ಮರೆಯಾಗುತ್ತಿರುವ ತುಳುನಾಡ ಸಂಸ್ಕೃತಿ ತೆಂಬೇದ ಬಾಕ್ಯಾರ್

ತುಳುನಾಡಿನಲ್ಲಿ ಹಲವು ವಿಭಿನ್ನ ಸಂಸ್ಕೃತಿಗಳ ಆಚರಣೆಯಿದೆ. ಇಲ್ಲಿನ ಪ್ರತಿ ಆಚರಣೆ ಭಿನ್ನ. ಹಬ್ಬಗಳಲ್ಲಿ ತುಳುನಾಡು ವಿಶೇಷ ಸಂಸ್ಕೃತಿ ,ಆಚರಣೆಗೆ ಸಾಕ್ಷಿಯಾಗುತ್ತದೆ. ಅಂತಹದೇ ತುಳುನಾಡಿನ ಒಂದು ಸಂಸ್ಕೃತಿಯ ಕುರಿತಾದ ಬರಹ.
ಇಶಾನಿ
ತುಳುನಾಡಿನಲ್ಲಿ ದೀಪಾವಳಿ ಹಬ್ಬದಷ್ಟು ಅದ್ದೂರಿಯಾಗಿ ಬೇರೆ ಹಬ್ಬವನ್ನು ಆಚರಿಸುತ್ತಿರಲಿಲ್ಲ. ಹಿಂದೆ ಕೃಷಿ ಪ್ರಧಾನ ಸಂಸ್ಕೃತಿಯಲ್ಲಿ, ಕಾರ್ತಿಯ ಕೊಯ್ಲು ಮುಗಿಯುತ್ತಿರುವ ಸಮಯದಲ್ಲಿ ಬರುವ ಹಬ್ಬದ ಸಮಯದಲ್ಲಿ ಮನೆತುಂಬಾ ಬತ್ತದ ರಾಶಿ ಇರುತ್ತಿತ್ತು. ಮನೆಯಂಗಳದಲ್ಲಿ ದೊಡ್ಡ ಬೈ ಹುಲ್ಲಿನ ರಾಶಿ ಅದನ್ನು ತುಳುವಿನಲ್ಲಿ ಬೈತ ಮುಟ್ಟೆ ಎಂದು ಕರೆಯುತ್ತಾರೆ, ಹಾಗೆಯೇ ತುಪ್ಪೆ ಅಥವಾ ಸಿರಿ ಎಂದು ಕರೆಯಲ್ಪಡುವ ಭತ್ತವನ್ನು ಸಂಗ್ರಹಿಸಿಡುವ ರಥಕಾರದ ಬೈಹುಲ್ಲು ಮತ್ತು ಹಗ್ಗದ ಸಹಾಯದಿಂದ ನಿರ್ಮಿಸುತ್ತಿದ್ದ ಸುಂದರವಾದ ಆಕೃತಿ ಇದು ಕೃಷಿಕರ ಕೃಷಿಯ ಲಕ್ಷಣಕ್ಕೊಂದು ಭೂಷಣ ಪ್ರಾಯದಂತೆ ಇರುತ್ತಿತ್ತು. ಇದು ಕೃಷಿಕನ ಗೌರವದ ಸಂಕೇತವು ಹೌದು.

