ಇವರ ದಾರಿಯೇ ಡಿಫರೆಂಟುಬೆರಗಿನ ಪಯಣಿಗರುಮೋಟಾರ್ ಸೈಕಲ್ ಡೈರಿವಿಂಗಡಿಸದಸ್ಫೂರ್ತಿ ಗಾಥೆ

ಬೈಕ್ ನಲ್ಲಿ 6 ದೇಶ ಸುತ್ತಿದ ಹೈದರಾಬಾದಿನ ಜೈಭಾರತಿ: ಈ ಶತಮಾನದ ಮಾದರಿ ಹೆಣ್ಣು

ಬೈಕ್ ನಲ್ಲಿ ಆರು ದೇಶ ಸುತ್ತಿರುವ, ಸುಮಾರು ಒಂದು ಲಕ್ಷ ಕಿಮೀಗಳನ್ನು ಬೈಕ್ ನಲ್ಲಿ ಕ್ರಮಿಸಿರುವ ಈ ಶತಮಾನದ ಮಾದರಿ ಹೆಣ್ಣು ಜೈಭಾರತಿ. ಹೈದರಾಬಾದಿನ ಈ ಹುಡುಗಿಯ ಸ್ಫೂರ್ತಿ ಕತೆ ಇಲ್ಲಿದೆ.

  • ಸುವರ್ಣಲಕ್ಷ್ಮಿ 

ಸಾಮಾನ್ಯವಾಗಿ ಮಹಿಳೆಯರು ತನ್ನ ಕುಟುಂಬದ ಹಾಗೂ ಕಚೇರಿಯ ಎಲ್ಲರ ಬೇಕು ಬೇಡಗಳನ್ನು ನೋಡಿಕೊಳ್ಳುತ್ತಾ ತನಗೂ ಒಂದು ಮನಸಿದೆ, ಆ ಮನಸಿಗೂ ಒಂದು ಆಸೆ ಇದೆ ಅನ್ನುವುದೇ ಮರೆತು ಹೋಗಿರುತ್ತದೆ. ಆದರೆ ನಾನು ಯಾವುದರಿಂದ ಖುಷಿಯಾಗಿ ಇರುತ್ತೇನೆ ಅನ್ನುವುದನ್ನು ತಿಳಿದು ಖುಷಿಯಾಗಿ ಇದ್ದಾರೆ ಹೈದರಾಬಾದಿನ ಇಂಟರ್ ನ್ಯಾಷನಲ್ ಬೈಕ್ ರೈಡರ್ ಜೈಭಾರತಿ (Jaya Bharathi).  

Jayabharathi Hyderabad Bikerni Women Bike Rider

9ನೇ ವಯಸ್ಸಿನಲ್ಲಿ ಟೂವೀಲ್ಹರ್ ಕಲಿತ ಈಕೆ ಮುಂದೆ ಅದೇ ಟೂವೀಲ್ಹರ್ ನಲ್ಲಿ ಆರು ದೇಶಗಳನ್ನು ಸುತ್ತಿ ಬಂದದ್ದು ಈಗ ಇತಿಹಾಸ. ಈಕೆ ಹುಟ್ಟಿ ಬೆಳೆದದ್ದು, ಓದಿದ್ದು ಎಲ್ಲಾ ಹೈದರಾಬಾದಿನಲ್ಲಿ.(Hyderabad) 

ಚಿಕ್ಕಂದಿನಲ್ಲಿ ಅವರ ತಂದೆ ರಜಾದಿನಗಳಲ್ಲಿ ಚಿಕ್ಕ ಚಿಕ್ಕ ಪ್ರವಾಸಗಳಿಗೆ, ದೇವಸ್ಥಾನಗಳಿಗೆ ಕರೆದುಕೊಂಡು ಹೋಗುತ್ತಿದ್ದಾಗ ಆಕೆಗೆ ಹೆಚ್ಚು ಸಂತೋಷವಾಗುತ್ತಿತಂತೆ. ಅದುವೇ ಆಕೆಗೆ ಮುಂದೆ ಟ್ರಾವೆಲ್ ನಲ್ಲಿ ಆಸಕ್ತಿ ಬೆಳೆಯಲು ಕಾರಣವಾಗಿದ್ದು.

