ನಡಿಗೆ ನಮ್ಮ ಖುಷಿಗೆಬೆರಗಿನ ಪಯಣಿಗರುವಿಸ್ಮಯ ವಿಶ್ವಸೂಪರ್ ಗ್ಯಾಂಗು

ದಿಡುಪೆ ಎಂಬ ಮನೋಹರಿಯ ಮುಂದೆ: ಎಸ್ ಡಿಎಂ ಇಂಜಿನಿಯರಿಂಗ್ ಕಾಲೇಜಿನ ಪ್ರತಿಭಾವಂತ ಹುಡುಗ ಅಕ್ಷಯ್ ಮತ್ತು ತಂಡದ ಅಡ್ವೆಂಚರ್ ಕಥನ

ಉಜಿರೆ ಎಸ್ ಡಿಎಂ ಇಂಜಿನಿಯರಿಂಗ್ ಕಾಲೇಜಲ್ಲಿ (sdm engineering college) ಓದುತ್ತಿರುವ ಪ್ರತಿಭಾವಂತ ಹುಡುಗ ಅಕ್ಷಯ್. ಮೂಲತಃ ಬದಿಯಡ್ಕದವರು. ಸಿನಿಮಾ ಅಂದ್ರೆ ಪ್ರೀತಿ. ಪ್ರವಾಸ ಹೋಗುವುದು ಇಷ್ಟ. ಫೋಟೋಗ್ರಫಿ ಅಂದ್ರೆ ಅಚ್ಚುಮೆಚ್ಚು. ಹುಮ್ಮಸ್ಸು, ಲವಲವಿಕೆ ತುಂಬಿಕೊಂಡಿರುವ ಈ ತರುಣ ಬರೆದ ಅಡ್ವೆಂಚರ್ ಕಥನ. 

ಪ್ರವಾಸ ಹೋಗುವುದೆಂದರೆ ಎಲ್ಲರಿಗೂ ಅಚ್ಚುಮೆಚ್ಚು, ಹೊರಡುವ ಹಿಂದಿನ ದಿವಸ ನಿದ್ದೆ ಮಾಡದೆ ಮುಂದಿನ ದಿನವನ್ನು ಹೇಗೆ ಕಳೆಯುವುದು ಎನ್ನುವ ಯೋಚನೆಯಲ್ಲೇ ನಾವು ಹೆಚ್ಚು ಮಗ್ನರಾಗಿರತ್ತೇವೆ.

ಮೊನ್ನೆ ಹಾಗೊಂದು ದಿವಸ ಬಂದೇ ಬಿಟ್ಟಿತು. ನನ್ನ ಅಕ್ಕನ ಮನೆಯಿಂದ ಹೊರಡುವ ಯೋಜನೆ ಮಾಡಲಾಯಿತು. ಧರ್ಮಸ್ಥಳದಿಂದ ಸುಮಾರು 15 ಜನ, 15 ಮೈಲಿ ದೂರವಿರುವ ಒಂದು ಜಲಪಾತ, ಹೆಸರು ದಿಡುಪೆ(didupe falls) ಅಂತ. ಉಜಿರೆ- ಚಾರ್ಮಾಡಿ(ujire- charmday)  ಹೋಗುವ ದಾರಿಯ ಸೋಮಂಥಡ್ಕದಿಂದ ಒಳಗೆ 7 ಮೈಲಿ ಹೋದರೆ ಸಿಗುತ್ತದೆ. ಒಂದು ಜಲಪಾತ, ಸುತ್ತಲೂ ಕಾಡು ಮತ್ತು ತೋಟ, ವಾಹ್ ಅದೊಂದು ನೋಟ ಕಣ್ಣಿಗೆ ಆನಂದ. 

