ಕುಂದಾಪುರದ ಹೆಮ್ಮೆಯ 5 ವಿಶೇಷತೆಗಳು: ವಿಭಿನ್ನ ಕುಂದಾಪುರಕ್ಕೊಂದು ಸುತ್ತು
ಕುಂದಾಪುರ ಎಂದಾಗಲೇ ಮೊದಲು ಗೋಚರಿಸುವುದು ಇಲ್ಲಿನ ಭಾಷೆ. ಇತರ ಕನ್ನಡಕ್ಕಿಂತ ಸ್ವಲ್ಪ ಭಿನ್ನವಾಗಿಯೇ ಇದೆ. ಕೇಳಲು ಚಂದವಾಗಿರುವ ಭಾಷೆ ಕುಂದಾಪುರ ಕನ್ನಡ . ಇಲ್ಲಿನ ಸಾಕಷ್ಟು ಪ್ರವಾಸಿ ತಾಣಗಳು ಹಾಗೂ ರುಚಿ ರುಚಿಯಾದ ಅಡುಗೆಗಳು ಇಲ್ಲಿನ ವಿಶೇಷತೆ.
#ವಿಶ್ವ ಕುಂದಾಪುರ ಕನ್ನಡ ದಿನ ವಿಶೇಷ
- ಅನುಪಮಾ ಶಿರಿಯಾರ
ಒತ್ತಿನಾಣೆ
ಅರಬ್ಬಿ ಸಮುದ್ರಕ್ಕೆ ಸೇರುವ ನದಿಯನ್ನು ಎತ್ತರದಿಂದ ವೀಕ್ಷಿಸುವ ಆಸೆಯಿದ್ದರೆ, ಒತ್ತಿನಾಣೆಗೆ ಒಮ್ಮೆ ಭೇಟಿ ನೀಡಬೇಕು. ಬೈಂದೂರಿನಿಂದ ಅಣತಿ ದೂರದಲ್ಲಿರುವ ಈ ತಾಣ ಪ್ರವಾಸಿಗರ ಮನಸೆಳೆಯುತ್ತದೆ. ಅರಣ್ಯ ಇಲಾಖೆಗೆ ಸೇರಿದ ಅತಿಥಿಗೃಹವು ಸಹ ಇಲ್ಲಿದೆ ಸೂರ್ಯಾಸ್ತವನ್ನು ವೀಕ್ಷಿಸಲು ಪ್ರವಾಸಿಗರಿಗೆ ಇದು ಹೇಳಿ ಮಾಡಿಸಿದ ತಾಣವಾಗಿದೆ.
ರಾಷ್ಟ್ರೀಯ ಹೆದ್ದಾರಿ 17 ರಿಂದ ಕೇವಲ 2 ಕಿ ಮೀ ದೂರ ಈ ಸಮುದ್ರತೀರ ವನ್ನು ಕಾಣಬಹುದು ಒತ್ತಿನಾಣೆ ಪ್ರವಾಸಿ ತಾಣ ಕುಂದಾಪುರದಿಂದ 35 ಕಿಮೀ ದೂರದಲ್ಲಿದೆ.
ಮರವಂತೆ ಬೀಚ್
ಕುಂದಾಪುರ ಮುಖ್ಯ ನಗರದಿಂದ ಕೇವಲ 12ಕಿಮೀ ದೂರದಲ್ಲಿರುವ ಮರವಂತೆ ಬೀಚ್ ಕರ್ನಾಟಕದ ಅತ್ಯಂತ ಸುಂದರವಾದ ಬೀಚ್ ಆಗಿದೆ . ಕಡಲ ತೀರದ ಮಸಾಲೆಯುಕ್ತ ಆಹಾರಕ್ಕಾಗಿ ಈ ಬೀಚ್ ಯಾವಾಗಲೂ ಪ್ರಸಿದ್ಧವಾಗಿದೆ . ಮಸಾಲೆಯುಕ್ತ ಹಾಗೂ ರುಚಿಕರವಾದ ಸಮುದ್ರಹಾರವು ನಿಮ್ಮ ಬಾಯಿ ರುಚಿಯನ್ನು ಇನ್ನಷ್ಟು ಉತ್ತಮ ವಾಗಿಸುತ್ತದೆ. ಇಲ್ಲಿ ನೀವು ಸೇಂಟ್ ಮೇರಿಸ್ ದ್ವೀಪ ಕ್ಕೂ ಭೇಟಿ ನೀಡಬಹುದು ಈ ಸುಂದರವಾದ ಬೀಚ್ ಸೂರ್ಯಾಸ್ತ ಸಮಯದಲ್ಲಿ ಭೇಟಿ ನೀಡಲು ಸೂಕ್ತವಾದ ತಾಣವಾಗಿದೆ.
