ಕಾರು ಟೂರುದೂರ ತೀರ ಯಾನಸ್ಫೂರ್ತಿ ಗಾಥೆ

ಉತ್ತರ ಕನ್ನಡ ಕಡೆ ಹೊರಟವರು ಈ 13 ತಾಣಗಳನ್ನು ಮನಸ್ಸಲ್ಲಿಟ್ಟುಕೊಳ್ಳಿ

ಹಸಿರು ಕಾಡು, ನೀಲಿ ಸಮುದ್ರ, ರಭಸದಿಂದ ಹರಿಯುವ ಕಾಳಿ ನದಿ, ನಿಗೂಢವಾಗಿರುವ ದಟ್ಟಾರಣ್ಯ, ಧ್ಯಾನಾಸಕ್ತರಿಗೆ ಧಾರ್ಮಿಕ ಸ್ಥಳಗಳು, ಸಂಸ್ಕೃತಿ ಪ್ರಿಯರಿಗೆ ಹಾಡು ಹಸೆ ಇತ್ಯಾದಿ ಎಲ್ಲವೂ ಸೇರಿಕೊಂಡು ಅಪರೂಪದ ಜಿಲ್ಲೆ ಎಂದೇ ಕರೆಸಿಕೊಂಡಿರುವ ಜಿಲ್ಲೆ ಉತ್ತರ ಕನ್ನಡ. ಸೌಂದರ್ಯ ಮತ್ತು ಪ್ರೀತಿ ಎರಡೂ ಧಾರಾಳವಾಗಿ ತೋರಿಸುವ ಈ ಊರಿಗೆ ಹೊರಟವರು ಗಮನಿಸಬೇಕಾದ 13 ತಾಣಗಳನ್ನು ಪಟ್ಟಿ ಮಾಡಿದ್ದೇವೆ. ಆ ಕಡೆ ಹೊರಟವರಿಗೆ ಈ ಗೈಡ್ ಉಪಯೋಗವಾಗುತ್ತದೆ. ಉತ್ತರ ಕನ್ನಡಿಗರಿಗೆ ತಮ್ಮೂರಿಗೆ ಹೆಮ್ಮೆಯಾಗುವಂತಹ ಈ ಪಟ್ಟಿಯನ್ನು ಉತ್ತರ ಕನ್ನಡದ ಚೆಲುವಿಗೆ ಅರ್ಪಿಸುತ್ತಿದ್ದೇವೆ.

1. ಧ್ಯಾನಾಸಕ್ತರ ಸಾಹಸಪ್ರಿಯರ ಮುರುಡೇಶ್ವರ

Image placeholder
image source: ashmita_chaudhury

ನೈಸರ್ಗಿಕ ಚೆಲುವು ಹಾಗೂ ಮಾನವ ನಿರ್ಮಿತ ಅದ್ಭುತದಿಂದ ಮುರುಡೇಶ್ವರ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆಯುತ್ತದೆ. 64 ಅಂತಸ್ತುಗಳ ಗೋಪುರ, ಬೃಹತ್ ಶಿವನ ಪ್ರತಿಮೆ, ಗೀತೋಪದೇಶದ ಪ್ರತಿಮೆ, ಪೌರಾಣಿಕ ಪ್ರತಿಮೆಗಳಿರುವ ಗುಹೆ, ಚಿಕ್ಕಮಕ್ಕಳಿಗೆ ಆಟವಾಡಲು ಕೃತಕ ಸಮುದ್ರ ಇವೆಲ್ಲವೂ ಇಲ್ಲಿ ನಿರ್ಮಾಣಗೊಂಡಿದೆ. ಜತೆಗೆ ಆತ್ಮಲಿಂಗದ ತುಣುಕು ಇಲ್ಲಿದೆ ಎಂಬ ಪ್ರತೀತಿ. ಇದೊಂದು ಪ್ರವಾಸಿ ತಾಣವೂ ಹೌದು ಧ್ಯಾನ ಮಾಡಲು ಸೂಕ್ತವಾದ ಅಧ್ಯಾತ್ಮ ತಾಣವೂ ಹೌದು.

ಎಲ್ಲಿದೆ?

ಮುರುಡೇಶ್ವರ ಭಟ್ಕಳ ತಾಲೂಕಿನಲ್ಲಿದೆ. ಹೊನ್ನಾವರ ತಾಲೂಕಿನಿಂದಲೂ ಹೋಗಬಹುದು. ಪೌರಾಣಿಕ ಹಿನ್ನೆಲೆ ಇರುವ ದೇವಾಲಯ, ಆಧುನಿಕತೆಯ ಮೇಳೈಸುವಿಕೆಯಿಂದ ಮುರುಡೇಶ್ವರ ಪ್ರತಿದಿನ ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುತ್ತಿದೆ .

 ಹೋಗೋದು ಹೀಗೆ!

ಭಟ್ಕಳದಿಂದ ಹೊನ್ನಾವರದತ್ತ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ 15 ಕಿ.ಮೀ. ಕ್ರಮಿಸಿ, ಎಡಕ್ಕೆ 2 ಕಿ.ಮೀ. ಹೋದರೆ ಮುರುಡೇಶ್ವರ, ಭಟ್ಕಳ ಹಾಗೂ ಹೊನ್ನಾವರದಿಂದ ಹೋಗಬಹುದು. ಸಾರಿಗೆ ಸಂಸ್ಥೆ ಬಸ್ ಇದೆ. ಕಾರು, ಆಟೋಗಳೂ ಲಭ್ಯವಿದೆ .

