ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಸೈಕಲ್ ಪಯಣ ಮಾಡಿದ ಅಪರೂಪದ ಟ್ರಾವೆಲರ್ ಕುಮಾರ್ ಶಾ

ಕರುಪ್ಪಿ ಎಂಬ ಸೈಕಲ್ ನಲ್ಲಿ ನಾಡು, ದೇಶ ಸುತ್ತುವ ತಮಿಳುನಾಡಿನ ಅಪರೂಪದ ಟ್ರಾವೆಲರ್ ಕುಮಾರ್ ಶಾ. ಇಂಜಿನಿಯರಿಂಗ್ ಪದವೀಧರ. ಪ್ರಯಾಣ ಅಂದ್ರೆ ಪ್ರಾಣ. ಅನೇಕ ಕಡೆ ಪ್ರವಾಸಿ ಶಾಲೆಗಳನ್ನು ಶುರು ಮಾಡಿರುವ ಈ ಅಪರೂಪದ ವ್ಯಕ್ತಿಯ ಅದ್ಭುತ ಕತೆ ಇದು.
- ಸಿಂಧೂ ಪ್ರದೀಪ್
ಕಥೆಗಳೆಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಚಿಕ್ಕ ವಯಸ್ಸಿನಿಂದ ಅಜ್ಜಿ ಅಥವಾ ಅಮ್ಮ ಹೇಳಿದ ಹಲವು ಕಾಲ್ಪನಿಕ ಕಥೆಗಳಿಂದ ಪ್ರತಿಯೊಬ್ಬರ ಬದುಕು ಪ್ರಾರಂಭವಾಗಿದೆ. ಹಾಗೆಯೇ ದೊಡ್ಡವರಾಗಿ ಇನ್ನೊಬ್ಬರ ಜೀವನದ ಘಟನೆಗಳನ್ನು ಕಥೆಯಾಗಿ ಕೇಳುವುದಲ್ಲದೇ ಹಲವು ಕಥೆಗಳನ್ನು ಓದಿ ತಿಳೀದುಕೊಳ್ಳುತ್ತಿದ್ದೇವೆ.

ಇಂದು ನಾವು ಈ ಕಥೆ ಹೇಳುವುದನ್ನೇ ತಮ್ಮ ವೃತ್ತಿ ಹಾಗೂ ಪ್ರವೃತ್ತಿಯನ್ನಾಗಿ ಮಾಡಿಕೊಂಡಿರುವ. ತಮ್ಮನ್ನು ತಾವೇ ಕಥೆಯೆಂದು ಹೇಳಿಕೊಳ್ಳುವ ಬಹಳ ಅಪರೂಪದ ವ್ಯಕ್ತಿಯ ಪ್ರವಾಸದ ಕಥೆ ಯನ್ನು ನಿಮಗೆ ಪರಿಚಯಿಡುತ್ತಿದ್ದೇವೆ. ಅವರೇ ಕುಮಾರ್ ಶಾ.
ಇವರು ಮೂಲತಃ ತಮಿಳು ನಾಡಿನ ಮಧುರೈ(Madhurai) ಬಳಿಯ ಸಣ್ಣ ಗ್ರಾಮದವರು. ಇಂಜಿನಿಯರಿಂಗ್ ವ್ಯಾಸಂಗ ಮುಗಿಸಿ ಒಂದು ಸಣ್ಣ ಕಂಪೆನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ದಿನ ಕಳೆದಂತೆ ಇದು ತಮ್ಮಗೆ ತೃಪ್ತಿ ಕೊಡುತ್ತಿಲ್ಲ ಎಂದು ತಿಳಿದು ಸ್ನೇಹಿತರೆಲ್ಲಾ ಸೇರಿ ಒಂದು ಸಂಸ್ಥೆಯನ್ನು ಪ್ರಾರಂಭಿಸಿದರು. ಇದರಲ್ಲಿ ಕೆಲವು ಹಳ್ಳಿಗಳನ್ನು ಆಯ್ಕೆ ಮಾಡಿಕೊಂಡು ಅಲ್ಲಿನ ಮಕ್ಕಳಿಗೆ ಹಲವು ಕಲೆಗಳನ್ನು ಹೇಳಿ ಕೊಡುತ್ತಾ ಎರಡು ವರ್ಷ ಕಳೆದರು. ತಮ್ಮ ತೃಪ್ತಿಯನ್ನು ಇದರಲ್ಲಿ ಕಂಡುಕೊಂಡು ಇಂದು ಹಲವು ಸ್ಥಳಗಳಿಗೆ ಭೇಟಿಕೊಟ್ಟು ಅಲ್ಲಿನ ಮಕ್ಕಳಿಗೆ ಕಥೆ ಹೇಳುವುದು. ಕಥೆ ಕೇಳುವುದು ನಾನಾ ರೀತಿಯ ಚಟುವಟಿಕೆಗಳನ್ನು ಹೇಳಿಕೊಡುವುದು ಇದೇ ಇಂದು ಇವರ ವೃತ್ತಿಯಾಗಿದೆ.
