ದೂರ ತೀರ ಯಾನನಡಿಗೆ ನಮ್ಮ ಖುಷಿಗೆವಿಸ್ಮಯ ವಿಶ್ವಸೂಪರ್ ಗ್ಯಾಂಗು

ಹಿಮಬೆಟ್ಟದ ತುತ್ತತುದಿಯಲ್ಲಿದ್ದಾಳೆ ಸುರಕಂಡಾ ದೇವಿ: ಚಳಿಯಲ್ಲಿ ಉತ್ತರಾಖಂಡದ ಬೆಟ್ಟವೇರಿ ದೇವಿ ದರ್ಶನ ಪಡೆದ ಕತೆ ಬರೆದ ಸೀಮಾ ನಾಗಪ್ಪ ಕಾರಟಗಿ

ಎಸ್ ಡಿಎಂ ಕಾಲೇಜಿನಲ್ಲಿ ಓದಿದ ಧೈರ್ಯವಂತ ಹುಡುಗಿ ಸೀಮಾ ನಾಗಪ್ಪ ಕರಟಗಿ ಚಳಿಗಾಲದಲ್ಲಿ ಉತ್ತರಾಖಂಡದ ಸುರಕಂಡಾ ದೇವಿಯ ದರ್ಶನ ಪಡೆದ ಕತೆ ಹೇಳಿದ್ದಾರೆ. ಬೆಟ್ಟವೇರಿ ದೇವರ ಸನ್ನಿಧಿಗೆ ಹೋಗುವುದೆಂದರೆ ಅದೊಂದು ಧ್ಯಾನ ಇದ್ದಂತೆ. ಬೆಟ್ಟವೇರಿ ಸುಮ್ಮನೆ ಕುಳಿತರೆ ಸಾಕು ಎಲ್ಲವೂ ಮರೆತುಹೋಗುತ್ತದೆ. ಅಂಥದ್ದೊಂದು ಧ್ಯಾನದಂತಹ ಬರಹ ಇದು.  

ಉತ್ತರಾಖಂಡ ರಾಜ್ಯದ ಧನೋಲ್ಟಿಯಿಂದ 8 ಕಿ.ಮೀ ದೂರದಲ್ಲೊಂದು ಹಿಮಬೆಟ್ಟ. ಗುಡ್ಡದ ತುತ್ತತುದಿಲ್ಲಿ ಅಂಬೆ ಸುರಕಂಡಾ ದೇವಿಯ ಸನ್ನಿಧಿ. ಬೆಟ್ಟದ ಕೆಳಗೆ ವಾಹನ ನಿಲ್ಲಿಸಿ ಸುಮಾರು 3.ಕಿ.ಮೀ ಬೆಟ್ಟ ಹತ್ತಿದರೆ ಅಂಬೆಯ ದರ್ಶನ. ಹೇಳೋಕೆ ಅಥವಾ ನೋಡೋಕೆ  ಅದು ಬರೀ 3.ಕಿ.ಮೀ. ಆದರೆ ಗಾದೆ ಗೊತ್ತಲ್ಲ ದೂರದ ಬೆಟ್ಟ ಕಣ್ಣಿಗೆ ಚಂದ. 

ಬೆಟ್ಟ ಹತ್ತೋಕೆ ಕಾಲ್ನಡಿಗೆ ಬಿಟ್ಟರೆ ಘೋಡಾ ಸವಾರಿ, ಆದ್ರೆ ಘೋಡಾ ಸವಾರಿ ಬಲೂ ದುಬಾರಿ. ಮಸ್ಸೂರಿಯಿಂದ ಬೆಳ್ಳಂಬೆಳ್ಳಿಗೆ ಹೊರಟ ನಾನು ನನ್ನ ಪತಿರಾಯ ರೋಟಿ ದಾಲ್ ಹಾಗು ಖಡಿ ಚಾವಲ್ ಉಂಡು ಬೆಟ್ಟ ಹತ್ತೋಕೆ ಶುರುಮಾಡಿದ್ವಿ. ಕಳೆದ ವರ್ಷ ಇದೇ ಡಿಸೆಂಬರ್ ತಿಂಗಳಲ್ಲಿ ನಾವು ಹೋಗಿದ್ದು. ಕೊರೆಯುವ ಚಳಿ ಜೋರಾಗಿಯೇ ಇತ್ತು. ಸುರಕಂಡಾದೇವಿ ಬೆಟ್ಟವೆಲ್ಲ ಹಿಮದಿಂದ ಕೂಡಿತ್ತು. ಬೆಟ್ಟದ ತುದಿ ತಲುಪೋಕೆ ಅಲ್ಲಲ್ಲಿ ಮೆಟ್ಟಿಲುಗಳು ಹಾಗೂ ಕಚ್ಛಾ ರಸ್ತೆ ಇತ್ತಾದರೂ ಹಿಮದಿಂದ ಮುಚ್ಚಿಹೋಗಿದ್ದವು. ಬಿದ್ದ ಹಿಮದ ಮೇಲೆಯೇ ನಮ್ಮ (ನಟರಾಜಾ ಸರ್ವೀಸ್) ಕಾಲ್ನಡಿಗೆ ಶುರುವಾಯಿತು. ನಾವೇ ಮೊದಲು ಬೆಟ್ಟ ಹತ್ತೋಕೆ ಶರುಮಾಡಿದ್ವಿ ಅಂತ ಅಂದುಕೊಂಡ್ರೆ. 