ನೀವು ಇದನ್ನು ಇಷ್ಟಪಡಬಹುದು: ಒಂದು ದಿನದಲ್ಲಿ ಮಹಾಬಲಿಪುರಂನಲ್ಲಿ ಏನೇನು ನೋಡಬಹುದು: ಸುವರ್ಣಲಕ್ಷ್ಮಿ ಹೇಳುತ್ತಾರೆ ಓದಿ

2. ಕಣ್ಮನ ಸೆಳೆಯುವ ವಿಶ್ವವಿಖ್ಯಾತ ಓಂ ಬೀಚ್

ಗೋಕರ್ಣದ ಓಂ ಬೀಚ್ ಈಗ ವಿಶ್ವವಿಖ್ಯಾತವಾಗಿದೆ. ಪ್ರಪಂಚದ ವಿವಿಧ ದೇಶಗಳ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಈಚಿನ ವರ್ಷಗಳಲ್ಲಿ ದೇಶದ ವಿವಿಧ ರಾಜ್ಯಗಳ ಪ್ರವಾಸಿಗರೂ ಇಲ್ಲಿಗೆ ಆಗಮಿಸುತ್ತಾರೆ. ‘ಓಂ’ ಚಿಹ್ನೆಯನ್ನು ಹೋಲುವ ಈ ಕಡಲತೀರದಲ್ಲಿ ಜಲಸಾಹಸ ಕ್ರೀಡೆಗಳೂ ಇವೆ. ಇಲ್ಲಿನ ಸೂರ್ಯಾಸ್ತದ ನೋಟ ಆಪ್ಯಾಯಮಾನ. ಕಡಲತೀರದಲ್ಲಿ ನಿಂತು ಸಮುದ್ರದಲ್ಲಿ ಮುಳುಗುವಂತೆ ಭಾಸವಾಗುವ ಸೂರ್ಯಾಸ್ತ ನೋಡಲು ಸಾಕಷ್ಟು ಜನರು ಆಗಮಿಸುತ್ತಾರೆ.

 ಎಲ್ಲಿದೆ?

ಕುಮಟಾ ತಾಲೂಕಿನ ಗೋಕರ್ಣದ ಸಮೀಪದಲ್ಲಿದೆ. ಈ ಬೀಚಿನ ಸಮೀಪದಲ್ಲಿ ಕುಡ್ಲೆ ಬೀಚ್, ಹಾಫ್‌ಮೂನ್ ಬೀಚ್, ಪ್ಯಾರಾಡೈಸ್ ಬೀಚುಗಳಿವೆ.

 ಹೋಗೋದು ಹೀಗೆ!

ಗೋಕರ್ಣದಿಂದ 7 ಕಿ.ಮೀ. ದೂರ ಇದೆ . ಕುಮಟಾ ತಾಲೂಕಿನಲ್ಲಿರುವ ಈ ಕಡಲತೀರ ತಾಲೂಕು ಕೇಂದ್ರದಿಂದ 40 ಕಿ.ಮೀ.ದೂರ ಇದೆ.

 3. ರುದ್ರ ರಮಣೀಯ ಮಾಗೋಡು ಫಾಲ್ಸ್

File:Magod Falls Yellapur.JPG

ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ಜಲಪಾತಗಳಲ್ಲಿ ಇದೂ ಒಂದು. 650 ಮೀಟರ್ ಎತ್ತರದಿಂದ ಕಪ್ಪು ಶಿಲೆಗಳ ಮೇಲೆ ಬೀಳುವ ಬೇಡ್ತಿ ನದಿ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ. ಜಲಪಾತದ ಹತ್ತಿರ ‘ಹೊಲತಿ’ ಎಂಬ ಪುರಾತನ ಕೋಟೆ ಇತ್ತು ಎಂಬ ಪ್ರತೀತಿ. ಅದಕ್ಕಾಗಿ ಇದನ್ನು ಸ್ಥಳೀಯವಾಗಿ ಹೊಲತಿ ಜೋಗ ಎಂದು ಕರೆಯುವುದು ರೂಢಿಯಲ್ಲಿದೆ. ದಟ್ಟವಾದ ಅರಣ್ಯದ ನಡುವೆ ಈ ಜಲಪಾತ ಇದೆ. ಜಲಪಾತದ ಕೆಳಭಾಗಕ್ಕೆ ಹೋಗಲು ಸಾಧ್ಯವಿಲ್ಲ. ವರ್ಷವಿಡೀ ಮಾಗೋಡ ಜಲಪಾತವನ್ನು ವೀಕ್ಷಿಸಬಹುದು.

 ಎಲ್ಲಿದೆ?

ಯಲ್ಲಾಪುರ ತಾಲೂಕಿನಲ್ಲಿದೆ. ಸಮೀಪದಲ್ಲಿ ಬೇಡ್ತಿ ಕಣಿವೆ ನೋಟವನ್ನು ಸವಿಯುವ ಜೇನುಕಲ್ಲು ಗುಡ್ಡ ಇದೆ . ವಿಶಾಲವಾದ ಕವಡಿಕೆರೆ ಇದೆ.

 ಹೋಗೋದು ಹೀಗೆ!

ಯಲ್ಲಾಪುರ ತಾಲೂಕು ಕೇಂದ್ರದಿಂದ ಕೇವಲ 16 ಕಿ.ಮೀ. ದೂರದಲ್ಲಿದೆ. ಬೆಂಗಳೂರಿನಿಂದ 416 ಕಿ.ಮೀ. ದೂರದಲ್ಲಿದೆ. ಬಸ್ ಸೌಲಭ್ಯ ಇದೆ. ಜತೆಗೆ ಕಾರು, ಜೀಪು ಯಲ್ಲಾಪುರದಲ್ಲಿ ಬಾಡಿಗೆಗೆ ಸಿಗುತ್ತವೆ.

