ಪಯಣಿಗರ ಬ್ಯಾಗು, ಬೈಕು, ಕಾರುಗಳಲ್ಲಿ ಜೋತಾಡುತ್ತಿರುವ ಬಣ್ಣಬಣ್ಣದ ಬಾವುಟಗಳು ನಿಜಕ್ಕೂ ಏನು?
ಬೈಕು ಹ್ಯಾಂಡಲ್ ಒಂದು ತುದಿಯಿಂದ ಇನ್ನೊಂದು ತುದಿಯವರೆಗೂ ತೂಗಿಕೊಂಡಿರುವ ಟಿಬೆಟಿಯನ್ ಧ್ವಜಗಳ ಹಿಂದೆ ಒಂದು ಒಳ್ಳೆಯ ಉದ್ದೇಶವಿದೆ. ಪ್ರವಾಸಿಗರಲ್ಲಿ, ಅದರಲ್ಲೂ ಮೋಟಾರ್ ಸೈಕಲ್ ಪ್ರವಾಸಿಗರ ಬೈಕಿನಲ್ಲಿ ಇದು ಸಾಮಾನ್ಯ.
- ಸುಜಯ್.ಪಿ.
ಹಿಮದ ಊರು ಕಾಶ್ಮೀರದ ತುದಿ, ಭಾರತದ ಭುಜದ ಮೇಲಿರುವ ಭೂತಾನಿನ ಗಡಿ, ದಕ್ಷಿಣದ ಕನ್ಯಾಕುಮಾರಿಯ ಸಮುದ್ರದ ಅಂಚು ಅಥವಾ ಗುರಿಯೇ ಇಲ್ಲದೇ ಉದ್ದದ ದಾರಿಯ ಮೇಲೆ ಹೊರಟು ನಿಂತ ಬುಲೆಟು ಬೈಕುಗಳಲ್ಲಿ ಹ್ಯಾಂಡಲುಗಳ ಮಧ್ಯೆ ಉದ್ದಕ್ಕೆ ಕಟ್ಟಿರುವ ಪುಟ್ಟ ಬಣ್ಣಬಣ್ಣದ ಬಾವುಟಗಳನ್ನು ನೋಡಿಯೇ ಇರುತ್ತೀರಿ. ಹಿಮಾಲಯದ ರಸ್ತೆ, ಬೆಟ್ಟಗುಡ್ಡದ ಫೋಟೋಗಳಲ್ಲೂ ಬಣ್ಣದ ಬಾವುಟಗಳು ಕಾಣ ಸಿಗುತ್ತವೆ.
ಪಕ್ಕನೆ ಕಣ್ಣು ಸೆಳೆದು ಬಿಡುವ ಈ ಬಾವುಟಗಳು ಏನು ಎಂದು ಹುಡುಕಾಡಿದಾಗ ಸಿಕ್ಕ ವಿಷಯಗಳು ಇಷ್ಟು.
ಇದು ಟಿಬೆಟಿಯನ್ ಪ್ರಾರ್ಥನಾ ಧ್ವಜಗಳು
ಹಿಮಾಚಲದ ಬಿಳಿ ಬಣ್ಣದ ವಾತಾವರಣಕ್ಕೆ ಬಣ್ಣ ಬಣ್ಣದ ಅಲಂಕಾರ ಮಾಡಿದಂತೆ ಕಾಣುವ ಈ ಧ್ವಜದ ಕಾರಣ ಮತ್ತು ಹಿನ್ನೆಲೆಯ ಬಗ್ಗೆ ನೋಡಿದರೆ ಟಿಬೇಟಿಯನ್ ಧಾರ್ಮಿಕ ಕಥೆ ತೆರೆದುಕೊಳ್ಳುತ್ತದೆ. ಈ ನೀಲಿ, ಬಿಳಿ, ಕೆಂಪು, ಹಸಿರು ಮತ್ತು ಹಳದಿ ಬಣ್ಣದ ಬಟ್ಟೆಯ ಧ್ವಜಗಳನ್ನು ಹಿಮಾಲಯದ ಎತ್ತರದ ಹಾದಿಗಳು ಮತ್ತು ಶಿಖರಗಳ ಉದ್ದಕ್ಕೂ ಕಟ್ಟಲಾಗಿದೆ.
