21 ಎಕರೆ ಬಂಜರು ಭೂಮಿ ಖರೀದಿಸಿ, ಅದನ್ನು ನೈಸರ್ಗಿಕ ಕಾಡಾಗಿ ಪರಿವರ್ತಿಸಿದ, ಬೆಂಗಳೂರಿನ ಉದ್ಯಮಿ ಸುರೇಶ್ ಕುಮಾರ್
ಭೂಮಿಯನ್ನು ಖರೀದಿಸಿ, ಅಲ್ಲಿ ರೆಸಾರ್ಟ್, ಅಪಾರ್ಟ್ಮೆಂಟ್ ಮುಂತಾದವುಗಳನ್ನು ಕಟ್ಟಿಸಿ ಲಾಭಗಳಿಸಲು ಯೋಚಿಸುವ ಈ ಕಾಲದಲ್ಲಿ, ಇಲ್ಲೊಬ್ಬರು ಸಮಾಜದ ಒಳಿತಿಗಾಗಿ 10 ವರ್ಷಗಳ ಕಾಲ ಸತತವಾಗಿ ಪ್ರಯತ್ನಿಸಿ, ಬಂಜರು ಭೂಮಿಯನ್ನು ನೈಸರ್ಗಿಕ ಕಾಡನ್ನಾಗಿ ಪರಿವರ್ತಿಸಿದ್ದಾರೆ. ಇದು ಕೆಚ್ಚೆದೆಯ ಸಾಧಕ ಸುರೇಶ್ ಕುಮಾರ್ ಸಾಹಸಗಾಥೆ!
- ಉಜ್ವಲ. ವಿ. ಯು, ಧಾರವಾಡ
ಬೆಂಗಳೂರು ಮೂಲದ ಉದ್ಯಮಿ ಸುರೇಶ್ ಕುಮಾರ್ ಅವರು, 10 ವರ್ಷಗಳ ಹಿಂದೆ ಕರ್ನಾಟಕದ ಸಾಗರದಲ್ಲಿ 21 ಎಕರೆ ಬಂಜರು ಭೂಮಿಯನ್ನು ಖರೀದಿಸಿ, ಆ ಪ್ರದೇಶವನ್ನು ಸತತ ಪ್ರಯತ್ನದಿಂದ ನೈಸರ್ಗಿಕ ಅರಣ್ಯವನ್ನಾಗಿ ಮಾರ್ಪಡಿಸಿದ್ದಾರೆ.
ಅವರ ಈ ಕನಸಿಗೆ ಜೊತೆಯಾದವರು ಖ್ಯಾತ ಪರಿಸರವಾದಿ ಅಖಿಲೇಶ್ ಚಿಪ್ಲಿ. ಶಿವಮೊಗ್ಗ ಹಾಗೂ ಇನ್ನೂ ಕೆಲವು ಪ್ರದೇಶಗಳಲ್ಲಿ ಉಂಟಾಗುವ ಹಲವಾರು ಪರಿಸರ ಸಮಸ್ಯೆಗಳಿಗೆ ಧ್ವನಿ ಎತ್ತುವ ಚಿಪ್ಲಿಯವರು ಸುರೇಶ್ ಕುಮಾರ್ ಈ ಐಡಿಯಾವನ್ನು “ಹಸಿರು ನೇತೃತ್ವದ ಮಾದರಿ” ಎಂದು ಗುರುತಿಸಿ ಸಹಾಯ ಮಾಡಲು ಮುಂದಾದರು. ಇವರ ಸಹಾಯದಿಂದಲೇ ಸುರೇಶ್ ಅವರು ತಮ್ಮ ಯೋಜನೆಯನ್ನು ಕಾರ್ಯರೂಪಕ್ಕೆ ತಂದು ಅದರಲ್ಲಿ ಯಶಸ್ವಿಯೂ ಆದರು.
