ದೇವರಮನೆ ಎಂಬ ಕನಸಿನ ಊರು: ಕೃಷ್ಣಮೋಹನ ತಲೆಂಗಳ ಬರೆದ ಮಂಜಿನಂಥಾ ಬರಹ
ಪತ್ರಕರ್ತ, ಪ್ರವಾಸಿಗ, ಕನಸುಗಾರ, ಜೀವನೋತ್ಸಾಹಿ ಅಂದ್ರೆ ಕೃಷ್ಣಮೋಹನ ತಲೆಂಗಳ. ಒಳ್ಳೆಯ ಭಾಷೆ, ಸರಾಗ ನಿರೂಪಣೆ ಇವರ ಶಕ್ತಿ. ಸರಳವಾಗಿ ಬರೆದು ಮನಸ್ಸು ಮುಟ್ಟಬಲ್ಲ ಬರಹಗಾರನ ಚಂದದ ಬರಹ.
ಚಳಿಗಾಲ ಕಾಲಿಡುತ್ತಿದೆ. ಕೋವಿಡ್ ಭೀತಿ ದೂರವಾಗಿಲ್ಲ. ಪರೋಕ್ಷ ಲಾಕ್ ಡೌನ್‌ನಿಂದಾಗಿ ಸಂಚಾರಪ್ರಿಯರ ಮನಸ್ಸು, ದೇಹ ಜಡ್ಡುಗಟ್ಟಿದೆ. ಈ ದೀಪಾವಳಿಯ ಚುಮುಚುಮು ಚಳಿಯಲ್ಲಿ ಒಂದು ಚೆಂದದ ಹಸಿರು, ಥರಗುಟ್ಟಿಸುವ ಕುಳಿರ್ಗಾಳಿ, ಸುತ್ತಲೂ ಗೋಡೆ ಕಟ್ಟಿ ಕಾಡುವ ಮಂಜಿನ ಪರದೆಯ ನಡುವೆ ಕಳೆದುಹೋಗಿ ಸಂಭ್ರಮಿಸಬಹುದಾದ ಸುರಕ್ಷಿತ ಹಾಗೂ ಆಹ್ಲಾದಕರ ತಾಣ ದೇವರಮನೆ. ಚಿಕ್ಕಮಗಳೂರು ಜಿಲ್ಲೆ, ಮೂಡಿಗೆರೆ ತಾಲೂಕಿನಲ್ಲಿದೆ.
ದೇವರ ಮನೆ ಹಸಿರು ಹೊದ್ದ ಪುಟ್ಟ ಪುಟ್ಟ ಬೋಳು ಗುಡ್ಡಗಳ ಶಿಖರ ಶ್ರೇಣಿಗಳ ಗುಚ್ಛ. ಈ ಶಿಖರಗಳ ತಪ್ಪಲಿನಲ್ಲೇ ಮೂಡಿಗೆರೆ-ಬಣಕಲ್ ಸಂಪರ್ಕದ ಗ್ರಾಮ್ಯ ರಸ್ತೆ ಬಳಸಿ ಸಾಗಿದ್ದು, ಇಲ್ಲಿಗೆ ಪ್ರಯಾಣ ಕಷ್ಟವೇನಿಲ್ಲ. ಪ್ರಸಿದ್ಧ ಮುಳ್ಳಯ್ಯನಗಿರಿಗೆ ಹೋಗುವವರು, ಚಿಕ್ಕಮಗಳೂರಿನಿಂದ ಚಾರ್ಮಾಡಿ ಮೂಲಕ ಕರಾವಳಿಯತ್ತ ಸಾಗುವವರು ಸ್ವಲ್ಪ ಬಿಡುವು ಮಾಡಿಕೊಂಡು ಒಂದೆರಡು ಗಂಟೆಯ ಅವಧಿಯಲ್ಲಿ ನೋಡಿ ಹೋಗಬಹುದಾದ ತಾಣ ಇದು.
