ಮ್ಯಾಜಿಕ್ ತಾಣಗಳುವಿಂಗಡಿಸದಸಂಸ್ಕೃತಿ, ಪರಂಪರೆಸ್ಮರಣೀಯ ಜಾಗ

ಕರ್ನಾಟಕದ ಹತ್ತು ಸುಪ್ರಸಿದ್ಧ ಕೋಟೆಗಳು

“ಕೋಟೆಗಳು” ಕರ್ನಾಟಕದ ಶ್ರೀಮಂತ ಪರಂಪರೆ ಮತ್ತು ಸಂಸ್ಕೃತಿಯ ಪ್ರತೀಕ. ಹಲವಾರು ಶತಮಾನಗಳ ಹಿಂದೆ ಬಲಿಷ್ಠ ಆಡಳಿತಗಾರರು ಈ ಕೋಟೆಗಳನ್ನು ನಿರ್ಮಿಸಿದ್ದಾರೆ. ಅಂತಹ ಭವ್ಯವಾದ ಮತ್ತು ಅದ್ಭುತ ಕೋಟೆಗಳ ಸಂಕ್ಷಿಪ್ತ ವಿವರ ಇಲ್ಲಿದೆ.

ಉಜ್ವಲಾ ವಿ.ಯು

1. ಚಿತ್ರದುರ್ಗ ಕೋಟೆ:

Chitradurga Fort

“ಏಳು ಸುತ್ತಿನ ಕೋಟೆ” ಎಂದು ಸ್ಥಳೀಯವಾಗಿ ಕರೆಯಲ್ಪಡುವ ಚಿತ್ರದುರ್ಗದ ಕೋಟೆಯು ದೇಶದ ಪ್ರಬಲ ಕೋಟೆಗಳಲ್ಲಿ ಒಂದಾಗಿದೆ. ಇದು ಬೃಹದಾಕಾರದ ಶಿಲೆಗಳು, ಕಲ್ಲಿನ ಗೋಡೆಗಳಿಂದ ರೂಪುಗೊಂಡಿದೆ. ವೇದಾವತಿ ನದಿಯ ದಡದಲ್ಲಿ 1500 ಎಕರೆಗಳಷ್ಟು ವಿಸ್ತಾರವಾಗಿ ಹರಡಿರುವ ಚಿತ್ರದುರ್ಗ ಕೋಟೆಯು ಭವ್ಯವಾದ ವಾಸ್ತುಶಿಲ್ಪಕ್ಕೆ ಉದಾಹರಣೆಯಾಗಿದೆ. 11 ರಿಂದ 13 ನೇ ಶತಮಾನದ ನಡುವೆ ಚಾಲುಕ್ಯರು, ಹೊಯ್ಸಳರು ಈ ಕೋಟೆಯನ್ನು ನಿರ್ಮಿಸಿದರು. ಈ ಕೋಟೆಯು 19 ಗೇಟ್ ವೇಗಳು, 35 ರಹಸ್ಯ ದ್ವಾರಗಳು, 4 ಅದೃಶ್ಯ ಬಾಗಿಲುಗಳನ್ನು ಹೊಂದಿದೆ. ಆದರೆ ಇವುಗಳಲ್ಲಿ ಹಲವು ಈಗ ಅಸ್ತಿತ್ವದಲ್ಲಿಲ್ಲ. ಕೋಟೆಯು ಸಂಪಿಗೆ ಸಿದ್ದೇಶ್ವರ, ಹಿಡಿಂಬೇಶ್ವರ, ಏಕನಾಥೇಶ್ವರ, ಫಲ್ಗುಣೇಶ್ವರ, ಗೋಪಾಲಕೃಷ್ಣ, ಆಂಜನೇಯ, ಬಸವ ದೇವಾಲಯಗಳನ್ನು ಹೊಂದಿದೆ. ಪ್ರಸಿದ್ಧ “ಒನಕೆ ಓಬವ್ವ ಕಿಂಡಿ” ಯು ಈ ಕೋಟೆಯಲ್ಲಿ ನೋಡಲೇಬೇಕಾದ ಸ್ಥಳಗಳಲ್ಲಿ ಒಂದಾಗಿದೆ.

