಸಿ ಪಕ್ಕದ ಮನೆ ರಶೀದನ ರಿಕ್ಷಾದಲ್ಲಿ ಹಾಕಿ ಹತ್ತಿರದ ನಾಲ್ಕು ಹಳ್ಳಿಗಳಲ್ಲಿ ಮಾರುತ್ತಾರೆ. ಇಳಿದ ಕಾಣೆ ಮೀನಿನ ರೇಟು, ನೂರು ರುಪಾಯಿಗೆ ಇಪ್ಪತ್ತೖದು ಬಂಗುಡೆ ಕೊಡಬೇಕಾದ ಪರಿಸ್ಥಿತಿ ಬಗೆಗೆಲ್ಲ ಗಹನವಾದ ಚರ್ಚೆ ನಡೆಯುತ್ತಿತ್ತು. ಪಕ್ಕಾ ಗೋಕರ್ಣದ ಹವ್ಯಕ ಕನ್ನಡಕ್ಕೆ ಹತ್ತಿರವಾಗಿದ್ದ ಅವರ ಮಾತನ್ನು ಸಂಪೂರ್ಣ ಅರ್ಥ ಮಾಡಿಕೊಳ್ಳೋಕೆ ಕೊಂಚ ಟೖಮ್ ಬೇಕು. ಅವರ ಜೊತೆ ಮಾತಿಗಿಳಿಯುವಷ್ಟು ಟೖಮಿಲ್ಲ. ದಾರಿ ಬಹುದೂರವಿದೆ.

ಮುಂದಿನದು ಬ್ಯೂಟಿಫುಲ್ ಕುಡ್ಲೆ ಬೀಚ್. ಗಣೇಶನ ದೇವಸ್ಥಾನದ ಪಕ್ಕದ ಓಣಿಯಲ್ಲಿ ಪಾಳುಬಿದ್ದ ಕಲ್ಯಾಣಿಯ ಬದಿಯ ಚಿಕ್ಕ ದಾರಿ. ಮೇಲೇರಿದರೆ ಗುಡ್ಡ. ಕಲ್ಯಾಣಿ ಪಕ್ಕದ ಕಟ್ಟಡದಲ್ಲಿ ದೊಡ್ಡ ಹಸು ಕುರುವಿನ ಚಿತ್ರ. ಕಲ್ಯಾಣಿಯ ಹಸಿರುಗಟ್ಟಿದ ನೀರಲ್ಲಿ ಕಪ್ಪಗೆ ಅಶ್ವತ್ಥ ಮರದ ಬಿಂಬ. ಗುಡ್ಡವೇರಿದರೆ ಕರಿಬಂಡೆ, ಮುಳಿ ಹುಲ್ಲುಗಳ ಬಯಲಿನ ದಿಗಂತದಾಚೆ ಬೆಳಕು ಹರಿಯುತ್ತಿತ್ತು. ಮುಳಿ ಹಲ್ಲು ಬೆಳಗಿನ ಗಾಳಿಗೆ ಕುಣಿಯುತ್ತಾ, ಸೂರ್ಯನ ಎಳೇ ಕಿರಣಗಳಿಂದ ಮತ್ತಷ್ಟು ತೇಜಸ್ಸು ತುಂಬಿಕೊಂಡು ಹೊಳೆಯುತ್ತಿತ್ತು.

ನಮ್ಮ ದುರದೃಷ್ಟಕ್ಕೆ ಕುಡ್ಲೆ ಬೀಚ್ ನಲ್ಲಿ ಒಂದೇ ಒಂದು ಚಾದಂಗಡಿಯೂ ಓಪನ್ ಆಗಿಲ್ಲ. ಬೀಚ್ ಉದ್ದಕ್ಕೂ ಸಾಲು ಸಾಲು ಕೆಫೆಗಳಿದ್ದರೂ ಪ್ರಯೋಜನ ಇಲ್ಲ. ಕೆಲವೊಂದು ಕೆಫೆಗಳು ಆಗಷ್ಟೇ ತೆರೆದು ಟೇಬಲ್, ಅಂಗಳ ಕ್ಲೀನಿಂಗ್ ಗೆ ಕಾಯುತ್ತಿದ್ದವು. ಕೊಂಚ ದೂರದಲ್ಲಿ ಚಿಕ್ಕ ಗೂಡಂಗಡಿ ತೆರದದ್ದು ಮಗಳ ಕಣ್ಣಿಗೆ ಬಿದ್ದದ್ದೇ ಅತ್ತ ಓಡಿದೆವು. ಮೊಬೖಲ್ ಹಿಡಿದು ಕೂತಿದ್ದ ಅಂಗಡಿಯವರ ನಾವು ಬಂದದ್ದು ಕಂಡೂ ಕಣ್ಣೆತ್ತಿಯೂ ನೋಡಲಿಲ್ಲ. ನಾವೇ ಅವನನ್ನು ಕರೆದು ಕೇಳಿದರೆ, ನಮ್ಮನ್ನು ಸೊಳ್ಳೆಗಳಿಗಿಂತ ಕಡೆಯಾಗಿ ನೋಡಿ, ಎರಡು ನಿಮಿಷ, ರೆಡಿಯಾಗುತ್ತೆ ಅಂದ. ಕಟ್ಟೆಯಲ್ಲಿ ಕೂತು ಕಾದದ್ದೇ ಬಂತು, ಆಸಾಮಿ ಐದು ನಿಮಿಷವಾದ್ರೂ ಮೊಬೈಲ್ ನಿಂದ ತಲೆ ಎತ್ತಲಿಲ್ಲ.

