ಏಕಾಂಗಿ ಸಂಚಾರಿನಡಿಗೆ ನಮ್ಮ ಖುಷಿಗೆಸಂಸ್ಕೃತಿ, ಪರಂಪರೆಸ್ಫೂರ್ತಿ ಗಾಥೆಸ್ಮರಣೀಯ ಜಾಗ

ಹಂಪಿಯಲ್ಲಿ ಕಂಡ ಮುಖ: ಸುಜಯ್ 700 ರೂಪಾಯಿಯಲ್ಲಿ ಹಂಪಿಗೆ ಹೋಗಿ ಬಂದ ಕತೆ

ಸುಜಯ್ ದಕ್ಷಿಣ ಕನ್ನಡದ ಹುಡುಗ. ಮೈಸೂರಲ್ಲಿ ಕೆಲಸ. ಪುಸ್ತಕ ಓದುವುದು ಇಷ್ಟ. ತಿರುಗಾಟ ಅಂದ್ರೆ ಮೋಹ. ತೀವ್ರವಾಗಿ ಬದುಕಬೇಕು ಎಂಬ ಆಸೆ ಇರುವ ವ್ಯಾಮೋಹಿ.

ತಿರುಗಾಟ ಕಲಿಸುವಷ್ಟು ಅನುಭವವನ್ನು ಬೇರಾವುದೂ ಕಲಿಸಲಾರದು

Hampi

ನನ್ನ ತಿರುಗಾಟದ ಹುಚ್ಚಿಗೆ ನೆಪವಾಗಿ ಸಿಕ್ಕಿದ್ದು ಹಂಪಿ. ಹಂಪಿಯ ಫೋಟೋ, ಅದರ ಕುರಿತ ಬರಹ ಓದಿದಾಗೆಲ್ಲಾ ಆವಾಗಲೇ ಎದ್ದು ಹೊರಡಬೇಕೆನಿಸಿದ್ದ ಊರು ಇದು. ರಜೆ ಇತ್ತು, ಒಬ್ಬನೇ ಎಲ್ಲಾದರು ಹೋಗಬೇಕಾಗಿತ್ತು, ರೈಲು ಏರಿಬಿಟ್ಟೆ.

ಹಾಗಂತ ನಾನೇನು ಪ್ಲಾನ್ ಮಾಡಿ ಹೋಗಿದ್ದಲ್ಲ, ಕಾಲೇಜಲ್ಲಿ ಇರೋವಾಗ ನಾವು ಹೋಗೋ ಟ್ರಿಪ್ ಗಳೆಲ್ಲಾ ಹೊರಡುವ ಹಿಂದಿನ ಕ್ಲಾಸಲ್ಲಿ ಪ್ಲಾನ್ ಆಗಿರುತ್ತಿದ್ದವು, ಇದೂ ಕೂಡ ಹಾಗೇ.

ಜೋಗಿಯವರ ಲೈಫ್ ಈಸ್ ಬ್ಯೂಟಿಫುಲ್ ಪುಸ್ತಕದ ಸಾಲಿನಂತೆ ಮ್ಯೂಸಿಕ್ ಪ್ಲೇಯರ್ ನಲ್ಲಿ ಇರುವಂತೆ ಲೈಫಲ್ಲೊಂದು ಶಫಲ್ ಬಟನ್ ಇರಬೇಕು, ನೆಕ್ಷ್ಟ್ ಪ್ಲೇ ಆಗೋ ಹಾಡು ಯಾವುದೆಂದು ತಿಳಿಯದಿದ್ದಾಗ ಮಾತ್ರ ಅನಿರೀಕ್ಷಿತವಾಗಿ ಬರೋ ಆ ಹಾಡು ಖುಷಿ ಕೊಡಬಲ್ಲದು, ಹಾಗೇ ನಾನು ಒತ್ತಿದ ಶಫಲ್ ಬಟನ್ ಹಂಪಿ ಹೋಗೋ ರೈಲಿನ ಸೀಟ್ ನಂ.C24ರಲ್ಲಿ ತಂದು ಕುಳ್ಳಿರಿಸಿತ್ತು.

Hampi

ನೀವು ಇದನ್ನು ಇಷ್ಟಪಡಬಹುದು: ಒಂದು ವರ್ಷದ ಮಗು ಋತುವಿಗೆ ಹಂಪಿ ತೋರಿಸಿದ ಹಿಪ್ಪೀ ರಾಣಿ: ಮಕ್ಕಳ ಜೊತೆ ಟೂರ್ ಹೋಗುವುದು ಹೀಗೆ!

ಬೆಳಗ್ಗೆ ಎಂಟರಿಂದ ಸಂಜೆ ಆರರವರೆಗೆ ಹಂಪಿಯಲ್ಲಿ ನಾನು ನೋಡಿದ್ದು ಅನುಭವವಿಸಿದ್ದು ಹಲವು. ಅದರಲ್ಲೊಂದು ‘ಭಜಯಂತ್ರಿ ಭರಮಪ್ಪ’ ಅಜ್ಜ.