2. ಕವಲೇದುರ್ಗ ಕೋಟೆ:

Kavaledurga Fort

ಮಲೆನಾಡಿನ ಹಸಿರಿನ ನಡುವೆ ಕಂಗೊಳಿಸುವ, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಿಂದ 18 ಕಿಮೀ ದೂರದಲ್ಲಿರುವ 9 ನೇ ಶತಮಾನದ ಕೋಟೆ ಇದಾಗಿದೆ. ಇದು ಕೆಳದಿ ಸಾಮ್ರಾಜ್ಯದ ನಾಲ್ಕನೇ ಮತ್ತು ಕೊನೆಯ ರಾಜಧಾನಿಯಾಗಿತ್ತು. ಕವಲೇದುರ್ಗ ಕೋಟೆಯ ಪ್ರಭಾವಶಾಲಿ ಕೋಟೆ ರಚನೆಯು 3 ಸುತ್ತಿನ ಕಲ್ಲಿನ ಗೋಡೆಯನ್ನು ಹೊಂದಿದೆ. ಭುವನಗಿರಿ ಎಂದೂ ಕರೆಯಲ್ಪಡುವ ಕವಲೇದುರ್ಗ ಕೋಟೆಯು ಅರಮನೆ, ಸ್ನಾನಗೃಹಗಳು, ಕಾವಲು ಕೊಠಡಿಗಳು ಮತ್ತು ಆಯುಧ ಸಂಗ್ರಹದ ಮನೆಗಳನ್ನು ಹೊಂದಿದೆ. ವಿರೂಪಾಕ್ಷ, ವಿಜಯ ವಿಠಲ, ವೀರಭದ್ರ, ಮಲ್ಲಾರ ಮತ್ತು ಭುವನೇಶ್ವರಿಯ ದೇವಾಲಯಗಳು ಕೋಟೆಯಲ್ಲಿವೆ. ಕೋಟೆಯ ಮೇಲಿರುವ ಕೊಳ, ಶ್ರೀಕಂಠೇಶ್ವರ ದೇವಸ್ಥಾನ ಮತ್ತು ನಂದಿ ಮಂಟಪವು ಪ್ರವಾಸಿಗರ ಆಕರ್ಷಣೀಯ ತಾಣವಾಗಿದೆ. ಟ್ರಕ್ಕಿಂಗ್ ಪ್ರಿಯರ ನೆಚ್ಚಿನ ತಾಣವೂ ಇದಾಗಿದೆ.

3. ಬೀದರ್ ಕೋಟೆ:

Bidar Fort

ಬೀದರ್ ಕೋಟೆಯನ್ನು ದೇಶದ ಅತ್ಯಂತ ಅಸಾಧಾರಣ ಕೋಟೆ ಎಂದು ಪರಿಗಣಿಸಲಾಗಿದೆ. ಇಸ್ಲಾಮಿಕ್ ಮತ್ತು ಪರ್ಷಿಯನ್ ವಾಸ್ತುಶಿಲ್ಪವನ್ನು ಹೊಂದಿರುವ ಈ ಕೋಟೆಯು ಏಳು ಮುಖ್ಯ ದ್ವಾರಗಳನ್ನು ಹೊಂದಿದೆ. 14 ನೇ ಶತಮಾನದಲ್ಲಿ ಬಹಮನಿ ಸಾಮ್ರಾಜ್ಯದ ರಾಜಧಾನಿ ಇದಾಗಿತ್ತು. 30 ಕ್ಕೂ ಅಧಿಕ ಇಸ್ಲಾಂಮಿಕ್ ಸ್ಮಾರಕಗಳನ್ನು ಇಲ್ಲಿ ನೋಡಬಹುದು. ಈ ಸ್ಮಾರಕಗಳಲ್ಲಿ ಗಗನ್ ಮಹಲ್, ರಂಗಿನ್ ಮಹಲ್ ಮತ್ತು ತರ್ಕಶ್ ಮಹಲ್ ಅತ್ಯಂತ ಜನಪ್ರಿಯವಾಗಿವೆ. ಜಾಮಿ ಮಸೀದಿ ಮತ್ತು ಸೋಲಾ ಖಂಬಾ ಮಸೀದಿ ಕೋಟೆಯೊಳಗೆ ನಿರ್ಮಿಸಲಾದ ಎರಡು ಗಮನಾರ್ಹ ಮಸೀದಿಗಳಾಗಿವೆ. ಈ ಕೋಟೆಯು ಬೀದರ್ ನಗರದ ರೈಲು ನಿಲ್ದಾಣವು ಕೋಟೆಯಿಂದ 3 ಕಿಮೀ ದೂರದಲ್ಲಿದೆ.

