ಸಾಂಸ್ಕೃತಿಕ ನಗರಿ ಮೈಸೂರು ಜಿಲ್ಲೆಯ ಹತ್ತು ಪ್ರಸಿದ್ಧ ತಾಣಗಳಿವು.

ಮೈಸೂರನ್ನು ಸಾಂಸ್ಕೃತಿಕ ನಗರಿ , ಅರಮನೆ ನಗರಿ ಎಂದು ಕರೆಯುತ್ತಾರೆ. ಕರ್ನಾಟಕ ಎಂದಾಗ ನೆನಪಾಗುವ ಹಲವು ತಾಣಗಳಲ್ಲಿ ಮೈಸೂರು ಜಿಲ್ಲೆಯ ತಾಣಗಳು ಕೂಡ ಒಂದು. ಮೈಸೂರಿನ ಪ್ರವಾಸಿ ತಾಣಗಳನ್ನು ನೋಡಲು ಪ್ರತಿ ನಿತ್ಯ ಪ್ರವಾಸಿಗರು ಹೊರ ಜಿಲ್ಲೆ,ರಾಜ್ಯ , ದೇಶಗಳಿಂದ ಬರುತ್ತಾರೆ. ಕರ್ನಾಟಕದ ಹೆಮ್ಮೆ ಮೈಸೂರು ಜಿಲ್ಲೆಯ ಹತ್ತು ಪ್ರವಾಸಿ ತಾಣಗಳ ಕುರಿತಾದ ಮಾಹಿತಿ ಇಲ್ಲಿದೆ.
.ಸುಮಾ
ಅಂಬಾವಿಲಾಸ ಅರಮನೆ
ಮೈಸೂರು ಎಂದಾಗ ಹಲವರಿಗೆ ನೆನಪಾಗುವುದು ಅರಮನೆ. ಈ ಅರಮನೆ ಬ್ರಿಟಿಷ್ ವಾಸ್ತುಶಿಲ್ಪ ಶೈಲಿಯಲ್ಲಿ ವಿನ್ಯಾಸಗೊಂಡಿದೆ. ಇದು ಭಾರತದ ಪ್ರಸಿದ್ಧ ಹಾಗೂ ಅತಿ ದೊಡ್ಡ ಅರಮನೆಗಳಲ್ಲಿ ಒಂದು. ಇದು ಮೂರು ಅಂತಸ್ತಿನ ಕಲ್ಲಿನ ರಚನೆಯಾಗಿದ್ದು , 145 ಅಡಿ ಐದು ಅಂತಸ್ತಿನ ಗೋಪುರವಿದೆ.

ಅರಮನೆಯು ಎಲ್ಲಾ ದಿನಗಳಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 5:30 ರವರೆಗೆ ತೆರೆದಿರುತ್ತದೆ. ಅರಮನೆಯು ಭಾನುವಾರ, ರಾಷ್ಟ್ರೀಯ ರಜಾದಿನಗಳಲ್ಲಿ ಸಂಜೆ 7 ಗಂಟೆಯಿಂದ 8 ಗಂಟೆವರೆಗೆ ಮತ್ತು ದಸರಾ ಹಬ್ಬದ ಸಮಯದಲ್ಲಿ ಸಂಜೆ 7 ರಿಂದ 10 ಗಂಟೆಯವರೆಗೆ ದೀಪಗಳಿಂದ ಪ್ರಕಾಶಿಸಲ್ಪಡುತ್ತದೆ.
ಜಗನ್ಮೋಹನ ಪ್ಯಾಲೇಸ್.
ಜಗಮ್ಮೋಹನ ಪ್ಯಾಲೇಸ್ ಮೈಸೂರಿನ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದು. ಜಗಮ್ಮೋಹನ ಆರ್ಟ್ ಗ್ಯಾಲರಿ ,ಪ್ಯಾಲೇಸ್, ಆಡಿಟೋರಿಯಂ ಮೈಸೂರನ್ನು ನೋಡಲು ಬರುವ ಪ್ರವಾಸಿಗರನ್ನು ಆಕರ್ಷಿಸುವ ಸ್ಥಳಗಳಲ್ಲಿ ಒಂದು.