ಟಿಬೆಟಿಯನ್ ಜನರು ಪ್ರಕೃತಿಯನ್ನು ಗೌರವಿಸಲು ಈ ಪ್ರಾರ್ಥನಾ ಧ್ವಜಗಳನ್ನು ನೆಡುತ್ತಾರಂತೆ. ಧ್ವಜದಲ್ಲಿನ ಐದು ಬಣ್ಣಗಳಾದ ಬಿಳಿ ಗಾಳಿಯನ್ನು, ಕೆಂಪು ಬೆಂಕಿಯನ್ನು, ಹಸಿರು ನೀರನ್ನು, ಹಳದಿ ಭೂಮಿ, ಮತ್ತು ನೀಲಿ ಆಕಾಶವವನ್ನು ಸಂಕೇತಿಸುತ್ತದೆ ಎಂಬುದು ಅವರ ನಂಬಿಕೆ.
ಇನ್ನು ಈ ಧ್ವಜಗಳನ್ನು ಗಮನಿಸಿದರೆ ಅದರಲ್ಲಿ ‘ಓಂ ಮಣಿ ಪದ್ಮೆ ಹಮ್’ ಎಂಬ ಮಂತ್ರವನ್ನು ಬರೆಯಲಾಗಿದೆ. ಟಿಬೆಟಿಯನ್ನರ ಪ್ರಕಾರ ಧ್ಯಾನದ ಸಮಯದಲ್ಲಿ ಈ ಮಂತ್ರವನ್ನು ಪಠಿಸುವುದರಿಂದ ಅಹಂಕಾರ, ಅಸೂಯೆ, ಅಜ್ಞಾನ, ದುರಾಸೆ ಮತ್ತು ಕೋಪವನ್ನು ನಿಯಂತ್ರಿಸಬಹುದು.
ಟಿಬೆಟ್‌ನಲ್ಲಿ ಈ ಧ್ವಜಗಳನ್ನು ನೇತುಹಾಕುವ ಸಂಪ್ರದಾಯವು ಸುಮಾರು 2000ಕ್ಕೂ ಹೆಚ್ಚು ವರ್ಷಗಳ ಹಿಂದೆ ಪ್ರಾರಂಭವಾಯಿತಂತೆ. ಅವರು ಮನೆಗಳ ಹೊರಗೆ, ಪರ್ವತದ ಹಾದಿ, ನದಿ ಮತ್ತು ಇತರ ಆಧ್ಯಾತ್ಮಿಕ ಸ್ಥಳಗಳಲ್ಲಿ ಈ ಧ್ವಜಗಳನ್ನು ನೆಟ್ಟು, ‘ಓಂ ಮಣಿ ಪದ್ಮೆ ಹಮ್’ ಎಂಬ ಮಂತ್ರಗಳ ಕಂಪನಗಳನ್ನು ಎಲ್ಲೆಡೆಯೂ ಹರಡುವಂತೆ ನೋಡಿಕೊಂಡರು ಎನ್ನಲಾಗಿದೆ. ಈ ಪ್ರಾರ್ಥನಾ ಧ್ವಜಗಳು, ಧ್ವಜ ನೆಡುವವರಿಗೆ ಮತ್ತು ಸುತ್ತಮುತ್ತಲಿನವರಿಗೆ ಸಂತೋಷ, ದೀರ್ಘಾಯುಷ್ಯ ಮತ್ತು ಸಮೃದ್ಧಿಯನ್ನು ತರುತ್ತವೆ ಎಂಬುದು ಅವರ ನಂಬಿಕೆ.
ಟಿಬೆಟಿಯನ್ ಪ್ರಾರ್ಥನೆ ಧ್ವಜಗಳ ಇತಿಹಾಸ ನೋಡಿದರೆ ಪ್ರಾರ್ಥನಾ ಧ್ವಜಗಳನ್ನು ಹೆಚ್ಚಾಗಿ ಟಿಬೆಟಿಯನ್ ಬೌದ್ಧಧರ್ಮದಲ್ಲಿ ಬಳಸಲಾಗುತ್ತದೆಯಾದರೂ, ಈ ಧ್ವಜಗಳು ವಾಸ್ತವವಾಗಿ ಭಾರತದ ಮೂಲವನ್ನು ಹೊಂದಿವೆ ಎನ್ನಲಾಗಿದೆ.