ಕುಂದಾಪುರದ ಆಹಾರ ಪದಾರ್ಥಗಳಲ್ಲಿ ಬೈಗೆ ಮೀನು ಸಾಂಬಾರು ಹೆಚ್ಚು ರುಚಿಕರವಾದ ಅಡುಗೆಯಾಗಿದೆ. ಆಹಾ! ಬೈಗೆ ಮೀನು ಎಂದಾಗಲೇ ಬಾಯಲ್ಲಿ ನೀರು ಬರುವಂತಾಗುತ್ತದೆ. “ಕೊಚ್ಚಕ್ಕಿ ಕೂಳು ಬೈಗೆ ಮೀನ್ ಹೊಳು” ಒಳ್ಳೆಯ ಕಾಂಬಿನೇಶನ್ ಎಂದು ಹೇಳಬಹುದು . ಕುಂದಾಪುರದಲ್ಲಿ ಬೈಗೆ ಮೀನು ಎಂದರೆ ಉಡುಪಿ, ದಕ್ಷಿಣ ಕನ್ನಡದಲ್ಲಿ ಭೂತಾಯಿ ಮೀನು ಎಂದು ಗುರುತಿಸಲ್ಪಡುತ್ತದೆ. ಗಾತ್ರದಲ್ಲಿ ಚಿಕ್ಕದಾಗಿದ್ದರೂ ಅದರಲ್ಲಿರುವ ರುಚಿ ಸ್ವಾದಿಷ್ಟವಾಗಿರುತ್ತದೆ ಇದನ್ನು ಕಾಯಿಸಿದಷ್ಟು ರುಚಿ ಜಾಸ್ತಿ ಎನ್ನುತ್ತಾರೆ.
ಕಮಲಶಿಲೆ ದೇವಸ್ಥಾನ
ಕುಂದಾಪುರದಿಂದ ಸುಮಾರು 35 ಕಿಲೋ ಮೀಟರ್ ಗಳಷ್ಟು ದೂರದಲ್ಲಿರುವ ಕಮಲಶಿಲೆಯಲ್ಲಿ ಶ್ರೀಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಾಲಯವಿದೆ ಈ ದೇವಾಲಯವು ಕುಬ್ಜ ನದಿ ಹಾಗೂ ನಾಗತೀರ್ಥಗಳ ಸಂಗಮ ಕ್ಷೇತ್ರ ಇಲ್ಲಿ ದುರ್ಗಾದೇವಿ ಲಿಂಗ ರೂಪಿಯಾಗಿ ನೆಲೆಸಿದ್ದಾಳೆ. ಲಿಂಗದಲ್ಲಿ ಮೂರು ಸ್ವರ್ಣರೇಖೆಗಳಿದ್ದು ಮಹಾಲಕ್ಷ್ಮೀ ಮಹಾಕಾಳಿ ಹಾಗೂ ಮಹಾಸರಸ್ವತಿ ಐಕ್ಯವಾಗಿದ್ದಾರೆ. ದೇವಳದ ಸುತ್ತಲೂ ಹೊರಪೌಳಿಯಲ್ಲಿ ಈಶ್ವರ ಗಣಪತಿ ಸುಬ್ರಹ್ಮಣ್ಯ ಹೊಸಮ್ಮ ಕ್ಷೇತ್ರಪಾಲ ರಕ್ತೇಶ್ವರಿ ಹುಲಿದೇವಿ ಮುಂತಾದ ಪರಿವಾರ ದೇವರುಗಳು ನೆಲೆಸಿದ್ದಾರೆ.
ವೀರಭದ್ರ ಕ್ಷೇತ್ರದ ಕ್ಷೇತ್ರಪಾಲ ಗರ್ಭಗೃಹದ ದುರ್ಗಾಪರಮೇಶ್ವರಿಗೆ ಎಷ್ಟು ಬಾರಿ ಪೂಜೆ ನೈವೇದ್ಯ ಆಗುತ್ತದೆಯೋ, ಆಗೆಲ್ಲ ವೀರಭದ್ರ ಸ್ವಾಮಿಗೂ ಪೂಜಾ ನೈವೇದ್ಯಗಳಾಗುತ್ತವೆ. ಸಿದ್ದಾಪುರದಿಂದ ಆರು ಕಿಲೋಮೀಟರ್ ಮತ್ತು ಕುಂದಾಪುರದಿಂದ 35 ಕಿಲೋಮೀಟರ್ ದೂರವಿರುವ ಕಮಲಶಿಲೆಗೆ ಹೋಗಲು ಬಸ್ಸುಗಳ ವ್ಯವಸ್ಥೆ ಇದೆ.
