ಕಾರು ಟೂರುದೂರ ತೀರ ಯಾನವಿಸ್ಮಯ ವಿಶ್ವ

ಕರ್ನಾಟಕದ ಅತಿ ಸುಂದರ ರಸ್ತೆಗಳು: ಭಾಗ 1

ಪ್ರವಾಸಿಗರಿಗೆ, ಕಾಲಿಗೆ ಚಕ್ರ ಕಟ್ಟಿಕೊಂಡು ತಿರುಗುವವರಿಗೆ ನೇರ ಸಪಾಟು ರಸ್ತೆಗಳು ಮತ್ತೇರಿಸುವುದಿಲ್ಲ. ರೋಮಾಂಚಕ ರಸ್ತೆಗಳು ಸಿಕ್ಕರೆ ಅದಕ್ಕಿಂತ ಖುಷಿ ಮತ್ತೊಂದಿಲ್ಲ. ಕೆಲವು ಹಾದಿಗಳಂತೂ ನೇರವಾಗಿ ಮನಸ್ಸಿಗೆ ದಾರಿ ಮಾಡಿಕೊಂಡು ಹೋಗಿ ಕೂತು ಬಿಡುತ್ತವೆ. ಅಂಥಾ ಹಲವು ಮನೋಹರ ರಸ್ತೆಗಳ ಪರಿಚಯ. 

ಒಂದು ಬದಿ ಸಮುದ್ರ, ಇನ್ನೊಂದು ಬದಿ ನದಿ 

ಎಲ್ಲಿಂದ ಎಲ್ಲಿ- ಮರವಂತೆಯಿಂದ ಉಡುಪಿ, 55 ಕಿ.ಮೀ

ಒಂದು ಕಡೆ ನದಿ, ಮತ್ತೊಂದು ಬದಿ ಸಮುದ್ರ. ಮಧ್ಯೆ ಸುಂದರವಾದ ರಸ್ತೆ. ಈ ರಸ್ತೆಯಲ್ಲಿ ಹೋಗುವ ಸುಖ ವಿವರಿಸುವುದು ಅಸಾಧ್ಯ. ಅದು ಮರವಂತೆ. ಉಡುಪಿಯಿಂದ 55 ಕಿಮೀ ದೂರದಲ್ಲಿರುವ ಈ ಜಾಗವನ್ನು ಹುಡುಕಿಕೊಂಡು ಹೋಗುವ ಪ್ರವಾಸಿಗರ ಸಂಖ್ಯೆ ಲೆಕ್ಕ ಇಡಲಾಗದು. ಅದ್ಭುತ ಬೀಚು, ಕಣ್ಮನ ತಣಿಸುವ ಬಣ್ಣಗಳು ಎಲ್ಲವೂ ಸೇರಿ ಮಾಯಾಲೋಕ ಸೃಷ್ಟಿಯಾಗಿದೆ. ಪ್ರಕೃತಿಯ ವೈಶಿಷ್ಟತೆಯನ್ನು ಮೆರೆಯುವ ಈ ರಸ್ತೆಯಲ್ಲಿ ಸಾಗುತ್ತಾ ಎರಡೂ ಬದಿಯಲ್ಲಿ ಕಣ್ಣು ಹಾಯಿಸುತ್ತ ಹೋದರೆ ಮನಸ್ಸು ಉಲ್ಲಾಸದಿಂದ ಅರಳುವುದರಲ್ಲಿ ಸಂಶಯವೇ ಇಲ್ಲ. ಅರಬ್ಬಿ ಸಮುದ್ರ ಮತ್ತು ಸೌಪರ್ಣಿಕ ನದಿ ಮಧ್ಯೆ ಇರುವ ಈ ರಸ್ತೆ ಒಂದು ಕಿಮೀ ಉದ್ದಕ್ಕೂ ಚಂದ ಸವಿಯುತ್ತಾ ಸಾಗಬಹುದು. ಅಕ್ಕ ಪಕ್ಕದಲ್ಲಿರುವ ತೆಂಗಿನ ಮರಗಳ ತೋಟ ನಿಮ್ಮನ್ನು ಸ್ವಾಗತಿಸುವುದು ನೋಡುವುದೇ ಸೊಗಸು. ಉಡುಪಿಯಿಂದ ಕಾರವಾರಕ್ಕೆ ಸಾಗುವ ವೇಳೆ ಈ ರಸ್ತೆ ಸಿಗುಗುತ್ತದೆ . 

