ಕರ್ನಾಟಕದ ಪರಿಸರ ಪ್ರವಾಸಿ ತಾಣಗಳಲ್ಲಿ ವಿಮಾ ಭದ್ರತೆ:
ಕರ್ನಾಟಕ ರಾಜ್ಯದ ಅರಣ್ಯ ಇಲಾಖೆಯ ಅಧೀನದಲ್ಲಿರುವ ಸಂರಕ್ಷಿತ ಪ್ರದೇಶಗಳಲ್ಲಿ ಪರಿಸರ ಪ್ರವಾಸೋದ್ಯಮ ಚಟುವಟಿಕೆಗಳನ್ನು ಮಾಡಬಯಸುವ ಪ್ರವಾಸಿಗರಿಗೆ ವಿಮಾ ಭದ್ರತೆಯನ್ನು ಒದಗಿಸುವಂತೆ ನಿರ್ಧರಿಸಲಾಗಿದೆ.
▪︎ ಉಜ್ವಲಾ ವಿ. ಯು
ಈ ಕುರಿತಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಪ್ರಧಾನ ಮುಖ್ಯ ಅರಣ್ಯಸಂರಕ್ಷಣಾಧಿಕಾರಿಗಳು (ವನ್ಯಜೀವಿ) ಹಾಗೂ ಮುಖ್ಯ ವನ್ಯಜೀವಿ ಪರಿಪಾಲಕರು, ಹುಲಿ ಸಂರಕ್ಷಿತ ಪ್ರದೇಶಗಳ ನಿರ್ದೇಶಕರು, ವನ್ಯಜೀವಿ ಹಾಗೂ ಪ್ರಾದೇಶಿಕ ಅರಣ್ಯ ವಿಭಾಗಗಳ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಜೂ 21 ರಂದು ಪತ್ರ ಬರೆದಿದ್ದಾರೆ.
ವನ್ಯಜೀವಿ ಸಂರಕ್ಷಣಾವಾದಿ ಬೆಳಗಾವಿಯ ಗಿರಿಧರ ಕುಲಕರ್ಣಿ ಅವರು ಸಲ್ಲಿಸಿರುವ ಮನವಿಯ ಆಧಾರದ ಮೇಲೆ ವಿಮಾ ಸೌಲಭ್ಯ ನೀಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಹಲವಾರು ಹುಲಿ ಸಂರಕ್ಷಿತ ಪ್ರದೇಶಗಳು, ರಾಷ್ಟ್ರೀಯ ಉದ್ಯಾನಗಳು ಹಾಗೂ ಅಭಯಾರಣ್ಯಗಳನ್ನು ಹೊಂದಿರುವ ಕರ್ನಾಟಕ ರಾಜ್ಯವು ಅಗಾಧವಾದ ವನ್ಯಜೀವಿ ಸಂಪತ್ತನ್ನು ಹೊಂದಿದೆ. ಸಂರಕ್ಷಿತ ಪ್ರದೇಶಗಳನ್ನು ಹೊರತುಪಡಿಸಿಯೂ ರಾಜ್ಯದಲ್ಲಿ ಹಲವು ಗಿರಿಧಾಮಗಳು, ಜಲಪಾತಗಳಿವೆ, ತನ್ಮೂಲಕ ದೇಶದಲ್ಲಿಯೇ ಹೆಸರುವಾಸಿಯಾದ ಪರಿಸರ ಪ್ರವಾಸೋದ್ಯಮ ಒಳಗೊಂಡಿರುವ ರಾಜ್ಯವಾಗಿದೆ. ರಾಜ್ಯದ ಕರಾವಳಿಯೂ ಹಲವಾರು ಸುಂದರ ತಾಣಗಳನ್ನು ಒಳಗೊಂಡಿದೆ.
