ರಾಜಸ್ಥಾನದಲ್ಲಿದೆ ಚೆಂದದ ಅಜ್ಮೀರ್ ದರ್ಗಾ ಶರೀಫ್

ಅಜ್ಮೀರ್ ರಾಜಸ್ಥಾನದ ಒಂದು ನಗರ. ಅನಾ ಸಾಗರ್ ಎಂಬ ಸರೋವರದ ದಕ್ಷಿಣ ಭಾಗದಲ್ಲಿರುವ ಇದು ಮುಸ್ಲಿಮರ ಪವಿತ್ರ ಯಾತ್ರಾಸ್ಥಳ. ಪರ್ಷಿಯನ್ ಸೂಫಿ ಸಂತ ಖ್ವಾಜಾ ಮೊಯಿನುದ್ದೀನ್ ಚಿಸ್ತಿಯವರ ಅಂತಿಮ ವಿಶ್ರಾಂತಿಯ ಸ್ಥಳ. ಶ್ರೀಮಂತ ಮೊಘಲ್ ಶೈಲಿಯ ವಾಸ್ತುಶಿಲ್ಪಕ್ಕೆ ಉತ್ತಮ ಉದಾಹರಣೆ. ಇಂತಹ ಪ್ರಸಿದ್ಧ ಅಜ್ಮೀರ್ ದರ್ಗಾ ಶರೀಫ್ ಕುರಿತಾದ ಬರಹ – ರಿಯಾನ
ಅಜ್ಮೀರ್ ದರ್ಗಾ ಶರೀಫ್ ಮುಸ್ಲಿಮರ ಪವಿತ್ರ ಯಾತ್ರಾ ಸ್ಥಳಗಳಲ್ಲಿ ಒಂದು. ಇದನ್ನು ಸುಮಾರು ಹದಿಮೂರನೆಯ ಶತಮಾನದಲ್ಲಿ ಮೊಘಲ್ ಚಕ್ರವರ್ತಿ ಹುಮಾಯೂನ್ ನಿರ್ಮಿಸಿದನು. ಬುಲಂದ್ ದರ್ವಾಜಾ ಎಂದು ಕರೆಯಲ್ಪಡುವ ದೈತ್ಯ ದ್ವಾರದ ಮೂಲಕ ನೀವು ಇದನ್ನು ಪ್ರವೇಶಿಸಬಹುದು. ಅಮೃತಶಿಲೆಯಿಂದ ಕೆತ್ತಿದ ಮೊಯಿನುದ್ದೀನ್ ಚಿಸ್ತಿಯ ಸಮಾಧಿಯನ್ನು ನೋಡಬಹುದು .ಇದು ಮೇಲ್ಭಾಗದಲ್ಲಿ ಚಿನ್ನದ ಲೇಪನವನ್ನು ಹೊಂದಿದ್ದು ಅಮೃತಶಿಲೆಯಿಂದ ಇದನ್ನು ರಕ್ಷಿಸಲ್ಪಟ್ಟಿದೆ . ದರ್ಗಾವು ಗೋರಿ ಪ್ರಾಂಗಣ ಗಳಂತಹ ವಿವಿಧ ವಲಯಗಳನ್ನು ಹೊಂದಿದೆ. ನಿಜಾಂ ಗೇಟ್, ಜುಮ್ಮಾ ಮಸೀದಿ, ಬುಲಂದ್ ದರ್ವಾಜಾ ಔಲಿಯಾ ಮಸೀದಿ ಹೀಗೆ ಸುಮಾರು 12 ಇತರ ಪ್ರಮುಖ ಸಂಸ್ಥೆಗಳನ್ನು ಗಮನಿಸಬಹುದು.

ಇಲ್ಲಿನ ಒಂದು ಪ್ರಸಿದ್ಧ ಆಚರಣೆಯ ಬಗ್ಗೆ ಹೇಳಲೇಬೇಕು. ಅಜ್ಮೀರ್ ದರ್ಗಾದಲ್ಲಿ ಉರುಸ್ ಎಂಬ ಸುಂದರವಾದ ಆಚರಣೆಯನ್ನು ಆರು ದಿನಗಳ ಕಾಲ ನಡೆಸಲಾಗುತ್ತದೆ. ಲಕ್ಷಾಂತರ ಜನರು ಪಾಲ್ಗೊಳ್ಳುವ ಇದನ್ನು ಇಸ್ಲಾಮಿಕ್ ಕ್ಯಾಲೆಂಡರ್ ನ ಏಳನೇ ತಿಂಗಳಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಸಾಮಾನ್ಯವಾಗಿ ಪ್ರತಿ ರಾತ್ರಿಯಲ್ಲಿ ಮುಚ್ಚಲ್ಪಡುವ ಮುಖ್ಯದ್ವಾರವು ಈ ಆರೂ ದಿನದಂದು ಹಗಲು ಮತ್ತು ರಾತ್ರಿ ತೆರೆದಿರುತ್ತದೆ . ಸದಸ್ಯರು ನಗರದ ಮೂಲಕ ನಿಜಾಮ್ ಗೇಟ್ ಕಡೆಗೆ ಮೆರವಣಿಗೆ ಮಾಡುತ್ತಾರೆ ಮತ್ತು ಬುಲಂದ್ ದರ್ವಾಜಾ ದಲ್ಲಿ ಧ್ವಜವನ್ನು ಹಾರಿಸಲಾಗುತ್ತದೆ .ಪವಿತ್ರ ದೇಗುಲಕ್ಕೆ ಭೇಟಿ ನೀಡಲು ಇದು ವಿಶೇಷ ಸಮಯವಾಗಿದ್ದು ವರ್ಣರಂಜಿತ ಅಲಂಕಾರವು ನಮ್ಮ ಕಣ್ಮನ ಸೆಳೆಯುತ್ತದೆ. ಬೆಳಗುವ ದೀಪಗಳು, ಭಾವಪೂರ್ಣ ಕವಾಲಿ ಹಾಡುಗಳು ನಮ್ಮನ್ನು ಸಂಪೂರ್ಣವಾಗಿ ಮತ್ತೊಂದು ಜಗತ್ತಿಗೆ ಕೊಂಡೊಯ್ಯುತ್ತದೆ.

