ಇವರ ದಾರಿಯೇ ಡಿಫರೆಂಟುಮ್ಯಾಜಿಕ್ ತಾಣಗಳುವಿಂಗಡಿಸದ

ಬೆಂಗಳೂರಿನ ಮಲ್ಲೇಶ್ವರಂನ ಚಂದ ನೋಡಿ: ಬಣ್ಣಬಣ್ಣದ ಕತೆ ಹೇಳಿವೆ ಗೋಡೆ ಚಿತ್ತಾರಗಳು

ಹಳತನ್ನು ನವ ನವೀನವಾಗಿ ರೂಪಾಂತರಗೊಳಿಸುವ ಮಾಂತ್ರಿಕ ಶಕ್ತಿ ಕಲೆಗಿದೆ. ಈಗ ಇದೇ ಕಲೆ ಬೆಂಗಳೂರಿನ ಮಲ್ಲೇಶ್ವರಂನ ಬೀದಿ ಬದಿಯ ಗೋಡೆಗಳಲ್ಲಿ ಮನಮೋಹಕವಾಗಿ ಅರಳಿ ನಿಂತಿದೆ. “ವಾಕೆಬಲ್ ಮಲ್ಲೇಶ್ವರಂ” ಯೋಜನೆಯಡಿ ಮಲ್ಲೇಶ್ವರಂ ಈಗ ಪಾದಚಾರಿ ಸ್ನೇಹಿಯಾಗಿ ಬದಲಾಗಿದೆ.

  • ಆದಿತ್ಯ ಯಲಿಗಾರ

ಬೆಂಗಳೂರಿನ ವಾಯುವ್ಯ ಭಾಗದಲ್ಲಿ ನೆಲೆ ನಿಂತಿರುವ, ಮಾಲ್‌ಗಳು, ಪಬ್‌ಗಳು ಮತ್ತು ಜನದಟ್ಟಣೆಯ ದೂರದಲ್ಲಿರುವ ‘ಮಲ್ಲೇಶ್ವರಂ’ ಪ್ರದೇಶ, ಬೆಂಗಳೂರಿನ ಹಳೆಯ, ಯೋಜಿತ ಪ್ರದೇಶಗಳಲ್ಲೊಂದು. ಈ ಮಲ್ಲೇಶ್ವರಂ  8-10 ಅಡಿ ಅಗಲದ ಹಾದಿಗಳಿಂದ ತುಂಬಿದ್ದು, ಸಮಸ್ತ ಪ್ರದೇಶವನ್ನ ಈ ದಾರಿಗಳು ಅಡ್ಡ ಮತ್ತು ಲಂಬವಾಗಿ ಛೇದಿಸಿವೆ. 

ಕನ್ಸರ್ವೆನ್ಸಿ ಲೇನ್‌ಗಳು (Conservency Lanes) ಎಂದು ಕರೆಯಲ್ಪಡುವ ಈ ಪಥಗಳನ್ನು 1800ರ ದಶಕದ ಪ್ಲೇಗ್‌ನ ನಂತರ ಯೋಜಿಸಿ ನಿರ್ಮಿಸಲಾಯಿತು ಮತ್ತು ಐತಿಹಾಸಿಕವಾಗಿ ಒಳಚರಂಡಿ ವ್ಯವಸ್ಥೆಗೆ (Manual scavaging) ಬಳಸಲಾಗುತ್ತಿತ್ತು.

