ಕುಂದಾಪುರದಲ್ಲಿದೆ ‘ಅಜ್ಜಿ’ ಎನ್ನುವ ವಿಶೇಷ ಆಚರಣೆ
ಅಜ್ಜಿ ಎಂದಾಗ ನಮಗೆಲ್ಲ ಸಾಮಾನ್ಯವಾಗಿ ನಮ್ಮ ಅಜ್ಜಿ ನೆನಪಾಗುತ್ತಾರೆ. ಆದರೆ ಕುಂದಾಪುರ ಭಾಗದಲ್ಲಿ ಅಜ್ಜಿ ಎನ್ನುವ ವಿಶೇಷ ಆಚರಣೆಯಿದೆ. ಈ ಅಜ್ಜಿ ಎನ್ನುವ ಆಚರಣೆ ನಡೆಯುವುದು ಕುಂದಾಪುರದ ಆಡು ಭಾಷೆಯಲ್ಲಿ ಹೇಳುವ ಸ್ವಾಣಿ ತಿಂಗಳಿನಲ್ಲಿ. ಅಜ್ಜಿ ದಿನದ ಆಚರಣೆಯೂ ವಿಶೇಷ. ಖಾದ್ಯ ಇನ್ನೂ ವಿಶೇಷ.
- ನವ್ಯಶ್ರೀ ಶೆಟ್ಟಿ
ಕುಂದಾಪುರ ಅಂದರೆ ಅಲ್ಲಿನ ಭಾಷೆ, ಊರು, ಖಾದ್ಯ, ಸ್ಥಳ ಎಲ್ಲವೂ ನಮಗೆ ನೆನಪಾಗುತ್ತದೆ. ಇದರ ಜೊತೆಗೆ ಕುಂದಾಪುರದ ಕೆಲವು ಆಚರಣೆಗಳು ವಿಶೇಷ. ಬೇರೆ ಕಡೆಗಳಲ್ಲಿರದ ಒಂದಷ್ಟು ಆಚರಣೆಗಳು ಇಂದಿಗೂ ಕೂಡ ಕುಂದಾಪುರದ ಸಂಸ್ಕೃತಿಯ ಭಾಗವಾಗಿ ಉಳಿದುಕೊಂಡಿದೆ. ಅದರಲ್ಲಿ ‘ ಅಜ್ಜಿ’ ಕೂಡ ಒಂದು.
ಸ್ವಾಣಿ ತಿಂಗಳಿನಲ್ಲಿ ನಡೆಯುವ ಅಜ್ಜಿ.
ಕುಂದಾಪುರ ಕನ್ನಡದಲ್ಲಿ(kundapura kannada) ವರ್ಷದ ೧೨ ತಿಂಗಳಿಗೂ ಬೇರೆ ಬೇರೆ ಹೆಸರಿದೆ. ಭಾರತ್ ,ಶಿವರಾತ್ರಿ, ಬ್ಯಾಸಾಗಿ ,ಖಾತಿ, ಖಾರ್, ಸುಗ್ಗಿ, ಕೊಡಿ, ಹಂಚೆಸಿ ಸೇರಿದಂತೆ ಕುಂದಾಪುರ ಭಾಷೆಯಲ್ಲಿ ೧೨ ತಿಂಗಳುಗಳು.
ಅವುಗಳಲ್ಲಿ ಸ್ವಾಣಿ ತಿಂಗಳು ಕೂಡ ಒಂದು. ಈ ತಿಂಗಳು ಸಾಮಾನ್ಯವಾಗಿ ಆಗಸ್ಟ್ (august) ತಿಂಗಳ ಅಂತ್ಯದಲ್ಲಿ ಅಥವಾ ಸೆಪ್ಟೆಂಬರ್(september) ತಿಂಗಳ ಆರಂಭದಲ್ಲಿ ಪ್ರಾರಂಭವಾಗುತ್ತದೆ. ಈ ದಿನಗಳಲ್ಲಿ ನಡೆಯುವುದೇ ಅಜ್ಜಿ. ಬಾಲ್ಯದಲ್ಲಿ ಸ್ವಾಣಿ ತಿಂಗಳಿಗಾಗಿ ಕಾದಿರುತ್ತಿದ್ದೆವು. ಬಾಲ್ಯದಲ್ಲಿ ನಮಗೆ ಅದೊಂದು ಹಬ್ಬವಿದ್ದಂತೆ.
