ಮ್ಯಾಜಿಕ್ ತಾಣಗಳುವಿಂಗಡಿಸದ

ಹೆಬ್ರಿ ಬಳಿ ಇದೆ 300 ಅಡಿ ಎತ್ತರದಿಂದ ಧುಮುಕುವ ಸುಂದರ ಜಲಪಾತ ಕೂಡ್ಲುತೀರ್ಥ

ಸೀತಾನದಿಯು ಸುಮಾರು 300 ಅಡಿ ಎತ್ತರದಿಂದ, ಜೋರಾಗಿ ಘರ್ಜಿಸುತ್ತಾ ಧುಮುಕುವ ಅದ್ಭುತ ತಾಣವೇ ಕೂಡ್ಲು ತೀರ್ಥ.(koodlu theertha falls) ಈ ಕೂಡ್ಲು ತೀರ್ಥ ಜಲಪಾತವು ಆಗುಂಬೆ(Agumbe) ಶ್ರೇಣಿಯ ಬಳಿಯಿರುವ ಹೆಬ್ರಿಯ ಹತ್ತಿರವಿದೆ. ಉಡುಪಿಯಿಂದ(udupi) ಸುಮಾರು 42 ಕಿ.ಮೀ ದೂರದಲ್ಲಿರುವ ಈ ಜಲಪಾತವು ಜಲಪಾತ ಪ್ರಿಯರಿಗೆ ಅತ್ಯುತ್ತಮ ಸ್ಥಳವಾಗಿದೆ.

Koodlu Theertha falls Agumbe Udupi

ಈ ಪ್ರಕೃತಿ ಸಮೃದ್ಧ ತಾಣಕ್ಕೆ ಭೇಟಿ ನೀಡುವ ಅವಕಾಶ ಸಿಕ್ಕಿದ್ದು, ನನ್ನ ಪ್ರೊಫೆಸರ್ ಡಾ. ನಂದ ಕಿಶೋರ್ ಅವರಿಂದ. ಶುಕ್ರವಾರ ಕಾಲೇಜಿನಲ್ಲಿ ಕುಳಿತು, ಮುಂದಿನ ದಿನ ರಜೆ ಇದ್ದಿದ್ದರಿಂದ, ಎಲ್ಲಿಗೆ ಹೋಗಬಹುದು ಎಂದು ನಾವೆಲ್ಲರೂ ಯೋಚಿಸುತ್ತಿದ್ದಾಗ, ಸದಾ ವಿದ್ಯಾರ್ಥಿಗಳೊಡನೆ ಸ್ನೇಹ ಭಾವದಿಂದ ಇರುವ ನನ್ನ ಪ್ರೊಫೆಸರ್ “we can go for a trek “(ನಾವೆಲ್ಲರೂ ಚಾರಣಕ್ಕೆ ಹೋಗಬಹುದು) ಎಂದು ಹೇಳಿದೊಡನೆ ನನ್ನ ಸ್ನೇಹಿತರೆಲ್ಲರೂ ಉತ್ಸುಕರಾದರು. ಆರಂಭದಲ್ಲಿ ಎರಡು ಬೈಕ್, ಒಂದು ಕಾರಿನಲ್ಲಿ ಹೋಗೋಣ ಎಂದು ಯೋಚಿಸುತ್ತಿದ್ದ ನಾವು, ಕೊನೆಗೆ ಮಿನಿ ಬಸ್ ಬುಕ್ ಮಾಡಬೇಕಾಯಿತು. ವಿವಿಧ ರಾಜ್ಯಗಳಿಂದ ಬಂದಿದ್ದ ನನ್ನ ಸಹಪಾಠಿಗಳೆಲ್ಲರೂ ಮಲೆನಾಡಿನ ಸೊಬಗು ನೋಡಲು, ಚಾರಣದ ಮೆರಗು ಅನುಭವಿಸಲು ಸಿದ್ಧರಾಗಿಬಿಟ್ಟಿದ್ದರು.

