ಯುನೆಸ್ಕೋ ಮಾನ್ಯತೆ ಪಡೆದ ಭಾರತದ 42 ವಿಶ್ವ ಪಾರಂಪರಿಕ ತಾಣಗಳು
ಯುನೆಸ್ಕೋ ವಿಶ್ವದ ವಿಶಿಷ್ಟ ತಾಣಗಳನ್ನು ವಿಶ್ವ ಪಾರಂಪರಿಕ ತಾಣವಾಗಿ ಘೋಷಿಸುತ್ತದೆ. ವಿಶ್ವದೆಲ್ಲೆಡೆ ಇರುವ ಸಾಂಸ್ಕೃತಿಕ ಮತ್ತು ಪ್ರಾಕೃತಿಕ ಮಹತ್ವಗಳನ್ನು ಹೊಂದಿರುವ ತಾಣಗಳನ್ನು ಗುರುತಿಸಿ, ಪಟ್ಟಿಮಾಡಿ ಸಂರಕ್ಷಿಸುವುದು ಇದರ ಉದ್ದೇಶವಾಗಿದೆ. ಅಂತೆಯೇ ಈ ಪಟ್ಟಿಯಲ್ಲಿ ಮಾನ್ಯತೆ ಪಡೆದ ನಮ್ಮ ದೇಶದ 42 ವಿಶ್ವ ಪಾರಂಪರಿಕ ತಾಣಗಳ ಕುರಿತಾದ ವಿವರ ಇಲ್ಲಿದೆ.
• ಉಜ್ವಲಾ ವಿ. ಯು.
ವಿಶ್ವ ಪಾರಂಪರಿಕ ತಾಣ:
ಯುನೆಸ್ಕೋ [United Nations Educational, Scientific and Cultural Organization] ವು 16 ನವಂಬರ್ 1945ರಂದು ಸ್ಥಾಪಿಸಲಾದ ವಿಶ್ವಸಂಸ್ಥೆಯ ಒಂದು ವಿಶಿಷ್ಟವಾದ ಅಂಗಸಂಸ್ಥೆಯಾಗಿದೆ. ಇದು ಶಿಕ್ಷಣ, ವಿಜ್ಞಾನ ಮತ್ತು ಸಂಸ್ಕೃತಿಯನ್ನು ಸಂರಕ್ಷಿಸುವ ಮೂಲಕ ವಿಶ್ವ ಶಾಂತಿ ಮತ್ತು ಭದ್ರತೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಯುನೆಸ್ಕೋ (UNESCO) ವಿಶಿಷ್ಟ ತಾಣಗಳನ್ನು ಗುರುತಿಸಿ “ವಿಶ್ವ ಪಾರಂಪರಿಕ ತಾಣ”(World Heritage Site) ಪಟ್ಟಿಯಲ್ಲಿ ಸೇರಿಸಿ, ಅವುಗಳ ರಕ್ಷಣೆಯ ಜವಾಬ್ದಾರಿಯನ್ನು ಹೊರುತ್ತದೆ. ಕೆಲವು ಸಂದರ್ಭಗಳಲ್ಲಿ ತಾಣಗಳ ರಕ್ಷಣೆಗಾಗಿ ವಿಶ್ವ ಪರಂಪರೆಯ ನಿಧಿಯಿಂದ ಆರ್ಥಿಕ ನೆರವನ್ನು ಸಹ ಒದಗಿಸುತ್ತದೆ. ಸೆಪ್ಟೆಂಬರ 2023ರ ಪ್ರಕಾರ, ವಿಶ್ವದೆಲ್ಲೆಡೆ 168 ದೇಶಗಳಲ್ಲಿ ಒಟ್ಟು 1,199 ವಿಶ್ವ ಪಾರಂಪರಿಕ ತಾಣಗಳಿವೆ. ಅವುಗಳಲ್ಲಿ 933 ಸಾಂಸ್ಕೃತಿಕ, 227 ನೈಸರ್ಗಿಕ, 39 ಮಿಶ್ರ ಮಹತ್ತ್ವವುಳ್ಳ ತಾಣಗಳು.
ಆಯ್ಕೆಯ ಪ್ರಕ್ರಿಯೆ:
ಹಿಂದೆ ಸಾಂಸ್ಕೃತಿಕ ಪರಂಪರೆಯನ್ನು ಆರು ಮಾನದಂಡಗಳಿಂದ ಹಾಗೂ ಪ್ರಾಕೃತಿಕ ಪರಂಪರೆಯನ್ನು ನಾಲ್ಕು ಮಾನದಂಡಗಳಿಂದ ಅಳೆಯಲಾಗುತ್ತಿತ್ತು. 2005 ರಿಂದ ಒಟ್ಟು ಹತ್ತು ಅಂಶಗಳ ಅರ್ಹತಾಪಟ್ಟಿಯನ್ನು ತಯಾರಿಸಲಾಯಿತು. ನಾಮನಿರ್ದೇಶನಗೊಂಡ ತಾಣವು ಈ ಹತ್ತರ ಪೈಕಿ ಕನಿಷ್ಟ ಒಂದಾದರೂ ಅರ್ಹತೆಯನ್ನು ಹೊಂದಿದ್ದು, ವಿಶ್ವದ ಅಮೂಲ್ಯ ಆಸ್ತಿಯಾಗಿರಬೇಕು.
