ಮಲ್ಪೆ ಕಡಲ ತೀರದಲ್ಲಿ ಸುದ್ದಿ ಮಾಡುತ್ತಿದೆ ಶಾವಿಗೆ ಎಳೆಯಂತಹ ಪಾಚಿ
ಉಡುಪಿಯ ಮಲ್ಪೆ ಕಡಲತೀರದಲ್ಲಿ ರಾಶಿ ರಾಶಿ ಅಪರೂಪದ ಪಾಚಿಗಳು ರಾತ್ರಿ ಬೆಳಗಾಗುವುದರೊಳಗಾಗಿ ಬಂದು ಬಿದ್ದಿವೆ. ಇದಕ್ಕೆ ಇತ್ತೀಚೆಗೆ ಸಂಭವಿಸಿದ ಬಿಫರ್ ಜಾಯ್ ಚಂಡಮಾರುತದ ಅಬ್ಬರವೇ ಕಾರಣ ಎನ್ನಲಾಗಿದೆ.
• ಉಜ್ವಲಾ. ವಿ. ಯು.
ಇತ್ತೀಚಿಗೆ ಬಿಫರ್ ಜಾಯ್ ಚಂಡಮಾರುತವು ಕರ್ನಾಟಕದ ಕರಾವಳಿಯಲ್ಲಿ ಅಬ್ಬರಿಸಿತ್ತು. ಯಾವುದೇ ಚಂಡಮಾರುತ ಸಂಭವಿಸಿದಾಗಲೂ ಸಮುದ್ರದ ಒಡಲಲ್ಲಿರುವ ತ್ಯಾಜ್ಯಗಳೂ ತೀರಕ್ಕೆ ಬಂದು ಸೇರುವುದು ಸಹಜ. ಅದೇ ಸಂದರ್ಭದಲ್ಲಿ ಅನೇಕ ವಿಶಿಷ್ಟ ವಸ್ತು, ಪ್ರಾಣಿ, ಸಸ್ಯ ಗಳೂ ತೀರ ಸೇರಿರುವುದನ್ನು ನಾವು ಕಂಡಿದ್ದೇವೆ. ಈಗಲೂ ಕಸಕಡ್ಡಿಗಳು, ಪ್ಲಾಸ್ಟಿಕ್ ತ್ಯಾಜ್ಯಗಳು, ಬಲೆ, ವಾಹನ ಟಯರ್, ನೀರಿನ ಬಾಟಲ್ ಗಳ ಜೊತೆಗೆ ಅಂತಹದೇ ವಿಶಿಷ್ಟ ಪಾಚಿಯು ಕಂಡು ಬಂದಿದೆ. ಕಡಲ ತೀರದ ಉದ್ದಕ್ಕೂ ಕಿಲೋ ಮೀಟರ್ ಗಟ್ಟಲೆ ಈ ಪಾಚಿಯ ರಾಶಿಯು ಬಂದುಬಿದ್ದಿದೆ. ಕಡಲ ತೀರದ ಮರಳಿನ ರಾಶಿ ಕಾಣದಷ್ಟು ದಟ್ಟವಾಗಿ ಇದು ಹಬ್ಬಿಕೊಂಡಿದೆ.
ಇದು ಕಂಡು ಬಂದ ಕೂಡಲೇ ಇದರ ಪರಿಶೀಲನೆಗಾಗಿ ತಂಡವನ್ನು ರಚಿಸಲಾಗಿದೆ. ಮೀನುಗಾರಿಕಾ ಮಹಾ ವಿದ್ಯಾಲಯದ ಪ್ರಾಧ್ಯಾಪಕರಾದ ಶಿವಕುಮಾರ್ ನೇತೃತ್ವದ ತಂಡ ಇದರ ಪರಿಶೀಲನೆ ನಡೆಸಿದೆ. ಈ ಶಾವಿಗೆ ರೂಪದ ಪಾಚಿಯನ್ನು “ಸಲೋಫೇನ್ ಟ್ಯೂಬ್ ವಾರ್ಮ್ (Cellophane Tube Worms) ” ಎಂದು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಹೆಚ್ಚಿನ ಸಂಶೋಧನೆಗಾಗಿ ಪಾಚಿಯ ಮಾದರಿ ಸಂಗ್ರಹಿಸಲಾಗಿದೆ.
