ಕಾಡಿನ ಕತೆಗಳುಕಾರು ಟೂರುದೂರ ತೀರ ಯಾನವಿಂಗಡಿಸದ

ಸಕ್ರೆಬೈಲಿಗೆ ಹೋದರೂ ಆನೆ ಮೇಲೆ ಕೂರಬೇಡಿ: ಸಿಂಧೂ ಪ್ರದೀಪ್ ಬರೆದ ಮಾಹಿತಿಪೂರ್ಣ, ಮನ ತಾಕುವ ಬರಹ

ಸಕ್ರೆಬೈಲಿನ ಆನೆ ಬಿಡಾರದ ಫೋಟೋಗಳನ್ನು ಎಲ್ಲರು ನೋಡಿರುತ್ತೇವೆ. ಆದರೆ ಆ ಆನೆಗಳು ಎಲ್ಲಿಂದ ಬಂದುವು, ಆನೆಗಳ ಮೇಲೆ ಯಾಕೆ ಕೂರಬಾರದು, ಕಾಡನೆಗಳು ಆ ಶಿಬಿರಕ್ಕೆ ಬರುವುದು ಯಾಕೆ ಎಂಬ ಮಾಹಿತಿ ಓದಿರುವುದಿಲ್ಲ. ಮೂಲತಃ ಪ್ರವಾಸ ಪ್ರಿಯೆಯಾಗಿರುವ ಸಿಂಧೂ ಪ್ರದೀಪ್ ಬರೆದಿರುವ ಮನತಾಕುವ ಬರಹ ಇದು. ಓದಿರಿ ಮತ್ತು ಈ ಮಾತುಗಳನ್ನು ಪಾಲಿಸಿರಿ.  

Sindhu Pradeep

ಶಿವಮೊಗ್ಗ ತೀರ್ಥಹಳ್ಳಿ ರಸ್ತೆಯಲ್ಲಿ ಶಿವಮೊಗ್ಗದಿಂದ ಸುಮಾರು 14 ಕೀ ಮೀ ಸಾಗಿದರೆ ಗಾಜನೂರು ಅಣೆಕಟ್ಟಿನಿಂದ ಮುಂದಕ್ಕೆ ಈ ಸಕ್ರೆಬೈಲು ಆನೆ ಬಿಡಾರ ಸಿಗುತ್ತದೆ.. ಇಲ್ಲಿ ನಮ್ಮ ದೇಶದ ನಾನಾ ರಾಜ್ಯಗಳ ಕಾಡಿನಲ್ಲಿ ಸೆರೆ ಸಿಕ್ಕ ಆನೆಗಳನ್ನು ಕಾಣಬಹುದು.. ರಸ್ತೆಗಳಲ್ಲಿ, ಗದ್ದೆ ತೋಟಗಳಲ್ಲಿ ಪುಂಡಾಟ ನಡೆಸಿರುವ ಆನೆಗಳನ್ನು ಹಿಡಿದು ತಂದು ಇಲ್ಲಿ ಒಳ್ಳೆಯ ಆಹಾರ, ಚಿಕಿತ್ಸೆ ಕೊಟ್ಟು ಒಳ್ಳೆಯ ತರಬೇತಿ ಸಹ ನೀಡುತ್ತಾರೆ ಇಲ್ಲಿನ ಮಾವುತರು.. ಆನೆಗಳಿಗೆ ಯಾವುದೇ ಹಾನಿಯಾಗದಂತೆ ಸ್ವಚ್ಛಂದವಾಗಿ ಕಾಡಿನ ಪರಿಸರವನ್ನೇ ಅನುಭವಿಸಬೇಕೆನ್ನುವುದು ಕರ್ನಾಟಕ ಅರಣ್ಯ ಇಲಾಖೆಯ ಒಂದು ಮುಖ್ಯ ಉದ್ದೇಶ..ಈ ಆನೆ ಬಿಡಾರವು ತುಂಗಾ ನದಿಯ ಹಿನ್ನೀರಿನ ದಡದಲ್ಲಿ ಇದೆ..

ಅಲ್ಲಿ ಇರುವವರು ಹೇಳುವ ಪ್ರಕಾರ ಕೆಲವು ಕಾಡಿನ ಆನೆಗಳು ಸಹ ಯಾವುದೇ ತೊಂದರೆ ಇಲ್ಲದೆ ಇಲ್ಲಿಗೆ ಬಂದು ಆಹಾರ ಸೇವಿಸಿ ತುಂಗಾ ನದಿಯಲ್ಲಿ ಆಟವಾಡಿ ಮತ್ತೆ ಯಾರಿಗೂ ಯಾವ ಹಾನಿಯೂ ಮಾಡದೆ ಕಾಡಿಗೆ ಹಿಂತಿರುಗುತ್ತವೆ ಅಂತೆ..