ಬೆಟ್ಟ ಶ್ರೇಣಿಯ ತಪ್ಪಲಿನವರೆಗೆ ವಾಹನ ಸಾಗುತ್ತದೆ. ಸುಮಾರು 100 ಮೀಟರ್ ಏರು ದಾರಿಯಲ್ಲಿ ನಡೆದುಕೊಂಡು ಹೋದರೆ ಚೆಂದದ ವ್ಯೆ ಪಾಯಿಂಟ್ ಸಿಗುತ್ತದೆ. ಎದುರಿಗೆ ಆಳ ಪ್ರಪಾತ. ಜೀರುಂಡೆ ನಿನಾದ, ಅಜ್ಞಾತ ಜಲಪಾತದ ಭೋರ್ಗರೆಯುವ ಸದ್ದು ಕ್ಷೀಣವಾಗಿ ಕೇಳಿಸುತ್ತದೆ. ಎಡಕ್ಕೂ, ಬಲಕ್ಕೂ ಹಬ್ಬಿರುವ ಬೆಟ್ಟಗಳ ಬೈಕಿ ಕಾಲು ಗಟ್ಟಿ ಇರುವ ತನಕವೂ ನಡೆಯುತ್ತಾ ಹೋಗಬಹುದು. ಆಸಕ್ತಿ ಇದ್ದರೆ ದೂರದಲ್ಲಿ ಕಾಣುವ ಬೆಟ್ಟಗಳಿಗೆ ಟ್ರೆಕ್ಕಿಂಗ್ ನಡೆಸಬಹುದು.
ಸದ್ದಿಲ್ಲದೇ ಕವಿಯುವ ಮಂಜು!
ಇಲ್ಲಿನ ವಿಶೇಷತೆ ಏನೆಂದರೆ ದೇವರಮನೆಯ ಬೆಟ್ಟ ಶ್ರೇಣಿಯ ಸುಮಾರು ನಾಲ್ಕು ಕಿ.ಮೀ. ಆಸುಪಾಸಿನಲ್ಲಿ ಮಾತ್ರ ಒಂಥರ ಕೊಡಗಿನ ವಾತಾವರಣ ಇದೆ. ಮುಂಜಾನೆ, ಸಂಜೆ, ಮಳೆಗಾಲ ಹಾಗೂ ಮೋಡ ಮುಸುಕಿದ ವಾತಾವರಣದಲ್ಲಿ ಇಲ್ಲಿ ಏಕಾಏಕಿ ಜಿನುಗು ಮಳೆ ಶುರುವಾಗುತ್ತದೆ. ಆಳ ಕಣಿವೆಯಿಂದ ಮ್ಯಾಜಿಕ್‌ನ ಹಾಗೆ ಮಂಜು ಮೇಲೇರುತ್ತಾ ಬಂದು ಮುತ್ತಿಡುತ್ತದೆ. ಅಷ್ಟೂ ದೃಶ್ಯಕಾವ್ಯ ಮರೆಯಾಗಿ ಮಂಜಿನ ಗೋಡೆ ನಮ್ಮನ್ನು ಕಟ್ಟಿಹಾಕುತ್ತದೆ. ಎಲ್ಲಿಂದಲೋ ಭೋರ್ಗರೆಯುತ್ತಾ ಬರುವ ಗಾಳಿ ಕೈಯ್ಯಲ್ಲಿನ ಕೊಡೆಯನ್ನು ಹಾರಿಸಿಕೊಂಡು ಹೋಗಬಲ್ಲುದು. ಏಕಾಏಕಿ ಬಿಸಿಲು ಕವಿದು, ಮಂಜಿನ ಪರದೆ ಸರಿಸಿ ಇಡೀ ಹಸಿರು ಕಣಿವೆಯನ್ನು ಅನಾವರಣಗೊಳಿಸುವುದೂ ನೋಡಲು ಚಂದ. ಒಂಥರಾ ಊಟಿ, ಕೊಡೈಕನಲ್ ವಾತಾವರಣವನ್ನು ನೆನಪಿಸುವ ನಮ್ಮೂರಿನ ‘ಮುಗಿಲುಪೇಟೆ’ ಇದು. ಅಚ್ಚರಿ ಎಂದರೆ ಅಲ್ಲಿಂದ ನಾಲ್ಕಾರು ಕಿ.ಮೀ. ದೂರ ಬಂದರೆ ಅಂತಹ ಜಿನುಗು ಮಳೆ, ಮಂಜಿನ ವಾತಾವರಣ ಕಾಣುವುದು ಕಷ್ಟ. ನೆನಪಿಡಿ ಸುಡು ಬಿಸಿಲಿನಲ್ಲಿ, ನಡು ಮಧ್ಯಾಹ್ನದಲ್ಲಿ ತೆರಳಿದರೆ ನಿಮಗೆ ಇಂತಹ ಮಂಜಿನ ಖುಷಿ ಸಿಕ್ಕದು. ಜಿನುಗು ಮಳೆಯಲ್ಲಿ, ಮುಂಜಾನೆ ಸೂರ್ಯ ಉದಯಿಸುವ ಹೊತ್ತಿನಲ್ಲಿ, ಸಂಜೆ ಸೂರ್ಯ ಪಶ್ಚಿಮದತ್ತ ವಾಲುವ ವೇಳೆಯಲ್ಲಿ ಹೋದರೆ ಮುಗಿಲಿನಾಟದ ಅಚ್ಚರಿಗೆ ಸಾಕ್ಷಿಗಳಾಗಬಹುದು.
