ಸಂಪಿಗೆಯ ಅಜ್ಜನ ಜತೆ ಮಲ್ನಾಡಿನ ಪ್ರೇಮಿಗಳು: ಹುಮ್ಮಸ್ಸಿನ ಹುಡುಗ ಸುಜಯ್ ಬರೆದ ಎರಡು ಪ್ರವಾಸ ಪ್ರಸಂಗಗಳು
ನೀವು ಯಾವೂರಲ್ಲೇ ಇದ್ದರೂ ಸುತ್ತಮುತ್ತ ನೋಡುವ, ಅಚ್ಚರಿಗಳನ್ನು ಗಮನಿಸುವ ಮನಸ್ಸಿದ್ದರೆ ಎಲ್ಲಾ ಪ್ರವಾಸಗಳು ಖುಷಿಯನ್ನೇ ಉಳಿಸುತ್ತವೆ. ಅಂಥಾ ಎರಡು ಮನಸ್ಸು ಮುಟ್ಟುವ ಪ್ರಸಂಗಗಳನ್ನು ಸುಜಯ್ ಪಿ ಬರೆದಿದ್ದಾರೆ. ಈ ಕತೆಗಳು ತುಂಬಾ ದಿನ ಮನಸ್ಸಲ್ಲಿ ಉಳಿಯುತ್ತವೆ.
1. ಸಾಗರದ ಮಳೆ ಮತ್ತು ಸಂಪಿಗೆಯ ಅಜ್ಜ.
ಕಡು ಹಳದಿ ಸಂಪಿಗೆ ಹೂವೆಂದರೆ ಕಾರಣವಿಲ್ಲದ ಪ್ರೀತಿ.
ಬಾಲ್ಯದಲ್ಲಿ ಅಜ್ಜಿಮನೆಯ ಎದುರಿನ ಕೆರೆಯ ಬದಿಯಲ್ಲಿದ್ದ ದೊಡ್ಡ ಸಂಪಿಗೆ ಮರದಲ್ಲಿ ಅರಳುತಿದ್ದ ಬೆರಳೆಣಿಕೆಯ ಸಂಪಿಗೆ ಹೂಗಳ ಪರಿಮಳವೇ ಇದಕ್ಕೆ ಕಾರಣವಿರಬಹುದೆಂದು ಅಸ್ಪಷ್ಟ ಅಂದಾಜಿದೆ.
ಆ ಪರಿಮಳವೇ ಹಳದಿ ಬಣ್ಣವೆಂದು ನಂಬಿಸುವಷ್ಟು ಪರಿಮಳವಿತ್ತು.
ಆ ಸಂಪಿಗೆ ಹೂವಿಗೆ ಎಷ್ಟು ಹೆಸರಿತ್ತೆಂದರೆ, ಕೆರೆಗೆ ಬಿದ್ದ ಹೂವನ್ನೂ ಕೋಲು ಹಿಡಿದು ಮೇಲೆತ್ತುತ್ತಿದ್ದ ದಿನಗಳಿತ್ತು.
ಕಡು ಹಳದಿ ಬಣ್ಣದ ಆ ಸಂಪಿಗೆಗೆ ಮೂಗಿಟ್ಟು ಧೀರ್ಘವಾಗಿ ಉಸಿರೆಳೆದರೆ ನೆತ್ತಿ ನೋಯುವಷ್ಟು ಘಾಟು. ಅದೊಂಥರ ಅಮಲೇ ಸರಿ.
ಈಗೇಕೆ ಸಂಪಿಗೆ ಹೂವು ನೆನಪಾಯಿತೆಂದರೆ ಅದಕ್ಕೂ ಕಾರಣವಿದೆ.
ಕಳೆದ ಮಳೆಗಾಲ ಜೋಗ ನೋಡಬೇಕೆಂದು ಆಸೆಯಾಗಿ ಸಾಗರದಿಂದ ಜೋಗಕ್ಕೆ ಬಸ್ಸೇರಿದ್ದೆ, ಕಳೆದ ವರ್ಷದ ಜಡಿಮಳೆ ಅದು. ಬಸ್ಸಲ್ಲಿ ಸೀಟು ಸಿಕ್ಕಿತು. ಹತ್ತು ರೂಪಾಯಿಯ ಹುರಿದ ಕಡಲೆಕಾಳಿನ ಪ್ಲಾಸ್ಟಿಕ್ ಕಟ್ಟೊಂದು ಕೈಯಲ್ಲಿತ್ತು, ಸಿಪ್ಪೆಯನ್ನು ಬಸ್ಸಲ್ಲಿ ಎಸೆಯಬೇಡಿ ಎಂದು ಅದಕ್ಕೂ ಒಂದು ಪೇಪರ್ ಕೊಟ್ಟಿದ್ದ ಕಡಲೆ ಮಾರುವವ.
