ದೂರ ತೀರ ಯಾನನಡಿಗೆ ನಮ್ಮ ಖುಷಿಗೆಮೋಟಾರ್ ಸೈಕಲ್ ಡೈರಿವಿಂಗಡಿಸದಸೂಪರ್ ಗ್ಯಾಂಗು

ಮಂಜಿನ ನಗರಿ ಮಡಿಕೇರಿಯಲ್ಲಿರುವ ಕೋಟೆ ಬೆಟ್ಟ ಗೊತ್ತಾ: ಅನ್ವೇಶ್ ಕೇಕುಣ್ಣಾಯ ಬರೆದ ಮೋಟಾರ್ ಸೈಕಲ್ ಡೈರಿ

ಸಿದ್ದಾಪುರದಿಂದ ಅನ್ವೇಶ್ ಕೇಕುಣ್ಣಾಯ ಮತ್ತು ಗೆಳೆಯರು ಬೈಕು ಹತ್ತಿಕೊಂಡು ಮಡಿಕೇರಿಗೆ ಹೋಗಿ ಅಲ್ಲಿಯ ಸುಂದರ ಕೋಟೆ ಬೆಟ್ಟ ಹತ್ತಿದ ಕತೆ ಇದು.

Madikeri Abbey falls

ಮಡಿಕೇರಿ ಅಂದರೆ ಪ್ರವಾಸಿಗರ ಸ್ವರ್ಗ. ಮಡಿಕೇರಿ(madikeri) ಅಂದ ತಕ್ಷಣ ನೆನಪು ಆಗೋದು ಅಬ್ಬಿ ಫಾಲ್ಸ್(Abbey falls), ರಾಜಾ ಸೀಟ್(raja seat), ನಿಸರ್ಗಧಾಮ, ಗೋಲ್ಡನ್ ಟೆಂಪಲ್(Golden temple), ದುಬಾರೆ ಮುಂತಾದ ಪ್ರವಾಸಿ ತಾಣಗಳು ಇಂಟರ್ ನೆಟ್ ಅಲ್ಲಿ ಹುಡುಕುವುದಕ್ಕಿಂತ ವೇಗವಾಗಿ ನಮ್ಮ ತಲೆಗೆ ಹೊಳೆಯುತ್ತೆ. ಆದರೆ ಮಡಿಕೇರಿ ಅಲ್ಲಿ ಇವಷ್ಟೆ ಇರುವುದು ಅಲ್ಲ, ಇನ್ನೂ ಹಲವಾರು ಪ್ರವಾಸಿ ತಾಣಗಳು ಇವೆ ಎಂಬ ವಿಷಯ ಹಲವರಿಗೆ ಗೊತ್ತಿಲ್ಲ.

ಈಗ ನಾನು ಹೇಳಲು ಹೊರಟಿರುವ ಸ್ವರ್ಗಲೋಕದೊಳಗೊಂದು ಸ್ವರ್ಗ. ಬಾಕಿ ಉಳಿದ ತಾಣಗಳಂತೆ ಜನ ಜಂಗುಳಿ ಇಲ್ಲ, ಜನಪ್ರಿಯತೆ ಸಹ ಇಲ್ಲ, ಈ ಕಾರಣದಿಂದ ಈ ಸ್ಥಳದ ವಿವರ ಗೂಗಲ್ ನಲ್ಲಿ ಸಿಗುವುದಿಲ್ಲ…

Madikeri Abbey falls

ನೀವು ಇದನ್ನು ಇಷ್ಟಪಡಬಹುದು: 300 ರೂನಲ್ಲಿ ಉಡುಪಿಯಿಂದ ಮುರುಡೇಶ್ವರ ಹೋಗಿ ಬಂದ ಕಥನ: ನವ್ಯಶ್ರೀ ಶೆಟ್ಟಿ ಮೊದಲ ರೈಲು ಪಯಣದ ಖುಷಿ

ಕೋಟೆ ಬೆಟ್ಟದ ದಾರಿಯಲ್ಲಿ…

ನಾವೆಲ್ಲ ಸ್ನೇಹಿತರು ಎಲ್ಲಿಗೆ ಹೋಗುವುದು ಅಂತ ಯೋಚಿಸುತ್ತಿರುವಾಗಲೇ ಒಬ್ಬ ಸ್ನೇಹಿತ ಹೇಳಿದ್ದು ಕೋಟೆ ಬೆಟ್ಟ(kote betta) ಹೋಗೋಣ ಅಂತ. ಹಾಗೆ ವಾಟ್ಸ್ ಆ್ಯಪ್ ನಲ್ಲಿ ಸ್ನೇಹಿತರನ್ನು ಸೇರಿಸಿ, ಸಭೆ ಮಾಡಿದೆವು. ಹಲವು ಸ್ನೇಹಿತರು ಬರಲು ಆಗುವುದಿಲ್ಲ ಅಂತ ಹೇಳಿದರು. ಕೊನೆಗೆ 3 ಜನ ಮಾತ್ರ ಹೊರಟೆವು. ಕೋಟೆ ಬೆಟ್ಟ ಬಾ ಅಂತ ಕರೆಯುತ್ತಿತ್ತು, ದಾರಿ ನಮ್ಮನ್ನು ಸ್ವಾಗತಿಸುತ್ತಿತ್ತು..

