ವಿಂಗಡಿಸದ

ಹಿಮಾಲಯದ ಮಡಿಲಿನ ಗ್ಯಾಂಗಟಾಕ್ ನಲ್ಲಿ ನೋಡಬೇಕಾದ 10 ತಾಣಗಳು: ಗ್ಯಾಂಗಟಾಕ್ ಕುರಿತ ಸಂಪೂರ್ಣ ಮಾಹಿತಿ

ಶ್ರೀನಿವಾಸ ಮೂರ್ತಿ ಎನ್.ಎಸ್.

ಹಿಮಾಲಯದ ತಪ್ಪಲಿನಲ್ಲಿ ಹಲವು ಸುಂದರ ತಾಣಗಳಿವೆ. ಆದರೆ ಅದರಲ್ಲಿ ತನ್ನದೇ ಭೌಗೋಳಿಕ ವಿಭಿನ್ನ ನೆಲೆಯಿಂದ ಸ್ಥಾನ ಪಡೆದಿರುವ ಸ್ಥಳವೆಂದರೆ ಸಿಕ್ಕಿಂ(Sikkim) ರಾಜ್ಯದ ರಾಜಧಾನಿ ಗ್ಯಾಂಗಟಾಕ್.(Gangtok) 1975ರಲ್ಲಿ ಭಾರತ ದೇಶದ ಭಾಗವಾದ ಈ ರಾಜ್ಯದ ಬಹುತೇಕ ಭಾಗ ಹಿಮಾಲಯದ ಮಡಿಲಿನಲ್ಲಿದೆ. 

ಇಡೀ ರಾಜ್ಯ ನಮಗೆ ಆಪ್ತವಾಗುವುದು ಈ ರಾಜ್ಯ ಭೇರೆ ರಾಜ್ಯಕ್ಕಿಂತ ವಿಭಿನ್ನವಾಗಿರುವುದು. ಸಂಪೂರ್ಣ ರಾಸಾಯಾನಿಕ ಮುಕ್ತ ರಾಜ್ಯವಾದ ಇದು ದೇಶದ ಅತ್ಯಂತ ಸ್ವಚ್ಛ ರಾಜ್ಯಗಳಲ್ಲಿ ಒಂದು. ಹಿಮಾಯಲದ ತಂಪುಗಾಳಿ ಇಡೀ ರಾಜ್ಯವನ್ನು ಆವರಿಸಿದ್ದು ರಾಜಧಾನಿ ಗ್ಯಾಂಗಟಾಕ್ ಸಮುದ್ರ ಮಟ್ಟದಿಂದ ಸುಮಾರು 5140 ಅಡಿ ಎತ್ತರದಲ್ಲಿದೆ. ಭೂತಿಯಾ, ಲೆಪ್ಚಾಸ್ ಹಾಗೂ ನೆಪಾಲಿಸ್ ಇಲ್ಲಿನ ಪ್ರಮುಖ ಭಾಷೆಯಾಗಿದೆ. ಗ್ಯಾಂಗಟಾಕ್ ಸಮೀಪದ ಪ್ರಮುಖ ಪ್ರೇಕ್ಷಣೀಯ ಸ್ಥಳಗಳ ಪರಿಚಯ ಇಲ್ಲಿದೆ.

  1. ಭಂಜಾಕ್ರಿ ಜಲಪಾತ 

ಗ್ಯಾಂಗಟಾಕ್ ನಿಂದ ಸುಮಾರು 4 ಕಿ ಮೀ ದೂರದಲ್ಲಿರುವ ಈ ಜಲಪಾತ ಸುಮಾರು 100 ಅಡಿ ಎತ್ತರದಿಂದ ಬೀಳುತ್ತದೆ. ಭನ್ ಎಂದರೆ ಕಾಡು ಹಾಗು ಜಕ್ರಿ ಎಂದರೆ ಗುಣಪಡಿಸುವವ ಎಂದು ಅರ್ಥವಿದೆ. ಇಲ್ಲಿ ಹಿಂದೆ ಶಮನ್ ಎಂಬ ಸಾಂಪ್ರಾದಾಯಿಕ ವೈದ್ಯರು ಅಥವಾ ಪೂಜಾರಿಗಳು ಇದ್ದು ಜನರನ್ನು ಕಾಪಾಡುತ್ತಿದ್ದರು ಎಂಬ ನಂಬಿಕೆ ಇದೆ. ಇವರನ್ನು ಬನ್ ಜಾಕ್ರಿ ಎಂದು ಕರೆಯುತ್ತಿದ್ದರಿಂದ ಈ ಜಲಪಾತಕ್ಕೆ ಇದೇ ಹೆಸರು ಬಂದಿದೆ. 