ತುಂಬಿದ ಬಸ್ಸಲ್ಲಿ ಕಡಲೆಯ ಸಿಪ್ಪೆ ತೆಗೆದು ಕಡಲೆ ತಿಂದು ಸಿಪ್ಪೆಯನ್ನು ಪೇಪರಿಗೆ ಹಾಕುವಷ್ಟರಲ್ಲಿ ಹತ್ತು ರೂಪಾಯಿಗೆ ಎಷ್ಟು ಕಡಲೆ ಕೊಟ್ಟಿದ್ದಾನಲ್ವಾ ಅನಿಸಿಬಿಟ್ಟಿತು ನನಗೆ. ಅಷ್ಟು ಸಮಯ ಹಿಡಿದಿತ್ತು ಕಡಲೆಯ ಸಹವಾಸ.
ಕಡಲೆಯೊಳಗೆ ಮುಳುಗಿದ್ದ ನನ್ನನ್ನು ಬಸ್ಸೊಳಗೆ ಮತ್ತೆ ಎಳೆದು ತಂದಿದ್ದು ಇದೇ ಸಂಪಿಗೆಯ ಘಮ.
ಪ್ರಯಾಣಿಕರೇ ಕಷ್ಟದಲ್ಲಿ ನಿಂತಿದ್ದ ಆ ಬಸ್ಸಲ್ಲಿ ಒಂದು ಅಜ್ಜ ಸಂಪಿಗೆ ಮಾರುತ್ತಾ ಬಂದಿದ್ದರು.
ಸಂಪಿಗೆಯ ಪರಿಮಳ ನಾನು ಅಜ್ಜನನ್ನು ದಿಟ್ಟಿಸುವಂತೆ ಮಾಡಿಬಿಟ್ಟಿತ್ತು.
ಅದೇ ಕಡು ಹಳದಿ ಸಂಪಿಗೆ, ಮತ್ತದೇ ಘಮ. ಬಾಲ್ಯದಲ್ಲಿ ಕಂಡ ಕೆರೆಗೆ ವಾಲಿದ್ದ ಆ ಸಂಪಿಗೆ ಮರವನ್ನು ಮತ್ತೆ ನೆನಪಿಸುವಷ್ಟು.
ಹತ್ತು ರುಪಾಯಿಗೆ ಮೂರು ಹೂವೆಂದರು ಅಜ್ಜ.
ಸಾಗರದ ಈ ಜಡಿಮಳೆಯಲ್ಲಿ ಮುಕ್ಕಾಲು ಒದ್ದೆಯಾಗಿ ಚಳಿಯಲ್ಲಿ ನಡುಗುತ್ತಿದ್ದ ನನಗೇಕೆ ಈ ಸಂಪಿಗೆ ಹೂವಿನ ಉಸಾಬರಿ ಎಂದು ಸ್ವಲ್ಪವೂ ಯೋಚಿಸಲೇ ಇಲ್ಲ ನನ್ನ ಮನಸ್ಸು.
ಹತ್ತು ರೂಪಾಯಿಯ ನೋಟೊಂದನ್ನು ಅಜ್ಜನ ಕೈಗಿಟ್ಟಿದ್ದೆ.
ಇನ್ನೂ ಸರಿಯಾಗಿ ಅರಳದ ಮೂರು ಕಡು ಹಳದಿ ಸಂಪಿಗೆ ಹೂಗಳು ಕಂಪು ಬೀರುತ್ತಾ ನನ್ನ ಕೈಯಲ್ಲಿತ್ತು.
ಅಜ್ಜ ಮುಂದೆ ಹೋದರು.