ಧ್ವಜಗಳಲ್ಲಿ ಬರೆಯಲಾದ ಸೂತ್ರಗಳು 2500 ವರ್ಷಗಳ ಹಿಂದೆ ಭಾರತದಲ್ಲಿ ಶಾಕ್ಯಮುನಿ ಬುದ್ಧನ ಪ್ರವಚನಗಳಿಂದ ನೇರವಾಗಿ ಪಡೆದ ಸಣ್ಣ ಸಣ್ಣ ಪಠ್ಯಗಳು ಎಂಬ ವಾದಗಳೂ ಇದೆ.
ಟಿಬೆಟಿಯನ್ ಪ್ರಾರ್ಥನೆ ಧ್ವಜಗಳು ಚೌಕ ಅಥವಾ ಆಯತಾಕಾರದ ಎರಡು ರೀತಿಯಲ್ಲಿರುತ್ತವೆ. ಈ ಧ್ವಜಗಳನ್ನು ಮುಖ್ಯವಾಗಿ ಹತ್ತಿಯಿಂದ ತಯಾರಿಸಲಾಗುತ್ತದೆ. ಸಾಂಪ್ರದಾಯಿಕ ನಂಬಿಕೆಯ ಪ್ರಕಾರ ಪ್ರಾರ್ಥನಾ ಧ್ವಜಗಳ ಮೇಲಿನ ಚಿಹ್ನೆಗಳು ಮತ್ತು ಮಂತ್ರಗಳು ಪವಿತ್ರವಾದ ಕಾರಣ ಅವುಗಳನ್ನು ಗೌರವದಿಂದ ಪರಿಗಣಿಸಬೇಕು. ಧ್ವಜಗಳನ್ನು ನೆಲದ ಮೇಲೆ ಇಡುವುದು ಅಗೌರವ ಎಂದು ಪರಿಗಣಿಸಲಾಗುತ್ತದೆ.
ನೀವುಇದನ್ನುಇಷ್ಟಪಡಬಹುದು: ಬೈಕಿನಲ್ಲಿ ದೇಶ ಸುತ್ತುವ ಮಾದರಿ ಅಪ್ಪ – ಮಗಳು
ಟಿಬೆಟಿಯನ್ ಪ್ರಾರ್ಥನಾ ಧ್ವಜಗಳನ್ನು, ಲಡಾಕ್ ಧ್ವಜ, ಲೇಹ್ ಲಡಾಕ್ ಧ್ವಜ, ನೇಪಾಳ ಧ್ವಜ, ಹಿಮಾಲಯನ್ ಧ್ವಜ ಎಂಬ ಅನೇಕ ಹೆಸರುಗಳಿಂದ ಕರೆಯಲಾಗುತ್ತದೆ.
ಈ ಧ್ವಜಗಳನ್ನು ಆನ್‌ಲೈನಲ್ಲಿ ಕೂಡಾ ಖರೀದಿಸಬಹುದು, ಹಲವು ಗಾತ್ರ, ವೈವಿಧ್ಯಗಳಲ್ಲಿ ಲಭ್ಯವಿದೆ.
ಬೌದ್ಧ ಭಿಕ್ಷುಗಳು ತಂಗಾಳಿಯೊಂದಿಗೆ ಜಗತ್ತಿಗೆ ಕಳುಹಿಸಬೇಕಾದ ಆಶೀರ್ವಾದಗಳನ್ನು ಧ್ವಜಗಳ ಮೇಲೆ ಮಂತ್ರಗಳು ಮತ್ತು ಚಿಹ್ನೆಗಳ ಮೂಲಕ ಮುದ್ರಿಸಿ ಪಸರಿಸಿದ ಕಾರಣ ಈ ಧ್ವಜಗಳು ಟಿಬೇಟಿಯನ್ ಪ್ರಾರ್ಥನಾ ಧ್ವಜಗಳು ಎಂದು ಪ್ರಸಿದ್ಧವಾಯಿತು. ಟಿಬೆಟಿಯನ್ನರು ಈ ಧ್ವಜದಲ್ಲಿನ ಮಂತ್ರಗಳು ಗಾಳಿಯ ಸಹಾಯದಿಂದ ಧನಾತ್ಮಕ ಶಕ್ತಿಯನ್ನು ಎಲ್ಲೆಡೆಯೂ ವ್ಯಾಪಿಸುತ್ತದೆ ಮತ್ತು ಎಲ್ಲರಿಗೂ ಸಂತೋಷವನ್ನು ತರುತ್ತದೆ ಎಂದು ನಂಬಿದ್ದಾರೆ.