ಹೊಸ್ತಿಲ ಪೂಜೆ ವಿಶೇಷ.
ಸಾಮಾನ್ಯವಾಗಿ ಕೆಲವೊಂದು ಕಡೆ ವರ್ಷದ ಪ್ರತಿ ದಿನ ಹೊಸ್ತಿಲ ಪೂಜೆ ಮಾಡುತ್ತಾರೆ. ಆದರೆ ನಮ್ಮಲ್ಲಿ ಅಜ್ಜಿ ಮಾಡುವ ದಿನಗಳಲ್ಲಿ ಮಾತ್ರ ಹೊಸ್ತಿಲ ಪೂಜೆ ಮಾಡುತ್ತಾರೆ. ಸ್ವಾಣಿ ತಿಂಗಳ ಮೊದಲ ದಿನದಿಂದ ಆರಂಭವಾಗುವ ಹೊಸ್ತಿಲ ಪೂಜೆಯಲ್ಲಿ ಅವರ ಅಗತ್ಯದ ದಿನಗಳಿಗೆ ಅನುಸಾರವಾಗಿ ಮಾಡುತ್ತಾರೆ. ಆದರೆ ಹೊಸ್ತಿಲ ಪೂಜೆ ಅಂತ್ಯಗೊಳ್ಳುವುದು ಅಜ್ಜಿಯ ದಿನ.
ಕೊನೆಯದಾಗಿ ಹೊಸ್ತಿಲ ಪೂಜೆ ಮಾಡುವ ದಿನವನ್ನು ಅಜ್ಜಿ ಎನ್ನುತ್ತಾರೆ. ಇತರ ದಿನಗಳಲ್ಲಿ ಬೆಳಿಗ್ಗೆ ಹೊಸ್ತಿಲ ಪೂಜೆ ಮಾಡಿದರೆ, ಅಜ್ಜಿ ದಿನ ಮಾತ್ರ ಬೆಳಿಗ್ಗೆ ಪೂಜೆ ಮಾಡುವಂತಿಲ್ಲ. ಅಜ್ಜಿ ದಿನ ಹೊಸ್ತಿಲ ಪೂಜೆ ಮಾಡುವುದು ರಾತ್ರಿ ಸಮಯದಲ್ಲಿ.
ಹೊಸ್ತಿಲ ಪೂಜೆಯನ್ನು ಹೆಣ್ಣು ಮಕ್ಕಳು ಶ್ರದ್ದೆಯಿಂದ ಮಾಡುತ್ತಾರೆ. ಬೆಳಿಗ್ಗೆ ಬೇಗನೆ ಎದ್ದು ಸ್ನಾನ ಮಾಡಿ ಬಳಿಕ ಹೊಸ್ತಿಲ ಪೂಜೆಗೆ ತಯಾರಾಗುತ್ತಾರೆ. ಸ್ವಾಣಿ ತಿಂಗಳು ಆರಂಭವಾಗುವ ಮುನ್ನ ,ಮನೆಯ ಅಂಗಳದಲ್ಲಿ ಮೊಳಕೆ ಬರಿಸಿದ್ದ ಗಿಡ , ಸ್ವಾಣಿ ತಿಂಗಳಿನಲ್ಲಿ ವಿಶೇಷವಾಗಿ ಆಗುವ ಸ್ವಾಣಿ ಹೂವು ಇವುಗಳು ಹೊಸ್ತಿಲ ಪೂಜೆಯ ವಿಶೇಷ . ಜೊತೆಗೆ ಅರಶಿನ, ಕುಂಕುಮ, ತೇಯ್ದ ಗಂಧ ಕೂಡ ವಿಶೇಷ.