ಇಲ್ಲಿ ಎನರ್ಜಿ ಪಾರ್ಕ್(Energy Park) ಇದ್ದು ಸುಂದರ ಉದ್ಯಾನವನವನ್ನು ಸರ್ಕಾರ ನಿರ್ಮಿಸಿದೆ. ಉದ್ಯಾನವನದಲ್ಲಿ ಸುಂದರ ಕೊಳ ಮಧ್ಯದಲ್ಲಿ ಡ್ರ್ಯಾಗನ್. ಮಕ್ಕಳಿಗೆ ಆಡಲು ಚಿಕ್ಕ ಚಿಕ್ಕ ಬೋಟ್ ಗಳು, ಸೌರ ವಿದ್ಯುತ್ ಸುತ್ತಲೂ ಹಸಿರಿನ ಲೋಕ ಇದೆ.  ಜಲಪಾತದ ಕೆಳ ಭಾಗದಲ್ಲಿ ಚಿಕ್ಕ ಕಟ್ಟೆಯನ್ನು ನಿರ್ಮಿಸಲಾಗಿದ್ದು, ಜಲಪಾತದ ಹತ್ತಿರದ ಸೊಭಗನ್ನು ಸವಿಯನ್ನು ಮತ್ತಷ್ಟು ಹೆಚ್ಚಿಸಿದೆ.  

ಜಲಪಾತದ ಸುತ್ತಲೂ ಅಲಲ್ಲಿ ವ್ಯೂ ಪಾಯಿಂಟ್ ನಿರ್ಮಿಸಿದ್ದು, ಇಲ್ಲಿಂದ ಜಲಪಾತ ಸುಂದರವಾಗಿ ನೋಡಲು ಸರ್ಕಾರ ವ್ಯವಸ್ಥೆ ಮಾಡಿದೆ. ಸಾಂಪ್ರದಾಯಿಕ ಪುಜಾರಿಗಳ ಪ್ರತಿಕೃತಿಗಳನ್ನು ಇಲ್ಲಿ ನಿರ್ಮಾಣ ಮಾಡಿದ್ದು, ಬಂಜಾಕ್ರಿ ಜಲಪಾತದ(Bhanjakri falls) ಹಿನ್ನೆಲೆ ಬಗ್ಗೆ ಚಿತ್ರಣ ನೀಡುತ್ತದೆ.  ಪ್ರಕೃತಿ ನಮಗೆ ನೀಡಿದ ಸುಂದರ ದೄಶ್ಯದ ಚಿತ್ತಾರವನ್ನು ಸಮರ್ಪಕವಾಗಿ ನಿರ್ವಹಿಸಿದಲ್ಲಿ ಹೇಗೆ ಇರುಭಹುದು ಎಂಭುದುಕ್ಕೆ ಒಳ್ಳೆಯ ನಿದರ್ಶನ ಈ ಜಲಪಾತ.

  1. ತಾಶಿ ವ್ಯೂ ಪಾಯಿಂಟ್ (Tashi view point)

ಭಾರತದ ಅತೀ ಎತ್ತರದ ಪರ್ವತ ಕಾಂಚನಜುಂಗ(kanchenjunga) ಪರ್ವತದ ಸುಂದರ ಚಿತ್ರಣ ನೋಡ ಬೇಕೆಂದರೆ ಇಲ್ಲಿಗೆ ಹೋಗಬೇಕು. ಸೂರ್ಯೋದಯದ ಸುಂದರ ಚಿತ್ರಣ ಇಲ್ಲಿ ಲಭ್ಯ. ಶುಭ್ರ ವಾತಾವರಣದಲ್ಲಿ ಇಲ್ಲಿನ ಕಾಂಚನಜುಂಗದ ಚಿತ್ರಣ ಅದ್ಭುತವಾಗಿದ್ದು ಇದನ್ನು ನೋಡಲು ವೃತ್ತಾಕಾರದ ಜಾಗ ನಿರ್ಮಿಸಲಾಗಿದೆ. 

