ನನ್ನ ಮನಸ್ಸು ಹಗುರಾಗಿಸಿದ ಜಾದೂಗಾರ ಬೆಟ್ಟ: ಆಯೇಷಾ ಬರೆದ ಪೊಯೆಟಿಕ್ ಬರಹ
ಆಯೇಷಾ 25 ವರುಷದ ಹಳ್ಳಿ ಸೊಗಡುಳ್ಳ ಪಟ್ಟಣದ ಹುಡುಗಿ. ಸದ್ಯಕ್ಕೆ ಕಾರ್ಪೋರೇಟ್ ಪಬ್ಲಿಸಿಸ್ಟ್ ಆಗಿ ಆ್ಯಡ್ ಫ್ಯಾಕ್ಟರ್ಸ್ ಪಿಆರ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಬರಹ ವೈಯಕ್ತಿಕ ಆಸಕ್ತಿ. ತಮ್ಮ ಜೀವನದ ತುಣುಕುಗಳನ್ನು ತಮ್ಮ ಬರಹದ ಮುಖಾಂತರ ಓದುಗರನ್ನು ಮನರಂಜಿಸೋ ಉದ್ದೇಶದಿಂದ ಬರೆಯುತ್ತಾರೆ.
ನನಗೆ ತಿಳಿದಿರೋ ಹಾಗೆ ಪ್ಲಾನ್ ಮಾಡಿ ಫಿಕ್ಸ್ ಮಾಡೋ ಟ್ರಿಪ್ ಎಂದಿಗೂ ಯಶಸ್ವಿ ಆಗಲ್ಲ. ಎಷ್ಟು ಪ್ಲಾನ್ ಮಾಡ್ತೀರೋ ಅಷ್ಟು ಊಹೆಗೆ ಆಹ್ವಾನ ಕೊಟ್ಟಂತೆ. ಅಚಾನಕ್ಕಾಗಿ ಉಟ್ಟಿರೋ ಬಟ್ಟೆಯಲ್ಲಿ ಟ್ರೆಕ್ ಹೋಗೋ ಸಂದರ್ಭ ಮಾತ್ರ ಯಶಸ್ವಿ ಆಗೋದು.
ಅದೊಂದು ಬಾರಿ, ಯಾಕೋ ಮನಸ್ಸು ಭಾರ ಅನಿಸಿತ್ತು. ಪ್ರಪಂಚದಲ್ಲಿರೋ ದುಃಖವೆಲ್ಲಾ ಹೆಗಲ ಮೇಲಿರುವಂತೆ ಭಾಸವಾಗಿತ್ತು. ಇಂತಹ ಸಮಯದಲ್ಲಿ ಫ್ರೆಂಡ್ಸ್ ಜೊತೆ ಮಾತಾಡಿದ್ರೆ ಮನಸ್ಸು ಹಗುರವಾಗುತ್ತದೆ ಅನ್ನೋದನ್ನು ಕೇಳಿದ್ದೆ.
ಆದ್ರೆ ಕೆಲವೊಂದು ಸಂದರ್ಭಗಳಲ್ಲಿ ಮನಸ್ಸಿನಲ್ಲಿ ಆಗ್ತಿರೋ ಕಳವಳವನ್ನ ಪದಗಳಿಂದ ಬಹಿರಂಗ ಪಡಿಸೋದು ಕಷ್ಟದ ಕೆಲಸ. ನನ್ನ ಪರಿಸ್ಥಿತಿಯನ್ನ ಅರ್ಥ ಮಾಡ್ಕೊಂಡ ಗೆಳೆಯ ರಾತ್ರೋರಾತ್ರಿ ಮನೆಗೆ ಬಂದು, ಬಾ ನಿನ್ನ ಮನಸ್ಸು ಹಗುರವಾಗೋ ಜಾಗ ಒಂದು ಇದೆ, ಕರ್ಕೊಂಡು ಹೋಗ್ತೀನಿ ಎಂದ.
