ಇವರ ದಾರಿಯೇ ಡಿಫರೆಂಟುದೂರ ತೀರ ಯಾನಮೋಟಾರ್ ಸೈಕಲ್ ಡೈರಿವಿಂಗಡಿಸದ

ಪತ್ನಿ ಜ್ಯೋತಿ ಜತೆ ಯಜ್ಡಿ ಬೈಕ್ ನಲ್ಲಿ 800 ಕಿಮೀ ಲಾಂಗ್ ರೈಡ್: ಕೋಲಾರದ ಮಾಜಿ ಸೈನಿಕ ಶ್ರೀಧರ್ ಬರೆದ ಧಾರ್ಮಿಕ ಪ್ರವಾಸ ಕಥನ

ಜಾವಾದಲ್ಲಿ ತಮ್ಮ ಊರಾದ ಕೋಲಾರದಿಂದ ಕುಕ್ಕೆ ಸುಬ್ರಮಣ್ಯ ಮತ್ತು ಧರ್ಮಸ್ಥಳಕ್ಕೆ ಲಾಂಗ್ ರೈಡ್ ಹೋಗಬೇಕೆಂದು ಆಸೆ ಹೊತ್ತಿದ್ದ ಕೋಲಾರದ ಬೈಕ್ ವ್ಯಾಮೋಹಿ ಮಾಜಿ ಸೈನಿಕ ಶ್ರೀಧರರಿಗೆ ಜಾವಾ ಬರಲಿಲ್ಲ. ಕೊನೆಗೆ ತಮ್ಮ 35 ವರ್ಷ ಹಳೆಯ ರಾಜ yezdi Classic 250cc ಬೈಕ್ ಅನ್ನು ಹೊರತೆಗೆದು ಅದರಲ್ಲಿ ತಮ್ಮ ಪತ್ನಿ ಜ್ಯೋತಿ ಜೊತೆ ಲಾಂಗ್ ರೈಡ್ ಹೋಗಿ ಬಂದರು. ಅವರು ಬರೆದ ಚಂದದ ಮತ್ತು ಮಾಹಿತಿಪೂರ್ಣ ಪ್ರವಾಸ ಕಥನ.

ಬೈಕ್ ನಲ್ಲಿ ಲಾಂಗ್ ರೈಡ್ ಹೋಗುವುದೆಂದರೆ ಅದರ ಮಜಾನೇ ಬೇರೆ. ಅದೂ 35 ವರ್ಷದ ಹಳೆಯದಾದ ಯಜ್ಡಿ ಬೈಕ್ ನಲ್ಲಿ ಹೋಗುವುದೆಂದರೆ ಅದು ಬೇರೆಯದೇ ಆದ ಅನುಭವ. ನಾನು ಚಿಕ್ಕ ಹುಡುಗನಾಗಿದ್ದಾಗ ಆಗಿನ ಶ್ರೀಮಂತರ ಮನೆಯಲ್ಲಿ ಮಾತ್ರ ಇದ್ದ ಈ ಯಜ್ಡಿ ಬೈಕ್. ಈಗ ನೋಡಲಿಕ್ಕೂ ಸಿಗುವುದಿಲ್ಲ. ಇಂತಹ ಅಪರೂಪದ ಈ ಬೈಕ್ ನಲ್ಲಿ ನಾನು ನನ್ನ ಮಡದಿ ಜ್ಯೋತಿಯ ಜೊತೆ ನನ್ನ ಮೊದಲ ಲಾಂಗ್ ರೈಡ್ ಹೋಗಿದ್ದು ಕುಕ್ಕೆ(kukke subramanya) ಹಾಗೂ ಧರ್ಮಸ್ಥಳಕ್ಕೆ.(dharmasthala) 

ನಮ್ಮ ಮದುವೆಯ ವಾರ್ಷಿಕೋತ್ಸವಕ್ಕೆ ಎಲ್ಲಾದರೂ ಹೋಗಬೇಕೆಂದು ಪ್ಲಾನ್ ಮಾಡಿದ್ದೆವು. ಎಲ್ಲಿಗೆ ಹಾಗೂ ಹೇಗೆ ಎಂಬುದೇ ಯೋಚನೆಯಾಗಿತ್ತು. 