ಈ ಗ್ಯಾಲರಿಯಲ್ಲಿ ತಿರುವಂಕೂರಿನ ರಾಜ ರವಿ ವರ್ಮರವರಿಂದ ರಚಿತವಾದ ತೈಲವರ್ಣ ಚಿತ್ರಗಳು ಚೀನಾ, ಜಪಾನ್ ಇತರ ದೇಶಗಳ ಸುಪ್ರಿಸಿದ್ಧ ಚಿತ್ರಕಾರರ ಚಿತ್ರಗಳನ್ನು ಇಲ್ಲಿ ಪ್ರದರ್ಶಿಸಲಾಗಿದೆ. ಮೊಘಲ್, ರಜಪೂತ ಶೈಲಿಯ ಕಲಾತ್ಮಕ ವಸ್ತುಗಳು, ವಿವಿಧ ರೀತಿಯ ಗಡಿಯಾರಗಳ ಸಂಗ್ರಹಗಳು, ಆಟಿಕೆಯ ಸಂಗ್ರಹಗಳು, ವಿವಿಧ ವಿವರಣೆಯನ್ನು ನೀಡುವ ವಸ್ತು ಸಂಗ್ರಹವು, ಕಲಾತ್ಮಕ ಪ್ರಪಂಚಕ್ಕೆ ಕೊಂಡೊಯ್ಯುತ್ತದೆ.
ಪ್ರವಾಸಿಗರು ಜಗಮ್ಮೋಹನ ಪ್ಯಾಲೇಸ್ ಅನ್ನು ಬೆಳಿಗ್ಗೆ 8.30 ಯಿಂದ ಸಂಜೆ 5.30ರವರೆಗೆ ವೀಕ್ಷಣೆಗೆ ಅವಕಾಶವಿದೆ. ದೊಡ್ಡವರಿಗೆ 20ರೂ, ಚಿಕ್ಕ ಮಕ್ಕಳಿಗೆ 10ರೂ ಪ್ರವೇಶಕ್ಕೆ ಟಿಕೆಟ್ ಇದೆ.
ಚಾಮುಂಡಿ ಬೆಟ್ಟ
ಚಾಮುಂಡೇಶ್ವರಿ ಮೈಸೂರಿನ ಪ್ರಸಿದ್ದ ಧಾರ್ಮಿಕ ಕ್ಷೇತ್ರ . ಚಾಮುಂಡೇಶ್ವರಿಯನ್ನು ನಾಡಿನ ಅದಿ ದೇವತೆ ಎಂದು ಕರೆಯುತ್ತಾರೆ. ಬೆಟ್ಟದ ಮೇಲೆ ಚಾಮುಂಡೇಶ್ವರಿಯ ದೇವಾಲಯವಿರುವುದರಿಂದ ಈ ಬೆಟ್ಟಕ್ಕೆ ಆ ದೇವತೆಯ ಹೆಸರೇ ಬಂದಿದೆ. ಬೆಟ್ಟದ ಮೇಲೆ ನಿಂತು ನೋಡಿದಾಗ ಮೈಸೂರಿನ ಹರವು ಮತ್ತು ಸುತ್ತಲಿನ ಪ್ರಕೃತಿ ಸೌಂದರ್ಯ ರಮ್ಯವಾಗಿ ಕಾಣಿಸುತ್ತದೆ.

