ದೂರ ತೀರ ಯಾನಮ್ಯಾಜಿಕ್ ತಾಣಗಳುವಂಡರ್ ಬಾಕ್ಸ್ವಿಂಗಡಿಸದವಿಸ್ಮಯ ವಿಶ್ವ

ಅರೇಬಿಯಾದ ಮಲೆನಾಡು ಸಲಾಲ್ಹ

ಅರೇಬಿಯಾ ಸುತ್ತಮುತ್ತಲೂ ಭೂ ಪ್ರದೇಶ , ಮರುಭೂಮಿಯಿಂದ ಕೂಡಿದೆ,
ಹೆಚ್ಚು ಬಿಸಿಲು , ಮಳೆ ಕಡಿಮೆಯಿರುವ ಜಾಗ. ಆದರೆ ಓಮನ್ ದೇಶದ ದೋಫಾರ್ ಪ್ರಾಂತ್ಯದಲ್ಲಿ ನೈಸರ್ಗಿಕ ನಿರ್ಮಿತ ಮಲೆನಾಡಿನಂತ ಜಾಗವಿದೆ. ಅರಬ್ ದೇಶದ ಮಲೆನಾಡಿನಂತಿರುವ ಸುಂದರ ಜಾಗದ ತಾಣದ ಬಗ್ಗೆ ಪಿ.ಎಸ್. ರಂಗನಾಥ್ ಬರೆದ ಚೆಂದದ ಬರಹ.

  • ಪಿ.ಎಸ್.ರಂಗನಾಥ ಮಸ್ಕತ್

ಅರೇಬಿಯಾ ಸುತ್ತಮುತ್ತಲೂ ಭೂ ಪ್ರದೇಶ , ಮರುಭೂಮಿಯಿಂದ ಕೂಡಿದೆ,
ಹೆಚ್ಚು ಬಿಸಿಲು , ಮಳೆ ಕಡಿಮೆಯಿರುವ ಜಾಗ . ಸ್ವಾಭಾವಿಕವಾಗಿ ನೀರಿನ ಕೊರತೆ ಇಲ್ಲಿದೆ
ಭಾರತದಂತೆ ವೈವಿಧ್ಯಮಯವಾದ ವಾತಾವರಣವಿಲ್ಲ . ನಾವು ಕಾಣುವುದು ಬೇಸಿಗೆ ಕಾಲ, ಚಳಿಗಾಲ. ಇಲ್ಲಿ ಏಪ್ರಿಲ್ ರಿಂದ ಸೆಪ್ಟೆಂಬರ್ ಅಂತ್ಯದವರೆಗೂ ಕಡು ಬೇಸಿಗೆ. ಇಲ್ಲಿ ಮಳೆ ಬಹಳ ಅಪರೂಪ.


ವಸ್ತು ಸ್ಥಿತಿ ಹೀಗಿರುವಾಗ ಇಲ್ಲಿ ಹೇಗೆ ಮಲೆನಾಡು ಸೃಷ್ಟಿಯಾಗುತ್ತದೆ? ಅದು ಹೇಗೆ ಸಾಧ್ಯ? ಎಂದು ನಿಮಗನಿಸಬಹುದು. ಆದರೆ ನೈಸರ್ಗಿಕ ನಿರ್ಮಿತ ಮಲೆನಾಡಿನಂತಹ ರಮ್ಯ ರಮಣೀಯ ಪ್ರದೇಶ ಒಮಾನ್ ದೇಶದ ದೋಫಾರ್ (dophar) ಪ್ರಾಂತ್ಯದಲ್ಲಿದೆ. ಇದು ಅರಬ್ಬರ ಸ್ವರ್ಗ ಎಂದೇ ಕರೆಯಲಾಗುತ್ತದೆ.