ನಾನು ಸೆಪ್ಟೆಂಬರ್ 2018ರಲ್ಲಿ ಹೊಸಾ ಜಾವಾ(jawa) ಬೈಕ್ ಬುಕ್ ಮಾಡಿದ್ದೆ. ಅದರಲ್ಲಿ ಲಾಂಗ್ ರೈಡ್ ಹೋಗಬೇಕೆಂದು ಪ್ಲಾನ್ ಮಾಡಿದೆ. ನಮ್ಮ ಮದುವೆ ಆದ ತಾರೀಕು 09 ಮೇ. ಹೊಸಾ ಜಾವಾದಲ್ಲಿ ಲಾಂಗ್ ರೈಡ್  ಹೋಗುವ ಖುಷಿಯಲ್ಲಿದ್ದೆ. ಆದರೆ 11 ಮೇ 2019ಕ್ಕೆ ಜಾವಾ ನನ್ನಕೈಗೆ ಸಿಗಲೇ ಇಲ್ಲ. ಕಾರಣ ಜಾವಾ ಬೈಕ್ ಡೆಲಿವರಿ ದಿನಾಂಕ ಮುಂದಕ್ಕೆ ಹೋಗಿತ್ತು.

ಏನು ಮಾಡುವುದೆಂದು ಯೋಚನೆ ಆಯ್ತು. ಬೈಕ್ ನಲ್ಲಿ ಹೋಗುವ ಆಸೆ ಈಡೇರುವುದಿಲ್ಲವೇನೋ ಎಂಬ ನಿರಾಶೆ ಕಾಡಿತು. ಆದರೆ ನಾನು ಹಳೆಯದಾದ ಯಜ್ಡಿ(yezdi) ಬೈಕ್ ಕೊಂಡುಕೊಂಡಿದ್ದೆ. ಹೊಸಾ ಬೈಕ್ ಇಲ್ಲವಾದರೇನು, 1984 ಮಾಡಲ್ ನ ವಿಂಟೆಜ್ ಬೈಕ್ Yezdi ಇದೆಯಲ್ಲಾ ಏಕೆ ಯೋಚನೆ ಎಂದು ಹೊರಟೇ ಬಿಟ್ಟಿವಿ. ಮೂರು ದಿನ ಬೈಕನ್ನು ತಯಾರಿ ಮಾಡಿ ಮೇ 11, 2019ಕ್ಕೆ ಕೋಲಾರದಿಂದ ಹೊರಟೇ ಬಿಟ್ವಿ. ಮೊದಲ ಲಾಂಗ್ ರೈಡ್  ಹೇಗಿರುತ್ತದೇ ಎಂಬ ಕುತೂಹಲ. ಅದು ಈ ಹಳೇ ಬೈಕ್ ಎಲ್ಲಾದರೂ ಕೈ ಕೊಟ್ಟರೆ ಏನು ಮಾಡುವುದೆಂಬ ಯೋಚನೆ ಬೇರೆ. ಬೆಳಗ್ಗೆ 6.30ಕ್ಕೆ ನಮ್ಮ ಪ್ರಯಾಣ ಶುರುವಾಯಿತು. ರಸ್ತೆಯಲ್ಲಿ ಹೋಗುತ್ತಿದ್ದರೆ ಜನ ನಮ್ಮನ್ನೇ ವಿಚಿತ್ರವಾಗಿ ನೋಡುತ್ತಿದ್ದರು. ಹಾಗಂತ ನಾವು ಅಂದುಕೊಂಡೆವು. ಆದರೆ ಜನ ನಮ್ಮ ಬೈಕನ್ನು ನೋಡುತ್ತಿರುವುದೆಂದು ಆಮೇಲೆ ಗೊತ್ತಾಯಿತು.