ಇವರು ಎಲ್ಲರಂತೆ ಬಸ್ಸು ಹಾಗೂ ರೈಲಿನಲ್ಲಿ ಹಲವು ಬಾರಿ ಪ್ರಯಾಣ ಮಾಡಿ ಇದೀಗ ಭಿನ್ನ ಅನುಭವವನ್ನು ಪಡೆಯಲು ಇವರು ಪ್ರಯಾಣಿಸುವುದು ಸೈಕಲ್ ನಲ್ಲಿ ಇವರ ಈ ರಥಕ್ಕೆ “ಕರುಪ್ಪಿ”(Karuppi) ಎಂದು ನಾಮಕರಣವನ್ನೂ ಮಾಡಿದ್ದಾರೆ.
ಎಲ್ಲೇ ಪ್ರಯಾಣ ಬೆಳೆಸಿದರೂ ಕೇವಲ ಒಂದು ಪ್ರಯಾಣಿಕರಾಗದೇ ಸ್ಥಳೀಯರ ರೀತಿಯಲ್ಲೇ ಬದುಕಿ ದಾರಿಯ ಉದ್ದಕ್ಕೂ ಸಿಗುವ ಹಲವು ಕೆಲಸಗಳನ್ನು ಮಾಡಿ ಹಣ ಹೊಂದಿಸಿಕೊಂಡು ಪ್ರವಾಸ ಮಾಡುವ ಇವರು ಹೇಳುವ ಒಂದೊಂದು ಕಥೆಯು ಅದ್ಭುತ.
*ದೇವರನಾಡಿನ ಆನೆ*
ಒಮ್ಮೆ ತಮಿಳುನಾಡಿನಿಂದ ಕೇರಳಕ್ಕೆ ಆನೆ ನೋಡಲೆಂದು ತಮ್ಮ ಕರುಪ್ಪಿ(ಸೈಕಲ್)ಯ ಜೊತೆ ಹೊರಟರು. ಇದೇ ಇವರ ಮೊದಲ ದೂರದ ಸೈಕಲ್ ಪಯಣ. ಆನೆ ನೋಡಲು ಅಷ್ಟು ದೂರ ಹೋಗುವುದೆಂದರೆ ಎಲ್ಲರಿಗೂ ನಗು ಬರುವ ಸಂಗತಿ. ತಮಿಳುನಾಡಿನಲ್ಲಿ(Tamilnadu) ಸಿಗದ ಆನೆ ಅಲ್ಲಿ ಇರುತ್ತವೆಯೇ ಎಂದು ಎಲ್ಲರಿಗೂ ಅನ್ನಿಸುವುದುಂಟು. ಆದರೆ ಇವರು ಹಠ ಬಿಡದೇ ತಮ್ಮ ಸೈಕಲ್ ನಲ್ಲಿ ಕೇರಳದ ಗುರುವಾಯೂರು(Guruvayoor) ತಲುಪಿದರು.

ಅಲ್ಲಿನ ದೇವಳದ ಆನೆಯನ್ನು ನೋಡಿದರು ಕಟ್ಟಿ ಹಾಕಿದ ಆ ಆನೆಯನ್ನು ನೋಡಿ ಇವರಿಗೆ ಏನೋ ಅತೃಪ್ತಿಯ ಭಾವನೆ. ನಾನು ನೋಡಬೇಕೆಂದುಕೊಂಡಿದ್ದು ಈ ರೀತಿಯ ಆನೆಯನಲ್ಲ. ಕಾಡಿನಲ್ಲಿ ರಾಜಾರೋಷವಾಗಿ ಓಡಾಡುವ ದೈತ್ಯ ಆನೆಯನ್ನು ಎಂದು ಯೋಚಿಸಿ ತ್ರಿಶೂರ್(thrissur) ಬಳಿ ಇರುವ ಆತಿರಪಳ್ಳಿಗೆ(athirapally) ಹೋಗಿ ತಮಗೆ ಬೇಕಾದ ಹಾಗೆ ಆನೆಯನ್ನು ನೋಡಿಕೊಂಡು ಬಂದರು. ಇದೊಂದು ಸುಂದರ ಅನುಭವವೆಂದು ಕುಮಾರ್ ಹೇಳುತ್ತಾರೆ.
