ಮಳೆಗಾಲದಲ್ಲಿ ನೋಡಬಹುದಾದ ಚೆಂದದ ೧೦ ಜಾಗಗಳು

ಮಳೆಗಾಲ ಬಂದಾಗ ಪ್ರವಾಸಕ್ಕೆ ಹೊರಡುವವರ ಸಂಖ್ಯೆ ಕೂಡ ಜಾಸ್ತಿ . ಹಿತವಾದ ವಾತಾವರಣ ,ಚೆಂದದ ಜಾಗ ನಿಮ್ಮ ಪ್ರಯಾಣವನ್ನು ಇನ್ನಷ್ಟು ಹಿತಕರವಾಗಿರಿಸುತ್ತದೆ. ಮಾನ್ಸೂನ್ ಮಳೆಗಾಲದಲ್ಲಿ ನೀವು ನೋಡಬಹುದಾದ ಚೆಂದದ ಜಾಗಗಳಿವು.
- ನವ್ಯಶ್ರೀ ಶೆಟ್ಟಿ
ಮಳೆಗಾಲದಲ್ಲಿ ಪ್ರವಾಸ ಹೋಗಬೇಕು ಎನ್ನುವ ಯೋಚನೆಯಲ್ಲಿ ಇರುವವರು ಈ ೧೦ ಚೆಂದದ ಜಾಗಗಳಿಗೆ ಪ್ರವಾಸ ಹೋಗಬಹುದು.
ಅಲ್ಲೆಪ್ಪೆ, ಕೇರಳ
ನೀವು ಮಳೆಗಾಲದ ಸಮಯದಲ್ಲಿ ನೋಡಬಹುದಾದ ಜಾಗಗಳಲ್ಲಿ ಕೇರಳದ ರಾಜ್ಯದಲ್ಲಿರುವ ಅಲ್ಲೆಪ್ಪೆ ಕೂಡ ಒಂದು. ದೇವರ ಸ್ವಂತ ನಾಡು ಕೇರಳದಲ್ಲಿ ಮಾನ್ಸೂನ್ ಸಮಯದಲ್ಲಿ ವಾತಾವರಣ ನೋಡುವುದೇ ಚೆಂದ. ನದಿ, ಕೆರೆ, ಹಿನ್ನೀರಿನ ಪ್ರದೇಶ ಇವುಗಳ ಸವಿಯನ್ನು ಅನುಭವಿಸುವುದಕ್ಕೆ ಕೇರಳ ರಾಜ್ಯದಲ್ಲಿರುವ ಅಲ್ಲೆಪ್ಪೆ ಹೇಳಿ ಮಾಡಿಸಿದ ಜಾಗ.
ಕೊಡಗು, ಕರ್ನಾಟಕ
ಕೊಡಗನ್ನು , ಕರ್ನಾಟಕ ದ ಕಾಶ್ಮೀರ ಎಂದು ಕರೆಯುತ್ತಾರೆ. ವರ್ಷದ ಎಲ್ಲಾ ಋತುಮಾನದಲ್ಲಿ ಪ್ರವಾಸಿಗರಿಗೆ ಇಷ್ಟವಾಗುವ ತಾಣವಿದು. ಕೊಡಗು ಮಳೆಗಾಲದ ಸಮಯದಲ್ಲಿ ಪ್ರವಾಸಿಗರು ನೋಡಲೇ ಬೇಕಾದ ತಾಣವಾಗಿರುವುದಕ್ಕೆ ಹಲವು ಕಾರಣಗಳಿವೆ. ಹಸಿರಿನ ಚೆಂದದ ವಾತಾವರಣ , ವನ್ಯ ಜೀವಿಗಳ ನೆಲೆ, ಟ್ರೆಕ್ಕಿಂಗ್, ಕುದುರೆ ಸವಾರಿ, ಕಾಫಿ ತೋಟಗಳು ಈ ಎಲ್ಲ ಕಾರಣದಿಂದ ಮಳೆಗಾಲದ ಸಮಯದಲ್ಲಿ ನಿಮಗೆ ಕೊಡಗಿನ ಸೌಂದರ್ಯ ಇನ್ನಷ್ಟು ದುಪ್ಪಟ್ಟಾಗುತ್ತದೆ.