4. ಗೋಲಾರಿ ಅಚ್ಚರಿ

ಜಲಪಾತ ವೀಕ್ಷಣೆ ಜತೆ ಚಾರಣ ಪ್ರಿಯರಿಗೆ ಉತ್ತರ ಕನ್ನಡದ ನೆಚ್ಚಿನ ತಾಣ ಇದು. ಚಾರಣಪ್ರಿಯರು ಇಲ್ಲಿನ ಬಂಡೆಗಲ್ಲುಗಳನ್ನು ಏರಿ ಮೇಲೆ ಸಾಗುತ್ತಾ ದಾರಿ ಮಧ್ಯದಲ್ಲಿ ಹರಿಯುವ ಹಳ್ಳವನ್ನು ದಾಟಬೇಕು. ಅಲ್ಲದೇ ಬೆಟ್ಟದಲ್ಲೇ ಈ ಜಲಧಾರೆ ಇರುವುದರಿಂದ ಗಿಡ ಮರಗಳ ಪೊದೆಯೊಳಗೆ ಸಾಗಿ ಫಾಲ್ಸ್ ತಲುಪಬೇಕು. ಇದರಿಂದ ಚಾರಣಕ್ಕಾಗಿಯೇ ದೂರದ ಊರುಗಳಿಂದ ಸಾಕಷ್ಟು ಜನ ಇಲ್ಲಿಗೆ ಬರುತ್ತಾರೆ.

 ಎಲ್ಲಿದೆ?

ಕಾರವಾರ ತಾಲೂಕಿನಲ್ಲಿದೆ. ಅಂಕೋಲಾದಿಂದಲೂ ಬರಬಹುದು. ಕಾರವಾರ ಅಂಕೋಲಾ ನಡುವೆ ಇರುವ ತೊಡೂರು ಗ್ರಾಮದ ಗುಡ್ಡದ ಮೇಲ್ಭಾಗದಲ್ಲಿದೆ.

 ಹೋಗೋದು ಹೀಗೆ!

ಕಾರವಾರದಿಂದ 17 ಕಿ.ಮೀ. ಅಂತರದಲ್ಲಿರುವ ತೋಡೂರು ಗ್ರಾಮಕ್ಕೆ ಸಾಗಬೇಕು. ಅಲ್ಲಿಂದ ಸುಮಾರು ನಾಲ್ಕು ಕಿ.ಮೀ.ನಷ್ಟು ಕಚ್ಛಾರಸ್ತೆಯಲ್ಲಿ ಸಾಗಿದರೆ ಅರಣ್ಯ ಪ್ರದೇಶ ಸಿಗುತ್ತದೆ. ವಾಹನಗಳಿದ್ದರೆ ಇಲ್ಲಿಯೇ ನಿಲ್ಲಿಸಿ ಸುಮಾರು 3 ಕಿ.ಮೀ ಅರಣ್ಯ ಪ್ರದೇಶದಲ್ಲಿ ಕಲ್ಲು ಬಂಡೆಗಳನ್ನು ಹತ್ತಿಳಿಯುತ್ತಾ ಮಧ್ಯದಲ್ಲಿ ಹರಿಯುವ ಹಳ್ಳಗಳನ್ನು ದಾಟುತ್ತಾ ಚಾರಣದ ಮೂಲಕ ಸಾಗಿದರೆ ಅಲ್ಲೇ ಸಿಗುತ್ತದೆ ಗೋಲಾರಿ ಫಾಲ್ಸ್. ಬಸ್ ಸೌಲಭ್ಯ ಇಲ್ಲ. ಕಾರವಾರದಿಂದ ಕಾರು, ಆಟೋಗಳಲ್ಲಿ ಹೋಗಬಹುದು.

5. ಅಪರೂಪದ ಅಪ್ಸರಕೊಂಡ

Apsarakonda Waterfalls, Honavar, Uttara Kannada District - YouTube

ಪುಟ್ಟ ಜಲಪಾತ, ಕಡಲತೀರ, ದೇವಾಲಯ, ಉದ್ಯಾನ ಇವೆಲ್ಲವುಗಳ ಸಂಗಮ ಅಪ್ಪರಕೊಂಡ. ಅರಬ್ಬಿ ಸಮುದ್ರದ ತಟದಿಂದ 500 ಮೀಟರ್ ಪೂರ್ವಕ್ಕಿರುವ ಈ ಪ್ರದೇಶದಲ್ಲಿ ಸುಮಾರು 50 ಅಡಿಯಿಂದ ಧುಮುಕುವ ಸಣ್ಣದಾದ ಮನಮೋಹಕ ಜಲಪಾತ ಪ್ರವಾಸಿಗರಿಗೆ ಮುದ ನೀಡುತ್ತದೆ. ಪುರಾತನ ಕಾಲದಲ್ಲಿ ಇಲ್ಲಿ ಅಪ್ಸರೆಯರು ಸ್ನಾನ ಮಾಡಿರುವರೆಂಬ ಪ್ರತೀತಿ. ಆದ್ದರಿಂದ ಈ ಪ್ರದೇಶಕ್ಕೆ ಅಪ್ಸರಕೊಂಡ ಎಂದು ಹೆಸರು ಬಂದಿದೆ ಎಂಬ ಕಥೆಯೂ ಇದೆ. ಇಲ್ಲಿನ ಸಮುದ್ರ ತೀರದಲ್ಲಿ ಸೂರ್ಯಾಸ್ತ ನೋಡುವುದೇ ಒಂದು ವಿಶೇಷ ಅನುಭವ.

 ಎಲ್ಲಿದೆ?

ಹೊನ್ನಾವರ ತಾಲೂಕಿನಲ್ಲಿದೆ. ಅರಣ್ಯ ಇಲಾಖೆ ಇಲ್ಲಿ ಸುಂದರ ಉದ್ಯಾನವನ್ನು ನಿರ್ಮಿಸಿದೆ. ಚಿಪ್ಪಿಕಲ್ಲುಗಳನ್ನು ಬಳಸಿ ಗೋಡೆ, ಆಸನಗಳನ್ನು ನಿರ್ಮಾಣ ಮಾಡಲಾಗಿದೆ.

