ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯ ವಿಶೇಷ; ಕುಂದಾಪುರವೆಂಬ ಚೆಂದದ ಊರು
ಕರಾವಳಿ ಕರ್ನಾಟಕದಲ್ಲಿ ಕುಂದಾಪುರಕ್ಕೆ ಒಂದು ವಿಶಿಷ್ಟ ಸ್ಥಾನವಿದೆ. ಚೆಂದದ ತಾಣಗಳ ಜೊತೆಗೆ ಇಲ್ಲಿನ ಭಾಷೆ ಕೂಡ ಭಿನ್ನ . ಅದೆಷ್ಟೋ ಖ್ಯಾತ ನಾಮರು ಕುಂದಾಪುರದಲ್ಲಿ ಜನಿಸಿದ್ದಾರೆ. ತಾಲೂಕುವಾರು ವ್ಯಾಪ್ತಿಗಿಂತ ವಿಸ್ತಾರವಾಗಿ ಕುಂದಾಪುರ ಕನ್ನಡ ಭಾಷಾ ಸೊಬಗು ಹರಡಿದೆ. ಕನ್ನಡ ಪ್ರಾದೇಶಿಕ ಭಾಷೆಯ ಸಾಲಿನಲ್ಲಿ ವಿಭಿನ್ನವಾಗಿ ನಿಲ್ಲುವ ಕುಂದಾಪುರ ಕನ್ನಡಕ್ಕೆ ಇಂದು ದಿನಾಚರಣೆಯ ಸಂಭ್ರಮ. ಆಟಿ ಅಮವಾಸ್ಯೆಯ ದಿನ ಕುಂದಕನ್ನಡವನ್ನು ಮಾತನಾಡುವ ಜನರು ವಿಶ್ವ ಕುಂದಾಪುರ ಕನ್ನಡ ದಿನವನ್ನು ತಮ್ಮದೇ ಆದ ವಿಭಿನ್ನ ರೀತಿಯಲ್ಲಿ ಆಚರಿಸುತ್ತಿದ್ದಾರೆ. ಈ ಕಾರಣಕ್ಕಾಗಿ ಕುಂದಾಪುರವೆಂಬ ಚೆಂದದ ಊರಿನ ಕುರಿತಾದ ಬರಹ.
#ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯ ವಿಶೇಷ
- ನವ್ಯಶ್ರೀ ಶೆಟ್ಟಿ
ಇಂದು ಆಟಿ ಅಮವಾಸ್ಯೆ . ಕರಾವಳಿಯಲ್ಲಿ ಆಟಿ ಅಮವಾಸ್ಯೆ ಆಚರಣೆ ವಿಭಿನ್ನವಾಗಿ ನಡೆಯುತ್ತದೆ. ಅದರಲ್ಲೂ ಕುಂದಾಪುರ ಭಾಗದಲ್ಲಿ ಆಟಿ ಅಮವಾಸ್ಯೆಯ ಅಥವಾ ಅಷಾಡ ಹಬ್ಬದ ಸಂಭ್ರಮ ಪ್ರತಿ ಮನೆಯಲ್ಲೂ ಕಳೆಗಟ್ಟಿದ್ದಂತಿರುತ್ತದೆ. ಕಾರಣ ಆಷಾಢ ಹಬ್ಬ ಕುಂದಾಪುರದ ಜನತೆಗೆ ಕುಂದ ಕನ್ನಡವನ್ನು ಸಂಭ್ರಮಿಸುವ ಹಬ್ಬ ಕೂಡ ಹೌದು. ಇಂದು ಕುಂದಾಪುರ ಕನ್ನಡದ ಭಾಷಾ ಪ್ರೇಮಿಗಳು ಆಟಿ ಅಮವಾಸ್ಯೆಯ ದಿನ ಹುಟ್ಟು ಹಾಕಿದ ವಿಶ್ವ ಕುಂದಾಪುರ ದಿನಾಚರಣೆಗೆ ಮೂರರ ಸಂಭ್ರಮ. ಜಗತ್ತಿನಾದ್ಯಂತ ಇರುವ ಎಲ್ಲ ಕುಂದಾಪುರದ ಜನ ಸಂಭ್ರಮಿಸುವ ಈ ದಿನದಂದು , ಕುಂದಾಪುರದ ಕುರಿತಾದ ಬರಹವಿದು, ಅನೇಕ ಪ್ರತಿಭೆಗಳನ್ನು ಜಗತ್ತಿಗೆ ಕೊಟ್ಟ ಕುಂದಾಪುರದ ಭಾಷೆ,ಆಚರಣೆ ,ಸಂಸ್ಕೃತಿ,ಅಹಾರ, ತಾಣಗಳ ಕುರಿತು ಚುಟುಕಾದ ಬರಹ ವಿಶ್ವ ಕುಂದಾಪುರ ದಿನಾಚರಣೆಯ ವಿಶೇಷ.