ಜನ ಮೆಚ್ಚಿದ ಬೀದರ್‌ ರಿಂಗ್ ರೋಡ್ 

ಎಲ್ಲಿಂದ ಎಲ್ಲಿಗೆ- ಬೀದರ್ – ನೌಬಾದ್ 17.6 ಕಿ.ಮೀ. 

File:A State Highway 4 Bidar Karnataka India.jpg

ತೆಲಂಗಾಣ ಹಾಗೂ ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ಬೀದರ್ ಜಿಲ್ಲೆಯಲ್ಲಿ ರಾಜ್ಯದಲ್ಲಿಯೇ ಮಾದರಿಯಾದ ಚತುಷ್ಪಥ ವರ್ತುಲ ರಸ್ತೆ ನಿರ್ಮಾಣವಾಗಿದೆ. ಈ ರಸ್ತೆಯ ಪ್ರಯಾಣ ಎಷ್ಟು ಖುಷಿ ಕೊಡುತ್ತದೆಯೆಂದರೆ, ಪ್ರತಿನಿತ್ಯ ಈ ರಸ್ತೆ ಬದಿಯಲ್ಲಿ ನಿಂತು ಸೆಲ್ಫಿ ತೆಗೆದುಕೊಳ್ಳುವ ಯುವಕರ ದಂಡೇ ಕಾಣಿಸುತ್ತದೆ. ಆಹ್ಲಾದಕರ ಅನುಭವ ನೀಡುವ ಈ ವರ್ತುಲ ರಸ್ತೆಯು ಜಿಲ್ಲಾ ಕೇಂದ್ರ ಬೀದರ್‌ನ ಕೋಳಾರ್ ಕೈಗಾರಿಕಾ ಕೇಂದ್ರದಿಂದ ಪ್ರಾರಂಭವಾಗಿ ಪಶು ವೈದ್ಯ ವಿಶ್ವವಿದ್ಯಾಲಯದ ಮಾರ್ಗವಾಗಿ ಹೈದ್ರಾಬಾದ್ ಮಾರ್ಗದ ದೇವ ದೇವ ವನ, ಅಲ್ಲಿಂದ ಚಿಕಪೇಟ್ ಹಾಗೂ ನೌಬಾದ್‌ವರೆಗೆ ಸುಮಾರು 17.6 ಕಿ.ಮೀ ಇದೆ. ನಗರದ ಹೊರವಲಯದಲ್ಲಿ ಹಾದುಹೋಗಿರುವ ಈ ರಸ್ತೆಯಲ್ಲಿ ಹೆಚ್ಚೇನೂ ಸಂಚಾರ ದಟ್ಟಣೆ ಇರದು. ಹೀಗಾಗಿ ಸುಂದರ ಹಾದಿಯ ಜಾಲಿ ರೈಡ್ ಮನಸ್ಸನ್ನು ತಣಿಸುತ್ತದೆ. ಅಕ್ಕಪಕ್ಕ ಕಾಣಿಸುವ ಹಸಿರು ಸಸ್ಯಶಾಮಲೆಯು ಮನಸ್ಸಿಗೆ ಮುದ ನೀಡುತ್ತದೆ .

ಮೈಸೂರು– ಊಟಿಯ ದಾರಿ ಮುಗಿಯದಿರಲಿ! 

ಎಲ್ಲಿಂದ ಎಲ್ಲಿಗೆ- ಮೈಸೂರು-ಊಟಿ 156 ಕಿ.ಮೀ.