ನೀವು ಇದನ್ನು ಇಷ್ಟ ಪಡುಬಹುದು: ಕರಾವಳಿಯ ಹೆಮ್ಮೆ ಘೀ ರೋಸ್ಟ್ ಪುರಾಣ…
ಹೊಸ್ತಿಲ ಪೂಜೆ ಮಾಡುವಾಗ ಹೊಸ್ತಿಲಿಗೆ ಯಾವ ರೀತಿ ವಿನ್ಯಾಸ ಮಾಡಬಹುದು ಎನ್ನುವುದೇ ಬಹು ಆಸಕ್ತಿ ವಿಷಯ. ದಿನಕ್ಕೊಂದು ವಿನ್ಯಾಸ ಮಾಡುವುದು ಹೆಣ್ಣು ಮಕ್ಕಳಿಗೆ ಇಷ್ಟ. ಪ್ರತಿ ಹೊಸ್ತಿಲನ್ನು ಶೇಡಿಯಿಂದ ವಿನ್ಯಾಸ ಮಾಡುತ್ತಾರೆ.
ಕೊಳಲ್ ಹೂವು ವಿಶೇಷ
ಈ ಆಚರಣೆಗೆ ವಿಶೇಷವೇ ಕೊಳಲ್ ಹೂವು. ಉದ್ದು, ಹುರುಳಿ ಅಥವಾ ಬೇರೆ ಯಾವುದಾದರು ಕಾಳುಗಳನ್ನು ಅಂಗಳದಲ್ಲಿ ಮೊಳಕೆ ಬರಲು ಹಾಕಿ, ಮಡಿಕೆ ಮುಚ್ಚಿಡುತ್ತಾರೆ. ನಂತರ ಅದು ಮೊಳಕೆ ಬಂದು ಪುಟ್ಟ ಗಿಡವಾಗಿ ಬೆಳೆಯುತ್ತದೆ. ಇದನ್ನೇ ಕೊಳಲ್ ಹೂವು ಅನ್ನುತ್ತಾರೆ. ಕೊಳಲ್ ಹೂವು ಮಾಡಲು, ಮೊಳಕೆ ಬರಿಸಲು ಅಜ್ಜಿ ಆರಂಭವಾಗುವ ಕೆಲವು ದಿನಗಳ ಹಿಂದೆ ಮಾಡುತ್ತಾರೆ .
ಸ್ವಾಣಿ ತಿಂಗಳು ಆರಂಭವಾದ ಬಳಿಕ ಕೊಳಲ್ ಹೂವು, ಸ್ವಾಣಿ ಹೂವು ,ಮಾವಿನ ಎಲೆ, ಅರಶಿನ ಹಚ್ಚಿ ಹೊಸ್ತಿಲನ್ನು ನಮಿಸಿ , ಪೂಜೆ ಮಾಡುತ್ತಾರೆ. ತುಳಸಿ ಕಟ್ಟೆಯಿಂದ ಆರಂಭವಾಗುವ ಹೊಸ್ತಿಲ ಪೂಜೆ ಮನೆಯ ಪ್ರತಿಯೊಂದು ಹೊಸ್ತಿಲುಗಳಿಗೂ ನಡೆಯುತ್ತದೆ.
ಹೊಸ್ತಿಲ ಪೂಜೆ ಮಾಡಿದ ಅಷ್ಟೂ ದಿನ ದೇವರಿಗೆ ದೀಪ ಹಚ್ಚುವ ಸಮಯದಲ್ಲಿ , ಒಂದು ಹಣತೆಯಲ್ಲಿ ದೀಪವನ್ನು ಹಚ್ಚಿ ಅದನ್ನು ಮನೆಯ ಪ್ರತಿ ಹೊಸ್ತಿಲಿಗೆ ತೋರಿಸಬೇಕು.