ವಾಕ್ಯ ಸಂಕ್ಷಿಪ್ತಗೊಳಿಸುವುದು ಕುಂದಾಪುರ ಕನ್ನಡ ವಿಶೇಷ
ಕುಂದಾಪ್ರ ಕನ್ನಡದಲ್ಲಿ ಮಹಾಪ್ರಾಣಗಳ ಬಳಕೆ ಇಲ್ಲವೇ ಇಲ್ಲ ಅನ್ನುವಷ್ಟು ವಿರಳ. ಶಬ್ದಗಳನ್ನು ಸಂಕ್ಷಿಪ್ತಗೊಳಿಸುವುದು ಕುಂದಾಪುರ ಕನ್ನಡದ ಒಂದು ವಿಶೇಷ. ಉದಾಹರಣೆಗೆ ನಾನು ಊಟ ಮಾಡಬೇಕು ಎನ್ನುವ ವಾಕ್ಯವನ್ನು ಕುಂದಾಪ್ರ ಕನ್ನಡದಲ್ಲಿ ನಾ ಉಣ್ಕ್ ,ಹೋಗಬೇಕು ಎನ್ನುವುದಕ್ಕೆ ಹೋಯ್ಕ್, ಬರಬೇಕು ಎನ್ನುವುದಕ್ಕೆ ಬರ‍್ಕ್ ಹೀಗೆ ಕುಂದಾಪುರ ಕನ್ನಡದಲ್ಲಿ ವಾಕ್ಯಗಳನ್ನು ಸಂಕ್ಷಿಪ್ತವಾಗಿ ಮಾತನಾಡುವುದು ಕುಂದಾಪುರ ಕನ್ನಡದ ಒಂದು ವಿಶೇಷ. ಸಮಯದ ಉಳಿತಾಯದ ಜೊತೆಗೆ ಬಳಸುವ ಪದಗಳಲ್ಲಿ ಯಾವ ಅರ್ಥ ಲೋಪ ಕೂಡ ಇರುವುದಿಲ್ಲ.
ಹೊಯ್ಕ್ ಬರ್ಕ್ ಎನ್ನುವ ಚೆಂದದ ಪ್ರಾದೇಶಿಕ ಕನ್ನಡ ಜೊತೆಗೆ ತಮ್ಮ ಭಾಷೆಯನ್ನು ಅತಿಯಾಗಿ ಪ್ರೀತಿಸುವ ಕುಂದಾಪುರದ ಮನಸ್ಸುಗಳು ಇಲ್ಲಿವೆ. ತನ್ನೂರಿಗೆ ಬರುವವರಿಗೆ ಕುಂದಾಪುರದ ಚೆಂದದ ಭಾಷೆಯನ್ನು ಕಲಿಸುತ್ತಾ , ತಾವು ಜಗತ್ತಿನ ಯಾವುದೇ ಸ್ಥಳಕ್ಕೆ ಹೋದ್ರೆ ಕೂಡ ತಮ್ಮ ಮಾತ್ರ ಭಾಷೆಯನ್ನು ಮರೆಯುವುದಿಲ್ಲ ಇಲ್ಲಿನ ಜನ. ಕುಂದಾಪುರದ ಜನ ಹೇಳುವಂತೆ ಕುಂದಾಪುರ ಕನ್ನಡ ಅಲ್ಲಿನ ಜನರಿಗೆ ‘ ಭಾಷಿ ಮಾತ್ರ ಅಲ್ಲ ಬದ್ಕ್ ಕೂಡ’ ಹೌದು.