ಸಿದ್ದಾಪುರದಿಂದ(siddapura) ಬೈಕ್ ಅಲ್ಲಿ ಹೊರಟ ನಾನು, ಚೇಟ್ಟಲ್ಲಿ, ಸುಂಟಿಕೊಪ್ಪ- ಮಾದಾಪುರ ಮಾರ್ಗವಾಗಿ ದಾರಿ ಮಧ್ಯೆ 2 ಜನ ಸ್ನೇಹಿತರನ್ನು ಸೇರಿಸಿಕೊಂಡು, ಮೊದಲಿಗೆ ಕೋಟೆ ಬೆಟ್ಟದ ಮುಂಭಾಗಕ್ಕೆ ತಲುಪಿದೆವು. ಮೇಲೆ ಹೇಗೆ ಹೋಗುವುದು ಅಂತ ಯೋಚಿಸುತ್ತಿರುವಾಗಲೇ ಆಪತ್ಬಾಂಧವರಿಗೆ ಕರೆ ಮಾಡಿದಾಗ ಮೇಲೆ ಹೋಗಲು ಬೇರೆ ದಾರಿ ಇದೆ, ಅದು ಅಲ್ಲಿಂದ ಪುನಃ 20 km ಹೋಗಬೇಕು ಅಂತ ತಿಳಿಯಿತು. 

Madikeri Abbey falls

ಅಲ್ಲಿಗೆ ಹೊರಟೆವು, ಹಳ್ಳಿಗಟ್ಟು(halligattu) ಎಂಬ ಪಟ್ಟಣದಿಂದ ಬಲಕ್ಕೆ 2-3 km ಸಾಗಿ, ಅಲ್ಲಿಂದ ಪುನಃ ಬಲಕ್ಕೆ ಹೋದೆವು. ಹೋಗುತ್ತಾ ಸಣ್ಣ ದಾರಿ ಒಂದನ್ನು ಹೊಕ್ಕಿ, ತಿರುವು ರಸ್ತೆಗಳು, ಆಕಾಶದ ಎತ್ತರಕ್ಕೆ ಬೆಳೆದ ಮರಗಳು, ಆ ಮರಗಳ ಮಧ್ಯೆ ನಮ್ಮನ್ನೇ ಇಣುಕಿ ನೋಡುತ್ತಿದ್ದ ಆಕಾಶ, ವಾರದ ಹಿಂದಿನ ಮಳೆಯಿಂದ ಕೆಸರುಮಯವಾಗಿದ್ದ ರಸ್ತೆಗಳು, ಅಂತಹ ರಸ್ತೆಯಲ್ಲಿ ಬೈಕ್ ಓಡಿಸುವುದು ಎಂದರೆ ಏನೋ ಖುಶಿ ಅಲ್ವಾ, ಹಾಗೆ ಪ್ರಯಾಣ ಸಾಗಿತ್ತು. ಕಾಡುಗಳ ಮಧ್ಯೆ ಇದ್ದ ಮನೆಯೊಂದರ ಮುಂದೆ ಬೈಕ್ ನಿಲ್ಲಿಸಿ, ನಮ್ಮ ಚಾರಣ ಶುರು ಮಾಡಿದೆವು.

ಆ ಹೆಸರು ಕೇಳಿದ್ದೇ ಮೊದಲು

Madikeri Abbey falls

ಕೋಟೆ ಬೆಟ್ಟದ ಪೂರ್ಣ ವಿವರ ಇಂಟರ್ನೆಟ್ ಅಲ್ಲಿ ಸಿಗಲ್ಲ. ಅನೇಕರು ಈ ಹೆಸರನ್ನು ಕೇಳಿದ್ದು ಇದೆ ಮೊದಲು ಆಗಿರಬಹುದು. ಹಾಗಾಗಿ ನಮಗೂ ಹಲವು ಅನುಮಾನ ಇದ್ದವು. ಒಂದೆರಡು ಮನೆ ಬಿಟ್ಟರೆ ಮಾನವನ ಹೆಜ್ಜೆ ಅಲ್ಲಿ ಕಾಣ ಸಿಗುವುದಿಲ್ಲ. ಹಾಗಾಗಿ ಮತ್ತೆ ಕೆಲವು ಆಪತ್ಬಾಂಧವರಿಗೆ ಕರೆ ಮಾಡಿ ದಾರಿ ಕೇಳಿಕೊಂಡು ಹೋದೆವು. ಅಲ್ಲಿಗೆ ನಮ್ಮ ಸುತ್ತ ಬೆಳೆದಿದ್ದ ಅನುಮಾನದ ಹುತ್ತ ನೆಲ ಸಮ ಆಗಿ ಹೋಗಿತ್ತು.

ಅಲ್ಲಿಂದ ಮುಂದೆ ಆನೆ ನಡೆದದ್ದೇ ದಾರಿ ಎನ್ನುವಂತೆ ಸಾಗಿತ್ತು ನಮ್ಮ ಚಾರಣ.

