ಬೆರಗಿನ ಪಯಣಿಗರುವಿಂಗಡಿಸದಸ್ಫೂರ್ತಿ ಗಾಥೆ

ಎವರೆಸ್ಟ್ ಬೇಸ್ ಕ್ಯಾಂಪಿನಲ್ಲಿತ್ತು 2.2 ಟನ್ ಕಸ: ಸ್ವಚ್ಛಗೊಳಿಸಿದ ನೇಪಾಳಿ ಪರ್ವತಾರೋಹಿಗಳಿಗೆ ನಮಸ್ಕಾರ

ಪ್ರವಾಸ ಹೋಗುವುದು, ಬೆಟ್ಟ ಹತ್ತುವುದು ಇವೆಲ್ಲಕ್ಕಿಂತ ಮುಖ್ಯ ಅಲ್ಲಿನ ಪರಿಸರವನ್ನು ಸ್ವಚ್ಛವಾಗಿಡುವುದು. ಪ್ರಕೃತಿ ಚೆಂದ ಇದ್ದರೆ ನಾವೂ ಚೆನ್ನಾಗಿರುತ್ತೇವೆ. ಆ ನಿಟ್ಟಿನಲ್ಲಿ ಮೌಂಟ್ ಎವರೆಸ್ಟ್ ನ ಬೇಸ್ ಕ್ಯಾಂಪಿನಲ್ಲಿದ್ದ 2.2 ಟನ್ ಕಸವನ್ನು ಸ್ವಚ್ಛಗೊಳಿಸಿ ಮಾದರಿಯಾಗಿದ್ದಾರೆ ನೇಪಾಳಿ ಪರ್ವತಾರೋಹಿಗಳು.

  • ವರ್ಷಾ ಪ್ರಭು, ಉಜಿರೆ
Image
Bally Twitter

ಲಾಕ್ ಡೌನ್ ಅಲ್ಲಿ ನಾವು ನೀವೆಲ್ಲಾ ಹೊಸ ಪ್ರಯೋಗಗಳ ಮೂಲಕ ದಿನ ದೂಡಿದ್ದೇವೆ. ಆದರೆ ನೇಪಾಳದ ಉತ್ಸಾಹಿ ತಂಡವೊಂದು ಹಿಮಾಲಯದ ಒಡಲಿನಲ್ಲಿರುವ 2.2 ಟನ್ ಕಸವನ್ನು ಹೊರತೆಗೆದು ಸುದ್ದಿಯಲ್ಲಿದೆ. 

ಈ ತಂಡ ಜಗತ್ತಿನ ಎತ್ತರದ ಶಿಖರ ಹಿಮಾಲಯದ ಬೇಸ್ ಕ್ಯಾಂಪಿನಲ್ಲಿದ್ದ ಸುಮಾರು 2.2 ಟನ್ ಕಸವನ್ನು ಕೇವಲ 47 ದಿನಗಳ ಅವಧಿಯಲ್ಲಿ ತೆಗೆದುಹಾಕಿದೆ. ಈ ತಂಡದಲ್ಲಿ ಇದ್ದಿದ್ದು 12 ನೇಪಾಳಿಗಳು.(Nepal climbers) 450 ಕಿಮೀ ವ್ಯಾಪ್ತಿಯ, 8,000 ಮೀ ಉದ್ದದ ಶಿಖರಗಳನ್ನು ಸ್ವಚ್ಛಗೊಳಿಸಿದ ಸಾಧನೆ ಇವರದ್ದು. 

ಕೋವಿಡ್-19 ಪಿಡುಗಿನ ಕಾರಣದಿಂದ ಹಿಮಾಲಯದ ಹಾದಿಗಳೆಲ್ಲಾ ಮುಚ್ಚಿದ್ದವು. ಇದನ್ನೇ ಸುವರ್ಣಾವಕಾಶವೆಂಬಂತೆ ಉಪಯೋಗಿಸಿಕೊಂಡ ಒಂದು ಉತ್ಸಾಹಿ ತಂಡ ’ಬ್ಯಾಲ್ಲಿ ಪೀಕ್ ಔಟ್ ಲುಕ್ ಫೌಂಡೇಶನ್’(Bally Peak Outlook Foundation) ಅನ್ನು ಸೆಪ್ಟೆಂಬರ್ 2020ರಲ್ಲಿ ಸ್ಥಾಪಿಸಿಯೇ ಬಿಟ್ಟಿತು. 