ವಿರೂಪಾಕ್ಷ ದೇಗುಲದ ಒಳಗಡೆ ಕೊನೆಯ ಅಂಚೊಂದರಲ್ಲಿ ಒಂದು ಅಜ್ಜ ಕೂತಿದ್ದಾರೆ. ಕಂಡವರನ್ನೆಲ್ಲಾ ಏನೋ ತೋರಿಸಿ ಕರೆಯುತ್ತಿದ್ದರು. ಹಲ್ಲಿಲ್ಲದ ಬಾಯಲ್ಲಿ ಹೇಳುತ್ತಿದ್ದಿದ್ದು ಒಂದೂ ಅರ್ಥವಾಗುತ್ತಿರಲಿಲ್ಲ. ಹತ್ತಿರ ಹೋದರೆ ಗೋಡೆಯೊಂದಕ್ಕೆ ಕೈ ತೋರಿಸಿ “ಗೋಪುರ ಉಲ್ಟಾ ಕಾಣುತ್ತೆ, ಬೆಳಿಗ್ಗೆ ಏಳರಿಂದ ಸಂಜೆ ನಾಲ್ಕರವರೆಗೆ, ಶ್ರೀ ಕೃಷ್ಣದೇವರಾಯ ಕಟ್ಟಿಸಿದ್ದು” ಇನ್ನೂ ಏನೇನೋ ಹೇಳುತ್ತಿದ್ದರು. ಹಲ್ಲಿಲ್ಲದ್ದರಿಂದ ಅವರ ಮಾತು ಮಗುವೊಂದು ತೊದಲು‌ ನುಡಿದಂತೆ ಕೇಳುತಿತ್ತು ನನಗೆ. 

Hampi

ಬಂದವರಿಗೆಲ್ಲ ಹೇಳಿ ಹೇಳಿ ಮೊದಲ ಒಂದು ಪದ ಶುರು ಮಾಡಿದರೆ ಬೇಡವೆಂದರೂ ಪೂರ್ತಿ ವಾಕ್ಯ ಅವರ ಬಾಯಿಂದ ಬರುತಿತ್ತು.

ಏನೆಂದು ಒಳಹೊಕ್ಕು ಗೋಡೆ ನೋಡಿದರೆ ಅಚ್ಚರಿ. ವಿರೂಪಾಕ್ಷ ದೇವಾಲಯದ ದೊಡ್ಡ ಗೋಪುರ ಇಲ್ಲಿ ಗೋಡೆಯಲ್ಲಿ ತಲೆಕೆಳಗಾಗಿ ಕಾಣುತ್ತಿದೆ. ಸೇಮ್ ಫಿಲ್ಮ್ ಥಿಯೇಟರ್ ಸಿಸ್ಟಮ್ ಆದರೆ ಬೆಳಕು ಬರುತ್ತಿದ್ದ ಜಾಗದಲ್ಲಿ ದರ್ಪಣ ಕನ್ನಡಿ ಏನೂ ಇಲ್ಲ, ಆದರೂ ಎದುರಿನ ಗೋಡೆಯಲ್ಲಿ ಗೋಪುರ ತಲೆಕೆಳಗಾಗಿ ಕಾಣುತ್ತೆ.

ಅಜ್ಜನೊಂದಿಗೆ ಮಾತಾಡಬೇಕು ಅನಿಸಿತು, ನಿಮ್ಮ ಫೋಟೋ ತೆಗಿತೇನೆ ಅಂದೆ, ಸ್ಮೈಲ್ ಕೊಟ್ಟರು.

ಹೆಸರು ಕೇಳಿದೆ, ‘ಭಜಯಂತ್ರಿ ಭರಮಪ್ಪ’ ಎಂದರು. ನನಗಂತೂ ತರಾಸು ಅವರ ದುರ್ಗಾಸ್ತಮಾನ ಪುಸ್ತಕದ ಪಾತ್ರಗಳೆಲ್ಲ ಕಣ್ಣ ಮುಂದೆ ಬಂದವು, ಸೇಮ್ ಇಂಥದೇ ಹೆಸರುಗಳು ಅಲ್ಲಿ. ಗೋಪುರ ಯಾಕೆ ಉಲ್ಟಾ ಕಾಣುತ್ತೆ ಎಂದು ಕೇಳಿದರೆ ಅಜ್ಜನಲ್ಲೂ ಸರಿಯಾದ ಉತ್ತರವಿಲ್ಲ, ಉತ್ತರ ಅದೇ ವಾಕ್ಯಗಳು “ಗೋಪುರ ಉಲ್ಟಾ ಕಾಣುತ್ತೆ, ಬೆಳಿಗ್ಗೆ ಏಳರಿಂದ ಸಂಜೆ……….” ಇಷ್ಟು ಹೇಳಿ ಅಜ್ಜ ಕೈಒಡ್ಡುತ್ತಿದ್ದರು, ಎಲ್ಲರು ಚಿಲ್ಲರೆ ಹಾಕುತ್ತಿದ್ದರು, ನಾನು ಹತ್ತು ರೂ ಕೊಟ್ಟೆ, ಅಜ್ಜ ಫುಲ್ ಖುಷಿ.

