ವಿಂಗಡಿಸದಸಂಸ್ಕೃತಿ, ಪರಂಪರೆ

ಕಡಲತಡಿ ಭಾರ್ಗವನ ನೆನಪುಗಳನ್ನು ಸಾರುವ ಥೀಮ್ ಪಾರ್ಕ್

ಕೋಟ(Kota ), ಕಡಲ ತಡಿಯ ಭಾರ್ಗವ ಶಿವರಾಮ ಕಾರಂತರ(Shivaram Karanth)ಹುಟ್ಟೂರು. ಅವರ ನೆನಪಿಗಾಗಿ ಇಲ್ಲಿ ಥೀಂ ಪಾರ್ಕ್(Theme Park) ಆರಂಭಿಸಲಾಗಿದೆ.

ಈ ಥೀಂ ಪಾರ್ಕ್ ನೋಡಿದಾಗ ಸಾಹಿತ್ಯ ಪ್ರೇಮಿಗಳಿಗೆ , ಕಾರಂತಜ್ಜನ ಸಾಹಿತ್ಯ ಕೃಷಿ ಒಮ್ಮೆಲೆ ನೆನಪಿನ ಪುಟದಿಂದ ಕಣ್ಮುಂದೆ ಹಾದು ಹೋಗುತ್ತದೆ. ಇಲ್ಲಿ ಕಾರಂತರ ನೆನಪುಗಳನ್ನು ಸಾರುವ ಚಿತ್ರಗಳಿವೆ, ಕೆಲವು ಪ್ರತಿಮೆಗಳಿವೆ. ಪುಟ್ಟದಾದ ಗ್ರಂಥಾಲಯ ಕೂಡ ನೀವು ನೋಡಬಹುದು.

ಥೀಂ ಪಾರ್ಕ್ ಒಳ ಹೊಕ್ಕುತ್ತಿದ್ದಂತೆ ನೀವು ಕರಾವಳಿಯ ಗಂಡು ಕಲೆ ಯಕ್ಷಗಾನದ ಪ್ರತಿಮೆ, ಕಲ್ಲಿನ ಉಯ್ಯಾಲೆ, ಪುಷ್ಕರಣಿಯ ಮಧ್ಯದಲ್ಲಿ ನಿಂತಿರುವ ಕಾರಂತರ ಪ್ರತಿಮೆ, ರಾಧಾ ಕೃಷ್ಣರ ತೂಗು ಉಯ್ಯಾಲೆಗಳು, ಹೀಗೆ ಹಲವು ಪ್ರತಿಮೆಗಳು ನಿಮ್ಮ ಕಣ್ಣು ಅತ್ತ ನೋಟ ಹಾಯಿಸುವಂತೆ ಮಾಡುತ್ತದೆ. ಇಲ್ಲಿ ಆಗಾಗ ಸಾಂಸ್ಕೃತಿಕ ಕಾರ್ಯಕ್ರಮ , ಒಂದಿಲ್ಲೊಂದು ಸಾಹಿತ್ಯ ಚಟುವಟಿಕೆ ನಡೆಯುತ್ತಲೇ ಇರುತ್ತದೆ. ನೀವು ಕೋಟ ಅಮೃತೇಶ್ವರಿ ದೇವಾಲಯ ಪಕ್ಕದಲ್ಲಿರುವ ಹಾದಿಯಲ್ಲಿ ಸಾಗಿದರೆ 5 ನಿಮಿಷ ದೂರದಲ್ಲಿ ನೀವು ಥೀಂ ಪಾರ್ಕ್ ತಲುಪಬಹುದು

ಕೋಟ ಇದು ಉಡುಪಿ(Udupi )ಜಿಲ್ಲೆಯ ಬ್ರಹ್ಮಾವರ ತಾಲೂಕಿನಲ್ಲಿರುವ(Brahmavara)ಒಂದು ಗ್ರಾಮ. ಇದು ಶಿವರಾಮ ಕಾರಂತರ ಜನ್ಮಸ್ಥಳ. ಕೋಟ ಶಿವರಾಮಕಾರಂತ ಥೀಮ್ ಪಾರ್ಕ್ಅನ್ನು ಶಿವರಾಮ ಕಾರಂತರ ನೆನಪಿಗಾಗಿ 2011 ರಲ್ಲಿ ಕೋಟದ ಕೋಳ್ಕೆರೆಯಲ್ಲಿ ನಿರ್ಮಾಣ ಮಾಡಲಾಯಿತು. ಇದು ಕೋಟ ಮುಖ್ಯ ರಸ್ತೆಯಿಂದ 3೦೦ಮೀ ಒಳಗಡೆ ಇದೆ. ಇಲ್ಲಿ ವಾರದ 7 ದಿನವೂ ಬೆಳಿಗ್ಗೆ 1೦ ಗಂಟೆಯಿಂದ ಸಂಜೆ 6 ಗಂಟೆವರೆಗೆ ಭೇಟಿಗೆ ಅವಕಾಶವಿರುತ್ತದೆ. ಇಲ್ಲಿ ಶಿವರಾಮ ಕಾರಂತರ ಇಡೀ ಜೀವನಕ್ಕೆ ಸಂಬಂಧಿಸಿದ ವಿಷಯ ಸಂಗ್ರಹವಿದೆ.