ಡಾರ್ಜಿಲಿಂಗ್, ಪಶ್ಚಿಮ ಬಂಗಾಳ
ಡಾರ್ಜಿಲಿಂಗ್ ನೀವು ಅದೆಷ್ಟು ಬಾರಿ ನೋಡಿದರೂ ಕೂಡ ಮತ್ತೆ ಮತ್ತೆ ನೋಡಬೇಕು ಎನ್ನುವ ಜಾಗವಿದು. ಡಾರ್ಜಿಲಿಂಗ್ ಶಿಖರಗಳ ರಾಣಿ ಯಿದ್ದಂತೆ. ನೀವು ಮಳೆಗಾಲದ ಸಮಯದಲ್ಲಿ ಭೇಟಿ ನೀಡಬೇಕಾದ ಚೆಂದದ ತಾಣಗಳಲ್ಲಿ ಡಾರ್ಜಿಲಿಂಗ್ ಕೂಡ ಒಂದಾಗಿರಲಿ. ಮಳೆಗಾಲದ ಸಮಯದಲ್ಲಿ ರೈಲಿನ ಪಯಣದಲ್ಲಿ ಕಾಫಿ ಎಸ್ಟೇಟ್ ನೋಡುತ್ತಾ ಪಯಣಿಸುವುದು ಒಂದು ಚೆಂದದ ಅನುಭವ.
ಗೋವಾ
ಗೋವಾ ಎಲ್ಲ ಕಾಲದಲ್ಲೂ ಪ್ರವಾಸಿಗರನ್ನು ಆಕರ್ಷಿಸುವ ಒಂದು ಚೆಂದದ ಜಾಗ. ಆದರೆ ಮಾನ್ಸೂನ್ ಸಮಯದಲ್ಲಿ ಹೆಚ್ಚಿಗೆ ಪ್ರವಾಸಿಗರನ್ನು ಆಕರ್ಷಿಸುವ ಜಾಗಗಳಲ್ಲಿ ಒಂದು ಕೂಡ ಹೌದು. ಬೀಚ್,ಟ್ರೆಕ್ಕಿಂಗ್ , ಐತಿಹಾಸಿಕ ಸ್ಥಳಗಳು , ಪಕ್ಷಿ ವೀಕ್ಷಣೆ,ರೋಡ್ ಟ್ರಿಪ್ ಹೀಗೆ ಪ್ರವಾಸ ಇಷ್ಟ ಪಡುವವರಿಗೆ ಈ ಜಾಗ ಇಷ್ಟದ ತಾಣಗಳಲ್ಲಿ ಒಂದು.
ಜೋಗ್ ಫಾಲ್ಸ್ , ಕರ್ನಾಟಕ
ಜೋಗ್ ಫಾಲ್ಸ್ ಕರ್ನಾಟಕದ ಶಿವಮೊಗ್ಗ ಜಿಲ್ಲೆಯಲ್ಲಿದೆ. ನಿಸರ್ಗ ಪ್ರಿಯರಿಗೆ ಜೋಗ್ ಫಾಲ್ಸ್ ಸೌಂದರ್ಯ ಅತ್ಯಾಪ್ತ. ಮಳೆಗಾಲದ ಸಮಯದಲ್ಲಿ ಅತಿ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸುವ ಕರ್ನಾಟಕದ ತಾಣಗಳಲ್ಲಿ ಜೋಗ್ ಫಾಲ್ಸ್ ಕೂಡ ಒಂದು. ಶರಾವತಿ ನದಿ, ದಬ್ಬೆ ಫಾಲ್ಸ್ ಜೋಗ್ ಫಾಲ್ಸ್ ಹತ್ತಿರದ ಇತರ ಆಕರ್ಷಣೆಗಳು.
