ಕತೆ ಹೇಳಲು ಜನರಿಲ್ಲ, ಕತೆ ಹೇಳದೆ ಬದುಕಿಲ್ಲ: ಹಂಪಿಯ ಟೂರಿಸ್ಟ್ ಗೈಡ್ ಭಾನು ಪ್ರಕಾಶ್ ಜೀವನ ಚಿತ್ರ
ಭಾನು ಪ್ರಕಾಶ್, ಹಂಪಿಯ ಪ್ರವಾಸಿ ಮಾರ್ಗದರ್ಶಕ . ಇವರಿಗೆ ಪಾರಂಪರಿಕ ತಾಣ ಹಂಪಿಯ ಕಥೆ ಹೇಳುವುದು ಖುಷಿ. ಕಥೆ ಇವರ ಬದುಕಿಗೆ ವರಮಾನದ ಮೂಲ ಕೂಡ ಹೌದು. ಆದರೆ ಸ್ತಬ್ಧವಾಗಿರುವ ಕರುನಾಡು ಇವರ ವೃತ್ತಿಯ ಮೇಲೂ ಕರಿಛಾಯೆ ಬೀರಿದೆ. ಇದು ಸುಂದರ ತಾಣದ ಕಥೆ ಹೇಳಿ ಬದುಕುತ್ತಿದ್ದ ಪ್ರವಾಸಿ ಮಾರ್ಗದರ್ಶಕರ ಕಥೆ.
- ನವ್ಯಶ್ರೀ ಶೆಟ್ಟಿ
ಕರುನಾಡು ಸ್ತಬ್ಧವಾಗಿದೆ. ಪ್ರವಾಸಿ ತಾಣಗಳ ತುಂಬೆಲ್ಲ ನಿಶಬ್ಧತೆ ಆವರಿಸಿದೆ. ಪ್ರವಾಸಿಗರಿಲ್ಲದೆ, ಪ್ರವಾಸಿ ಮಾರ್ಗದರ್ಶಕ (tourist guide) ಇಲ್ಲದೇ ಪ್ರವಾಸಿ ತಾಣಗಳು ಬಿಕೋ ಎನ್ನುತ್ತಿದೆ. ಎಲ್ಲವೂ ಮೊದಲಿನ ಸ್ಥಿತಿಯಂತೆ ಆಗುವ ನಿರೀಕ್ಷೆಯಲ್ಲಿ ನಾವಿದ್ದೇವೆ.
ಕಥೆ ಹೇಳುವುದು ಖುಷಿ
ನೀವು ಪ್ರವಾಸಿ ಸ್ಥಳಕ್ಕೆ ಹೋದಾಗ ಅಲ್ಲಿನ ವಿಶೇಷತೆ ಸೇರಿದಂತೆ ಹಲವು ಮಾಹಿತಿಗಳನ್ನು ತಿಳಿಯಲು, ಆ ತಾಣಗಳ ಬಗ್ಗೆ ತಿಳಿದವರು ಅಗತ್ಯ. ಹೆಚ್ಚಾಗಿ ಯಾವುದಾದರೂ ಹೊಸ ಸ್ಥಳಕ್ಕೆ ಹೋದಾಗ ನಾವು ಎದುರು ನೋಡುವುದು ಒಬ್ಬ ಪ್ರವಾಸಿ ಮಾರ್ಗದರ್ಶಕ (tourist guide) ಹೇಳುವ ಕಥೆಗಳಿಗೆ.
ಟೂರಿಸ್ಟ್ ಗೈಡ್ ಸ್ಥಳದ ಕಥೆಯನ್ನು ಹೇಳುತ್ತಾ, ಆ ಸ್ಥಳದ ಬಗ್ಗೆ ನಿಮಗೆ ಕುತೂಹಲ ಹೆಚ್ಚಿಸುತ್ತಾರೆ. ಕಥೆ ಹೇಳುವುದು ಅವರಿಗೆ ಖುಷಿ. ಅವರಿಗೆ ಅದು ಬದುಕಿನ ವರಮಾನ ಕೂಡ ಹೌದು. ಆದರೆ ಇಂದು ಅವರ ವರಮಾನಗಳಿಗೆ ವೈರಸ್ ಅಡ್ಡಿಯಾಗಿದೆ.
