ಬೀದರಿನಲ್ಲಿದೆ ವಿಶ್ವದ ಏಕೈಕ ಜಲಾಂತರ್ಗತ ನರಸಿಂಹ ದೇವಾಲಯ
ಝರಣಿ ನರಸಿಂಹ ದೇವಾಲಯವು ಬೀದರಿನಲ್ಲಿರುವ ವಿಶ್ವದ ಏಕೈಕ ಜಲಾಂತರ್ಗತ ನರಸಿಂಹ ದೇವಾಲಯವಾಗಿದೆ. ಪ್ರತಿವರ್ಷ ಸಾವಿರಾರು ಭಕ್ತಾದಿಗಳು ತಮ್ಮ ಇಷ್ಟಾರ್ಥಪೂರ್ತಿಗಾಗಿ ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ.
• ಉಜ್ವಲಾ. ವಿ. ಯು
ಸ್ಥಳ:
ಝರಣಿ ನರಸಿಂಹ ದೇವಾಲಯ ಇರುವುದು ಬೀದರಿನಿಂದ 10 ಕಿಮೀ ದೂರದಲ್ಲಿರುವ ಮಣಿಚೂಳ ಬೆಟ್ಟದ ಶ್ರೇಣಿಯಲ್ಲಿ. ಈ ದೇವಾಲಯ ತನ್ನ ವಿಶಿಷ್ಟವಾದ ರಚನೆಗೆ ಹೆಸರುವಾಸಿಯಾಗಿದೆ. ಗುಹೆಯೊಳಗೆ ನೆಲೆಗೊಂಡಿರುವ ದೇವಾಲಯ ಇದಾಗಿದ್ದು, ಸುಮಾರು 300 ಮೀಟರ್ ಗಳವರೆಗೆ ನೀರಿನ ಹರಿವನ್ನು ಹೊಂದಿದೆ. ಭಕ್ತಾದಿಗಳು ಈ ನೀರಿನ ಮೂಲಕವೇ ನಡೆದು ಭಗವಾನ್ ನರಸಿಂಹನ ದರ್ಶನ ಪಡೆಯಬೇಕು. ಇದೊಂದು ರೋಮಾಂಚನಕಾರಿ ಮತ್ತು ಆಧ್ಯಾತ್ಮಿಕ ಅನುಭವ ನೀಡುವ ಸುಂದರ ತಾಣವಾಗಿದೆ.
ಇಲ್ಲಿರುವ ಹರಿವ ನೀರಿನಲ್ಲಿ ಗಂಧಕದ ಅಂಶವಿರುವುದರಿಂದ ಚರ್ಮದ ಸಮಸ್ಯೆಯನ್ನು ಗುಣಪಡಿಸುವ ಗುಣ ಈ ನೀರಿನಲ್ಲಿದೆ ಎಂಬ ನಂಬಿಕೆ ಇದೆ. ಹಾಗೂ ಮಕ್ಕಳಿಲ್ಲದವರೂ ಸಹ ಪುತ್ರಪ್ರಾಪ್ತಿ ಗಾಗಿ ಇಲ್ಲಿ ಹರಕೆ ಹೊತ್ತುಕೊಳ್ಳುತ್ತಾರೆ.
ಇತಿಹಾಸ:
ಪುರಾಣಗಳ ಪ್ರಕಾರ, ವಿಷ್ಣುವಿನ ಅವತಾರ ಭಗವಾನ್ ನರಸಿಂಹಸ್ವಾಮಿಯು ಹಿರಣ್ಯಕಶಿಪುವಿನ ವಧೆಯ ನಂತರ, ಈ ಸ್ಥಳದಲ್ಲಿ ವಾಸಿಸಿದ್ದ ಶಿವನ ಪರಮ ಭಕ್ತನಾದ ಜಲಾಸುರ ಎಂಬ ರಾಕ್ಷಸನನ್ನು ವಧಿಸಿದನು. ಜಲಾಸುರನ ಕೊನೆಯ ಆಸೆಯಂತೆ ನರಸಿಂಹಸ್ವಾಮಿಯು ಇಲ್ಲೇ ನೆಲೆಗೊಂಡನು. ಹಾಗೇ ಜಲಾಸುರನು ನೀರಾಗಿ ಮಾರ್ಪಟ್ಟು, ಭಗವಾನ್ ನರಸಿಂಹನ ಪಾದದ ಕೆಳಗೆ ಹರಿಯಲು ಆರಂಭಿಸಿದನು ಎಂದು ಹೇಳಲಾಗುತ್ತದೆ. ಈ ಗುಹೆಯನ್ನು ಜಲಾಸುರನು ತನ್ನ ಉಗುರುಗಳಿಂದ ಅಗೆದು ಕೆತ್ತಿದ್ದಾನೆ ಎಂದೂ, ಅದರ ಸಂಕೇತವಾಗಿ ಗುಹೆಗಳ ಗೋಡೆಯ ಮೇಲೆ ಉಗುರಿನ ಗುರುತುಗಳಿವೆ ಎಂದೂ ಸಹ ಹೇಳಲಾಗುತ್ತದೆ.