ಮೊದಲಿಗೆ ತೀರ ಸಾಮಾನ್ಯನಂತೆ ಇದ್ದ ಗುಡ್ಡ ಹತ್ತಿದೆವು. ಅಲ್ಲಿಂದ ಶುರು ಆಗಿದ್ದು ನೋಡಿ ಸಾಹಸ, ದಾರಿ ಉದ್ದಕ್ಕೂ ತೋರಣ ಕಟ್ಟಿದಂತಿರುವ ಬಳ್ಳಿ, ಹೆದರಿಕೆ ಹುಟ್ಟಿಸುವಂತಹ ಮರಗಳು, ನಾವು ಅಂದುಕೊಂಡಷ್ಟು ಸುಲಭ ಆಗಿರಲಿಲ್ಲ ಆ ಚಾರಣ. ಹೆಜ್ಜೆ ಇಟ್ಟಲ್ಲಿ ಎಲ್ಲ ಉಂಬುಳ ರಕ್ತ ಹಿರುತ್ತಿದ್ದವು. ನಿಂತ ನಿಂತಲ್ಲಿ ಹೊಚ್ಚ ಹೊಸ ಡಿಪಿಗಾಗಿ ಫೋಟೋ ಕ್ಲಿಕ್ ಮಾಡುವುದರಲ್ಲೇ ಮೈ ಮರೆತ ಸ್ನೇಹಿತೆ, ಮುಂದೆ ಸಾಗಿದಷ್ಟು ಒಂದಕ್ಕಿಂತ ಮತ್ತೊಂದು ಸುಂದರ ಸಿನರಿ, ಅಲ್ಲೊಮ್ಮೆ ಇಲ್ಲೊಮ್ಮೆ ದರ್ಶನ ಕೊಡುವ ಸೂರ್ಯ, ಮೈದಳೆದು ನಿಂತ ಸುಂದರ ಕಾಡು ಹೂವು, ಕ್ರಮಿಸಿದಂತೆ ಬೆಟ್ಟ ಇನ್ನಷ್ಟು ಕಷ್ಟ ಎನಿಸುವಂತೆ ಇತ್ತು.

Madikeri Abbey falls

ಎಷ್ಟು ಹೋದರು ತಲುಪದ ತುತ್ತ ತುದಿಯ ಕೋಟೆ ಬೆಟ್ಟ

ಅಂತೂ ಕೋಟೆ ಬೆಟ್ಟದ ಕೆಳಗಿನ ಬೆಟ್ಟಕ್ಕೆ ತಲುಪಿದೆವು. ಗಾಳಿ ನಮ್ಮನ್ನೇ ಬಿಸಾಕುವ ಹಾಗೆ ಇತ್ತು. ಆಗಾಗಲೇ ಸಮಯ ಒಂದು ಆಗಿದ್ದರಿಂದ ಇನ್ನೂ ಮೇಲೆ ಹೋಗುವುದು ಬೇಡ ಅಂತ ಅನಿಸಿತು. ಅಲ್ಲೇ ಒಂದಷ್ಟು ಹೊತ್ತು ಕೂತು, ನಾವು ತಂದಿದ್ದ ತಿಂಡಿ – ತಿನಿಸುಗಳನ್ನು ಖಾಲಿ ಮಾಡಿದೆವು.. 

ಹಾಗೆ ಇನ್ನಷ್ಟು ಫೋಟೋಗಳನ್ನು ಕ್ಲಿಕ್ ಮಾಡಿಕೊಂಡು, ಹತ್ತಿದ ಮೇಲೆ ಇಳಿಯಲೇ ಬೇಕು ಅಲ್ವೇ? ಇಳಿಯಲು ಶುರು ಮಾಡಿದೆವು. ಹತ್ತುವಾಗ ಇದ್ದ ಉತ್ಸಾಹ ಇಳಿಯುವಾಗ ಇರಲಿಲ್ಲ. ಒಂದೊಂದು ಹೆಜ್ಜೆ ಇಟ್ಟಗಳೂ ಮನಸ್ಸು ಬೇಡ ಬೇಡ ಅನ್ನುತ್ತಿತ್ತು. ಆ ಬೆಟ್ಟ ಬಿಟ್ಟು ಬರಲು ಮನಸ್ಸು ಇಲ್ಲ ಅಂತ ಅಲ್ಲ, ಕಾಲುಗಳು ತೀರ ಆಯಾಸಗೊಂಡಿದ್ದರಿಂದ.

Madikeri Abbey falls

ಹರ ಸಾಹಸ ಪಟ್ಟು ನಾವು ಬೈಕ್ ಇಟ್ಟ ಮೂಲ ಸ್ಥಾನ ತಲುಪಿದೆವು. 

 ಇದು ನನ್ನ ಕೋಟೆ ಬೆಟ್ಟ ಚಾರಣದ ಕತೆ, ನೀವೂ ಒಮ್ಮೆ ಹತ್ತಿ.

kote betta

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button