ಕಳೆದ ವರ್ಷ ಭಾರತಕ್ಕೆ ಕಾಲಿಟ್ಟಿದ್ದ ಕೊರೋನಾ ವೈರಸ್ , ಪ್ರತಿಯೊಬ್ಬರ ಬದುಕಿನ ವ್ಯತ್ಯಾಸಗಳಿಗೆ ಕಾರಣ. ಪ್ರವಾಸೋದ್ಯಮ ಇಲಾಖೆ ನೆಲ ಕಚ್ಚಿ ಹೋಗಿದೆ. ಪ್ರವಾಸೋದ್ಯಮ ನಂಬಿ ಬದುಕಿದ್ದ ನೂರಾರು ಜನರ ಬದುಕು ದುಸ್ತರವಾಗಿದೆ.
ಅದರಲ್ಲಿ , ನಿಮಗೆ ಪ್ರವಾಸಿ ತಾಣಗಳ ಸುಂದರ ಕಥೆ ,ಮಾಹಿತಿ ನೀಡುತ್ತಿದ್ದ ಟೂರಿಸ್ಟ್ ಗೈಡ್ ಬದುಕು ಕೂಡ ಹೊರತಾಗಿಲ್ಲ. ಅವರ ಬದುಕು ಬದಲಾಗಿದೆ.ಅವರ ವ್ಯಥೆ ಯಾರಿಗೂ ಕೇಳದಾಗಿದೆ. ಪ್ರತಿಯೊಬ್ಬ ಪ್ರವಾಸಿ ಮಾರ್ಗದರ್ಶಕನ ಕಥೆಯಿದು.
ಹಂಪಿಯ ಪ್ರವಾಸಿ ಮಾರ್ಗದರ್ಶಕ ಭಾನು ಪ್ರಕಾಶ್
ನೀವೂ ವಿಶ್ವ ಪಾರಂಪರಿಕ ತಾಣ ಹಂಪಿ(hampi)ಗೆ ಹೋದಾಗ ,ಹಂಪಿಯ ಕಥೆ ಹೇಳಲು ನೂರಾರು ಪ್ರವಾಸಿ ಮಾರ್ಗದರ್ಶಕರು ನಿಮಗೆ ಕಾಣ ಸಿಗುತ್ತಾರೆ. ಬದಲಾದ ಕಾಲಮಾನ ಅವರ ಕಥೆ ಕೇಳಲು ಯಾರು ಇಲ್ಲದಂತಾಗಿದೆ. ಹಂಪಿಯಲ್ಲಿ ಸುಮಾರು 100-150 ಟೂರಿಸ್ಟ್ ಗೈಡ್ ಕೆಲಸ ಮಾಡುತ್ತಾರೆ. ಅವರಲ್ಲಿ ಭಾನು ಪ್ರಕಾಶ್ ಕೂಡ ಒಬ್ಬರು.
ಭಾನು ಪ್ರಕಾಶ್, ಕಳೆದ 14 ವರ್ಷದಿಂದ ಕರುನಾಡಿನ ಹೆಮ್ಮೆ ಹಂಪಿಯಲ್ಲಿ ಟೂರಿಸ್ಟ್ ಗೈಡ್. ಹಂಪಿಯ ಕಥೆ ಹೇಳುವುದು ಖುಷಿ. ಹಂಪಿಯ ಕಥೆ ಹೇಳುವುದು, ಪ್ರವಾಸಿಗರಿಗೆ ಹಂಪಿಯನ್ನು ಪರಿಚಯಿಸುವುದರಲ್ಲಿ ಸಿಗುವ ಖುಷಿ ವರ್ಣಿಸಲು ಅಸಾಧ್ಯ. ತನ್ನ ಕೆಲಸದಲ್ಲಿ ಸಿಗುವ ಖುಷಿ ಬೇರೆಲ್ಲೂ ಸಿಗುವುದಿಲ್ಲ ಎನ್ನುತ್ತಾರೆ ಭಾನು ಪ್ರಕಾಶ್.