ಇಲ್ಲಿಂದ ಸೂರ್ಯ ಹುಟ್ಟುವ ಸನ್ನಿವೇಶ ಸುಂದರವಾಗಿದ್ದು ಹಿಮಾಲಯದ ಮಂಜಿನ ಬೆಟ್ಟದ ಮೇಲಿನ ಮೇಲಿನ ಚಿನ್ನದ ಬೆಳಕಿನ ಸ್ಪರ್ಶಕ್ಕೆ ಕಾದು ಕುಳಿತಂತ ಬಾಸವಾಗುತ್ತದೆ. ಕಾಂಚನಜುಂಗದ ಒಂದು ಬದಿಯ ಸುಂದರ ಚಿತ್ರಣ ಕಣ್ಣಿಗೆ ಕಟ್ಟುತ್ತದೆ. ಈ ದೃಶ್ಯ ಹತ್ತಿರದಿಂದ ನೋಡಲು ಎತ್ತರದ ಕಟ್ಟಟದಲ್ಲಿ ವಿಷೇಶ ದೂರದರ್ಶಕ ವ್ಯವಸ್ಥೆಯನ್ನು ಮಾಡಿದ್ದು ಇಲ್ಲಿಂದ ಇನ್ನು ಸುಂದರವಾಗಿ ಕಾಣುತ್ತದೆ.  ಹಿಮಾಲಯದ ಸುಂದರ ಚಿತ್ರಣ ನೋಡಬೇಕು ಎನ್ನುವರು ಇಲ್ಲಿಗೆ ಹೊಗಲೇಬೇಕು.

  1. ಬಕ್ತಾಂಗ್ ಜಲಪಾತ

ಗ್ಯಾಂಗಟಾಕ್ ನಿಂದ ತಾಶಿ ವ್ಯೂ ಪಾಯಿಂಟ್ ಕಡೆಗೆ ಹೋಗುವಾಗ ನಮಗೆ ದಾರಿಯಲ್ಲಿ ಸಿಗುವ ಮತ್ತೊಂದು ಚಿಕ್ಕದಾದ ಆದರ ಚೊಕ್ಕದಾದ ಜಲಪಾತವೆಂದರೆ ಬಕ್ತಾಂಗ ಜಲಪಾತ.(bakthang waterfall) ರಸ್ತೆಯಲ್ಲಿ ಸಮೀಪದಲ್ಲಿರುವ ಈ ಜಲಪಾತ ಸುಮಾರು 4 ಕಿ ಮೀ ದೂರದಲ್ಲಿದೆ. 

ಈ ಜಲಪಾತ ರಾಟೆ ಚು(ratey chu) ನದಿಯಿಂದ ಆಗಿದ್ದು, ಈ ನದಿ ಪವಿತ್ರ ಟಾಮಜೆ ಲೇಕ್ ನಿಂದ (ಸುಮಾರು ೧೨೫೦೦ ಅಡಿ ಎತ್ತರದಲ್ಲಿರುವ) ಹುಟ್ಟಿದ್ದು ಅತ್ಯಂತ ಶುಭ್ರವಾದ ಜಲಪಾತದಲ್ಲಿ ಒಂದಾಗಿದ್ದು ಎತ್ತರದ ಹಾಗು ವಿಸ್ತಾರದಲ್ಲಿ ಸಣ್ಣದಾಗಿದ್ದರೂ ರಸ್ತೆಯ ಬದಿಯಲ್ಲಿ ನಿಮಗೆ ತೀರಾ ನಿರಾಸೆ ಮೂಡಿಸುವದಿಲ್ಲ. 

ಈ ಜಲಪಾತಕ್ಕೆ ನಿರ್ಮಿಸಿದ ರೋಪ್ ವೇ ಸುಂದರ ಹಣ ಪಾವತಿಸಿ ಇದರಲ್ಲಿ ಪ್ರಯಾಣಿಸಿ ಜಲಪಾತದ ಸೌಂದರ್ಯ ಸವಿಯಬಹುದು. ನಂತರ ಪಕ್ಕದ ಅಂಗಡಿಗಳಲ್ಲಿ ಸಿಕ್ಕಿಂನ ಸಾಂಪ್ರದಾಯಿಕ ಶಾಪಿಂಗ್ ಮಾಡಬಹುದು. 

