ದೂರ ತೀರ ಯಾನವಿಂಗಡಿಸದಸಂಸ್ಕೃತಿ, ಪರಂಪರೆ

ಪುರಾತನ ಮತ್ತು ಸುಪ್ರಸಿದ್ಧ ಪುರಿ ಜಗನ್ನಾಥ ರಥ ಯಾತ್ರೆ 2023

ಭಾರತೀಯ ಪರಂಪರೆಯ ಐತಿಹಾಸಿಕ ಕ್ಷೇತ್ರಗಳಲ್ಲಿ ಒಡಿಶಾದ ಜಗನ್ನಾಥ ಪುರಿಯೂ ಕೂಡ ಒಂದು. ಪ್ರಸಿದ್ಧ “ಚಾರ್ ಧಾಮ” ಯಾತ್ರೆಗಳಲ್ಲಿ ಈ ಕ್ಷೇತ್ರವೂ ಕೂಡ ಒಂದೆನಿಸಿದೆ. ಇಲ್ಲಿ ಪ್ರತಿವರ್ಷ ನಡೆಯುವ “ರಥ ಯಾತ್ರೆ”ಯು ದೇಶದ ಪುರಾತನ ಮತ್ತು ಅತಿ ದೊಡ್ಡ ಯಾತ್ರೆಯಾಗಿದೆ.

▪︎ ಉಜ್ವಲ ವಿ. ಯು.

ರಥ ಯಾತ್ರೆ ಆಚರಿಸುವ ದಿನ:

ಚಿತ್ರಕೃಪೆ: @jagannathdarshan_official

ಈ ಯಾತ್ರೆಯು ಪ್ರತಿವರ್ಷ ಆಷಾಢ ಮಾಸ ಶುಕ್ಲ ಪಕ್ಷದ ದ್ವಿತೀಯ ತಿಥಿಯಂದು ಆರಂಭಗೊಳ್ಳುತ್ತದೆ. ಮತ್ತು ಒಂಭತ್ತು ದಿನಗಳ ಕಾಲ ಅದ್ದೂರಿಯಾಗಿ ಆಚರಿಸ್ಪಡುತ್ತದೆ. ಈ ವರ್ಷ ಈ ಯಾತ್ರೆಯು ಜೂ.20, 2023 ರಂದು ಆರಂಭಗೊಂಡಿದೆ. ಜೂ.28,2023 ದಶಮಿಯಂದು ಮುಕ್ತಾಯಗೊಳ್ಳುತ್ತದೆ.

ರಥ ಯಾತ್ರೆಯ ಮಹತ್ತ್ವಮತ್ತು ಆಚರಣೆ:

ಚಿತ್ರಕೃಪೆ: @jagannathdarshan_official

ಪುರಿ ಜಗನ್ನಾಥ ದೇವಾಲಯದಲ್ಲಿ ಭಗವಾನ್ ಜಗನ್ನಾಥ, ಬಲರಾಮ ಮತ್ತು ಸುಭದ್ರಾದೇವಿಯ ಮರದ ವಿಗ್ರಹವನ್ನು ಪೂಜಿಸಲಾಗುತ್ತದೆ. ರಥ ಯಾತ್ರೆಯ ದಿನದಂದು ಈ ಮೂರು ದೇವರುಗಳ ರಥಗಳನ್ನು ಸಿದ್ಧಪಡಿಸಲಾಗುತ್ತದೆ.

ಈ ರಥಗಳು ಮರದಿಂದ ಮಾಡಲ್ಪಟ್ಟಿದ್ದು, ಸ್ಥಳೀಯ ಕಲಾವಿದರೇ ಇದನ್ನು ವಿನ್ಯಾಸಗೊಳಿಸುತ್ತಾರೆ. ದ್ವಿತೀಯ ತಿಥಿಯಂದು ಹೊರಡುವ ಈ ಮೂರು ರಥಗಳನ್ನು 3 ಕಿ.ಮೀ ದೂರದಲ್ಲಿರುವ ಗುಂಡಿಚಾ ದೇವಾಲಯಕ್ಕೆ ಒಯ್ಯಲಾಗುತ್ತದೆ. ಗುಂಡಿಚಾ ದೇವಾಲಯದಲ್ಲಿ ಈ ಮೂರು ರಥಗಳನ್ನು ಒಂಭತ್ತು ದಿನಗಳ ಕಾಲ ಇರಿಸಲಾಗುತ್ತದೆ. ಈ ಯಾತ್ರೆಯು ಜಗನ್ನಾಥ ದೇವಾಲಯದಿಂದ ಗುಂಡಿಚಾ ದೇವಾಲಯಕ್ಕೆ ಭಗವಾನ್ ಜಗನ್ನಾಥ, ಬಲರಾಮ ಮತ್ತು ಸುಭದ್ರಾದೇವಿಯ ಪ್ರಯಾಣವನ್ನು ಸಂಕೇತಿಸುತ್ತದೆ.

ಈ ಮೆರವಣಿಗೆಯು ಧಾರ್ಮಿಕ ಸ್ತೋತ್ರಗಳ ಪಠಣ, ಸಾಂಪ್ರದಾಯಿಕ ಸಂಗೀತ, ವಾದ್ಯ ಮತ್ತು ಜಾನಪದ ನೃತ್ಯಗಳಿಂದ ಕೂಡಿರುತ್ತದೆ. ಅಸಂಖ್ಯಾತ ಭಕ್ತಾದಿಗಳು ಈ ರಥ ಯಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ.