ಬೆಳಿಗ್ಗೆ 6 ಗಂಟೆಗೆ ಎಲ್ಲರೂ ರೆಡಿ

ಮಣಿಪಾಲದ MIT ಗೇಟ್ 4ನಿಂದ ಬೆಳಿಗ್ಗೆ 6 ಗಂಟೆಗೆ ಹೊರಟೆವು. ಮುಂಜಾನೆ ಸಮಯವಾಗಿದ್ದರೂ, ದಾರಿ ಉದ್ದಕ್ಕೂ ಹಾಡು-ನೃತ್ಯ, ಮೋಜು-ಮಸ್ತಿಗೆ ಕಿಂಚಿತ್ತೂ ಕೊರತೆ ಇರಲಿಲ್ಲ. ಒಂದಡೆ ನನ್ನ ಸ್ನೇಹಿತರು ಜೋರಾಗಿ ಹಾಡುತ್ತ ನೃತ್ಯ ಮಾಡುತ್ತಿದ್ದರೆ, ಇನ್ನೊಂದೆಡೆ ನನ್ನ ಪ್ರೊಫೆಸರ್ ನಮ್ಮೆಲ್ಲರೊಡನೆ ಖುಷಿಯಾಗಿ ಹರಟೆ ಹೊಡೆಯುತ್ತಿದ್ದರು. ತಿಂಡಿಗೆ ಹೋಟೆಲ್ ಸೀತಾನದಿಗೆ ಹೋಗಿ, ಬಿಸಿ ಬಿಸಿ ಇಡ್ಲಿ – ವಡೆ ತಿಂದು, ಕಾಫಿ ಕುಡಿದು ಹೊರಟೆವು ಜಲಪಾತಕ್ಕೆ.

Koodlu Theertha falls Agumbe Udupi

ಬಸ್ ನಿಂದ ಕೆಳಗೆ ಇಳಿದ ನಂತರ ಕಂಡದ್ದೆಲ್ಲ ವಿಸ್ಮಯ. ಪ್ರಕೃತಿಯ ವಿಸ್ಮಯ ಜಗತ್ತಿನಲ್ಲಿ ನಾವೆಲ್ಲರೂ ಆದೆವು ತನ್ಮಯ. ಮುಂಜಾನೆಯ ತಂಪನೆಯ ಗಾಳಿ, ಪಶ್ಚಿಮ ಘಟ್ಟದ ದಟ್ಟವಾದ ಮರಗಳು, ಪಕ್ಷಿಗಳ ಆಹ್ಲಾದಕರ ಚಿಲಿಪಿಲಿ ಶಬ್ದ, ದೂರದಲ್ಲೆಲ್ಲೋ ನೀರು ಹರಿಯುವ ಮನೋಹರ ಸದ್ದು. ಜಲಪಾತ ಮುಟ್ಟಲು ಸುಮಾರು 3-4 ಕಿ.ಮೀ ದಟ್ಟ ಕಾಡಿನಲ್ಲಿ ಚಾರಣಿಸಬೇಕಿತ್ತು. ಆ ಮಾರ್ಗದಲ್ಲಿ ಒಂದಷ್ಟು ಕಡೆಗಳಲ್ಲಿ ಮೆಟ್ಟಿಲುಗಳು ಸಹಾ ಇದ್ದವು. ಅಲ್ಲಲ್ಲಿ ಕಲ್ಲುಗಳ ಮಧ್ಯೆ ಹರಿಯುತ್ತಿದ್ದ ಸೀತಾನದಿಯನ್ನು ದಾಟಿದ ಪ್ರಸಂಗವೇ ಅತ್ಯಂತ ಉತ್ಸಾಹಕ.

ನೀವು ಇದನ್ನು ಇಷ್ಟಪಡಬಹುದು: 300 ರೂನಲ್ಲಿ ಉಡುಪಿಯಿಂದ ಮುರುಡೇಶ್ವರ ಹೋಗಿ ಬಂದ ಕಥನ: ನವ್ಯಶ್ರೀ ಶೆಟ್ಟಿ ಮೊದಲ ರೈಲು ಪಯಣದ ಖುಷಿ

