ಯುನೆಸ್ಕೋದ “ಅಮೂರ್ತ ಸಾಂಸ್ಕೃತಿಕ ಪರಂಪರೆ”ಯ ಪಟ್ಟಿಯಲ್ಲಿ “ಗಾರ್ಬಾ ನೃತ್ಯ” ಸೇರ್ಪಡೆ
ಗುಜರಾತಿನ ಸಾಂಪ್ರದಾಯಿಕ ಜಾನಪದ ನೃತ್ಯ ಶೈಲಿಯಾದ “ಗಾರ್ಬಾ ನೃತ್ಯ” ಕ್ಕೆ ಯುನೆಸ್ಕೋ ಮಾನ್ಯತೆ ದೊರೆತಿದೆ. ಇದನ್ನು ಯುನೆಸ್ಕೋದ ಮಾನವೀಯತೆಯ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪಟ್ಟಿಯಲ್ಲಿ ಸೇರಿಸಲಾಗಿದೆ.
● ಉಜ್ವಲಾ ವಿ.ಯು.
ಗಾರ್ಬಾ ನೃತ್ಯ (Garba Dance)ವು ಸಾಂಪ್ರದಾಯಿಕ ಮತ್ತು ದೈವಿಕ ನೃತ್ಯ. ನವರಾತ್ರಿಯ ಸಂದರ್ಭದಲ್ಲಿ ಗುಜರಾತ್ (Gujarat), ರಾಜಸ್ಥಾನ (Rajasthan) ಸೇರಿದಂತೆ ಹಲವು ಭಾಗಗಳಲ್ಲಿ ಈ ನೃತ್ಯವನ್ನು ವಿಜೃಂಭಣೆಯಿಂದ ಮಾಡಲಾಗುತ್ತದೆ.
ನವರಾತ್ರಿಯ 9 ದಿನಗಳ ಕಾಲ ಜನರು ಗುಂಪಿನಲ್ಲಿ ಸಾಂಪ್ರದಾಯಿಕ ಉಡುಗೆ ತೊಟ್ಟು ವೃತ್ತಾಕಾರದಲ್ಲಿ ಈ ನೃತ್ಯವನ್ನು ಮಾಡುತ್ತಾರೆ. ಹಳೆಯ ಪದ್ಧತಿಯ ಪ್ರಕಾರ ದೇವಿಯು ಈ ನೃತ್ಯದ ರೂಪದಲ್ಲಿ ಜೀವಂತವಾಗಿರುತ್ತಾಳೆ ಎಂಬುದು ನಂಬಿಕೆ.
ಯುನೆಸ್ಕೋ ಅಮೂರ್ತ ಸಾಂಸ್ಕೃತಿಕ ಪರಂಪರೆ (ICH)ಯನ್ನು ಒಂದು ದೇಶದ ನಗರಗಳ ಅಭ್ಯಾಸ, ಸಂಸ್ಕೃತಿ ಪರಂಪರೆಯ ರಕ್ಷಣೆ ಮತ್ತು ಪ್ರಚಾರಕ್ಕಾಗಿ 2003 ರಲ್ಲಿ ಕರಡು ರಚಿಸಲಾಯಿತು.
ಭಾರತದಲ್ಲಿ ಈಗಾಗಲೇ ಕೋಲ್ಕತ್ತಾದ ದುರ್ಗಾಪೂಜೆ, ಕುಂಭ ಮೇಳ, ಯೋಗ, ವೇದ ಪಠಣ, ಸೇರಿದಂತೆ 14 ಸಾಂಪ್ರದಾಯಿಕ ಪ್ರಕಾರಗಳನ್ನು ಈಗಾಗಲೇ ಈ ಪಟ್ಟಿಯಲ್ಲಿ ಸೇರ್ಪಡಿಸಲಾಗಿದೆ.
ಈಗ ಗುಜರಾತಿನ ಗಾರ್ಬಾ ನೃತ್ಯ ಕೂಡಾ ಯುನೆಸ್ಕೋ(UNESCO) ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದು, ಈಗ ಭಾರತದಲ್ಲಿ 15 ಅಮೂರ್ತ ಸಾಂಸ್ಕೃತಿಕ ಪರಂಪರೆ (Intangible cultural heritage) ಪಟ್ಟಿಯಲ್ಲಿ ಸೇರಿದ ಪ್ರಕಾರಗಳಿವೆ.
