ಮ್ಯಾಜಿಕ್ ತಾಣಗಳುವಿಂಗಡಿಸದಸ್ಮರಣೀಯ ಜಾಗ

2023ರ ಮಾನ್ಸೂನ್ ನಲ್ಲಿ ನೋಡಬೇಕಾದ ಕರ್ನಾಟಕದ ತಾಣಗಳು

“ಮಳೆಗಾಲ” ಪ್ರವಾಸಿಗರು ಅತಿಯಾಗಿ ಪ್ರೀತಿಸುವ ಕಾಲ. ಜಿಟಿ ಜಿಟಿ ಮಳೆ, ಶೀತಲ ಗಾಳಿ, ಹಸಿರ ಸೀರೆ ಉಟ್ಟು ಕಂಗೊಳಿಸುವ ಪಶ್ಚಿಮ ಘಟ್ಟಗಳು, ಮುದ ನೀಡುವ ಕರಾವಳಿ, ತುಂಬಿ ಹರಿವ ನದಿಗಳು, ಸಮೃದ್ಧ ಜಲಪಾತಗಳು ಎಂತಹ ಪ್ರವಾಸಿಗರನ್ನೂ ಮಂತ್ರಮುಗ್ಧಗೊಳಿಸುತ್ತದೆ. ಮಳೆಗಾಲದಲ್ಲಿ ಮೈತುಂಬ ನಳನಳಿಸುವ ಪ್ರಕೃತಿಯೊಂದಿಗೆ ಒಂದಾಗಲು ಕರ್ನಾಟಕದ ಈ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ.

ಉಜ್ವಲಾ ವಿ.ಯು.

1. ಜೋಗ ಜಲಪಾತ:

“ಗೇರುಸೊಪ್ಪಿನ ಜಲಪಾತ” ಎಂದೂ ಕರೆಯಲ್ಪಡುವ ಈ ಜಲಪಾತವು ಮಳೆಗಾಲದಲ್ಲಿ ನೋಡಲೇಬೇಕಾದ ತಾಣಗಳಲ್ಲಿ ಒಂದಾಗಿದೆ. ಇದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿದೆ. ಇದು ಭಾರತದ ಎರಡನೇ ಅತಿ ಎತ್ತರದ ಜಲಪಾತ ಎಂಬ ಖ್ಯಾತಿಯನ್ನು ಹೊಂದಿದ್ದು, ಈ ಜಲಪಾತವನ್ನು ರಾಜ, ರೋರರ್, ರಾಕೆಟ್‌ ಮತ್ತು ರಾಣಿ ಎಂಬ ನಾಲ್ಕು ಭಾಗಗಳಾಗಿ ವಿಭಜಿಸಲಾಗಿದೆ.ಮಳೆಗಾಲದಲ್ಲಿ ಅತ್ಯಂತ ರಮಣೀಯ ರೂಪ ತೊಡುವ ಈ ಜಲಪಾತವು ಬಿಳಿ ಮೋಡಗಳ ಹಿಂದೆ ಕಣ್ಣಾಮುಚ್ಚಾಲೆ ಆಡುತ್ತಾ ನೋಡುಗರ ಕಣ್ಮನ ಸೆಳೆಯುತ್ತದೆ.

2. ಆಗುಂಬೆ:

ಆಗುಂಬೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಒಂದು ಊರು. ಕರ್ನಾಟಕದಲ್ಲೇ ಅತಿ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ಇದು ಕೂಡಾ ಒಂದಾಗಿರುವುದರಿಂದ ಇದನ್ನು “ದಕ್ಷಿಣ ಭಾರತದ ಚಿರಾಪುಂಜಿ” ಎಂದು ಸಹ  ಕರೆಯಲಾಗುತ್ತದೆ. ಈ ಸ್ಥಳವು ಎತ್ತರದ ಜಲಪಾತಗಳು, ಅಳಿವಿನಂಚಿನ ಸಸ್ತನಿಗಳು, ಸಮೃದ್ಧ ಮಳೆಯ ಕಾಡುಗಳು, ಸೂರ್ಯಾಸ್ತದ ಮನೋಹರ ದೃಶ್ಯಕ್ಕೆ ಪ್ರಸಿದ್ಧವಾಗಿದೆ. ಪ್ರತ್ಯೇಕವಾಗಿ ಮಳೆಗಾಲದಲ್ಲಿ ನೋಡಲೇಬೇಕಾದ ತಾಣಗಳಲ್ಲಿ ಕರ್ನಾಟಕದ ಆಗುಂಬೆ ಕೂಡ ಒಂದಾಗಿದೆ.

3. ದಾಂಡೇಲಿ:

ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಪಶ್ಚಿಮ ಘಟ್ಟಗಳ ಹಸಿರಿನ ಮಡಿಲಲ್ಲಿರುವ ಸುಂದರ ನಗರ. ಸಾಹಸಪ್ರಿಯರು ತುಂಬಾ ಇಷ್ಟ ಪಡುವ ತಾಣ. ಇಲ್ಲಿನ ಜಲಸಾಹಸ ಕ್ರೀಡೆಯಿಂದಾಗಿ ದಾಂಡೇಲಿಯು ದಕ್ಷಿಣ ಭಾರತದಲ್ಲೇ ಹೆಸರುವಾಸಿಯಾಗಿದೆ. ಇಲ್ಲಿನ ಕಾಳಿ ನದಿಯಲ್ಲಿ ಸಾಹಸ ಜಲಕ್ರೀಡೆಗಳಾದ ರಾಫ್ಟಿಂಗ್, ಕೇಯಕಿಂಗ್, ಕನೋಯಿಂಗ್ ಸೇರಿದಂತೆ ಮುಂತಾದ ಕ್ರೀಡೆಗಳನ್ನು ಆನಂದಿಸಬಹುದು. ಅಲ್ಲದೇ ಗುಡ್ಡಗಾಡು ಸೈಕಲ್ ಸವಾರಿ, ಚಾರಣ, ಹಾಗೂ ಮೊಸಳೆಗಳ ಪಾರ್ಕ್, ಬೋಟಿಂಗ್, ಪಕ್ಷಿ ವೀಕ್ಷಣೆಯನ್ನೂ ಸಹ ಮಾಡಬಹುದಾಗಿದೆ. ಅಲ್ಲದೇ, ದಾಂಡೇಲಿಯ ಸಮೀಪದಲ್ಲಿಯೇ ಹಲವಾರು ಪ್ರೇಕ್ಷಣೀಯ ತಾಣಗಳೂ ನೆಲೆಯಾಗಿದೆ.