Dophar Oman Salalha Arab Country

ಅರಬ್ಬರ ಸ್ವರ್ಗ ಒಮಾನ್ (oman) ದೇಶದ ಈ ಜಾಗ

ಜೂನ್ ತಿಂಗಳಿಂದ ಆಗಸ್ಟ್ ಕೊನೆಯವರೆಗೂ ಮುಂಗಾರು ಸಮಯದಲ್ಲಿ
ಈ ಪ್ರಾಂತ್ಯದಲ್ಲಿ ಸುಮಾರು 10,000 ಚದರ ಕಿ.ಮಿ. ಕ್ಕೂ ಹೆಚ್ಚು ಜಾಗ ಹಚ್ಚ ಹಸಿರಿನಿಂದ ಆವೃತ್ತವಾಗುತ್ತದೆ. ಆ ಸ್ಥಳಗಳನ್ನ ನೋಡುತಿದ್ದಾಗ ನಾವು ಮಲೆನಾಡಿನಲ್ಲಿದ್ದೇವೆ ಎನ್ನುವಂತೆ ಭಾಸವಾಗುತ್ತದೆ. ಬೆಟ್ಟಗಳ ರಾಶಿಯಲ್ಲಿ, ಎಲ್ಲೆಲ್ಲೂ ಹಚ್ಚ ಹಸಿರು.
ಬೆಟ್ಟಗಳ ಬದಿಯಲ್ಲಿಯೇ ಇರುವ ವಿಶ್ವದರ್ಜೆಯ ಕಡಲ ತೀರಗಳು. ನದಿಗಳು,
ಜಲಪಾತಗಳು, ನದಿ ತೊರೆಗಳು, ಮುಂತಾದವೆಲ್ಲವೂ ನಮ್ಮ ಕರಾವಳಿ ಮತ್ತು ಮಲೆನಾಡನ್ನು ಜ್ಞಾಪಿಸುತ್ತವೆ.

Dophar Oman Salalha Arab Country


ದೋಫರ್ ಪ್ರಾಂತ್ಯದ ಪ್ರಮುಖ ಪಟ್ಟಣ ಸಲಾಲ್ಹ ಎನ್ನುವ ನಗರ. ಇದು ಒಮಾನ್ ದೇಶದ ಎರಡನೇ ವಾಣಿಜ್ಯ ನಗರ. ಮಸ್ಕತ್ ನಿಂದ 1,000 ಕಿಲೋ ಮೀಟರ್ ದೂರದಲ್ಲಿದೆ. ಇಲ್ಲಿ ಕರೀಫ್ ಸೀಸನ್ ಎಂದು ಕರೆಯಲ್ಪಡುವ ಮುಂಗಾರು ಹಬ್ಬ ಜನಪ್ರಿಯ. ಅರಬ್ ದೇಶಗಳ ಪ್ರಜೆಗಳು ಬೇಸಿಗೆಯಲ್ಲಿ, ಸಲಾಲ್ಹದಲ್ಲಿನ ತಂಪಾದ ಹವೆ ಮತ್ತು ವಾತಾವರಣವನ್ನು ಸವಿಯಲು ಭೇಟಿಯಿಡುತ್ತಾರೆ. ಪ್ರವಾಸಿಗರ ಬೇಸಿಗೆ ರಜೆ ಕಳೆಯಲು ಮತ್ತು ಹಿತಕರವಾದ ಹವಾಮಾನ ಆನಂದಿಸಲು ದೋಫಾರ್ ಸರಕಾರ ಸಂಗೀತ , ನೃತ್ಯ , ಚಿತ್ರಕಲಾ ಪ್ರದರ್ಶನಗಳನ್ನು ಹಮ್ಮಿಕೊಳ್ಳುವ ಮೂಲಕ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಪ್ರವಾಸಿಗರ ಆಕರ್ಷಣೆಯ ಕೇಂದ್ರ