ತಾಲೂಕು ವ್ಯಾಪ್ತಿಗಿಂತ ವಿಸ್ತಾರವಾಗಿ ಹರಡಿರುವ ಭಾಷಾ ಸೊಬಗು
ಕುಂದಾಪುರ ತಾಲೂಕಿನ ಭೌಗೋಳಿಕ ವ್ಯಾಪ್ತಿಗಿಂತ ವಿಸ್ತಾರವಾಗಿ ಕುಂದಾಪುರ ಕನ್ನಡ ಮಾತನಾಡುವ ಜನರ ವ್ಯಾಪ್ತಿ ಹರಡಿದೆ. ಬ್ರಹ್ಮಾವರದಿಂದ ಶಿರೂರಿನ ತನಕ ಕುಂದಾಪ್ರ ಕನ್ನಡ ಮಾತನಾಡುವ ಜನರಿದ್ದಾರೆ. ಭೌಗೋಳಿಕವಾಗಿ ಕುಂದಾಪುರ ತಾಲೂಕಿನಲ್ಲಿ ಇಲ್ಲದಿದ್ದರೂ ಕೂಡ ಬೈಂದೂರು ,ಬಾರ್ಕೂರು ,ಕೋಟ ,ಹೆಬ್ರಿ ,ಬ್ರಹ್ಮಾವರ ಕಡೆಗಳಲ್ಲಿ ಜನರ ಮನೆ ಭಾಷೆ ಕುಂದಾಪ್ರ ಕನ್ನಡ. ಕುಂದಾಪುರ ಕನ್ನಡ ಭಾಷೆಯಲ್ಲೂ ವೈವಿದ್ಯತೆ ,ಭಿನ್ನತೆ ಇದೆ . ಕೋಟ ಕನ್ನಡ ,ಬಾರಕೂರು ಕನ್ನಡ ,ಸಿದ್ದಾಪುರ ಕನ್ನಡ ಹೇಗೆ ಕೆಲವು ಕಡೆ ಮಾತನಾಡುವ ಭಾಷೆಗಳಲ್ಲಿ ಕೊಂಚ ಭೌಗೋಳಿಕ ಭಿನ್ನತೆ ಇದೆ.
ಅನೇಕ ಖ್ಯಾತನಾಮರ ಹುಟ್ಟೂರು ಕುಂದಾಪುರ
ರಾಜಕೀಯ, ಸಿನಿಮಾ, ವೈದ್ಯಕೀಯ, ಉದ್ಯಮ, ಸಾಹಿತ್ಯ, ಕ್ರೀಡೆ, ಮಾಧ್ಯಮ ಹೀಗೆ ಎಲ್ಲ ರಂಗದಲ್ಲೂ ಕುಂದಾಪುರ ಮಣ್ಣಿನ ಪ್ರತಿಭೆಗಳು ಮಿಂಚುತ್ತಿದ್ದಾರೆ. ಕುಂದಾಪುರ ಮಣ್ಣಿನಲ್ಲಿ ಹುಟ್ಟಿ ಸಾಧನೆ ಮಾಡುತ್ತಿರುವ ಪ್ರತಿಭೆಗಳ ಪಟ್ಟಿ ಹೇಳುತ್ತಾ ಹೋದಂತೆ ಬಹು ದೊಡ್ಡದಾಗಿ ಬೆಳೆಯುತ್ತದೆ. ಕುಂದಾಪುರ ಭಾಷೆ ಮಾತನಾಡುವ ಅದೇಷ್ಟೋ ಪ್ರತಿಭೆಗಳ ಹುಟ್ಟೂರು ಕುಂದಾಪುರ. ವಾದಿರಾಜರು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಶಿವರಾಮ ಕಾರಂತ, ನವ್ಯಕವಿ ಗೋಪಾಲ ಕೃಷ್ಣ ಅಡಿಗ ಸೇರಿದಂತೆ ಕುಂದಾಪುರದಲ್ಲಿ ಸಾಧಿಸಿದರವರು ಅನೇಕರು. ಕುಂದಾಪುರದ ಐತಿಹಾಸಿಕ ಊರು ಬಸ್ರೂರಿನಲ್ಲಿ ಹುಟ್ಟಿ ಅಂತರಾಷ್ಟ್ರೀಯ ಮನ್ನಣೆ ಪಡೆದ ರವಿ ಬಸ್ರೂರು , ಕಿರಿಕ್ ಪಾರ್ಟಿಯ ಮೂಲಕ ಕನ್ನಡ ಸಿನಿ ಲೋಕದಲ್ಲಿ ಹೊಸ ಅಲೆ ಸೃಷ್ಟಿಸಿದ ಪ್ರತಿಭಾವಂತ ನಿರ್ದೇಶಕ ರಿಷಭ್ ಶೆಟ್ಟಿ ಕುಂದಾಪುರದ ಕೆರಾಡಿಯ ಹುಡುಗ ಹೀಗೆ ಕುಂದಾಪುರದಲ್ಲಿ ಹುಟ್ಟಿ ಸಾಧಿಸಿದ ಪ್ರತಿಭೆಗಳ ಪಟ್ಟಿ ಬಹು ದೊಡ್ಡದಿದೆ.