1983ರಲ್ಲಿ ಮೊದಲ ಬಾರಿಗೆ ಭಾರತದ ನಾಲ್ಕು ತಾಣಗಳು – ಅಜಂತಾ ಗುಹೆಗಳು, ಎಲ್ಲೋರಾ ಗುಹೆಗಳು, ಆಗ್ರಾ ಕೋಟೆ ಮತ್ತು ತಾಜಮಹಲ್ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿದವು.
ರಾಜ್ಯಗಳ ಅನುಸಾರ ಭಾರತದ 42 ವಿಶ್ವ ಪಾರಂಪರಿಕ ತಾಣಗಳ ಪಟ್ಟಿ ಇಲ್ಲಿವೆ:
ಅ.ಕರ್ನಾಟಕ: 1. ಹಂಪಿಯ ಸ್ಮಾರಕಗಳು (1986), 2. ಪಟ್ಟದಕಲ್ಲಿನ ಸ್ಮಾರಕಗಳು (1987), 3. ಬೇಲೂರು, ಹಳೇಬೀಡು ಮತ್ತು ಸೋಮನಾಥಪುರ ಹೊಯ್ಸಳ ದೇವಾಲಯಗಳು (2023)
ಆ. ಮಹಾರಾಷ್ಟ್ರ: 4. ಅಜಂತಾ ಗುಹೆಗಳು (1983), 5. ಎಲ್ಲೋರಾ ಗುಹೆಗಳು (1983), 6. ಎಲಿಫೆಂಟಾ ಗುಹೆಗಳು (1987),7. ಛತ್ರಪತಿ ಶಿವಾಜಿ ಟರ್ಮಿನಸ್ (2004), 8. ವಿಕ್ಟೋರಿಯನ್ ಗೋಥಿಕ್ ಮತ್ತು ಆರ್ಟ್ ಡೆಕೊ ಎನ್ಸೆಂಬಲ್ಸ್ (2018).
ಇ.ತಮಿಳುನಾಡು: 9. ಮಹಾಬಲಿಪುರಂ ಸ್ಮಾರಕಗಳು (1984), 10. ಗ್ರೇಟ್ ಲಿವಿಂಗ್ ಚೋಳ ದೇವಾಲಯಗಳು (1987) (ಇದು ತಂಜಾವೂರಿನ ಬೃಹದೀಶ್ವರ ದೇವಾಲಯ, ಗಂಗೈಕೊಂಡ ಚೋಳಪುರಂನಲ್ಲಿರುವ ಬೃಹದೀಶ್ವರ ದೇವಾಲಯ ಮತ್ತು ದಾರಾಸುರಂನಲ್ಲಿರುವ ಐರಾವತೇಶ್ವರ ದೇವಾಲಯದಂತಹ ದೇವಾಲಯಗಳನ್ನು ಒಳಗೊಂಡಿದೆ.)
ಈ. ಮಧ್ಯಪ್ರದೇಶ: 11. ಖಜುರಾಹೊ ಸ್ಮಾರಕಗಳ ಸಮೂಹ (1986),12. ಸಾಂಚಿಯ ಬೌದ್ಧ ಸ್ಮಾರಕಗಳು (1989),13. ಭೀಮೇಟ್ಕಾದ ರಾಕ್ ಶೆಲ್ಟರ್ಸ್ (2003).
ಉ.ಉತ್ತರ ಪ್ರದೇಶ: 14. ಆಗ್ರಾ ಕೋಟೆ (1983) 15. ತಾಜ ಮಹಲ್ (1983)16. ಫತೇಪುರ್ ಸಿಕ್ರಿ (1986)
ಊ. ಅಸ್ಸಾಂ: 17. ಕಾಜಿರಂಗ ರಾಷ್ಟ್ರೀಯ ಉದ್ಯಾನ (1985)18. ಮಾನಸ್ ವನ್ಯಜೀವಿ ಧಾಮ (1985)
ಋ.ಬಿಹಾರ: 19. ಬೋಧಗಯಾದಲ್ಲಿ ಮಹಾಬೋಧಿ ದೇವಾಲಯ ಸಂಕೀರ್ಣ (2002), 20. ನಳಂದ ಮಹಾವಿಹಾರದ ಪುರಾತತ್ವ ತಾಣ (ನಳಂದ ವಿಶ್ವವಿದ್ಯಾಲಯ) (2016)
ಎ.ದೆಹಲಿ: 21. ಹುಮಾಯೂನ್ ಸಮಾಧಿ (1993) 22. ಕುತುಬ್ ಮಿನಾರ್ ಮತ್ತುಅದರ ಸ್ಮಾರಕಗಳು (1993), 23. ಕೆಂಪು ಕೋಟೆ (2007)
ಏ.ಗೋವಾ: 24. ಗೋವಾದ ಚರ್ಚ್‌ಗಳು ಮತ್ತು ಕಾನ್ವೆಂಟ್‌ಗಳು.