ಆಡು ಭಾಷೆಯಲ್ಲಿ ಈ ಪಾಚಿಯನ್ನು “ಗಂಗೆಯ ಕೂದಲು” ಎಂದು ಕರೆಯಲಾಗುತ್ತದೆ. ದಶಕಗಳ ಹಿಂದೆ ಇಂತಹದೇ ಪಾಚಿಯು ಕಡಲತೀರದಲ್ಲಿ ರಾಶಿ ಬಿದ್ದಿದ್ದವು. ಮೂರ್ನಾಲ್ಕು ವರ್ಷಗಳ ಹಿಂದೆ ಇಂತಹ ವಸ್ತು ಪಣಂಬೂರು ಸಮುದ್ರದ ತೀರದಲ್ಲೂ ಕಂಡು ಬಂದಿತ್ತು. ಹಾಗಾಗಿ ಇಂತಹ ವಿಶಿಷ್ಟ ವಿದ್ಯಮಾನ ಸಂಭವಿಸಿರುವುದು ಇದೇ ಮೊದಲೇನಲ್ಲ. ನೋಡಲು ಇವು ಕಸದಂತೆ ಕಂಡರೂ ಇದಕ್ಕೆ ಯಾವುದೇ ರೀತಿಯ ದುರ್ವಾಸನೆ ಇಲ್ಲ ಹಾಗೂ ನೋಡಲು ಹುಲ್ಲಿನ ರಾಶಿಯಂತೆ ಅಥವಾ ಶಾವಿಗೆಯ ಎಳೆಯಂತೆ ಕಾಣುತ್ತವೆ.
ನೀವು ಇದನ್ನೂ ಇಷ್ಟ ಪಡಬಹುದು: ಉಡುಪಿಯಲ್ಲಿ ನೀವು ಅಡ್ಡಾಡಬೇಕಾದ 4 ಕಡಲ ತೀರಗಳು
ಚಂಡಮಾರುತದ ಕಾರಣ ಕಡಲತೀರದಲ್ಲಿ ಉಪ್ಪಿನ ಅಂಶ ಕಡಿಮೆಯಾದ ಹಿನ್ನಲೆಯಲ್ಲಿ ಜೀವಿಗಳು ಸತ್ತು ರಾಶಿಯಾಗಿ ಈ ರೀತಿ ಕಡಲತೀರವನ್ನು ಬಂದು ಸೇರುತ್ತವೆ. ಮತ್ತೆ ಅಬ್ಬರದ ಕಡಲಿನ ಅಲೆಗಳು ತೀರವನ್ನು ಅಪ್ಪಳಿಸಿದಾಗ, ಅವು ಈ ರಾಶಿಯನ್ನು ಹೊತ್ತು ಮತ್ತೆ ಕಡಲಿನ ಒಡಲಿಗೆ ಹಾಕುತ್ತದೆ. ಇವು ಕಡಲಾಳದ ಮೀನುಗಳಿಗೆ ಅತ್ಯುತ್ತಮ ಆಹಾರವಾಗಿದೆ. ಆದ್ದರಿಂದ ಯಾರೂ ಸಹ ಭೀತಿಗೊಳಗಾಗುವ ಅವಶ್ಯಕತೆ ಇಲ್ಲ ಎಂದು ಸಂಶೋಧಕರು ತಿಳಿಸಿದ್ದಾರೆ. ಇದೀಗ ರಾಶಿ ಬಿದ್ದಿರುವ ವಿಶಿಷ್ಟ ವಸ್ತುವನ್ನು ಕಾಣಲು, ಅನೇಕ ಜನ ಸಮುದ್ರ ತೀರಕ್ಕೆ ಭೇಟಿ ನೀಡುತ್ತಿದ್ದಾರೆ.
“ಕಡಲತೀರಗಳಿಗೆ ಭೇಟಿ ನೀಡಿದಾಗ ಪ್ಲಾಸ್ಟಿಕ್ ಬಾಟಲಿಗಳು, ಚಪ್ಪಲಿಗಳು ,ತಿಂಡಿ ಪೊಟ್ಟಣಗಳು, ಬಳಸಿ ಬಿಸಾಡಿದ ಮೀನಿನ ಬಲೆಗಳು, ರೋಪ್ಗಳಿಂದ ಸಮುದ್ರವನ್ನು ಮಲಿನ ಮಾಡದಿರಿ. ಇದರಿಂದ ಸಮುದ್ರ ಜೀವಿಗಳ ಜೀವ ಮತ್ತು ನಮ್ಮ ಜೀವನಕ್ಕೂ ತೊಂದರೆ. ಹಾಗೂ ಇಂತಹ ವಿಷಕಾರಿ ತ್ಯಾಜ್ಯದಿಂದ ತೀರದಲ್ಲಿ ನಡೆಸುವ ಸಾಂಪ್ರದಾಯಿಕ ಮೀನುಗಾರಿಕೆಗೂ ತೊಂದರೆಯಾಗಲಿದೆ. ಆದ ಕಾರಣ ಕಡಲತೀರಗಳಿಗೆ ಭೇಟಿ ನೀಡಿದಾಗ ಹೆಚ್ಚು ಜಾಗೃತವಾಗಿರೋಣ ಹಾಗೂ ಜವಾಬ್ದಾರಿಯಿಂದ ವರ್ತಿಸೋಣ.”
ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ಕನ್ನಡ.ಟ್ರಾವೆಲ್ (Kannada.travel) ಜಾಲತ ಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.