ಕುಂದಾಪುರದಲ್ಲಿವೆ ಹಲವು ವಿಶೇಷ
ಭಾಷೆ, ಪ್ರತಿಭೆಗಳ ಜೊತೆಗೆ ಇಲ್ಲಿನ ಆಚರಣೆಗಳು ಕೂಡ ಭಿನ್ನ. ಕುಂದಾಪುರ ತನ್ನ ವಿಭಿನ್ನ ಆಚರಣೆಗಳಿಂದಲೇ ಹಲವರಿಗೆ ಅತ್ಯಾಪ್ತ. ಇಲ್ಲಿ ವರ್ಷದ ೧೨ ತಿಂಗಳಿಗೂ ಬೇರೆ ಬೇರೆ ಹೆಸರಿದೆ. ಜನರು ಪ್ರಾದೇಶಿಕವಾಗಿ ಆಚರಿಸುವ ಕೆಲವು ಆಚರಣೆ ,ಹಬ್ಬಗಳಿವೆ. ಈ ಕಾರಣಕ್ಕಾಗಿಯೇ ಹುಟ್ಟೂರನ್ನು ಬಿಟ್ಟು ಬೇರೆ ಊರು ಹೋದವರಿಗೂ ತಮ್ಮೂರಿನ ಸೆಳೆತ ಸದಾ ಕಾಡುತ್ತಿರುವುದು. ಆಷಾಡಿ, ಅಜ್ಜಿ , ಹೋಸ್ತು, ಕೊಡಿ ಹಬ್ಬ ಸೇರಿದಂತೆ ಹಲವು ಪ್ರಾದೇಶಿಕ ಹಬ್ಬಗಳ ಆಚರಣೆ ಕೂಡ ಇಲ್ಲಿದೆ. ಯಕ್ಷಗಾನ , ತಾಳಮದ್ದಳೆ, ಹೂವಿನ ಕೋಲು, ನಾಗಮಂಡಲ, ಹೌದೆರಾಯನ ಕುಣಿತ, ಸಾವಿರ ಹಣ್ಣಿನ ವಸಂತ , ಪಾಣರಾಟಗಳಿಂದ ಕುಂದಾಪುರ ಆಚರಣೆಗಳಲ್ಲಿ ಬಹು ಶ್ರೀಮಂತ . ಇದರ ಜೊತೆಗೆ ಕುಂದಾಪುರದಲ್ಲಿ ಭತ್ತ ಕುಟ್ಟುವ ಹಾಡು ಎನ್ನುವ ವಿಶೇಷ ಸಂಸ್ಕೃತಿಯಿದ್ದು , ಆಧುನಿಕ ಭರಾಟೆಯ ನಡುವೆ ಕಣ್ಮರೆಯಾಗುತ್ತಿದೆ.
ಭತ್ತ ಕುಟ್ಟುವ ಹಾಡು
ಭತ್ತವನ್ನು ಅಕ್ಕಿ ಮಾಡುವ ಸಂದರ್ಭದಲ್ಲಿ ಊರ ಹೆಂಗಸರ ಕಂಠದಲ್ಲಿ ಕೇಳ ಸಿಗುವ ಭಾವನೆಯ ಧ್ವನಿ. ಗೃಹಿಣಿಯೊಬ್ಬಳ ಕಷ್ಟದಿಂದ ಹಿಡಿದು ಕುರುಕ್ಷೇತ್ರ ಯುದ್ಧದಲ್ಲಿ ಕುಂತಿಯ ವ್ಯಥೆ ಎಂಬ ಅನೇಕ ಕಥಾವಸ್ತುಗಳನ್ನು ಆಧರಿಸಿದ ಜನಪದ ಹಾಡು. ಲಿಖಿತ ರೂಪದಲ್ಲಿ ಬರೆಯಲ್ಪಟ್ಟಿಲ್ಲದಿದ್ದರೂ ಇಂದಿಗೂ ಇವುಗಳು ಕುಂದಾಪುರದ ಜನತೆಗೆ ಚಿರಪರಿಚಿತ.