Nepalese climbers Mt Everest in 47 days

10000ಕ್ಕೂ ಹೆಚ್ಚು ಪರ್ವಾರೋಹಿಗಳು ಭೇಟಿ ಕೊಟ್ಟ ಜಾಗ

ಇವರ ಮುಖ್ಯ ಗುರಿ ಬೇಸ್ ಕ್ಯಾಂಪುಗಳನ್ನು ಸ್ವಚ್ಛಗೊಳಿಸುವುದು. 1905ರಿಂದ ಆರಂಭವಾಗಿ ಪ್ರಸ್ತುತದವರೆಗೂ 10,000ಕ್ಕೂ ಮಿಕ್ಕಿ ಪರ್ವತಾರೋಹಿಗಳು ಹಿಮಾಲಯವನ್ನು ಏರಲು ಪ್ರಯತ್ನಿಸಿದ್ದಾರೆ. ಇವರೆಲ್ಲಾ ಮುಂದೆ ಹೋಗುವ ತಯಾರಿಯನ್ನು ಮಾಡಿಕೊಳ್ಳುವುದೇ ಬೇಸ್ ಕ್ಯಾಂಪಿನಲ್ಲಿ. ಇದರಿಂದಾಗಿ ಅವರಿಗೆ ಅರಿವೇ ಇಲ್ಲದಂತೆ ಹಿಮ ರಾಜನ ಒಂದು ಭಾಗ ಮಲಿನವಾಗುತ್ತಾ ಹೋಯಿತು. ಇದನ್ನು ಗುರುತಿಸಿ, ಅಲ್ಲಿಗೆ ಸುಮ್ಮನೆ ಕೂರದೇ, ಸ್ವಚ್ಛಗೊಳಿಸಿದ್ದು ಮಹತ್ ಸಾಧನೆ ಅಲ್ಲದೇ ಇನ್ನೇನು?!

2020ರ ಆರಂಭದಲ್ಲಿಯೇ ಈ ಸ್ವಚ್ಛತಾ ಕಾರ್ಯಕ್ರಮ ಆರಂಭಿಸಲು ತಂಡ ಯೋಜಿಸಿತ್ತು. ಆದರೆ ಇದಕ್ಕೆ ಅಡ್ಡಗಾಲು ಹಾಕಿದ್ದು ಕೊರೋನಾ. ’ಬ್ಯಾಲ್ಲಿ ಪೀಕ್ ಔಟ್ ಲುಕ್ ಫೌಂಡೇಶನ್’ ನೀಡುವ ಮಾಹಿತಿ ಪ್ರಕಾರ ಇವರ ಪ್ರಮುಖ ಉದ್ದೇಶ; ಚೋ ಓಯು [Cho Oyu] (8,188 ಮೀ), ಎವರೆಸ್ಟ್ [Everest] (8,848 ಮೀ), ಲಹೋತ್ಸೆ[Lhotse] (8,516 ಮೀ) ಮತ್ತು ಮಕಾಲು Makalu (8,485 ಮೀ) ಇವುಗಳ ಬೇಸ್ ಕ್ಯಾಂಪನ್ನು ಸ್ವಚ್ಛಗೊಳಿಸುವುದು. 

Nepalese climbers Mt Everest in 47 days

ಈ ಸ್ವಚ್ಛತಾ ಕಾರ್ಯಕ್ರಮವನ್ನು ಉದ್ಘಾಟಿಸಿದ್ದು ಖ್ಯಾತ ಪರಿಸರ ಕಾರ್ಯಕರ್ತ ಹಾಗೂ ಪರ್ವತಾರೋಹಿ ದಾವಾ ಸ್ಟೀವನ್ ಶೆರ್ಪಾ. ಜೊತೆಗೆ ಅನುಭವಿ ಪರ್ವತಾರೋಹಿಗಳು, ಸ್ವಚ್ಛತಾ ಕಾರ್ಮಿಕರು ಸೇರಿದಂತೆ ಕೊರೋನಾ ಕಾರಣದಿಂದ ಆರ್ಥಿಕವಾಗಿ ಹೊಡೆತ ತಿಂದಿದ್ದದವರು ತಂಡದಲ್ಲಿದ್ದರು. 

ಸ್ಥಳೀಯರಿಗೂ ವರವಾದ ಯೋಜನೆ

ಜಗತ್ತಿನ ಅತೀ ಎತ್ತರದ ಶಿಖರದ ಸುತ್ತಮುತ್ತಲೂ ವಾಸಿಸುತ್ತಿರುವ ಸ್ಥಳೀಯರಿಗೆ ’ಬ್ಯಾಲ್ಲಿ ಪೀಕ್ ಔಟ್ ಲುಕ್ ಫೌಂಡೇಶನ್’ನ ಈ ಯೋಜನೆ ಒಂದರ್ಥದಲ್ಲಿ ವರವಾಗಿ ಪರಿಣಮಿಸಿತು. ಅವರಿಗೆ ಆದಾಯದ ಹೊಸ ಮೂಲವನ್ನು ಕಂಡುಕೊಳ್ಳಲು ಫೌಂಡೇಶನ್ ದಾರಿ ಮಾಡಿಕೊಟ್ಟಿತು. 