ಶ್ರೀ ಚಾಮುಂಡೇಶ್ವರಿ ದೇವಾಲಯಕ್ಕೆ ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಾರೆ. ಸ್ಕಂದ ಪುರಾಣ ಮತ್ತಿತರ ಪ್ರಾಚೀನ ಗ್ರಂಥಗಳು ಎಂಟು ಬೆಟ್ಟಗಳಿಂದ ಸುತ್ತುವರಿದ ತ್ರಿಮುಕುಟ ಕ್ಷೇತ್ರ ವೆಂಬ ಪವಿತ್ರ ಕ್ಷೇತ್ರವನ್ನು ಉಲ್ಲೇಖಿಸುತ್ತದೆ. ಚಾಮುಂಡಿ ಬೆಟ್ಟದಲ್ಲಿರುವ ಶ್ರೀ ಮಹಾಬಲೇಶ್ವರ ದೇವಸ್ಥಾನವು ಅತ್ಯಂತ ಪ್ರಾಚೀನವಾದುದು. ಮೈಸೂರು ಅರಸರು ಈ ದೇವಿ ಅರಾಧಕರಾಗಿದ್ದರು.
ಈ ದೇವಾಲಯವನ್ನು ದ್ರಾವಿಡ ಶೈಲಿಯಲ್ಲಿ ಕಟ್ಟಲಾಗಿದ್ದು ಹೆಬ್ಬಾಗಿಲು, ಪ್ರವೇಶ ದ್ವಾರ, ನವರಂಗ, ಅಂತರಾಳ, ಗರ್ಭಗೃಹ ಹೊಂದಿದೆ. ಚಾಮುಂಡೇಶ್ವರಿ ದೇವಾಲಯದ ಮಹಾದ್ವಾರದ ಮೇಲೆ ಸುಂದರವಾದ ‘ಗೋಪುರ’ ಹಾಗೂ ಗರ್ಭ ಗುಡಿಯ ಮೇಲೆ ‘ವಿಮಾನ’ ಶಿಖರಗಳಿವೆ.
ಬೆಳಿಗ್ಗೆ 7.30 ರಿಂದ ಮಧ್ಯಾಹ್ನ 2.00 ,ಮಧ್ಯಾಹ್ನ 3.30 ರಿಂದ ಸಂಜೆ 6.00 ಮತ್ತು ಸಂಜೆ 7:30 ರಿಂದ ರಾತ್ರಿ 9.00 ಚಾಮುಂಡಿ ಬೆಟ್ಟಕ್ಕೆ ಪ್ರವಾಸಿಗರಿಗೆ ಪ್ರವೇಶಕ್ಕೆ ಅನುಮತಿಯಿದೆ.
ಮೈಸೂರು ರೈಲ್ವೆ ಮ್ಯೂಸಿಯಂ
ಇದು ಚಿಣ್ಣರ ಅಚ್ಚುಮೆಚ್ಚಿನ ತಾಣ. ಸಾಂಸ್ಕೃತಿಕ ನಗರಿಯ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದು.32 ಎಕರೆ ವಿಶಾಲ ಪ್ರದೇಶದಲ್ಲಿರುವ ಮ್ಯೂಸಿಯಂನಲ್ಲಿ ಆಕರ್ಷಕ ಹಾಗೂ ಅಪರೂಪದ ಬ್ರಿಟಿಷರ ಕಾಲದ ರೈಲು ಎಂಜಿನ್‌ಗಳು ಹಾಗೂ ಸ್ಟೀಮ್ ಎಂಜಿನ್‌ಗಳಿವೆ. ಇವೆಲ್ಲವೂ ಪ್ರವಾಸಿಗರಲ್ಲಿ ಕುತೂಹಲ ಮೂಡಿಸುತ್ತಿದೆ. ಭಾರತೀಯ ರೈಲ್ವೆ 1979ರಲ್ಲಿ ಈ ಮ್ಯೂಸಿಯಂನನ್ನು ಸ್ಥಾಪಿಸಿತು. ದೇಶದಲ್ಲಿ ಇರುವುದೇ ಎರಡೇ ರೈಲ್ವೆ ಮ್ಯೂಸಿಯಂ. ಒಂದು ಹೊಸದಿಲ್ಲಿಯ ನ್ಯಾಷನಲ್ ರೈಲ್ವೆ ಮ್ಯೂಸಿಯಂ ಇನ್ನೊಂದು ಮೈಸೂರಿನ ಈ ರೈಲ್ವೆ ಮ್ಯೂಸಿಯಂ.

ಸಂತ ಫಿಲೋಮಿನಾ ಚರ್ಚ್
ಸಂತ ಜೋಸೆಫ್ ಚರ್ಚ್ ಎಂದೂ ಕರೆಯಲ್ಪಡುವ ಸಂತ ಫಿಲೋಮಿನಾರ ಚರ್ಚ್ ಗೆ ಮೈಸೂರಿಗೆ ಬರುವ ಪ್ರವಾಸಿಗರು ಒಮ್ಮೆ ಭೇಟಿ ಕೊಡಲೇಬೇಕು. 1933ರಲ್ಲಿ ಮೂರನೇ ಮಹಾರಾಜ ಕೃಷ್ಣ ರಾಜ ಒಡೆಯರ ಚರ್ಚ್ ನಿರ್ಮಾಣ ಆರಂಭಿಸಿದರು. 1941ರಲ್ಲಿ ಪೂರ್ಣಗೊಂಡಿತು. ಈ ಚರ್ಚ್ ಗೋತಿಕ್ ಶೈಲಿಯ ವಾಸ್ತುಶಿಲ್ಪವನ್ನು ಪ್ರದರ್ಶಿಸುತ್ತದೆ. ಜೊತೆಗೆ ಇಲ್ಲಿ ಒಂದು ತಿಜೋರಿಯಲ್ಲಿ 3ನೇ ಶತಮಾನದ ಪಳಿಯುಳಿಕೆಗಳನ್ನು ಸಂರಕ್ಷಿಸಲಾಗಿದೆ.