ಆಗಸ್ಟ್ 2022 ರಲ್ಲಿ, ಭಾರತವು ಯುನೆಸ್ಕೋದ ಅಮೂರ್ತ ಸಾಂಸ್ಕೃತಿಕ ನಿಧಿಗಳ ಪಟ್ಟಿಯಲ್ಲಿ ಸೇರ್ಪಡೆಗೊಳ್ಳಲು ಗಾರ್ಬಾವನ್ನು ನಾಮನಿರ್ದೇಶನ ಮಾಡಲಾಯಿತು.
ಇತ್ತೀಚಿಗೆ 2023 ರ ಡಿಸೆಂಬರ್ 5 ರಿಂದ 9 ರವರೆಗೆ ಬೋಟ್ಸ್ವಾನಾದ ಕಸಾನೆಯಲ್ಲಿ ನಡೆದ 18 ನೇ ಅಧಿವೇಶನದಲ್ಲಿ ಈ ಘೋಷಣೆ ಮಾಡಲಾಯಿತು.
ಗಾರ್ಬಾ ನೃತ್ಯಕ್ಕೆ ವಿಶ್ವ ಮಾನ್ಯತೆ ಪಡೆದಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಅಭಿನಂದನೆ ವ್ಯಕ್ತಪಡಿಸಿದ್ದಾರೆ.
“ಗಾರ್ಬಾ ಎನ್ನುವುದು ಜೀವನ, ಏಕತೆ ಮತ್ತು ನಮ್ಮ ಆಳವಾದ ಸಂಪ್ರದಾಯಗಳ ಆಚರಣೆಯಾಗಿದೆ. ಅಮೂರ್ತ ಪರಂಪರೆಯ ಪಟ್ಟಿಯಲ್ಲಿ ಮಾನ್ಯತೆ ಪಡೆದಿರುವುದು ಭಾರತೀಯ ಸಂಸ್ಕೃತಿಯ ಸೌಂದರ್ಯವನ್ನು ಜಗತ್ತಿಗೆ ತೋರಿಸುತ್ತದೆ. ಈ ಗೌರವವು ಮುಂದಿನ ಪೀಳಿಗೆಗೆ ನಮ್ಮ ಪರಂಪರೆಯನ್ನು ಸಂರಕ್ಷಿಸಲು ಮತ್ತು ಉತ್ತೇಜಿಸಲು ನಮಗೆ ಸ್ಫೂರ್ತಿ ನೀಡುತ್ತದೆ. ಈ ಜಾಗತಿಕ ಮಾನ್ಯತೆಗಾಗಿ ಅಭಿನಂದನೆಗಳು,” ಎಂದು ಅವರು X ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ಅವರು “ತಾಯಿ ದೇವಿಯ ಭಕ್ತಿಯ ಪ್ರತೀಕವಾದ ಈ ಪ್ರಾಚೀನ ಸಂಪ್ರದಾಯವು ಜೀವಂತವಾಗಿರಲು ಮತ್ತು ಬೆಳೆಯಲು ಇದು ಸಹಾಯಕವಾಗಿದೆ” ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ.
ಗಾರ್ಬಾ UAE, USA, UK, ಆಸ್ಟ್ರೇಲಿಯಾ, ಕೆನಡಾ ಮತ್ತು ಇತರ ಹಲವು ದೇಶಗಳಲ್ಲಿರುವ ಭಾರತೀಯ ವಲಸಿಗರಲ್ಲಿ ಸಾಕಷ್ಟು ಮೆಚ್ಚುಗೆ ಗಳಿಸಿದ ನೃತ್ಯವಾಗಿದೆ.
ಇತ್ತೀಚೆಗೆ ಗಾರ್ಬಾವನ್ನು ಅಮೂರ್ತ ಸಾಂಸ್ಕೃತಿಕ ಪರಂಪರೆಯಾಗಿ ಸೇರ್ಪಡೆಗೊಳಿಸಿದ್ದಕ್ಕೆ ಈ ದೇಶಗಳೂ ಸಹ ಸಂಭ್ರಮಾಚರಣೆ ನಡೆಸುತ್ತಿವೆ.
ನಮ್ಮ ದೇಶದ ಅತ್ಯಂತ ಪ್ರಾಚೀನ ಮತ್ತು ಸಾಂಪ್ರದಾಯಿಕ ನೃತ್ಯ ಪ್ರಕಾರವು ಯುನೆಸ್ಕೋದಿಂದಾಗಿ ವಿಶ್ವದೆಲ್ಲೆಡೆ ಮಾನ್ಯತೆ ಪಡೆದಿರುವ ದೇಶದ ಎಲ್ಲಾ ಜನರೂ ಸಂತೋಷ ಮತ್ತು ಹೆಮ್ಮೆ ಪಡುವ ಕ್ಷಣವಾಗಿದೆ.
ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.