ವೈರಲ್ ಆಗುತ್ತಿದೆ ಮತ್ತೊರ್ವ ಕನ್ನಡಿಗ ಗಣೇಶ್ ಭಟ್ ಅವರು ಕೆತ್ತಿದ ಬಾಲರಾಮನ ವಿಗ್ರಹ
ಅಯೋಧ್ಯೆಯ ರಾಮ ಮಂದಿರದಲ್ಲಿ (Ayodhya Ram Mandir) ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಸೋಮವಾರ ಅದ್ದೂರಿಯಿಂದ ನೆರವೇರಿತು.
ನಮ್ಮ ಕರ್ನಾಟಕದ ಶಿಲ್ಪಿ ಅರುಣ ಯೋಗಿರಾಜ್ (Arun Yogiraj) ಕೆತ್ತಿರುವ ವಿಗ್ರಹ ಈಗ ರಾಮ ಮಂದಿರದ ಗರ್ಭಗುಡಿಯಲ್ಲಿ ವಿರಾಜಮಾನವಾಗಿದೆ. ಎಲ್ಲರ ಗಮನವನ್ನೂ ಸೆಳೆಯುತ್ತಿದೆ.
ರಾಮ ಮಂದಿರದ ಪ್ರತಿಷ್ಠಾಪನೆಗಾಗಿ ಮೈಸೂರಿನ ಅರುಣ್ ಯೋಗಿರಾಜ್, ಹೊನ್ನಾವರದ ಗಣೇಶ್ ಭಟ್ ಮತ್ತು ರಾಜಸ್ಥಾನದ ಸತ್ಯನಾರಾಯಣ ಪಾಂಡೆ ಮೂವರು ಶಿಲ್ಪಿಗಳು ಬಾಲರಾಮನ ವಿಗ್ರಹವನ್ನು (Ramlalla Idol) ಕೆತ್ತಿದ್ದರು.
ಕನ್ನಡಿಗರಿಬ್ಬರೂ ಅರುಣ್ ಯೋಗಿರಾಜ್ ಹಾಗೂ ಗಣೇಶ್ ಭಟ್ (Ganesh L Bhat) ಅವರು ಕೃಷ್ಣ ಶಿಲೆಯಲ್ಲಿ ಬಾಲರಾಮನ ಮೂರ್ತಿಯನ್ನು ಕೆತ್ತಿದ್ದರೆ, ರಾಜಸ್ಥಾನದ ಸತ್ಯನಾರಾಯಣ ಪಾಂಡೆ ಅವರು ಅಮೃತಶಿಲೆಯಲ್ಲಿ ಮೂರ್ತಿ ಕೆತ್ತನೆ ಮಾಡಿದ್ದರು.
ಸತ್ಯನಾರಾಯಣ ಪಾಂಡೆ (Sculptor Satyanarayan Pandey) ಅವರು ಕೆತ್ತಿದ್ದ ಬಾಲರಾಮನ ಮೂರ್ತಿಯನ್ನು ಮಂಗಳವಾರ ಅನಾವರಣಗೊಳಿಸಲಾಗಿತ್ತು. ಈಗ ಹೊನ್ನಾವರದ ಗಣೇಶ್ ಭಟ್ ಅವರು ಕೆತ್ತನೆ ಮಾಡಿದ ಮೂರ್ತಿ ಅನಾವರಣಗೊಂಡಿದ್ದು ಈ ಎರಡು ಮೂರ್ತಿಗಳೂ ವೈರಲ್ ಆಗುತ್ತಿವೆ.
ಗಣೇಶ್ ಎಲ್ ಭಟ್ (Sculptor Ganesh L Bhat) ಅವರು ಕೆತ್ತಿರುವ ವಿಗ್ರಹದಲ್ಲಿ ಸೂರ್ಯ ದೇವರು ಕಿರೀಟದಲ್ಲಿ ನೆಲೆಸಿದ್ದಾನೆ. ಅಲ್ಲಿ ಸೂರ್ಯ ಚಕ್ರವನ್ನು ಸಹ ಕಾಣಬಹುದು. ವಿಗ್ರಹದ ಮೇಲ್ಭಾಗದಲ್ಲಿ ಸಿಂಹ ಲಲಾಟವಿದೆ.