ಅಂತಿಮವಾಗಿ ಈ ಪ್ರದೇಶದಲ್ಲಿ ಆ ಅಭ್ಯಾಸವು ನಿಂತುಹೋದಾಗ, ಹಾದಿಗಳು ವಾಹನ ನಿಲುಗಡೆಗೆಯ ಸ್ಥಳವಾಗಿ ಮಾರ್ಪಟ್ಟು ಸಣ್ಣ ಮಾರಾಟಗಾರರಿಂದ ಅಕ್ರಮವಾಗಿ ಸಂಗ್ರಹಿಸಲ್ಪಟ್ಟವು, ಸದ್ಯಕ್ಕವು ಸಂಪೂರ್ಣ ಬಳಕೆಯಲ್ಲಿವೆ. ಈಗ, ಜನರ ಗುಂಪೊಂದು ಈ ಮರೆತುಹೋದ ರಸ್ತೆಗಳನ್ನು ಮರುಶೋಧಿಸುತ್ತ  ಅದರ  ಗತಕಾಲವನ್ನ ಚಿತ್ರಿಸುವ ಪ್ರಯತ್ನ ನಡೆಸುತ್ತಿದೆ.

ಪಾದಚಾರಿ ಸ್ನೇಹಿಯಾದ ಮಲ್ಲೇಶ್ವರಂ

“ಮಲ್ಲೇಶ್ವರಂನ ಜನರಿಗೆ ಸಹ ಈ ದಾರಿಗಳು ತಮ್ಮ ನೆರೆಹೊರೆಯನ್ನು ಇಬ್ಭಾಗಿಸುವವೆಂದು ತಿಳಿದಿರಲಿಲ್ಲ” ಎಂದು ಬೆಂಗಳೂರಿನ ನಗರದಲ್ಲಿ ವಾಸಿಸುವ ಸೆನ್ಸಿಂಗ್ ಲೋಕಲ್‌ ಲ್ಯಾಬ್‌ನ ಸಹ-ಸಂಸ್ಥಾಪಕ ಸೋಬಿಯಾ ರಫೀಕ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನೀವುಇದನ್ನುಇಷ್ಟಪಡಬಹುದು: ಜೀವನ ಪ್ರೀತಿ ಹೆಚ್ಚಿಸುವ ಫೋಕಸ್ ರಾಘು ತೆಗೆದ 10 ಮ್ಯಾಜಿಕ್ ಫೋಟೋಗಳು

“ವಾಕೆಬಲ್ ಮಲ್ಲೇಶ್ವರಂ” ಯೋಜನೆಯಡಿ ಮಲ್ಲೇಶ್ವರಂ ಅನ್ನು ಪಾದಚಾರಿ-ಸ್ನೇಹಿಯನ್ನಾಗಿ ಮಾಡಲು ಅವರು ಸಣ್ಣ ಸ್ಥಳೀಯ ಸಂಸ್ಥೆಗಳ ಒಕ್ಕೂಟದೊಂದಿಗೆ ಕೆಲಸ ಮಾಡುತ್ತಿದ್ದಾರೆ. ಮಲ್ಲೇಶ್ವರಂ ಸೋಷಿಯಲ್ ಎಂಬ ಸಮುದಾಯ ಕಟ್ಟಿಕೊಂಡು ಜೊತೆಗೆ ನೆರೆಹೊರೆಯ ಸಂಘಟನೆಯಾದ ಸೆನ್ಸಿಂಗ್ ಲೋಕಲ್, ಗೀಚಾಗಲು ಎಂಬ ಕಲಾವಿದರ ಗುಂಪು ಮತ್ತು ಯಂಗ್ ಲೀಡರ್ಸ್ ಫಾರ್ ಮೊಬಿಲಿಟಿ ಆಕ್ಷನ್ (YLMA) ಎಂಬ ಯುವ ಸಂಘಟನೆಯು ಈ ಯೋಜನೆಯನ್ನು ಜಂಟಿಯಾಗಿ ಕೈಗೆತ್ತಿಕೊಂಡಿದೆ.