ಥೀಮ್ ಪಾರ್ಕ್ ಒಂದು ಉದ್ಯಾನವನವನ್ನು ಹೊಂದಿದ್ದು, ಅದರ ಮಧ್ಯದಲ್ಲಿ ಶಿವರಾಮ ಕಾರಂತರ ಕಂಚಿನ ಪ್ರತಿಮೆಯನ್ನು ಒಳಗೊಂಡಿರುವ ಒಂದು ಸಣ್ಣ ಕೊಳವಿದೆ. ಅವರ ಕಾದಂಬರಿಗಳಲ್ಲಿನ ಕೆಲವು ಸಾಂಪ್ರದಾಯಿಕ ಪಾತ್ರಗಳನ್ನು ಪ್ರತಿನಿಧಿಸುವ ಶಿಲ್ಪಗಳನ್ನು ಈ ಉದ್ಯಾನವನವನ್ನು ಅಲಂಕರಿಸಲು ಬಳಸಿಕೊಂಡಿದ್ದಾರೆ.

ಕಾರಂತರಿಗೆ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟ ಅವರ ಮೂಕಜ್ಜಿಯ ಕನಸುಗಳು ಕಾದಂಬರಿಯ ಪ್ರಮುಖ ಪಾತ್ರವಾದ ಮೂಕಜ್ಜಿಯ ಪ್ರತಿಮೆ ಹಾಗೂ ಅವರ ಚೋಮನದುಡಿ ಕಾದಂಬರಿಯ ಪ್ರಮುಖ ಪಾತ್ರವಾದ ಚೋಮನು ಡ್ರಮ್ ಬಾರಿಸುವ ಪ್ರತಿಮೆಗಳನ್ನು ಈ ಉದ್ಯಾನವನದಲ್ಲಿ ಕಾಣಬಹುದು. ಉದ್ಯಾನವನದ ಇನ್ನೊಂದು ಭಾಗದಲ್ಲಿ ಕಾರಂತರನ್ನು ತನ್ನ ಎತ್ತಿನ ಗಾಡಿಯಲ್ಲಿ ಕರೆದುಕೊಂದು ಹೋಗುತಿದ್ದ ಕೂಸಣ್ಣ ಮತ್ತು ಅವನ ಎತ್ತಿನ ಗಾಡಿಯ ಪ್ರತಿಮೆ ಇದೆ.

ಇಲ್ಲಿನ ಇನ್ನೊಂದು ಆಕರ್ಷಣೆಯೆಂದರೆ ಉಯ್ಯಾಲೆಯ ಮೇಲೆ ಕುಳಿತಿರುವ ರಾಧಾ-ಕೃಷ್ಣರ ಅವಳಿ ಶಿಲ್ಪಗಳು.ಶಿವರಾಮಕಾರಂತರು ಸಭಿಕರನ್ನು ಉದ್ದೇಶಿಸಿ ಮಾತನಾಡುತ್ತಿರುವ ಚಿತ್ರವನ್ನು ಪಾರ್ಕ್‍ನಲ್ಲಿ ಇರಿಸಲಾಗಿದೆ. ಅವರ ಪ್ರಸಿದ್ಧ ಪುಸ್ತಕಗಳ ಶಿಲ್ಪಗಳನ್ನು ಇಲ್ಲಿ ಕಾಣಬಹುದು. ಅಲ್ಲದೆ, ಉದ್ಯಾನವನವು ಕನ್ನಡದ ಎಲ್ಲಾ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಪ್ರತಿಮೆಗಳನ್ನು, ಶಿವರಾಮಕಾರಂತರ ಅಪರೂಪದ ಛಾಯಾಚಿತ್ರಗಳನ್ನು ಹೊಂದಿದ್ದು, ಒಂದು ಗ್ರಂಥಾಲಯ ಹಾಗೂ ಕಲಾ ಮಂದಿರ(ಆರ್ಟ್ ಗ್ಯಾಲರಿ)ವಿದೆ.

