ಕೊರೋನಾ ಸೈನಿಕರಿಗೆ ಗೌರವ ಸಲ್ಲಿಸಲು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 4000 ಕಿಮೀ ನಡೆದ ಕನ್ನಡಿಗ ಭರತ್
ಕೊರೋನಾ ಬಂದ ತಕ್ಷಣ ಬಹುತೇಕರು ಮನೆಯೊಳಗೆ ಬಂಧಿಯಾಗಿಬಿಟ್ಟರು. ಆದರೆ ಕೆಲವರು ಮಾತ್ರ ಕೊರೋನಾ ವಿರುದ್ಧ ಹೋರಾಡಲು ಸೈನಿಕರಂತೆ ನಿಂತರು. ಡಾಕ್ಟ್ರು, ನರ್ಸ್ ಗಳು, ವಾಲಂಟಿಯರ್ ಗಳು ಹೀಗೆ ಅನೇಕರು ಈ ಯುದ್ಧದಲ್ಲಿ ತಮ್ಮ ಪ್ರಾಣ ಲೆಕ್ಕಿಸದೆ ಹೋರಾಡುದ್ದಾರೆ. ಅವರೆಲ್ಲರಿಗೂ ಗೌರವ ಸೂಚಿಸುವ ಸಲುವಾಗಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ 4000 ಕಿಮೀ ನಡೆದ ಸಾಹಸ ಮಾಡಿದ್ದು ಮೈಸೂರಿನ ಭರತ್. ಅವರಿಗೆ ನಮ್ಮ ನಮಸ್ಕಾರ.
- ಉಜ್ವಲಾ ವಿ.ಯು, ಧಾರವಾಡ
ಒಂದು ವರ್ಷದಿಂದ ನಾವೆಲ್ಲರೂ ಕೋವಿಡ್-19ನಿಂದಾಗಿ ಒಂದಲ್ಲಾ ಒಂದು ಕಷ್ಟ ಅನುಭವಿಸುತ್ತಲೇ ಇದ್ದೇವೆ. ವೈರಸ್ಸಿನ ಭಯದಿಂದ ಲಾಕ್ ಡೌನ್ ಆಗಿ ಮನೆಯಲ್ಲಿಯೇ ತಿಂಗಳುಗಟ್ಟಲೆ ಕಳೆಯುವ ಸಂದರ್ಭವೂ ಬಂದೊದಗಿತ್ತು. ಇಂತಹ ಸನ್ನಿವೇಶದಲ್ಲೂ ತಮ್ಮ ಜೀವನವನ್ನು ಲೆಕ್ಕಿಸದೆ ಜನರ ಜೀವದ ರಕ್ಷಣೆಯಲ್ಲಿ ತೊಡಗಿದವರು ಅನೇಕರು. ಅವರನ್ನು ನಾವು “ಕೊರೋನಾ ವಾರಿಯರ್ಸ್” ಎಂದು ಕರೆದಿದ್ದೇವೆ. ಇವರಲ್ಲಿ ಹಲವರನ್ನು ಗುರುತಿಸಿ ಸನ್ಮಾನಗಳನ್ನೂ ಮಾಡಿದ್ದೇವೆ. ಆದರೆ ಇಲ್ಲೊಬ್ಬರು ಕೊರೋನಾ ವಾರಿಯರ್ಸ್ ಗಳಿಗೆ ಕಾಲ್ನಡಿಗೆಯ ಮೂಲಕ ವಿಶಿಷ್ಟವಾದ ಗೌರವವನ್ನು ಸಲ್ಲಿಸಿದ್ದಾರೆ. ಅವರೇ 33 ವರ್ಷದ ಯುವಕ, ನಮ್ಮ ಕರ್ನಾಟಕದ ಮೈಸೂರಿನವರೇ ಆದ “ಭರತ್ ಪಿ. ಎನ್”.
ಅವರು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ 4000 ಕಿಮೀ ನಡಿಗೆ ಮಾಡಿ ಬಂದಿದ್ದಾರೆ.
