ದೇವಂದಬೆಟ್ಟು ಎಂಬ ದೃಶ್ಯಕಾವ್ಯ: ಮಂಗಳೂರಲ್ಲಿ ನೋಡಲೇಬೇಕಾದ ಜಾಗದ ಬಗ್ಗೆ ಕೃಷ್ಣಮೋಹನ ತಲೆಂಗಳ ಬರೆದಿದ್ದಾರೆ!
ಪತ್ರಕರ್ತ, ಪ್ರವಾಸಿಗ, ಕನಸುಗಾರ, ಜೀವನೋತ್ಸಾಹಿ ಅಂದ್ರೆ ಕೃಷ್ಣಮೋಹನ ತಲೆಂಗಳ. ಒಳ್ಳೆಯ ಭಾಷೆ, ಸರಾಗ ನಿರೂಪಣೆ ಇವರ ಶಕ್ತಿ. ಸರಳವಾಗಿ ಬರೆದು ಮನಸ್ಸು ಮುಟ್ಟಬಲ್ಲ ಬರಹಗಾರನ ಚಂದದ ಬರಹ.
ನೀವು ಇದೇ ಚಳಿಗಾಲದಲ್ಲಿ ಮಂಗಳೂರಿಗೇನಾದರೂ ಬಂದರೆ ನೋಡಲೇಬೇಕಾದ ಲವಲವಿಕೆಯ, ನಿಶ್ಯಬ್ದ ತಾಣವೊಂದು ನಿಮ್ಮನ್ನು ಕಾಯುತ್ತಿದೆ. ಈಗಷ್ಟೇ ಪ್ರವರ್ಧಮಾನಕ್ಕೆ ಬರುತ್ತಿರುವ ಈ ಪ್ರದೇಶದ ಹೆಸರು ದೇವಂದಬೆಟ್ಟು.
ಮಂಗಳೂರು ನಗರದಿಂದ 28 ಕಿ.ಮೀ. ದೂರದಲ್ಲಿದೆ. ಮಂಗಳೂರು ತಾಲೂಕು ಪಾವೂರು ಗ್ರಾಮದ ಇನೋಳಿ ಎಂಬಲ್ಲಿನ ದೇವಂದಬೆಟ್ಟಿನ ಈ ಪುಟ್ಟ ಬೆಟ್ಟದಲ್ಲಿ ನೆಲೆಯಾಗಿರುವುದು ಸೋಮನಾಥೇಶ್ವರ ದೇವಸ್ಥಾನ. ಕೆಲ ಸಮಯದ ಹಿಂದೆ ನವೀಕರಣಗೊಂಡಿರುವ ಚೆಂದದ ದೇಗುಲ ಇದು. ಇದಕ್ಕಿಂತ ಮಿಗಿಲಾಗಿ, ಈ ಬೆಟ್ಟವನ್ನು ಸುತ್ತುವರಿದು ಮೂರು ದಿಕ್ಕಿನಲ್ಲೂ ಹರಿದು ಹೋಗುವ ದಕ್ಷಿಣ ಕನ್ನಡದ ಜೀವನದಿ ನೇತ್ರಾವತಿಯ ಸೊಬಗನ್ನು ಎತ್ತರದ ಬೆಟ್ಟ ಮೇಲಿನಿಂದ ವೀಕ್ಷಿಸುವ ಸಂಭ್ರಮವೇ ಬೇರೆ ಬಿಡಿ. ಇನೋಳಿ ಎಂಬ ನದಿ ತಟದ ಈ ಊರನ್ನು ಸವರಿ ದಾಟುವ ನೇತ್ರಾವತಿ ನದಿ ಮತ್ತೆ ಸುಮಾರು 10 ಕಿ.ಮೀ. ದೂರದಲ್ಲಿ ಕಡಲನ್ನು ಸೇರುತ್ತಾಳೆ. ಅದಕ್ಕೆ ತಾಗಿಯೇ ಇದೆ ದೇವಂದಬೆಟ್ಟು.