ಮಧ್ಯಾಹ್ನದ ಲಂಚ್ ಗೆ ಸಕಲೇಶಪುರ(sakleshpur) ತಲುಪಿದೆವು. ಸಕಲೇಶಪುರದವರೆಗೆ ಮಾಮೂಲಿ ರಸ್ತೆಯೇ ಆದರೆ ನಂತರದ ಪ್ರಯಾಣವೇ ಚೆಂದ. ಪ್ರಕೃತಿ ಸೌಂದರ್ಯದ ನಡುವೆ ಘಾಟ್ ನಲ್ಲಿ ಮೊದಲ ಬೈಕ್ ಸವಾರಿ ಸೂಪರ್ ಆಗಿತ್ತು. ರಸ್ತೆಗಳ ತಿರುವುಗಳಲ್ಲಿ 35 ವರ್ಷದ ಹಳೆಯದಾದ ಬೈಕ್ ನಲ್ಲಿ ಹೋಗುತ್ತಿದ್ದರೆ ಅದರ ಮಜಾನೇ ಬೇರೆ. ಶಿರಾಡಿ ಘಾಟ್(shiradi ghat) ಸೆಕ್ಷನ್ ಮಧ್ಯ ಮಳೆ ಬಂದರೆ ಹೇಗೆ. ನಾವು ಹೋದ ಸಮಯ ಮಳೆಗಾಲವಲ್ಲ. ಆದರೆ ಗುಂಡ್ಯಾ ಇನ್ನೂ 5-6 ಕಿ.ಮೀ. ಇತ್ತು ಮಳೆ ಪ್ರಾರಂಭವಾಯಿತು. ಗುಂಡ್ಯದವರೆಗೂ ಮಳೆಯಲ್ಲಿ ನೆನೆಯುತ್ತಾ ಹೋದೆವು. ಸಂಜೆ 5 ಗಂಟೆಗೆ ಕುಕ್ಕೆ ತಲುಪಿದೆವು. 340 ಕಿ.ಮೀ. ಪ್ರಯಾಣ ಮಾಡಿ ಆಯಾಸವಾಗಿತ್ತು. ವಸತಿಗಾಗಿ ರೂಮ್ ಮೊದಲೇ ಬುಕ್ ಮಾಡಿತ್ತು. ಸಂಜೆ ದೇವರ ದರ್ಶನಕ್ಕೆ ತಯಾರಾಗಿ 7 ಗಂಟೆಗೆ ಹೋಗಿಬಂದೆವು. 

ಬೆಳಗ್ಗೆ ಧರ್ಮಸ್ಥಳಕ್ಕೆ 8 ಗಂಟೆಗೆ ಪ್ರಯಾಣ ಬೆಳೆಸಿದೆವು. ಕುಕ್ಕೆಯಿಂದ ಧರ್ಮಸ್ಥಳ(dharmasthala) 60 ಕಿ.ಮೀ. ದೂರ. 9.30ಕ್ಕೆ ಧರ್ಮಸ್ಥಳ ತಲುಪಿದೆವು. ದೇವರ ದರ್ಶನ ಹಾಗೂ ಊಟ ಮುಗಿಸಿಕೊಂಡು ಮಧ್ಯಾನ್ಹ 1 ಗಂಟೆಗೆ ಮತ್ತೆ ಕುಕ್ಕೆಗೆ ಪ್ರಯಾಣ. 