Hampi

ನಮ್ಮ ಮಾತುಕತೆ ನಡೆದಿತ್ತು. ನನ್ನೂರು ಕೇಳಿದರು, ಒಬ್ಬನೇ ಬಂದಿದ್ದು ಎಂದು ಕೇಳಿ ಆಶ್ಚರ್ಯಪಟ್ಟರು. “ಆಟೋದಲ್ಲಿ ಹೋಗಿ ಆರುನೂರು ರುಪಾಯಿ ಕಳೆದುಕೊಳ್ಳುತ್ತೀಯ ಅಥವಾ ಐದಾರು ಕೀಮೀ ನಡೆದು ಎಲ್ಲಾ ನೋಡ್ತೀಯಾ?” ಎಂದು ಕೇಳಿ, ಗೈಡ್, ಆಟೋಗಳ ಸಹಾಯವಿಲ್ಲದೆ ನಡೆದೇ ಹಂಪಿ ಸುತ್ತಲು ದಾರಿ ಹೇಳಿದರು. ಅದೇ ದಾರಿಯಲ್ಲಿ ದಿನವಿಡೀ ಸುತ್ತಿದ್ದು ನಾನು. 

ಬೀಳ್ಕೊಡುವಾಗ ಅವರಾಡಿದ ಒಂದು ಮಾತು ಇನ್ನೂ ಮರೆತಿಲ್ಲ, “ರಾತ್ರಿ ಹಂಪಿಯಲ್ಲಿ ನಿಲ್ತೀಯಾದ್ರೆ ರೂಂ ನಾನು ಮಾಡಿಕೊಡ್ತೇನೆ, ನಂಗೊಂದು ಹತ್ತು ರುಪಾಯಿ ಕೊಟ್ರೆ ಸಾಕು.” ಅಜ್ಜ ಕೇವಲ ಹತ್ತು ರುಪಾಯಿಯಲ್ಲಿ ತೃಪ್ತರಾಗುತ್ತಿದ್ದ ರೀತಿಯಂತೂ ನನ್ನಲ್ಲಿ ಬೆರಗು ಹುಟ್ಟಿಸಿತು. 

ಹಂಪಿಯ ಭಗ್ನ ದೇವಾಲಯಗಳ ರೀತಿ ಇವರೂ ಆವಾಗಾವಾಗ ಕಾಡುತ್ತಾರೆ.

ಸುಮಾರು ಒಂದು ಸಾವಿರ ಕೀಲೋಮೀಟರ್ ಪ್ರಯಾಣ ಅಂದಿನದು. ರೈಲು ಪ್ರಯಾಣ ಅಗ್ಗವಾಗಿತ್ತು. ಎಲ್ಲಾ ವೆಚ್ಚ ಸೇರಿ ಏಳುನೂರು ರೂಗಳಲ್ಲಿ, ದಿನವಿಡೀ ಕಾಲುಸುಸ್ತಾಗುವಷ್ಟು ಹಂಪಿಯ ಕಲ್ಲುಬಂಡೆಗಳಲ್ಲಿ ಅಡ್ಡಾಡಿ, ಏಳು ಶತಮಾನ ಹಳೆಯದಾದ ದೇವಾಲಯಗಳಿಗೆ ಕೈಮುಗಿದು, (ನಾನು ಮುಗಿಯೋದು ದೇವರಿಗಲ್ಲ, ದೇವಾಲಯ ಕೆತ್ತಿದ ಕೈಗಳಿಗೆ) ಮೈಸುಡುವ ಬಿಸಿಲಿಗೆ ಒಂದಷ್ಟು ಕಪ್ಪಾಗಿ, ಅಲ್ಲಲ್ಲಿ ಸಿಕ್ಕಿದ್ದನ್ನೆಲ್ಲಾ ತಿಂದು, ಮಾತಿಗೆ ಸಿಕ್ಕವರಲ್ಲಿ ಮಾತಾಡಿ, ಬಿಸಿಲಿಗೆ ಬಸವಳಿದಿದ್ದ ಕಣ್ಣುಗಳನ್ನು ಆವಾಗಾವಾಗ ತಂಪು ಮಾಡುತಿದ್ದ ವಿದೇಶಿ ಸುಂದರಿಗಳನ್ನು ನೋಡುತ್ತಾ ಸುಂದರ ದಿನವೊಂದು ಕಳೆಯಿತು.

Hampi

ಹಿಂತಿರುಗುವಾಗ ನನ್ನಲ್ಲಿ ಉಳಿದದ್ದು ಅತ್ಯದ್ಭುತ ವಿಜಯನಗರ ಸಾಮ್ರಾಜ್ಯವೊಂದು ಶತ್ರುಗಳ ಆಕ್ರಮಣಕ್ಕೊಳಗಾಗಿ ಹಾಳು ಕೊಂಪೆಯಾಗಿ ಬದಲಾದುದರ ಬಗೆಗಿನ ವಿಷಾದ ಮಾತ್ರ.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. 

Related Articles

Leave a Reply

Your email address will not be published. Required fields are marked *

Back to top button