ರಾತ್ರಿ ಒಂದು ಗಂಟೆಯ ಸಮಯೇಡ ಒಂದು ಪ್ಯಾಂಟ್ ಮತ್ತೆ ಶಾರ್ಟ್ ಹಾಕ್ಕೊಂಡು ಏನೂ ಬೇಡ, ದಾರಿ ಕರ್ಕೊಂಡು ಹೋಗೋ ಜಾಗಕ್ಕೆ ಹೋಗೋಣ ಅಂತ ಮನಸ್ಸು ಮಾಡಿ, ಎಲ್ಲಿ ಹೋಗ್ತಿದೀವಿ ಅಂತ ಕೇಳೋ ಕಷ್ಟನೂ ಮಾಡ್ದೆ ಹೊರಟೆ.
ರಾತ್ರಿಯ ಸಮಯ ಬೆಂಗಳೂರು ತನ್ನದೇ ಆದ ಒಂದು ಗಾಢ ಪ್ರಪಂಚದಲ್ಲಿ ಹಲವಾರು ರಹಸ್ಯಗಳನ್ನು ಬಚ್ಚಿಟ್ಟುಕೊಂಡ ಹಾಗೆ ಶಾಂತವಾಗಿತ್ತು. ಟ್ರಾಫಿಕ್ ಇಲ್ಲದ ಬೆಂಗಳೂರು
ಒಂಥರಾ ಶಾಂತಿಯನ್ನು ತಂದಿತು. ಹೈವೇ ದಾಟಿ ಹೋಗುತ್ತಿದ್ದ ನಾವು ನಮ್ಮದೇ ಆದ ಯೋಚನೆಗಳಲ್ಲಿ, ಸದ್ದಿಲ್ಲದ ಕತ್ತಲೆಯಲ್ಲಿ, ಗಾಳಿಯನ್ನು ತೂರತ್ತ ಪ್ರಯಾಣಿಸಿದೆವು.
ಮನಸ್ಸು ಒಂದು ಕಡೆ ಕೂತು ಓಡುತ್ತಿದ್ದ ಯೋಚನೆಗಳನ್ನು ಹತೋಟಿಗೆ ತಂದಂತೆ, ಆ ಶಾಂತ ಕತ್ತಲೆಯಲ್ಲಿ ಏನೋ ಜಾದೂ ಇದೆ ಅಂತ ಅನ್ನಿಸಿತು. ಕೊನೆಗೂ ಕೇಳಿದೆ, ಎಲ್ಲಿ ಹೋಗ್ತಿದ್ದೀವಿ ಅಂತ. ನನ್ನ ಗೆಳೆಯ ಪ್ರತಿಯುತ್ತರ ಕೊಡುತ್ತಾ, ಅಲ್ಲಿ ಹೋದಮೇಲೆ ಹೇಳ್ತೀನಿ ಜಸ್ಟ್ ಬ್ರೀದ್ ಐಶು ಎಂದ.
ಗೊತ್ತಿಲ್ಲದ ಜಾಗಕ್ಕೆ ಹೋಗ್ತಿದ್ದೀವಿ ಅಂದ್ರೆ ಏನೋ ಒಂದು ರೋಮಾಂಚನ. ಮನಸ್ಸಲ್ಲಿ ನೂರಾರು
ಎಕ್ಸ್ ಪೆಕ್ಟೇಷನ್ ಗಳು ಹುಟ್ಟಿಕೊಳ್ಳುತ್ತವೆ. ಏನೋ ರಹಸ್ಯವನ್ನು ಹುಡುಕುತ್ತಾ ಹೋಗ್ತಿದ್ದೀವಿ ಅಂತ ಭಾಸವಾಯಿತು. ಚಿಕ್ಕ ವಯಸ್ಸಿನಿಂದಲೂ ನೋಡುತ್ತಿದ್ದ popeye the sailor man ಕಾರ್ಟೂನು ನೆನಪಿಗೆ ಬಂದು ಮುಗುಳ್ನಗುತ್ತ ಸರಿ, ಅಲ್ಲಿ ಹೋದ ಮೇಲೇನೇ ಹೇಳು ಯಾವ ಜಾಗ ಅಂತ ಎಂದು ಕೇಶದಂತಿದ್ದ ಕತ್ತಲೆಯ ಮೃದು ಸ್ಪರ್ಶಕ್ಕೆ ತನ್ನನ್ನು ತಾನೇ ಸಮರ್ಪಿಸಿದ್ದೆ.