ಖಡಕ್ ಟೀ ಹೊಟ್ಟೆಗೆ ಬೀಳದೇ ಅಷ್ಟು ಚೆಂದದ ಕುಡ್ಲೆ ಬೀಚೂ ಡಲ್ ಹೊಡೆಯತೊಡಗಿತು. ಹಳದಿ ಬಣ್ಣದ ಕಡಲ ದಂಡೆ, ಅಲ್ಲಲ್ಲಿ ಬಣ್ಣದ ಬಂಡೆಗಳು, ಬಣ್ಣ ಪಡೆಯುತ್ತಿದ್ದ ಅಲೆಗಳನ್ನು ಸುಮ್ಮನೇ ನೋಡುತ್ತಾ ನಡೆಯತೊಡಗಿದೆವು. ಇನ್ನು ಟೀ ಬೇಕೆಂದರೆ ಮೂರು ಕಿಮೀ ಗೂ ಹೆಚ್ಚು ದೂರ ನಡೀಬೇಕು. ಒಂದು ಚಾ ಇಲ್ಲದೇ ನಡಿಗೆಯಲ್ಲಿ ಜೋಷ್ ಎಲ್ಲಿಂದ ಹುಟ್ಟಬೇಕು. ತೀರಾ ಕ್ಷುಲ್ಲಕ ಅನಿಸೋ ವಿಚಾರಗಳು ಕೆಲವೊಮ್ಮೆ ಎಲ್ಲಕ್ಕಿಂತ ಮುಖ್ಯ ಅನಿಸಿಬಿಡುತ್ತವಲ್ಲಾ.. ಅಷ್ಟರಲ್ಲಿ ದೇವತೆಯೇ ಅಜ್ಜಿ ವೇಷ ಹಾಕಿಕೊಂಡು ಬಂದಳೇನೋ ಅನ್ನುವ ಹಾಗೆ ದೊಡ್ಡ ಬೊಟ್ಟಿಟ್ಟುಕೊಂಡ ಅಜ್ಜಿ ಪೇಪರ್ ಗ್ಲಾಸ್, ಟೀ ಫ್ಲಾಸ್ಕ್ ಹಿಡಿದು ನಿಂತದ್ದು ಕಂಡಿತು. ಚಾ ಸಿಪ್ ಮಾಡಿದಾಗ ಅಜ್ಜಿಯ ದೖವಿಕತೆ ಕೊಂಚ ಕೊಂಚವೇ ಕಮ್ಮಿಯಾಗುತ್ತಿತ್ತು. ಟೀ ಬಿಸಿನೀರಿನ ಮತ್ತೊಂದು ರೂಪದ ಹಾಗಿತ್ತು.