ಆನೆಗಳೆಂದರೆ ಯಾರಿಗೆ ತಾನೇ ಭಯವಿಲ್ಲ ಹೇಳಿ, ಆದರೆ ಇಲ್ಲಿ ಚಿಕ್ಕ ಮಕ್ಕಳಿಂದ ಇಡಿದು ಹಿರಿಯರವರೆಗೂ ಯಾವುದೇ ಭಯವಿಲ್ಲದೆ ಆನೆಗಳೊಂದಿಗೆ ಒಡನಾಟ ನಡೆಸಬಹುದು, ನೀರಿಗಿಳಿದು ಸ್ನಾನ ಮಾಡಿಸಬಹುದು, ಆನೆಗಳಿಗೆ ಆಹಾರ ನೀಡಬಹುದು, ಸ್ವಲ್ಪ ಹತ್ತಿರದಿಂದ ನಿಂತು ಫೋಟೋ ಕ್ಲಿಕ್ಕಿಸಬಹುದು..ಆಹಾ ಕೇಳಲು ಎಷ್ಟು ಚಂದ ಅಲ್ಲವೇ.. ಹಾಗಿದ್ದರೆ ನೀವು ಸಹ ಒಮ್ಮೆ ಭೇಟಿ ನೀಡಿ ಈ ಕಾಡಾನೆಗಳ ಒಡನಾಟ ಅನುಭವಿಸಿ.. 

ಗಮನಿಸಬೇಕಾದ ಅಂಶಗಳು:

*ಭೇಟಿಯ ಸಮಯ – ಬೆಳಿಗ್ಗೆ 8.30 ರಿಂದ 11.30 ಗಂಟೆ

* ಪ್ರವೇಶ ಶುಲ್ಕ – 30 ರೂ, 10 ವರ್ಷದ ಒಳಗಿನ ಮಕ್ಕಳಿಗೆ ಶುಲ್ಕ ಇಲ್ಲ.

*ಆನೆಗೆ ಸ್ನಾನಮಾಡಿಸಲು – 100 ರೂ (9.30 ಗಂಟೆ ಮುಂಚಿತವಾಗಿ)

*ಸದ್ಯಕ್ಕೆ ಆನೆ ಸವಾರಿ ನಿಲ್ಲಿಸಿದ್ದಾರೆ. ಆದರೆ ನನ್ನ ಅನಿಸಿಕೆಯೆಂದರೆ ದಯವಿಟ್ಟು ಸವಾರಿ ಮಾಡಬೇಡಿ. ಆನೆಗಳ ಮೇಲೆ ಸವಾರಿ ಮಾಡುವುದನ್ನು ತಪ್ಪಿಸಬೇಕು. ಏಕೆಂದರೆ ಪ್ರಾಣಿಗಳನ್ನು ಜನರನ್ನು ಸಾಗಿಸಲು ಕಲಿಸಲು ನಾನಾ ರೀತಿಯ ತರಬೇತಿಯನ್ನು ಪಡೆದಿರುತ್ತದೆ. ಇದು ಅಷ್ಟು ಸುಲಭದ ಮಾತಲ್ಲ. ಮಾವುತ ಸುಮ್ಮನೆ ಒಂದು ಆನೆಯನ್ನು ಸವಾರಿಗೆ ಪಳಗಿಸಿರುವುದಿಲ್ಲ. ಅದಕ್ಕೆ ನಾನಾ ರೀತಿಯ ಕಷ್ಟಗಳನ್ನು ಕೊಟ್ಟು ತಯಾರಿ ಮಾಡಿರುತ್ತಾರೆ. ಇದನ್ನು ನಾವು ದುರುಪಯೋಗಪಡಿಸಿಕೊಳ್ಳುವುದು ಬೇಡ, ಜೊತೆಗೆ ನಮ್ಮ ಹಾಗೂ ಆನೆಯ ಸುರಕ್ಷತೆಯ ಬಗ್ಗೆಯೂ ಕಾಳಜಿ ವಹಿಸುತ್ತಾ ಈ ಮಾತನ್ನು ಹೇಳಿದೆ. (ಕೇವಲ ನನ್ನ ಅಭಿಪ್ರಾಯ).

*ದಯವಿಟ್ಟು ಪ್ಲಾಸ್ಟಿಕ್ ಬಳಕೆ ನಿಲ್ಲಿಸಿ, ಪರಿಸರವನ್ನು ಉಳಿಸಿ.

*ಪಕ್ಕದಲ್ಲೇ ಬೋಟಿಂಗ್ ವ್ಯವಸ್ಥೆ ಇದೆ ಆಸಕ್ತಿ ಇರುವವರು ಬೋಟಿಂಗ್ ಸಹ ಮಾಡಬಹುದು..

*ಗಾಜನೂರು ಅಣೆಕಟ್ಟು, ಸಕ್ರೆಬಯಲು ನೇಚರ್ ಕ್ಯಾಂಪ್, ಮಂಡಗದ್ದೆ ಪಕ್ಷಿಧಾಮ ಇವು ಸುತ್ತಮುತ್ತಲು ಭೇಟಿನೀಡಬಹುದಾದ ಸ್ಥಳಗಳು..

*ಸಕ್ರೆಬಯಲು ಮಂಡಗದ್ದೆ ಎಂದರೆ ಎಲ್ಲರಿಗೂ ನೆನಪಾಗೋ ಇನ್ನೊಂದು ವಿಷಯ ಅಂದರೆ ಮೀನು.. ರಸ್ತೆ ಬದಿಯಲ್ಲಿರುವ ಎಲ್ಲಾ ಹೋಟೆಲ್ ಗಳಲ್ಲಿ ಜನಪ್ರಿಯವಾದ ಮೀನು ಫ್ರೈ/ ಮೀನು ಊಟ ಸಿಗುತ್ತದೆ, ಮೀನು ಪ್ರಿಯರು ಮೀನು ಖಾದ್ಯ ಸವಿದು ನಿಮ್ಮ ಪಯಣ ಮುಂದುವರೆಸಬಹುದು.

Related Articles

Leave a Reply

Your email address will not be published. Required fields are marked *

Back to top button