ದೇವರಮನೆ ಪ್ರವಾಸ ಯಾಕೆ ಕೋವಿಡ್ ಕಾಲದಲ್ಲೂ ಪ್ರಸ್ತತ ಅಂದರೆ, ಇದು ವಿಶಾಲವಾದ ಬಯಲು, ಶಿಖರಗಳ ಸಂಗಮವಾದ ಕಾರಣ, ಪ್ರವಾಸಿಗರು ಒಂದೇ ಕಡೆ ಮುಗಿ ಬಿದ್ದು ದೈಹಿಕ ಅಂತರ ಮರೆಯಬೇಕಾದ ಸನ್ನಿವೇಶ ಇಲ್ಲ, ನಮಗೆ ಬೇಕಾದ ಹಾಗೆ ಪ್ರತ್ಯೇಕವಾಗಿ ಟ್ರೆಕಿಂಗ್ ನಡೆಸಬಹುದು, ಬೆಟ್ಟದ ತಪ್ಪಲಿನ ವರೆಗೆ ವಾಹನ ವ್ಯವಸ್ಥೆ ಇರುವ ಕಾರಣ ಮಕ್ಕಳು, ವೃದ್ಧರಿಗೂ ಇಲ್ಲಿಗೆ ತೆರಳಲು ಸುಲ‘. ಬೆಂಗಳೂರಿನಿಂದ ಅಥವಾ ಮಂಗಳೂರಿನಿಂದ ಒಂದು ಹಗಲಿನಲ್ಲಿ ಹೋಗಿ ಬರಬಹುದಾದ ಜಾಗ ಇದು. ಫೋಟೋ ಶೂಟ್ ಮಾಡಿಸಿಕೊಳ್ಳಲು ಹೇಳಿ ಮಾಡಿಸಿದ ಪ್ರದೇಶ.
ನೀವು ಇದನ್ನು ಇಷ್ಟಪಡಬಹುದು: ಬೆಳ್ಳಂಬೆಳಗ್ಗೆ ಮಟ್ಟು ಬೀಚ್, ಮಧ್ಯಾಹ್ನ ಹೊತ್ತು ಧನುಷ್ ತೀರ್ಥ: ಉಡುಪಿ ಆಸುಪಾಸಲ್ಲಿ ನೀವು ನೋಡಬಹುದಾದ 2 ಸುಂದರ ಜಾಗಗಳು
ದೇವರಮನೆಯಲ್ಲಿ ಸುಮಾರು ೮೦೦ ವರ್ಷ ಹಳೆಯದು ಎಂದು ಇತಿಹಾಸ ಹೇಳುವ ಶ್ರೀ ಕಾಲಭೈರವೇಶ್ವರನ ಗುಡಿ ಇದೆ. ಅದರ ಎದುರು ಆಕರ್ಷಕ ಪುಷ್ಕರಣಿ ಇದೆ. ಕಲ್ಲಿನಿಂದ ನಿರ್ಮಿಸಿದ ದೇವಸ್ಥಾನದ ಒಳಗೆ ತಂಪು ತಂಪು ವಾತಾವರಣ.
ದಾರಿ ಹೇಗೆ?