ಓಂ ಬೀಚ್ ಸಂಸ್ಕೃತದ ಓಂ ಶೇಪ್ ನಲ್ಲಿದೆ. ಈ ಬೀಚ್ ಗೆ ಹೋಗುವ ದಾರಿಯೂ ಬಹಳ ಚೆಂದ. ದಾರಿ ಮಧ್ಯೆ ಸಿಗುವ ಕೆಫೆಯಲ್ಲಿ ಕೂತರೆ ಮರಗಳಡಿ ಬೀಚ್ ನ ಚೆಂದದ ಆ್ಯಂಗಲ್ ಸವಿಯಬಹುದು. ಗಂಟೆಗಟ್ಟಲೆ ಅಲ್ಲಿ ಟೀ ಹೀರುತ್ತಾ ಬೀಚ್ ನೋಡುತ್ತಾ ಕೂರಬೇಕು ಅನಿಸುತ್ತೆ. ಆದರೆ ಟೈಮ್ ಬೇಕಲ್ಲಾ. ಕಪ್ಪು ಬಂಡೆಯ ಮೇಲೆ ಅಪ್ಪಳಿಸುವ ಅಲೆಗಳು, ಬೀಚ್ ಬದಿ ಕಫೆಗಳನ್ನು ನೋಡುತ್ತಾ ಮುಂದೆ ಹೋದರೆ, ಒಬ್ಬಾತ ಸಮುದ್ರಕ್ಕೆ ಮುಖ ಮಾಡಿ ಮಸಾಜ್ ಮಾಡಿಸಿಕೊಳ್ಳುತ್ತಿದ್ದ. ಚೆಂದದ ಹುಡುಗಿಯೊಬ್ಬಳು ಅವನ ಬೆನ್ನನ್ನು ನೀವುತ್ತಿದ್ದಳು.

ಆಗಲೇ ಗೊತ್ತಾಗಿದ್ದು ಇಲ್ಲಿ ಈ ವ್ಯವಸ್ಥೆಯೂ ಇದೆ ಅಂತ. ಅಲ್ಲಲ್ಲಿ ಹಟ್ ನಂಥಾ ರಚನೆಗಳಲ್ಲಿ ಕೆಲವು ಮಂದಿ ಕೂತು ಸಮುದ್ರ ನೋಡುತ್ತಿದ್ದರು. ಮಕ್ಕಳನ್ನು ಕರೆತಂದ ತಪ್ಪಿಗೆ ದೊಡ್ಡವರೂ ಶಾಪ ಹಾಕುತ್ತಾ ಬೆಳಬೆಳಗ್ಗೇ ಚಳಿ ಚಳಿ ನೀರಲ್ಲಿ ಮಕ್ಕಳ ಜೊತೆಗೆ ಶಿಕ್ಷೆಯಂತೆ ಆಟ ಆಡುತ್ತಿದ್ದರು. ಈ ಬೀಚ್ ನ ಬದಿಯಲ್ಲಾಗಿ ಬೆಟ್ಟ ಏರಿದರೆ ಅಲ್ಲಿ ದಟ್ಟ ಕಾಡು. ನೂರಾರು ಹಕ್ಕಿಗಳ ಕೂಗು, ತಂಪು ಅಂದರೆ ತಂಪು. ಕೊಂಚ ಮುಂದೆ ಹೋದರೆ ಅಗಾಧ ವಿಸ್ಮಯವೊಂದು ನಮಗೆ ಕಾಯುತ್ತಿರುತ್ತದೆ. ಎತ್ತರದ ಆ ಜಾಗದ ಕೆಳಗೇ ಭೋರ್ಗರೆಯುವ ಸಮುದ್ರ.

ಕೊಂಚ ಕಾಲು ಜಾರಿದರೂ ಸಮುದ್ರ ಪಾಲು. ದಿಗಂತದವರೆಗೆ ಆವರಿಸಿದ ಸಮುದ್ರದ ವಿಹಂಗಮ ನೋಟ. ನೋಡಿದಷ್ಟೂ ನೋಡುತ್ತಲೇ ಇರಬೇಕು ಅನಿಸುವ ಭಾಗ. ಎಷ್ಟು ಚಂದ, ಎಷ್ಟು ಚಂದ ಅಂತ ಮಗಳು ಹತ್ತಾರು ಸಲ ಹೇಳುತ್ತಾ ಒಂದೆಡೆ ಕಾಲು ಜಾರಿದಾಗ ಎದೆ ಝಲ್ಲೆಂದಿತು.