ಈ ನೈಸರ್ಗಿಕ ಅರಣ್ಯಕ್ಕೆ ಸುರೇಶ್ ಅವರು ಸೂರ್ಯನ ಕಿರಣಗಳು ಎಂಬರ್ಥದ “ಉಷಾ ಕಿರಣ” ಎಂಬ ಹೆಸರನ್ನು ಇಟ್ಟಿದ್ದಾರೆ. ಇದರ ಹಿಂದಿನ ಭೂಮಾಲೀಕರು ಅಕೇಶಿಯ ಹಾಗೂ ನೀಲಗಿರಿ ಮರಗಳನ್ನು ಅಲ್ಲಿ ಬೆಳೆಸಿದ್ದರು. ಮುಂದೆ ಸುರೇಶ್ ಮತ್ತು ಚಿಪ್ಲಿಯವರು ಸೇರಿ ಇನ್ನೂ ಕೆಲವು ಮರಗಳನ್ನು ನೆಟ್ಟು ಈ ಪ್ರದೇಶವನ್ನು ಸಮಾಜಸೇವೆಗಾಗಿ ಉಪಯೋಗಿಸುವ ನಿರ್ಧಾರ ಮಾಡಿದರು.
ಬಂಜರು ಭೂಮಿಯಾಗಿದ್ದ ಪ್ರದೇಶವು 10 ವರ್ಷಗಳ ಪರಿಶ್ರಮದ ನಂತರ, ಇಂದು ನೈಸರ್ಗಿಕ ಕಾಡಾಗಿ ರೂಪುಗೊಂಡಿದೆ. ಇಲ್ಲಿ ಪಶ್ಚಿಮ ಘಟ್ಟಗಳಲ್ಲಿ ಸರ್ವೇಸಾಮಾನ್ಯವಾಗಿ ಕಂಡುಬರುವ ಹಲವಾರು ಜಾತಿಯ ಮರಗಳಿವೆ. ಇದರಿಂದ ಎಷ್ಟೋ ಪ್ರಾಣಿ,ಪಕ್ಷಿಗಳಿಗೆ ವಾಸಸ್ಥಾನವೂ ದೊರಕಿದಂತಾಗಿದೆ. ಹಾಗೇ ಇದೀಗ ಹೆಚ್ಚಾಗಿ ವಿದ್ಯಾರ್ಥಿಗಳಿಗೆ ಮತ್ತು ಪರಿಸರವಾದಿಗಳಿಗೆ ಅಧ್ಯಯನ ಕೇಂದ್ರವಾಗಿಯೂ ಈ ಕಾಡು ಮಾರ್ಪಾಡಾಗಿದೆ
ಛಾಯಾಗ್ರಹಣದಲ್ಲಿ ಆಸಕ್ತಿಯಿರುವ ಎಷ್ಟೋ ಉತ್ಸಾಹಿಗಳು ಪಕ್ಷಿ ಮತ್ತು ಅರಣ್ಯದ ಸೌಂದರ್ಯವನ್ನು ಸೆರೆ ಹಿಡಿಯಲು ಈ ಪ್ರದೇಶಕ್ಕೀಗ ಭೇಟಿ ನೀಡುತ್ತಿದ್ದಾರೆ. ಹಾಗೇ ಈ ನೈಸರ್ಗಿಕ ಅರಣ್ಯದಿಂದ ಪ್ರೇರಿತರಾದ ವೀಕ್ಷಕರೂ ಸಹ ತಾವೂ ಇಂತಹ ಖಾಸಗಿ ಕಾಡುಗಳನ್ನು ನಿರ್ಮಿಸುವ ಭರವಸೆ ನೀಡುತ್ತಿದ್ದಾರೆ.
