77ನೇ ವಯಸ್ಸಲ್ಲಿ ಹಳೇ ರಾಯಲ್ ಎನ್ ಫೀಲ್ಡಲ್ಲಿ ದೇಶ ಸುತ್ತಿದ ವೃದ್ಧ ದಂಪತಿ: ಲೀಲಾ, ಮೋಹನ್ ಜೋಡಿಗೆ ನಮಸ್ಕಾರ
ಸಣ್ಣ ವಯಸ್ಸಿನಲ್ಲೇ ಜಾಸ್ತಿ ವಯಸ್ಸಾದವರಂತೆ ಆಡುವವರನ್ನು ನಾವು ನೋಡಿದ್ದೇವೆ. ಒಂದು ಕಿಮೀ ನಡೆದರೆ ಸುಸ್ತಾಯಿತು ಅನ್ನುವ ತರುಣರೂ ಇದ್ದಾರೆ. ಲೈಫೇ ಮುಗಿದುಹೋಯಿತು ಅಂತ ಕೊರಗುವವರೂ ನಮ್ಮ ನಿಮ್ಮ ಮಧ್ಯೆ ಇರುತ್ತಾರೆ. ಅಂಥವರ ಮಧ್ಯೆ ಒಂದು ಜೋಡಿ ತಮ್ಮ 77ನೇ ವಯಸ್ಸಿನಲ್ಲಿ ರಾಯಲ್ ಎನ್ ಫೀಲ್ಡ್ ಬೈಕ್ ಹತ್ತಿಕೊಂಡು ದೇಶ ಸುತ್ತುತ್ತಿದ್ದಾರೆ. ಆ ಮ್ಯಾಜಿಕ್ ದಂಪತಿ ಮೋಹನ್ ಮತ್ತು ಲೀಲಾ ಕತೆ ಇದು.
- ಮಧುರ ಎಲ್ ಭಟ್ಟ, ಉಜಿರೆ
ಲೈಪ್ ಈಸ್ ಬ್ಯೂಟಿಫುಲ್ ಅಂತ ಹೇಳುವುದು ಸುಲಭ. ಆದರೆ ಲೈಫ್ ಈಸ್ ಬ್ಯೂಟಿಫುಲ್ ಅನ್ನುವಂತೆ ಬದುಕುವುದು ಕಷ್ಟ. ಆದರೆ ಮೋಹನ್ ಮತ್ತು ಲೀಲಾ ದಂಪತಿ ಮಾತ್ರ ಲೈಫ್ ಈಸ್ ಬ್ಯೂಟಿಫುಲ್ ಅಂತ ತೋರಿಸಿಕೊಡುತ್ತಿದ್ದಾರೆ. ತಮ್ಮ 77ನೇ ವಯಸ್ಸಿನಲ್ಲಿ, ಅವರು 1974ರ ಹಳೇ ರಾಯಲ್ ಎನ್‌ಫೀಲ್ಡ್(Vintage Royal Enfield) ಬೈಕಲ್ಲಿ ದೇಶಾದ್ಯಂತ ಪ್ರಯಾಣವನ್ನು ಪ್ರಾರಂಭಿಸಿದರು. 28 ರಾಜ್ಯಗಳಲ್ಲಿ ಒಟ್ಟು 2000 ಕಿ.ಮೀ. ಕ್ರಮಿಸಿದ್ದಾರೆ.
ಈ ಬಗ್ಗೆ ಮೋಹನ್ ಅವರನ್ನು ಕೇಳಿದರೆ, “ನಾನು ಮನೆಯಲ್ಲಿ ಹೆಚ್ಚು ಕಾಲ ಇರಲು ಬಯಸುವುದಿಲ್ಲ, ಅದಕ್ಕಾಗಿ ಈ ರೋಡ್ ಟ್ರಿಪ್” ಎಂದು ಹೇಳುತ್ತಾರೆ. “ನಾನು 2016 ರಲ್ಲಿ ಕೆಲವು ಏಕವ್ಯಕ್ತಿ ಪ್ರವಾಸಗಳನ್ನು ಮಾಡಿದ್ದೇನೆ, ಯಾವಾಗಲೂ ಹೊಸ ಸ್ಥಳಗಳನ್ನು ಅನ್ವೇಷಿಸಲು ಹೆಚ್ಚು ಉತ್ಸುಕನಾಗಿರುತ್ತೇನೆ. ಆಮೇಲೆ ದೇಶ ಸುತ್ತುವ ಆಸೆಯಾಯಿತು. ಹಾಗಾಗಿ ನಾನು ಭೇಟಿ ನೀಡುವ ಸ್ಥಳಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲು ಮತ್ತು ನಕ್ಷೆಗಳಲ್ಲಿ ಯೋಜನೆಯನ್ನು ರೂಪಿಸಲು ಪ್ರಾರಂಭಿಸಿದೆ. ಎಲ್ಲವೂ ಸರಿಯಾದ ಮೇಲೆ ಪ್ರವಾಸ ಹೊರಟೆ” ಎಂದು ಅವರು ಹೇಳುತ್ತಾರೆ.