9ನೇ ವಯಸ್ಸಿನಲ್ಲಿ ಅವರ ತಂದೆ ಲೂನಾ ಮೊಪೆಡ್ ಓಡಿಸುವುದನ್ನು ಕಲಿಸಿದಾಗಿನಿಂದ ಈಗಿನವರೆಗೆ ಆಕೆಯ ಕುಟುಂಬ ಹಾಗೂ ಸ್ನೇಹಿತರ ವಲಯದಲ್ಲಿ ಯಾವುದೇ ಹೊಸ ಬೈಕ್ ತೆಗೆದು ಕೊಂಡರೂ ಜೈಭಾರತಿ ಅದನ್ನು ರೈಡ್ ಮಾಡದೇ ಬಿಡುವುದಿಲ್ಲ.

ವೃತ್ತಿ ಬೇರೆ, ಪ್ರೀತಿ ಬೇರೆ

Jayabharathi Hyderabad Bikerni Women Bike Rider

ವೃತ್ತಿಯಲ್ಲಿ ಆರ್ಕೆಟಿಕ್ಟ್(Architect) ಆಗಿರುವ ಈಕೆ ಬೆಂಗಳೂರು(Bangalore), ಬಾಂಬೆ, ಕೊಚ್ಚಿ(Kochin)ಗಳಲ್ಲಿ ಕೆಲಸ ಮಾಡುವಾಗ ಸಹ ಟ್ರಾವೆಲಿಂಗ್ ಹಾಗೂ ಬೈಕ್ ರೈಡಿಂಗ್ ಅನ್ನು ಬಹಳ ಎಂಜಾಯ್ ಮಾಡಿದ್ದಾರೆ. 2005ರಿಂದ ಜನರಿಗೆ ಟ್ರಾವೆಲ್ ಅನ್ನುವುದು ಒಂದು ಪ್ಯಾಷನ್ ಆಗಿ ಶುರುವಾಯಿತು ಸಾಮಾಜಿಕ ಮಾಧ್ಯಮಗಳಲ್ಲಿ ವಿವಿಧ ರೀತಿಯ ಟ್ರಾವೆಲ್ ಕಥೆಗಳು ಬರತೊಡಗಿದವು. 

ಅವುಗಳ ಪ್ರಭಾವದಿಂದ ಜೈಭಾರತಿ ಟ್ರಾವೆಲ್ ಮಾಡಲು ಶುರು ಮಾಡಿದರು. 2012ರಲ್ಲಿ ದಿನಪತ್ರಿಕೆಯಲ್ಲಿ ಬಂದ ಒಂದು ಚಾಲೆಂಜ್ ಅವರ ಗಮನ ಸೆಳೆಯಿತು. ಏನೆಂದರೆ ಭಾರತದಲ್ಲಿರುವ 28 ಯುನೆಸ್ಕೋ ಪಾರಂಪರಿಕ ತಾಣಗಳನ್ನು(Unesco world heritage places) ಒಂದು ವರ್ಷದಲ್ಲಿ ನೋಡಿಕೊಂಡು ಬರಬೇಕು ಅನ್ನುವುದು.

ಶುರುವಾಯಿತು ಪಯಣ

ಚಾಲೆಂಜ್ ತೆಗೆದುಕೊಂಡ ಭಾರತಿ ಪಕ್ಕಾ ಪ್ಲಾನ್ ಮಾಡಿ ಬಸ್ಸು, ರೈಲು,ವಿಮಾನ, ಬೈಕ್, ಬೋಟ್, ಬೈಕ್ ಎಲ್ಲದರಲ್ಲೂ ಟ್ರಾವೆಲ್ ಮಾಡಿ 28 ಹೆರಿಟೇಜ್ ಸೈಟ್ ಗಳನ್ನು ನೋಡಿಕೊಂಡು ಬಂದರು. ಅದಕ್ಕಾಗಿ ಅವರಿಗೆ “ಗೋ ಯುನೆಸ್ಕೋ” ಅವಾರ್ಡ್(Go Unesco Award Winner) ಸಹ ಬಂದಿತು. ಆಗ ಮೀಡಿಯಾದಲ್ಲಿ ಇವರಿಗೆ ವ್ಯಾಪಕ ಪ್ರಚಾರ ಸಿಕ್ಕಿತು. ಅಂದಿನಿಂದ ಇಂದಿನವರೆಗೂ ಮತ್ತಾರೂ ಈ ಸಾಹಸ ಮಾಡಲಿಲ್ಲ. ದಾಖಲೆ ಇವರ ಹೆಸರಲ್ಲೇ ಇದೆ. ಆದರೆ ಇವರ ನಿಜವಾದ ಸಾಹಸಗಳು ಶುರುವಾದದ್ದು 2013ರಲ್ಲಿ ಇವರ ಮನೆಗೆ 500 ಸಿಸಿಯ ರಾಯಲ್ ಎನ್ಫೀಲ್ಡ್(Royal Enfield) ಬಂದಾಗ. 