ದೀಪಾವಳಿ ಹಬ್ಬದಂದು ಅಮಾವಾಸ್ಯೆಯ ರಾತ್ರಿ ತುಳುನಾಡಿನ ಕೃಷಿಕರು ತಮ್ಮ ಹೊಲ ಗದ್ದೆಗಳಿಗೆ ದೀಪವನ್ನು ಹಚ್ಚಿ ಕೆಲವೊಂದು ಕಾಡು ಹೂ, ವೀಳೆದೆಲೆ, ಅಡಿಕೆ ಮತ್ತು ಅವಲಕ್ಕಿಯನ್ನು ಆ ದೀಪದ ಕೋಲಿನ ಬುಡಕ್ಕೆ ಹಾಕಿ ಬಲೀಂದ್ರನನ್ನು ಕರೆಯುವ ಸಂಪ್ರದಾಯ ಇದೆ. ಅದು ಈಗಲೂ ಮುಂದುವರಿಯುತ್ತಿದೆ. ಆ ದಿವಸ ಬಲೀಂದ್ರನ ತನ್ನ ನಾಡನ್ನು ನೋಡಲು ಬರುತ್ತಾನೆ ಎಂಬ ನಂಬಿಕೆ. ಇದು ಕೃಷಿ ಸಮೃದ್ಧಿಯ ಸಂಕೇತ ಎನ್ನಲಾಗುತ್ತದೆ. ಮಾಮೂಲಿಯಾಗಿ ತುಳುನಾಡಿನ ಕೃಷಿಕರು ಅಮಾವಾಸ್ಯೆಯ ದಿನವೇ ಬಲೀಂದ್ರ ಪೂಜೆ, ತುಳಸಿ ಪೂಜೆ ಮಾಡುವ ಪದ್ಧತಿ ಇದೆ.

ಮರುದಿನ ಅಂದರೆ ಪಾಡ್ಯದಂದು ಬೆಳಗ್ಗೆ ಮನೆಯ ಹಟ್ಟಿಯಲ್ಲಿರುವ ದನ,ಕರು ,ಎಮ್ಮೆ , ಕೋಣಗಳಿಗೆ ಸ್ನಾನ ಮಾಡಿಸಿ ಗಂಧ ಗಳನ್ನು ಹಚ್ಚಿ ಹೂವಿನ, ಮಾಲೆ ಹಾಕಿ ಪೂಜೆ ಮಾಡಿ ನಂತರ ಅವುಗಳಿಗಾಗಿಯೇ ವಿಶೇಷವಾಗಿ ತಯಾರಿಸಿದ ಅಕ್ಕಿಯ ಕಡುಬನ್ನು ತಿನ್ನಿಸಿ ತಮ್ಮ ಕೃಷಿ ಸಮೃದ್ಧಿಗಾಗಿ ದುಡಿಯುವ ಅವುಗಳಿಗೆ ಕೃತಜ್ಞತೆ ಸಲ್ಲಿಸಿ ನಮಸ್ಕರಿಸುವ ಪರಂಪರೆಯು ತುಳುನಾಡಿನಲ್ಲಿ ಇದೆ.
ಪಾಡ್ಯದ ದಿನದಂದು ಮಧ್ಯಾಹ್ನ ಎರಡರ ನಂತರ ಊರಿನ ಬಾಕಿಮಾರು ಗದ್ದೆ ಅದನ್ನು ತುಳುವಿನಲ್ಲಿ ಬಾಕ್ಯಾರ್ ಎಂದು ಕರೆಯುತ್ತಾರೆ. ಜಾತಿ ಮತ ಇಲ್ಲದೆ ಯಾವುದೇ ಲಿಂಗಬೇದ ಇಲ್ಲದೆ ಬಡವ ಬಲ್ಲಿದ ತಾರತಮ್ಯ ಇಲ್ಲದೆ ಸೇರುವ ಕ್ರಮ ಇತ್ತು. ಊರಿನ ಹಿರಿಯರ ಸಮ್ಮುಖದಲ್ಲಿ ಅಲ್ಲೊಂದು ಸಂತೋಷದ ಕೂಟ ನಡೆಯುತ್ತಿತ್ತು. ಡೋಲು ಬಾರಿಸುವವರು ಒಂದುಕಡೆ ಡೋಲು ಬಾರಿಸುತ್ತಿದ್ದರು ಇನ್ನೊಂದು ವರ್ಗದವರು ಆ ಡೋಲಿನ ಕುಣಿತಕ್ಕೆ ಸರಿಯಾಗಿ ಹೆಜ್ಜೆ ಹಾಕುತ್ತಿದ್ದರು.