ಮಾರ್ಗ ಮಧ್ಯದಲ್ಲಿ ಸೌತಡ್ಕ(sowthadka) ಗಣಪತಿಯ ದರ್ಶನ ಪಡೆದು. ಸಂಜೆ 4 ಗಂಟೆಗೆ ಕುಕ್ಕೆ ತಲುಪಿದೆವು. ರಾತ್ರಿ ಕುಕ್ಕೆಯಲ್ಲಿಯೇ ಉಳಿದು ಕೊಂಡೆವು. ಬೆಳಗ್ಗೆ ಮತ್ತೆ ಊರು ಕಡೆ ಪ್ರಯಾಣ ಬೆಳೆಸಿದೆವು. 6 ಗಂಟೆಗೆ ಬಿಡಬೇಕಾಗಿತ್ತು ಹಿಂದಿನ ದಿನದ ಪ್ರಯಾಣದ ಆಯಾಸ ದಿಂದ ತಡವಾಗಿ ಹೊರಟೆವು. ಬೆಳಗ್ಗೆ 8.30 ನಮ್ಮ ಪ್ರಯಾಣ ಮತ್ತೆ ಪ್ರಾರಂಭವಾಯಿತು. 

ಜೀವನದಲ್ಲಿ ಯಾರು, ಎಲ್ಲಿ, ಯಾವ ಸಂಧರ್ಭದಲ್ಲಿ ಭೇಟಿಯಾಗುವದೆಂದು ಆ ದೇವರೇ ನಿರ್ಧರಿಸಿರಬಹುದು. ಇವರನ್ನು  ಭೇಟಿಯಾಗಲೆಂದೇ ಬಹುಶಃ ಬೆಳಗ್ಗೆ ತಡವಾಗಿರಬೇಕು. ನಮ್ಮನ್ನು ಮಾರ್ಗ ಮಧ್ಯದಲ್ಲಿ ಭೇಟಿಯಾಗಿದ್ದು ಭಾರತದ ಬೈಕಿಂಗ್ ಪ್ರಪಂಚದಲ್ಲಿ ಹೆಸರುವಾಸಿಯಾದ ಮಂಗಳೂರಿನವರಾದ ದೀಪಕ್ ಕಾಮತ್. 

ಅವರ ಭೇಟಿಗೆ ಮೂಲ ಕಾರಣ ಯಾರು ಗೊತ್ತಾ ನನ್ನ 35 ವರ್ಷಗಳ ಹಳೆಯದಾದ yezdi Classic 250cc ಬೈಕ್. ಕಾಮತ್ ಸಾರ್ ಅವರು ತಮ್ಮ ಬೈಕ್ ರೈಡನ್ನು ಯಜ್ಡಿ ಬೈಕ್ ನಿಂದಲೇ ಪ್ರಾರಂಭಿಸಿದವರು. ಅವರು ಈ ಯಜ್ಡಿ ಬೈಕ್ ನಲ್ಲಿ ಪ್ರಪಂಚದ 6 ಖಂಡಗಳನ್ನು ಸುತ್ತಿಬಂದಿರುವರು. ಅಂಥಾ ಗ್ರೇಟ್ ಪರ್ಸನಾಲಿಟಿಯನ್ನು ಭೇಟಿಯಾಗಿದ್ದು ನನ್ನ ಅದೃಷ್ಟವಲ್ಲವೇ. ಅರ್ಧ ಗಂಟೆ ಅವರ ಜೊತೆ ಕಳೆದೆವು. ಟೀ ಕುಡಿದು ಮತ್ತೆ ಪ್ರಯಾಣ ಬೆಳೆಸಿದೆವು. ರಾತ್ರಿ 8 ಗಂಟೆ ಬೆಂಗಳೂರು ತಲುಪಿ ರಾತ್ರಿ ನಮ್ಮ ಸಹೋದರ ರಾಘು ಮನೆಯಲ್ಲಿ ಉಳಿದು ಕೊಂಡು ಬೆಳಗ್ಗೆ ಕೋಲಾರಕ್ಕೆ ಪ್ರಯಾಣ ಬೆಳೆಸಿದೆವು. 

ನಮ್ಮ ಮೊದಲ 800 ಕಿ.ಮೀ ಲಾಂಗ್ ರೈಡ್ ಸುಖಕರವಾಗಿ ಪೂರ್ಣಗೊಳಿಸಿದೆವು.

Related Articles

One Comment

Leave a Reply

Your email address will not be published. Required fields are marked *

Back to top button