Jayabharathi Hyderabad Bikerni Women Bike Rider

ನೀವು ಇದನ್ನು ಇಷ್ಟಪಡಬಹುದು: ಹುಡುಗಿಯರು ಒಂಟಿಯಾಗಿ ಪ್ರವಾಸ ಹೋಗುವುದು ಹೇಗೆ: ಮಾದರಿ ಸೋಲೋ ಟ್ರಾವೆಲರ್ ಮೈಸೂರಿನ ಉಷಾ ಎನ್ ಸಂದರ್ಶನ

2011ರಲ್ಲಿ ಪೂನಾದಲ್ಲಿ(Pune) ಬೈಕ್ ಓಡಿಸುವ ಮಹಿಳೆಯರು ಬೈಕರನಿ(Bikerni) ಅನ್ನುವ ಗ್ರೂಪ್ ಮಾಡಿಕೊಂಡು ಆಗಾಗ ಲಾಂಗ್ ಡ್ರೈವ್ ಹಾಗೂ ಶಾರ್ಟ್ ಡ್ರೈವ್ ಮಾಡುತ್ತಿರುತ್ತಾರೆ. ಭಾರತದ ಎಲ್ಲಾ ನಗರಗಳಲ್ಲೂ ಬೈಕರನಿ ಇದೆ. ನಾನೂ ಹಾಗೆ ಮಾಡಬಹುದು ಅಂತ 2013ರಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಹೈದರಾಬಾದ್ ಬೈಕರನಿ ತಂಡ ಪ್ರಾರಂಭ ಮಾಡಿದರು. ಇಂದು ಅದರ ಸದಸ್ಯರ ಸಂಖ್ಯೆ 60 ಆಗಿದ್ದು, ಇವರು ಏರ್ಪಡಿಸುವ ರೈಡ್ ಗಳಿಗೆ ಅವರವರ ಅನುಕೂಲ ನೋಡಿಕೊಂಡು ಸರಾಸರಿ 15 ಜನ ಹಾಜರಾಗುತ್ತಾರೆ. 

ಪ್ರತಿ ತಿಂಗಳು ಬೈಕರನಿ ಸದಸ್ಯರೆಲ್ಲಾ ಒಂದು ಕಡೆ ಸೇರಿ ಹೈದರಾಬಾದಿನ ಒಳಗೆ ಒಮ್ಮೊಮ್ಮೆ ಹೊರಗೆ ಬೈಕ್ ರೈಡ್ ಮಾಡುವ ಪರಿಪಾಠ ಇಟ್ಟುಕೊಂಡಿದ್ದಾರೆ.

ಕಾರ್ದೂಂಗ್ಲಾ ರೈಡ್

ಈ ಗುಂಪಿನವರು ಮೊದಲು ಮಾಡಿದ ಲಾಂಗ್  ರೈಡ್ 2015 ರಲ್ಲಿ ಜಗತ್ತಿನ ಅತ್ಯಂತ ಎತ್ತರದ ರಸ್ತೆ ಲಡಾಕ್ ನ ಕಾರ್ದೂಂಗ್ಲಾ (Khardung la bike ride)ದಲ್ಲಿ ಮಾಡಿದ ರೈಡ್ ಈ ರೈಡ್ ಪ್ರತಿಯೊಬ್ಬ ಬೈಕ್ ರೈಡರ್ ನ ಕನಸಾಗಿರುತ್ತದೆ. ಇದರ ನಂತರ ಅವರ ಎರಡನೇ ರೈಡ್ ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ 8600 ಕಿಮೀ. ಮೂವರು ಬೈಕ್ ರೈಡರ್ ಹಾಗೂ ಒಬ್ಬ ಫೋಟೋಗ್ರಾಫರ್ ಜೊತೆಗೆ ಯಶಸ್ವಿಯಾಗಿ ಆ ರೈಡ್ ಮುಗಿಸುತ್ತಾರೆ.

Jayabharathi Hyderabad Bikerni Women Bike Rider

ಇದಾದ ನಂತರ ಒಬ್ಬರೇ ಟರ್ಕಿ ದೇಶಕ್ಕೆ ಹೋಗಿ ಅಲ್ಲಿನ 11 ಯುನೆಸ್ಕೋ ಪಾರಂಪರಿಕ ತಾಣಗಳನ್ನು 17 ದಿನಗಳಲ್ಲಿ  ಕೇವಲ 85,000 ರೂಗಳಲ್ಲಿ ನೋಡಿಕೊಂಡು ಬರುತ್ತಾರೆ.  