ಒಂದು ವರ್ಷದ ಸಂಪೂರ್ಣ ಹುಡುಕಾಟದ ನಂತರ ಈ ಸುದೀರ್ಘ ಯಾನವನ್ನು ಅವರು ಪ್ರಾರಂಭಿಸಿದ್ದಾರೆ. ಪತ್ನಿಯನ್ನೂ ಕರೆದುಕೊಂಡು ಹೋಗುವ ಆಸೆ ಅವರಿಗೆ ಇತ್ತು. “ನನ್ನ ಬೈಕ್ ನೊಂದಿಗೆ ನಾನು ಪಕ್ಕದ ಕಾರನ್ನು ಸೇರಿಸಿದ್ದೇನೆ, ಇದರಿಂದ ಅವಳು ಆರಾಮವಾಗಿ ಪ್ರಯಾಣಿಸಬಹುದು” ಎಂದು ಅವರು ಹೇಳುತ್ತಾರೆ.
ಅನೇಕರು ಉತ್ಸಾಹ ಭಂಗಗೊಳಿಸಿದರು
ಗೋಪಾಲ್ ಅವರ ಯೋಜನೆಯನ್ನು ಹಲವರಲ್ಲಿ ಹೇಳಿದಾಗ ಅವರೆಲ್ಲಾ, ನೀವು ಕೆಲವು ನೂರು ಕಿಲೋಮೀಟರ್‌ಗಳ ನಂತರ ಹಿಂತಿರುಗುತ್ತೀರಿ ಎಂದು ಉತ್ಸಾಹ ಭಂಗಗೊಳಿಸಿದರು. ಆದರೆ ಈ ದಂಪತಿ ಹಿಂಜರಿಯಲಿಲ್ಲ. ಇವರ ಹತ್ತಿರದ ಹಿತೈಷಿಗಳೂ ಪ್ರೋತ್ಸಾಹಿಸಿದರು. ಹಾಗಾಗಿ ಈ ದಂಪತಿ ಅವರ ಮಕ್ಕಳು ಮತ್ತು ಹಿತೈಷಿಗಳಿಗೆ ಧನ್ಯವಾದ ಸಮರ್ಪಿಸುತ್ತಾರೆ.
“ಅವರ ಧೈರ್ಯ, ಬೆಂಬಲ ನಾವು ಭರವಸೆ ಕಳೆದುಕೊಳ್ಳಲು ಬಿಡಲಿಲ್ಲ’ ಎನ್ನುತ್ತಾರೆ.
ಅಂದಹಾಗೆ ಈ ದಂಪತಿ ಪ್ರವಾಸ ಶುರು ಮಾಡಿದ್ದು ಗುಜರಾತಿನ ವಡೋದರಾದಿಂದ.(Vadodara) ಅಲ್ಲಿಂದ ಅವರು ನಾನಾ ಭಾಗಗಳಿಗೆ ಹೋದರು. ಹಳೆಯ ಬೈಕಿನಲ್ಲಿ ದೇಶ ಸುತ್ತಿದರು. ಒಬ್ಬರಿಗೊಬ್ಬರು ಬಿಟ್ಟು ಕೊಡಲಿಲ್ಲ. ಈ ಪಯಣದಲ್ಲಿ ಒಂದು ಕಡೆ ಲೀಲಾ ಅವರು ಬಿದ್ದು ಕಾಲು ಮುರಿದುಕೊಂಡರು. ಕಾಲಿಗೆ ಬ್ಯಾಂಡೇಜ್ ಬಿದ್ದರೂ ಪ್ರವಾಸದ ಉತ್ಸಾಹ ಕಡಿಮೆಯಾಗಲಿಲ್ಲ. ಮೋಹನ್ ಪ್ರೀತಿಯಿಂದ ನೋಡಿಕೊಂಡರು. ಪ್ರವಾಸ ಮುಂದುವರಿಸಿದರು.
ನಮ್ಮ ಕೈಯಲ್ಲಿ ಏನೂ ಆಗುವುದಿಲ್ಲ ಅನ್ನುವವರಿಗೆ, ಸಂಬಂಧಗಳ ಬಗ್ಗೆ ಹೆಚ್ಚಿ ಪ್ರೀತಿ ಇಲ್ಲದೇ ಇರುವವರಿಗೆ ಈ ದಂಪತಿ ನಿಜಕ್ಕೂ ಮಾದರಿ. ಒಬ್ಬರನ್ನೊಬ್ಬರು ಪ್ರೀತಿಸುತ್ತಾ ಇಳಿ ವಯಸ್ಸಿನಲ್ಲಿ, ಬೈಕಿನಲ್ಲಿ ದೇಶ ಸುತ್ತಿ ಬಂದ ಇಬ್ಬರಿಗೂ ದೊಡ್ಡ ನಮಸ್ಕಾರ.