ಎಷ್ಟು ತಾಸು ಹಾಗೆ ಮಲಗಿದ್ದೆ ಅಂತ ನೆನಪಿರಲಿಲ್ಲ. ನನ್ನ ಫ್ರೆಂಡ್, “ಐಶು, ಕಣ್ತೆರೆದು ನೋಡು ಎಷ್ಟು ಹಸಿರಾಗಿದೆ” ಎಂದ.
ನನಗೆ ಆ ದಿನ ಅರ್ಥವಾಯ್ತು ಪ್ರಕೃತಿ ಕಣ್ಣಿಗೆ ಎಂಥ ಸುಖ ಕೊಡುತ್ತೆ ಅಂತ. ಒಂದರ ಪಕ್ಕ ಮತ್ತೊಂದರಂತೆ ನಿಂತ ಗುಡ್ಡಗಳು, ಹಸಿರು ಸೀರೆ ಉಟ್ಟು, ನೋಡು ನನ್ನ ಸೀರೆಯ ನೆರಿಗೆ ಎಷ್ಟು ಸಾಲಾಗಿ ಕೂತಿದೆ ಅಂಥ ನನ್ನ ಅಮ್ಮ ನಂಗೆ ತೋರಿಸಿದಂತೆ ಆ ಗುಡ್ಡಗಳು ನನಗೆ ಅದರ ಸೌಂದರ್ಯವನ್ನು ತೋರಿಸಿತ್ತು.
ನೀವು ಇದನ್ನು ಇಷ್ಟಪಡಬಹುದು: ಹುಬ್ಬಳ್ಳಿ-ಧಾರವಾಡದ ಅತಿ ಸುಂದರ ಜಲಪಾತ ವರವಿ ಸಿದ್ದೇಶ್ವರ ಕೊಳ್ಳ: ಬೈಕರ್ ಪ್ರದೀಪ್ ತುಮ್ಮರಮಟ್ಟಿ ಪರಿಚಯಿಸಿದ ಅಚ್ಚರಿ ತಾಣ
ನನ್ನ ಕಣ್ಣು ಕ್ಯಾಮೆರಾ ಆಗಿದ್ದಿದ್ರೆ ಬೆಸ್ಟ್ ಅವಾರ್ಡ್ ಸಿಗ್ತಿತ್ತೇನೋ. ಮಗುವಿಗೆ ಆಟಿಕೆ ತೋರಿಸಿದಾಗ ಅದು ಹೇಗೆ ಅವಾಕ್ಕಾಗಿ ಕಣ್ಣು ದಪ್ಪ ಮಾಡುತ್ತೋ ಹಾಗೆಯೇ ನನ್ನ ಕಣ್ಣುಗಳು ಆ ಗಿಡ, ಮರಗಳ ಸಾಲನ್ನು ನೋಡಿ ದಪ್ಪವಾಗಿತ್ತು.
ನನ್ನ ಫ್ರೆಂಡ್ ನನ್ನ ಮುಖ ನೋಡಿ ಮುಗುಳ್ನಗುತ್ತ, ಇಷ್ಟಕ್ಕೇ ಈ ರಿಯಾಕ್ಷನ್ನಾ, ಇನ್ನಾ ಆ ಜಾಗಕ್ಕೆ ಹೋಗಿಲ್ಲ ನಾವು ಎಂದ. ಅಂದು ಅರ್ಧ ದಾರಿಗೆ ಹೋಗಿ ವಾಪಸ್ಸು ಬಂದಿದ್ರೂ ನನಗೆ ಬೇಜಾರಾಗುತ್ತಿರಲಿಲ್ಲ. ಆ ದಾರಿ ಅಷ್ಟು ವಿಲಕ್ಷಣವಾಗಿತ್ತು.