ಪರಿಸರ ಪ್ರವಾಸೋದ್ಯಮದ ಅಭಿವೃದ್ಧಿಗೆ ಹಲವಾರು ಅವಕಾಶಗಳು ನಮ್ಮ ರಾಜ್ಯದಲ್ಲಿದೆ. ಈಗಾಗಲೇ ಇಂತಹ ಪರಿಸರ ಪ್ರವಾಸೋದ್ಯಮ ಸ್ಥಳಗಳಲ್ಲಿ ಚಾರಣ, ಹಿನ್ನೀರು ಸಫಾರಿ, ಕಯಾಕಿಂಗ್, ಬೋಟಿಂಗ್, ರಾಪ್ಟಿಂಗ್ ಸೇರಿದಂತೆ ಹಲವು ಸಾಹಸೀಯ ಚಟುವಟಿಕೆಯನ್ನು ಪ್ರವಾಸಿಗರಿಗೆ ಒದಗಿಸಲಾಗುತ್ತಿದೆ. ಕೆಲವು ಚಟುವಟಿಕೆಗಳ ವೇಳೆ ನೀರಿನಲ್ಲಿ ಮುಳುಗುವಿಕೆ, ವನ್ಯಜೀವಿಗಳಿಂದ ದಾಳಿ ಸೇರಿದಂತೆ ಅನೇಕ ಅಪಾಯ ಹೊಂದಿದ್ದು, ಆಕಸ್ಮಿಕವಾಗಿ ಸಾವು ಅಥವಾ ಶಾಶ್ವತ ಅಂಗವೈಕಲ್ಯ ಉಂಟಾಗುವ ಸಾಧ್ಯತೆಗಳು ಹೆಚ್ಚಿರುತ್ತದೆ.
ನೀವು ಇದನ್ನೂ ಇಷ್ಟಪಡಬಹುದು: 2023ರ ಮಾನ್ಸೂನ್ ನಲ್ಲಿ ನೋಡಬೇಕಾದ ಕರ್ನಾಟಕದ ತಾಣಗಳು
2009ರಲ್ಲಿ ಕೇರಳದ ಪೆರಿಯಾರ್ ಹುಲಿ ಸಂರಕ್ಷಿತ ಪ್ರದೇಶದ ಹಿನ್ನೀರಿನಲ್ಲಿ ಪ್ರವಾಸಿ ಬೋಟ್ ಮುಳುಗಿ ಹಲವಾರು ಜನ ಮೃತಪಟ್ಟಿದ್ದರು. ಹೀಗಾಗಿ, ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಅನಿರೀಕ್ಷಿತ ದುರ್ಘಟನೆ ಸಂಭವಿಸಿದಾಗ ವಿಮೆ ಸೌಲಭ್ಯವನ್ನು ಒದಗಿಸುವುದು ಮೂಲಭೂತ ಅವಶ್ಯಕತೆಯಾಗಿದೆ.
2020-25ರ ಕರ್ನಾಟಕ ಪ್ರವಾಸೋದ್ಯಮ ನೀತಿಯು ಸುಸ್ಥಿರ ಪ್ರವಾಸೋದ್ಯಮ ವ್ಯವಸ್ಥೆಯನ್ನು ನಿರ್ವಿುಸುವುದು ಹಾಗೂ ಪ್ರವಾಸಿಗರಿಗೆ ಸುರಕ್ಷಿತ ಮತ್ತು ಉತ್ತಮ ಗುಣಮಟ್ಟದ ಅನುಭವ ಒದಗಿಸುವುಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಿದೆ. ಆದ್ದರಿಂದ ಪರಿಸರ ಪ್ರವಾಸೋದ್ಯಮ ಸ್ಥಳಗಳಲ್ಲಿ ಪ್ರವಾಸಿಗರಿಗೆ ವಿಮೆ ಭದ್ರತೆ ಒದಗಿಸಲು ಕ್ರಮ ಕೈಗೊಳ್ಳಬೇಕೆಂದು ವನ್ಯಜೀವಿ ಸಂರಕ್ಷಣಾವಾದಿ ಬೆಳಗಾವಿಯ ಗಿರಿಧರ ಕುಲಕರ್ಣಿ ಅರಣ್ಯ ಇಲಾಖೆ, ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಗೆ ಕಳೆದ ಜನವರಿ ಹಾಗೂ ಮೇ ತಿಂಗಳಿನಲ್ಲಿ ಪತ್ರ ಬರೆದಿದ್ದರು. ಅರಣ್ಯ ವಸತಿ ಹಾಗೂ ವಿಹಾರಧಾಮಗಳ ಸಂಸ್ಥೆ (ಜಂಗಲ್ ಲಾಡ್ಜಸ್ ಆಂಡ್ ರೆಸಾರ್ಟ್ಸ್) ಈಗಾಗಲೇ ವಿಮಾ ಸೌಲಭ್ಯ ಒದಗಿಸುತ್ತಿದ್ದು, ಇದೇ ಮಾದರಿಯಲ್ಲಿ ಅರಣ್ಯ ಇಲಾಖೆಯ ಅಧೀನದಲ್ಲಿರುವ ಪ್ರವಾಸಿ ಸ್ಥಳಗಳಲ್ಲೂ ವಿಮಾ ಯೋಜನೆ ಮಾಡಬಹುದೆಂದು ಗಿರಿಧರ ಇಲಾಖೆಯ ಮನವಿ ಮಾಡುವ ಮೂಲಕ ಗಮನ ಸೆಳೆದಿದ್ದರು.
