ಕಾಡಿನ ಕತೆಗಳುವಿಂಗಡಿಸದ

ಒಡಿಶಾದ ಗುಪ್ತೇಶ್ವರ ಅರಣ್ಯವನ್ನು “ಜೀವವೈವಿಧ್ಯ ಪರಂಪರೆಯ ತಾಣ”ವೆಂದು ಘೋಷಿಸಲಾಗಿದೆ.

ಒಡಿಶಾದ ಕೊರಾಪುಟ್ ಜಿಲ್ಲೆಯ ಗುಪ್ತೇಶ್ವರ ಶಿವ ದೇವಾಲಯದ ಬಳಿ ಇರುವ ಪ್ರಾಚೀನ ಗುಪ್ತೇಶ್ವರ ಅರಣ್ಯ (Gupteswar Forest)ವನ್ನು “ರಾಜ್ಯದ ನಾಲ್ಕನೇ ಜೀವವೈವಿಧ್ಯ-ಪಾರಂಪರಿಕ ತಾಣ” (Biodiversity Heritage Site) ಎಂದು ಘೋಷಿಸಲಾಗಿದೆ ಎಂದು ಒಡಿಶಾದ ಸರ್ಕಾರ ತಿಳಿಸಿದೆ.

ಈ ಅರಣ್ಯವು 350 ಹೆಕ್ಟೇರ್‌ಗಳಷ್ಟು ವಿಸ್ತೀರ್ಣದಲ್ಲಿ ಹರಡಿಕೊಂಡಿದೆ. ಸ್ಥಳೀಯರಿಂದ ಪೂಜಿಸಲ್ಪಡುವ ತೋಪುಗಳನ್ನು ಈ ಅರಣ್ಯ ಹೊಂದಿದ್ದು, ವೈವಿಧ್ಯಮಯ ಅನನ್ಯ ಸಸ್ಯ ರಾಶಿಗಳಿಗೆ ಮತ್ತು ವನ್ಯಜೀವಿಗಳಿಗೆ ಆಶ್ರಯವನ್ನು ನೀಡಿದೆ.

ಒಡಿಶಾ (Odisha) ಜೀವ ವೈವಿಧ್ಯಮಯ ಮಂಡಳಿ ನಡೆಸಿದ ಜೀವವೈವಿಧ್ಯದ ದಾಸ್ತಾನು ಮತ್ತು ಸಮೀಕ್ಷೆಯ ಪ್ರಕಾರ,

ಈ ಅರಣ್ಯವು 28 ಜಾತಿಯ ಸಸ್ತನಿಗಳು, 18 ಜಾತಿಯ ಉಭಯಚರಗಳು, 188 ಜಾತಿಯ ಪಕ್ಷಿಗಳು, 48 ಜಾತಿಯ ಸರೀಸೃಪಗಳು, 141 ಜಾತಿಯ ಚಿಟ್ಟೆಗಳು ಸೇರಿದಂತೆ ವಿವಿಧ ಪ್ರಾಣಿ ಪ್ರಭೇದಗಳಿಗೆ ನೆಲೆಯಾಗಿದೆ.

45 ಜಾತಿಯ ಮೀನುಗಳು, 43 ಜಾತಿಯ ಪತಂಗಗಳು, 41 ಜಾತಿಯ ಓಡೋನೇಟ್‌ಗಳು, 30 ಜಾತಿಯ ಜೇಡಗಳು, 20 ಜಾತಿಯ ಕೆಳ ಅಕಶೇರುಕಗಳು ಮತ್ತು ಆರು ಜಾತಿಯ ಚೇಳುಗಳಿಗೂ ಸಹ ನೆಲೆ ನೀಡಿದೆ ಈ ಅರಣ್ಯ.

ಇಲ್ಲಿ ವಿಶಿಷ್ಟ ಜಾತಿಯ ಪ್ರಾಣಿ-ಪಕ್ಷಿಗಳೂ ಸಹ ದಾಖಲಾಗಿವೆ.

ಅವುಗಳೆಂದರೆ ಮಗ್ಗರ್ ಮೊಸಳೆ, ಕಂಗರ್ ವ್ಯಾಲಿ ರಾಕ್ ಗೆಕ್ಕೊ, ಸೇಕ್ರೆಡ್ ಗ್ರೋವ್ ಬುಷ್ ಫ್ರಾಗ್ ಮತ್ತು ಜೆರ್ಡನ್ಸ್ ಬಾಜಾ, ಬ್ಲ್ಯಾಕ್ ಬಾಜಾದಂತಹ ಪಕ್ಷಿಗಳು, ಮಲಬಾರ್ ಟ್ರೋಗನ್, ಬಿಳಿ-ಹೊಟ್ಟೆಯ ಮರಕುಟಿಗ, ಸಾಮಾನ್ಯ ಬೆಟ್ಟದ ಮೈನಾ ಮತ್ತು ಬ್ಯಾಂಡೆಡ್ ಕೊಲ್ಲಿ ಕೋಗಿಲೆ ಇತ್ಯಾದಿ.