4. ನಗರ ಕೋಟೆ:

Nagara Fort

ಶಿವಮೊಗ್ಗ ಜಿಲ್ಲೆ ಹೊಸನಗರದ ಬಳಿಯಿರುವ ನಗರ ಕೋಟೆಯನ್ನು ಬಿದನೂರು ಕೋಟೆ, ಶಿವಪ್ಪನಾಯಕನ ಕೋಟೆ ಎಂದೂ ಕರೆಯುತ್ತಾರೆ. ಈ ಕೋಟೆಗೆ ಸುಮಾರು 500 ವರ್ಷಗಳ ಇತಿಹಾಸವಿದೆ. ಇದು ಕೆಳದಿ ಅರಸರ ಕೊನೆಯ ರಾಜಧಾನಿಯಾಗಿತ್ತು. ಈ ಕೋಟೆಯಲ್ಲಿ ಶಿವಪ್ಪ ನಾಯಕರ ಅರಮನೆ, ದೇವಗಂಗಾ ಕೊಳ, ನೀಲಕಂಠೇಶ್ವರ ದೇವಸ್ಥಾನ ಮತ್ತು ಗುಡ್ಡೆ ವೆಂಕಟರಮಣ ಸ್ವಾಮಿ ದೇವಸ್ಥಾನಗಳನ್ನು ನೋಡಬಹುದಾಗಿದೆ. ಬೆಟ್ಟದ ಮೇಲೆ ಕೋಟೆಯೊಳಗೆ ರಾಜನ ದರ್ಬಾರು ಹಾಲ್, ಅರಮನೆಯ ಅವಶೇಷಗಳು, ಅಕ್ಕ ತಂಗಿ ಕೊಳ ​​ಮತ್ತು ಫಿರಂಗಿಗಳನ್ನೂ ವೀಕ್ಷಿಸಬಹುದು.

5. ಬಳ್ಳಾರಿ ಕೋಟೆ:

Bellary Fort

“ಬಳ್ಳಾರಿ ಗುಡ್ಡ” , “ಕೋಟೆ ಬೆಟ್ಟ” ಎಂದು ಕರೆಯಲ್ಪಡುವ ಈ ಕೋಟೆಯು ಐತಿಹಾಸಿಕ ನಗರ ಬಳ್ಳಾರಿಯಲ್ಲಿದೆ. ಈ ಕೋಟೆಯನ್ನು ವಿಜಯನಗರ ಕಾಲದಲ್ಲಿ ಪಾಳೇಗಾರ ಮುಖ್ಯಸ್ಥ ಹನುಮಪ್ಪ ನಾಯಕ ನಿರ್ಮಿಸಿದನೆಂದು ನಂಬಲಾಗಿದೆ. 1769 ರಲ್ಲಿ, ಹೈದರ್ ಅಲಿ ಯು ಕೋಟೆಯನ್ನು ವಶಪಡಿಸಿಕೊಂಡನು. ಬಳ್ಳಾರಿ ಬೆಟ್ಟದ ಮೇಲಿನ ಕೋಟೆಯಲ್ಲಿ ದೇವಾಲಯ, ಸೈನಿಕರಿಗೆ ಮೀಸಲಾದ ಬ್ಯಾರಕ್‌ಗಳು, ಆಳವಾದ ಬಾವಿಗಳಿವೆ. ಕೆಳಗಿನ ಕೋಟೆಯಲ್ಲಿ ಕೋಟೆ ಆಂಜನೇಯ ದೇವಸ್ಥಾನವನ್ನೂ ಸಹ ಕಾಣಬಹುದು.

ನೀವು ಇದನ್ನೂ ಇಷ್ಟಪಡಬಹುದು: ಕರುನಾಡಿನ ಚೆಂದದ ಕೋಟೆ ಕವಲೆದುರ್ಗ ಕೋಟೆ

6. ಮಿರ್ಜಾನ ಕೋಟೆ:

Mirjan Fort

ಗೋಕರ್ಣದಿಂದ ಸುಮಾರು 25 ಕಿಲೋಮೀಟರ್ ದೂರದಲ್ಲಿರುವ ಈ 16-ಶತಮಾನದ ಕೋಟೆಯು ಸಾಂಸ್ಕೃತಿಕ ವೈಭವ ಮತ್ತು ವಿಶಿಷ್ಟ ಇತಿಹಾಸವನ್ನು ಹೊಂದಿದೆ. ಮಧ್ಯಕಾಲೀನದಲ್ಲಿ ಈ ಕೋಟೆಯು ಸಾಗರೋತ್ತರ ವ್ಯವಹಾರ ಮತ್ತು ವಾಣಿಜ್ಯ ವ್ಯಾಪಾರದ ಕೇಂದ್ರವಾಗಿತ್ತು. ಇದು ಕಂದಕಗಳು, ರಹಸ್ಯ ಹಾದಿಗಳು ಮತ್ತು ಕಾಲುವೆ, ಬಾವಿಗಳ ಜೊತೆಗೆ ನಾಲ್ಕು ಮುಖ್ಯ ದ್ವಾರಗಳನ್ನು ಹೊಂದಿದೆ. 11.8 ಎಕರೆ ಪ್ರದೇಶದಲ್ಲಿ ನಿರ್ಮಿಸಲಾದ ಇದು ಅಷ್ಟ ಕೋನಾಕೃತಿಯ ರಚನೆಯಲ್ಲಿ ಎತ್ತರವಾದ ದಿಬ್ಬದ ಮೇಲೆ ಕಟ್ಟಲಾಗಿದೆ. ಮಳೆಗಾಲದಲ್ಲಿ ಕೋಟೆ ಸಂಪೂರ್ಣವಾಗಿ ಹಸಿರುಮಯವಾಗಿ ನೋಡಲು ಆಕರ್ಷಕವಾಗಿರುತ್ತದೆ.

7. ಕಿತ್ತೂರು ಕೋಟೆ:

Kittur Fort

ಧಾರವಾಡದಿಂದ 32 ಕಿಲೋಮೀಟರ್ ದೂರದಲ್ಲಿರುವ ಈ ಕೋಟೆಯು ವೀರ ವನಿತೆ ರಾಣಿ ಚೆನ್ನಮ್ಮನ ಕೋಟೆಯಾಗಿದೆ. ಈ ಕೋಟೆಯು ಪ್ರಮುಖ ಪುರಾತತ್ವ ತಾಣವಾಗಿದೆ. ಈ ಕೋಟೆಯಲ್ಲಿ ಅರಮನೆ, ಸ್ಮಾರಕಗಳು, ಮತ್ತು ಪ್ರತಿಮೆಗಳು ಆಕರ್ಷಕವಾಗಿದೆ. ಹಾಗೂ ಕರ್ನಾಟಕ ಸರ್ಕಾರದ ರಾಜ್ಯ ಪುರಾತತ್ವ ಮತ್ತು ವಸ್ತುಸಂಗ್ರಹಾಲಯಗಳ ಇಲಾಖೆಯಿಂದ ನಿರ್ವಹಿಸಲ್ಪಡುತ್ತಿರುವ ವಸ್ತುಸಂಗ್ರಹಾಲಯವನ್ನು ಕಾಣಬಹುದು. ಇದು ಕಿತ್ತೂರು ಮತ್ತು ಸುತ್ತಮುತ್ತ ಕಂಡುಬರುವ ಪ್ರಾಚೀನ ವಸ್ತುಗಳ ಸಮೃದ್ಧ ಸಂಗ್ರಹವನ್ನು ಹೊಂದಿದೆ.

8. ಗುಮ್ಮನಾಯಕನ ಕೋಟೆ:

Gummanayaka Fort

ಚಿಕ್ಕಬಳ್ಳಾಪುರದ ಬಾಗೇಪಲ್ಲಿಯಿಂದ ಸುಮಾರು 16 ಕಿಮೀ ದೂರದಲ್ಲಿರುವ ಈ ಭವ್ಯವಾದ ಕೋಟೆಯು, ಇದನ್ನು ಸ್ಥಾಪಿಸಿದ ಸಾಮಂತ ನಾಯಕ ಗುಮ್ಮನಾಯಕನ ಹೆಸರನ್ನು ಪಡೆದುಕೊಂಡಿದೆ. ಸುತ್ತಲಿನ ಗುಡ್ಡಗಾಡು ಪ್ರದೇಶದಿಂದ ಸುಮಾರು 150 ಅಡಿಗಳಷ್ಟು ಎತ್ತರದಲ್ಲಿರುವ ಕೋಟೆಯ ವೃತ್ತಾಕಾರದ ಬಂಡೆಯ ರಚನೆಯಿಂದಾಗಿ ಕೋಟೆಯು ಸಾಕಷ್ಟು ಜನಪ್ರಿಯವಾಗಿದೆ. ಗುಮ್ಮನಾಯಕ ಕೋಟೆಯ ಹಿಂದಿನ ಆಡಳಿತಗಾರರು ಇಲ್ಲಿ ರಾಮ, ಲಕ್ಷ್ಮಣ, ಸೀತೆ ಮತ್ತು ಹನುಮಂತನಿಗೆ ಸಮರ್ಪಿತವಾದ ದೇವಾಲಯಗಳನ್ನು ನಿರ್ಮಿಸಿದ್ದಾರೆ.