  1. ಗಣೇಶ್ ಟೋಕ್

ತಾಶಿ ವ್ಯೂ ಪಾಯಿಂಟ್ ಮೂಲಕ ಸ್ವಲ್ಪ ಮುಂದೆ ಹೋದರೆ ನಮಗೆ ಸಿಗುವುದೇ ಗಣೇಶ್ ಟೋಕ್. ಮೂಲತಃ ಇದು ಒಂದು ಸುಂದರ ವ್ಯೂ ಪಾಯಿಂಟ್ ಸ್ಥಳವಾಗಿದ್ದು ಸುಮಾರು 6600 ಆಡಿ ಎತ್ತರದಲ್ಲಿದೆ. ಈಗ ಇಲ್ಲಿ ಚಿಕ್ಕದಾದ ಗಣೇಶ ಮಂದಿರವಿದೆ.  ಗಣೇಶ ಮಂದಿರದ ಸುತ್ತ ವಿಶಾಲವಾದ ಜಾಗ ಇದ್ದು ಇಲ್ಲಿಂದ ಗ್ಯಾಂಗಟಾಕ್ ಹಾಗು ಸುತ್ತಲಿನ ಸುಂದರ ಪ್ರಕೃತಿಯ ಮಡಿಲಿನಲ್ಲಿ ಕಾಣ ಬರುವ ಮೋಹಕ ಚಿತ್ರದ ಕಣ್ಣ ಸೆರೆ ಹಾಗು ಕ್ಯಾಮೆರೆ ಸೆರೆ ಹಿಡಿಯಲು ಸೂಕ್ತ ಜಾಗ.   

ನಿಮಗೆ ಆಸಕ್ತಿ ಇದ್ದಲ್ಲಿ ಇಲ್ಲಿ ಸಿಗುವ ಸಂಪ್ರಾದಾಯಿಯ ಉಡುಗೆ ತೋಡುಗೆ ದರಿಸಿ ಅನಂದಪಡಬಹುದು. ಇಲ್ಲಿನ ಕೆಳ ಬಾಗದಲ್ಲಿ ನಿಮ್ಮ ಸಾಂಪ್ರಾದಾಯಿಕ ಚಾಯಾಚಿತ್ರಕ್ಕಾಗಿಯೇ ಹಲವು ಕೃತಕ ಸನ್ನಿವೇಶಗಳನ್ನು ಸೃಷ್ಟಿಸಲಾಗಿದೆ.  ಇಲ್ಲಿ ಸ್ಥಳೀಯವಾದ  ಸಾಂಪ್ರಾದಾಯಿಕ ಆಹಾರವನ್ನು ಸವಿಯಬಹುದು. 