ಕೈಯಲ್ಲಿದ್ದ ಕಡಲೆಯ ಪ್ಲಾಸ್ಟಿಕ್ ಕವರನ್ನು ಕ್ಲೀನ್ ಮಾಡಿ ಹೂಗಳನ್ನು ಅದರೊಳಗೆ ಇಟ್ಟು ಬ್ಯಾಗೊಳಗೆ ಹಾಕಿಬಿಟ್ಟೆ.
ಅಂದು ಸಂಪಿಗೆ ಹೂವು ತೆಗೆದುಕೊಂಡ ಕಾರಣ ಕೇಳಿದರೆ ದೇವರಾಣೆ ನನಗೆ ತಿಳಿದಿಲ್ಲ.
ಬಸ್ಸಲ್ಲಿ ನನ್ನ ಆಚೆ ಬದಿಯ ಸೀಟಲ್ಲಿ ಕುಳಿತಿದ್ದ ಸಂಪಿಗೆಯಷ್ಟೇ ಹಳದಿ ಬಣ್ಣದ ಬಟ್ಟೆಯುಟ್ಟಿದ್ದ ಚಂದದ ಹುಡುಗಿಯೊಬ್ಬಳು ಇದೆಲ್ಲವನ್ನು ನೋಡುತ್ತಾ ಸಣ್ಣಗೆ ನಕ್ಕಿದ್ದೊಂದು ಅಸ್ಪಷ್ಟವಾಗಿ ನೆನಪಿದೆ.
ಆ ಸಂಪಿಗೆ ಹೂಗಳು ಮೊನ್ನೆಯವರೆಗೂ ಬ್ಯಾಗಲ್ಲಿದ್ದು ಒಣಗಿಯೂ ಪರಿಮಳ ಬೀರುತ್ತಿತ್ತು.
ಸಾಗರದ ಮಳೆ, ಸಂಪಿಗೆಯ ಅಜ್ಜ, ಹಳದಿ ಬಟ್ಟೆಯುಟ್ಟ ಆ ಹುಡುಗಿ ಮತ್ತು ಜೋಗದ ಬಿಳಿನೊರೆಯ ನೀರನ್ನು ನೆನಪಿಸುತ್ತಾ.
2. ಮಲೆನಾಡಿನ ಬಸ್ಸಿನ ಜೋಡಿ
ಅವತ್ತು ಜೋಗ ನೋಡಬೇಕೆಂದು ಹಠಾತ್ ಆಸೆಯಾಗಿ ಶಿವಮೊಗ್ಗ ಹೋದವನು ಜೋಗ ನೋಡಿಯಾದ ಮೇಲೆ
ತೀರ್ಥಹಳ್ಳಿಯಿಂದ ಕುಪ್ಪಳ್ಳಿಗೆ ಹೋಗೋ ಬಸ್ಸಲ್ಲಿ ಕೂತಿದ್ದೆ, ಹೊರಗಡೆ ತುಂಬಾ ಮಳೆ. ಮಲೆನಾಡಿನ ಮಳೆ ಅವತ್ತೇ ನೋಡಿದ್ದು ನಾನು.
ಮೇಲಿಂದ ಯಾರೋ ಬಕೆಟಲ್ಲಿ ನೀರು ಸುರಿದಂತೆ ಧಾರಾಕಾರವಾಗಿ ಸುರಿಯೋ ಮಳೆ ಅದು.
ಈ ಬಿರುಮಳೆಯ ನಡುವೆ ಬಸ್ಸಿನ ಒಳಗಡೆ ನಾ ಕುಳಿತ ಸೀಟಿನ ಪಕ್ಕದ ಸೀಟಿನಲ್ಲಿ ಒಂದು ಚಂದದ ಲವ್ ಸ್ಟೋರಿ ನಡೆಯುತ್ತಿತ್ತು. ಬಸ್ಸು ಬಿರುಮಳೆಗೆ ಎದೆಯೊಡ್ಡುತ ಧೀರನಂತೆ ಸಾಗುತಿತ್ತು.
ಮೊದಲು ಹುಡುಗನೊಬ್ಬ ಕುಳಿತ ಸೀಟಿನ ಪಕ್ಕದ ಸೀಟು ಖಾಲಿಯಿರುತ್ತದೆ.
ಒಂದೆರಡು ಸ್ಟಾಪ್ ಮುಂದೆ ಹುಡುಗಿಯೊಬ್ಬಳು ಬಸ್ ಹತ್ತುತ್ತಾಳೆ.