ಗುಪ್ತೇಶ್ವರ ಅರಣ್ಯದಲ್ಲಿರುವ ಸುಣ್ಣದ ಕಲ್ಲಿನ ಗುಹೆಗಳು ವಿಶೇಷ ಆಕರ್ಷಣೆಯನ್ನು ಹೊಂದಿದ್ದು, ದಕ್ಷಿಣ ಒಡಿಶಾದಲ್ಲಿ ಕಂಡುಬರುವ ಒಟ್ಟು 16 ಜಾತಿಯ ಬಾವಲಿಗಳ ಪೈಕಿ ಎಂಟು ಜಾತಿಯ ಬಾವಲಿಗಳು ಇಲ್ಲಿಯೇ ವಾಸವಾಗಿವೆ.

8 ಜಾತಿಯ ಬಾವಲಿಗಳ ಪೈಕಿ ಎರಡು ಜಾತಿಗಳು ಹಿಪ್ಪೊಸಿಡೆರೊಸ್ ಗ್ಯಾಲೆರಿಟಸ್ ಮತ್ತು ರೈನೋಲೋಫಸ್ ರೌಕ್ಸಿಯು ಇಂಟರ್ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್‌ನ ಅಡಿಯಲ್ಲಿ “ಅಪಾಯದ ವರ್ಗ”ಕ್ಕೆ ಒಳಪಟ್ಟಿವೆ.

ಪ್ರಾಣಿ ಪಕ್ಷಿಗಳು ಮಾತ್ರವಲ್ಲದೇ, ಈ ಅರಣ್ಯವು ವಿವಿಧ ಜಾತಿಯ ಸಸ್ಯಗಳನ್ನೂ ಸಹ ಹೊಂದಿದೆ.

ಇದು 182 ಜಾತಿಯ ಮರಗಳು, 177 ಜಾತಿಯ ಗಿಡಮೂಲಿಕೆಗಳು, 76 ಜಾತಿಯ ಪೊದೆಗಳು, 14 ಜಾತಿಯ ಆರ್ಕಿಡ್‌ಗಳು, 69 ಜಾತಿಯ ಆರೋಹಿಗಳು ಮತ್ತು ಅಪಾಯಕಾರಿ ಔಷಧೀಯ ಸಸ್ಯಗಳನ್ನು ಒಳಗೊಂಡಿದೆ.

ಇದರ ಜೊತೆಗೆ, ಈ ಪ್ರಾಚೀನ ಪರಿಸರ ವ್ಯವಸ್ಥೆಯಲ್ಲಿ ಅನೇಕ ರೀತಿಯ ಕೃಷಿ ಮತ್ತು ಕೈಗಾರಿಕೆಗೆ ಅನುಕೂಲವಾಗುವ ಪ್ರಮುಖ ಸೂಕ್ಷ್ಮ ಜೀವಿಗಳು ಅಸ್ತಿತ್ವದಲ್ಲಿವೆ ಎಂದು ದಾಖಲು ಮಾಡಲಾಗಿದೆ.

ಗುಪ್ತೇಶ್ವರ ಅರಣ್ಯವನ್ನು ಜೀವವೈವಿಧ್ಯತೆಯ ತಾಣ ಎಂದು ಘೋಷಿಸಿದ್ದರಿಂದ ಕಾಡಿನ ಸಾಂಸ್ಕೃತಿಕ ಮಹತ್ವವನ್ನು ಉತ್ತೇಜಿಸಲು ಮತ್ತು ಅನನ್ಯ ಜೀವರಾಶಿಗಳ ಸಂರಕ್ಷಿಸಲು ಸಹಾಯವಾಗುತ್ತದೆ.

ಈ ಘೋಷಣೆಯ ನಂತರ, ಪ್ರಸ್ತುತ ಒಡಿಶಾದಲ್ಲಿ ಗುಪ್ತೇಶ್ವರ ಬಿಎಚ್‌ಎಸ್ (BHS) ಸೇರಿ ಕಂಧಮಾಲ್ ಜಿಲ್ಲೆಯ ಮಂದಸಾರು ಬಿಎಚ್‌ಎಸ್, ಗಜಪತಿ ಜಿಲ್ಲೆಯ ಮಹೇಂದ್ರಗಿರಿ ಬಿಎಚ್‌ಎಸ್ , ಬರ್ಗರ್ ಮತ್ತು ಬಲಂಗೀರ್ ಜಿಲ್ಲೆಗಳ ಗಂಧಮಾರ್ದನ್ ಬಿಎಚ್‌ಎಸ್ ನಾಲ್ಕು ಜೀವವೈವಿಧ್ಯತೆಯ ತಾಣವನ್ನು ಹೊಂದಿದಂತಾಗುತ್ತದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ. ಫೋಟೋ ಕ್ರೆಡಿಟ್ ಆಯಾ ಫೋಟೋಗ್ರಾಫರ್ ಗೆ ಸಲ್ಲುತ್ತದೆ

Related Articles

Leave a Reply

Your email address will not be published. Required fields are marked *

Back to top button