  1. ಹನುಮಾನ್ ಟೋಕ್

ಗಣೇಶ್ ಟೋಕ ರೀತಿಯ ಮತ್ತೊಂದು ವ್ಯೂ ಪಾಯೀಂಟ್.  ಸುಮಾರು 7800 ಅಡಿ ಎತ್ತರದಲ್ಲಿರುವ ಬೆಟ್ಟ ಗಣೇಶ ಟೋಕ(Ganesh tok) ನೋಡಿದಲ್ಲು ಸಾಕಷ್ಟು ವಿಸ್ತಾರವಾಗಿದೆ. ಇಲ್ಲಿಂದ ಸುಂದರವಾಗಿ ಹಿಮಾಲಯದ ಸುಂದರ ಚಿತ್ರಣ ಕಾಣ ಸಿಗುತ್ತದೆ. ನಿಲುಗಡೆ ಜಾಗದಿಂದ ಸ್ವಲ್ಪ ಎತ್ತರಕ್ಕೆ ನಡೆದು ತೆರೆಳಿದರೆ ಸುಂದರವಾದ ಹನುಮಾನ್ ಮಂದಿರ ಸಿಗುತ್ತದೆ.   ಇಲ್ಲಿ ಸುಮಾರು 1950ರಲ್ಲಿ ಅಪ್ಪಾಜಿ ಪಂತ್ ಎಂಬುವರು ಇಲ್ಲಿನ ವಿಶಾಲವಾದ ಜಾಗದಲ್ಲಿ ಮಂದಿರ ನಿರ್ಮಾಣಕ್ಕೆ ಕನಸು ಕಂಡು ಕಟ್ಟಿದರು. ಸುಮಾರು 1968ರಲ್ಲಿ ಈ ಜಾಗವನ್ನು ಸೇನೆಯ ವಶಕ್ಕೆ ನೀಡಲಾಗಿದ್ದು ಸೈನ್ಯದ 17ನೇ ಪರ್ವತ ತುಕುಡಿ ಇಲ್ಲಿನ ದೇವಾಲಯ ಹಾಗು ಸ್ಥಳವನ್ನು ನಿರ್ವಹಣೆ ಮಾಡುತ್ತಿದೆ. ಇಲ್ಲಿನ ವಾತಾವರಣ ಸಂಪೂರ್ಣ ಹಿಮಾಲಯದ ಮಡಿಲನಲ್ಲಿ ಇದ್ದು ವರ್ಷ ಪೂರ್ತಿ ತಂಪಾಗಿದ್ದು ಚಳಿಗಾಲದಲ್ಲಿ ಹಿಮಪಾತವಿದ್ದರೆ ಬೇಸಿಗೆಯಲ್ಲಿ ಹಿಮಾಲಯದ ದರ್ಶನ ಮಾಡಬಹುದುಎ. 

  1. ವೈಟ್ ಹಾಲ್ ಹೂ ಉದ್ಯಾನವನ 

ಇಲ್ಲಿ ಸುಂದರವಾದ ಹೂವಿನ ಉದ್ಯಾನವನವಿದ್ದು ಇದನ್ನು ವೈಟ್ ಹಾಲ್(White hall gangtok) ಎಂದು ಕರೆಯುತ್ತಾರೆ. ಇದ್ದಕ್ಕೆ ರಿಡ್ಜ್ ಪಾರ್ಕ್(ritz park) ಎಂಬ ಹೆಸರೂ ಇದೆ. ಇಲ್ಲಿ ಹಿಮಾಲಯದ ವಿಷೇಶ ಹೂವಿನ ಅಲಂಕಾರಗಳು ಇದ್ದು ಸರ್ ಜೇಮ್ಸ್ ಕ್ಲೌಡ್ ವೈಟ್ ಹೆಸರಿನಲ್ಲಿ ಭವನವನ್ನು ನಿರ್ಮಿಸಲಾಗಿದೆ. 

1932ರಲ್ಲಿ ನಿರ್ಮಾಣವಾದ ಈ ಕಟ್ಟಡ ಸಂಪೂರ್ಣ ಬ್ರಿಟಿಷ್ ಮಾದರಿಯಲ್ಲಿದ್ದು ಎರಡು ಮಹಡಿ ಹೊಂದಿದೆ. ಈ ಕಟ್ಟಡದ ಪಕ್ಕದಲ್ಲಿ ರಿಡ್ಜ್ ಪಾರ್ಕ್ ಇದ್ದು ಇಲ್ಲಿ ಫ್ಲವರ್ ಪ್ರದರ್ಶನ ಕೇಂದ್ರವಿದ್ದು, ಚಳಿಗಾಲದ ನಂತರ ಮಾರ್ಚ್ ನಿಂದ ಮೇನವರೆಗೆ ಇಲ್ಲಿನ ಸುಂದರ ಹೂವಿನ ಸೊಬಗ ಸವಿಯಲು ಸರಿಯಾದ ಸಮಯ. ಇಲ್ಲಿ ಅಪುರೂಪದ ಆರ್ಕಿಡ್ ಶ್ರೇಣಿ ನಿಜಕ್ಕೂ ಸುಂದರ.