 ಹೋಗೋದು ಹೀಗೆ!

ಹೊನ್ನಾವರದಿಂದ ಭಟ್ಕಳದತ್ತ ಹೋಗುವಾಗ ಕಾಸರಕೋಡ ಎಂಬಲ್ಲಿ ಬಲಕ್ಕೆ ಹೊರಳಿ 3 ಕಿ.ಮೀ. ಕ್ರಮಿಸಿದರೆ ಅಪ್ಸರಕೊಂಡದಲ್ಲಿ ನೀವಿರುತ್ತೀರಿ. ಹೊನ್ನಾವರದಿಂದ 8 ಕಿ.ಮೀ. ದೂರದಲ್ಲಿದೆ. ಹೊನ್ನಾವರದಿಂದ ಕಾರು, ಆಟೋಗಳಲ್ಲಿ ಪ್ರಯಾಣಿಸಬಹುದು.

6. ಉಂಚಳ್ಳಿ ಮಿಂಚುಳ್ಳಿ

ನಿಶ್ಯಬ್ದವಾದ ಕಾಡಿನಲ್ಲಿ ಅಘನಾಶಿನಿ ನದಿ 116 ಮೀಟರ್ ಆಳಕ್ಕೆ ಒಮ್ಮೆಲೇ ಜಿಗಿಯುತ್ತದೆ. ಬಹುದೂರದವರೆಗೆ ಕೇಳುವ ಆರ್ಭಟದ ಸದ್ದಿಗೆ ಇದನ್ನು ಕಪ್ಪೆಜೋಗ ಎಂದು ಸ್ಥಳೀಯರು ಕರೆಯುತ್ತಾರೆ. ಕ್ರಿ.ಶ. 1845 ರಲ್ಲಿ ಬ್ರಿಟಿಷ್ ಕಲೆಕ್ಟರ್‌ನಾಗಿದ್ದ ಲೂಸಿಂಗ್ ಟನ್ ಎಂಬಾತ ಈ ಜಲಪಾತಕ್ಕೆ ಪ್ರಚಾರವನ್ನು ನೀಡಿದ. ಅದಕ್ಕಾಗಿ ಇದನ್ನು ‘ಲೂಸಿಂಗ್ಟನ್ ಜಲಪಾತ’ ಎಂದೂ ಕರೆಯಲಾಗುತ್ತದೆ. ಬೇಡ್ತಿ- ಅಘನಾಶಿನಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಜಲಪಾತ ಇರುವುದರಿಂದ ನಿತ್ಯಹರಿದ್ವರ್ಣ ಕಾಡುಗಳು, ದೈತ್ಯಾಕಾರದ ಬಂಡೆಗಳು, ವೈವಿಧ್ಯಮಯವಾದ ಪ್ರಾಣಿಗಳು, ಪಕ್ಷಿ ಸಂಕುಲಗಳು ಇಲ್ಲಿ ಆಶ್ರಯ ಪಡೆದಿವೆ.

 ಎಲ್ಲಿದೆ?

ಶಿರಸಿ ತಾಲೂಕಿನಲ್ಲಿದೆ. ಸಿದ್ದಾಪುರದಿಂದಲೂ ಈ ಜಲಪಾತಕ್ಕೆ ಹೋಗಬಹುದು. ದಟ್ಟವಾದ ನಿತ್ಯ ಹರಿದ್ವರ್ಣ ಅರಣ್ಯ, ಸದಾ ಪ್ರವಹಿಸುವ ಅಘನಾಶಿನಿ ನದಿಯನ್ನು ಕಾಣಲು ಸಾಧ್ಯ .

ಹೋಗೋದು ಹೀಗೆ!

ಶಿರಸಿಯಿಂದ 30 ಕಿ.ಮೀ. ದೂರದಲ್ಲಿದೆ. ಬೆಂಗಳೂರಿನಿಂದ 438 ಕಿ.ಮೀ. ದೂರ ಇದೆ. ಶಿರಸಿಯಿಂದ ಕಾರು, ಜೀಪ್‌ಗಳಲ್ಲಿ ಪ್ರಯಾಣಿಸಬಹುದು.

7. ಸಹಸ್ರಲಿಂಗಗಳ ಚಮತ್ಕಾರ

ವರ್ಷವಿಡೀ ಪ್ರವಹಿಸುವ ಶಾಲ್ಮಲಾ ನದಿಯಲ್ಲಿ ಶಿವನ ಲಿಂಗಗಳು, ಬಸವನ ಮೂರ್ತಿಗಳು, ಈಶ್ವರನ ಮೂರ್ತಿಗಳು ಸಾಕಷ್ಟು ಸಂಖ್ಯೆಯಲ್ಲಿವೆ. ನದಿಯಲ್ಲಿ ಸುಮಾರು 1 ಕಿ.ಮೀ. ದೂರಕ್ಕೆ ಇವು ಹರಡಿಕೊಂಡಿವೆ. ನದಿಯ ನಡುವೆ ಇರುವ ಬಂಡೆಗಲ್ಲುಗಳಲ್ಲಿ ಲಿಂಗಗಳು ಹಾಗೂ ಬಸವನ ಮೂರ್ತಿಗಳನ್ನು ಕೆತ್ತಲಾಗಿದೆ. ಸೋದೆ ಅರಸರ ಕಾಲಕ್ಕೆ ಇಲ್ಲಿ ಶಿವಲಿಂಗಗಳು ನಿರ್ಮಾಣವಾದವು.

 ಎಲ್ಲಿದೆ?