ನೀವು ಇದನ್ನೂ ಇಷ್ಟ ಪಡಬಹುದು: ಮುರುಡೇಶ್ವರದಲ್ಲಿದೆ ಜಗತ್ತಿನ ಎರಡನೇ ಅತೀ ಎತ್ತರದ ಶಿವನ ಮೂರ್ತಿ
ಗುಹೆಯ ಒಳಗೆ ನೀರಿನಲ್ಲಿ ಹಾಗೇ ನಡೆದು ಹೋದರೆ ಕೊನೆಯಲ್ಲಿ ಎರಡು ದೇವರುಗಳಿವೆ. ಅದುವೇ, ಸ್ವಯಂಭೂ ನರಸಿಂಹ ಸ್ವಾಮಿ ಮತ್ತು ಜಲಾಸುರನು ಪೂಜಿಸುತ್ತಿದ್ದ ಶಿವಲಿಂಗ.
ಸೌಲಭ್ಯ:
ಇಲ್ಲಿ ಮೊದಲು ಯಾವುದೇ ಬೆಳಕಿನ ವ್ಯವಸ್ಥೆ ಇರಲಿಲ್ಲ. ಆದರೆ ಇತ್ತೀಚಿಗೆ ಭಕ್ತರ ಸಂಖ್ಯೆ ಹೆಚ್ಚಾಗಿರುವುದರಿಂದ ವಿದ್ಯುತ್ ಮತ್ತು ಹವಾನಿಯಂತ್ರಣದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಗುಹೆಯಲ್ಲಿ ಬಾವಲಿಗಳ ಹಾರಾಟವಿದ್ದರೂ ಸಹ, ಇದುವರೆಗೂ ಅವುಗಳಿಂದ ಯಾವುದೇ ರೀತಿಯ ಹಾನಿ ಆಗಿಲ್ಲ. ಈ ದೇವಾಲಯದಲ್ಲಿ ಸ್ಥಳಾವಕಾಶ ಕಡಿಮೆ ಇರುವುದರಿಂದ ಗರ್ಭಗುಡಿಯ ಒಳಗೆ ಒಂದು ಸಲ ಕೇವಲ 8 ಜನರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಇತರರು ನೀರಿನಲ್ಲಿಯೇ ಕಾಯಬೇಕು.
ದೇವಾಲಯದ ಹೊರವಲಯದಲ್ಲಿಯೂ ಭಕ್ತರಿಗಾಗಿ ಇತ್ತೀಚಿಗೆ ಅನೇಕ ರೀತಿಯ ಸೌಲಭ್ಯವನ್ನು ನೀಡಲಾಗುತ್ತಿದೆ. ದೇವಾಲಯ ಪ್ರತಿದಿನ ಬೆಳಗ್ಗೆ 8 ರಿಂದ ಸಂಜೆ 6 ಗಂಟೆಯವರೆಗೆ ತೆರೆದಿರುತ್ತದೆ. ಬೇಸಿಗೆ ಕಾಲದಲ್ಲಿ ಅತಿಯಾದ ಬಿಸಿಲಿರುವ ಕಾರಣ, ಈ ದೇವಾಲಯಕ್ಕೆ ಭೇಟಿ ನೀಡಲು ಚಳಿಗಾಲ ( ಡಿಸೆಂಬರ-ಜನವರಿ) ಉತ್ತಮ ಸಮಯವಾಗಿದೆ.
ಬೀದರಿನ ಪ್ರವಾಸಿತಾಣಗಳಿಗೆ ಭೇಟಿ ನೀಡಿದಾಗ ಈ ಸುಂದರ, ವಿಶಿಷ್ಟ ಸ್ಥಳಕ್ಕೆ ಭೇಟಿ ನೀಡಲು ಮರೆಯದಿರಿ.
ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ಕನ್ನಡ.ಟ್ರಾವೆಲ್ (Kannada.travel) ಜಾಲತಾ ಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.