ಹಾಫ್ ಮೂನ್ ಬೀಚ್ ನಲ್ಲಿ ಸಮರಾಭ್ಯಾಸ ನಡೆಯುತ್ತಿತ್ತು. ಇಬ್ಬರು ಯುವಕರು ಕೇರಳ ಸ್ಟೈಲ್ ನಲ್ಲಿ ಪಂಚೆ ಉಟ್ಟು ಕಸರತ್ತು ಮಾಡುತ್ತಿದ್ದರು. ಈ ಹಾಫ್ ಮೂನ್ ಬೀಚ್ ಅರ್ಧ ಚಂದ್ರನ ಆಕೃತಿಯಲ್ಲಿದೆ. ಎಳನೀರಿನಷ್ಟೇ ಪರಿಶುದ್ಧ ನೀರು. ಎಷ್ಟು ಪಾರದರ್ಶಕ ಅಂದ್ರೆ ಇದು ನಮ್ಮ ಊರಿನ ಬೀಚಾ ಅಥವಾ ಫಾರಿನ್ ಬೀಚಾ ಅಂತ ಅನುಮಾನ ಬರುವಷ್ಟು. ಆದರೆ ಇಲ್ಲಿ ನೀರಿಗಿಳಿದರೆ ಆಳಕ್ಕೆ ಎಳೆಯುತ್ತಾ ಹೋಗುತ್ತದೆ. ಕೊಂಚ ಡೇಂಜರ್ ಅನಿಸಿ, ನೀರಿಗಿಳಿದು ಬಟ್ಟೆ ಒದ್ದೆ ಮಾಡಿಕೊಂಡು ಮೇಲೆದ್ದೆವು. ಮುಂದೆ ಫುಲ್ ಮೂನ್ ಬೀಚ್ ಬಳಿಕ ಪ್ಯಾರಡೈಸ್ ಬೀಚ್ ಇದೆ. ಅದು ಆಟ ಆಡಲೆಂದೇ ಇರುವ ಹಾಗಿದೆ. ಅಲ್ಲೇ ಒಂದು ಗಂಟೆ ಕಳೆದು ನೀರಾಟ ಆಡಿ ಹಣ್ಣು, ಬಿಸ್ಕೆಟ್ ತಿನ್ನಬೇಕು ಅಂದುಕೊಂಡ್ವಿ. ಆದರೆ ಕಲ್ಲು, ಕಷ್ಟದ ದಾರಿಯಾಗಿ ಪ್ಯಾರಡೈಸ್ ಬೀಚ್ ಗೆ ಹೋದರೆ ಅಲ್ಲಿ ನೀರಿಗಿಳಿಯೋದಕ್ಕೇ ಬಿಡಲಿಲ್ಲ. ನೆರಳಿರುವ ಕಡೆಯೆಲ್ಲ ಟೆಂಟ್ ಹಾಕಿದ್ದರು. ಮಧ್ಯಾಹ್ನದ ಸುಡು ಬಿಸಿಲು. ಮಗಳಿಗಂತೂ ನಿರಾಸೆಯಲ್ಲಿ ಕಣ್ಣಲ್ಲಿ ನೀರೇ ಬಂದಿತ್ತು.

ವಿಧಿಯಿಲ್ಲದೇ ನಾವಲ್ಲಿಂದ ಕಾಡು ದಾರಿಯಾಗಿ ಬೇಲೆಖಾನ್ ಬೀಚ್ ನತ್ತ ನಡೆದವು. ಬಿಸ್ಕೆಟ್, ಹಣ್ಣು ಮಧ್ಯಾಹ್ನದ ಊಟಕ್ಕೆ ಸಮನಾಗಿರಲಿಲ್ಲ. ಬೆಳಗ್ಗಿನ ತಿಂಡಿಯೂ ಹೊಟ್ಟೆಗೆ ಬೀಳದಿದ್ದ ಕಾರಣ ಮೖ ಬಳಲಿತ್ತು. ಕಾಡಲ್ಲಿ ಕೂತು ಹಣ್ಣು ತಿಂದು ಸುಧಾರಿಸಿ ಬಾಡಿದ ಮುಖದಲ್ಲಿ ಒಂದಿಷ್ಟು ಕಿಮೀ ಕಾಡು ದಾರಿಯಲ್ಲಿ ನಡೆದು, ಕೆಳಗೆ ಇಳಿದರೆ ಆ ಮಧ್ಯಾಹ್ನವನ್ನೂ ಮನಸ್ಸಿಗೆ ಹಾಯೆನಿಸುವ ಗದ್ದೆಗಳು, ಆ ಕಡೆ ಬೆಟ್ಟಗಳು, ಇತ್ತ ಸಮುದ್ರ. ಮುಂದೆ ನಡೆದರೆ ತದಡಿ. ಕಳೆದ ಬಾರಿ ಇಲ್ಲೆಲ್ಲ ಅಡ್ಡಾಡಿದ್ದ ಕಾರಣ ಚಿಕ್ಕ ಹೊಟೇಲ್ ನಲ್ಲಿ ಸಿಕ್ಕಿದ್ದು ತಿಂದು ಕೊಂಚ ಸುಧಾರಿಸಿ ಮತ್ತೆ ಪ್ಯಾರಡೈಸ್ ಬೀಚ್ ನತ್ತ ಬಂದೆವು. ಅಲ್ಲಿ ಬೋಟ್ ರೆಡಿ ಇತ್ತು. ದೋಣಿಯವನು  ಡಾಲ್ಫಿನ್ ತೋರಿಸುತ್ತೀನಿ ಅಂತ ಆಸೆ ಹುಟ್ಟಿಸುತ್ತಿದ್ದ. ಸಮುದ್ರ ನಡು ನಡುವೆ ಕಾಣುವ ಬಂಡೆಗಳೂ ಡಾಲ್ಭಿನ್ ಥರ ಕಾಣುತ್ತಿದ್ದವು. ಆದರೆ ಡಾಲ್ಫಿನ್ ಕಾಣಲಿಲ್ಲ.