ಒ.ಗುಜರಾತ್: 25. ಚಂಪನೇರ್ ಪಾವಗಡ ಪುರಾತತ್ವಪಾರ್ಕ್ (2004), 26. ರಾಣಿ ಕಿ ವಾವ್ (2014), 27. ಅಹಮದಾಬಾದ್ ಐತಿಹಾಸಿಕ ನಗರ (2017), 28. ಧೋಲವೀರ (2021).
ಓ. ಒಡಿಶಾ: 29. ಕೊನಾರ್ಕ್ ಸೂರ್ಯ ದೇವಾಲಯ (1984)
ಔ.ರಾಜಸ್ಥಾನ: 30. ಜೈಪುರ ನಗರ (2020), 31. ರಾಜಸ್ಥಾನದ ಬೆಟ್ಟದ ಕೋಟೆಗಳು(2013), 32. ಜಂತರ್ ಮಂತರ್ (2010), 33. ಕಿಯೋಲಾಡಿಯೊ ರಾಷ್ಟ್ರೀಯ ಉದ್ಯಾನವನ (1985).
ಅಂ.ಉತ್ತರಾಖಂಡ: 34. ನಂದಾದೇವಿ ರಾಷ್ಟ್ರೀಯ ಉದ್ಯಾನವನ ಮತ್ತು ಹೂವಿನ ಕಣಿವೆ (1988, 2005)
ಅಃ: ಪಶ್ಚಿಮ ಬಂಗಾಳ: 35. ಸುಂದರಬನ್ಸ್ ರಾಷ್ಟ್ರೀಯ ಉದ್ಯಾನವನ(1987), 36. ಶಾಂತಿನಿಕೇತನ (2023)
ಕ.ಹಿಮಾಚಲ ಪ್ರದೇಶ: 37. ಗ್ರೇಟ್ ಹಿಮಾಲಯನ್ ರಾಷ್ಟ್ರೀಯ ಉದ್ಯಾನವನ (2014)
ಖ.ತೆಲಂಗಾಣ: 38. ಕಾಕತೀಯ ರುದ್ರೇಶ್ವರ (ರಾಮಪ್ಪ) ದೇವಸ್ಥಾನ (2021).
ಗ. ಚಂಡೀಗಢ: 39. ಲೆ ಕಾರ್ಬ್ಯೂಸಿಯರ್‌ನ ವಾಸ್ತುಶಿಲ್ಪದ ಕೆಲಸ(ಕ್ಯಾಪಿಟಲ್ ಕಾಂಪ್ಲೆಕ್ಸ್) (2016)
ಘ. ಸಿಕ್ಕಿಂ: 40. ಖಾಂಗ್‌ಚೆಂಡ್‌ಜೋಂಗಾ ರಾಷ್ಟ್ರೀಯ ಉದ್ಯಾನವನ (2016)
41. ಪಶ್ಚಿಮ ಘಟ್ಟಗಳು: ಕರ್ನಾಟಕ, ಮಹಾರಾಷ್ಟ್ರ,ಗೋವಾ,ತಮಿಳುನಾಡು ಕೇರಳ.
42. ಮೌಂಟೇನ್ ರೈಲ್ವೇಸ್ ಆಫ್ ಇಂಡಿಯಾ (1999, 2005, 2008): ಡಾರ್ಜಿಲಿಂಗ್ ಹಿಮಾಲಯನ್ ರೈಲುಮಾರ್ಗ, ನೀಲಗಿರಿ ಮೌಂಟೇನ್ ರೈಲ್ವೇ, ತಮಿಳುನಾಡು, ಕಲ್ಕಾ ಶಿಮ್ಲಾ ರೈಲ್ವೆ.
ಪ್ರಸ್ತುತ ಭಾರತದಲ್ಲಿ ಒಟ್ಟು 34 ಸಾಂಸ್ಕೃತಿಕ, 07 ನೈಸರ್ಗಿಕ ಮತ್ತು 01 ಮಿಶ್ರ ಗುಣಲಕ್ಷಣ ಇರುವ ತಾಣಗಳು ವಿಶ್ವ ಪಾರಂಪರಿಕ ತಾಣಗಳ ಪಟ್ಟಿ ಸೇರಿವೆ.
ರಾಜ್ಯಾನುಸಾರ ವಿಶ್ವ ಪಾರಂಪರಿಕ ತಾಣಗಳ ಸಂಕ್ಷಿಪ್ತ ವಿವರವನ್ನು ವಿಶ್ವ ಪಾರಂಪರಿಕ ತಾಣಗಳ ಸರಣಿಯಲ್ಲಿ ತಿಳಿಯಬಹುದಾಗಿದೆ.
ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.