ವಿಂಗಡಿಸದಸ್ಫೂರ್ತಿ ಗಾಥೆ

ಸುರಂಗ ಕೊರೆದು ಜೀವಜಲ ತರಿಸಿದ ಭಗೀರಥ ಮಹಾಲಿಂಗ ನಾಯ್ಕ

ಕೃಷಿಗೆ ನೀರು ಹಾಯಿಸಲು ಪಂಪ್ ಸೆಟ್‌ಗಳ ಸೌಲಭ್ಯಗಳೇ ಇಲ್ಲದ ಕಾಲದಲ್ಲಿ ಹಿಂದಿನ ತಲೆಮಾರಿನವರು ಅವಲಂಭಿಸಿದ್ದ ಸುರಂಗ ನೀರಿನ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟು, ಇದೇ ವ್ಯವಸ್ಥೆಯಲ್ಲಿ ವಿದ್ಯುತ್ ರಹಿತವಾಗಿ ಗುರುತ್ವಾಕರ್ಷಣೆ ನೆರವಿನಲ್ಲಿ ಕೃಷಿಗೆ ತುಂತುರು ನೀರಾವರಿ, ಸ್ಪ್ರಿಂಕ್ಲರ್ ನೀರಾವರಿ ವ್ಯವಸ್ಥೆ ಕಲ್ಪಿಸುವಲ್ಲಿ ಯಶಸ್ವಿಯಾಗಿರುವ , ಏಕಾಂಗಿಯಾಗಿ ಏಳು ಸುರಂಗಗಳನ್ನು ಕೊರೆದವರು ಕರಾವಳಿ ಭಾಗದ ಭಗೀರಥ ಎಂದೇ ಗುರುತಿಸಿಕೊಂಡ ಮಹಾಲಿಂಗ ನಾಯ್ಕ(Mahalinga Naik)

ಕೃಷಿ ಕೂಲಿ ಕಾರ್ಮಿಕ ಮಹಾಲಿಂಗ ನಾಯ್ಕ 40 ವರ್ಷಗಳ ಹಿಂದೆ ಸ್ವಂತ ಊರಿನ ಕೃಷಿಕರ ತೋಟಗಳಲ್ಲಿ ದುಡಿಯುವಾಗ ಸ್ವಂತ ತೋಟ ಮಾಡುವ ಸ್ವಾವಲಂಬಿ ಜೀವನದ ಕನಸು ಕಂಡಿದ್ದರು. ಆದರೆ, ಇದಕ್ಕಾಗಿ ಅವರಲ್ಲಿ ಜಮೀನು ಇರಲಿಲ್ಲ. ಭೂ ಮಾಲೀಕ ಅಮೈ ಮಹಾಬಲ ಭಟ್ಟರ(Amai Mahabala Bhat) ತೋಟಕ್ಕೆ ದಿನಾಲು ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಈ ಆದಾಯದಲ್ಲಿ ಅವರ ಸಂಸಾರದ ರಥ ಸಾಗುತ್ತಿತ್ತು. ಅದೊಂದು ದಿನ ಮಹಾಬಲ ಭಟ್ ಅವರು ಮಹಾಲಿಂಗ ನಾಯ್ಕರಿಗೆ ಎರಡು ಎಕರೆ ಜಮೀನು ನೀಡಲು ಒಪ್ಪಿಕೊಂಡರು. ಮನೆ ಕಟ್ಟಲು ಅಸಾಧ್ಯವಾದ, ನೀರಿಲ್ಲದ ಇಳಿಜಾರು ಬೋಳು ಗುಡ್ಡದಲ್ಲಿ ಕೃಷಿ ತೋಟ ಮಾಡುವುದು ಮಹಾಲಿಂಗ ನಾಯ್ಕರಿಗೆ ಸವಾಲಾಗಿ ಕಂಡು ಬಂದರೂ ಅವರು ತನ್ನ ಪ್ರಯತ್ನ ಬಿಡಲಿಲ್ಲ.