ಭೌಗೋಳಿಕವಾಗಿ ತಮಿಳುನಾಡಿನಲ್ಲಿರುವ, ಮೈಸೂರಿಗೆ ಸಮೀಪದಲ್ಲಿರುವ ಊಟಿ ದಕ್ಷಿಣ ಭಾರತದ ಪ್ರಮುಖ ಗಿರಿಧಾಮಗಳಲ್ಲಿ ಒಂದು. ವರ್ಷವಿಡೀ ಈ ತಾಣಕ್ಕೆ ಪ್ರವಾಸಿಗರು ಎಡತಾಕುತ್ತಾರಾದರೂ, ಬೇಸಿಗೆಯಲ್ಲಿ ಜನದಟ್ಟಣೆ ಹೆಚ್ಚು. ಊಟಿ ನೋಡಿದಾಗ ಸಿಗುವಷ್ಟೇ ಸುಂದರ ಅನುಭವ ಮೈಸೂರಿನಿಂದ ಊಟಿಗೆ ಹೋಗುವಾಗಲೂ ಆಗುತ್ತದೆ. ಮೈಸೂರಿನಿಂದ ಊಟಿಗೆ ಹೋಗುವ ಮಾರ್ಗ ಇರುವುದೇ ಎರಡು ಅಭಯಾರಣ್ಯಗಳ ನಡುವೆ. ಮೈಸೂರಿನಿಂದ ನಂಜನಗೂಡು ತಲುಪಿದರೆ ಅಲ್ಲಿ ಅತ್ಯಂತ ಪುರಾತನ ರೈಲ್ವೆ ಸೇತುವೆ ನೋಡಬಹುದು. ಮುಂದೆ ಸಾಗಿ ಗುಂಡ್ಲುಪೇಟೆ ದಾಟಿದರೆ ಬಂಡೀಪುರ ಅಭಯಾರಣ್ಯ ಸಿಗುತ್ತದೆ. ಕಾಡಿನ ಪುಟ್ಟ ರಸ್ತೆಯೊಳಗೆ ಎರಡೂ ಬದಿಯಲ್ಲಿ ಹಸಿರು ರಾಶಿಯನ್ನು ಕಣ್ತುಂಬಿಕೊಳ್ಳಬಹುದು. ಎಲ್ಲೆಂದರಲ್ಲಿ ಓಡುವ ಜಿಂಕೆ, ಗಾಂಭೀರ್ಯದಿಂದ ನಡೆದಾಡುವ ಆನೆ, ಇತರೆ ಪಕ್ಷಿ – ಪ್ರಾಣಿಗಳನ್ನು ನೋಡುತ್ತಾ ಸಾಗಿದರೆ, ತಮಿಳುನಾಡಿನ ಮುದುಮಲೈ ಅರಣ್ಯ ಬಂದುಬಿಡುತ್ತದೆ . ಅದು ಕೂಡ ಅಭಯಾರಣ್ಯ, ಬಂಡೀಪುರ ಹಾಗೂ ಮುದುಮಲೈ ಎರಡೂ ಹುಲಿ ರಕ್ಷಿತಾರಣ್ಯಗಳಾಗಿದ್ದು, ಅಪ್ಪಿತಪ್ಪಿ ಹುಲಿ ಕಂಡರೆ ಅಪರೂಪದ ಅನುಭವ ನಿಮ್ಮದಾಗುತ್ತದೆ. ಅಲ್ಲಿಂದ ಗುಡಲೂರಿಗೆ ಕ್ರಮಿಸಿದರೆ ಚಹಾ ತೋಟಗಳು ಕಣ್ಣಿಗೆ ರಸದೌತಣ ಬಡಿಸುತ್ತವೆ.

ಮಡಿಕೇರಿ- ಸಂಪಾಜೆ ಘಾಟ್ ನಲ್ಲಿ ಹಸಿರು ಯಾನ 

ಎಲ್ಲಿಂದ ಎಲ್ಲಿಗೆ- ಮಡಿಕೇರಿ – ಸಂಪಾಜೆ, 30 ಕಿ.ಮೀ.  