ಪ್ರವಾಸಿಗರು ಸಂತ ಫಿಲೋಮಿನಾದ ಮತ್ತು ಯೇಸುವಿನ ಪ್ರತಿಮೆಗಳನ್ನು ಮುಖ್ಯ ಪುಣ್ಯ ಸ್ಥಳದಲ್ಲಿ ಅಮೃತಶಿಲೆಯ ಮೇಲೆ ಕಾಣಬಹುದು. ವರ್ಣಭರಿತ ಕಿಟಕಿಯ ಗಾಜಿನ ಮೇಲಿರುವ ಕಲಾಕೃತಿಗಳು ಯೇಸುವಿನ ಜನನ, ಶಿಲುಬೆಗಿರಿಸಿದ ದೃಶ್ಯ, ಲಾಸ್ಟ್ ಸಪ್ಪರ್, ಯೇಸುವು ಮೇಲಕ್ಕೆರಿದ ಸಂದರ್ಭವನ್ನು ಬಿಂಬಿಸುತ್ತವೆ. ಈ ಚರ್ಚಿನ ಮತ್ತೊಂದು ವಿಶೇಷವೆಂದರೆ ನ್ಯೂ ಯಾರ್ಕ್ ಟವರ್ ನ ಸಂತ ಪ್ಯಾಟ್ರಿಕ್ ಚರ್ಚನ್ನು ಹೋಲುವ ಇಲ್ಲಿನ 54 ಮೀ ಎತ್ತರದ ಎರಡು ಗೋಪುರಗಳು ಇವೆ.
ಚಾಮರಾಜೇಂದ್ರ ಮೃಗಾಲಯ
ಮೈಸೂರು ಮೃಗಾಲಯ ಮೈಸೂರು ಅರಮನೆ ಸಮೀಪವಿದೆ. ೨೪೫ ಎಕ್ರೆಯಷ್ಟು ಇರುವ ಈ ಮೃಗಾಲಯ ದಕ್ಷಿಣ ಭಾರತದ ಪ್ರಸಿದ್ದ ಮೃಗಾಲಯಗಳಲ್ಲಿ ಒಂದು. ವಿವಿಧ ರೀತಿಯ ಪ್ರಾಣಿ – ಪಕ್ಷಿ, ಸರೀಸೃಪಗಳನ್ನು ಇಲ್ಲಿ ನಾವು ನೋಡಬಹುದು. ಮೈಸೂರು ಆಕರ್ಷಣೆ ಸ್ಥಳಗಳಲ್ಲಿ ಈ ಮೃಗಾಲಯ ಸಹ ಒಂದು.
ನೀವು ಇದನ್ನು ಇಷ್ಟ ಪಡಬಹುದು:ದಕ್ಷಿಣ ಭಾರತದ 20 ಪ್ರವಾಸಿ ತಾಣಗಳು

೧೮೯೨ ರಾಜವಂಶದ ಆಶ್ರಯದಲ್ಲಿ ಪ್ರಾರಂಭವಾದ ಈ ಅರಮನೆ ವಿಶ್ವದ ಪ್ರಸಿದ್ದ ಮೃಗಾಲಯಗಳ ಪಟ್ಟಿಯಲ್ಲಿದೆ. ಹಲವು ಖ್ಯಾತ ನಾಮರು ಇಲ್ಲಿನ ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳುವ ಮೂಲಕ ಮೃಗಾಲಯದ ಅಭಿವೃದ್ಧಿಗೆ ನೆರವಾಗುತ್ತಿದ್ದಾರೆ.
ಲಲಿತ ಮಹಲ್
ಮೈಸೂರಿನ ಲಲಿತ ಮಹಲ್ ಅರಮನೆಯನ್ನು ಮೈಸೂರಿನ ಮಹಾರಾಜರು ತಮ್ಮ ಪ್ರಮುಖ ಅತಿಥಿ ಭಾರತದ ವೈಸೆರಾಯ್ ಅವರ ನಿವಾಸವಾಗಿ ನಿರ್ಮಿಸಿದ್ದಾರೆ. ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರು ನಗರದ ಹೊರಗಡೆ ಚಾಮುಂಡಿ ಬೆಟ್ಟದ ಬುಡದಲ್ಲಿರುವ ಲಲಿತ ಮಹಲ್ ಅರಮನೆಯು ಒಂದು ಭವ್ಯವಾದ ನಿವಾಸ, ಐತಿಹಾಸಿಕ ಕಟ್ಟಡ ಮತ್ತು ಈಗ ಐಷಾರಾಮಿ ಪಾರಂಪರಿಕ ಹೋಟೆಲ್ ಆಗಿದೆ.

