Moreಮ್ಯಾಜಿಕ್ ತಾಣಗಳುವಿಂಗಡಿಸದ

ಸಹಬಾಳ್ವೆಯ ಸಂದೇಶ ಸಾರಲು ಬೆಂಗಳೂರಿಗೆ ಲಗ್ಗೆ ಇಟ್ಟಿವೆ ನೂರು ಆನೆಗಳು

ಮಾನವ ಮತ್ತು ವನ್ಯಜೀವಿಗಳ ನಡುವೆ “ಸಹಬಾಳ್ವೆ”ಯ ಮಹತ್ವ ಸಾರಲು 100 ಲಂಟಾನಾ (Lantana) ಕಳೆಗಿಡದಿಂದ ಕೆತ್ತಲಾದ ಆನೆಗಳನ್ನು ಬೆಂಗಳೂರಿನ ಕೆಲವು ಆಯ್ದ ಭಾಗಗಳಲ್ಲಿ ಪ್ರದರ್ಶನಕ್ಕೆ ಇಡಲು ಆಯೋಜಿಸಲಾಗಿದೆ.

ಯುಕೆ ಚಾರಿಟಿ ಎಲಿಫೆಂಟ್ ಫ್ಯಾಮಿಲಿ ಮತ್ತು ‘ದಿ ರಿಯಲ್ ಎಲಿಫೆಂಟ್ ಕಲೆಕ್ಟಿವ್’ ಸಂಸ್ಥೆ ಆಯೋಜಿಸಿರುವ ಈ ಪ್ರದರ್ಶನವನ್ನು ಪರಿಸರವಾದಿಗಳು ಮತ್ತು ವನ್ಯಜೀವಿ ಸಂರಕ್ಷಣಾಧಿಕಾರಿಗಳು ಸೇರಿ ಶನಿವಾರ (ಫೆ.3ರಂದು) ಪ್ರಾರಂಭಿಸಿತು.

ಬೆಂಗಳೂರಿನಲ್ಲಿ ಮಾನವ-ಪ್ರಾಣಿ ಸಂಘರ್ಷವನ್ನು ಕೇಂದ್ರೀಕರಿಸುವ ಒಂದು ತಿಂಗಳ ಕಾಲದ ಈ ಪ್ರದರ್ಶನ ‘ಸಹಬಾಳ್ವೆ: ದಿ ಗ್ರೇಟ್ ಎಲಿಫೆಂಟ್ ಮೈಗ್ರೇಷನ್’ (Coexistence: The Great Elephant Migration) ಎಂಬ ಥೀಮ್ ಅನ್ನು ಹೊಂದಿದೆ.

ಈ ಪ್ರದರ್ಶನವನ್ನು ಅರಣ್ಯ ಇಲಾಖೆಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ(ವನ್ಯ ಜೀವಿ) ಸುಭಾಷ್ ಮಾಳಖೇಡೆ ನಿನ್ನೆ ಲೋಕಾರ್ಪಣೆಗೊಳಿಸಿದರು.

ಉದ್ಘಾಟನೆ ಬಳಿಕ ಮಾತನಾಡಿದ ಅವರು, ಅರಣ್ಯಗಳಲ್ಲಿ ಲಂಟಾನಾ ಗಿಡಗಳ ಪ್ರಮಾಣ ಹೆಚ್ಚುತ್ತಿವೆ. ಇಡೀ ಅರಣ್ಯ ಪ್ರದೇಶವನ್ನು ಆವರಿಸುತ್ತಿದೆ. ಆದ್ದರಿಂದ ಲಂಟಾನಾ ಗಿಡಗಳನ್ನು ತೆರವುಗೊಳಿಸುವುದು ಅನಿವಾರ್ಯವಾಗಿದೆ.

ಈ ಲಂಟಾನಾ ಗಿಡಗಳನ್ನು (Lantana elephants) ಉಪಯುಕ್ತ ಕಾರ್ಯಕ್ಕೆ ಬಳಸುವ ನಿಟ್ಟಿನಿಂದ, ಜನರಿಗೆ ಸಹಬಾಳ್ವೆಯ ಬದುಕಿನ ಬಗ್ಗೆ ಜಾಗೃತಿ ಮೂಡಿಸಲು ನೆರವಾಗುವಂತೆ ಬೃಹತ್ ಆನೆಗಳ ಪ್ರತಿರೂಪವನ್ನು ಇದರಿಂದ ತಯಾರಿಸಲಾಗಿದೆ ಎಂದು ವಿವರಿಸಲಾಗಿದೆ.

