ವಿಂಗಡಿಸದ

ಕರ್ನಾಟಕದ ಪ್ರಸಿದ್ಧ ಬುಡಕಟ್ಟು ಕಲಾ ಪ್ರಕಾರ “ಹಸೆ ಚಿತ್ತಾರ”

“ಹಸೆ ಚಿತ್ತಾರ” ಕರ್ನಾಟಕದ ಬುಡಕಟ್ಟು ಕಲೆ ಪ್ರಕಾರವಾಗಿದೆ. ರೇಖಾಚಿತ್ರದ ಮಾದರಿಗಳನ್ನು ಒಳಗೊಂಡಿರುವ ಈ ಕಲಾ ಪ್ರಕಾರವು ಅಲಂಕಾರಿಕವಾಗಿ ಗೋಡೆಗಳು, ಪೀಠೋಪಕರಣಗಳ ಮೇಲೆ ಚಿತ್ರಿಸಲಾಗುತ್ತದೆ.

ಉಜ್ವಲಾ ವಿ.ಯು.

ಶಿವಮೊಗ್ಗ ಜಿಲ್ಲೆಯ ಸಾಗರದ ದೀವರು ಸಮುದಾಯದ ಮಹಿಳೆಯರಿಂದ ಮೊದಲು ಮೂಡಿಬಂದ ಈ ಕಲಾ ಪ್ರಕಾರವು ಸಾಂಪ್ರದಾಯಿಕವಾಗಿ ಶುಭ ಸಮಾರಂಭಗಳ ಸಮಯದಲ್ಲಿ ಮನೆಗಳ ಒಳ ಮತ್ತು ಹೊರ ಗೋಡೆಗಳ ಮೇಲೆ ಚಿತ್ರಿಸಲಾಗುತ್ತದೆ.

“Hase Chittara” Folk Art Form of Karnataka

ಹಬ್ಬಗಳು ಮತ್ತು ಮದುವೆಯಂತಹ ಧಾರ್ಮಿಕ ಸಮಾರಂಭಗಳಲ್ಲಿ ಭಗವಂತನು ಭೂಮಿಗೆ ಬಂದು ಭಕ್ತರನ್ನು ಆಶೀರ್ವದಿಸುತ್ತಾನೆ ಎಂಬ ನಂಬಿಕೆ ಇದೆ. ಈ ಸಂದರ್ಭದಲ್ಲಿ ಭಗವಂತನನ್ನು ಸ್ವಾಗತಿಸುವ ಸಲುವಾಗಿ ಈ ಚಿತ್ರಗಳನ್ನು ಚಿತ್ರಿಸುವ ವಾಡಿಕೆ ದೀವರು ಸಮುದಾಯದಲ್ಲಿದೆ.

ಇತಿಹಾಸ:

ವಾಸ್ತವಿಕವಾಗಿ, ಹಸೆ ಚಿತ್ತಾರ (Hase Chittara) ಯಾವುದೇ ರೀತಿಯ ಇತಿಹಾಸವನ್ನು ಹೊಂದಿಲ್ಲ. ಆದರೆ ಸುದೀರ್ಘವಾದ ಪೌರಾಣಿಕ ಹಿನ್ನೆಲೆಯನ್ನು ಹೊಂದಿದೆ.

ಈ ಚಿತ್ತಾರವನ್ನು ಸೃಷ್ಟಿಕರ್ತನಾದ ಬ್ರಹ್ಮನು ಭೂಮಿಯ ಮೇಲೆ ಮೊದಲು ಚಿತ್ರಿಸಿ, ತನ್ನ ಅನುಯಾಯಿಗಳಿಗೆ ಚಿತ್ರಿಸುವ ವಿದ್ಯೆಯನ್ನು ಧಾರೆ ಎರೆದನು ಎಂಬ ನಂಬಿಕೆ ಇದೆ.

ಮತ್ತೊಂದು ಪುರಾಣದ ಪ್ರಕಾರ, 9000 ವರ್ಷಗಳ ಹಿಂದೆ ಗುಹೆಗಳಲ್ಲಿ ವಾಸಿಸುವ ಜನರು ಈ ಕಲಾಚಿತ್ರವನ್ನು ಆರಂಭಿಸಿದರು.

ಕಾಲ ಕಳೆದಂತೆ, ಇದು ಗುಹೆಯ ಗೋಡೆಗಳಿಂದ ಮನೆಯ ಗೋಡೆಗಳಲ್ಲಿ ಸ್ಥಾನ ಪಡೆಯಿತು. ಸುಮಾರು 500 ವರ್ಷಗಳಿಂದ ಇದು ದೀವರು ಸಮುದಾಯದ ಭಾಗವಾಗಿದೆ.

ಕನ್ನಡದಲ್ಲಿ ಚಿತ್ತಾರ ಎಂದರೆ ಚಿತ್ರ ಅಥವಾ ವಿನ್ಯಾಸ ಎಂದರ್ಥ. ಮನೆಯ ಗೋಡೆಗಳ ಮೇಲೆ ಚಿತ್ರದಂತೆ ಮೂಡುವುದರಿಂದ ಇದನ್ನು ಚಿತ್ತಾರ ಎಂದು ಕರೆಯಲಾಗುತ್ತದೆ. ಚಿತ್ರಕಾರರು ಈ ಚಿತ್ರಗಳನ್ನು ಮನೆಯ ಒಳ ಮತ್ತು ಹೊರಾಂಗಣದ ಗೋಡೆಗಳು, ಮನೆಯ ಪೀಠೋಪಕರಣಗಳ ಮೇಲೆ ಚಿತ್ರಿಸುತ್ತಾರೆ.