ಗ್ರಂಥಾಲಯವು ಕಾರಂತರ ಎಲ್ಲಾ ಕೃತಿಗಳ ಸಂಗ್ರಹದ ಜೊತೆಗೆ ಅವರ ವೈಯಕ್ತಿಕ ಸಂಗ್ರಹಣೆಯ ಪುಸ್ತಕಗಳನ್ನೂ ಹೊಂದಿದ್ದು, ಸ್ಥಳೀಯರು ಇಲ್ಲಿ ನೊಂದಾಯಿಸಿಕೊಂಡು ಇದರ ಸದಸ್ಯತ್ವವನ್ನು ಪಡೆದುಕೊಳ್ಳಬಹುದು. ಇಲ್ಲಿನ ಕಲಾಮಂದಿರದಲ್ಲಿ ಶಿವರಾಮಕಾರಂತರ ಜೀವನ ಮತ್ತು ಕೃತಿಗಳನ್ನು ಬಿಂಬಿಸುವ ಚಿತ್ರಗಳು ಮತ್ತು ಛಾಯಾಚಿತ್ರಗಳನ್ನು ಪ್ರದರ್ಶಿದಸಲಾಗಿದೆ. ಹೆಚ್ಚಿನ ವರ್ಣಚಿತ್ರಗಳು ಶಿವರಾಮ ಕಾರಂತರ ಕಾದಂಬರಿಗಳ ದೃಶ್ಯಗಳನ್ನು ಹೊಂದಿದೆ.

ಇಲ್ಲಿ ಒಂದು ಸಂಗೀತ ಕಾರಂಜಿ ಇದ್ದು, ಪ್ರತೀ ತಿಂಗಳ ಮೊದಲ ಶುಕ್ರವಾರದಂದು ಹಾಗೂ ಸ್ವಾತಂತ್ರ್ಯ ದಿನಾಚರಣೆ, ಪ್ರಜಾಪ್ರಭುತ್ವ ದಿನಾಚರಣೆಯಂತಹ ರಾಷ್ಟ್ರೀಯ ಹಬ್ಬಗಳಂದು ಸಂದರ್ಶಕರು ಉಚಿತವಾಗಿ ಸಂಗೀತ ಕಾರಂಜಿಯ ಪ್ರದರ್ಶನವನ್ನು ನೋಡಬಹುದು.ಸಭಾಂಗಣದಲ್ಲಿ ಹಲವಾರು ಸಾಹಿತ್ಯಿಕ ಹಾಗು ಸಾಂಸ್ಕೃತಿಕ ಕಾರ್ಯಕ್ರಮಗಳು ಆಗಾಗ್ಗೆ ನಡೆಯುತ್ತಿರುತ್ತವೆ.

ಪ್ರತಿ ವರ್ಷ ಕಾರಂತರ ಜನ್ಮ ವಾರ್ಷಿಕೋತ್ಸವದಂದು ಆಡಿಟೋರಿಯಮ್‍ನಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ. ಇದರಲ್ಲಿ ಸಾಧಕರಿಗೆ ಕಾರಂತ ಹುಟ್ಟೂರ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಈ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಮಕ್ಕಳ ಉತ್ಸವ, ಯಕ್ಷಗಾನ ಪ್ರದರ್ಶನಗಳು, ವಿಚಾರ ಸಂಕಿರಣಗಳು, ರಂಗಭೂಮಿ ಚಟುವಟಿಕೆಗಳು ಮತ್ತು ಕವಿಗಳ ಸಭೆಯಂತಹ ವಿವಿಧ ಕಾರ್ಯಕ್ರಮಗಳೊಂದಿಗೆ, ೧೦ ದಿನಗಳ ಸುಧೀರ್ಘ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಸಹಾ ಆಯೋಜಿಸಲಾಗುತ್ತದೆ. ಮಕ್ಕಳಿಗಾಗಿ ಯಕ್ಷಗಾನ, ಸಂಗೀತ ಮತ್ತು ಭಾಗವತಿಕೆಯಂತಹ ವಿವಿಧ ಚಟುವಟಿಕೆಗಳನ್ನೂ ಸಹ ಇಲ್ಲಿ ಆಯೋಜಿಸಲಾಗಿದೆ

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ!

ನಮ್ಮ ಗ್ರೂಪ್ ಜಾಯಿನ್ ಆಗಿ.ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button