ಮೊದಲೇ ರಿಸ಼ರ್ವ್ ಮಾಡಿದ್ದಾಳೇನೋ ಅನ್ನುವಂತೆ ಅವನ ಹತ್ತಿರದ ಸೀಟಲ್ಲೇ ಬಂದು ಕುಳಿತುಕೊಳ್ಳುತ್ತಾಳೆ.
ಕುಳಿತು ಸ್ವಲ್ಪ ಹೊತ್ತಾದ ಮೇಲೆ ಅವನು ಬಗ್ಗಿ ಬಗ್ಗಿ ಇವಳ ಕಿವಿಯ ಬಳಿ ಏನೋ ಹೇಳೋದು, ಅವಳು ಮುಖ ಚೂರೂ ಎತ್ತದೇ ಕುಳಿತಲ್ಲಿ ಬಗ್ಗಿಕೊಂಡೇ ನಗೋದು ನಡೆಯುತ್ತಿದೆ.
ಮಳೆ ಅಲ್ವಾ ಪ್ರೀತಿ ಜೋರಿತ್ತು, ನಾನೂ ಇಯರ್ ಫೋನಲ್ಲಿ ಹಾಡು ಕೇಳಿಕೊಂಡೇ ಅವರನ್ನು ಗಮನಿಸುತ್ತಿದ್ದೆ.
ಬಸ್ಸು ಕುಪ್ಪಳ್ಳಿಗೆ ಅರ್ಧ ದಾರಿ ಸಾಗಿತಷ್ಟೇ ಡ್ರೈವರ್ ಹಠಾತ್ತನೆ ಬಸ್ಸು ನಿಲ್ಲಿಸಿದ, ಎದ್ದು ನೋಡಿದರೆ ರಸ್ತೆಯಲ್ಲಿ ಉದ್ದದ ಮರವೊಂದು ನಿದ್ದೆ ಮಾಡಿದೆ, ಹಲವರು ಎಬ್ಬಿಸುತಿದ್ದರೂ ಏಳುತ್ತಿಲ್ಲ. ಎಲ್ಲರೂ ಬಸ್ಸಿಂದ ಇಳಿಯಬೇಕಾಯಿತು, ಈ ಪ್ರೇಮಿಗಳಿಗೆ ಅನ್ಯಾಯವಾಗಿ ಪ್ರೇಮಭಂಗವಾಯಿತು, ಅವರೂ ಇಳಿಯಬೇಕಾಯಿತು.
ನನಗೆ ಕುಪ್ಪಳ್ಳಿ ಹೋಗಲು ಗಡಿಕಲ್ಲು ಎಂಬಲ್ಲಿ ಇಳಿಯಬೇಕಾಗಿತ್ತು, ಮರ ನಿದ್ದೆಬಿಟ್ಟು ಏಳುವ ಲಕ್ಷಣ ಕಾಣಲಿಲ್ಲ, ಕೊನೆಗೆ ನನಗೆ ಬೇರೊಂದು ಬಸ್ಸು ಬಂತು ಬೇರೆ ದಾರಿಯಲ್ಲಿ ಕುಪ್ಪಳ್ಳಿ ತಲುಪಿದೆ.
ಆ ಜೋಡಿ ಅಲ್ಲೇ ಉಳಿದರು.
ಕುಪ್ಪಳ್ಳಿಯಲ್ಲಿ ತೇಜಸ್ವಿಯವರು ಕ್ಲಿಕ್ಕಿಸಿದ ಪಕ್ಷಿಗಳ ಫೋಟೋ ಗ್ಯಾಲರಿ ನೋಡುತಿದ್ದೆ, ಜೋಡಿಹಕ್ಕಿಯೊಂದರ ಫೋಟೋ ನೋಡಿದಾಗ ಆ ಬಸ್ಸಿನ ಜೋಡಿ ಮತ್ತೆ ನೆನಪಾದರು. ಅವಳು ಆ ಮಟ್ಟಿಗೆ ತಲೆಬಗ್ಗಿಸಿಕೊಂಡು ನಗುವಂತೆ ಅವನು ಏನು ಹೇಳಿರಬಹುದು? ನನ್ನ ಮನಸ್ಸು ಪದೇ ಪದೇ ಕೇಳುತಿತ್ತು, ಏನಿರಬಹುದು?