ನಮ್ಮ ಕಾರು ಗುಡ್ಡವನ್ನ ಹತ್ತುತ್ತಿತ್ತು. ಮುಂಜಾನೆ ಏಳರ ಸಮಯ. ಮಂಜಿನಿಂದ ತುಂಬಿದ ಆ ದಾರಿ, ದಾರಿಯುದ್ದಕ್ಕೂ ಸಾಲು ಮರಗಳು, ಮರಗಳ ಮಧ್ಯೆ ಕಣ್ಣಾಮುಚ್ಚಾಲೆ ಆಡುತ್ತಿದ್ದ ಕಿರಣಗಳು, ಗಟ್ಟಿಯಾಗಿ ಮುಚ್ಚಿದ್ದ ನನ್ನ ಮನಸ್ಸಿನ ಬಾಗಿಲುಗಳನ್ನು ಒಂದೊಂದಾಗಿ ತೆರೆಯತೊಡಗಿದವು.
ಗುಡ್ಡದ ತುದಿಯಲ್ಲಿ ಕಾರ್ ಪಾರ್ಕ್ ಮಾಡಿ ಹೊರಗಿಳಿದ ತಕ್ಷಣ ಮಳೆ ನೀರು ಮುಖದ ಮೇಲೆ ಚಿಮುಕಿಸಿದಂತಾಯಿತು. ಸ್ವಲ್ಪ ನಡೀಬೇಕು ಆಯ್ತಾ ಅಂತ ನನ್ನ ಫ್ರೆಂಡ್ ಹೇಳಿದ. ಅವನ ಮಾತಿಗೆ ಗಮನ ಕೊಡದೆ ಗುಡ್ಡದ ತುದಿಯನ್ನು ಗುರಿಯಾಗಿಟ್ಟುಕೊಂಡು ಮುನ್ನುಗ್ಗಿದೆ.
ನೆನೆದ ಮಣ್ಣಿನ ಸುಗಂಧ ಮೂಗಿಗೆ ತಲುಪೋ ಮೊದಲೇ ಇಬ್ಬನಿ ತುಂಬಿದ ಹೂಗಳು ಕಣ್ಣಿಗೆ ಬಿದ್ದವು. ಭರೋ ಅನ್ನೋ ಶೀತ ತುಂಬಿದ ಗಾಳಿ ಸ್ಪರ್ಶಿಸುತ್ತಿದ್ದಂತೆ ನನ್ನ ಕೇಶರಾಶಿಯ ಜೊತೆ ಪುಟ್ಟ ಮಗುವೊಂದು ಆಟವಾಡುತ್ತಿದೆ ಅಂತ ಅನಿಸಿತು.
ಗುಡ್ಡದ ತುದಿಗೆ ಹೋಗುತ್ತಿದ್ದಂತೆ, ಅದು ಏನಾಯ್ತೋ ಏನೋ, ಭಾರವಾಗಿದ್ದ ಮನಸ್ಸಿನ ನೋವು ಕಣ್ಣೀರಿನ ಮುಖಾಂತರ ನನ್ನ ಬಿಟ್ಟು ಹೋಗೋ ಹಾಗೆ ಜೋರಾಗಿ ಬಿಕ್ಕಳಿಸುತ್ತಾ ಅತ್ತೆ.
ಆ ಪ್ರಕೃತಿಯ ಸೌಂದರ್ಯ ಮಾತ್ರ ಅಲ್ಲ. ಅದರ, ಭವ್ಯತೆಯ ಪರಿಚಯ ಅವತ್ತಾಯ್ತು. ಗುಡ್ಡದ ತುದಿಗೆ ಮೋಡಗಳು ತೋರಣ ಕಟ್ಟಿದಂತೆ, ಇನ್ನೇನು ಆ ಮೋಡಗಳು ನನ್ನನ್ನು ತೇಲಿಸಿಕೊಂಡು ಹೋಗುವಂತಿತ್ತು. ನನ್ನ ಪಕ್ಕದಲ್ಲಿ ಇದೆಲ್ಲವನ್ನು ಅನುಭವಿಸೋದನ್ನು ಕಂಡು ನನ್ನ ಫ್ರೆಂಡ್, “ನಾನು ಕೆಮ್ಮಣ್ಣುಗುಂಡಿಗೆ ಮೊದಲು ಬಂದಾಗ ಅದರ ಸೌಂದರ್ಯ ನೋಡಿ ಹೀಗೇ ಅತ್ತಿದ್ದೆ’ ಅಂದ.
ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