ನನಗೆ ಅಲ್ಲಿ ಉಳಿದುಕೊಳ್ಳುವ ಬಗ್ಗೆ ಗೊತ್ತಿರಲಿಲ್ಲ. ಗೊತ್ತಾದ ಮೇಲೆ ನಾವು ಅಲ್ಲಿ ಉಳಿದುಕೊಳ್ಳುವ ಯೋಜನೆ ಹಾಕಿಕೊಂಡು ಇದ್ದಿದ್ದರಿಂದ ಅಕ್ಕಿಯಿಂದ ಹಿಡಿದು ಚಾಪೆಯ ತನಕ ನಾವು ಎಲ್ಲವನ್ನೂ ಕಾರ್ ನಲ್ಲಿ ಹಾಕಿದ್ದೆವು. ಸುಮಾರು 10 ಮೈಲಿ ಆದ ಮೇಲೆ ದಾರಿ ಸರಿ ಇಲ್ಲವೆಂದು, ಜಂಕ್ಷನ್ ನಿಂದ ಜೀಪಿನಲ್ಲಿ ತೆರಳುವ ಒಂದು ಸಾಹಸ. ಡ್ರೈವರ್ ಹೆಸರು ಅಬು ಅಂತ. ಆದರೆ ಅವನಿಗೆ ದೆವ್ವ ಭೂತಗಳ ಮೇಲೆ ಎಲ್ಲಿಲ್ಲದ ಭಯ. ಜೀಪಿನಲ್ಲಿ ಹೋಗುತ್ತಾ ನಾವು ಅಲ್ಲಿನ ನಿಗೂಢ ಕಥೆಗಳನ್ನು ಕೇಳಿದೆವು, ಅಲ್ಲಿನ ಭೂತ ಸಂಚಾರ ಮತ್ತು ಪ್ರೇತಗಳನ್ನು ಪ್ರತ್ಯಕ್ಷವಾಗಿ ಕಂಡವರು ಇದ್ದಾರಂತೆ ಎಂದು ಅಬು ಹೇಳಿದ.(horror story) ಅಬುವಿನ ಮುಖದ ಭಾವಗಳನ್ನು ನೋಡಿದಾಗ ಎಲ್ಲರಿಗೂ ಒಂದು ಕ್ಷಣ ಮೈ ಜುಮ್ಮೆನಿಸಿತು. ಆದರೂ ಒಂದು ಕೈ ನೋಡೋಣ ಎಂದು ಹೊರಟೆವು.

ನಾವು ಅಲ್ಲಿನ ಮನೆಯನ್ನು ತಲುಪಿ ಒಳಗೆ ಕಾಲಿಟ್ಟಾಗ 10 ಬಾವಲಿಗಳು ಪಟಪಟನೆ ಹಾರಿ ಹೊರಗೆ ಬಂದವು. ಅದನ್ನು ನೋಡಿ ಒಂದು ನಿಮಿಷ ಅಬುವಿನ ಮಾತು ನಿಜ ಅಂತ ಅನ್ನಿಸಿತು. ನಂತರ ನಾವೆಲ್ಲರೂ ಸೇರಿ ಮನೆಯನ್ನು ನೀರು ಸಿಂಪಡಿಸಿ ಕ್ಲೀನ್ ಮಾಡಿದೆವು, ಬಲ್ಬ್ ಗಳನ್ನ ಹಾಕಿದೆವು. ಆಮೇಲೆ ಎಲ್ಲರೂ ತಮ್ಮ ತಮ್ಮ ಮೊಬೈಲ್ ಗಳಲ್ಲಿ ನಿರತರಾದರು. 

ಅಕ್ಕ ಶ್ರುತಿ ಹಾಗೂ ಭಾವ  ರಾಮ್ ಅವರ ಐದನೇ ಮದುವೆ ಆ್ಯನಿವರ್ಸರಿಯನ್ನು(anniversary) ಕೇಕ್ ಕಟ್ ಮಾಡಿ ಸಂಭ್ರಮಿಸಿದೆವು. ಅದಾದಮೇಲೆ ಸುಮಾರು 3 ಗಂಟೆಗೆ ಎಲ್ಲರೂ ಗಂಜಿ ಉಪ್ಪಿನಕಾಯಿ ಸೇವಿಸಿ, ದಿಡುಪೆ ಜಲಪಾತವನ್ನು ನೋಡಲು ಹೋದೆವು.  ಮನೆಯಿಂದ 3 ಫರ್ಲಾಂಗ್ ದೂರ ಇರುವ ದಿಡುಪೆ. ನಾವು ಅಲ್ಲಿಗೆ ತೋಟದ ದಾರಿಯಿಂದ ಗುಂಪಿನಲ್ಲಿ ತೆರಳಿದೆವು, ಕೈಯಲ್ಲಿ ಬ್ಲೂಟೂತ್ ಸ್ಪೀಕರ್ಸ್, ಜೋಶ್ ಕೊಡುವ ಒಂದೆರಡು ಹಾಡು.