ನೀವು ಇದನ್ನು ಇಷ್ಟಪಡಬಹುದು: ಆಸ್ಟ್ರೇಲಿಯಾದಲ್ಲಿದ್ದು ಕರ್ನಾಟಕದ ಕಾಡು ಉಳಿಸಲು ಶ್ರಮಿಸುತ್ತಿರುವ ವೈಲ್ಡ್ ಲೈಫ್ ಫೋಟೋಗ್ರಾಫರ್: ವಿಜಯ್ ಎಂಬ ಹುಮ್ಮಸ್ಸಿನ ಸಾಧಕನಿಗೆ ನಮಸ್ಕಾರ
ಚಿಪ್ಲಿಯವರು ನೀಡಿರುವ ವರದಿ ಪ್ರಕಾರ, ಈ ಕಾಡಿನಲ್ಲಿ ಕೆಲವೇ ಕೆಲವು ಮರಗಳನ್ನು ಮಾತ್ರ ಅವರು ನೆಟ್ಟಿರುವುದು. ಉಳಿದೆಲ್ಲಾ ಮರಗಳೂ ಸಹ ಸ್ವಾಭಾವಿಕವಾಗಿ ಬೆಳೆದಿರುವಂತದ್ದು. ಇದು ಪಶ್ಚಿಮ ಘಟ್ಟದ ಕಾಡಿನ ಸೌಂದರ್ಯದ ಪ್ರತೀಕ. ಹಾಗೇ ಅವರು ಜನರಿಗೆ ನೈಸರ್ಗಿಕ ಕಾಡನ್ನು ರಚಿಸುವ ಸಲುವಾಗಿ ಖರೀದಿಸಿದ ಭೂಮಿಯನ್ನು ಬಳಸಬೇಕೆಂದು ವಿನಂತಿಸಿಕೊಳ್ಳುತ್ತಾರೆ.
ಖಾಸಗಿ ಕಾಡಾಗಿರುವ ಇದು ಇತ್ತೀಚೆಗೆ ಹಲವಾರು ಪ್ರವಾಸಿಗರನ್ನು ತನ್ನೆಡೆಗೆ ಆಕರ್ಷಿಸುತ್ತಿದೆ. ಇದು ಬರಿಯ ನೋಡಿ ಹೋಗುವ ತಾಣವಾಗಿ ಉಳಿಯದೇ ಎಲ್ಲರಿಗೂ ಪರಿಸರದ ಕುರಿತು ಜಾಗೃತಿ ಮೂಡಿಸುವ ಹಾಗೂ ಮರಗಳನ್ನು ನೆಡುವಂತೆ ಪ್ರೇರಣೆ ನೀಡುವ ತಾಣವೂ ಕೂಡಾ ಆಗಿದೆ.
ಗಗನಚುಂಬಿ ಕಟ್ಟಡಗಳನ್ನು ನಿರ್ಮಿಸಿ ಅಲ್ಲಿ ದೊಡ್ಡ ದೊಡ್ಡ ವ್ಯವಹಾರವನ್ನು ಮಾಡುತ್ತಾ ಲಾಭ ಗಳಿಸುವುದಷ್ಟೇ ಮನುಷ್ಯನ ಕರ್ತವ್ಯ ಅಲ್ಲ. ತಾನಿರುವ ಪ್ರದೇಶವನ್ನು ಆರೋಗ್ಯಕರವಾಗಿಡುವುದು ಹಾಗೂ ತನ್ನ ಸುತ್ತಮುತ್ತಲಿನ ಪರಿಸರವನ್ನು ರಕ್ಷಿಸುವುದು ಕೂಡಾ ಮನುಷ್ಯನ ಆದ್ಯ ಕರ್ತವ್ಯವಾಗಿರುತ್ತದೆ.
ಹಾಗಾಗಿ ಸುರೇಶ್ ಕುಮಾರ್ ಮತ್ತು ಅಖಿಲೇಶ್ ಚಿಪ್ಲಿ ಅವರಿಂದ ಪ್ರೇರೇಪಿತರಾಗಿ ನಾವೂ ಕೂಡಾ ಪರಿಸರದ ರಕ್ಷಣೆಯ ಕುರಿತು ನಮಗೆ ಸಾಧ್ಯವಾಗುವ ಕೆಲಸಗಳನ್ನು ಮಾಡೋಣ.
ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.