ನಾವಿನ್ನೂ ಬೆಟ್ಟದ ದ್ವಾರಬಾಗಿಲು ಇರುವಾಗಲೇ ಇಬ್ಬರು ಅಜ್ಜಿಯರು ಬೆಟ್ಟ ಇಳಿಯುತ್ತಿದ್ದರು. ಆಗಷ್ಟೇ ಹೊಟ್ಟೆ ತುಂಬಾ ಉಂಡ ನಮಗೆ ನಾಲ್ಕು ಮೆಟ್ಟಿಲು ಹತ್ತುವಾಗಲೇ ಆಯಾಸವಾಗತೊಡಗಿತು. ಆಯಾಸಗೊಂಡ ನಾನು ಹಿಂದಿಯಲ್ಲಿ ಅಜ್ಜಿ ಇನ್ನು ಎಷ್ಟು ದೂರ ಅಂತ ಕೇಳಿದ್ರೆ ಇಲ್ಲೆ ಹತ್ರ ಇದೆ ಹೋಗಿ ತಾಯಿ ಅಂದ್ರು. ಸರಿ ಅಂತ ಹತ್ತೋಕೆ ಶುರುಮಾಡಿದ್ವಿ.. ಹಾಗೆಯೇ ಬೆಟ್ಟದಿಂದ ಇಳಿಯುವವರು ನಮಗೆ ಒಬ್ಬೊಬ್ಬರಾಗಿಯೇ ಎದುರಾಗುತ್ತಿದ್ದರು. ನಮಗಿಂತ ಮುಂಚೆಯೇ ತುಂಬಾ ಜನ ಅಂಬೆಯ ದರ್ಶನಮಾಡಿ ಬರುತ್ತಿದ್ದರು. ನಮಗೆ ಎದುರಾಗುವವರಿಗೆಲ್ಲಾ ಕೇಳಿದ್ದು ಒಂದೇ ಮಾತು ಅಭಿ ಕಿತನಾ ದೂರ್ ಹೈ, ಅವರೆಲ್ಲಾ ಹೇಳಿದ್ದು ಒಂದೇ ಮಾತು ಬಸ್ ಪಾಂಚ್ ಮಿನಿಟ್ ಮೆ ಆಪ್ ಪಹುಂಚೆಗಾ ಅಂತ.

ಹೀಗೆ ಪಾಂಚ್ ಮಿನಿಟ್, ದಸ್ ಬೀಸ್ ಸೀಡಿ ಅಂತ ಹೇಳಿ 3.ಕಿ.ಮೀ ಬೆಟ್ಟವನ್ನು ಎರಡೂವರೆ ತಾಸಿನಲ್ಲಿ  ಹತ್ತಿಸಿಯೇಬಿಟ್ಟರು. ಬೆಟ್ಟದ ತುದಿ ತಲುಪಿದರೂ ಎಲ್ಲರದೂ ಒಂದೇ ಮಾತು. ಇನ್ನೇನು ಬಂದೇಬಿಡ್ತು ಹೋಗಿ ಹೋಗಿ ಅಂತ. ಇದೇ ಸುರಕಂಡಾ ದೇವಿ ಹಿಮಬೆಟ್ಟ ಹತ್ತೋಕೆ ಹಾಗು ಆಕೆಯ ದರ್ಶನ ಪಡೆಯೋಕೆ ಇದ್ದ ಮೂಲಮಂತ್ರ.