ಹಲವಾರು ಬಾರಿ ತಮಿಳುನಾಡಿನ ಸುತ್ತ ಮುತ್ತ, ಕೇರಳದ ಸುತ್ತ ಮುತ್ತ ಸೈಕಲ್ನಲ್ಲಿ ಓಡಾಡಿದ ನಂತರ ಇಡೀ ಭಾರತವನ್ನೇಕೆ ಸೈಕಲ್ ನಲ್ಲಿ ಸುತ್ತಬಾರದು ಎಂದು ಅಂದುಕೊಂಡು ತಮ್ಮ ಕರುಪ್ಪಿಯೊಂದಿಗೆ ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ (Kanyakumari to Kashmir) ಒಂದೂವರೆ ವರ್ಷಗಳ ಕಾಲ ಪ್ರಯಾಣ ಬೆಳೆಸಿದರು. ಇದೇನು ಅಷ್ಟೇನು ಸುಲಭದ ಸಂಗತಿಯಲ್ಲ ಹಲವಾರು ಪರೀಕ್ಷೆಗಳನ್ನು ಎದುರಿಸಿದ್ದಾರೆ.
ನೀವು ಇದನ್ನು ಇಷ್ಟಪಡಬಹುದು: ಕೊರೋನಾ ಸೈನಿಕರಿಗೆ ಗೌರವ ಸಲ್ಲಿಸಲು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 4000 ಕಿಮೀ ನಡೆದ ಕನ್ನಡಿಗ ಭರತ್
ಬಹಳಷ್ಟು ಕಡೆ ಕುಡಿಯಲು ನೀರು ಸಿಗುತ್ತಿರಲಿಲ್ಲ. ಹಸಿವಾದಾಗ ಊಟ ಸಿಗುತ್ತಿರಲಿಲ್ಲ. ಹಲವಾರು ಕಡೆ ಜನರು ಅನುಮಾನದಿಂದ ನೋಡುತ್ತಿದ್ದರು. ಇವರ ವೇಷಭೂಷಣ ನೋಡಿ ಹಲವುಕಡೆ ಕಳ್ಳರೆಂದು ಭಾವಿಸಿದ್ದರು ಇದರ ಜೊತೆಗೆ ಹವಾಮಾನ ಬದಲಾವಣೆಗಳನ್ನೂ ಹೆದುರಿಸಬೇಕಾಯಿತು. ಇದಕೆಲ್ಲಾ ಭಯಪಡದೇ ಭಾರತದಾದ್ಯಂತ ತಮ್ಮ ಸೈಕಲ್ ಸವಾರಿಯನ್ನು ಯಶಸ್ವಿಯಾಗಿ ಮುಗಿಸಿದರು.

ಈ ತೊಂದರೆಗಳು ನನಗೆ ಮಾತ್ರ ಅಲ್ಲಾ ಎಲ್ಲಾ ಪ್ರಯಾಣಿಕರೂ ಇದನ್ನು ಅನುಭವಿಸಿರುತ್ತಾರೆ. ಕೆಲವು ಸಲಹೆಗಳನ್ನು ಕೊಡಿ ಎಂದು ಕೇಳಿದರೆ “ಎಲ್ಲವೂ ಏನಿದ್ದರೂ ನನ್ನ ಅನುಭವಗಳು. ಅದನ್ನು ಇನ್ನೊಬ್ಬರ ಮೇಲೆ ಹೇರಿಕೆ ಮಾಡುವುದು ತಪ್ಪು. ಕೆಲವು ಮುಖ್ಯ ಸುರಕ್ಷತಾ ಮುನ್ನೆಚ್ಚರಿಕೆಗಳು ಎಲ್ಲರಿಗೂ ತಿಳಿದೇ ಇರುತ್ತದೆ. ಅದನ್ನ ಹೊರತಾಗಿ ಇನ್ನೇನೇ ಹೇಳಿದರು ಅದು ರುಚಿಸುವುದಿಲ್ಲ. ನನಗೆ ಸಾರ್ವಜನಿಕ ಸೌಚಾಲಯ ಬಳಸುವುದು ವಾಡಿಕೆ ಆದರೇ ನೀವು ಹೀಗೆ ಇರಬೇಕೆಂದು ಇನ್ನೊಬ್ಬರಿಗೆ ಸಲಹೆ ಕೊಡುವುದು ನನಗೆ ಇಷ್ಟ ಆಗುವುದಿಲ್ಲ. ಎಲ್ಲರೂ ತಮ್ಮ ಸ್ವಂತ ಅನುಭವದ ಕಥೆಗಳಿಂದ ತಿಳಿದುಕೊಳ್ಳುವುದು ಬಹಳಷ್ಟು ಇದೆ’ ಎಂದು ಹೇಳುತ್ತಾರೆ.