ಶಿರಸಿ ತಾಲೂಕಿನಲ್ಲಿದೆ. ಯಲ್ಲಾಪುರದಿಂದಲೂ ಬರಬಹುದು. ಶಾಲ್ಮಲಾ ನದಿಗೆ ಮಳೆಗಾಲದಲ್ಲಿ ಪ್ರವಾಹ ಬಂದಾಗ ಲಿಂಗಗಳು ನೀರಿನಲ್ಲಿ ಮುಳುಗಿರುತ್ತವೆ. ಸೆಪ್ಟೆಂಬರ್ ನಿಂದ ಮಳೆಗಾಲದ ತನಕ ಲಿಂಗಗಳನ್ನು ನೋಡಲು ಸಕಾಲವಾಗಿದೆ .

 ಹೋಗುವುದು ಹೇಗೆ?

ಶಿರಸಿಯಿಂದ ಯಲ್ಲಾಪುರ ಮಾರ್ಗವಾಗಿ 12 ಕಿ.ಮೀ. ತೆರಳಿ ಎಡಗಡೆ 3 ಕಿ.ಮೀ. ಕ್ರಮಿಸಿದರೆ ಸಹಸ್ರಲಿಂಗ ಸಿಗುತ್ತದೆ. ಯಲ್ಲಾಪುರದಿಂದ ಸಹ ಸಹಸ್ರಲಿಂಗಕ್ಕೆ ಬರಬಹುದು .

8. ಬೆರಗಿನ ಸಿಂಥೇರಿ ರಾಕ್ಸ್

ಬೃಹದಾಕಾರದ ಬಂಡೆ ನೀರನ್ನು ಒಳಗೆ ತೆಗೆದುಕೊಂಡು ಹೊರಗೆ ಬಿಡುವಂತೆ ತೋರುವ ನೋಟ ಇಲ್ಲಿದೆ. ಜತೆಗೊಂದು ಪುಟ್ಟ ಜಲಪಾತವೂ ಇದೆ. ಕಾವೇರಿ ನದಿಯ ನೀರು ಈ ಅಚ್ಚರಿಗೆ ಕಾರಣವಾಗಿದೆ. ದಟ್ಟ ಅರಣ್ಯ ಸೊಬಗನ್ನು ಇನ್ನಷ್ಟು ಹೆಚ್ಚಿಸುತ್ತದೆ. ಬೃಹತ್ ಬಂಡೆಗೆ ಕಟ್ಟಿಕೊಂಡಿರುವ ನೂರಾರು ಜೇನುಗೂಡುಗಳು ಸಹ ವಿಶೇಷವಾಗಿದೆ. ಕಾಳಿ ಹುಲಿ ರಕ್ಷಿತ ಪ್ರದೇಶದಲ್ಲಿ ಇರುವ ಸಿಂಥೇರಿ ರಾಕ್ಸ್ ಕೂಲ್ ಕೂಲ್ ಅನುಭವ ನೀಡುತ್ತದೆ . ಜಲಪಾತಕ್ಕೆ ನೂರಾರು ಮೆಟ್ಟಿಲುಗಳನ್ನು ಇಳಿದು ಸಾಗುವ ಮಾರ್ಗ ಮಧ್ಯೆ ವಿವಿಧ ರೀತಿಯ ಬಂಡೆಗಳ ತುಣುಕುಗಳನ್ನು ಅವುಗಳ ವಿವರಗಳೊಂದಿಗೆ ಪ್ರದರ್ಶನಕ್ಕೆ ಇಡಲಾಗಿದೆ.

 ಎಲ್ಲಿದೆ?

ಜೋಯಿಡಾ ತಾಲೂಕಿನಲ್ಲಿದೆ. ದಾಂಡೇಲಿಯಿಂದಲೂ ಹೋಗಬಹುದು. ಸಮೀಪದಲ್ಲಿ ಉಳವಿ ಚನ್ನಬಸವೇಶ್ವರ ದೇವಾಲಯ ಇದೆ.

 ಹೋಗುವುದು ಹೇಗೆ?

ಜೋಯಿಡಾದಿಂದ 20 ಕಿ.ಮೀ.ದೂರದಲ್ಲಿದೆ. ಜೋಯಿಡಾ ದಾಂಡೇಲಿ ನಡುವೆ ಇರುವ ಪೊಟೋಲಿ ಕ್ರಾಸ್‌ನಿಂದ ಉಳವಿ ರಸ್ತೆಯಲ್ಲಿ 15 ಕಿ.ಮೀ. ಸಾಗಿದರೆ ಸಿಂಥೇರಿ ರಾಕ್ ಎದುರಿಗಿರುತ್ತೀರಿ. ಉಳವಿಗೆ ಬಸ್ ಸೌಲಭ್ಯ ಇದೆ. ಬಸ್ಸಿನಲ್ಲಿ ಪ್ರಯಾಣಿಸಿದರೆ 3-4 ಕಿ.ಮೀ. ನಡೆಯಬೇಕು.

9. ಯಾಣ ಎಂಬ ರಮ್ಯ ತಾಣ

ಭೈರವೇಶ್ವರ ಹಾಗೂ ಮೋಹಿನಿ ಎರಡು ಬೃಹತ್ ಶಿಖರಗಳು. 64ರಷ್ಟು ಚಿಕ್ಕಪುಟ್ಟ ಶಿಖರಗಳು ಇಲ್ಲಿನ ವಿಶೇಷ. ಭೈರವೇಶ್ವರ ಶಿಖರದಲ್ಲಿ ಗುಹಾಂತರ್ಗತ ದೇವರು. ಭೈರವೇಶ್ವರನ ಜಟೆಯ ಮೇಲೆ ಗಂಗೆ ಜಿನುಗುತ್ತಿರುವುದು ಅಚ್ಚರಿ. ಶಿಖರದ ರಚನೆ ಅದ್ಭುತವಾದುದು. ನಿತ್ಯಹರಿದ್ವರ್ಣ ಕಾಡು, ಸದಾ ಹರಿಯುತ್ತಿರುವ ನೀರು ಇಲ್ಲಿನ ಸೊಬಗನ್ನು ಇಮ್ಮಡಿಗೊಳಿಸಿದೆ. ಲೈಮ್ ಸ್ಟೋನ್ ನಿಂದ ನಿರ್ಮಾಣಗೊಂಡ ಶಿಖರಗಳಿವು. ಈ ಶಿಲಾ ರಚನೆ ಅದ್ಭುತವಾಗಿದೆ.

