ಅಂಧನಾಗಿದ್ದರೂ ಎವರೆಸ್ಟ್ ಶಿಖರವೇರಿ ಸೈ ಎನಿಸಿಕೊಂಡ ಜಂಗ್ ಹಾಂಗ್ ಸ್ಫೂರ್ತಿ ಕಥೆ
ನಾವು ದೈಹಿಕವಾಗಿ ಸದೃಢವಾಗಿದ್ದರೂ, ಕೆಲವೊಮ್ಮೆ ಸವಾಲು ಎಂದೆನಿಸುವ ಕೆಲಸಕ್ಕೆ ಕೈ ಹಾಕುವುದಿಲ್ಲ. ನಮ್ಮಿಂದ ಆಗುವುದಿಲ್ಲ ಎಂದು ಕೈ ಕಟ್ಟಿ ಕುಳಿತು ಬಿಡುತ್ತೇವೆ. ಆದರೆ , ಚೀನಾದ ಜಂಗ್ ಹಾಂಗ್ ಎನ್ನುವ ವ್ಯಕ್ತಿ ಕಣ್ಣಿಲ್ಲದಿದ್ದರೂ ಮೌಂಟ್ ಎವರೆಸ್ಟ್ ಶಿಖರವೇರಿದ್ದಾರೆ.
ಈ ಸಾಧನೆ ಮಾಡಿದ ಏಷ್ಯಾದ ಮೊದಲ ವ್ಯಕ್ತಿ, ಜಗತ್ತಿನ ಮೂರನೇ ವ್ಯಕ್ತಿ ಎನ್ನುವ ಗೌರವಕ್ಕೆ ಪಾತ್ರರಾಗಿದ್ದಾರೆ. ಜಂಗ್ ಹಾಂಗ್ (Zhang hang) ಅವರು ಶಿಖರ ಏರಿದ ಕಥೆಯಿದು. ನಿಮಗೂ ಸ್ಫೂರ್ತಿ ಆಗಬಹುದು.
- ನವ್ಯಶ್ರೀ ಶೆಟ್ಟಿ
ನಮಗೆ ಸಾಧಿಸಬೇಕು ಎನ್ನುವ ಛಲ,ಮನಸ್ಸು ಇದ್ದಲ್ಲಿ ನಮ್ಮೊಳಗಿನ ಯಾವುದೇ ನ್ಯೂನ್ಯತೆ ನಮ್ಮ ಸಾಧನೆಯ ಹಾದಿಗೆ ಅಡ್ಡಿಯಾಗುವುದಿಲ್ಲ. ತಮ್ಮೊಳಗಿನ ದೈಹಿಕ, ನ್ಯೂನ್ಯತೆಗಳನ್ನು ಮೆಟ್ಟಿ ನಿಂತು ಸಾಧಿಸಿದವರು ಅನೇಕರು. ಅವರ ಕನಸುಗಳಿಗೆ ನ್ಯೂನ್ಯತೆಗಳು ಅಡ್ಡಿಯಾಗಿಲ್ಲ. ಅದಕ್ಕೆ ಮುಖ್ಯ ಕಾರಣ ಸಾಧಿಸಬೇಕು ಎನ್ನುವ ಅವರೊಳಗಿನ ಛಲ. ತನಗೆ ದೃಷ್ಟಿ ಇಲ್ಲದಿದ್ದರೂ ಮೌಂಟ್ ಎವರೆಸ್ಟ್ ಶಿಖರ ಏರಿ ಎಲ್ಲರೂ ತನ್ನತ್ತ ದೃಷ್ಟಿ ಹಾಯಿಸುವಂತೆ ಮಾಡಿದ್ದಾರೆ ಜಂಗ್ ಹಾಂಗ್ (Zhang hang).