ಹೀಗಾಗಿ ಪ್ರಧಾನ ಮುಖ್ಯಅರಣ್ಯಸಂರಕ್ಷಣಾಧಿಕಾರಿ (ವನ್ಯಜೀವಿ) ಹಾಗೂ ಮುಖ್ಯ ವನ್ಯಜೀವಿ ಪರಿಪಾಲಕರ ಪರವಾಗಿ ವನ್ಯಜೀವಿ ವಿಭಾಗದ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕುಮಾರ್‌ಪುಷ್ಕರ್ ಅವರು ರಾಜ್ಯದ ಹುಲಿ ಸಂರಕ್ಷಿತ ಪ್ರದೇಶಗಳ ನಿರ್ದೇಶಕರು, ವನ್ಯಜೀವಿ ಹಾಗೂ ಪ್ರಾದೇಶಿಕ ಅರಣ್ಯ ವಿಭಾಗಗಳ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಪ್ರವಾಸೋದ್ಯಮ ಚಟುವಟಿಕೆಗಾಗಿ ಆಗಮಿಸುವ ಪ್ರವಾಸಿಗರಿಗೆ ವಿಮೆ ಭದ್ರತೆಯನ್ನು ಒದಗಿಸುವ ನಿಟ್ಟಿನಲ್ಲಿ ಅವಶ್ಯಕ್ರಮ ಕೈಗೊಳ್ಳಲು ಹಾಗೂ ಕೈಗೊಂಡ ಕ್ರಮದ ಬಗ್ಗೆ ವರದಿ ಸಲ್ಲಿಸುವಂತೆ ಜೂ 21ರಂದು ಸೂಚನೆ ನೀಡಿದ್ದಾರೆ.
“ಪರಿಸರ ಪ್ರವಾಸೋದ್ಯಮ ಸ್ಥಳಗಳಲ್ಲಿ ಪ್ರವಾಸಿಗರಿಗೆ ವಿಮೆ ಭದ್ರತೆಯನ್ನು ಒದಗಿಸುವಂತೆ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದ್ದೆ. ನನ್ನ ಮನವಿಯನ್ನು ಅರಣ್ಯ ಇಲಾಖೆ ಪರಿಗಣಿಸಿರುವುದು ಸಂತಸ ತಂದಿದ್ದು, ಇಲಾಖೆಗೆ ಕೃತಜ್ಞತೆ ಸಲ್ಲಿಸುತ್ತೇನೆ. ವಿಮೆ ಭದ್ರತೆಯು ಪ್ರವಾಸಿಗರಿಗೆ ಸುರಕ್ಷಿತ ಮತ್ತು ಉತ್ತಮ ಗುಣಮಟ್ಟದ ಅನುಭವ ಒದಗಿಸುವಲ್ಲಿ ಸಹಕಾರಿಯಾಗಲಿದೆ.” ಎಂದು ವನ್ಯಜೀವಿ ಸಂರಕ್ಷಣಾವಾದಿ ಗಿರಿಧರ ಕುಲಕರ್ಣಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.