 ಎಲ್ಲಿದೆ?

ಕುಮಟಾ ತಾಲೂಕಿನಲ್ಲಿದೆ ಯಾಣ. ಕುಮಟಾದಿಂದ ಪ್ರಯಾಣಿಸಿದರೆ ಕಾಲ್ನಡಿಗೆಯಲ್ಲಿ ಗುಡ್ಡ ಏರಬೇಕು. ಆದರೆ, ಶಿರಸಿಯಿಂದ ಹೆಗಡೆಕಟ್ಟಾ ವಡ್ಡಿಘಾಟ ಮಾರ್ಗವಾಗಿ ಬಂದರೆ ಯಾಣಕೆ ಸರಾಗವಾಗಿ ಹೋಗಬಹುದು.

 ಹೋಗುವುದು ಹೇಗೆ?

ಕುಮಟಾ ತಾಲೂಕು ಕೇಂದ್ರ 26 ಕಿ.ಮೀ ದೂರದಲ್ಲಿದೆ. ಕುಮಟಾ ಶಿರಸಿ ರಸ್ತೆಯ ಆನೆಗುಂದಿ ಬಳಿಯಿಂದ 12 ಕಿ.ಮೀ ದೂರ ಇದೆ. 2 ಕಿ.ಮೀ. ಕಾಲ್ನಡಿಗೆಯಲ್ಲಿ ಸಾಗಬೇಕು. ಶಿರಸಿ- ವಡ್ಡಿಗಟ್ಟ- ಆಚವೆ ರಸ್ತೆಯಿಂದಲೂ ಯಾಣಕ್ಕೆ ಬರಬಹುದು. ಶಿರಸಿಯಿಂದ 35 ಕಿ.ಮೀ. ದೂರ ಇದೆ. ಬಸ್ ಸೌಲಭ್ಯ ಇದೆ. ಕುಮಟಾ ಹಾಗೂ ಶಿರಸಿಯಿಂದ ಕಾರು ಹಾಗೂ ಜೀಪ್‌ಗಳನ್ನು ಬಾಡಿಗೆ ಪಡೆದು ಹೋಗಬಹುದು .

10. ಅಣುಶಕ್ತಿ ಉತ್ಪಾದನಾ ಕೇಂದ್ರ ಕೈಗಾ

ರಾಜ್ಯದ ಪ್ರಥಮ ಹಾಗೂ ಏಕೈಕ ಅಣು ವಿದ್ಯುತ್ ಯೋಜನೆ ಇದು. ತಲಾ 220 ಮೆ.ವ್ಯಾ.ಗಳ 4 ವಿದ್ಯುತ್ ಘಟಕಗಳು ಇಲ್ಲಿವೆ. ಈಗ ತಲಾ 100 ಮೆ.ವ್ಯಾಗಳ 5 ಹಾಗೂ 6ನೇ ವಿದ್ಯುತ್ ಘಟಕಗಳ ನಿರ್ಮಾಣ ಪ್ರಕ್ರಿಯೆಗೆ ಚಾಲನೆ ದೊರೆತಿದೆ. 2000ದಲ್ಲಿ ಅಣುವಿದ್ಯುತ್ ಘಟಕಗಳ ನಿರ್ಮಾಣ ಕಾರ್ಯ ಆರಂಭವಾಯಿತು. ಈಗ ಪೂರ್ಣ ಪ್ರಮಾಣದಲ್ಲಿ ನಾಲ್ಕು ಘಟಕಗಳು ವಿದ್ಯುತ್ ಉತ್ಪಾದಿಸುತ್ತಿವೆ. ದಕ್ಷಿಣ ಭಾರತದ ವಿದ್ಯುತ್ ಜಾಲಕ್ಕೆ ವಿದ್ಯುತ್ ಪೂರೈಕೆ ಮಾಡುತ್ತಿದೆ .

 ಎಲ್ಲಿದೆ?

ಕಾರವಾರ ತಾಲೂಕಿನಲ್ಲಿದೆ. ಯಲ್ಲಾಪುರ ತಾಲೂಕಿಗೂ ಸಮೀಪದಲ್ಲಿದೆ. ಯಲ್ಲಾಪುರ ಹಾಗೂ ಕಾರವಾರದ ಗಡಿ ಪ್ರದೇಶದಲ್ಲಿದೆ. ದಟ್ಟವಾದ ಅರಣ್ಯ ಹಾಗೂ ಕಾಳಿ ನದಿ ತೀರದಲ್ಲಿ ಅಣು ವಿದ್ಯುತ್ ಸ್ಥಾವರ ಇರುವುದು ವಿಶೇಷವಾಗಿದೆ.

 ಹೋಗುವುದು ಹೇಗೆ?