ನೀವುಇದನ್ನುಇಷ್ಟಪಡಬಹುದು: ಹಂಪಿಯಲ್ಲಿ ಕಂಡ ಮುಖ: ಸುಜಯ್ 700 ರೂಪಾಯಿಯಲ್ಲಿ ಹಂಪಿಗೆ ಹೋಗಿ ಬಂದ ಕತೆ
ಕಥೆ ಹೇಳುವುದು ಇವರ ಬದುಕಿನ ವರಮಾನ ಆದರೆ, ಇವರು ಹೇಳುವ ಸುಂದರ ಕಥೆ ಅದೆಷ್ಟೋ ಪ್ರವಾಸಿಗರಿಗೆ ಹಂಪಿಯ ಬಗ್ಗೆ ಗೌರವ ಹೆಚ್ಚಿಸುವುದು ಸುಳ್ಳಲ್ಲ. ವರ್ಷದ 6 ತಿಂಗಳು ಪ್ರತಿ ದಿನ ಹಂಪಿಗೆ ಬರುವ ಪ್ರವಾಸಿಗರಿಗೆ ಹಂಪಿಯ ವಿಶೇಷತೆ, ಇತಿಹಾಸದ ಕಥೆ ಹೇಳುತ್ತಿದ್ದರು. ದಿನಕ್ಕೆ ಒಂದು ಗುಂಪಿಗೆ ಹಂಪಿಯನ್ನು ತೋರಿಸುತ್ತಿದ್ದರು.
ಬೆಳಿಗ್ಗೆ 9 ಗಂಟೆ ಹಂಪಿಯನ್ನು ತೋರಿಸಲು ಹೊರಟರೆ ಸಂಜೆ 6 ಗಂಟೆಯ ತನಕ ಪ್ರವಾಸಿ ತಂಡಕ್ಕೆ ಹಂಪಿಯನ್ನು ಪರಿಚಯಿಸುತ್ತಾರೆ. ನಮ್ಮ ಹಂಪಿ ಅಷ್ಟೊಂದು ಸುಂದರ, ವಿಸ್ತಾರ ಎನ್ನುತ್ತಾ ತನ್ನ ಕೆಲಸದ ಬಗ್ಗೆ ಖುಷಿಪಡುತ್ತಾರೆ ಭಾನು ಪ್ರಕಾಶ್. ಜನರಿಗೆ ಕಥೆ ಹೇಳುತ್ತಾ ಬದುಕನ್ನು ಸಂತ್ರಪ್ತಿಯಿಂದ ನಡೆಸುತ್ತಾರೆ ಪ್ರವಾಸಿ ಮಾರ್ಗದರ್ಶಕರು. ಒಂದು ಪ್ರವಾಸಿ ತಂಡಕ್ಕೆ ಕಥೆ ಹೇಳಲು ಭಾನು ಪ್ರಕಾಶ್ 2000 ರೂಪಾಯಿ ಪಡೆದುಕೊಳ್ಳುತ್ತಿದ್ದರು. ಆ ಹಣವೇ ಬದುಕಿನ ವರಮಾನ ಆಗಿತ್ತು.
ವೃತ್ತಿಯ ಮೇಲೆ ಕರಿಛಾಯೆ
ಇಂದು ಕಥೆ ಹೇಳುವವರ ಕಥೆಗಳಿಗೆ ಕೇಳುವ ಕಿವಿಗಳು ಇಲ್ಲದ್ದಂತಾಗಿದೆ. ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಆರಂಭವಾಗಿದ್ದ ಕೊರೋನಾ(corona), ಭಾನು ಪ್ರಕಾಶ್ ಅವರ ವೃತ್ತಿಯ ಮೇಲೂ ಕರಿ ಛಾಯೆ ಆವರಿಸಿದೆ. ವರ್ಷದ 6 ತಿಂಗಳು ಕೆಲಸ ಮಾಡುತ್ತಿದ್ದರು. ನವೆಂಬರ್(November) ತಿಂಗಳಲ್ಲಿ ಇವರ ಕೆಲಸ ಆರಂಭ . ಉಳಿದ ಸಮಯ ರಜೆಯ ದಿನಗಳಲ್ಲಿ ಕೆಲಸ ಮಾಡುತ್ತಿದ್ದರು.