ಪ್ರದರ್ಶನದ ಭಾಗವಾಗಿ, ನಿನ್ನೆ ಸಸ್ಯಕಾಶಿ ಲಾಲ್ ಬಾಗ್(Lalbhag) ನಲ್ಲಿ ಲಂಟಾನಾ ಎಂಬ ಕಳೆಗಿಡದಿಂದ ಬೃಹತ್ ಗಾತ್ರದ ನೈಜ ಆನೆಯನ್ನು ಹೋಲುವ 60 ಆನೆಗಳನ್ನು ಲಾಲ್​ ಬಾಗ್​ನ ಗಾಜಿನ ಮನೆ ಸುತ್ತಲಿನ ಹುಲ್ಲು ಹಾಸಿನ ಮೇಲೆ ಪ್ರದರ್ಶನಕ್ಕಿಡಲಾಗಿದೆ. ಈ ಪ್ರದರ್ಶನವನ್ನು ಮಾರ್ಚ್ 3 ರವರೆಗೂ ಸಾರ್ವಜನಿಕರು ವೀಕ್ಷಿಸಬಹುದಾಗಿದೆ.

ನೀಲಗಿರಿ ಬಯೋಸ್ಪೀಯರ್ ರಿಸರ್ವ್ ಪ್ರದೇಶ, ಮಲೆ ಮಹದೇಶ್ವರ ಬೆಟ್ಟ ಸೇರಿದಂತೆ ಇತರ ಕಡೆಗಳಲ್ಲಿ ಇರುವ ಸೋಲಿಗರು, ಜೇನು ಕುರುಬರು, ಬೆಟ್ಟ ಕುರುಬರು, ಪನಯಾ ಮತ್ತು ಇತರೆ ಬುಡಕಟ್ಟು ಜನಾಂಗದ ಪರಿಣಿತ ಶಿಲ್ಪಿಗಳು ಈ ಜೀವಂತ ಆನೆಗಳನ್ನು ಹೋಲುವ ಪ್ರತಿರೂಪಗಳನ್ನು ಸಿದ್ಧಪಡಿಸಿದ್ದಾರೆ.

ಲಂಟಾನ, ರೋಜವಾರ ಕಳೆ ಗಿಡಗಳನ್ನು ಕಡಿದು ಬಿಸಿ ನೀರಿನಲ್ಲಿ ಸ್ವಲ್ಪ ಸಮಯದವರೆಗೆ ಇಡಲಾಗುತ್ತದೆ. ಬಳಿಕ ಅದನ್ನು ಆನೆ ರೂಪಕ್ಕೆ ಕೆತ್ತಿ, ತೆಳುವಾಗಿ ಪಾಲಿಷ್ ಮಾಡಲಾಗುತ್ತದೆ.

ಒಂದು ದೊಡ್ಡ ಆನೆಯನ್ನು ಕೆತ್ತಲು 5 ಮಂದಿ ಶಿಲ್ಪಿಗಳು ಬೇಕಿದ್ದು, 10 ರಿಂದ 15 ದಿನಗಳಲ್ಲಿ ಕೆತ್ತಲಾಗುತ್ತದೆ ಎಂದು ತಮಿಳುನಾಡಿನ ಶಿಲ್ಪಿ ಒಬ್ಬರು ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.

ಪ್ರದರ್ಶನದ ಜೊತೆಗೆ ಮನುಷ್ಯ-ಪ್ರಾಣಿಗಳ ನಡುವಿನ ಸಹಬಾಳ್ವೆ ಕುರಿತು ಸಮಾಜಕ್ಕೆ ಜಾಗೃತಿ ಮೂಡಿಸುವ ಬೀದಿ ನಾಟಕಗಳು, ಚರ್ಚೆ, ಕಥಾ ಸ್ಪರ್ಧೆ, ಇನ್ನಿತರ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳಲಾಗಿದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button