ಸೂಕ್ಷ್ಮ ಪ್ರದೇಶವಾಗಿರುವುದರಿಂದ ಹೋಗುವ ಮುನ್ನ ಪರವಾನಗಿ ಪಡೆಯಬೇಕು. ಕಾರವಾರದಿಂದ 50 ಕಿ.ಮೀ, ಯಲ್ಲಾಪುರದಿಂದ 55 ಕಿ.ಮೀ. ದೂರದಲ್ಲಿದೆ. ಕಾರವಾರ ಅಥವಾ ಯಲ್ಲಾಪುರದಿಂದ ಕಾರು ಬಾಡಿಗೆ ಪಡೆದು ಪ್ರಯಾಣಿಸಬಹುದು. ಕೈಗಾ ಅಣು ವಿದ್ಯುತ್ ಸ್ಥಾವರಕ್ಕೆ ಸಮೀಪ ಅಂದರೆ ಮಲ್ಲಾಪುರ ಹಾಗೂ ಕದ್ರಾಕ್ಕೆ ಬಸ್ ಸೌಲಭ್ಯ ಇದೆ. ಅಲ್ಲಿಂದ ಆಟೋ ಅಥವಾ ಕಾರಿನಲ್ಲಿ ತೆರಳಬಹುದು .

11. ರಾಜ್ಯದ ಏಕೈಕ ಯುದ್ಧ ನೌಕಾ ಮ್ಯೂಸಿಯಂ

ವಿಶಾಖಪಟ್ಟಣ ಹೊರತುಪಡಿಸಿದರೆ ಸುಸಜ್ಜಿತ ಯುದ್ಧನೌಕಾ ವಸ್ತು ಸಂಗ್ರಹಾಲಯ ಇರುವುದು ಇಲ್ಲೇ. ಇದು ರಾಜ್ಯದ ಏಕೈಕ ಯುದ್ಧ ನೌಕೆ ವಸ್ತು ಸಂಗ್ರಹಾಲಯ. ಭಾರತ- ಪಾಕ್ ನಡುವೆ ನಡೆದ ಯುದ್ಧದಲ್ಲಿ ಪಾಲ್ಗೊಂಡು ನಿವೃತ್ತಿ ಹೊಂದಿದ ಐಎನ್‌ಎಸ್‌ ಚಾಪೆಲ್ ನೌಕೆಯನ್ನು ಪ್ರದರ್ಶನಕ್ಕಿಡಲಾಗಿದೆ. ಯುದ್ದ ನೌಕೆಯ ಒಳಗಡೆ ತೆರಳಿ ಪ್ರವಾಸಿಗರು ಕ್ಷಿಪಣಿ ಉಡಾವಣೆ ತಂತ್ರಜ್ಞಾನ, ಗನ್‌ಗಳು, ಎಲ್ಲವನ್ನೂ ವೀಕ್ಷಿಸಬಹುದು. ಭಾರತೀಯ ನೌಕಾಪಡೆಯ ಬಗ್ಗೆ ಕಿರುಚಿತ್ರವನ್ನೂ ಪ್ರದರ್ಶಿಸಲಾಗುತ್ತದೆ.

 ಎಲ್ಲಿದೆ?

ಕಾರವಾರ ನಗರಕ್ಕೆ ಹೊಂದಿಕೊಂಡು ಇರುವ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿದೆ. ವಿಶಾಲವಾದ ಕಡಲತೀರ, ಸಾಗರ ಮತ್ಸ್ಯಾಲಯ, ಜಲ ಸಾಹಸ ಕ್ರೀಡಾ ಚಟುವಟಿಕೆಗಳು ಸಮೀಪದಲ್ಲಿವೆ. ರಾಕ್ ಗಾರ್ಡನ್ ಸಹ ಪಕ್ಕದಲ್ಲೇ ಇದೆ. ಈ ಸಂಗ್ರಹಾಲಯದ ಪಕ್ಕದಲ್ಲಿ ಈಗ ಯುದ್ಧ ವಿಮಾನ ವಸ್ತುಸಂಗ್ರಹಾಲಯ . ನಿರ್ಮಾಣವಾಗುತ್ತಿರುವುದು ವಿಶೇಷವಾಗಿದೆ .

 ಹೋಗೋದು ಹೀಗೆ!

ಕಾರವಾರಕ್ಕೆ ಆಗಮಿಸಿದರೆ ಕಾಲ್ನಡಿಗೆಯಲ್ಲಿ ಹೋಗಬಹುದು. ನಗರದಿಂದ ಕೇವಲ ಅರ್ಧ ಕಿ.ಮೀ. ದೂರ ಇದೆ . ಕಾರವಾರ- ಗೋವಾ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡೇ ಇದೆ .

 12. ದೇಶದ ಅತಿದೊಡ್ಡ ನೌಕಾನೆಲೆ ಸೀಬರ್ಡ್

ಏಷ್ಯಾದ ಅತಿ ದೊಡ್ಡದಾದ ನೌಕಾನೆಲೆ ಇದು. ಐಎನ್ಎಸ್ ಕದಂಬ ಎಂದು ಹೆಸರಿಸಲಾಗಿದೆ. ಹಡಗನ್ನು ಭೂಮಿಯ ಮೇಲೆ ತಂದು ದುರಸ್ತಿ ಮಾಡುವ ತಂತ್ರಜ್ಞಾನ(ಶಿಪ್ ಲಿಫ್ಟ್), ಯುದ್ಧ ನೌಕೆಗಳು ತಂಗಲು ಡಾಕ್ ಇಲ್ಲಿದೆ. ದೇಶದ ಅತಿ ದೊಡ್ಡ ವಿಮಾನ ವಾಹಕ ಯುದ್ಧ ನೌಕೆ ಐಎನ್‌ಎಸ್ ವಿಕ್ರಮಾದಿತ್ಯ ಇಲ್ಲಿ ನೆಲೆಗೊಂಡಿದೆ. ನೌಕಾನೆಲೆಯ 2ನೇ ಹಂತದ ಕಾಮಗಾರಿ ಆರಂಭಗೊಂಡಿದ್ದು, ವಿಮಾನ ನಿಲ್ದಾಣ, ಡಾಕ್ ವಿಸ್ತರಣೆ, ಶಸ್ತ್ರಾಸ್ತ್ರಕೋಠಿ ಮತ್ತಿತರ ನಿರ್ಮಾಣ ಕಾಮಗಾರಿ ನಡೆಯಲಿದೆ.