ಅಲ್ಲಿದ್ದ ಪ್ರವಾಸಿಗರೆಲ್ಲ ಹೀಗೆ ಬೆಟ್ಟ ಹತ್ತೋಕೆ ಇಳಿಯೋಕೆ ಒಬ್ಬರಿಗೊಬ್ಬರು ಮೋಟಿವೇಟ್ ಮಾಡ್ತಾಯಿದ್ರು. ಏರುಸಿರು ಬಿಡುತ್ತಾ ಬೆಟ್ಟ ಹತ್ತುವಾಗ ಇಳಿಯುವಾಗ ಒಬ್ಬರಿಗೊಬ್ಬರನ್ನು ನೋಡುತ್ತಾ  ಜೈ ಮಾತಾ ದಿ, ಜೈ ಮಾತಾ ದಿ ಅಂತ ಅಂಬೆಗೆ ಜೈಕಾರ ಹಾಕ್ತಾಯಿದ್ವಿ. ಈ ಜೈಕಾರವೇ ಎಲ್ಲರ ಸುಸ್ತು ಆಯಾಸ ಇಂಗಿಸಿ ಬೆಟ್ಟ ಹತ್ತೋಕೆ ಮತ್ತಷ್ಟು ಉತ್ಸಾಹ ನೀಡುತ್ತಿತು. ಅಲ್ಲಿದ್ದ ಯಾರೊಬ್ಬರೂ ಬೆಟ್ಟದ ತುದಿ ಇನ್ನೂ ದೂರವಿದೆ. ಹತ್ತೋಕೆ ಕಷ್ಟವಾಗುತ್ತೆ. ಮೇಲೆ ಹೋದ ಹಾಗೆಲ್ಲಾ ಮೆಟ್ಟಿಲುಗಳೇ ಸರಿಯಿಲ್ಲ. ಹಿಮದ ಮೆಟ್ಟಿಲುಗಳು ಜಾರುತ್ವೆ ಅಂತ ಯಾರೊಬ್ಬರೂ ಭಯಪಡಿಸಲೇ ಇಲ್ಲ. ಹೇಳಬೇಕೆಂದರೆ ಮೇಲೆ ಹೋದಹಾಗೆಲ್ಲಾ ಹಾದಿ ಕಷ್ಟವಾಗುತ್ತಿತ್ತು, ಹಿಮದ ಮೆಟ್ಟಿಲುಗಳು ತುಂಬಾ ಜಾರುತ್ತಿದ್ದವು. ಸಿಂಗಲ್ ಡಿಗ್ರಿ ಟೆಂಪ್ರೇಚರ್ ಇದ್ರೂ, ಹಿಮದ ಮೇಲೆ ನಡಿತಾ ಇದ್ರೂ ಬೆವರು ಬರ್‍ತಾಯಿತ್ತು. ಹಾಕಿಕೊಂಡ ಜಾಕೆಟ್, ಗ್ಲೌಸ್‌ಗಳೆಲ್ಲಾ ಒಂದೊಂದಾಗಿ ಕಳಚಿದೆವು.

ಬೆಟ್ಟ ಹತ್ತುವಾಗ ನಾನು ಅಲ್ಲಲ್ಲಿ ಕೂತು, ನೀರು ಕುಡಿದು, ಪೆಪ್ಪರ್‌ಮೆಂಟ್ ತಿಂದು ಆಯಾಸ ಇಂಗಿಸಿಕೊಂಡ್ರೆ, ನನ್ನ ಪತಿರಾಯ ಅಂಬೆಯ ದರ್ಶನ ಪಡೆಯುವವರೆಗೂ ಎಲ್ಲಿಯೂ ಕೂರಲಿಲ್ಲ, ನೀರು ಸಹ ಕುಡಿಯಲಲ್ಲಿ. ನಾನು ಕೂತರೆ ಆತ ನನ್ನ ಜೊತೆ ನಿಲ್ಲುತ್ತಿದ್ದ ಅಷ್ಟೆ. ಇದು ನಮ್ಮಾತನ ಭಕ್ತಿ ಅನ್ನಬಹುದು. ನಾವು ಕನ್ನಡದಲ್ಲಿ ಮಾತನಾಡೋದನ್ನು ಕೇಳಿ ನೀವು ಕನ್ನಡದವ್ರಾ ಅಂತ ಕೇಳಿ ಒಂದಿಬ್ಬರು ಕನ್ನಡಿಗರು ಪರಿಚಯವಾದ್ರು. ನನ್ನಲ್ಲಿದ್ದ ನೀರು, ಪೆಪ್ಪರ್‌ಮೆಂಟ್ ಅವರೊಂದಿಗೆ ಹಂಚಿಕೊಂಡೆವು (ಆಗಿನ್ನು ಕೊರೋನ ಇದ್ದಿಲ್ಲ). ಕನ್ನಡದವರು ಸಿಕ್ಕು ಅವ್ರ ಜೊತೆ ಮಾತಾಡಿ ಆಯಾಸವೆಲ್ಲ ಮತ್ತಷ್ಟು ಕಡಿಮೆಯಾಯ್ತು.