ಬೈಕಿನಲ್ಲಿ ಬೇರೆ ದೇಶಗಳಿಗೆ ಹೋಗುವ ಇವರ ಆಸೆಗೆ ನೀರೆರೆದಿದ್ದು ತೆಲಂಗಾಣ ಸರ್ಕಾರ. ಇಲ್ಲಿ ನಾವು ತೆಲಂಗಾಣ ಸರ್ಕಾರದ ಮಹತ್ವದ ಯೋಜನೆ SHE TEAM ಬಗ್ಗೆ ತಿಳಿದು ಕೊಳ್ಳಬೇಕು. 

She Team

ಈ ಯೋಜನೆ ಯುವತಿಯರ ಹಾಗೂ ಮಹಿಳೆಯರ ಈವ್ ಟೀಸಿಂಗ್ ಹಾಗೂ ಲೈಂಗಿಕ ದೌರ್ಜನ್ಯಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಾಡಿದ ಯೋಜನೆ 2014ರಲ್ಲಿ IASಅಧಿಕಾರಿ ಸ್ವಾತಿ ಲಕ್ರಾ ಅವರ ನೇತೃತ್ವದಲ್ಲಿ ಮಾಡಿದ್ದು. ಹೈದರಾಬಾದಿನಾದ್ಯಂತ ನೂರು ತಂಡಗಳನ್ನು ರಚಿಸಿದ್ದು ಒಂದೊಂದು ತಂಡದಲ್ಲಿ ಐದು ಜನ ಲೇಡಿ ಕಾನ್ಸ್ಟೇಬಲ್ ಗಳಿದ್ದು, ಇವರು ಸಿವಿಲ್ ಡ್ರೆಸ್ ನಲ್ಲಿ ಇದ್ದುಕೊಂಡು ಈವ್ ಟೀಸಿಂಗ್ ಕಂಡ ತಕ್ಷಣ ಅರೆಸ್ಟ್ ಮಾಡಿ ಕ್ರಮ ತೆಗೆದುಕೊಳ್ಳುತ್ತಾರೆ. ಹಾಗೆ ಮಾಡಿದವರ ತಂದೆತಾಯಿಗಳನ್ನು ಕರೆದು ಅವರಿಗೆ ಕೌನ್ಸಿಲಿಂಗ್ ನೀಡುತ್ತಾರೆ. 

Jayabharathi Hyderabad Bikerni Women Bike Rider

ಇಂತಹ SHE TEAMಗಳನ್ನು ಪ್ರಮೋಟ್ ಮಾಡಲು ಹಾಗೂ ತೆಲಂಗಾಣದ ಪ್ರವಾಸಿ ತಾಣಗಳನ್ನು ಬೇರೆ ದೇಶಗಳವರಿಗೆ ಪರಿಚಯಿಸಲು ತೆಲಂಗಾಣ ಸರ್ಕಾರ ಜೈಭಾರತಿ ಹಾಗೂ ಇತರ ಮೂವರನ್ನು ಬೈಕಿನಲ್ಲಿ ಆರು ದೇಶಗಳಿಗೆ ಕಳುಹಿಸಿತು. ಬಜಾಜ್(Bajaj) ಕಂಪೆನಿ ಇವರಿಗೆ ಬೈಕ್ ಗಳನ್ನು ನೀಡಿತು. 

2018 ಫೆಬ್ರವರಿ 11ರಂದು ಇವರು ಹೈದರಾಬಾದ್ ನಿಂದ ಹೊರಟು ಇಂಡಿಯಾ, ಮಯನ್ಮಾರ್,(Myanmar ) ಥಾಯ್ಲೆಂಡ್,(Thailand) ಲಾವೋಸ್, ಕಾಂಬೋಡಿಯ, ವಿಯೆಟ್ನಾಂ ಈ ಆರು ದೇಶಗಳಲ್ಲಿ ಸಂಚರಿಸಿ 19 ಯುನೆಸ್ಕೋ ಪ್ರಪಂಚ ಪಾರಂಪರಿಕ ತಾಣಗಳು, 35 ಯುನೆಸ್ಕೋ ಸೈಟ್ iಳನ್ನು ನೋಡಿಕೊಂಡು 56 ದಿನಗಳ ನಂತರ ಏಪ್ರಿಲ್ 8ರಂದು 17,000 ಕಿಮೀ ಕ್ರಮಿಸಿ ಹೈದರಾಬಾದ್ ಗೆ ವಾಪಸಾದರು. 