Walk For Humanity
ಮಾನವೀಯತೆಯನ್ನು ಮೆರೆದ ಕೊರೊನ ವಾರಿಯರ್ಸ್ ಗಳಿಗೆ ಧನ್ಯವಾದ ಹೇಳಲು ಆರಂಭ ಆದ ಈ ನಡಿಗೆಯನ್ನು ಭರತ್ ಅವರು ” ಮಾನವೀಯತೆಯ ನಡಿಗೆ” (Walk for Humanity) ಎಂದು ಕರೆದಿದ್ದಾರೆ.
ಅವರೇ ಹೇಳುವಂತೆ, “ಇಡೀ ದೇಶ ಲಾಕ್ ಡೌನ್ ಆದ ಸಂದರ್ಭದಲ್ಲಿ ನಾನೂ ಕೂಡ ಮನೆಯಲ್ಲಿ ಸೆರೆಯಾದವನೆ. ಈ ಸಂದರ್ಭದಲ್ಲಿ ದಿನನಿತ್ಯ ದೂರದರ್ಶನದಲ್ಲಿ ಯಾವ ರೀತಿ ಕೊರೊನ ವಾರಿಯರ್ಸ್ ಗಳು ತಮ್ಮ ಜೀವನವನ್ನು ಅಪಾಯಕ್ಕೆ ಒಡ್ಡುತ್ತಿದ್ದಾರೆ ಹಾಗೂ ಹೇಗೆ ಜನರ ಸೇವೆಯನ್ನು ನಿಷ್ಕಲ್ಮಶವಾಗಿ ಮಾಡುತ್ತಿದ್ದಾರೆ ಎಂಬುದನ್ನು ಗಮನಿಸುತ್ತಿದ್ದೆ. ಇದರಿಂದ ನಾನೂ ಏನಾದರೂ ಈ ಸಮಾಜಕ್ಕೆ ಕೊಡುಗೆ ನೀಡಬೇಕೆಂದೆನಿಸಿತು. ಅದಕ್ಕಾಗಿಯೇ ಕೋವಿಡ್ -19 ವಾರಿಯರ್ಸ್ ಗಳಿಗೆ ಹಾಗೂ ಯಾರೆಲ್ಲ ಈ ಸಮಾಜಕ್ಕೆ ಸಹಾಯ ಹಸ್ತ ನೀಡಲು ಮುಂದಾಗಿದ್ದಾರೋ ಅವರೆಲ್ಲರಿಗೂ ಕೃತಜ್ಞತೆ ಸಲ್ಲಿಸಲು ಈ ಪ್ರಯಾಣವನ್ನು ಆರಂಭಿಸಿದೆ.”
ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ
ಡಿ. 11. 2020ರಂದು ಕನ್ಯಾಕುಮಾರಿಯಿಂದ(kanyakumari) ಆರಂಭವಾದ ಈ ಕಾಲ್ನಡಿಗೆಯ ಪಯಣ ಭಾರತದ ಶಿಖರವೆಂದೇ ಪ್ರಸಿದ್ಧವಾದ ಕಾಶ್ಮೀರವನ್ನು(Kashmir) ತಲಪುವ ಗುರಿ ಇತ್ತು ಅಂದರೆ 4000 ಕಿಮೀಗಳ ಕಾಲ್ನಡಿಗೆ. ದಿನನಿತ್ಯ ಸುಮಾರು 45 ರಿಂದ 50 ಕಿಮೀ ನಂತೆ ನಡೆದು ಒಟ್ಟು 11 ರಾಜ್ಯಗಳನ್ನು 99 ದಿನದಲ್ಲಿ ಭರತ್ ಅವರು ಕ್ರಮಿಸಿದ್ದಾರೆ. ಕೆಲವೆಡೆ ಸಾರ್ವಜನಿಕರೇ ತಮ್ಮ ಮನೆಗಳಲ್ಲಿ ವಾಸ್ತವ್ಯದ ವ್ಯವಸ್ಥೆ ಕಲ್ಪಿಸಿದ್ದರಾದರೂ, ಮತ್ತೆ ಕೆಲವೆಡೆ ಇವರಿಗೆ ಪೆಟ್ರೋಲ್ ಬಂಕ್, ಟವರ್ ಮತ್ತು ಹೋಟೆಲ್ ಗಳ ಮುಂದೆ ವಿಶ್ರಮಿಸಬೇಕಾದ ಪರಿಸ್ಥಿತಿಯೂ ಎದುರಾಯಿತು. ಈ ಸಮಯದಲ್ಲಿ ಬರೀ ಹಸಿವನ್ನು ನೀಗಿಸುವುದಕ್ಕೆ ಮಾತ್ರ ಆಹಾರವನ್ನು ಸೇವಿಸಿ ಪ್ರಯಾಣವನ್ನು ಮುಂದುವರೆಸುತ್ತಿದ್ದರು.