ಇಲ್ಲಿಗೆ ಬೆಂಗಳೂರಿನಿಂದ ಬರುವವರು ಸಕಲೇಶಪುರದಿಂದ ಚಿಕ್ಕಮಗಳೂರಿಗೆ ಹೋಗುವ ರಸ್ತೆಯಲ್ಲಿ ಮೂಡಿಗೆರೆ ಹ್ಯಾಂಡ್ ಪೋಸ್ಟ್ ತನಕ ಬಂದು, ಅಲ್ಲಿಂದ ಎಡಕ್ಕೆ ತಿರುಗಿದರೆ ಮೂಡಿಗೆರೆಯಿಂದ 20 ಕಿ.ಮೀ. ದೂರದಲ್ಲಿದೆ ದೇವರ ಮನೆ. ಚಾರ್ಮಾಡಿ-ಚಿಕ್ಕಮಗಳೂರು ರಸ್ತೆಯಲ್ಲಿ ಬರುವವರು ಕೊಟ್ಟಿಗೆಹಾರದಿಂದ ಸುಮಾರು 3 ಕಿ.ಮೀ.ದೂರದ ಬಣಕಲ್ ಎಂಬಲ್ಲಿ ಬಲಕ್ಕೆ ತಿರುಗಿ ಅಂಕುಡೊಂಕು ರಸ್ತೆಯಲ್ಲಿ ಬಂದರೆ 12 ಕಿ.ಮೀ.ದೂರದಲ್ಲಿದೆ ದೇವರಮನೆ. ಕಾಫಿ ತೋಟಗಳು, ಹಸಿರು ಬಯಲು, ಅಂಕುಡೊಂಕು ರಸ್ತೆ, ಅಲ್ಲಲ್ಲಿ ನೀರಿನ ಪುಟ್ಟ ಪುಟ್ಟ ಝರಿಗಳು, ಜೀರುಂಡೆ ಸದ್ದು, ಗ್ರಾಮ್ಯ ಪರಿಸರ, ಬೋಳು ಬೋಳು ಶಿಖರಗಳ ಸಮೂಹ ಈ ಪಶ್ಚಿಮಘಟ್ಟದ ಸೆರಗಿನ ದಾರಿಯ ಬೋನಸ್‌ಗಳು. ಅಂದ ಹಾಗೆ ಕೊಟ್ಟಿಗೆಹಾರ ನೀರು ದೋಸೆಗೆ ಫೇಮಸ್ಸು, ಮೂಡಿಗೆರೆ ತೇಜಸ್ವಿಯವರು ಬಾಳಿ ಬದುಕಿದ ಊರು.
ಬಣಕಲ್ ಹಾಗೂ ದೇವರ ಮನೆ ನಡುವೆ ಹೇರ್ ಪಿನ್ ತಿರುವೊಂದರಲ್ಲಿ ಸಣ್ಣ ತೋಡು ಹಾಗೂ ಮೋರಿ ಕಾಣಿಸುತ್ತದೆ. ಅಲ್ಲಿಗೆ ಕೋಗಿಲೆ ಎಂದು ಹೆಸರು. ಬೆಟ್ಟಗಳ ನಡುವಿನ ಮೈದಾನ ಪ್ರದೇಶವದು. ಆ ತೊರೆಯನ್ನೇ ಅನುಸರಿಸಿ ಎಡಭಾಗದ ಕಚ್ಛಾ ರಸ್ತೆಯಲ್ಲಿ ಸಾಗಿದರೆ ಚೆಂದದ ಒಂದು ಝರಿಯನ್ನು ಕಾಣಬಹುದು. ಇದು ಕೋಗಿಲೆ ಝರಿ… ವರ್ಷದುದ್ದಕ್ಕೂ ಅಲ್ಲಿ ನೀರಿರುತ್ತದೆ ಎನ್ನುತ್ತಾರ ಸ್ಥಳೀಯರು
ರಸ್ತೆಯ ಮೂಲಕ: ಬೆಂಗಳೂರು (259 ಕಿ.ಮೀ.), ಚಿಕ್ಕಮಗಳೂರು (30 ಕಿ.ಮೀ.), ಹಾಸನ (62 ಕಿಮೀ), ಮಂಗಳೂರು (124 ಕಿ.ಮೀ.), ಮೈಸೂರು (149 ಕಿ.ಮೀ.) ದೂರ.
ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