ಒರಚ್ಚ ,ಮಧ್ಯ ಪ್ರದೇಶ
ಮಧ್ಯ ಪ್ರದೇಶ ರಾಜ್ಯದಲ್ಲಿರುವ ಒರಚ್ಚ ಒಂದು ಐತಿಹಾಸಿಕ ದೇವಾಲಯ ಇರುವ ತಾಣ. ಅತ್ಯಂತ ವಿಶಾಲ ಜಾಗದಲ್ಲಿ ಈ ಸುಂದರ ಕೋಟೆ ನಿರ್ಮಾಣವಾಗಿದೆ. ಕೋಟೆಗಳು ಈ ಸ್ಥಳದ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ. ಕೋಟೆಗಳು, ಅದಕ್ಕೊಪ್ಪುವ ಪ್ರಶಾಂತ ವಾತಾವರಣ ಒರಚ್ಚ ಸೌಂದರ್ಯವನ್ನು ದುಪ್ಪಟ್ಟು ಮಾಡುತ್ತದೆ. ಜಹಾಂಗೀರ್ ಮಹಲ್, ರಾಜ ಮಹಲ್,ರಾಣಿ ಮಹಲ್ ನ ವಾಸ್ತು ಶಿಲ್ಪದಿಂದ ಕೋಟೆಗಳು ನಿರ್ಮಾಣವಾಗಿದೆ.
ನೀವು ಇದನ್ನು ಇಷ್ಟಪಡಬಹುದು: ಭಾರತದ ಈ ಜಾಗಗಳಿಗೆ ನೀವು ಮಳೆಗಾಲದಲ್ಲಿ ಪ್ರವಾಸ ಹೋಗದಿರುವುದು ಒಳಿತು.
ಪಾಂಡಿಚೇರಿ
ಕಡಲ ತೀರ ಇಷ್ಟ ಪಡುವ ಮಂದಿಗೆ ಪಾಂಡಿಚೇರಿ ಕೂಡ ಇಷ್ಟವಾಗುವ ಜಾಗಗಳಲ್ಲಿ ಒಂದು. ಪಾಂಡಿಚೇರಿಯ ಕೆಲವು ಜಾಗಗಗಳು ಭಾರತದ ಐತಿಹಾಸಿಕ ಘಟನೆಗಳನ್ನು ಮೆಲುಕು ಹಾಕುತ್ತದೆ. ಸುತ್ತಲು ಸುಂದರವಾದ ವಿಲ್ಲಾಗಳು , ವಸಾಹತುಶಾಹಿ ನಿವಾಸ, ಸರೋವರದ ಉದ್ದಕ್ಕೂ ಪ್ರವಾಸಿಗರನ್ನು ಆಕರ್ಷಿಸುವ ಕೆಫೆ ,ಬಾರ್, ಮಳೆಯಲ್ಲಿ ಪ್ರವಾಸಿಗರಿಗೆ ಹಿತ ನೀಡುವ ಫ್ರೆಂಚ್ ಖಾದ್ಯಗಳು, ಸುಸಜ್ಜಿತ ಮಾರುಕಟ್ಟೆ, ಪ್ರಶಾಂತ ಕಡಲ ತೀರ, ಹಚ್ಚ ಹಸಿರಿನ ಕಾಡುಗಳು ಪ್ರವಾಸಿಗರಿಗೆ ಮುದ ನೀಡುತ್ತದೆ.
ರಾಣಿಖೇತ್, ಉತ್ತರಾಖಂಡ್
ಉತ್ತರಾಖಂಡ್ ರಾಜ್ಯದ ಚೆಂದದ ತಾಣಗಳಲ್ಲಿ ರಾಣಿಖೇತ್ ಕೂಡ ಒಂದು. ಸುತ್ತಲು ಕಾಡು ,ಮಳೆಗಾಲದ ಚೆಂದದ ನೋಟ ಟ್ರೆಕ್ಕಿಂಗ್ ಪ್ರಿಯರಿಗೆ ಖುಷಿ ನೀಡುತ್ತದೆ. ಅದ್ಬುತವಾದ ದೇವಾಲಯಗಳು, ಹಿಮಾಲಯದ ವೀಕ್ಷಣೆ ಉತ್ತರಾಖಂಡ್ ರಾಜ್ಯದ ರಾಣಿಖೇತ್ ಸೊಬಗನ್ನು ಮನ ಮೋಹನಗೊಳಿಸುತ್ತದೆ.