ಲಲಿತ ಮಹಲ್ ಬಿಳಿ ಬಣ್ಣದ ಎರಡು ಮಹಡಿಗಳ ಕಟ್ಟಡವಾಗಿದೆ. ಒಳಾಂಗಣವನ್ನು ಪರಿಶುದ್ಧವಾಗಿ ಹೊಳಪುಗೊಳಿಸಿದ ಅಮೃತಶಿಲೆ, ಬೀಟೆ ಮರದ ಪೀಠೋಪಕರಣಗಳು, ಭವ್ಯವಾದ ಮೆಟ್ಟಿಲುಗಳು, ಆಮದು ಮಾಡಿದ ರತ್ನಗಂಬಳಿಗಳು, ಸಂಕೀರ್ಣವಾದ ತೂಗು ದೀಪದ ಗೊಂಚಲುಗಳು ಮತ್ತು ಪರದೆಗಳಿಂದ ಅಲಂಕರಿಸಲಾಗಿದೆ. ಮೇಲಿನ ಮಹಡಿಯಿಂದ ಸುಂದರ ನೋಟ ಕಾಣಸಿಗುತ್ತದೆ.
ಬಿಳಿಗಿರಿರಂಗನ ಬೆಟ್ಟ
ಮೈಸೂರಿನಿಂದ 120 ಕಿ.ಮೀಟರ್ ಹಾಗೂ ಬೆಂಗಳೂರಿನಿಂದ 240 ಕಿ.ಮೀಟರ್ ದೂರದಲ್ಲಿರುವ ಬಿಳಿಗಿರಿ ರಂಗನ ಬೆಟ್ಟ , ಸಮುದ್ರ ಮಟ್ಟದಿಂದ 1552 ಮೀಟರ್ ಎತ್ತರದಲ್ಲಿದೆ, ಚಾಮರಾಜನಗರ ಹಾಗೂ ಯಳಂದೂರು ಮಾರ್ಗವಾಗಿ ಸುಮಾರು 15 ಕಿ.ಮೀ. ದೂರದಲ್ಲಿರುವ ಶ್ರೀರಂಗನಾಥನ ನೆಲೆವೀಡು ಬಿಳಿಗಿರಿ ರಂಗನ ಬೆಟ್ಟ, ಪುರಾಣ ಪ್ರಸಿದ್ಧ ಸ್ಥಳ.ಈ ಕ್ಷೇತ್ರಕ್ಕೆ ಬಿಳಿಗಿರಿ ಎಂದು ಹೆಸರು ಬರಲು ಬೆಟ್ಟದಲ್ಲಿ ಬಿಳಿಯ ಬಣ್ಣದ ಶಿಲೆಗಳಿರುವುದೇ ಕಾರಣ.