ಗಾಂಧಿ ಕಂಡ ಕನಸು ನನಸು

ಭಾರತಿಯ ಪಯಣ ಇಲ್ಲಿಗೇ ಮುಗಿಯಲಿಲ್ಲ. ಎಂದೂ ಹಿಮವನ್ನೇ ನೋಡದ ಇವರು ಸ್ವಲ್ಪ ತರಬೇತಿ ಪಡೆದು ಕೇದಾರಕಾಂತ ಎನ್ನುವ ಪ್ರದೇಶದಲ್ಲಿ ಸ್ನೋ ಟ್ರೆಕ್ಕಿಂಗ್ ಮಾಡುತ್ತಾರೆ. 2017ರ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ವಿವಿಧ ನಗರಗಳ 60 ಬೈಕ್ ರೈಡರ್ ಮಹಿಳೆಯರನ್ನು ಹೈದರಾಬಾದ್ ಗೆ ಆಹ್ವಾನಿಸಿ ಹಗಲೆಲ್ಲ ಅವರಿಗೆ ಸುರಕ್ಷತಾ ಕ್ರಮಗಳನ್ನು ತಿಳಿಸಿ ರಾತ್ರಿ ಹೈದರಾಬಾದ್ ನ ಪೀಪಲ್ಸ್ ಪ್ಲಾಜಾದಿಂದ ಚಾರ್ಮಿನಾರ್ ವರೆಗೆ ಬೈಕ್ ರೈಡಿಂಗ್ ನಡೆಸಿದರು.

ರಾತ್ರಿ 12 ಗಂಟೆಗೆ ಚಾರ್ಮಿನಾರ್ ತಲುಪಿದ ಮಹಿಳೆಯರು ಮತ್ತೆ ಅವರವರು ಉಳಿದುಕೊಂಡ ಜಾಗ ಸೇರುವಾಗ ಸರಿ ರಾತ್ರಿ 2 ಗಂಟೆ. ಈ ರೈಡ್ ನಿಂದ ಗಾಂಧೀಜಿ ಕಂಡ ಕನಸು ಅರ್ಧ ರಾತ್ರಿಯಲ್ಲಿ ಹೆಣ್ಣು ಧೈರ್ಯವಾಗಿ ಪ್ರಯಾಣ ಮಾಡಿದಾಗ ಸ್ವತಂತ್ರ ಬಂದಹಾಗೆ ಅನ್ನುವ ಮಾತು ಸಾಬೀತು ಮಾಡಿದೆವು ಅಂತ ಹೇಳುತ್ತಾರೆ ಜೈಭಾರತಿ. 

Jayabharathi Hyderabad Bikerni Women Bike Rider

ಇವರ ಮುಂದಿನ ಯೋಜನೆ ಬತುಕಮ್ಮ ರೈಡ್. ನಮ್ಮ ನವರಾತ್ರಿಯಂತೆ ತೆಲಂಗಾಣದಲ್ಲಿ ಹೂಗಳನ್ನು ಬುಟ್ಟಿಗಳಲ್ಲಿ ಜೋಡಿಸಿ ಹಾಡುತ್ತಾ ಆಡುತ್ತಾ 9 ದಿನ ಆಚರಿಸುವ ಹಬ್ಬವೇ ಬತುಕಮ್ಮ ಹಬ್ಬ. ಕಳೆದ ವರ್ಷ ಈ ಹಬ್ಬದ ಸಮಯದಲ್ಲಿ ಜೈಭಾರತಿ ಯವರು ತನ್ನ  ಜೊತೆ ಎಂಟು ತರುಣಿಯರಿಗೆ ಬೈಕ್ ರೈಡಿಂಗ್ ಕಲಿಸಿ 9 ರಾಯಲ್ ಎನ್ಪೀಲ್ಡ್ ಬೈಕ್ 9 ತರುಣಿಯರು 9 ಜಿಲ್ಲೆಗಳಲ್ಲಿ 9 ದಿನ ಪ್ರಯಾಣಿಸಿ SHE TEAM ಬಗ್ಗೆ ವ್ಯಾಪಕ ಪ್ರಚಾರ ನಡೆಸಿದರು.