ಶಿಲ್ಲಾಂಗ್, ಮೇಘಾಲಯ
ಶಿಲ್ಲಾಂಗ್ ಅನ್ನು ‘ ಪೂರ್ವದ ಸ್ಕಾಟ್ಲ್ಯಾಂಡ್ ‘ಎಂದು ಕರೆಯಲಾಗುತ್ತದೆ. ಮಳೆಗಾಲದ ಸಮಯದಲ್ಲಿ ಭೇಟಿ ನೀಡಬಹುದಾದ ಭಾರತದ ಅತ್ಯುತ್ತಮ ಸ್ಥಳಗಳಲ್ಲಿ ಇದು ಕೂಡ ಒಂದು. ಮಳೆಗಾಲದ ಸಮಯದಲ್ಲಿ ಈ ಜಾಗ ಇನ್ನಷ್ಟು ಸೊಗಸಾಗಿ ಕಾಣುತ್ತದೆ. ಮಂಜು ಮುಸುಕಿದ ಮೋಡಗಳು,ಚೆಂದದ ಪ್ರಶಾಂತ ವಾತಾವರಣ, ಜಲಪಾತಗಳಿಗೆ ಶಿಲ್ಲಾಂಗ್ ಹೆಸರುವಾಸಿ. ಶಿಲ್ಲಾಂಗ್ ಪ್ರದೇಶದ ಎಲಿಫೆಂಟ್ ಫಾಲ್ಸ್, ಸ್ಟ್ರೈಡ್ ಈಗಲ್ ಫಾಲ್ಸ್ ಅತಿ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸುತ್ತದೆ.
ಸ್ಪಿಟಿ ವ್ಯಾಲಿ, ಹಿಮಾಚಲ ಪ್ರದೇಶ
ಮಾನ್ಸೂನ್ ಸಮಯದಲ್ಲಿ ಪ್ರವಾಸಿಗರು ನೋಡಬೇಕೆಂದು ಬಯಸುವ ತಾಣಗಳಲ್ಲಿ ಸ್ಪಿಟಿ ವ್ಯಾಲಿ ಕೂಡ ಒಂದು. ಸ್ಪಿಟಿ ವ್ಯಾಲಿ ಅನ್ನು ‘ ಲಿಟಲ್ ಟಿಬೆಟ್ ‘ ಎಂದು ಕೂಡ ಕರೆಯುತ್ತಾರೆ. ಸ್ಪಿಟಿ ಹತ್ತಿರದ ಲಾಲಂಗ್ ಮಠ ಕೂಡ ನೀವು ನೋಡಬೇಕಾಗಿರುವ ಜಾಗಗಳಲ್ಲಿ ಒಂದು. ನಿಸರ್ಗ ಪ್ರಿಯರಿಗೆ ಈ ಜಾಗ ಪ್ರವಾಸದ ಖುಷಿಯನ್ನು ಇನ್ನಷ್ಟು ಹಿತಕರವಾಗಿರಿಸುತ್ತದೆ.
ಮಳೆಗಾಲದ ಹಿತಕರ ಅನುಭವಗಳ ನಡುವೆ ಪ್ರವಾಸ ಹೊರಡಬೇಕು ಎನ್ನುವ ಯೋಚನೆಯಲ್ಲಿ ಇರುವವರು ಈ ಹತ್ತು ಜಾಗಗಳನ್ನು ತಮ್ಮ ಪಟ್ಟಿಗೆ ಸೇರಿಸಿಕೊಳ್ಳಬಹುದು.
ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.