ಕೊಡಗು, ಕರ್ನಾಟಕದ ಕಾಶ್ಮೀರ, ಅಷ್ಟೆಂದ ಮೇಲೆ ಮಜಾ ಕೊಡುವ ರಸ್ತೆಗಳಿಗೂ ಕೊರತೆ ಏನಿಲ್ಲ. ಪುಟ್ಟ ಜಿಲ್ಲೆಯ ಹಲವು ರಸ್ತೆಗಳು ಡ್ರೈವಿಂಗ್ ಹವ್ಯಾಸಿಗಳಿಗೆ ಸವಾಲಿನ ಜೊತೆಗೆ ಆಹ್ಲಾದವನ್ನೂ ಉಣಿಸುತ್ತವೆ. ಈ ಪೈಕಿ ಮಡಿಕೇರಿಯಿಂದ ಸಂಪಾಜೆಗೆ ಹೋಗುವ 30 ಕಿ.ಮೀ ದೂರದ ಮಾರ್ಗ ಕೂಡಾ ಒಂದು. ರಸ್ತೆಯುದ್ದಕ್ಕೂ ಅಲ್ಲಲ್ಲಿ ತಿರುವುಗಳಿರುವುದರಿಂದ ಅತ್ತಿಂದಿತ್ತ ವಾಹನಗಳನ್ನು ತಿರುಗಿಸುತ್ತಾ ಎಂಜಾಯ್ ಮಾಡಿಕೊಂಡು ಸಾಗಬಹುದು. ಹಾದಿಯುದ್ದಕ್ಕೂ ಕಾಫಿ ತೋಟಗಳು, ಅಲ್ಲಲ್ಲಿ ಬೆಟ್ಟಗುಡ್ಡಗಳ ಸಾಲು ಕಾಣಸಿಗುತ್ತದೆ. ಮಳೆಗಾಲದಲ್ಲಿ ಮಳೆಯ ನಡುವೆ ಆಗಾಗ್ಗೆ ಮಂಜು ಮುಸುಕಿದ ವಾತಾವರಣ ಕಂಡುಬರುತ್ತದೆ. ಹೆದ್ದಾರಿಯಾಗಿರುವುದರಿಂದ ಸಂಚಾರಕ್ಕೆ ಯಾವುದೇ ಅಡ್ಡಿಯಿಲ್ಲ. ಮಳೆಗಾಲದಲ್ಲಿ ರಸ್ತೆಯಲ್ಲೇ ಸಣ್ಣ ಸಣ್ಣ ಜಲಪಾತಗಳ ದರ್ಶನವಾಗುತ್ತದೆ . 

ಹುಲಿ, ಆನೆ , ಜಿಂಕೆಗಳ ತವರೂರು

ಎಲ್ಲಿಂದ ಎಲ್ಲಿಗೆ- ಗುಂಡ್ಲುಪೇಟೆ – ಬಂಡೀಪುರ, 24 ಕಿಮೀ 

ಬಂಡೀಪುರ ರಾಷ್ಟ್ರೀಯ ಉದ್ಯಾನ ಹುಲಿ ಸೇರಿದಂತೆ ಹಲವು ವನ್ಯಜೀವಿಗಳ ಆವಾಸ ತಾಣ. ತಮಿಳುನಾಡು ಹಾಗೂ ಕೇರಳದ ಗಡಿ ಭಾಗದ ತನಕ ಬಂಡೀಪುರ ರಾಷ್ಟ್ರೀಯ ಉದ್ಯಾನದ ಹೆದ್ದಾರಿಯಲ್ಲಿ ಸಂಚರಿಸುವುದು ಸಾಹಸಪ್ರಿಯರ ಮೈನವಿರೇಳಿಸುತ್ತದೆ. ಈ ಮಾರ್ಗದ ಕೆಲವೆಡೆ ವಾಹನದಿಂದ ಕೆಳಗಿಳಿಯುವುದು, ಫೋಟೋ ತೆಗೆಯುವುದು ನಿಷಿದ್ದ. ಗುಂಡ್ಲುಪೇಟೆಯಿಂದ ತಮಿಳುನಾಡಿಗೆ ತೆರಳುವ ಮಂದಿ ಗೋಪಾಲಸ್ವಾಮಿ ಬೆಟ್ಟದ ವಲಯ ಕಚೇರಿಯಿಂದ ರಾಜ್ಯ ಗಡಿ ಭಾಗದ ಕೆಕ್ಕನಹಳ್ಳವರೆಗೆ ಹಸಿರುಮಯ ರಸ್ತೆಯಲ್ಲಿ ತೆರಳಬಹುದು. ಗುಂಡ್ಲುಪೇಟೆಯಿಂದ ಕೇರಳಕ್ಕೆ ತೆರಳುವ ಮದ್ದೂರು ಗಡಿಯಿಂದ ಮೂಲೆಹೊಳವರೆಗಿನ ರಸ್ತೆಯೂ ರೋಮಾಂಚಕ. ಈ ಮಾರ್ಗದಲ್ಲಿ ಅಪಾಯಕಾರಿ ಪ್ರಾಣಿಗಳು ಸದಾ ಸಂಚರಿಸುತ್ತಿರುತ್ತವೆ. ಹೀಗಾಗಿ ಎಚ್ಚರ ಅಗತ್ಯ .