ಕಳೆದ ಐದು ತಿಂಗಳುಗಳಿಂದ, ಅವರು ಕೆಲಸದಲ್ಲಿ ತಲ್ಲೀನರಾಗಿ, ಹಾದಿಗಳನ್ನು ಸುಂದರಗೊಳಿಸುತ್ತ  ಅವುಗಳನ್ನು ರೋಮಾಂಚಕ ವರ್ಣಚಿತ್ರಗಳಿಂದ, ಕಲೆಯಿಂದ ತುಂಬುತ್ತಾರೆ. ಕಲಾವಿದರು ಎಲ್ಲರೂ ಬೆಂಗಳೂರಿನ ಸ್ಥಳೀಯರು, ಶ್ರಿಸ್ತಿ ಇನ್ಸ್ಟಿಟ್ಯೂಟ್ ಆಫ್ ಆರ್ಟ್ ಮತ್ತು ಕರ್ನಾಟಕ ಚಿತ್ರಕಲಾ ಪರಿಷತ್ ಮುಂತಾದ ಸಂಸ್ಥೆಗಳಲ್ಲಿ ತರಬೇತಿ ಪಡೆದಿದ್ದಾರೆ.

ಮಲ್ಲೇಶ್ವರಂನ ಬೀದಿಗಳಲ್ಲಿ ಈಗ ಗುಬ್ಬಚ್ಚಿಗಳಿಗೆಂದೆ ಮೀಸಲಾಗಿರುವ ಕಲಾಕೃತಿಗಳಿವೆ, ಅಲ್ಲಿ ಅವುಗಳ ಚಿಲಿಪಿಲಿ ಬೆಳಗಿನ ಸಾಮಾನ್ಯ ಶಬ್ದವಾಗಿದೆ. ಒಂದು ಕಲಾಕೃತಿಯು ಸ್ಥಳೀಯ ತ್ಯಾಜ್ಯ ಕಾರ್ಮಿಕರ ಅದ್ಭುತವಾದ ಭಾವಚಿತ್ರವಾಗಿದ್ದು, ಅವರ ಮುಖ ಈಗ ನೆರೆಹೊರೆಯಲ್ಲಿ ಪರಿಚಿತವಾಗಿದೆ.

ಸ್ಥಳೀಯರಿಂದಲೂ ಸಿಕ್ಕಿದ ನೆರವು

“ಕನ್ಸರ್ವೆನ್ಸಿ ಲೇನ್‌ಗಳು ದೇವಾಲಯ,ಮಾರುಕಟ್ಟೆ ಮತ್ತು ಶಾಲೆಗಳನ್ನು ಸಂಪರ್ಕಿಸುವ ಸಣ್ಣ ಬೀದಿಗಳಾಗಿವೆ. ಈ ಬೀದಿಗಳು ಕಡಿಮೆ ಜನದಟ್ಟಣೆ ಹೊಂದಿದ್ದು, ಆದ್ದರಿಂದ ನಾವು ಅವುಗಳನ್ನು ಪಾದಚಾರಿಗಳ ಚಲನೆಗಾಗಿ ಪುನಃ ಬಳಿಸಿ, ಆದ್ಯತೆ ನೀಡಲು ಬಯಸುತ್ತೇವೆ” ಎಂದು ರಫೀಕ್  ಹೇಳಿದ್ದು ದಾಖಲಾಗಿದೆ.