  1. ಎಮ್ ಜಿ ಮಾರ್ಗ್ 

ನಾವು ಖರೀದಿಸುವ ಸ್ಥಳ ವಾಹನ ಮುಕ್ತವಾಗಿದ್ದರೆ ಎಷ್ಟು ಚೆನ್ನ ಎಂದು ನಾವು ಬಹಳ ಬೆಂಗಳೂರು ಮತ್ತು ಇತರೇ ನಗರದ ವಾಹನದ ಕಿರಿಕಿರಿ ನೋಡಿ ಅನಿಸುವುದು ಸಹಜ. ಆದರೆ ಗ್ಯಾಂಗಟಾಕಿನ ಪ್ರಮುಖ ರಸ್ತೆಯಾದ ಇಲ್ಲಿ ವಾಹನ ಸಂಚಾರ ನಿಷಿದ್ದ. 

ರಸ್ತೆಯ ಒಂದು ಬದಿಯಲ್ಲಿ ಅಂಗಡಿಗಳ ಸಾಲು ಮತ್ತೊಂದು ಬದಿಯಲ್ಲಿ ಸುಂದರ ಕಾರಂಜಿಗಳು, ಹೂದಾನಿಗಳು, ಆಸೀನರಾಗಲು ಸಾಕಷ್ಟು ಆಸನಗಳು  ಇವೆಲ್ಲ ನೋಡಿದೋಡನೆ ಹೊಸ ಮಾರುಕಟ್ಟೆಯ ಪ್ರವೇಶ ಮಾಡಿದಂತೆ ಭಾಸವಾಗುತ್ತದೆ. ಇಲ್ಲಿನ ಅಂಗಡಿಗಳಲ್ಲಿ ಎಲ್ಲವು ಲಭ್ಯ. ಇದಕ್ಕೆ ಹೊಂದಿಕೊಂಡಂತೆ ಲಾಲ್ ಬಜಾರ್(Lal Bazar) ಇದ್ದು ಸ್ವಲ್ಪ ಕಡಿಮೆ ದರದಲ್ಲಿ ಸಿಗಬೇಕೆಂದು ಬಯಸುವವಾರಿಗಾಗಿಯೇ ಇರುವ ಮಾರುಕಟ್ಟೆ.

  1. ರಾಸಾಯನಿಕ ಮುಕ್ತ ಮಾರುಕಟ್ಟೆ (ಆರ್ಗಾನಿಕ್ ಮಾರುಕಟ್ಟೆ)

ಇದಕ್ಕೆ ಹೊಂದಿಕೊಂಡಂತೆ ಇರುವ ಈ ಮಾರುಕಟ್ಟೆಯಲ್ಲಿ ಎಲ್ಲವೂ ರಾಸಾಯನಿಕ ಮುಕ್ತ ತರಕಾರಿಗಳು ಮತ್ತು ದಿನಸಿಗಳು ಲಭ್ಯ.  ಈಗಿನ ದಿನಗಳಲ್ಲಿ ಎಲ್ಲವೂ ಕಲಭರಕೆ ಪ್ರಪಂಚದಲ್ಲಿ ಇಲ್ಲಿನ ತಾಜಾತನದಿಂದ ಕೂಡಿದ ವಸ್ತುಗಳು ಹಾಗೂ ಇಡೀ ಮಾರುಕಟ್ಟೆಯ ಸ್ವಚ್ಛತೆ ಭಾರತದಲ್ಲೂ ಇಂತಹ ಮಾರುಕಟ್ಟೆ ಇರಬಹುದೂ ಎಂಬುದಕ್ಕೆ ಸಾಕ್ಷಿ.

  1. ರಂಕಾ ಮೊನಾಸ್ಟ್ರಿ

ರಾಜಧಾನಿಯಿಂದ ಸುಮಾರು ಇಪ್ಪತ್ತು ಕಿಲೋ ಮೀಟರ್ ದೂರದಲ್ಲಿರುವ ಈ ಬೌದ್ಧರ ಕೇಂದ್ರ ಅತೀ ದೊಡ್ಡ ವಿಹಾರ ಕೇಂದ್ರಗಳಲ್ಲಿ ಒಂದು. ಇಲ್ಲಿನ ಗೋಡೆಯ ಮೇಲೆ ರಚಿತವಾದ ಸುಂದರ ವರ್ಣಚಿತ್ರಗಳು ಗಮನ ಸೆಳೆಯುತ್ತವೆ. ಇಲ್ಲಿ ರಾಜ ಯೋಂಗ್ಲೋಗೆ ನೀಡಿದ ವಜ್ರ ಖಚಿತ ಮುಕುಟ ನೋಡಲೇ ಬೇಕಾದುದು.