ಇನ್ನು ಬೆಟ್ಟ ಹತ್ತುವಾಗ ಸುತ್ತಮುತ್ತಲು ಕಣ್ಣು ಹಾಯಿಸಿದಲೆಲ್ಲಾ ಹಿಮಹೊದಿಕೆಯ ಪರ್ವತಗಳು. ಆಗಷ್ಟೇ ಸೂರ್ಯಾಗಮನವಾದ್ದರಿಂದ ಆತನ ಕಿರಣಗಳು ಹಿಮಪರ್ವಗಳನ್ನು ಚುಂಬಿಸಿದ್ದವು. ಸೂರ್ಯನ ಚುಂಬನದಿಂದ ಹಿಮಪರ್ವತಗಳೆಲ್ಲಾ ನಾಚಿ ರಂಗೇರಿದ್ದವು. ನಿಸರ್ಗದ ಈ ದೃಶ್ಯ ಅಣ್ಣೋರು ಹಾಡಿದಹಾಗೆ ನಾದಮಯವೇ ಸರಿ. ಇಷ್ಟಪಟ್ಟು  ಕಷ್ಟಪಟ್ಟು ಕೊನೆಗೂ ಸುರಕಂಡಾದೇವಿ ಬೆಟ್ಟ ಹತ್ತಿದೆವು. ಅಂಬೆಯ ದರ್ಶನವೂ ಆಯಿತು. ಬೆಟ್ಟದ ತುದಿಯಲ್ಲಿ ನಿಂತು ೩೬೦ ಡಿಗ್ರಿ ಯ್ಯಾಂಗಲ್ ಕಣ್ಣು ಹಾಯಿಸಿದ್ರೆ ಕಣ ಗೆ ಹಬ್ಬವೋ ಹಬ್ಬ. ಇದೆಲ್ಲಾ ನೋಡಿ ಆಯಾಸವೆಲ್ಲ ಕ್ಷಣಾರ್ಧದಲ್ಲಿ ಮಂಗಮಾಯವಾಯಿತು.

 ಬಿಳಿಹೊದಿಕೆಯ ಬೆಟ್ಟಗುಡ್ಡದ ಸೌಂದರ್ಯ ಸವಿಯುತ್ತಾ ಅಲ್ಲಿಯೇ ತುಸುಹೊತ್ತು ಕಾಲ ಕಳೆದೆವು. ನಿಸರ್ಗದ ಮಡಿಲಲ್ಲಿ ಕೂತ ನಮಗೆ ನಮ್ಮ ಅರಿವಿಲ್ಲದೇ ನಮ್ಮೊಳಗೊಂದು ಗಾಢ ಮೌನ ನಿರ್ಮಾಣವಾಗಿಬಿಟ್ಟಿತ್ತು. ಸುಮಾರು ಅರ್ಧಮುಕ್ಕಾಲು ಗಂಟೆ ನಾವು ಒಬ್ಬರಿಗೊಬ್ಬರು ಏನು ಮಾತನಾಡಲಿಲ್ಲ. ಮೌನದ ಜೊತೆ ಕೂತಲ್ಲಿಯೇ ಧ್ಯಾನವೂ ಆಯಿತು. ಅಷ್ಟೊತ್ತಿಗಾಗಲೇ ನಮ್ಮ ದೇಹ ಹಾಗು ಮನಸ್ಸು ಹಗುರವಾಗಿದ್ವು.

 ನಾನು ಬೆಟ್ಟ ಹತ್ತುವಾಗ ಅಮ್ಮ ಯಾಕಮ್ಮ ಊರಬಿಟ್ಟು ಇಷ್ಟು ದೂರದ ಈ ಹಿಮಬೆಟ್ಟದಲ್ಲಿದ್ದಿ ವಾಸವಿದ್ದಿಯಾ ಅಂತ ತಮಾಷೆಗೆ ನನ್ನ ಪತಿರಾಯನ ಹತ್ರ ಹೇಳಿಕೊಂಡಿದ್ದೆ, ಸುರಕಂಡಾ ಅಂಬೆಯ ಪೌರಾಣ ಕ ಕಥೆ ಏನೇ ಇರಬಹುದು ಆದ್ರೆ ನಿಸರ್ಗದ ಪ್ರಶಾಂತ ಬೆಟ್ಟದಲ್ಲಿ ಅಂಬೆ ಏಕಿದ್ದಾಳೆ ಅಂತ ನನಗೆ ಧ್ಯಾನದ ನಂತರ ತಿಳಿಯಿತು. ನಿಸರ್ಗದ ತುದಿಯಲ್ಲಿ ವಾಸವಿದ್ದ ನೀನೇ ಧನ್ಯೋಸ್ಮಿ ತಾಯಿ, ಧನ್ಯೋಸ್ಮಿ. ಜೈ ಸುರಕಂಡಾ ದೇವಿ..

Related Articles

Leave a Reply

Your email address will not be published. Required fields are marked *

Back to top button