ಚಿತ್ರಕೃಪೆ: @jagannathdarshan_official

ರಥ ಯಾತ್ರೆಯ ನಂತರದ ನಾಲ್ಕನೇ ದಿನ, ಲಕ್ಷ್ಮಿ ದೇವಿಯು ಜಗನ್ನಾಥನನ್ನು ಹುಡುಕುತ್ತಾ, ಗುಂಡಿಚಾ ದೇವಸ್ಥಾನಕ್ಕೆ ಭೇಟಿ ನೀಡುತ್ತಾಳೆ ಎಂಬ ನಂಬಿಕೆ ಇದೆ. ಇದನ್ನು “ಹೇರಾ ಪಂಚಮಿ” ಎಂದು ಆಚರಿಸಲಾಗುತ್ತದೆ.

ಭಗವಾನ್ ಜಗನ್ನಾಥನು ಗುಂಡಿಚಾ ದೇವಸ್ಥಾನದಲ್ಲಿ ಎಂಟು ದಿನಗಳ ಕಾಲ ವಿಶ್ರಾಂತಿ ಪಡೆಯುತ್ತಾನೆ ಮತ್ತು ನಂತರ ತನ್ನ ಮುಖ್ಯ ನಿವಾಸಕ್ಕೆ ಹಿಂದಿರುಗುತ್ತಾನೆ. ಹಿಂದಿರುಗುವ ದಶಮಿ ತಿಥಿಯನ್ನು  “ಬಹುಡಾ ಯಾತ್ರೆ” ಎಂದು ಕರೆಯಲಾಗುತ್ತದೆ. ಈ ಸಮಯದಲ್ಲಿ ಭಗವಂತನು ಅರ್ಧಶಿನಿ ದೇವಿಗೆ ಸಮರ್ಪಿತವಾಗಿ “ಮೌಸಿ ಮಾ ದೇವಸ್ಥಾನ”ಕ್ಕೆ ಭೇಟಿ ನೀಡುತ್ತಾನೆ.ದೇವಶಯಾನಿ ಏಕಾದಶಿಯ ಮುಹೂರ್ತದ ಮೊದಲು, ಭಗವಾನ್ ಜಗನ್ನಾಥನು ತನ್ನ ಮುಖ್ಯ ನಿವಾಸಕ್ಕೆ ಹಿಂದಿರುಗುತ್ತಾನೆ ಮತ್ತು ನಾಲ್ಕು ತಿಂಗಳ ಕಾಲ ನಿದ್ರಿಸುತ್ತಾನೆ ಎಂಬ ನಂಬಿಕೆ ಇದೆ.

ರಥದ ವಿನ್ಯಾಸ:

ಚಿತ್ರಕೃಪೆ: @jagannathdarshan_official

ಭಗವಾನ್ ಜಗನ್ನಾಥನ ರಥವು 45 ಅಡಿ ಎತ್ತರವನ್ನು ಮತ್ತು 16 ಚಕ್ರಗಳನ್ನು ಒಳಗೊಂಡಿರುತ್ತದೆ. ಇದನ್ನು ನಂದಿಘೋಷ ಎಂದು ಕರೆಯಲಾಗುತ್ತದೆ. ಭಗವಾನ್ ಬಲಭದ್ರನ ರಥವು 14 ಚಕ್ರಗಳೊಂದಿಗೆ 45.6 ಅಡಿ ಎತ್ತರವಿರುತ್ತದೆ. ಇದನ್ನು “ತಾಳಧ್ವಜ” ಎಂದು ಹೆಸರಿಸಲಾಗಿದೆ. ಸುಭದ್ರೆಯ ರಥವು 44.6 ಅಡಿ ಎತ್ತರವಿರುತ್ತದೆ ಮತ್ತು 12 ಚಕ್ರಗಳನ್ನು ಹೊಂದಿರುತ್ತದೆ. ಇದನ್ನು “ದೇವದಳ” ಎಂದು ಕರೆಯಲಾಗುತ್ತದೆ.

ಈ ಹಬ್ಬವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಆಚರಿಸಲಾಗುತ್ತದೆ. ಪ್ರತಿವರ್ಷ ಲಕ್ಷಾಂತರ ಭಕ್ತಾದಿಗಳನ್ನು ಈ ಯಾತ್ರೆ ಆಕರ್ಷಿಸುತ್ತದೆ. ವಿದೇಶಿಯರು ಈ ಯಾತ್ರೆವನ್ನು “ಕಾರು ಉತ್ಸವ” ಎಂದು ಕರೆಯುತ್ತಾರೆ. ಭಾರತೀಯರಿಗೆ ಈ ಯಾತ್ರೆ ಹೆಮ್ಮೆ ಮತ್ತು ಧಾರ್ಮಿಕತೆಯ ಸಂಕೇತ. ಇಂತಹ ದೊಡ್ಡ ಯಾತ್ರೆಯನ್ನು ಜೀವನದಲ್ಲಿ ಒಂದೊಮ್ಮೆಯಾದರೂ ಕಣ್ತುಂಬಿಕೊಳ್ಳಲೇಬೇಕು.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.

ಕನ್ನಡ.ಟ್ರಾವೆಲ್ (Kannada.travel) ಜಾಲತ ಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button