ಪ್ರವಾಸಿ ಶಾಲೆ
ಕುಮಾರ್ ಅವರು ಹಲವು ಕಡೆ ಪ್ರವಾಸಿ ಶಾಲೆಯನ್ನು(Travelling School) ಪ್ರಾರಂಭಿಸಿದರು. ಇದು ಇವರ ಕನಸು ಕೂಡ. ಬೇಸಿಗೆ ರಜೆಯಲ್ಲಿ ಶಾಲೆಗಳು ಮುಚ್ಚಿರುತ್ತವೆ. ಅಂತಹ ಹಲವಾರು ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ. ಅಲ್ಲಿನ ಸ್ಥಳೀಯ ಮಕ್ಕಳನ್ನು ಒಂದು ಗೂಡಿಸಿ ಅವರಿಗೆ ಇವರ ಕಥೆ ಹೇಳುವುದು. ಮಕ್ಕಳ ಕಥೆಗಳನ್ನು ಕೇಳುವುದು. ನೃತ್ಯ, ಚಿತ್ರಕಲೆ, ನಾಟಕ ಹೀಗೆ ಹಲವಾರು ರೀತಿಯಲ್ಲಿ ಮಕ್ಕಳು ತಮ್ಮನ್ನು ತಾವು ತೊಡಗಿಸಿಕೊಳ್ಳುವಂತೆ ಮಾಡುತ್ತಿದ್ದಾರೆ.

ಬಹಳ ಸರಳ ಜೀವನ ನಡೆಸುವ ಕುಮಾರ್ ಅವರು ಚಿಕ್ಕವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡರು. ತಾಯಿಯೇ ತಂದೆ ಸ್ಥಾನದಲ್ಲಿ ನಿಂತು ಇವರು ಒಂದು ಸ್ಥಾನಕ್ಕೆ ಬರುವವರೆಗೂ ನೋಡಿಕೊಂಡರು. ಇಂದು ತಮ್ಮ ಸಂಪಾದನೆಯಲ್ಲಿ ಅರ್ಧದಷ್ಟು ಹಣವನ್ನು ತಮ್ಮ ತಾಯಿಗೆ ಕಳುಹಿಸಿಕೊಡುತ್ತಾರೆ. ನಾನು ಇಂದು ಅವರನ್ನು ನೋಡಿಕೊಳ್ಳುತ್ತಿದ್ದೇನೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.
ಹಲವು ಕಡೆ ಇವರು ಭೇಟಿ ನೀಡಿದ ಸ್ಥಳಗಳಲ್ಲಿ ಅಲ್ಲಿನ ನಿವಾಸಿಗಳೇ ಇವರಿಗೆ ಆಶ್ರಯ ನೀಡುತ್ತಾರೆ. ಮಕ್ಕಳಿಗೆ ಹಲವಾರು ಕಾರ್ಯಾಗಾರವನ್ನು ನಡೆಸಿಕೊಡಲು ಕೆಲವು ಸಂಸ್ಥೆಗಳು ಹಣ ನೀಡುತ್ತವೆ. ಇದೇ ಇವರ ಸಂಪಾದನೆ. ಇದರಲ್ಲೇ ಖುಷಿ ಇದೆ ತೃಪ್ತಿ ಇದೆ ಎಂದು ಹೇಳುತ್ತಾರೆ.

ಸ್ನೇಹಿತರೆಲ್ಲರೂ ಸೇರಿ ಕಳಿಮನ್(Kaliman) ಎಂಬ ಒಂದು ಸಣ್ಣ ಗುಂಪೊಂದನ್ನು ಪ್ರಾರಂಭಿಸಿ ಹಲವಾರು ಬುದ್ಧಿಮಾಂದ್ಯ ಮಕ್ಕಳು. ಚಿಕ್ಕವಯಸಿನಲ್ಲೆ ಶೋಷಣೆಗೆ ಹೊಳಗಾದ ಹೆಣ್ಣುಮಕ್ಕಳಿಗೆ ಅರಿವು ಮೂಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ತಮ್ಮನ್ನು ಕೇವಲ ಒಂದು ಸ್ಥಳಕ್ಕೆ ಮಾತ್ರ ಮೀಸಲಿಡದೇ ಹಲವಾರು ಕಡೆ ಸಾಗುತ್ತಾ ಮಕ್ಕಳೊಂದಿಗೆ ಮಗುವಾಗಿ ಬೆರೆತು ಪ್ರವಾಸದೊಂದಿಗೆ ಸಮಾಜಮುಖಿ ಕಾರ್ಯವನ್ನು ನಿರ್ವಹಿಸುತ್ತಿರುವ ಕುಮಾರ್ ರವರು ನಮ್ಮೆಲ್ಲರಿಗೂ ಸ್ಫೂರ್ತಿ.
ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