ಕಾಡು ನೋಡ ಹೋಗಿ, ಖುಷಿಯ ಜೊತೆಗೆ ಬನ್ನಿ

ಎಲ್ಲಿಂದ ಎಲ್ಲಿಗೆ- ಕೆ.ಗುಡಿ ಆರಂಭದಿಂದ ಅಂತ್ಯ, 20 ಕಿಮೀ

ನೀವು ಇದನ್ನು ಇಷ್ಟಪಡಬಹುದು: 4 ವರ್ಷ, 17 ದೇಶ, ಸುತ್ತಾಟದಲ್ಲಿಯೇ ದಿನ ಕಳೆಯುತ್ತಿರುವ ಅವಿನಾಶ್, ರುಚಿಕ

ಚಾಮರಾಜನಗರದ ಅರಣ್ಯಧಾಮದ ಒಳಗೆ ಹೋದರೆ ಸಿಗುವ ಮನೋಹರ ತಾಣಗಳಲ್ಲಿ ಕೆ.ಗುಡಿ ಕೂಡ ಒಂದು. ಕ್ಯಾತದೇವರ ಗುಡಿಯೆಂದೂ ಕರೆಸಿಕೊಳ್ಳುವ ಈ ವನ್ಯಧಾಮದ ಒಳಗೆ ಕಾಲಿಟ್ಟರೆ ರೋಮಾಂಚಕ ಹಾದಿಗಳು ಎದುರಾಗುತ್ತವೆ. ಹಾಗೆ ನೋಡಿದರೆ , ಟಾರು ರಸ್ತೆಯಲ್ಲಿ ಭರೋ ಎಂದು ಸಾಗುವುದಕ್ಕಿಂತ ಅರಣ್ಯಧಾಮಗಳ ಒಳರಸ್ತೆಗಳಲ್ಲಿ ಅರಣ್ಯ ಇಲಾಖೆಯ ಜೀಪುಗಳಲ್ಲಿ ಸಾಗುವ ಆನಂದವೇ ಬೇರೆ. ಈ ರಸ್ತೆಯನ್ನೇ ಗಮನಿಸಿ… ಇದು ಕಾಡಿನ ಒಂದು ಮೂಲೆಯಿಂದ ಮತ್ತೊಂದು ಮೂಲೆಯತನಕ ಚಾಚಿಕೊಂಡಿದೆ. ಈ ಹಾದಿಯಲ್ಲಿ ಆ್ಯಂಟಿ ಪೋಚಿಂಗ್ ಕ್ಯಾಂಪುಗಳು ಎದುರಾಗುತ್ತವೆ. ಅನೇಕ ತೊರೆಗಳೂ ಕೊಳಗಳೂ ಸಿಗುತ್ತವೆ. ಅದೃಷ್ಟವಿದ್ದರೆ ಪ್ರಾಣಿಗಳೂ ಎದುರಾಗಬಹುದು. ಹುಲ್ಲುಗಾವಲಿನಲ್ಲಿ ಆನೆಗಳ ಹಿಂಡು ಮೇಯುವುದನ್ನು ನೋಡಬಹುದು. 

ಬಯಲು ದಾರಿ

ಎಲ್ಲಿಂದ ಎಲ್ಲಿಗೆ- ಗದಗ- ಕಪ್ಪತ್ತಮಲ್ಲಯ್ಯ ದೇಗುಲ 25 ಕಿಮೀ

ಬಯಲುಸೀಮೆಯಲ್ಲಿ ಅಪರೂಪಕ್ಕೆಂಬಂತೆ ಕಾಣಸಿಗುವ ಗುಡ್ಡಗಳಲ್ಲಿ ಸಂಚರಿಸುವುದು ಮಲೆನಾಡಿನ ಬೆಟ್ಟದ ದಾರಿಯಲ್ಲಿ ಸಂಚರಿಸುವುದಕ್ಕಿಂತ ಬಹಳ ಭಿನ್ನ ಅನುಭವ. ಅಂಥದ್ದೇ ಒಂದು ಹಾದಿ ಗದಗದಲ್ಲಿದೆ. ಕಪ್ಪತ್ತಗುಡ್ಡವು ಗದಗದಲ್ಲಿ ಸಾಕಷ್ಟು ಅರಣ್ಯ ಹೊಂದಿರುವ ಪ್ರದೇಶ. ಕಪ್ಪತ್ತಗುಡ್ಡದ ಸುತ್ತಲೂ ಇರುವ ಗ್ರಾಮಗಳಿಗೆ ಹೋಗುವಾಗ ಅಕ್ಕಪಕ್ಕದಲ್ಲಿ ಕಂಡು ಬರುವ ಬೃಹದಾಕಾರದ ಗುಡ್ಡಗಳನ್ನು ನೋಡುತ್ತಾ ಹೋಗುವುದೇ ಒಂದು ವಿಶೇಷ ಅನುಭವ. ಮಳೆಗಾಲದಲ್ಲಿ ಗುಡ್ಡಗಳೆಲ್ಲಾ ಹಚ್ಚ ಹಸಿರಾಗಿರುವುದರಿಂದ ಗುಡ್ಡದ ಮಧ್ಯದ ದಾರಿಯಲ್ಲಿ ಸಾಗುವ ಅನುಭವ ಅವರ್ಣನೀಯ. ಗದಗ ಜಿಲ್ಲಾ ಕೇಂದ್ರದಿಂದ ಕಪ್ಪತ್ತಗುಡ್ಡ ವ್ಯಾಪ್ತಿಯಲ್ಲಿರುವ ಕಪ್ಪತ್ತಮಲ್ಲಯ್ಯ ದೇವಸ್ಥಾನಕ್ಕೆ ತೆರಳುವ ವೇಳೆಯಲ್ಲಿ ಈ ರಮ್ಯ ಪ್ರಯಾಣದ ಹಾದಿ ಸಿಗುತ್ತದೆ .