ಅಜ್ಜಿ ಯಾರು ಎನ್ನುವುದೇ ನಮ್ಮ ಕುತೂಹಲ
ಯಾರು ಹೊಸ್ತಿಲ ಪೂಜೆ ಮಾಡುತ್ತಾರೆ ಅವರು ಅಜ್ಜಿ ಎಂದರ್ಥ. ಯಾವ ವಯಸ್ಸಿನ ಹೆಣ್ಣು ಮಕ್ಕಳು ಕೂಡ ಹೊಸ್ತಿಲ ಪೂಜೆ ಮಾಡಬಹುದು. ವಯಸ್ಸಿನ ಭೇಧ ಭಾವವಿಲ್ಲ. ವಯಸ್ಸಿನಲ್ಲಿ ಅಜ್ಜಿಯಲ್ಲದವರು ಕೂಡ ಈ ದಿನಗಳಲ್ಲಿ ಅಜ್ಜಿ ಎಂದು ಕರೆಸಿಕೊಳ್ಳುತ್ತಾರೆ. ಶಾಲಾ ದಿನಗಳಲ್ಲಿ ಯಾರ ಮನೆಯಲ್ಲಿ ಯಾರೂ ಅಜ್ಜಿ ಎನ್ನುವುದೇ ನಮಗೆ ಬಹು ಚರ್ಚಿತ ವಿಷಯಗಳಾಗಿತ್ತು.
ಅಜ್ಜಿಗೆ ಉಂಡ್ಲು ಕಾಯಿ ವಿಶೇಷ
ಅಜ್ಜಿ ದಿನ ವಿವಿಧ ಬಗ್ಗೆಯ ಖಾದ್ಯಗಳು ತಯಾರಾಗುತ್ತಿತ್ತು. ಸಾಮಾನ್ಯವಾಗಿ ಪುಟ್ಟ ಊರಿನಲ್ಲಿ ಎಲ್ಲರೂ ಒಂದೇ ದಿನ ಅಜ್ಜಿ ಆಚರಣೆ ಮಾಡುತ್ತಾರೆ. ಕೋಳಿ ಸಾರು ,ಉದ್ದಿನ ದೋಸೆ ಖಾಯಂ ಇರುತ್ತಿತ್ತು .ಕೆಲವರ ಮನೆಯಲ್ಲಿ ಕೆಸುವಿನ ಪಲ್ಯ , ಬಸಳೆ ಕೂಡ ಮಾಡುತ್ತಾರೆ. ಇವೆಲ್ಲವುದರ ಜೊತೆಗೆ ವಿಶೇಷ ಉಂಡ್ಲು ಕಾಯಿ. ಹಾಗೆಂದ ಮಾತ್ರಕ್ಕೆ ಇದೇನು ಕಾಯಿಯಲ್ಲ. ಇದೊಂದು ತಿಂಡಿ. ಇದು ಅಜ್ಜಿಗೆ ವಿಶೇಷವಾಗಿ ಇರಲೇಬೇಕಾದ ತಿಂಡಿ.
ಕುಚ್ಚಲಕ್ಕಿ ಮತ್ತು ಬೆಳ್ತಿಗೆ ಅಕ್ಕಿಯನ್ನು ಹುರಿದು ನಂತರ ಉಪ್ಪು, ಅರಶಿನ ಹಾಕಿ ಅರೆದುಕೊಳ್ಳಬೇಕು. ಅರೆದ ಬಳಿಕ ಸಣ್ಣ ಉಂಡೆಯನ್ನು ಕಟ್ಟಿಕೊಳ್ಳಬೇಕು. ಬಳಿಕ ಎಣ್ಣೆ ಕಾವಲಿಯಲ್ಲಿ ಅ ಉಂಡೆಯನ್ನು ಹುರಿದರೆ ಉಂಡ್ಲು ಕಾಯಿ ರೆಡಿಯಾಗುತ್ತದೆ. ಈ ಉಂಡ್ಲು ಕಾಯಿಯನ್ನು ಇತರ ದಿನಗಳಲ್ಲಿ ಮಾಡುವುದಿಲ್ಲ. ಅಜ್ಜಿ ದಿನದಲ್ಲಿ ಮಾತ್ರ ಮಾಡುವುದು. ಆ ಕಾರಣದಿಂದಾಗಿ ಉಂಡ್ಲು ಕಾಯಿ ತಿನ್ನುವುದಕ್ಕಾಗಿ ಹಲವರು ಅಜ್ಜಿಗೆ ಕಾದು ಕುಳಿತಿರುತ್ತಾರೆ.