ಅಂತೂ ಇಂತೂ ಜಲಪಾತದ ಬಳಿ ತಲುಪಿದೆವು. 100 ಮೀಟರ್ ದೂರ ನಿಂತರೂ ಜಲಪಾತದ ಅನುಭವ ಸಿಕ್ಕೀತು, ಅಷ್ಟು ರಭಸವಾಗಿ ಹಾಲಿನಂತೆ ಬೀಳುವ ನೀರು, ಸುತ್ತಲೂ ಕೋಗಿಲೆಗಳ ಗಾನ, ಅಲ್ಲಲ್ಲಿ ಸಣ್ಣ ಸಣ್ಣ ಹಕ್ಕಿಗಳು ತಮ್ಮ ಬಾಯಾರಿಕೆಯನ್ನು ನೀಗಿಸುತ್ತಿತ್ತು. ಫಾಲ್ಸ್ ಮುಂದೆ ಒಂದು ಸಣ್ಣ ಕಾಮನಬಿಲ್ಲು, ಒಟ್ಟಾರೆ ಆಗಿ ಹೇಳಬೇಕು ಎಂದರೆ ಒಂದು ಸಣ್ಣ ಸ್ವರ್ಗದ ಅನುಭವವೇ ಹೇಳಿದರೆ ತಪ್ಪಾಗಲಾರದು. ನೀರು ಎಷ್ಟು ಚಳಿ ಇತ್ತು ಎಂದರೆ ಕಾಲು ಇಡುವುದಕ್ಕೆ ನಾವು ಹಿಂದೆ ಮುಂದೆ ನೋಡುತ್ತಿದ್ದೆವು. ಏನೋ ಮನಸ್ಸು ಮಾಡಿ ಇಳಿದೆ ಬಿಟ್ಟೆವು, ಬಾಯಿ ನಡುಗುತ್ತಿದ್ದರೂ ನಾವು ಹಿಂದೆ ನೋಡಲಿಲ್ಲ. 

ಇಲ್ಲಿನ ಒಂದು ವಿಶೇಷವೇನೆಂದರೆ ಜಲಪಾತದ ತಪ್ಪಲಲ್ಲಿ ಇರುವ ಬಂಡೆಗೂ ನಾವು ಹೋಗಬಹುದು. ಜಲಪಾತದ ನಿಜವಾದ ಅನುಭವವನ್ನು ಇಲ್ಲಿ ಪಡೆಯಬಹುದು. ಇನ್ನೊಂದ್ ಏನೆಂದರೆ ಅಲ್ಲಿನ ವಾತಾವರಣ ಮತ್ತೆ ನೀರಿನ ತಾಪಮಾನಕ್ಕೆ ನೇರ ಸಂಬಂಧ, ಗಂಟೆ 5 ಆಗುತ್ತಿದ್ದಂತೆ ನೀರು ತುಂಬಾ ತಂಪಾಯಿತು. ನೀರಲ್ಲಿದ್ದರೆ ಚಳಿಯಾಗಲು ಆರಂಭವಾಯಿತು. ಬೇರೆ ದಾರಿ ಇಲ್ಲದೆ ನಾವು ಅಲ್ಲಿಂದ ಹಿಂತಿರುಗಿ ಮನೆಗೆ ಬಂದೆವು.