ಇದೇ ರೀತಿ ಯುವಕರು (ತಾರಾಯಿದ ತಪ್ಪಂಗಾಯಿ) ತೆಂಗಿನಕಾಯಿಯನ್ನು ಸುಳಿದು ನೈಸ್ ಮಾಡಿದ ಮೇಲೆ ನೆಲದಲ್ಲಿಟ್ಟ ತೆಂಗಿನಕಾಯಿಯನ್ನು ಯಾರು ಹಿಡಿದು ಮೇಲೆತ್ತುತ್ತಾನೆ ಅವನನ್ನು ವಿಜೇತ ಎಂದು ಕರೆಯಲಾಗುತ್ತಿತ್ತು. ಅದೇ ರೀತಿ ಚೆಂಡು ಆಡುವ ಕ್ರಮ ಇತ್ತು. ಫುಟ್ಬಾಲ್ ಇನ ತರಹದ ಚೆಂಡು ಅದನ್ನು ಡೋಲಿ ನವರು ತಯಾರಿಸುತ್ತಾರೆ. ಊರಿನ ಯುವಕರು ಎರಡು ತಂಡ ಮಾಡಿ ಬಾಕ್ಯಾರ್ ಇನಲ್ಲಿ ಆಡುವ ಕ್ರಮ ಇತ್ತು, ಗೆದ್ದ ತಂಡಕ್ಕೆ ಬಹುಮಾನ ಸಿಗುತ್ತಿತ್ತು.

ಮತ್ತೊಂದು ಕಡೆ ಮಕ್ಕಳಿಗೆ ಗಾಳಿಪಟ ಸ್ಪರ್ಧೆ ನಡೆಯುತ್ತಿದ್ದರೆ ಇನ್ನೊಂದೆಡೆ ಹೆಣ್ಣುಮಕ್ಕಳು ಟೊಂಕ ಮತ್ತು ಪುಕ್ಕುವಿನ ಆಟ ಆಡುತ್ತಿದ್ದರು ( ಪುಕ್ಕು ಎಂದರೆ ಬಿಡಿ ಕಲ್ಲು ನೊಂದಿಗೆ ಕುಳಿತು ಹಾಡುವ ಆಟ) . ಮತ್ತೊಂದು ಬದಿಯಲ್ಲಿ ಕೊಟ್ಟಿದ್ದನ್ನೇ ಯ ಆಟವನ್ನು ಹುಡುಗರು ಸಂಭ್ರಮಿಸುತ್ತಿದ್ದರು. ಮತ್ತೊಂದು ಬದಿಯಲ್ಲಿ ತುಳುನಾಡಿನ ಸಾಂಸ್ಕೃತಿಕ ಪ್ರತೀಕವಾದ ಕೋಳಿ ಅಂಕ ನಡೆಯುತ್ತಿತ್ತು. ಸೂರ್ಯನು ಕಡಲ ಅಂಚಿಗೆ ಸೇರುವ ಸಮಯದಲ್ಲಿ ತೆಂಬೇದ ಹಣ್ಣಿನ ಆಟದೊಂದಿಗೆ ಅಂದಿನ ಕೂಟ ಸಮಾಪ್ತಿ ಆಗುತ್ತಿತ್ತು. ವರ್ಷದ ಒಂದು ದಿನ ಎಲ್ಲಾ ಭೇದಭಾವವನ್ನು ಮರೆತು ಒಂದೇ ಕಡೆ ಒಂದಾಗಿ ಸಂಭ್ರಮಿಸುವ ತೆಂಬೇದ ಬಾಕ್ಯಾರ್ ಕಣ್ಮರೆಯಾಗುತ್ತಿರುವುದು ವಿಷಾದನೀಯ ಸಂಗತಿ. ದಯಾನಂದ ಕೆ .ಶೆಟ್ಟಿ ಯವರು ಒಂದು ತುಳು ಕವಿತೆಯ ಮೂಲಕ ತೆಂಬೇದ ಬಾಕ್ಯಾರ್ ಇದರ ಬಗ್ಗೆ ತಿಳಿಸಿದ್ದಾರೆ.

ನಾವು ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada. Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