ನೀವು ಇದನ್ನು ಇಷ್ಟ ಪಡುಬಹುದು: ಕುಂದಾಪುರದಲ್ಲಿದೆ ‘ಅಜ್ಜಿ’ ಎನ್ನುವ ವಿಶೇಷ ಆಚರಣೆ
ಈಗಿನ ಕಾಲದಲ್ಲಿ ಹೆಣ್ಣಿಗೆ ತನ್ನ ಭಾವನೆ ಹಂಚಿಕೊಳ್ಳಲು ನೂರಾರು ಮಾರ್ಗಗಳು. ಆದರೆ ಹಿಂದೆ ಅನ್ಯ ಮಹಿಳೆಯರೊಂದಿಗೆ ತಮ್ಮ ಮನದಾಳದ ಮಾತನ್ನು ವ್ಯಕ್ತಪಡಿಸಲು ಅವಕಾಶವಿದ್ದದ್ದು ಕೇವಲ ಕೆಲಸ ಮಾಡುವಾಗ. ಹೀಗೆ ಕುಂದಾಪುರದ ಭಾಗಕ್ಕೆ ಬಂದರೆ, ಗಿರಣಿ ಆರಂಭವಾಗುವ ಮೊದಲು ಬೆಳೆದ ಭತ್ತದಿಂದ ಅಕ್ಕಿ ತೆಗೆಯುವ ಕೆಲಸ ಮಹಿಳೆಯರದ್ದು. ಬೇಯಿಸಿದ ಭತ್ತವನ್ನು ಒರಳಿಗೆ ಹಾಕಿ ಒನಕೆಯಿಂದ ಕುಟ್ಟಿ ಅಕ್ಕಿ ತೆಗೆಯುವ ಪದ್ಧತಿ. ಈ ಕೆಲಸಕ್ಕೆ ಅಕ್ಕಪಕ್ಕದ ಮಹಿಳೆಯರು ಸೇರುತ್ತಿದ್ದರು. ಹೀಗೆ ಭತ್ತ ಕುಟ್ಟುವ ಸಮಯದಲ್ಲಿ ಇವರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದು ಹಾಡಿನ ಮೂಲಕ. ಅದೇ ಈ ಭತ್ತ ಕುಟ್ಟುವ ಹಾಡು.
“ಭತ್ತ ಕುಟ್ಟು ಕೈಗೆ ಬೈಣಿ ಮುಳ್ಳ ಹೆಟ್ಟಿತ್ ಮದ್ದಿಗ್ ಹೋದ್ ಅಣ್ಣ ಬರಲಿಲ್ಲ ,ಮದ್ದಿಗ್ ಹೋದ್ ಅಣ್ಣ ಬರಲಿಲ್ಲ ಇನ್ನೂ ಬಾರ್ಕೂರಲ್ಲೇ ಒರಗಿದ” ಎನ್ನುತ್ತಾ ತನಗೆ ಹುಷಾರಿಲ್ಲದ ಕಾರಣಕ್ಕೆ ಮದ್ದು ತರಲು ಹೋದ ಅಣ್ಣ, ಇನ್ನೂ ಬರಲಿಲ್ಲ ಎಂದು ತೊಳಲಾಟ ಪಡುವ ತಂಗಿ. ಹಣಕಾಸಿನ ತೊಂದರೆಯಿಂದ ಮನೆಗೆ ನೆಂಟರು ಬಂದಾಗ ಉಪಚರಿಸಲು ಸವಲತ್ತು ಇಲ್ಲದೆ ನೆಪ ಹೇಳಿ ಅವರನ್ನು ಹಿಂದೆ ಕಳುಹಿಸುವ ಗೃಹಿಣಿ. ಕುರುಕ್ಷೇತ್ರ ಯುದ್ಧದಲ್ಲಿ ಸಂಕಟಪಡುವ ಕುಂತಿ. ದ್ರೌಪದಿಯ ರೀತಿ ಮನೆಯ ಕಲಹಕ್ಕೆ ಬೇಸತ್ತ ಹೆಣ್ಣಿನ ವ್ಯಥೆ. ದೇವರಿಗಿಡುವ ಹೂವಿನ ಜೊತೆ ಮಾತಾಡುವ ಹೆಣ್ಣು ಮಗಳ ಮುಗ್ಧತೆ .ಹೀಗೆ ನಾನಾ ಭಾವನಾತ್ಮಕ ಕಥೆಗಳು ಭತ್ತ ಕುಟ್ಟುವ ಸಮಯದಲ್ಲಿ ಹಾಡಿನ ಮೂಲಕ ಹಂಚಿಕೆಯಾಗಿವೆ.