ಆದರೆ ಭಾರತಕ್ಕೆ ಕಾಲಿಟ್ಟ ಮಾರಿಯಿಂದ ಇವರಿಗೆ ಸರಿಯಾಗಿ ಕೆಲಸ ಇಲ್ಲದಾಗಿದೆ. ಒಂದೆರಡು ತಿಂಗಳು ಮಾತ್ರ ಕೆಲಸವಿತ್ತು. ಖುಷಿ ಕೊಡುತ್ತಿದ್ದ, ಬದುಕಿನ ಭಾಗವಾಗಿದ್ದ ಹಂಪಿಯ ಕಥೆ ಹೇಳುವ ಕಾಯಕ ಮಾಡುವುದು ಇಂದು ಸಾಧ್ಯವಿಲ್ಲ. ಆ ಕಾರಣಕ್ಕಾಗಿ ಬದುಕಿನ ನಿರ್ವಹಣೆಗಾಗಿ ಹೊಲದಲ್ಲಿ ಕೆಲಸ ಮಾಡುತ್ತಿದ್ದಾರೆ. ಇದು ಭಾನು ಪ್ರಕಾಶ್ ಒಬ್ಬರ ಕಥೆಯಲ್ಲ. ಅದೆಷ್ಟೋ ಪ್ರವಾಸಿ ತಾಣಗಳ ಕಥೆಗಳನ್ನು ಹೇಳಿ ಬದುಕುತ್ತಿದ್ದ ಪ್ರವಾಸಿ ಮಾರ್ಗದರ್ಶಕರ ಕಥೆ.
ಎಲ್ಲವೂ ಸರಿ ಹೋಗುವ ನಿರೀಕ್ಷೆಯಲ್ಲಿ ಟೂರಿಸ್ಟ್ ಗೈಡ್
ಪಾರಂಪರಿಕ ತಾಣಗಳ ಕಥೆ ಹೇಳುವ ಪ್ರವಾಸಿ ಮಾರ್ಗದರ್ಶಕರನ್ನು ಸರಕಾರ ಸಾಂಸ್ಕೃತಿಕ ರಾಯಭಾರಿ (cultural ambassador) ಎಂದು ಘೋಷಿಸಿದೆ. ಆದರೆ ಇಂದು ಅದೇ ಸಾಂಸ್ಕೃತಿಕ ರಾಯಭಾರಿಗಳ ಕಥೆ ದುಸ್ತರವಾಗಿದೆ.
ವೈರಸ್ ದೂರವಾಗಿ ಪ್ರವಾಸೋದ್ಯಮ ಇಲಾಖೆ ಮೊದಲಿನ ಹಾಗೆ ಆಗಲಿ ಎನ್ನುವ ಭರವಸೆ ಪ್ರವಾಸಿ ಮಾರ್ಗದರ್ಶಕರದ್ದು. ಪ್ರವಾಸಿಗರಿಲ್ಲದೆ, ಪ್ರವಾಸಿ ಮಾರ್ಗದರ್ಶಕರಿಲ್ಲದೇ ಖಾಲಿಯಾಗಿರುವ ಪ್ರವಾಸಿ ತಾಣಗಳಿಗೆ ಮೊದಲಿನ ಹಾಗೆ ಜೀವಕಳೆ ಬರಲಿ. ಎಲ್ಲವೂ ಮೊದಲಿನ ಹಾಗೆ ಆದರೂ ಪ್ರವಾಸೋದ್ಯಮ ಪುಟಿದೇಳಲು ಸಮಯ ಹಿಡಿಯುತ್ತದೆ. ಎಲ್ಲವೂ ಸರಿ ಹೋಗುತ್ತದೆ ಎನ್ನುವ ಆಸೆ ಕಂಗಳಲ್ಲಿ ಕಾಯುತ್ತಾ, ಮತ್ತೆ ಕಥೆ ಹೇಳುವ ಕಾತುರದಲ್ಲಿ ಪ್ರವಾಸಿ ಮಾರ್ಗದರ್ಶಕರಿದ್ದಾರೆ.
ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.