“ನಾನು ಯಾವುದೇ ಸ್ಥಳದಲ್ಲಿ ತಂಗಿದ್ದರೂ, ಅಲ್ಲಿಯ ಜನರ ಬಳಿ ಮುಂದೆ 50 ಕಿ ಮೀ ಗಳವರೆಗೆ ಅವರಿಗೆ ಪರಿಚಯದವರ ವಿವರ ತಿಳಿಯುತ್ತಿದ್ದೆ. ಇದು ನನಗೆ ತುಂಬಾ ಜನರನ್ನು ಭೇಟಿಯಾಗುವ ಸದವಕಾಶವನ್ನು ಕಲ್ಪಿಸಿತು.”
ಈ ಯಾನವನ್ನು ಆರಂಭಿಸಲು ಭರತ್ ರವರ ಮತ್ತೊಂದು ಬಹುಮುಖ್ಯ ಉದ್ದೇಶವೆಂದರೆ ಜನರಿಗೆ ನಡಿಗೆ ಮತ್ತು ನಿರೋಧಕ ಶಕ್ತಿಯನ್ನು ವೃದ್ಧಿಸುವ ಬಗೆಗಿನ ಪ್ರಾಮುಖ್ಯತೆಯನ್ನು ಅರ್ಥ ಮಾಡಿಸುವುದಾಗಿದೆ.
ನಡಿಗೆಯ ಪ್ರಾಮುಖ್ಯತೆ
“ನಾನು ಎಷ್ಟೋ ವೈದ್ಯರು ನಿರೋಧಕ ಶಕ್ತಿಯನ್ನು ವರ್ಧಿಸಿಕೊಳ್ಳುವಂತೆ ಸಲಹೆ ನೀಡುತ್ತಿರುವುದನ್ನು ಗಮನಿಸಿದ್ದೇನೆ. ನಮ್ಮಲ್ಲಿರುವ ಪ್ರಶ್ನೆ ಎಂದರೆ ಯಾವುದೇ ಮಾತ್ರೆ, ಔಷಧಿಗಳ ಸಹಾಯವಿಲ್ಲದೆ ನೈಸರ್ಗಿಕವಾಗಿ ನಿರೋಧಕ ಶಕ್ತಿಯನ್ನು ವೃದ್ಧಿಸುವುದು ಹೇಗೆ ಎಂದು. ಏಕೆಂದರೆ ಎಷ್ಟೋ ಜನರಿಗೆ ಔಷಧಗಳನ್ನು ಕೊಂಡುಕೊಳ್ಳುವ ಶಕ್ತಿ ಇರುವುದಿಲ್ಲ. ಅದಕ್ಕಾಗಿಯೇ ನಾನು ಜನರಿಗೆ ನಡಿಗೆಯ ಮೂಲಕವೇ ಯಾವುದೇ ಖರ್ಚಿಲ್ಲದೇ ನೈಸರ್ಗಿಕ ವಾಗಿ ನಮ್ಮ ನಿರೋಧಕ ಶಕ್ತಿಯನ್ನು ನಾವೇ ವರ್ಧಿಸಿಕೊಳ್ಳುವಂತೆ ಪ್ರೇರೇಪಿಸುತ್ತಿದ್ದೇನೆ. ಇದರಿಂದಾಗಿ ನಮಗೆ ಬರಬಹುದಾದ ಎಷ್ಟೋ ಮಾರಕ ಕಾಯಿಲೆಗಳಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಬಹುದು.”