ಪ್ರವಾಸಿಗರು ಇಲ್ಲಿ ಬಂದು ಟೆಂಟ್ ಗಳನ್ನು ಹಾಕಿಕೊಂಡು , ಸುತ್ತಮುತ್ತಲಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ತಮ್ಮ ರಜಾದಿನಗಳನ್ನ ಕಳೆಯುತ್ತಾರೆ. ಈ ಮೂರುನಾಲ್ಕು ತಿಂಗಳುಗಳು ಪ್ರವಾಸಿಗರಿಗೆ ಇದು ಸ್ವರ್ಗವೇ ಸರಿ. ಒಮಾನ್ ದೇಶದ ದಕ್ಷಿಣ ಭೂಭಾಗದಲ್ಲಿ ಹಿಂದೂ ಮಹಾಸಾಗರಕ್ಕಂಟಿಕೊಂಡಿರುವ ಪ್ರದೇಶ . ಮುಂಗಾರು ಮಾರುತಗಳು ಈ ಪ್ರದೇಶದ ಮೂಲಕ ಹಾದುಹೋಗುವುದರಿಂದ, ಇಲ್ಲಿನ ಮರಗಿಡಗಳೆಲ್ಲವೂ ಜೀವಕಳೆ ಪಡೆಯುತ್ತವೆ.

ನೀವುಇದನ್ನುಇಷ್ಟಪಡಬಹುದು: ವಿಸ್ಮಯ ತಾಣ ಓಮನ್ನಿನ ‘ಬಿಮ್ಮ ಸಿಂಕ್ ಹೋಲ್’

ಮೋಡ ಮುಚ್ಚಿದ ವಾತಾವರಣ. ಸತತವಾಗಿ ಬೀಳುವ ಇಬ್ಬನಿ, ತಂಪಾದ ಗಾಳಿ.
ಮುಂಗಾರು ಕಳೆದ ನಂತರ ಈ ಹಚ್ಚ ಹಸಿರಿನ ಗಿಡ ಮರಗಳು, ಹುಲ್ಲು ಎಲ್ಲವೂ ಒಣಗಿಹೋಗುತ್ತವೆ. ಕರೀಫ್ ಸೀಸನ್ ನಲ್ಲಿ ನೋಡಿದ ಹಸಿರು ಪ್ರದೇಶ ಅಕ್ಟೋಬರ್ ತಿಂಗಳಲ್ಲಿ ಒಣ ಹುಲ್ಲಿನಂತಾಗುತ್ತದೆ. ಮಂಜು ಕವಿತಿದ್ದ ರಸ್ತೆಗಳು ಬಟಾ ಬಯಲಿನಂತೆ ಕಾಣತೊಡಗುತ್ತದೆ. ಝರಿಗಳು ಬತ್ತತೊಡಗುತ್ತವೆ. ಗಿರಿಶಿಖರಗಳು ಬೋಳು ಗುಡ್ಡದಂತೆ ಕಾಣುತ್ತವೆ. ಜೂನ್ ತಿಂಗಳುವರೆಗೂ ಪ್ರವಾಸಿಗರು ಇತ್ತ ತಲೆ ಹಾಕುವುದು ಕಡಿಮೆ.