ಅಜ್ಜಿಯನ್ನು ಓಡಿಸುವುದೇ ಅಜ್ಜಿ ವಿಶೇಷ
ಅಜ್ಜಿ ದಿನ ಬೆಳಿಗ್ಗೆ ಹೊಸ್ತಿಲ ಪೂಜೆ ಮಾಡುವಂತಿಲ್ಲ. ರಾತ್ರಿ ವೇಳೆ ಮಾಡುವುದು. ಯಾರು ಹೊಸ್ತಿಲ ಪೂಜೆ ಮಾಡಿ ಅಜ್ಜಿ ಎಂದು ಕರೆಸಿಕೊಳ್ಳುತ್ತಾರೋ ಅವರಿಗೆ ಅಜ್ಜಿ ದಿನ ವಿಶೇಷ ಆದ್ಯತೆ. ಆದರೆ ಅಜ್ಜಿಯನ್ನು ಓಡಿಸುವುದು ಈ ದಿನದ ವಿಶೇಷ ಎನ್ನುವುದು ಹಲವರ ನಂಬಿಕೆ.
ಅಜ್ಜಿ ದಿನ ಮಾಡಿದ ಎಲ್ಲ ಖಾದ್ಯಗಳನ್ನು ಹೊಸ್ತಿಲ ಮೇಲಿಟ್ಟು, ದೀಪವನ್ನು ಹೊಸ್ತಿಲಿಗೆ ತೋರಿಸುತ್ತಾರೆ. ದೀಪವನ್ನು ಹೊಸ್ತಿಲ ಮೇಲೆಯಿಟ್ಟು ಪೂಜೆ ಮಾಡಿದ ನಂತರ , ಬೇರೆಯವರಿಗೆ ಊಟಕ್ಕೆ ಅವಕಾಶ. ಒಮ್ಮೆಯು ಅಜ್ಜಿಯಾಗಿರದ ನಾನು, ರಾತ್ರಿ ಹೊಸ್ತಿಲ ಪೂಜೆ ಎಷ್ಟು ಬೇಗ ಆಗುತ್ತೆ? ಎಂದು ಕಾಯುವುದು ಇಂದಿಗೂ ರೂಢಿ. ಹೊಸ್ತಿಲ ಪೂಜೆ ಆಗುವುದರ ಒಳಗೆ ಒಂದೆರಡು ದೋಸೆ ಗುಟ್ಟಾಗಿ ಹೊಟ್ಟೆ ಸೇರುತ್ತಿತ್ತು.
ಕುಂದಾಪುರದಲ್ಲಿ ಇಂದಿಗೂ ಬಹುತೇಕ ಮನೆಯಲ್ಲಿ ಈ ಸಂಸ್ಕೃತಿಯನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಬೇರೆ ಬೇರೆ ಮನೆಗಳಲ್ಲಿ ಆಚರಿಸುವ ವಿಧಾನಗಳು ಭಿನ್ನವಿರಬಹುದು.ಆದರೆ ಅಜ್ಜಿ ದಿನ ಕಾಯುವಿಕೆ, ಅಜ್ಜಿ ಯಾರು? ಎನ್ನುವುದರ ಕುತೂಹಲ ಎಂದಿಗೂ ಮುಂದುವರೆಯುತ್ತಲೇ ಇರುತ್ತದೆ.
ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.