ನೀವುಇದನ್ನುಇಷ್ಟಪಡಬಹುದು: ಮಹಾನಗರಿಯಲ್ಲಿ ಕಾಡುವ ಕುಂದಾಪುರದ ನೆನಪುಗಳು
ಮೆಟ್ಕಲ್ ಗುಡ್ಡೆ ಮಹಾಗಣಪತಿ
ಹಚ್ಚ ಹಸಿರಿನ ಪ್ರಕೃತಿ ಸೌಂದರ್ಯದ ನಡುವೆ ಸ್ಥಿತವಿರುವ ಶತಮಾನಗಳ ಇತಿಹಾಸವಿರುವ ಗಣಪತಿ ದೇವಾಲಯವನ್ನೂ ಕುಂದಾಪುರದ ಹೊಸಂಗಡಿಯಲ್ಲಿ ನೋಡಬಹುದು. ಇಲ್ಲಿನ ಗಣಪತಿಯು ನೋಡಲು ಎಷ್ಟು ಸುಂದರವೋ ಆ ದೇವರ ದರ್ಶನವನ್ನು ಮಾಡುವುದು ಅಷ್ಟೇ ಕಠಿಣವಾದ ಸವಾಲು ಎನಿಸುತ್ತದೆ. ಏಕೆಂದರೆ ಈ ಗಣಪತಿ ನೆಲೆಸಿರುವುದು ಅಂದಾಜು 2000 ಅಡಿಗಳಷ್ಟು ಎತ್ತರದ ಗುಡ್ಡದ ಮೇಲೆ ಪ್ರಕೃತಿ ನಿರ್ಮಿತ ಕಡಿದಾದ ಮೆಟ್ಟಿಲುಗಳನ್ನು ಹತ್ತಿಕೊಂಡು ಗಣಪತಿಯ ದರ್ಶನ ಮಾಡಬೇಕು. ಇದು ಮೆಟ್ಕಲ್ ಗುಡ್ಡೆ ಮಹಾಗಣಪತಿ ದೇವಾಲಯ ಎಂದೇ ಪ್ರಸಿದ್ಧಿ ಪಡೆದಿದೆ.
ಕುಂದಾಪುರದಿಂದ ಶಿವಮೊಗ್ಗ ಮಾರ್ಗವಾಗಿ ಸುಮಾರು ಹದಿನೈದು ಮೈಲಿ ಕ್ರಮಿಸಿದರೆ ಹೊಸಂಗಡಿ ಎಂಬ ಊರು ಸಿಗುತ್ತದೆ. ಹೊಸಂಗಡಿಯಿಂದ ಎರಡು ಮೈಲಿ ದೂರದಲ್ಲಿದೆ ಈ ಮೆಟ್ಕಲ್ ಗುಡ್ಡ.
ಶೆಟ್ಟಿ ಲಂಚ್ ಹೋಂ
ಕರಾವಳಿ ಕರ್ನಾಟಕದಲ್ಲಿ ಬೀಚ್ ಹಾಗೂ ದೇವಸ್ಥಾನಗಳಿಗೆ ತುಂಬಾನೇ ಹೆಸರುವಾಸಿಯಾಗಿರುವ ಸ್ಥಳ ಎಂದರೆ ಕುಂದಾಪುರ. ಇಲ್ಲಿ ಆಹಾರ ಪ್ರಿಯರಿಗೆ ತುಂಬಾನೇ ಪ್ರಸಿದ್ಧ ಹೋಟೆಲ್ ಎಂದರೆ “ಶೆಟ್ಟಿ ಲಂಚ್ ಹೋಂ” ರುಚಿ ರುಚಿಯಾಗಿರುವ ಸ್ಪೆಷಲ್ ‘ಚಿಕನ್ ಘೀ ರೋಸ್ಟ್’ ಸಿಗೋದು ಇಲ್ಲೇ . ಮಟನ್ ಫ್ರೈ, ಚಿಕನ್ ತಾಲಿ, ಫಿಶ್ ತಾಲಿ ಎಷ್ಟೊಂದು ವಿಧ ವಿಧವಾದ ಆಹಾರ ಇಲ್ಲಿ ಸಿಗುತ್ತದೆ.
ಅದರಲ್ಲಿಯೂ ದೆಹಲಿಯಿಂದ ದುಬೈವರೆಗು ರಫ್ತಾಗುವ ಚಿಕನ್ ಘೀ ರೋಸ್ಟ್ ತುಂಬಾ ರುಚಿಯಾಗಿರುವ ಚಿಕನ್ ಘೀ ರೋಸ್ಟ್ ತಿನ್ನಲು ಪ್ರವಾಸಿಗರು ಬರುತ್ತಲೆ ಇರುತ್ತಾರೆ. ಒಳ್ಳೆಯ ಪದಾರ್ಥಗಳನ್ನು ಬಳಸಿ ಹಿತ ಮಿತವಾದ ಆರೋಗ್ಯಕರವಾದಂತಹ ಆಹಾರವನ್ನು ಗ್ರಾಹಕರಿಗೆ ನೀಡುತ್ತಾರೆ. ಕುಂದಾಪುರ ಕಡೆ ಬಂದರೆ ಒಮ್ಮೆ ಶೆಟ್ಟಿ ಲಂಚ್ ಹೋಂ ಗೆ ಭೇಟಿ ನೀಡಿ.
ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