ವರಂಗ ಬಸದಿಗೊಂದು ಭೇಟಿ

ಕೊಳವು ತುಂಬಾ ಆಳವಿಲ್ಲದಿದ್ದರಿಂದ ನೇರವಾಗಿ ನೀರು ಕೆಳಗೆ ಬೀಳುವ ಜಾಗದಲ್ಲಿ ನಿಂತು, ಜಲಪಾತದ ನಿಜವಾದ ಸಾರವನ್ನು ಅನುಭವಿಸಿದೆವು. ಆ ನೀರಿನ ಕೆಳಗೆ ನಿಂತು ನಂತರ ಅದರ ಹಿಂದೆ ಇದ್ದ ಬಂಡೆಯನ್ನು ಹತ್ತಿ, ಸ್ವಲ್ಪ ಸಮಯ ಆ ಪ್ರಶಾಂತ ವಾತಾವರಣದಲ್ಲಿ ಕುಳಿತಿದ್ದ ಅನುಭವ ನನಗೆ ನಿಜವಾಗಿಯೂ ದೈವಿಕವಾಗಿತ್ತು. ನಂತರ ಒಂದಷ್ಟು ಫೋಟೋಸ್ ತೆಗೆದುಕೊಂಡು ನಮ್ಮ ಮುಂದಿನ ನಿಲ್ದಾಣದತ್ತ ಸಾಗಿದೆವು.

Koodlu Theertha falls Agumbe Udupi

ಒರಿಯುವ ಬಿಸಿಲಿನಲ್ಲಿ, ಸುಮಾರು 12 ಗಂಟೆಗೆ ಮಣಿಪಾಲಕ್ಕೆ ಹಿಂದಿರುಗಿ ಹೋಗುವ ದಾರಿಯಲ್ಲಿದ್ದ ವರಂಗ ಜೈನ ಬಸದಿಗೆ(Varanga Jain Basadi) ಹೋದೆವು. ದೋಣಿಯಲ್ಲಿ ಕುಳಿತು ಬಸದಿಗೆ ಹೋಗುವಾಗ, ನಾವು ತಂದಿದ್ದ ಅಕ್ಕಿಯನ್ನು ಮೀನುಗಳಿಗೆ ಹಾಕಿದೆವು, ಹಾಗೆಯೇ ಆ ಕೊಳದಲ್ಲಿ ಇದ್ದ ಹಾವನ್ನು ಸಹ ನೋಡಿದೆವು. ಆ ಜಾಗದ ಮಹತ್ವ, ಜೈನ ಸಮುದಾಯದ ಆಚಾರ-ವಿಚಾರಗಳು, ತೀರ್ಥಂಕರರಿಗೆ ಹೀಗೆ ಪ್ರಾಣಿಗಳ ಚಿಹ್ನೆಗಳು ಇದೆ ಎಂಬ ವಿವರಣೆಗಳನೆಲ್ಲವನ್ನು ನನ್ನ ಪ್ರೊಫೆಸರ್ ನಮ್ಮೆಲ್ಲರಿಗೆ ನೀಡಿದರು. ನಂತರ ಸುಮಾರು 2 ಗಂಟೆಗೆ ಮಣಿಪಾಲಕ್ಕೆ ಹಿಂದಿರುಗಿದೆವು.

ಉತ್ಸಾಹಕ ಚಾರಣ, ಮನೋಹರ ಜಲಪಾತ, ಐತಿಹಾಸಿಕ ಬಸದಿ ಇವೆಲ್ಲವನ್ನು ನೋಡುವ ಯೋಗದೊಂದಿಗೆ, ಲೆಕ್ಕವಿಲ್ಲದಷ್ಟು ಮಾತುಕಥೆ, ಹೃತ್ಪೂರ್ವಕ ನಗೆ, ಸಾಕಷ್ಟು ಫೋಟೋಸ್, ಮರೆಯಲಾಗದ ನೆನಪುಗಳು ನಮ್ಮದಾದೆವು. ಅಂತಿಮವಾಗಿ ನಮ್ಮ ಪ್ರವಾಸವು ಅದ್ಭುತ ಅನುಭವದೊಂದಿಗೆ ಕೊನೆಗೊಂಡಿತು.

Koodlu Theertha falls Agumbe Udupi
  • ತನ್ಮಯ ಪ್ರಕಾಶ್

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button