ಧ್ವಜಗಳು ನೀಲಿ, ಬಿಳಿ, ಕೆಂಪು, ಹಸಿರು ಮತ್ತು ಹಳದಿ ಬಣ್ಣಗಳಿಂದ ಪ್ರಾರಂಭಿಸಿ ಎಡದಿಂದ ಬಲಕ್ಕೆ ನಿರ್ದಿಷ್ಟ ಕ್ರಮದಲ್ಲಿ ಜೋಡಿಸಲ್ಪಟ್ಟಿರುತ್ತವೆ.
ಟಿಬೆಟಿಯನ್ನರ ಮದುವೆ ಇನ್ನಿತರ ಪ್ರಮುಖ ಸಂದರ್ಭಗಳಲ್ಲಿ ಧ್ವಜಗಳನ್ನು ಸಾಮಾನ್ಯವಾಗಿ ಇಡಲಾಗುತ್ತದಂತೆ. ಇನ್ನು ನಾವು ನೋಡಿರುವಂತೆ, ದೂರದೂರಿನ ಪ್ರಯಾಣವನ್ನು ಪ್ರಾರಂಭಿಸುವಾಗ ಅನಾರೋಗ್ಯ ಅಥವಾ ಇನ್ಯಾವುದೇ ಕೆಡುಕನ್ನು ತಪ್ಪಿಸಲು ಕೂಡಾ ಈ ಪ್ರಾರ್ಥನಾ ಧ್ವಜಗಳನ್ನು ಜೊತೆಗೆ ಕೊಂಡೊಯ್ಯತ್ತಾರೆ.
ಈಗ ಈ ಧ್ವಜಗಳು ಹಿಮಾಲಯದ ದಾರಿ ಮಾತ್ರವಲ್ಲದೆ ನಮ್ಮ ಸುತ್ತಲೂ ಹಲವೆಡೆ ಬೈಕ್, ಕಾರು ಮತ್ತು ಮನೆ, ಕಚೇರಿಗಳ ಗೋಡೆಗಳಲ್ಲಿ ಕೂಡಾ ಕಾಣಸಿಗುತ್ತದೆ. ತನ್ನೊಳಗೆ ಎಲ್ಲರ ಸಂತಸ ಬಯಸುವ ಮಂತ್ರಗಳನ್ನು ಇಟ್ಟುಕೊಂಡಿರುವ ಈ ಬಣ್ಣ ಬಣ್ಣದ ಪುಟ್ಟ ಧ್ವಜಗಳ ಹೊರಗೂ ಒಂದು ಚಂದವಿದೆ.
ತಂಗಾಳಿಯು ಈ ಧ್ವಜದಲ್ಲಿನ ಪ್ರಾರ್ಥನೆಗಳನ್ನು ಎಲ್ಲೆಡೆಗೂ ಒಯ್ಯಲಿ, ಎಲ್ಲರಿಗೂ ನೆಮ್ಮದಿ ತರಲಿ. ಬೈಕಿಗೆ ಈ ಧ್ವಜ ಕಟ್ಟಿಕೊಂಡು ಉದ್ದಕ್ಕೆ ಸಾಗುವ ಪ್ರವಾಸಿಗರನ್ನು ಕಂಡಾಗಲೆಲ್ಲಾ ನನಗಂತೂ ಈ ಧ್ವಜ ಒಮ್ಮೆಗೆ ಟ್ರಾವೆಲರುಗಳ ರಾಷ್ಟ್ರಧ್ವಜದಂತೆ ಅನಿಸಿಬಿಡುತ್ತದೆ.
ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ
n