ಹಸಿರು ಸಂಪತ್ತಿನ ಶ್ರೀಮಂತ ರಸ್ತೆ 

ಎಲ್ಲಿಂದ ಎಲ್ಲಿಗೆ- ಹೊಸನಗರ – ಯಡೂರು 20 ಕಿ.ಮಿ.

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕು ಕೇಂದ್ರದಿಂದ ಯಡೂರಿಗೆ ಸಾಗುವಾಗ ಸಿಗುವ ರಸ್ತೆ ಇದು. ಮಲೆನಾಡಿನ ಯಾವುದೇ ರಸ್ತೆಯಲ್ಲಿ ಸಾಗಿದರೂ ಹಸಿರು ಬತ್ತದ ಗದ್ದೆಗಳೇ ಕಣ್ಣಿಗೆ ಬೀಳುತ್ತವೆ. ರಸ್ತೆಯ ಎರಡೂ ಬದಿಗಳಲ್ಲಿರುವ ಗದ್ದೆಗಳಲ್ಲಿ ಬಿಳಿ ಕೊಕ್ಕರೆಗಳು ರಾಶಿರಾಶಿಯಾಗಿ ಕಾಣಸಿಗುತ್ತವೆ. ಹೇಮಂತ ಋತುವಿನಲ್ಲಿ ವಿಧವಿಧದ ಸಸ್ಯಶ್ಯಾಮಲೆಯನ್ನು ಕಣ್ತುಂಬಿಸಿಕೊಂಡು ಮುಂದಕ್ಕೆ ಸಾಗುವುದಕ್ಕಿಂತ, ಗದ್ದೆಯ ಬೇಲಿ ಬದಿಯಲ್ಲಿ ಅರಳಿ ನಿಂತಿರುವ ಹೂವುಗಳ ಬಳಿ ನೀವು ಹೋಗುತ್ತಿರುವ ವಾಹನವನ್ನು ಒಂದಷ್ಟು ಹೊತ್ತು ನಿಲ್ಲಿಸಿ, ಈ ಗದ್ದೆಗಳ ಸೌಂದರ್ಯವನ್ನು ಆಸ್ವಾದಿಸುವುದೇ ಚಂದ. ಬದುವಿನಲ್ಲಿ ಕುಳಿತುಕೊಂಡು, ಕಟ್ಟಿ ತಂದ ತಿಂಡಿಯನ್ನು ತಿನ್ನುವುದು ಮತ್ತೂ ಖುಷಿ. ನಾವಿಲ್ಲಿ ಕೊಟ್ಟಿರುವುದು ಕೇವಲ ವಿವರಗಳನ್ನು ಮಾತ್ರ. ಸಂತೋಷ ನೀವೇ ಅನುಭವಿಸಬೇಕು. ಶಿವಮೊಗ್ಗ ಎಂಥಾ ಸುಂದರವಾದ ಜಿಲ್ಲೆಯೆಂದರೆ ಅಲ್ಲಿ ಎಲ್ಲಿ ಹೋದರೂ ಇಂಥ ಹಸಿರು ಹಾದಿಗಳು ಕಾಣಸಿಗುತ್ತವೆ .

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

One Comment

Leave a Reply

Your email address will not be published. Required fields are marked *

Back to top button