9. ಬೆಂಗಳೂರು ಕೋಟೆ:

Bengaluru Fort

ಈ ಕೋಟೆಯನ್ನು ಬೆಂಗಳೂರಿನ ಸಂಸ್ಥಾಪಕರಾದ ಕೆಂಪೇಗೌಡರವರು ನಿರ್ಮಿಸಿದರು. 1761 ರಲ್ಲಿ ಹೈದರ್ ಅಲಿ ಮಣ್ಣಿನ ಕೋಟೆಯಾಗಿದ್ದ ಇದನ್ನು ಕಲ್ಲಿನ ಕೋಟೆಯಾಗಿ ಬದಲಾಯಿಸಿದನು ಎಂದು ಹೇಳಲಾಗುತ್ತದೆ. 18 ನೇ ಶತಮಾನದ ಈ ಕೋಟೆಯು,1791 ರಲ್ಲಿ ನಡೆದ ಆಂಗ್ಲೋ-ಮೈಸೂರು ಯುದ್ಧದ ಸಮಯದಲ್ಲಿ ಹಾನಿಗೊಳಗಾಯಿತು. ದುರದೃಷ್ಟವಶಾತ್ ನಾವು ಈಗ ನೋಡುತ್ತಿರುವುದು ಕೇವಲ 40% ಕೋಟೆಯ ಅವಶೇಷಗಳನ್ನು ಮಾತ್ರ. ಇಲ್ಲಿ ಕೃತಕ ಕೊಳಗಳು, ಶಸ್ತ್ರಾಗಾರಗಳು, ವಿಶ್ರಾಂತಿ ಪ್ರದೇಶ, ಗಣಪತಿ ಗುಡಿ, ಗೋಡೆಗಳ ಮೇಲಿನ ಸುಂದರವಾದ ವರ್ಣಚಿತ್ರಗಳು ಮತ್ತು ಭಿತ್ತಿಚಿತ್ರಗಳು ಗಳು ಆಕರ್ಷಣೀಯವಾಗಿದೆ.

10. ಗಜೇಂದ್ರಗಡ ಕೋಟೆ:

Gajendragad Fort

ಗದಗ ಜಿಲ್ಲೆಯಿಂದ 55 ಕಿ.ಮೀ ದೂರ ಗಜೇಂದ್ರಗಡದಲ್ಲಿರುವ ಈ ದೈತ್ಯಾಕಾರದ ಕೋಟೆಯು ಬೆಟ್ಟದ ತುದಿಯಲ್ಲಿದೆ. ಕೋಟೆಯ ಮೇಲಿಂದ ನಗರದ ವೈಮಾನಿಕ ನೋಟವು ಆನೆಯಂತೆ ಕಾಣುವುದರಿಂದ ಈ ಹೆಸರು ಬಂದಿದೆ ಎಂದು ಹೇಳಲಾಗುತ್ತದೆ. ಗಜೇಂದ್ರಗಡ ಕೋಟೆಯು ಐದು ತಲೆಯ ಹಾವು ಮತ್ತು ಎರಡು ಸಿಂಹಗಳು ಪರಸ್ಪರ ಮುಖಾಮುಖಿಯಾಗಿರುವ ಭವ್ಯ ಪ್ರವೇಶ ದ್ವಾರವನ್ನು ಹೊಂದಿದೆ. ಇಲ್ಲಿ ಭಗವಾನ್ ಹನುಮಾನ್ ವಿಗ್ರಹ, ಕೋಟೆಯ ಅವಶೇಷಗಳು, ಆನೆಯ ತಲೆಯ ಕೆತ್ತನೆಗಳು, ಹಿಂದಿ ಮತ್ತು ಮರಾಠಿಯಲ್ಲಿನ ಪ್ರಾಚೀನ ಶಾಸನಗಳನ್ನು ಕಾಣಬಹುದು. ಇಲ್ಲಿಯ ಕಾಲಕಾಲೇಶ್ವರ ದೇವಾಲಯವೂ ಪ್ರಸಿದ್ಧವಾಗಿದೆ.

ನೀವು ಪ್ರವಾಸ ಕೈಗೊಳ್ಳುವಾಗ ಈ ಅದ್ಭುತ ಕೋಟೆಗಳಿಗೆ ಭೇಟಿ ನೀಡುವುದನ್ನು ಮರೆಯದಿರಿ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ( Kannada travel ) ಜಾಲತ ಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button