ನೆರೆಹೊರೆಯು ಹೆಚ್ಚಾಗಿ ಹಳೆಯ ನಿವಾಸಿಗಳಿಂದ ಕೂಡಿದೆ, ಅವರು ಈ ಕಿರುದಾರಿಗಳನ್ನ ಉತ್ತಮವಾಗಿ ನಿರ್ವಹಿಸಿ ಸುರಕ್ಷಿತವಾದ ವಾಕಿಂಗ್ ಲೇನ್‌ಗಳಾಗಿ ಬಳಸಿಕೊಳ್ಳಬಹುದು. ಕಳೆದ ಕೆಲವು ತಿಂಗಳುಗಳಲ್ಲಿ, ಕಲಾವಿದರು ಭೇಟಿ ನೀಡಿ ಬೀದಿಯ ಗೋಡೆಗಳ ಮೇಲೆ ಚಿತ್ರಿಸಲು ಗಂಟೆಗಳ ಕಾಲ ಕಳೆದಾಗ, ಕಲಾವಿದರು ನಿವಾಸಿಗಳೊಂದಿಗೆ ಉತ್ತಮ ಸ್ನೇಹವನ್ನು ಬೆಳೆಸಿಕೊಂಡರು. ಸ್ಥಳೀಯರು ಪ್ರತಿದಿನ ಸಂಜೆ ಕಾಫಿ ಅಥವಾ ತಾಜಾ ಹಲಸಿನ ತುಂಡುಗಳನ್ನು ತರುತ್ತಿದ್ದರು. ಕೆಲವೊಮ್ಮೆ, ಅವರು ಕುಂಚವನ್ನು ಎತ್ತಿಕೊಂಡು ಖುದ್ದು ತಾವೇ ಗೋಡೆಯ ಒಂದು ಭಾಗವನ್ನು ಚಿತ್ರಿಸಲು ಸಹಾಯ ಮಾಡುತ್ತಿದ್ದರು. 

ಬೀದಿ ಕಲೆ (Street Art) ಮಲ್ಲೇಶ್ವರಂ ಮತ್ತು ಬೆಂಗಳೂರಿನಲ್ಲಿ ಇದೇ ರೀತಿಯ ಇತರ ನೆರೆಹೊರೆಗಳಲ್ಲಿ ಬರಲಿರುವ ಅನೇಕ ಪ್ರಯತ್ನಗಳಿಗೆ ಮೊದಲ ಹೆಜ್ಜೆಯಾಗಿದೆ. 

ಸದ್ಯ ಕೊರೋನಾ ಪರಿಸ್ಥಿತಿ ತಣ್ಣಗಾದ ನಂತರ ಈ ಬೀದಿಗಳಲ್ಲಿ ನಡಿಗೆಗಳನ್ನು ಆಯೋಜಿಸುವ ಯೋಜನೆಗಳಿವೆ ಮತ್ತು ಪ್ರತಿ ಕಲಾಕೃತಿಗಳ ಪಕ್ಕದಲ್ಲಿ ಕ್ಯೂಆರ್ ಕೋಡ್‌ಗಳನ್ನು ಸಹ ಸ್ಥಾಪಿಸಿ, ಅದರಿಂದ ದಾರಿಹೋಕರು ತಮ್ಮ ರಚನೆಯ ಪ್ರಕ್ರಿಯೆಯ ಬಗ್ಗೆ ಮಾತನಾಡುವ ಕಲಾವಿದರ ವೀಡಿಯೊಗಳನ್ನು ಪರಿಚಯಸುವುದಿದೆ. ಸದ್ಯಕ್ಕೆ, ದಕ್ಕಿದ ಅತಿದೊಡ್ಡ ಗೆಲುವು ಎಂದರೆ, ನಿವಾಸಿಗಳಿಂದ ಹಿಡಿದು ಸ್ಥಳೀಯ ಅಧಿಕಾರಿಗಳವರೆಗೆ ಎಲ್ಲರೂ ಯೋಜನೆಯ ಬಗ್ಗೆ ಹೆಮ್ಮೆಯ ಭಾವನೆ ಹೊಂದಿದ್ದಾರೆ. 

ಒಟ್ಟಿನಲ್ಲಿ ಗತಕಾಲದ ಬೀದಿಗಳನ್ನು ಕಲೆಯಿಂದ ಶೃಂಗರಿಸಿದ್ದು ಒಂದು ಅತ್ಯುತ್ತಮ ಪ್ರಯತ್ನ. ಇಂತಹದೇ ಕಲಾಕೃತಿಗಳು ಇನ್ನಷ್ಟೂ ಬೀದಿಗಳಲ್ಲಿ ಅರಳಿದರೆ ನಾಡು ವರ್ಣರಂಜಿತವಾಗಲಿದೆ.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button