ಓಂ ಬೀಚ್ ನಲ್ಲಿ ಒಂದಿಷ್ಟು ಹೊತ್ತಿದ್ದು, ಮತ್ತೆ ಕುಡ್ಲೆ ಕಡೆ ಹೊರಟಾಗ ಸಂಜೆ ಐದರ ಆಸುಪಾಸು.

ಇಡೀ ಕುಡ್ಲೆಬೀಚ್ ಬೆಳಗ್ಗಿಗಿಂತ ಸಂಪೂರ್ಣ ಬೇರೆ ಥರ ಇತ್ತು. ನೀರಿಗೆ ಹಾರಿದ್ದೇ, ದೊಡ್ಡ ದೊಡ್ಡ ಅಲೆಗಳು ಬಂದು ಹಾರಿಸಿ ಕುಣಿಸಿ ದಣಿವು ಮರೆಸುತ್ತಿದ್ದವು. ಅದೆಷ್ಟೋ ಹೊತ್ತಿನಿಂದ ತೀರದಲ್ಲಿ ವಿಚಿತ್ರ ಮದ್ದಳೆಯಂಥಾ ಸದ್ದು. ವಿದೇಶಿಗನೊಬ್ಬ ತನ್ಮಯತೆಯಿಂದ ಅಲೆಗಳನ್ನು ದಿಟ್ಟಿಸುತ್ತಾ ಅದರಲ್ಲೇ ಕಳೆದುಹೋಗಿ ಮದ್ದಳೆಯಂಥಾ ಉಪಕರಣವನ್ನು ಮೃದುವಾಗಿ ತಡವುತ್ತಿದ್ದ. ಅಲೆಗಳು, ಆ ಸಂಜೆಯ ಜೊತೆಗೆ ಈ ಮದ್ದಳೆಯ ಮೊರೆತ ಮಾತುಕತೆಯಾಡಿದಂತೆ ಭಾಸವಾಗುತ್ತಿತ್ತು. ಸೂರ್ಯ ಮುಳುಗಿದ. ನಾವು ಆಟ ಬಿಟ್ಟು ತೀರಕ್ಕೆ ಬಂದು, ಈ ವಿದೇಶಿಗನಿಗಿಂತ ಕೊಂಚ ಆಚೆ ಕೂತೆವು. ಬಂದು ಹೋಗುವ ಜನ, ಗಲಾಟೆ, ಪಕ್ಕದ ಕೆಫೆಯಿಂದ ಡ್ರಮ್ಸ್ ಸೌಂಡ್ ಯಾವುದೂ ಆತನಿಗೆ ಕೇಳುತ್ತಿರಲಿಲ್ಲ. ಸದ್ದುಗಳು ಅಲೆಗಳ ಜೊತೆಗೆ ಮಾತನಾಡುವುದನ್ನೇ ತನ್ಮಯನಾಗಿ ಕೇಳುತ್ತಾ ಆತ ಮೈ ಮರೆತಿದ್ದ. ನಾವೂ ಇಡೀ ದಿನದ ಓಡಾಟದ ದಣಿವನ್ನು ಮರೆತು ಆ ಮಾತುಕತೆಗೆ ಕಿವಿ, ಕಣ್ಣಾದೆವು. 

ಮೊದಲ ಭಾಗ ಓದಲು ಇಲ್ಲಿ ಕ್ಲಿಕ್ಕಿಸಿ- https://bit.ly/3nj8Mrt

Related Articles

Leave a Reply

Your email address will not be published. Required fields are marked *

Back to top button