ಸದಾ ಪ್ರಯಾಣಕ್ಕೆ ಅನುಕೂಲವಾಗಿ ಜೀನ್ಸ್ ತೊಡುತ್ತಿದ್ದ ಇವರು ಈ ರೈಡ್ ನಲ್ಲಿ ಮಾತ್ರ ತೆಲಂಗಾಣದ ಹ್ಯಾಂಡ್ ಲೂಮ್ ವಸ್ತ್ರಗಳನ್ನು ಧರಿಸಿ ಅವುಗಳಿಗೂ ಪ್ರಚಾರ ತಂದರು. 

ಮಕ್ಕಳಿಗಾಗಿ ಪ್ರವಾಸ

ಭಾರತಿ ಅವರು ಸ್ವೇಚ್ಛಾ ಅನ್ನುವ NGO ಜೊತೆ ಗುರುತಿಸಿಕೊಂಡು ಸರ್ಕಾರಿ ಶಾಲೆಗಳ ಮಕ್ಕಳಿಗೆ ಪುಸ್ತಕಗಳು ಮುಂತಾದವುಗಳನ್ನು ವಿತರಿಸುವ ಕೆಲಸವನ್ನು ಸಹ ಮಾಡಿಕೊಂಡು ಬಂದಿದ್ದಾರೆ. ಒಮ್ಮೆ ಒಬ್ಬ ಶಿಕ್ಷಕಿ ನೀವು ಮಾತ್ರ ದೇಶ ವಿದೇಶಗಳನ್ನು ಸುತ್ತಿ ಬಂದಿದ್ದೀರಿ. ನಮ್ಮ ಮಕ್ಕಳಿಗೆ ಪುಸ್ತಕಗಳು ಮುಂತಾದವುಗಳನ್ನು ವಿತರಿಸುವುದರ ಬದಲಾಗಿ ಮಕ್ಕಳನ್ನು ಒಂದು ಪುಟ್ಟ ಪ್ರವಾಸ ಕರೆದುಕೊಂಡು ಹೋಗಬಹುದಲ್ಲಾ, ಅವರಿಗೂ ಪ್ರವಾಸದ ಆಸೆ ಇರುತ್ತಲ್ವ ಅಂದದ್ದಕ್ಕೆ ಆ ಶಾಲೆಯ ಮಕ್ಕಳನ್ನು ಗುಂಟೂರು ಜಿಲ್ಲೆ ಅಮರಾವತಿಯಿಂದ(Amaravathi) ರೈಲಿನಲ್ಲಿ ಹೈದರಾಬಾದ್ ಗೆ ಕರೆತಂದು ಅಲ್ಲಿನ ಪ್ರೇಕ್ಷಣೀಯ ಸ್ಥಳಗಳನ್ನು ತೋರಿಸಿ ಆ ಮಕ್ಕಳನ್ನು ಖುಷಿ ಪಡಿಸುತ್ತಾರೆ. 

USAನಲ್ಲಿ 34 ದಿನಗಳಲ್ಲಿ 17,300 ಕಿಮೀ ಬೈಕ್ ರೈಡ್ ಮಾಡುತ್ತಾರೆ. ಒಟ್ಟಾಗಿ ಈವರೆಗೆ ಸರಿಸುಮಾರು 1,00,000 ಕಿಮೀ ರೈಡ್ ಮಾಡಿದ್ದಾರೆ. ಈ ರೈಡ್ ಗಳಿಗಾಗಿ ದುಡ್ಡು ಹೇಗೆ ಹೊಂದಿಸುತ್ತೀರಿ ಅನ್ನುವ ಪ್ರಶ್ನೆಗೆ ಅವರ ಉತ್ತರ ಏನು ಗೊತ್ತಾ? 

Jayabharathi Hyderabad Bikerni Women Bike Rider

ನಾನು ಬ್ಯೂಟಿಪಾರ್ಲರ್ ಗೆ ಹೋಗುವುದಿಲ್ಲ, ಮಾಲ್ ಗಳಲ್ಲಿ ಶಾಪಿಂಗ್ ಮಾಡುವುದಿಲ್ಲ, ಮಾಲ್ ಗಳಲ್ಲಿ ಹೆಚ್ಚು ಹೆಚ್ಚು ಹಣ ಖರ್ಚು ಮಾಡಿ ಸಿನಿಮಾ ನೋಡುವುದಿಲ್ಲ. ಈ ರೀತಿ ಉಳಿಸಿದ ಹಣದಲ್ಲಿ ಬೈಕ್ ರೈಡ್ ಮಾಡುತ್ತೇನೆ. ನಾನೂ ಮಧ್ಯಮ ವರ್ಗದ ಕುಟುಂಬದಿಂದ ಬಂದವಳೇ.