ಈ ದರ್ಗಾದ ವಿಶೇಷತೆಯೆಂದರೆ ದೇಗುಲದ ಒಳ ಆವರಣದಲ್ಲಿ ಎರಡು ಬೃಹತ್ ಕಡಾಯಿ (ಡೇಗ್) ಗಳನ್ನು ಇರಿಸಲಾಗಿದೆ .ಈ ಡೇಗ್ ಗಳು 2240 ಕೆಜಿ ಮತ್ತು 4480 ಕೆಜಿ ಸಾಮರ್ಥ್ಯ ಹೊಂದಿದ್ದು ಉರುಸ್ ನಂತಹ ವಿಶೇಷ ಸಂದರ್ಭಗಳಲ್ಲಿ ನಿಯಾಜ್ ಅಥವಾ ಪ್ರಸಾದವನ್ನು ಮಾಡಲು ಬಳಸಲಾಗುತ್ತದೆ. ಈ ಡೇಗ್ ಗಳಿಗೆ ಮೂರರಿಂದ ನಾಲ್ಕು ವರ್ಷಗಳ ಮುಂಚಿತವಾಗಿಯೇ ಬುಕಿಂಗ್ ಮಾಡಲಾಗುತ್ತದೆ. ಪ್ರಸಾದವು ಸಂಪೂರ್ಣ ಸಸ್ಯಹಾರಿ ಯಾಗಿದ್ದು ಅಕ್ಕಿ ಮತ್ತು ಮೈದಾವನ್ನು ಹೊರತುಪಡಿಸಿ ಜಫ್ರಾನ್,ತುಪ್ಪ, ಬೆಲ್ಲ, ಸಕ್ಕರೆ, ಒಣಹಣ್ಣುಗಳು ಹಾಗೂ ಅರಿಶಿನದಂತಹ ವಸ್ತುಗಳನ್ನು ಅದರ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಈ ಡೇಗ್ ಎಷ್ಟು ದೊಡ್ಡದಾಗಿದೆಯೆಂದರೆ ಸುಮಾರು ಆರು ಸಾವಿರಕ್ಕೂ ಹೆಚ್ಚು ಜನರು ಅದರಲ್ಲಿ ಬೇಯಿಸಿದ ಆಹಾರವನ್ನು ಸೇವಿಸಬಹುದು. ಈ 2 ಬೃಹತ್ ಡೇಗ್ ಗಳನ್ನು ಮೊಘಲ್ ಚಕ್ರವರ್ತಿಗಳಾದ ಅಕ್ಬರ್ ಮತ್ತು ಜಹಾಂಗೀರ್ ಈ ಸ್ಥಳದಲ್ಲಿ ಪ್ರಸ್ತುತಪಡಿಸಿದ್ದರು.

ನೀವು ಇದನ್ನು ಇಷ್ಟ ಪಡಬಹುದು:ಗೋವಾ ಬದಲಾಗಿ ಈ ಸಲ ವರಕಲ ಹೋಗಿ ಬನ್ನಿ: ಕೇರಳ ಬಚ್ಚಿಟ್ಟುಕೊಂಡಿರುವ ಸುಂದರ ಗುಟ್ಟು ವರಕಲ
ಮಧ್ಯಕಾಲೀನ ಕಾಲದಿಂದಲೂ ಹಿಂದೂ ಮತ್ತು ಇಸ್ಲಾಂ ಧರ್ಮದ ಅನುಯಾಯಿಗಳಿಂದ ಪೂಜಿಸಲ್ಪಟ್ಟ ತಾಣವಾಗಿದೆ ಇದು. ಯಾತ್ರಾರ್ಥಿಗಳು ದೇಗುಲಕ್ಕೆ ಚದ್ದರ್ (ಪವಿತ್ರ ಹಾಳೆಗಳು) ಮತ್ತು ಗುಲಾಬಿ ದಳಗಳನ್ನು ಅರ್ಪಿಸುತ್ತಾರೆ .ಇಲ್ಲಿಗೆ ಪ್ರತಿ ದಿನ ಸುಮಾರು 20000 ಯಾತ್ರಿಕರು ಆಗಮಿಸುತ್ತಾರೆ .ಅಜ್ಮೀರ್ ದರ್ಗಾ ಶರೀಫ್ ಅನ್ನು ಹೊರತುಪಡಿಸಿ ಅಜ್ಮೀರ್ ಬಹಳಷ್ಟು ಕೊಡುಗೆಗಳನ್ನು ನೀಡಿದೆ. ಅದೈ-ದಿನ್ -ಕಾ- ಜೋನ್ಪ್ರಾ ಅಜ್ಮೀರ್ ನ ಮತ್ತೊಂದು ಪ್ರಮುಖ ಪ್ರವಾಸಿ ತಾಣವಾಗಿದೆ. ಅಜ್ಮೀರ್ ನ ಗೋಲ್ಡನ್ ಟೆಂಪಲ್ ಎಂದು ಕರೆಯಲ್ಪಡುವ ನಾಸಿಯಾನ್ ದೇವಾಲಯವು ಇನ್ನೊಂದು ಪ್ರಮುಖ ಸ್ಥಳವಾಗಿದೆ.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada. Travel) ಜಾಲತ ಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