ಈ ಬೆಟ್ಟವನ್ನು ಜನಪದರು ಬಿಳಿಕಲ್ಲು ಬೆಟ್ಟ ಎಂದರೆ, ಪಂಡಿತರು ಶ್ವೇತಾದ್ರಿ ಎಂದೂ ಕರೆದಿದ್ದಾರೆ. ಬ್ರಹ್ಮಾಂಡ ಪುರಾಣದಲ್ಲಿ ಈ ಬೆಟ್ಟವನ್ನು ದಕ್ಷಿಣ ತಿರುಪತಿ ಎಂದು ಉಲ್ಲೇಖಿಸಲಾಗಿದೆ. 5,091 ಅಡಿ ಎತ್ತರದ ನಿಸರ್ಗರಮಣೀಯವಾದ ಬೆಟ್ಟದಲ್ಲಿ ನವರಂಗ, ಮುಖಮಂಟಪದಿಂದ ಕೂಡಿದ ಬಿಳಿಗಿರಿರಂಗನ ಪುರಾತನ ದ್ರಾವಿಡಶೈಲಿಯ ದೇವಾಲಯವಿದೆ.
ಶ್ರೀಕಂಠೇಶ್ವರ ದೇವಾಲಯ
ನಂಜನಗೂಡು ಕರ್ನಾಟಕ ರಾಜ್ಯದ ಮೈಸೂರು ಜಿಲ್ಲೆಯ ಒಂದು ತಾಲ್ಲೂಕು ಪಟ್ಟಣ. ಇದು ಮೈಸೂರಿನಿಂದ ಸುಮಾರು ೨೩ ಕಿ.ಮಿ. ದೂರದಲ್ಲಿದೆ. ನಂಜನಗೂಡು ಕಪಿಲ ನದಿಯ ದಂಡೆಯಲ್ಲಿರುವ ಒಂದು ಪ್ರಮುಖ ಧಾರ್ಮಿಕ ಹಾಗೂ ಐತಿಹಾಸಿಕ ಪಟ್ಟಣ. ಇಲ್ಲಿರುವ ಶ್ರೀಕಂಠೇಶ್ವರ ದೇವಾಲಯವು ಒಂದು ಪ್ರಸಿದ್ಧ ಧಾರ್ಮಿಕ ಕೇಂದ್ರ.

ನಂಜನಗೂಡು”ದಕ್ಷಿಣ ಕಾಶಿ” ಎಂದು ವಿಖ್ಯಾತಿ ಪಡೆದಿದೆ. ನಂಜನಗೂಡು ತಾಲ್ಲೂಕಿನ ಮುಖ್ಯ ಕಾರ್ಯಾಲಯ ಆಗಿರುವ ಈ ನಗರವು “ಟೆಂಪಲ್ ಟೌನ್” ಎಂದು ಪ್ರಸಿದ್ಧವಾಗಿದೆ.
ಬೃಂದಾವನ ಉದ್ಯಾವನ
ಈ ಉದ್ಯಾನವನ ಮೈಸೂರಿನ ಪಕ್ಕದ ಜಿಲ್ಲೆಯ ಮಂಡ್ಯ ಜಿಲ್ಲೆಯಲ್ಲಿರುವ ಒಂದು ಉದ್ಯಾನವನ. ಇದು ಕಾವೇರಿ ನದಿಯುದ್ದಕ್ಕೂ ನಿರ್ಮಿಸಲಾಗಿರುವ ಕೃಷ್ಣರಾಜಸಾಗರ ಅಣೆಕಟ್ಟಿನ ಪಕ್ಕದಲ್ಲಿದೆ. ಈ ಉದ್ಯಾನವನಕ್ಕೆ ಸುಮಾರು 2 ಮಿಲಿಯನ್ ಪ್ರವಾಸಿಗರು ಭೇಟಿ ನೀಡುತ್ತಾರೆ, ಈ ಉದ್ಯಾನವು ಶ್ರೀರಂಗಪಟ್ಟಣದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ.

ಮೈಸೂರಿಗೆ ಭೇಟಿ ನೀಡುವ ಪ್ರವಾಸಿಗರು ನಗರದಿಂದ ಕೇವಲ 20 ಕಿಮೀ ದೂರದಲ್ಲಿರುವ ಬೃಂದಾವನ ಹೂದೋಟವನ್ನು ಹೋಗಿ ನೋಡಲೇಬೇಕಾದ ಸ್ಥಳವಾಗಿದೆ. . ಹಿಂದೆ ಕೃಷ್ಣರಾಜೇಂದ್ರ ಟೆರೇಸ್ ಗಾರ್ಡನ್ ಎಂದು ಕರೆಯಲ್ಪಡುತ್ತಿದ್ದ ಬೃಂದಾವನವೂ ಕೃಷ್ಣರಾಜಸಾಗರ ಆಣೆಕಟ್ಟಿನ ಕೆಳಭಾಗದಲ್ಲಿದ್ದು ನಾಲ್ವಡಿ ಕೃಷ್ಣರಾಜ ಒಡೆಯರ್ ರಿಂದ ಅದರ ಹೆಸರನ್ನು ಪಡೆದುಕೊಂಡಿದೆ.
ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada. Travel) ಜಾಲತ ಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