ಇದಲ್ಲದೆ ಇತ್ತೀಚೆಗೆ ತಾನು ಕಲಿತದ್ದು ಮತ್ತೊಬ್ಬರಿಗೆ ಕಲಿಸಬೇಕು ಅನ್ನುವ ಆಲೋಚನೆಯಿಂದ MOWO (moving women)ಅನ್ನುವ ಸಂಸ್ಥೆ ಪ್ರಾರಂಭಿಸಿ ಯುವತಿಯರಿಗೆ ಹಾಗೂ ಮಹಿಳೆಯರಿಗೆ ಗೇರ್ ಹಾಗೂ ಗೇರ್ ಲೆಸ್ ಟೂವೀಲ್ಹರ್ ಕಲಿಸುತ್ತಿದ್ದಾರೆ. ಇದಕ್ಕಾಗಿ ಅವರು 20 ಲೇಡಿ ಟ್ರೈನರ್ಸ್ ಅನ್ನು ತಯಾರು ಮಾಡಿ 260 ಜನಕ್ಕೆ ಟೂವೀಲ್ಹರ್ ಕಲಿಸಿ ಡ್ರೈವಿಂಗ್ ಲೈಸೆನ್ಸ್ ಸಹ ಕೊಡಿಸಿದ್ದಾರೆ. 

ಮಧ್ಯಮ ವರ್ಗದ ಹಾಗೂ ಬಡ ಮಹಿಳೆಯರು  ಟೂವೀಲ್ಹರ್ ಕಲಿತರೆ ಈಗ ವ್ಯಾಪಕವಾಗಿ ಹೆಚ್ಚುತ್ತಿರುವ  ಡೆಲಿವರಿ ಜಾಬ್ಸ್ (ಜೊಮಾಟೋ, ಸ್ವಿಗ್ಗಿ,ಅಮೆಜಾನ್, ಫ್ಲಿಪ್ ಕಾರ್ಟ ಮುಂತಾದವು)ಗಳನ್ನು ಪಡೆದು ಸ್ವತಂತ್ರವಾಗಿ ಜೀವಿಸಬಹುದು. ಮಹಿಳೆಯರು ಎಲ್ಲಾ ರಂಗಗಳಲ್ಲಿಯೂ ಡೆಲಿವರಿ ರಂಗದಲ್ಲಿ ಏಕೆ ಹಿಂದಿರಬೇಕು ಅನ್ನುವುದು ಜೈಭಾರತಿ ಯವರ ಪ್ರಶ್ನೆ.

Jayabharathi Hyderabad Bikerni Women Bike Rider

ಹೆಣ್ಣು ಮಕ್ಕಳಿಗೆ ಸ್ಫೂರ್ತಿ

ಹೈದರಾಬಾದಿನ ಭಾರತಿಯವರ ಆಪ್ತ ವಲಯದಲ್ಲಿ ಯಾರಿಗಾದರೂ ಹೆಣ್ಣುಮಗು ಹುಟ್ಟಿದರೆ ಓ ಮತ್ತೊಬ್ಬ ಬೈಕ್ ರೈಡರ್ ಹುಟ್ಟಿದಳು ಅನ್ನುತ್ತಿದ್ದಾರೆ. ಭಾರತಿಯವರ ಧೈರ್ಯಕ್ಕೆ ಮತ್ತೊಂದು ಉದಾಹರಣೆ ಕೊಚ್ಚಿಯ ಒಂದು ದ್ವೀಪದಲ್ಲಿ ಒಂದು ಆರ್ಕಿಟೆಕ್ಟ್ ಪ್ರಾಜೆಕ್ಟ್ ಸಲುವಾಗಿ ಹದಿನಾಲ್ಕು ಜನ ಪುರುಷರೊಂದಿಗೆ ಒಂದು ವರ್ಷ ಇರಬೇಕಾಗುತ್ತದೆ. 