Dophar Oman Salalha Arab Country


ಅರಬ್ಬಿ ಸಮುದ್ರದ ಕಿನಾರೆಯಲ್ಲಿರುವ ಸಲಾಲ್ಹ (salah) ಪಟ್ಟಣ

ಅರಬ್ಬಿ ಸಮುದ್ರದ ಕಿನಾರೆಯಲ್ಲಿರುವ ಸಲಾಲ್ಹ ಪಟ್ಟಣ ನಮ್ಮ ಪಶ್ಚಿಮ ಘಟ್ಟದ ಕೆಳಗಿನ ಒಂದು ನಗರದಂತೆ ಇದೆ. ಬಾಳೆಹಣ್ಣು, ಎಳೆನೀರು, ಹಾಗೂ ಇನ್ನಿತರೆ
ತರಕಾರಿಗಳು ಇಲ್ಲಿ ಪ್ರಸಿದ್ದ. ಸಲಾಲ್ಹ ಬಳಿಯಿರುವ ವಾದಿ ದರ್ಬಾತ್ ನಲ್ಲಿ ಜಲಪಾತವನ್ನ ಕಾಣಬಹುದು. ಈ ಜಲಪಾತದಲ್ಲಿ ಯಾವಾಗಲೂ ನೀರು
ಹರಿಯುವುದಿಲ್ಲ, ಧೋಫಾರ್ ಬೆಟ್ಟ ಗುಡ್ಡಗಳಲ್ಲಿ ಅತಿ ಹೆಚ್ಚು ಮಳೆಯಾದಾಗ ಇಲ್ಲಿ ನೀರನ್ನು ನಾವು ಕಾಣಬಹುದು. “ಕರೀಫ್ ಸೀಸನ್” ನಲ್ಲಿ ಮಾತ್ರ ಸ್ವಲ್ಪ ಜಾಸ್ತಿ ಮಳೆಯಾಗುತ್ತದೆ.

Dophar Oman Salalha Arab Country


ಅಂದಾಜು ನೂರು ಮೀಟರ್ ಉದ್ದ ವಿರುವ ಈ ಜಲಪಾತ ನಾಲ್ಕೈದು ಕವಲಾಗಿ ಒಡೆದು ನೀರು ಕೆಳಗೆ ಬೀಳುತ್ತದೆ. ಕಡಿದಾದ ಬಂಡೆಯನ್ನು ಸುತ್ತುವರಿದಿರುವ ಹಚ್ಚ ಹಸಿರು ಮರಗಿಡಗಳ ನಡುವೆ ಬಾಗಿ ಬಳುಕುತ್ತಾ ಧುಮುಕುವುದನ್ನು ನೋಡುವುದೇ
ಒಂದು ರೋಮಾಂಚಕ ಅನುಭವ. ನೀರು ಬಂಡೆಗೆ ತಾಗಿ ಮುತ್ತು ಚೆಲ್ಲಿದಂತೆ ಚದುರಿ ಬೀಳುತ್ತಿರುವ ಸುಂದರ ನೋಟ. ಈ ವಾದಿ ದರ್ಬಾತ್ ಪೂರ್ವಾಭಿಮುಖವಾಗಿ ಹರಿದು ಅರಬ್ಬಿ ಸಮುದ್ರ ವನ್ನು ಸೇರುತ್ತದೆ.

ಸಲಾಲ್ಹ ಸುತ್ತ ಮುತ್ತಲು ಹಲವಾರು ಪ್ರವಾಸಿ ಸ್ಥಳಗಳಿವೆ, ಮಗಸೇಲ್ ಕಡಲ ತೀರ, ವಾದಿ
ದರ್ಬಾತ್, ಸುಮರಂ, ಅಲ್ ಬಲೀದ್ ಪುರಾತತ್ವ ಉದ್ಯಾನವನ, ತವಿ ಅಟ್ಟೈರ್ ಸಿಂಕ್ ಹೋಲ್, Anti Gravity Point ಅವುಗಳಲ್ಲಿ ಪ್ರಮುಖವಾದವು.


ತಾಖಾ ಕ್ಯಾಸೆಲ್, ದಾಲ್ಖೂಟ್, ರಾಯ್ಖೂಟ್, ಸೇರಿದಂತೆ ಹಲವಾರು ನಯನ ಮನೋಹರ ಸ್ಥಳಗಳು ಇಲ್ಲಿವೆ. ಕರೀಫ಼್ ಸೀಸನ್ ನಲ್ಲಿ ಒಮಾನ್ ಗೆ ಭೇಟಿ ನೀಡಿದಾಗ, ಸಲಾಲ್ಹಕ್ಕೆ ಭೇಟಿ ನೀಡುವುದನ್ನ ಮರೆಯಬೇಡಿ.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button