ನೀವು ಇದನ್ನು ಇಷ್ಟಪಡಬಹುದು: ಬೈಕ್ ನಲ್ಲಿ 6 ದೇಶ ಸುತ್ತಿದ ಹೈದರಾಬಾದಿನ ಜೈಭಾರತಿ: ಈ ಶತಮಾನದ ಮಾದರಿ ಹೆಣ್ಣು
ಕ್ರೇಜಿ ದಂಪತಿಯ ಮಾತುಗಳು
– ನಾವು ಬಿಹಾರ, ಜಾರ್ಖಂಡ್,(Jarkhand) ಪಶ್ಚಿಮ ಬಂಗಾಳ,(West Bengal) ಅಸ್ಸಾಂ ಮತ್ತು ಮೇಘಾಲಯದವರೆಗಿನ ಎಲ್ಲಾ ಮಾರ್ಗಗಳಲ್ಲಿ ಪ್ರಯಾಣಿಸಿದೆವು. ದಾರಿಯಲ್ಲಿ, ಹವಾಮಾನ ಬದಲಾವಣೆಯ ಬಗ್ಗೆ ಜಾಗೃತಿ ಮೂಡಿಸಲು ಪ್ರಯತ್ನಿಸಿದೆವು. ನಮ್ಮ ಕಡೆಯಿಂದ ಆಗುವ ಸ್ವಲ್ಪ ಪ್ರಯತ್ನವು ಯಾವಾಗಲೂ ಸಮಾಜದ ಸುಧಾರಣೆಗೆ ಸಹಾಯ ಮಾಡುತ್ತದೆ ಎಂದು ನಾವು ನಂಬುತ್ತೇವೆ.
-ನಾವು ಎಲ್ಲಿಗೆ ಹೋದರೂ ನಮ್ಮನ್ನು ಯಾವಾಗಲೂ ತೆರೆದ ತೋಳುಗಳಿಂದ ಮತ್ತು ವಿಶಾಲವಾದ ನಗುವಿನೊಂದಿಗೆ ಸ್ವೀಕರಿಸಿದರು. ಭಾರತೀಯರು ತುಂಬಾ ಬೆಚ್ಚಗಿನ ಆತಿಥ್ಯ ನೀಡುತ್ತಾರೆ. ಅವರೊಂದಿಗೆ ಆಹಾರವನ್ನು ಹಂಚಿಕೊಳ್ಳುವಾಗ ಅವರ ಜೀವನ ಮತ್ತು ಕಥೆಗಳ ಬಗ್ಗೆ ತಿಳಿದುಕೊಳ್ಳುವುದು ಅದ್ಭುತವಾಗಿರುತ್ತದೆ.
-ನಿಮ್ಮ ಆಹಾರ ಪದ್ಧತಿಯನ್ನು ನೀವು ನಿಯಂತ್ರಣದಲ್ಲಿಟ್ಟುಕೊಂಡಾಗ, ನಿಮ್ಮ ದೇಹವು ಅದಕ್ಕೆ ಅಗತ್ಯವಾದ ಪೋಷಣೆಯನ್ನು ಪಡೆಯುತ್ತದೆ ಮತ್ತು ಕನಿಷ್ಠ ನಿರ್ವಹಣೆಯೊಂದಿಗೆ ಮುಂದುವರಿಯುತ್ತದೆ. ನಾನು ಧೂಮಪಾನ ಮಾಡುವುದಿಲ್ಲ ಅಥವಾ ಮದ್ಯಪಾನ ಮಾಡುವುದಿಲ್ಲ. ನನ್ನ ಆದರ್ಶ ಆಹಾರವೆಂದರೆ ಖಿಚ್ಡಿ ಮತ್ತು ಮಜ್ಜಿಗೆ. ನಮ್ಮ ಪ್ರವಾಸದಲ್ಲಿದ್ದಾಗಲೂ, ನಾವು ಉತ್ತಮ ಆಹಾರವನ್ನು ಪಡೆಯುತ್ತೇವೆ ಮತ್ತು ಎಣ್ಣೆಯುಕ್ತ ಮತ್ತು ಜಂಕ್ ಫುಡ್ ಅನ್ನು ಬಹಳ ವಿರಳವಾಗಿ ಸೇವಿಸುತ್ತೇವೆ.
ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