ಕುಂದಾಪುರದ ಕೆಲವು ಖಾದ್ಯಗಳು ಕೂಡ ಪ್ರಸಿದ್ದಿ. ಕುಂದಾಪುರದ ಕಾಣಿ ಮೀನು, ಕುಂದಾಪುರ ಚಿಕನ್, ಚಿಕನ್ ಮಸಾಲ , ಗೀ ರೋಸ್ಟ್, ಕುಚಲಕ್ಕಿ , ನೀರ್ ದೋಸೆ ಎಲ್ಲವೂ ಪ್ರಸಿದ್ದ. ಕುಂದಾಪುರದ ಶೆಟ್ಟಿ ಲಂಚ್ ಹೋಂ ಅದೇಷ್ಟೋ ಆಹಾರ ಪ್ರಿಯರಿಗೆ ಫೇವರಿಟ್ ಸ್ಪಾಟ್. ಹಲವು ಹೋಟೆಲ್‌ಗಳು ಈ ಪಟ್ಟಿಯಲ್ಲಿದೆ. ಇನ್ನೂ ಕುಂದಾಪುರದ ಪ್ರಸಿದ್ದ ಸ್ಥಳಗಳ ಬಗ್ಗೆ ಯೋಚಿಸಿದಾಗ ಕಣ್ಮುಂದೆ ಹಲವು ದೇವಸ್ಥಾನಗಳು, ಕಡಲ ತೀರಗಳು, ಇತಿಹಾಸ ಪ್ರಸಿದ್ದ ಸ್ಮಾರಕಗಳು, ರಾಜರು ಆಳಿದ ಅರಮನೆ, ನಿಮ್ಮ ಕಣ್ಮುಂದೆ ಬಂದು ಹೋಗುತ್ತದೆ.
ಯಾರಿಗೂ ಸುಲಭವಾಗಿ ಅರ್ಥವಾಗದ, ಆದರೆ ಅರ್ಥವಾಗುವ ಮಂದಿ ಬಹುವಾಗಿ ಪ್ರೀತಿಸುವ ಭಾಷೆ ಕುಂದಾಪ್ರ ಕನ್ನಡ. ಎಷ್ಟೇ ಎತ್ತರಕ್ಕೆ ಬೆಳೆದರೂ ಬಹುತೇಕ ಮಂದಿಗೆ ಕುಂದಾಪ್ರ ಭಾಷಿ ಬಗ್ಗೆ ಪ್ರೀತಿ ಚೂರು ಕಡಿಮೆ ಆಗುವುದಿಲ್ಲ. ಮೊದಲ ವರ್ಷದ ಅದ್ದೂರಿ ಆಚರಣೆ ಈಗಿನ ವರ್ತಮಾನದಲ್ಲಿ ಕಷ್ಟ. ಸಾಮಾಜಿಕ ಜಾಲತಾಣಗಳಲ್ಲಿ ಬೇರೆ ಬೇರೆ ಸ್ಪರ್ಧೆ ಆಯೋಜಿಸಿ ಹಬ್ಬ ಮಾಡಿ ಖುಷಿ ಪಡುತ್ತಿದ್ದಾರೆ ಕುಂದಾಪುರದ ಜನ. ಈ ಕಾರಣದಿಂದಾಗಿ ಇಲ್ಲಿನ ಜನ ಮಾತಡುಕೆ ಎಷ್ಟೇ ಭಾಷಿ ಇದ್ರು ಜೀವನಕ್ಕೆ ಒಂದೇ ಭಾಷಿ ಸಾಕ್ ಅದು ಅಬ್ಬಿ ಭಾಷಿ ಕುಂದಾಪ್ರ ಕನ್ನಡ ಅಂದೇಳಿ ಹೇಳುವುದು. ಕುಂದಾಪುರ ಕನ್ನಡ ಮಾತನಾಡುವ ಎಲ್ಲರಿಗೂ ವಿಶ್ವ ಕುಂದಾಪುರ ಕನ್ನಡ ದಿನದ ಶುಭಾಶಯಗಳು.
ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.