ನೀವು ಇದನ್ನು ಇಷ್ಟಪಡಬಹುದು: ಖರ್ಚಿಗೆ ಚಹಾ ಮಾರಿಕೊಂಡು ಕೇರಳದಿಂದ ಕಾಶ್ಮೀರಕ್ಕೆ ಸೈಕಲಲ್ಲಿ ಹೊರಟಿರುವ ನಿಧಿನ್
ಫಿಟ್ನೆಸ್ ಅಲ್ಲಿ ಬಲು ಆಸಕ್ತರಾಗಿರುವ ಭರತ್ ಅವರು ಹರಿಯಾಣ,(Haryana) ಪಂಜಾಬ್(Punjab) ಮತ್ತು ಮಹಾರಾಷ್ಟ್ರದಂತಹ(Maharashtra) ರಾಜ್ಯಗಳನ್ನು ಕ್ರಮಿಸಿದ್ದಾರೆ. ಹಾಗೇ ಪ್ರತೀ ರಾಜ್ಯವನ್ನು ತಲುಪಿದಾಗಲೂ ಅಲ್ಲಿ ಒಂದು ಫೋಟೋ ತೆಗೆದು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುವುದು ಭರತ್ ರವರ ಹವ್ಯಾಸ. ಅಂತೆಯೇ ಆ ರಾಜ್ಯದ ಯಾವುದಾದರೂ ಸರ್ಕಾರೇತರ ಸಂಸ್ಥೆಗೆ ಭೇಟಿಯೂ ನೀಡುತ್ತಿದ್ದರು.
“ನಾನು ಪ್ರತೀ ರಾಜ್ಯದಲ್ಲಿ ಜನರನ್ನು ಭೇಟಿಯಾದಾಗಲೂ ಜನರು, ಧನ್ಯವಾದವನ್ನು ತಿಳಿಸುವದಕ್ಕಾಗಿ ನೀವು ಕರ್ನಾಟಕದಿಂದ ಕಾಲ್ನಡಿಗೆಯಲ್ಲಿ ಇಲ್ಲಿವರೆಗೆ ಬಂದಿದ್ದೀರೇ ಎಂದು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದರು.
ವಾರಿಯರ್ಸ್ ಗಳಿಗೆ ಕೃತಜ್ಞತೆಯನ್ನು ಸಲ್ಲಿಸುವುದು ಹಾಗೂ ಜನರಲ್ಲಿ ನಡಿಗೆಯ ಪ್ರಾಮುಖ್ಯತೆಯ ಅರಿವು ಮೂಡಿಸುವುದರ ಜೊತೆಗೆ ಭರತ್ ರವರು ಜನರಲ್ಲಿ ಪರಿಸರದ ಬಗ್ಗೆ ಜಾಗೃತಿಯನ್ನು ಮೂಡಿಸಲು ಹೋದೆಡೆಯೆಲ್ಲಾ ಒಟ್ಟು 150ಕ್ಕೂ ಅಧಿಕ ಸಸಿಗಳನ್ನು ನೆಟ್ಟು ಮಾದರಿಯಾಗಿದ್ದಾರೆ.
ಅವರು ಏಕಾಂಗಿಯಾಗಿ ಪ್ರಯಾಣವನ್ನು ಆರಂಭಿಸಿದರೂ, ಅವರೇ ಹೇಳುವಂತೆ, “ನನ್ನ ಸ್ನೇಹಿತರು ಮತ್ತು ಹಿತೈಷಿಗಳು ಪ್ರಯಾಣದಲ್ಲಿ ಸಹಾಯ ಮಾಡಿದ್ದರಿಂದಲೇ ನಾನು ಈ ಪ್ರಯಾಣವನ್ನು ಪೂರ್ಣ ಮಾಡಲು ಆಯ್ತು ” ಎಂದು ಹೇಳಿ ಅವರ ಉದ್ದೇಶಕ್ಕೆ ಸಾಥ್ ನೀಡಿದ ಎಲ್ಲರನ್ನೂ ಸ್ಮರಿಸಿಕೊಂಡಿದ್ದಾರೆ.
ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ
ಸ್ಪೂರ್ತಿದಾಯಕ