  1. ರೋಪ್ ವೇ

ಈಡೀ ಗ್ಯಾಂಗಟಾಕ್ ರಾಜಧಾನಿಯನ್ನು ಅತ್ಯಂತ ಭೇಗ ಹಾಗು ವಿಸ್ತೃತವಾಗಿ ಮೇಲಿಂದ ನೋಡಬೇಕು ಎಂದು ಬಯಸುವರಿಗೆ ಇಲ್ಲಿ ರೋಪ್ ವೇ ಲಭ್ಯವಿದೆ. 

ಇವುಗಳು ಇಲ್ಲಿನ ಪ್ರಮುಖ ಸ್ಥಳಗಳು. ನಿಮಗೆ ಕಾಲವಾಕಾಶವಿದ್ದಲ್ಲಿ ಇಲ್ಲಿನ ಸಿಕ್ಕಿಂ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿ,  ಗೂಮ ಮಾನಸ್ಟೆರಿ, ಪಲ್ಚಾರ್ ಸ್ಟೇಡಿಯಮ್ ಇತ್ಯಾದಿ. ಈ ಸ್ಥಳಗಳನ್ನು ನಾವು ವಿಶೇಷ ಅನುಮತಿ ಪಡೆಯದೇ ನೋಡಬಹುದು. ಇನ್ನು ನಿಮಗೆ ಸರ್ಕಾರದಿಂದ ಅನುಮತಿ ಪಡೆದು ಇಲ್ಲಿನ ಹತ್ತಿರದ ತ್ಸಾಂಗೋ ಸರೋವರ, ಹರಭಜನ್ ಮಂದಿರ ಹಾಗು ನಾಥುಲಾಪಾಸ್ ನೋಡಬಹುದು.

ಹೋಗುವುದು ಹೀಗೆ!

ಬೆಂಗಳೂರಿನಿಂದ ವಿಮಾನದ ಮೂಲಕ ತಲುಪುವವರು ಗ್ಯಾಂಗಟಾಕ್ ಹಾಗು ರೈಲಿನ ಮೂಲಕ ಹೋಗುವವರು ನ್ಯೂ ಜಲಪೈಗುರಿ ಮೂಲಕ ಗ್ಯಾಂಗಟಾಕ ತಲುಪಬಹುದು. ಎರಡು ಕಡೆ ನಿಮಗೆ ಸಾಕಷ್ಟು ಪ್ರವಾಸಿ ವಾಹನಗಳು ದೊರೆಯುತ್ತದೆ.

ಸೂಕ್ತ ಸಮಯ: ಗ್ಯಾಂಗಟಾಕ್ ನೋಡಲು ಅಕ್ಟೋಬರ್, ನವೆಂಬರ್ ಹಾಗು ಮಾರ್ಚಿನಿಂದ ಮೇ ಸೂಕ್ತ ಸಮಯ. ಹಿಮ ಹಾಗೂ ಹೂವಿನ ಸೊಬಗು ನೋಡಬೇಕೆನ್ನುವವರಿಗೆ  ಮಾರ್ಚ್ ಮತ್ತು ಏಪ್ರಿಲ್ ಒಳ್ಳೆಯ ಸಮಯ.

ಪ್ರವಾಸಿಗರು ಗಮನಿಸ ಬೇಕಾದ ಮಾಹಿತಿ: ಇಲ್ಲಿ ದೊಡ್ಡ ವಾಹನಗಳಿಗೆ ಮತ್ತು ನಾಥುಲಾ ಮಾರ್ಗದಲ್ಲಿ ಖಾಸಗಿ ವಾಹನಗಳಿಗೆ ನಿರ್ಬಂಧ ಹಾಗು ಅನುಮತಿಯ ಗಮನದಲ್ಲಿರಿಸಿ ನೋಂದಾಯಿತ ಟ್ರಾವೆಲ್ ಏಜೆನ್ಸಿ ಮೂಲಕ ಹೋದರೆ ಒಳಿತು. 

Related Articles

Leave a Reply

Your email address will not be published. Required fields are marked *

Back to top button