ನೀರಿಲ್ಲದ ಇಳಿಜಾರು ಬೋಳು ಗುಡ್ಡದಲ್ಲಿ ಕೃಷಿ ತೋಟ ಮಾಡುವುದು ಮಹಾಲಿಂಗ ನಾಯ್ಕರಿಗೆ ಸವಾಲಾಗಿತ್ತು. ಆದರೂ ಇವರ ಪ್ರಯತ್ನ ಬಿಟ್ಟಿರಲಿಲ್ಲ. ಕುಡಿಯುವ ನೀರಿಗಾಗಿ ಪಕ್ಕದ ಮನೆಯವರನ್ನು ಆಶ್ರಯಿಸಿದ್ದ ಮಹಾಲಿಂಗ ನಾಯ್ಕರಿಗೆ ಬಾವಿ ತೋಡಿಸಲು ಕೈಯಲ್ಲಿ ದುಡ್ಡಿರಲಿಲ್ಲ. ಬಾವಿ ತೋಡಿದರೆ ನೀರು ದೊರೆಯುವ ಸಾಧ್ಯತೆ ಕಡಿಮೆ ಇತ್ತು. ಏಕಾಂಗಿಯಾಗಿ ಬಾವಿ ತೋಡುವುದು ಅಸಾಧ್ಯ ಮಾತು. ಆಗ ಅವರಿಗೆ ಹೊಳೆದದು ಸುರಂಗ ಕೊರೆತ. ಅರ್ಧ ದಿನ ಕೂಲಿ ಕೆಲಸ, ಉಳಿದರ್ಧ ದಿನ ಮತ್ತು ರಾತ್ರಿ ಹೊತ್ತು ಸುರಂಗ ಕೊರೆಯುವ ಮೂಲಕ ಜೀವಜಲ ಹುಡುಕುವ ಪ್ರಯತ್ನವನ್ನು ಮಾಡಲು ಮಂದಾಗಿದ್ದರು.

30 ಮೀ. ಉದ್ದದ ಸುರಂಗ ಕೊರೆದರೂ ನೀರು ಸಿಗಲಿಲ್ಲ. ಇದರಿಂದ ನಿರಾಸೆಯಾಗದ ಅವರು ಪ್ರಯತ್ನ ಮುಂದುವರಿಸಿ ಸೀಮೆಎಣ್ಣೆ , ತೆಂಗಿನೆಣ್ಣೆ ದೀಪದ ಬೆಳಕಿನಲ್ಲಿ ಪ್ರತಿ ವರ್ಷ ತಲಾ ಒಂದರಂತೆ 25-30 ಮೀಟರ್ ಉದ್ದದ ಸತತ ಐದು ಸುರಂಗಗಳನ್ನು ಕೊರೆದರು. ಪ್ರಯತ್ನಕ್ಕೆ ಫಲ ದೊರೆಯಲಿಲ್ಲ. ಅವರ ಪ್ರಯತ್ನವನ್ನು ನೋಡಿ ಹಲವರು ಗೇಲಿ ಮಾಡಿದ್ದರು. ಮಹಾಲಿಂಗ ನಾಯ್ಕರಿಗೆ ಆರನೇ ಪ್ರಯತ್ನ ಫಲ ನೀಡಿತು.

ಆರನೇ ಸುರಂಗದ ಪಕ್ಕದಲ್ಲಿ ಇನ್ನೊಂದು ಸುರಂಗ(Tunnel) ಕೊರೆದರು. 25 ಮೀ. ತಲುಪುವಾಗ ನೀರು ಕಾಣಿಸಿಕೊಂಡಿತು. ಮತ್ತೆ ಮುಂದುವರಿಸಿ 75 ಮೀ. ಉದ್ದದ ಸುರಂಗವಾಗುವ ಹೊತ್ತಿಗೆ ಯೆಥೇಚ್ಛ ನೀರು ಸಿಕ್ಕಿತು. ಆಗ ಅವರ ತೋಟದ ಕನಸು ಮತ್ತೆ ಗರಿಗೆದರಿತು. ಸುರಂಗದ ನೀರನ್ನು ಸಂಗ್ರಹಿಸಲು ಮಣ್ಣಿನ ಟ್ಯಾಂಕ್ ನಿರ್ಮಿಸಿದರು. ನೀರಿನ ಸಂಪನ್ನತೆಯಿಂದಾಗಿ ತೋಟ ಮಾಡುವ ಕನಸು ನನಸಾಯಿತು. ಗುಡ್ಡವನ್ನು ಸಮತಟ್ಟು ಮಾಡಿ ಭತ್ತ, ಅಡಕೆ, ತೆಂಗು, ಬಾಳೆ ಕೃಷಿ ಕೈಗೊಂಡರು. 

ಕರಾವಳಿ ಭಾಗದ ಭಗೀರಥ ಎಂದೇ ಗುರುತಿಸಿಕೊಂಡ ಬಂಟ್ವಾಳ (Bantwala)ತಾಲೂಕಿನ ಅಡ್ಯನಡ್ಕ(Adyanadka) ಸಮೀಪದ ಅಮೈ ಮಹಾಲಿಂಗ ನಾಯ್ಕ ಅವರು ಕೃಷಿ ಕ್ಷೇತ್ರದ ಸಾಧನೆಗಾಗಿ 2022ನೇ ಸಾಲಿನ ಪದ್ಮಶ್ರೀ(Padma shri) ಪ್ರಶಸ್ತಿಗೆ ಭಾಜನರಾಗಿದ್ದಾರೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button