ನೀವು ಇದನ್ನು ಇಷ್ಟಪಡಬಹುದು: ಜಗತ್ತಿನಲ್ಲಿ 195 ದೇಶಗಳಲ್ಲಿ 186 ದೇಶ ಸುತ್ತಿ ಬಂದಿರುವ ರವಿ ಪ್ರಭು
ಬೆಟ್ಟದ ತುದಿಯ ವರೆಗೂ ಕಾಂಕ್ರಿಟ್ ರಸ್ತೆ ಇದೆ. ನಡುವೆ ಭವ್ಯ ದೇಗುಲ, ಎದುರು ವಿಶಾಲ ಹೂದೋಟ, ಪಾರ್ಕಿಂಗ್ ಜಾಗ, ಬೆಟ್ಟದ ಅಂಚಿನಲ್ಲಿ ನದಿಯನ್ನು ನೋಡಲೆಂದೇ ಸಜ್ಜುಗೊಳಿಸಿರುವ ವ್ಯೂ ಪಾಯಿಂಟುಗಳಿವೆ. ನದಿಯ ಕಟಿಯಲ್ಲಿ ನಾವು ನಿಂತಂತೆ ‘ಾಸವಾಗಿಸುವ ದ್ವೀಪಸದೃಶ ಅನುಭೂತಿ ನೀಡಬಲ್ಲ ಜಾಗವಿದು. ದೂರದಲ್ಲಿ ರಾ.ಹೆ.75ರಲ್ಲಿ ಓಡಾಡುವ ವಾಹನಗಳು, ಮಂಗಳೂರು ನಗರ, ಪಶ್ಚಿಮ ಘಟ್ಟದ ಸಾಲುಗಳ ಮಸುಕು ವೀಕ್ಷಣೆ, ಕೆಳಗೆ ನದಿಯಲ್ಲಿ ಊರ ಮಂದಿ ತಟದ ಆಚೆಗಿನ ರಂಗಿಪೇಟೆಗೆ ಸಾಗುವ ಬೋಟುಗಳ ‘ರಾಟೆ, ಮೀನು ಹಿಡಿಯುವ ಮಂದಿ, ಬೆಂಗಳೂರಿಗೆ ಲಗುಬಗೆಯಿಂದ ಭಾವಿಸುವ ಗೂಡ್ಸ್ ರೈಲಿನ ಶಿಳ್ಳೆ… ಎಲ್ಲವನ್ನೂ ಇಲ್ಲಿ ಕುಳಿತು ನೋಡಬಹುದು.
ಬೆಳಗ್ಗಿನ ಜಾವ ಅಥವಾ ಸಂಜೆ ಇಲ್ಲಿಗೆ ಭೇಟಿ ನೀಡಿದರೆ ಸುತ್ತಮುತ್ತಲ ದೃಶ್ಯವೀಕ್ಷಣೆ ಹೆಚ್ಚು ಆಪ್ತ ಎನಿಸುತ್ತದೆ. ಯಾವುದೇ ಸೀಸನ್ನಿನಲ್ಲೂ ಇಲ್ಲಿಗೆ ಮನೆ ಮಂದಿ ಸಮೇತ ಬರಬಹುದು. ಚೆಂದದ ನಡಿಗೆ, ಸೈಕ್ಲಿಂಗ್, ಶಾಲಾ ಮಕ್ಕಳ ಪ್ರವಾಸ, ಕೌಟುಂಬಿಕ ಹೊರಸಂಚಾರಕ್ಕೂ ಹೇಳಿ ಮಾಡಿಸಿದ ಜಾಗ. ನೀಲಿ ಆಕಾಶ, ಹಸಿರ ಭರಣಿ, ತಂಪು ಗಾಳಿ, ಚೆಂದದ ಸೂರ್ಯೋದಯ, ಸೂರ್ಯಾಸ್ತವನ್ನು ವೀಕ್ಷಿಸಲು, ಫೋಟೋಗ್ರಫಿಗೂ ಹೇಳಿ ಮಾಡಿಸಿದ ತಾಣವಿದು.
ಮಂಗಳೂರಿನಿಂದ ಬರುವವರು ರಾ.ಹೆ.66ರಲ್ಲಿ ಕಾಸರಗೋಡು ರಸ್ತೆಯಲ್ಲಿ ಬಂದು, ತೊಕ್ಕೊಟ್ಟಿನಲ್ಲಿ ಎಡಕ್ಕೆ ತಿರುಗಿ, ಕೊಣಾಜೆಯ ಮಂಗಳೂರು ವಿ.ವಿ. ಕ್ಯಾಂಪಸ್‌ನ್ನು ದಾಟಿ, ಪಾವೂರು ಗ್ರಾಮಚಾವಡಿ, ಇನೋಳಿ ಮೂಲಕ ದೇವಂದಬೆಟ್ಟು ತಲುಪಬಹುದು. (ಸುಮಾರು 45 ನಿಮಿಷಗಳ ಪ್ರಯಾಣ) ಅಥವಾ. ರಾ.ಹೆ.೭೫ರಲ್ಲಿ ಬಿ.ಸಿ.ರೋಡ್-ಪಂಪ್ ವೆಲ್ ನಡುವೆ ಸಿಗುವ ರಂಗಿಪೇಟೆ ಪರಿಸರದಿಂದ ಬೋಟ್ ಮೂಲಕ ನೇತ್ರಾವತಿ ನದಿ ದಾಟಿ ಬಳಿಕ ಒಂದಷ್ಟು ಕಾಲ್ನಡಿಗೆ ಮೂಲಕ ದೇವಂದಬೆಟ್ಟು ಗುಡ್ಡವನ್ನು ಏರಬಹುದು.
ಬೆಟ್ಟ ನೋಡಲು ಬಂದವರಿಗೆ ನೇತ್ರಾವತಿಯ ದಂಡೆಯ ನಡಿಗೆ, ದೋಣಿ ಸಂಚಾರದ ಅನುಭೂತಿ ಬೋನಸ್ ಅನುಭವ ಅನ್ನುವುದುನ್ನು ಮರೆಯಬೇಡಿ.
ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