ಇದು ಏಕಶಿಲಾ ಮೂರ್ತಿಯಾಗಿದ್ದು, ಬಾಲರಾಮನ ಕೈಗಳಲ್ಲಿ ಬಿಲ್ಲು, ಬಾಣಗಳಿವೆ. ಬಾಲರಾಮನ ಮುಖವನ್ನು ವಾಲ್ಮೀಕಿ ರಾಮಾಯಣದಲ್ಲಿ ವರ್ಣಿಸಿದಂತೆ ಕೆತ್ತಲಾಗಿದೆ.
ಕೃಷ್ಣ ಶಿಲೆಯು ಕಠಿಣವಾಗಿದ್ದರೂ, ವಿಗ್ರಹದ ಹೊಟ್ಟೆಯ ಭಾಗ ಮೃದುತ್ವವನ್ನು ಹೊಂದಿದೆ. ವಿಗ್ರಹ ಕಮಲ ದಳದ ಪೀಠದ ಮೇಲೆ ವಿರಾಜಮಾನವಾಗಿದೆ.
ಮೂರ್ತಿಯನ್ನು ಹೊಯ್ಸಳ ಶೈಲಿಯಲ್ಲಿ ಕೆತ್ತಲಾಗಿದ್ದು, ಆಸುಪಾಸಿನಲ್ಲಿ ಬ್ರಹ್ಮ, ಲಕ್ಷ್ಮಿ, ಹನುಮಂತ, ಗರುಡ ಕೆತ್ತನೆಯಿದೆ. ಈ ಮೂರ್ತಿಯ ಪ್ರಭಾವಳಿಯಲ್ಲೂ ವಿಷ್ಣುವಿನ ದಶಾವತಾರವನ್ನು ಕೆತ್ತಲಾಗಿದೆ.
ವಿಗ್ರಹವು ನಿಸ್ಸಂದೇಹವಾಗಿ ಭಾರತೀಯ ಶಿಲ್ಪ ಶಾಸ್ತ್ರವನ್ನು ವರ್ಣಿಸುವ ಶಿಲ್ಪವಾಗಿದೆ. ಈ ವಿಗ್ರಹವೂ ಕೂಡಾ ಅಯೋಧ್ಯಾ ರಾಮ ಮಂದಿರದ ಒಂದು ಭಾಗದಲ್ಲಿ ಸ್ಥಾಪನೆಗೊಳ್ಳಲಿದೆ.
ಉತ್ತರ ಕನ್ನಡದ ಹೊನ್ನಾವರದ ಇಡಗುಂಜಿ (Idagunji) ಮೂಲದ ಗಣೇಶ್ ಭಟ್ ಅವರು ದೇಶ ವಿದೇಶಗಳಲ್ಲಿ ಶಿಲ್ಪ ಕಲೆಯ ಕುರಿತಾದ ಹಲವು ಪ್ರಾತ್ಯಕ್ಷಿಕೆ, ಶಿಬಿರಗಳನ್ನು ಸಂಯೋಜಿಸಿ ಪ್ರಶಸ್ತಿ ಪಡೆದಿರುತ್ತಾರೆ.
ಶಿಲ್ಪ ಕಲೆಯ ವಿಭಾಗದಲ್ಲಿ ಅವರ ಸಾಧನೆಯನ್ನು ಗುರುತಿಸಿ, ಅಯೋಧ್ಯಾ ರಾಮ ಮಂದಿರದಲ್ಲಿ ಬಾಲರಾಮನ ಕೆತ್ತನೆಗೆ ಆಹ್ವಾನ ನೀಡಲಾಗುತ್ತದೆ.
ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.