ನೇಪಾಳದ ಪ್ರವಾಸೋದ್ಯಮ ದೇಶದ ಜಿಡಿಪಿಗೆ ಹೆಚ್ಚಿನ ಬಲ ತುಂಬುತ್ತಿತ್ತು. ಆದರೆ ಸಾಂಕ್ರಾಮಿಕ ಪಿಡುಗಿನ ಕಾರಣದಿಂದಾಗಿ ಈ ಉದ್ಯಮ ಬಹಳಷ್ಟು ಹೊಡೆತ ತಿಂದಿತು. ಆದರೆ ಫೌಂಡೇಶನ್ ಯೋಜಿಸಿದ ಒಂದು ಯೋಜನೆಯಿಂದಾಗಿ, ನೇಪಾಳದ ಪ್ರವಾಸೋದ್ಯಮ ಸಣ್ಣದಾಗಿ ಚೇತರಿಸಿಕೊಳ್ಳಲು ಆರಂಭಿಸಿತು. ಸ್ಥಳೀಯರಿಗೆ ಹೆಚ್ಚಿನ ಉದ್ಯೋಗಾವಕಾಶ ದೊರಕಿಸಿಕೊಡುವಲ್ಲಿ ತಂಡ ಯಶಸ್ವಿಯಾಯಿತು.

Image
Bally Twitter

ಇದೆಲ್ಲಕ್ಕಿಂತ ಮುಖ್ಯವಾಗಿ, ತಂಡದ ಈ ವಿನೂತನ ಯೋಜನೆಯಿಂದಾಗಿ ಬೇಸ್ ಕ್ಯಾಂಪು ಸ್ವಚ್ಛವಾಗಿದ್ದು ಮಾತ್ರವಲ್ಲ, ಅದರ ನಿಜವಾದ ಸೌಂದರ್ಯವನ್ನು ಮರಳಿ ಪಡೆದವು. ಅದರ ನೈಜತೆಯನ್ನು ಇನ್ನಷ್ಟು ಹಾಳು ಮಾಡಬಲ್ಲ ಪ್ಲಾಸ್ಟಿಕ್ ಮಹಾಮಾರಿಯನ್ನು ಹೊರಗೆಳೆದಿದ್ದರಿಂದ, ಪರಿಸರ ಮಾಲಿನ್ಯವಾಗುವುದನ್ನು ತಾತ್ಕಾಲಿಕವಾಗಿ ತಡೆಯುವಂತಾಯಿತು. ಸುಮಾರು 2.2 ಟನ್ ಕಸದ ರಾಶಿಯಲ್ಲಿ ಎಸೆದ ಆಹಾರ, ಬ್ಯಾಟರಿ, ಬೀರ್ ಕ್ಯಾನ್, ಆಕ್ಸಿಜನ್ ಸಿಲಿಂಡರ್, ಪ್ಲಾಸ್ಟಿಕ್, ಬ್ಯಾಟರಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದವು.

ಬ್ಯಾಲಿ ಪೀಕ್ ಔಟ್ ಲುಕ್ ಫೌಂಡೇಶನ್ ನೀಡಿದ ಮಾಹಿತಿ ಪ್ರಕಾರ, ಈ ಸ್ವಚ್ಛತಾ ಕಾರ್ಯಕ್ರಮದ ಎರಡನೇ ಹಂತ 2021ರಲ್ಲಿ ಮುಂದುವರೆಯಲಿದ್ದು, ಈ ಬಾರಿ ಕಾಂಚನಜುಂಗಾ [Kanchenjunga] (8,586 ಮೀ), ಧವಳಗಿರಿ [Dhaulagiri] (8,167 ಮೀ), ಮನಸ್ಲು [Manaslu] (8,156 ಮೀ) ಹಾಗೂ ಅನ್ನಪೂರ್ಣಾ [Annapurna] (8,091 ಮೀ) ಬೇಸ್ ಕ್ಯಾಂಪುಗಳನ್ನು ಸ್ವಚ್ಛಗೊಳಿಸಲು ಯೋಜನೆ ಹಾಕಲಾಗಿದೆ. 

ಇಂತಹ ವಿನೂತನ ಹಾಗೂ ಪರಿಸರ ಸ್ನೇಹಿ ಯೋಜನೆ ಹುಟ್ಟುಹಾಕಿದ ಮತ್ತು ಮುಂದುವರೆಸುತ್ತಿರುವ ತಂಡ, ಪರಿಸರವನ್ನು ಉಳಿಸುವ, ಬೆಳೆಸುವ ಪಾಠವನ್ನು ಎಲೆಮರೆಕಾಯಿಯಂತೆ ನಿಂತು ಜಗತ್ತಿಗೆ ತಿಳಿಸುವ ಪ್ರಯತ್ನ ಮಾಡುತ್ತಿದೆ. 

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button