ಎವರೆಸ್ಟ್ ಏರಿದ ಏಷ್ಯಾದ ಮೊದಲ ಅಂಧ ವ್ಯಕ್ತಿ
ಜಂಗ್ ಹಾಂಗ್ ಮೂಲತಃ 46 ವರ್ಷದ ಚೀನಾ (china) ದೇಶದ ವ್ಯಕ್ತಿ. ಜಂಗ್ ದೃಷ್ಟಿಹೀನರು. ಆದರೆ ಇವರ ಕನಸಿಗೆ ಯಾವುದೇ ದೃಷ್ಟಿಹೀನತೆ ಅಡ್ಡಿಯಾಗಿಲ್ಲ . ಜಗತ್ತಿನ ಅತ್ಯುನ್ನತ ಶಿಖರ ಮೌಂಟ್ ಎವರೆಸ್ಟ್ (Mount Everest) ಏರುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ. ಎಲ್ಲರೂ ಒಮ್ಮೆಲೆ ಹುಬ್ಬೇರುವಂತೆ ಸಾಧಿಸಿದ್ದಾರೆ.
ಅಂಧ ವ್ಯಕ್ತಿ ಶಿಖರ ಏರುವುದು ಸುಲಭದ ಮಾತಲ್ಲ. ಅದೊಂದು ರೀತಿ ಸವಾಲು. ಈ ಸವಾಲನ್ನು ಸಾಧಿಸಿ ತೋರಿಸಿದ ಏಷ್ಯಾದ ಮೊದಲ ವ್ಯಕ್ತಿ ,ಜಗತ್ತಿನ ಮೂರನೇ ವ್ಯಕ್ತಿ ಜಂಗ್ ಹಾಂಗ್. ಜಂಗ್ ತಮ್ಮ ಮೊದಲ ಪ್ರಯತ್ನದಲ್ಲಿಯೇ ಈ ಸಾಧನೆ ಮಾಡಿ ಸೈ ಎನಿಸಿ ಕೊಂಡಿದ್ದಾರೆ.
ನೀವುಇದನ್ನುಇಷ್ಟಪಡಬಹುದು: 81ನೇ ವಯಸ್ಸಲ್ಲಿ ಹಿಮಾಲಯ ಏರಿದ ಫ್ಯಾಂಟಮ್ ಅಮ್ಮ ಉಷಾ ಸೋಮನ್: ಅಮ್ಮಂದಿರ ದಿನದ ವಿಶೇಷ
ಮೂವರು ನುರಿತ ಮಾರ್ಗದರ್ಶಕರ ಜೊತೆ ಜಂಗ್ 8849 ಅಡಿ ಎತ್ತರದ ಹಿಮಾಲಯ ಶಿಖರ ಏರಿದ್ದಾರೆ. ಮೇ ತಿಂಗಳ 24 ರಂದು ಹಿಮಾಲಯದ ತುತ್ತತುದಿ ತಲುಪಿ ಜಂಗ್ ಸಂಭ್ರಮಿಸಿದ್ದಾರೆ.
ಜಂಗ್ ಹುಟ್ಟು ಕುರುಡರಲ್ಲ. ಬದುಕಿನಲ್ಲಿ ಎದುರಾದ ಆಕಸ್ಮಿಕ ಘಟನೆ ಅವರನ್ನು ಕುರುಡರನ್ನಾಗಿ ಮಾಡಿದೆ. ಚೀನಾದ ಚಾಂಗ್ಕಿಂಗ್(Chongqing) ನಗರದವರು. ಸಾಧಿಸುವ ಹುಮ್ಮಸ್ಸು ಉತ್ತುಂಗದಲ್ಲಿರುವ ಯೌವ್ವನದಲ್ಲಿ ತನ್ನ ಕಣ್ಣಿನ ದೃಷ್ಟಿಯನ್ನು ಕಳೆದುಕೊಂಡರು. ಗ್ಲುಕೋಮಾ (Glaucoma)ಗೆ ತುತ್ತಾಗಿ ಕಣ್ಣಿನ ದೃಷ್ಟಿಯನ್ನು ಕಳೆದುಕೊಂಡರು. ಆದರೆ ಎದೆ ಗುಂದಲಿಲ್ಲ.