ಚಿತ್ತಾರಕ್ಕೆ ಬಳಸುವ ವಸ್ತುಗಳು:

ಚಿತ್ತಾರವನ್ನು ಬಿಡಿಸಲು ನೈಸರ್ಗಿಕ ವಸ್ತುಗಳನ್ನು ಬಳಸಲಾಗುತ್ತದೆ. ವೈವಿಧ್ಯಮಯವಾದ ಬಣ್ಣಕ್ಕಾಗಿ ಮರದ ತೊಗಡೆ, ಬೀಜಗಳು, ತರಕಾರಿಗಳನ್ನು ಬಳಸಲಾಗುತ್ತದೆ.

ಆದರೆ ಸಾಮಾನ್ಯವಾಗಿ ಕೆಂಪು ಬಣ್ಣಕ್ಕಾಗಿ ಕೆಮ್ಮಣ್ಣು ( ಕೆಂಪು ಮಣ್ಣು), ಬಿಳಿ ಬಣ್ಣಕ್ಕಾಗಿ ಅಕ್ಕಿ ಹಿಟ್ಟು, ಕಪ್ಪು ಬಣ್ಣಕ್ಕಾಗಿ ಮಸಿ ಕೆಂಡವನ್ನು, ಹಳದಿ ಬಣ್ಣಕ್ಕಾಗಿ ಅಕ್ಕಿ ಹಿಟ್ಟಿನೊಂದಿಗೆ ಅರಿಶಿನವನ್ನು ಬಳಸಲಾಗುತ್ತದೆ. ಇವುಗಳನ್ನು ಹೊರತು ಪಡಿಸಿ, ಕಾರೆ ಕಾಯಿ, ಗುರಗೆಕಾಯಿ, ಸುಣ್ಣ, ಹಾಲನ್ನು ಸಹ ಬಳಸಲಾಗುತ್ತದೆ.

ಬಣ್ಣಗಳ ಬಳಕೆಯ ಆಧಾರದ ಮೇಲೆ ಹಸೆ ಚಿತ್ತಾರವನ್ನು ಮೂರು ವಿಧವಾಗಿ ವಿಂಗಡಿಸಲಾಗಿದೆ. 1. ಬಿಳಿಹಸೆ, 2.ಕಪ್ಪುಹಸೆ, 3. ಕೆಮ್ಮಣ್ಣುಹಸೆ ಎಂದು.

ಸಾಮಾನ್ಯವಾಗಿ, ತಳವನ್ನು ಸಿದ್ಧಗೊಳಿಸಲು ಮೊದಲು ಕೆಮ್ಮಣ್ಣನ್ನು ಗೋಡೆ ಅಥವಾ ಉಪಕರಣಗಳ ಮೇಲೆ ಲೇಪಿಸಿ ಕೆಂಪುಬಣ್ಣ ಬರುವಂತೆ ಮಾಡಲಾಗುತ್ತದೆ. ಹಸುವಿನ ಸಗಣಿಯನ್ನು ಲೇಪಿಸುವ ವಾಡಿಕೆಯೂ ಇದೆ.

ನಂತರ ರೇಖೆಗಳನ್ನು ಎಳೆಯಲು ಒಣ ಹುಲ್ಲು ಅಥವಾ ನಾರನ್ನು ಬಳಸಲಾಗುತ್ತದೆ. ರೇಖೆಗಳನ್ನು ಎಳೆಯಲು ನುಣ್ಣಗೆ ಅರೆದ ಅಕ್ಕಿಹಿಟ್ಟನ್ನು ಬಳಸಲಾಗುತ್ತದೆ.

ಈಗಿನ ಚಿತ್ರಕಾರರು ನೈಸರ್ಗಿಕ ವಸ್ತುಗಳನ್ನು ಬಳಸುವ ಬದಲಾಗಿ ಪೇಟಿಂಗ್ ಬ್ರಷ್ ಮತ್ತು ಕೃತಕ ಬಣ್ಣಗಳನ್ನು ಬಳಸುತ್ತಾರೆ.

ಚಿತ್ರಕಾರರು ಪೌರಾಣಿಕ ಕಥೆಗಳು, ಧಾರ್ಮಿಕ ಮತ್ತು ಸಾಮಾಜಿಕ ಕೃಷಿ ಪದ್ಧತಿ, ದೈನಂದಿನ ಜೀವನ ಪದ್ಧತಿಯನ್ನು ಆಧರಿಸಿ ಚಿತ್ತಾರವನ್ನು ಬಿಡಿಸುತ್ತಾರೆ.

ಈ ಚಿತ್ತಾರಗಳು ಶುಭ ಸಮಾರಂಭದ ಮೆರುಗನ್ನು ಮತ್ತಷ್ಟು ಹೆಚ್ಚಿಸುತ್ತದೆ. ಮದುಮಕ್ಕಳಂತೆ ಈ ಹಸೆ ಚಿತ್ತಾರಗಳಿಂದ ಮನೆಯೂ ಸಹ ಅಲಂಕಾರಗೊಂಡು, ಜನರ ಮನಸ್ಸೂ ಹಸನಾಗುತ್ತದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button