 ಎಲ್ಲಿದೆ?

ಕಾರವಾರ, ಅಂಕೋಲಾ ತಾಲೂಕಿನ 6 ಕಿ.ಮೀ.ಉದ್ದಕ್ಕೆ ಈ ನೌಕಾನೆಲೆ ವಿಸ್ತರಿಸಿದೆ. ಅರಬ್ಬಿ ಸಮುದ್ರದ ತೀರದುದ್ದಕ್ಕೂ ವ್ಯಾಪಿಸಿದೆ. ಪಾಕಿಸ್ತಾನದ ಕ್ಷಿಪಣಿಗಳ ರೇಂಜ್‌ನಿಂದ ದೂರ ಇರುವುದು ಈ ನೌಕಾ ನೆಲೆಯ ವಿಶೇಷ.

 ಹೋಗೋದು ಹೀಗೆ!

ಸೂಕ್ಷ್ಮ ಯೋಜನೆಯಾಗಿರುವುದರಿಂದ ಭದ್ರತಾ ಕಾರಣಗಳಿಂದ ಹೋಗುವ ಮುನ್ನ ಪರವಾನಗಿ ಪಡೆಯಬೇಕು. ಕಾರವಾರ- ಅಂಕೋಲಾ ಮಾರ್ಗದಲ್ಲಿ ನೌಕಾನೆಲೆ ಇದೆ. ಜಿಲ್ಲಾ ಕೇಂದ್ರ ಕಾರವಾರದಿಂದ 15 ಕಿ.ಮೀ, ಬೆಂಗಳೂರಿನಿಂದ 460 ಕಿ.ಮೀ.ದೂರದಲ್ಲಿದೆ. ಗೋವಾದ ದಾಂಬೋಲಿಂ ಇಲ್ಲಿಗೆ ಸಮೀಪದ ವಿಮಾನ ನಿಲ್ದಾಣವಾಗಿದ್ದು, ಇಲ್ಲಿಂದ 110 ಕಿಲೋ ಮೀಟರ್ ದೂರ ಇದೆ.

 13. ಸುಂದರ, ಭಯಂಕರ ಕಾಳಿ ನದಿ

Dandeli, Kali, River, Karnataka, India, Greenery

ವೈಟ್ ರಿವರ್ ರಾಫ್ಟಿಂಗ್‌ಗೆ ಕಾಳಿ ನದಿ ಹೇಳಿ ಮಾಡಿಸಿದ ತಾಣ. ಬಂಡೆಗಲ್ಲುಗಳ ನಡುವೆ ಇಳಿಜಾರಿನಲ್ಲಿ ರಾಫ್ಟಿಂಗ್ ಮಾಡುವ ಅವಕಾಶ ಇಲ್ಲಿ ಮಾತ್ರ ಸಿಗಲು ಸಾಧ್ಯ. ಸುಪಾ ಅಣೆಕಟ್ಟಿನಿಂದ ನೀರು ಬಿಡುಗಡೆ ಮಾಡಿದಾಗ ರಾಫ್ಟಿಂಗ್ ನಡೆಸುವ ಮಜವೇ ಬೇರೆ. ಈಚೆಗೆ ಅಂತಾರಾಷ್ಟ್ರೀಯ ಮಟ್ಟದ ರಾಪ್ಟಿಂಗ್ ಸ್ಪರ್ಧೆಯೂ ಇಲ್ಲಿ ನಡೆದಿದೆ . ಆ ಮೂಲಕ ಕಾಳಿ ನದಿ ರಾಪ್ಟಿಂಗ್‌ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ. ದೇಶ, ವಿದೇಶಗಳಿಂದ ಜನ ಇಲ್ಲಿ ರಾಪ್ಟಿಂಗ್‌ಗಾಗಿ ಆಗಮಿಸುತ್ತಾರೆ .

 ಎಲ್ಲಿದೆ?

ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಲ್ಲಿದೆ. ದಾಂಡೇಲಿಯೂ ಸಮೀಪದಲ್ಲಿದೆ. ದಟ್ಟ ಅರಣ್ಯ ನಡುವೆ ಪ್ರವಹಿಸುವ ಕಾಳಿ ನದಿ, ಕಾಡು ಪ್ರಾಣಿಗಳನ್ನೂ ಕಾಣಲು ಸಾಧ್ಯ.

 ಹೋಗೋದು ಹೀಗೆ!

ಜೋಯಿಡಾ ತಾಲೂಕು ಕೇಂದ್ರದಿಂದ 20 ಕಿ.ಮೀ.ದೂರದ ಗಣೇಶ ಗುಡಿಯಿಂದ ರಾಫ್ಟಿಂಗ್ ಆರಂಭವಾಗುತ್ತದೆ . ಗಣೇಶ ಗುಡಿ ಜಿಲ್ಲಾಕೇಂದ್ರ ಕಾರವಾರದಿಂದ 100 ಕಿ.ಮೀ , ಹುಬ್ಬಳ್ಳಿ ಯಿಂದ 15 ಕಿ.ಮೀ. ದೂರದಲ್ಲಿದೆ. ಬಸ್ ಸೌಲಭ್ಯ ಇದೆ. ದಾಂಡೇಲಿ, ಜೋಯಿಡಾದಿಂದ ಕಾರು, ಜೀಪ್ ಬಾಡಿಗೆ ಪಡಯಬಹುದು.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. 

ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button