ಸದೃಢ ಮನಸ್ಥಿತಿಯನ್ನು ನೀವು ಹೊಂದಿದ್ದಲ್ಲಿ ದೈಹಿಕ ನ್ಯೂನ್ಯತೆ, ದೈಹಿಕ ಸಮರ್ಥರು ಅನ್ನುವ ವಿಷಯ ಪರಿಗಣನೆಗೆ ಬರುವುದಿಲ್ಲ. ದೈಹಿಕ ಕುಂದು ಕೊರತೆಗಳ ನಡುವೆ ನೀವು ಸಾಧಿಸಬಹುದು. ಇತರರು ನಿಮ್ಮಿಂದ ಆಗುವುದಿಲ್ಲ ಎನ್ನುವ ಕೆಲಸವನ್ನು ಕೂಡ ನೀವು ಸಾಧಿಸಿ ತೋರಿಸಬಹುದು ಆದರೆ ನಿಮ್ಮ ಗಟ್ಟಿ ಮನಸ್ಸು ಮುಖ್ಯ ಎನ್ನುತ್ತಾರೆ ಜಂಗ್.
ಶಿಖರ ಹತ್ತುವ ಸಮಯದಲ್ಲಿ ಜಂಗ್ ಅವರಿಗೆ ಕೊಂಚ ಭಯವಿತ್ತು. ಮೌಂಟ್ ಎವರೆಸ್ಟ್ ಹತ್ತುವ ಸಮಯದಲ್ಲಿ, ಯಾವ ದಾರಿಯಲ್ಲಿ ಇದ್ದೇನೆ, ಯಾವ ಹಾದಿಯಲ್ಲಿ ಸಾಗಬೇಕು ಎನ್ನುವುದು ಅವರಿಗೆ ಕಾಣಿಸುತ್ತಿರಲಿಲ್ಲ.
ಕೆಲವೊಮ್ಮೆ ಶಿಖರ ಹತ್ತುವ ಸಮಯದಲ್ಲಿ ಎಡವಿ ಬಿದ್ದಿರುವುದು ಇದೆ. ಆದರೆ ತನ್ನ ಹಾದಿಯಿಂದ ಹಿಂದೆ ಸರಿದಿಲ್ಲ. ಅದು ಕಷ್ಟದ ಹಾದಿಯೆಂದು ಗೊತ್ತಿದ್ದರೂ ಕೂಡ ಛಲ ಬಿಡಲಿಲ್ಲ. ಇವರಿಗೆ ಪಯಣದಲ್ಲಿ ಸವಾಲುಗಳು, ತೊಂದರೆಗಳು ಎದುರಾಗಿತ್ತು. ಆದರೆ ಶಿಖರದ ತುದಿ ತಲುಪಬೇಕು ಎನ್ನುವ ಇವರ ದೃಢ ಮನಸ್ಸಿನಿಂದ ತುತ್ತತುದಿ ತಲುಪಲು ಸಾಧ್ಯವಾಗಿದ್ದು.
ಜಂಗ್ ಹಾಂಗ್ ಅವರಿಗೆ ಸ್ಫೂರ್ತಿ ಎರಿಕ್
ಮೌಂಟ್ ಎವರೆಸ್ಟ್ ಏರಬೇಕು ಎನ್ನುವ ಜಂಗ್ ಹಾಂಗ್ ಅವರ ಕನಸಿಗೆ ಸ್ಪೂರ್ತಿ ಒಬ್ಬ ಅಂಧ ವ್ಯಕ್ತಿ ಅನ್ನುವುದು ವಿಶೇಷ. 2001ರಲ್ಲಿ ಮೌಂಟ್ ಎವರೆಸ್ಟ್ ಶಿಖರ ಏರಿದ ಅಂಧ (blind) ವ್ಯಕ್ತಿ ಎರಿಕ್ ವೀಹ್ನ್ಮಾ ಯರ್ (Erik weihnmayer) ಜಂಗ್ ಅವರಿಗೆ ಪ್ರೇರಣೆ . ಎರಿಕ್ ಅವರಿಗೆ ಮಾರ್ಗದರ್ಶನ ಮಾಡಿದ್ದ ವ್ಯಕ್ತಿಯ ಸ್ನೇಹಿತ ಕಿಯಾಂಗ್ ಜಿ (qiang zi) ಅವರಿಂದ ಮಾರ್ಗದರ್ಶನ ಪಡೆದುಕೊಂಡು ಜಂಗ್ ಹಾಂಗ್ ಈ ಸಾಧನೆ ಮಾಡಿದ್ದಾರೆ. ತಮ್ಮ ಸಾಧನೆಯ ಮೂಲಕ ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ.
ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