4. ನಂದಿ ಬೆಟ್ಟ:

ಮಳೆಗಾಲ ಆರಂಭವಾದ ಕ್ಷಣವೇ ಬೈಕ್ ಸವಾರರು ಪ್ರಕೃತಿಯ ವೈಭವವನ್ನು ಸವಿಯಲು ಭೇಟಿ ನೀಡುವ ತಾಣವೇ ನಂದಿಬೆಟ್ಟ. ಜೂನ್ ನಿಂದ ಆಗಸ್ಟ್ ತಿಂಗಳುಗಳು ನಂದಿ ಬೆಟ್ಟಕ್ಕೆ ಭೇಟಿ ನೀಡಲು ಉತ್ತಮ ಸಮಯವಾಗಿದೆ ಏಕೆಂದರೆ ಸುಂದರವಾದ ಸುತ್ತಮುತ್ತಲಿನ ಪ್ರದೇಶಗಳು, ತುಂತುರು ಮಳೆ, ಸುತ್ತಲೂ ಮುಸುಕಿದ ಮಂಜು, ಎಲ್ಲವೂ ಸುಂದರ ಅನುಭವ ನೀಡುತ್ತವೆ. ಪ್ರವಾಸಿಗರು ಜಾರುವ ರಸ್ತೆಯಲ್ಲಿ ಮತ್ತು ಗುಡ್ಡಗಾಡು ಪ್ರದೇಶಕ್ಕೆ ಚಾಲನೆ ಮಾಡುವಾಗ ಸ್ವಲ್ಪ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು.

5. ಚಿಕ್ಕಮಗಳೂರು:

ಪಶ್ಚಿಮ ಘಟ್ಟಗಳಿಂದ ಆವೃತವಾದ ಸುಂದರ ನಗರ. ಇದು ಎತ್ತರದ ಶಿಖರಗಳು, ಜಲಪಾತಗಳು, ದೇವಾಲಯ, ಕಾಫೀ ತೋಟಗಳಿಗೆ ಹೆಸರು ಪಡೆದಿದೆ. ಸಾಹಸಪ್ರಿಯ ಮತ್ತು ಪ್ರಕೃತಿ ಮಡಿಲಲ್ಲಿ ಕಾಲ ಕಳೆಯಲು ಬಯಸುವ ಪ್ರವಾಸಿಗರಿಗೆ ಉತ್ತಮ ಜಾಗ. ಅನೇಕ ಬೈಕ್ ರೈಡರ್ಸ್ ತಮ್ಮ ಸುಂದರ ಪಯಣದ ಅನುಭವಕ್ಕಾಗಿ ಈ ಸ್ಥಳವನ್ನು ಆಯ್ದುಕೊಳ್ಳುತ್ತಾರೆ.

6. ಮಡಿಕೇರಿ:

ಭಾರತದ ಸ್ಕಾಟ್ಲೆಂಡ್ ಎಂದು ಹೆಸರಿಸಿರುವ ಮಡಿಕೇರಿಯು, ಹಸಿರು ಚಹಾ ಮತ್ತು ಕಾಫಿ ತೋಟಗಳು ಮತ್ತು ಪರಿಮಳಯುಕ್ತ ಮಸಾಲೆ ತೋಟಗಳಿಂದ ಅಲಂಕರಿಸಲ್ಪಟ್ಟ ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ಗಿರಿಧಾಮಗಳಲ್ಲಿ ಒಂದಾಗಿದೆ. ಇದು ವರ್ಷಪೂರ್ತಿ ಪ್ರವಾಸಿಗರನ್ನು ಆಕರ್ಷಿಸುವ ತಾಣವಾಗಿದ್ದರೂ ಸಹ, ಮಳೆಗಾಲವು ಭೇಟಿ ನೀಡಲು ಉತ್ತಮ ಸಮಯವಾಗಿದೆ. ಏಕೆಂದರೆ ಇಲ್ಲಿನ ಹಚ್ಚ ಹಸಿರಿನ ತೋಟಗಳು ಮೋಡಿಮಾಡುವ ನೋಟವನ್ನು ನೀಡುತ್ತವೆ.

ಮಳೆಗಾಲವು ಪ್ರವಾಸದ ಸುಂದರ ಅನುಭವವನ್ನು ನೀಡಿವುದೆನೋ ನಿಜ. ಆದರೆ ಈ ಕಾಲದಲ್ಲಿ ಪಯಣಿಸುವ ಸಂದರ್ಭದಲ್ಲಿ ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದೂ ಸಹ ಪ್ರತಿಯೊಬ್ಬ ಪ್ರವಾಸಿಗನ ಜವಾಬ್ದಾರಿಯಾಗಿದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತ ಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button