ದ್ವೀಪದಿಂದ ಹೊರಗೆ ಹೋಗಬೇಕಾದರೆ ದೋಣಿಯಲ್ಲೇ ಪಯಣಿಸುವ ಅವಶ್ಯಕತೆ ಇರುತ್ತದೆ ಆಗ ಭಾರತಿ ಮೋಟಾರ್ ಬೋಟ್ ಹಾಗೂ ಹುಟ್ಟು ಹಾಕುವ ದೋಣಿ ನಡೆಸುವುದನ್ನು ತನ್ನ ಪುರುಷ ಸಹೋದ್ಯೋಗಿಗಳಿಂದ ಕಲಿತು ಹೊರಗೆ ಹೋಗಬೇಕಾದಾಗ ಒಬ್ಬರೇ ಚಲಾಯಿಸಿ ತನ್ನ ಪ್ರಾಜೆಕ್ಟ್ ಪೂರ್ತಿ ಮಾಡುತ್ತಾರೆ. 

ಜೈಭಾರತಿ ತನ್ನ ಆರು ದೇಶಗಳ ಪ್ರಯಾಣದ ಅನುಭವವನ್ನು ROAD TO MEKONG ಅನ್ನುವ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಇಂಗ್ಲೀಷ್ ನಲ್ಲಿ ವಿಷಯಗಳನ್ನು ತಿಳಿಸಬಹುದು, ಮಾತೃಭಾಷೆಯಲ್ಲಾದರೆ ಭಾವನೆಗಳನ್ನು ಹಂಚಿಕೊಳ್ಳಬಹುದು ಅನ್ನುವ ಭಾರತಿ ಮೊದಲು ತೆಲುಗಿನಲ್ಲಿ ನಂತರ ವಿದೇಶದವರು ಓದಲು ಇಂಗ್ಲಿಷ್ ನಲ್ಲಿ ಪುಸ್ತಕ ಬಿಡುಗಡೆ ಮಾಡಿದ್ದು ಆ ಪುಸ್ತಕ ಅಮೆಜಾನ್ ನಲ್ಲಿ ಬೆಸ್ಟ್ ಸೆಲ್ಲರ್ ಆಗಿದೆ. 

Jayabharathi Hyderabad Bikerni Women Bike Rider

ಹೆಣ್ಣು ಜೀವಗಳಿಗೆ ಜೈಭಾರತಿ ಕಿವಿಮಾತು

1) ನಿಮಗೆ ಯಾವುದು ಸಂತೋಷ ಕೊಡುತ್ತದೋ ಅದೇ ಕೆಲಸ ಮಾಡಿ.

2) ಸಾಧ್ಯವಾದಷ್ಟೂ ಡ್ರೈವಿಂಗ್ ಹಾಗೂ ಟೂವೀಲ್ಹರ್ ಕಲಿಯಿರಿ.

3) ಲಾಂಗ್ ಡ್ರೈವ್ ಮಾಡುವಾಗ ಒಳ್ಳೆಯ ಹೆಲ್ಮೆಟ್ ಹಾಗೂ ಸೇಫ್ಟಿ ಜಾಕೆಟ್, ನೀ ಪ್ಯಾಡ್ ಮುಂತಾದ ರಕ್ಷಣಾ ಉಡುಪು ಧರಿಸಿ. ಸರಿಯಾಗಿ ಪ್ಲಾನ್ ಮಾಡಿ. ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ರೈಡ್ ಮಾಡಿ, ಅನಿವಾರ್ಯ ಪರಿಸ್ಥಿತಿ ಬಿಟ್ಟರೆ ರಾತ್ರಿ ರೈಡಿಂಗ್ ಬೇಡ.

Jayabharathi Hyderabad Bikerni Women Bike Rider

4) ಸೋಲೋ ರೈಡ್ ಮಾಡುವಾಗ ಎಲ್ಲಿಗೆ ಹೇಗೆ ಹೋಗುತ್ತಿದ್ದೀರಿ ಎಂದು ಯಾರಾದರೊಬ್ಬರಿಗೆ ತಿಳಿಸಿ. ಮೊಬೈಲ್ ನಲ್ಲಿ ಯಾವುದಾದರೂ ಸೇಫ್ಟಿ ಆಪ್ ಬಳಸಿ.

5) ಪ್ರಯಾಣದಲ್ಲಿ ಎಲ್ಲಿ ಏನು ಬಿಸಿ ಬಿಸಿಯಾಗಿ ಸಿಗುತ್ತದೋ ಅದೇ ತಿನ್ನಿ .

6) ಪ್ರಕೃತಿ ಸೌಂದರ್ಯ ವನ್ನು ಆಸ್ವಾದಿಸಿ.

7) ಸ್ವಾವಲಂಬಿಗಳಾಗಿ

8) ಯಾರು ಏನು ಅಂದುಕೊಳ್ಳುತ್ತಾರೋ ಅನ್ನುವ ಆಲೋಚನೆ ಬಿಡಿ.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button