 ನಾವು ಕೇಳಿದ ಹಾಗೆ, ರಾತ್ರಿಯಾಗುತ್ತಿದ್ದಂತೆ ತೀರಾ ಕತ್ತಲಾಯಿತು, ನಾವು ಚಾಪೆ ಹಾಕಿ ಒಂದೆರಡು ಇಸ್ಪೀಟು ಆಟ ಆಡಿದೆವು. ನಂತರ ಊಟ. 10 ಗಂಟೆಯ ಸುಮಾರಿಗೆ, ಕ್ಯಾಂಪ್ ಫೈರ್(camp fire) ಹಾಕಿ ಡ್ಯಾನ್ಸು, ಸಾಂಗು ಅಂತ ಒಂದು ಗಂಟೆ ಕಳೆದೇಹೋಯಿತು. ಸ್ವಲ್ಪ ಹೊತ್ತಿನ ನಂತರ ನಾವೆಲ್ಲ ಒಳಗೆ ಹೋದೆವು, ನನ್ನ ಭಾವನ ತಮ್ಮ ರಾಜ ಬಂದು ನನಗೆ ಏನೋ ಕೇಳಿಸಿತು ಅಂತ ಹೇಳಿದ,ಏನು ಎಲ್ಲಿ ಅಂತ ಕೇಳಿದಾಗ ನನಗೆ ಏನೋ ವಿಚಿತ್ರ ಧ್ವನಿ ಕೇಳಿಸ್ತು ಅಂದ,  ನಮಗೆ ಎಲ್ಲರಿಗೂ ಒಂಥರ ಹೆದರಿಕೆ ಇದ್ದರೂ ತೋರಿಸದೆ ಗಟ್ಟಿ ಮನಸ್ಸು ಮಾಡಿಕೊಂಡು ಒಳಗೆ ಇದ್ದೆವು. ಎಲ್ಲರೂ ಒಮ್ಮೆ ಹೊರಗೆ ಹೋಗಿ ನೋಡಿಯೇ ಬಿಡುವ ಅಂತ ಹೋದೆವು, ಅಲ್ಲಿ ಏನೂ ಇರಲಿಲ್ಲ. ಅವನಿಗೆ ಭ್ರಮೆಯಾ ಅಥವಾ ನಿಜನಾ ಅಂತ ಇನ್ನೂ ತಿಳಿದಿಲ್ಲ. ಅಂತೂ ಅಲ್ಲಿ ರಾತ್ರಿ ಕಳೆಯಿತು. 

ಬೆಳಗ್ಗೆ ಎದ್ದು ಎಲ್ಲರೂ ಒಂದೊಂದು ಕತೆ ಹೇಳಲು ಶುರು ಮಾಡಿದರು, ನನಗೆ ಮಧ್ಯರಾತ್ರಿ ಸಾಂಗ್ ಕೇಳಿಸಿತು, ರಾತ್ರಿ 3 ಗಂಟೆಗೆ ನನ್ನ ಕೋಣೆಯ ಬಾಗಿಲು ಬಡಿಯುತ್ತಿತ್ತು ಅಂತ. ಅದೆಲ್ಲ ಭ್ರಮೆ ಅಂತ ಅಂದುಕೊಂಡು ನಾವೆಲ್ಲ ಭಾವ ಮತ್ತು ಶ್ರೀನಿಧಿ ಎಂಬವನು ಮಾಡಿದ್ದ ಟೊಮೆಟೊ ಬಾತ್ ತಿಂದು ಅಲ್ಲಿಂದ ಬ್ಯಾಗ್ ಪ್ಯಾಕ್ ಮಾಡಿದೆವು. ಈ ಪಿಕ್ನಿಕ್ ಒಂಥರ ಅಡ್ವೆಂಚರ್ ಮತ್ತು ಖುಷಿ ಎರಡೂ ಕೊಟ್ಟಿತು. 

ಚಾರ್ಮಾಡಿ ಹತ್ತಿರ ಎಲ್ಲಾದರೂ ಬರುತ್ತಿದ್ದರೆ ಇಲ್ಲೊಂದು ವಿಸಿಟ್ ಕೊಟ್ಟು ಫಾಲ್ಸ್ ನ ನಿಜವಾದ ಅನುಭವ ಪಡೆಯೋದು ಬೆಟರ್ ಅನ್ನೋದು ನನ್ನ ಅಭಿಪ್ರಾಯ. ಮನುಷ್ಯನ ಪ್ರತಿದಿನ ಪ್ರಾರಂಭವಾಗುವುದು ಕೆಲವು ನಿರೀಕ್ಷೆಗಳೊಂದಿಗೆ, ಆದರೆ ಪ್ರತಿ ದಿನ ಮುಗಿಯೋದು ಮಾತ್ರ ಅದ್ಭುತ ಅನುಭವಗಳೊಂದಿಗೆ ಅಂತ ನನಗೆ ಅನ್ನಿಸುತ್ತದೆ.

Related Articles

One Comment

Leave a Reply

Your email address will not be published. Required fields are marked *

Back to top button